Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡು ಮುಖ್ಯಮಂತ್ರಿ ಸೆಲ್ವಿ ಜೆ. ಜಯಲಲಿತಾ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ಸಂಪುಟ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ 5.12.2016ರಂದು ನಿಧನ ಹೊಂದಿದ ತಮಿಳುನಾಡು ಮುಖ್ಯಮಂತ್ರಿ ಸೆಲ್ವಿ ಜೆ. ಜಯಲಲಿತಾ ಅವರ ಅಗಲಿಕೆಗೆ ಸಂತಾಪ ಸೂಚಿಸಿದೆ.

ಅವರ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಿದ ಸಂಪುಟ, ಸಂತಾಪ ಸೂಚಕ ನಿರ್ಣಯವನ್ನೂ ಅಂಗೀಕರಿಸಿತು. ಸಂತಾಪ ಸೂಚಕ ನಿರ್ಣಯದ ಪಠ್ಯ ಈ ಕೆಳಗಿನಂತಿದೆ:

1. “ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ 5.12.2016ರಂದು ತಮಿಳುನಾಡು ಮುಖ್ಯಮಂತ್ರಿ ಸೆಲ್ವಿ ಜೆ. ಜಯಲಲಿತಾ ಅವರು ನಿಧನ ಹೊಂದಿರುವುದಕ್ಕೆ ಸಂಪುಟವು ತೀವ್ರ ಶೋಕ ವ್ಯಕ್ತಪಡಿಸುತ್ತದೆ. ಅಕ್ಕರೆಯಿಂದ “ಅಮ್ಮ’’ ಎಂದು ಕರೆಸಿಕೊಂಡಿದ್ದ ಅವರ ನಿಧನದಿಂದ ದೇಶ ಒಬ್ಬ ಹಿರಿಯ ಮತ್ತು ಗೌರವಾನ್ವಿತ ನಾಯಕಿಯನ್ನು ಕಳೆದುಕೊಂಡಿದೆ.

2. ಮೈಸೂರಿನಲ್ಲಿ 1948ರ ಫೆಬ್ರವರಿ 24ರಂದು ಜನಿಸಿದ ಸೆಲ್ವಿ ಜೆ. ಜಯಲಲಿತಾ, ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಪ್ರೌಢ ಶಾಲೆ ಮತ್ತು ಪ್ರೆಸೆಂಟೇಷನ್ ಕಾನ್ವೆಂಟ್ ಚರ್ಚ್ ಪಾರ್ಕ್, ಚೆನ್ನೈನಲ್ಲಿ ಶಿಕ್ಷಣ ಪಡೆದರು. ತಮಿಳು, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ತಮ್ಮ ವೃತ್ತಿ ಬದುಕು ಕಟ್ಟಿಕೊಂಡರು. ಭರತನಾಟ್ಯಂ, ಮೋಹಿನಿ ಅಟ್ಟಂ, ಕತಕ್ ಮತ್ತು ಮಣಿಪುರಿ ಶಾಸ್ತ್ರೀಯ ನೃತ್ಯದಲ್ಲೂ ತಮ್ಮ ಛಾಪು ಮೂಡಿಸಿದರು. 1972ರಲ್ಲಿ ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು.

3. ಸೆಲ್ವಿ ಜೆ ಜಯಲಲಿತಾ ಅವರು ರಾಜಕೀಯ ಪ್ರವೇಶಿಸಿ 1982ರಲ್ಲಿ ಎ.ಐ.ಎ.ಡಿ.ಎಂ.ಕೆ. ಸದಸ್ಯರಾದರು. 1984ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ತಮಿಳುನಾಡು ಶಾಸನ ಸಭೆಗೆ ಸದಸ್ಯರಾಗಿ ಆಯ್ಕೆಗೊಂಡರು. 1984ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎ.ಐ.ಎ.ಡಿ.ಎಂ.ಕೆ. ವಿಜಯಕ್ಕೆ ಕಾರಣೀಭೂತರಾದರು. 1989ರಲ್ಲಿ ತಮಿಳುನಾಡು ವಿಧಾನಸಭೆಯ ಮೊದಲ ಮಹಿಳಾ ಪ್ರತಿಪಕ್ಷ ನಾಯಕಿ ಆದರು.

4. 1991ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ, 1991ರ ಜೂನ್ ನಿಂದ 1996ರ ಮೇ ವರೆಗೆ ಸೇವೆ ಸಲ್ಲಿಸಿದರು. ಬಳಿಕ 2001ರ ಮೇಯಿಂದ 2001ರ ಸೆಪ್ಟೆಂಬರ್ ವರೆಗೆ, 2002ರ ಮಾರ್ಚ್ ನಿಂದ 2006ರ ಮೇವರೆಗೆ, 2011ರ ಮೇ ಯಿಂದ 2014ರ ಸೆಪ್ಟೆಂಬರ್ ವರೆಗೆ ಮತ್ತು 2015ರ ಮೇ ಯಿಂದ 5.12.2016ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

5. ತಮಿಳುನಾಡಿನ ಜನತೆ ಅವರ ಜನಪ್ರಿಯ ನಾಯಕಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರದ ಹಾಗೂ ದೇಶದ ಇಡೀ ಜನತೆಯ ಪರವಾಗಿ ತಮಿಳುನಾಡಿನ ಜನತೆಗೆ ತನ್ನ ಹೃದಯಪೂರ್ವಕವಾದ ಸಂತಾಪವನ್ನು ಸೂಚಿಸುತ್ತದೆ.

***

AKT/VBA/SH