Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯಲ್ಲಿ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ವಸ್ತುಪ್ರದರ್ಶನ’ದ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ದೆಹಲಿಯಲ್ಲಿ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ವಸ್ತುಪ್ರದರ್ಶನ’ದ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಕೇಂದ್ರ ಸಂಪುಟ ಸಚಿವರಾದ ನನ್ನ ಸಹೋದ್ಯೋಗಿ ಪ್ರಲ್ಹಾದ್ ಜೋಶಿ ಜಿ, ಶ್ರೀಪಾದ ನಾಯಕ್ ಜಿ, ಉದ್ಯಮ ರಂಗದ ಎಲ್ಲಾ ನಾಯಕರೆ, ಹೂಡಿಕೆದಾರರೆ, ಸ್ಟಾರ್ಟಪ್ ವಲಯದ ಸಹೋದ್ಯೋಗಿಗಳೆ, ಹಿರಿಯ ಅಧಿಕಾರಿಗಳೆ, ಗಣ್ಯ ಅತಿಥಿಗಳೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಮಹಿಳೆಯರೆ ಮತ್ತು ಮಹನೀಯರೆ.

‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ’ಗೆ ನಿಮ್ಮೆಲ್ಲರನ್ನೂ ನಾನು ಸ್ವಾಗತಿಸಿ, ಅಭಿನಂದಿಸುತ್ತೇನೆ. ಈ ವರ್ಷದ ಶೃಂಗಸಭೆ ವಿಶೇಷವಾಗಿದೆ, ಏಕೆಂದರೆ ಇದು ಒಂದು ವಿಶಿಷ್ಟ ಸನ್ನಿವೇಶದಲ್ಲಿ ನಡೆಯುತ್ತಿದೆ. ಈ ವರ್ಷ ಬಹುತೇಕ ಸಮಯ ‘ಇಂಧನ ಆಘಾತ’ಗಳ ಕುರಿತಾದ ಚರ್ಚೆಗಳೇ ಪ್ರಧಾನವಾಗಿದ್ದನ್ನು ನಾವು ಕಂಡಿದ್ದೇವೆ. ನಮ್ಮ ಜೀವನದಲ್ಲಿ ಮತ್ತು ನಮ್ಮ ಅಭಿವೃದ್ಧಿ ಪಯಣದಲ್ಲಿ ನವೀಕರಿಸಬಹುದಾದ ಇಂಧನದ ಮಹತ್ವವು ಈ ವರ್ಷ ಇನ್ನಷ್ಟು ಸ್ಪಷ್ಟಗೊಂಡಿದೆ. ಈ ಶೃಂಗಸಭೆಯ ಜತೆಯಲ್ಲೇ ‘ಅಂತಾರಾಷ್ಟ್ರೀಯ ಸೌರ ಒಕ್ಕೂಟ’ದ 9ನೇ ಅಧಿವೇಶನ ನಡೆಯುತ್ತಿರುವುದು ಒಂದು ಸಂತೋಷಕರ ಕಾಕತಾಳೀಯವಾಗಿದೆ. ‘ಹಸಿರು ಜಲಜನಕ’ದ 4ನೇ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳು ಇಲ್ಲಿ ಉಪಸ್ಥಿತರಿದ್ದಾರೆ. ಅಂದರೆ, ಈ ವರ್ಷದ ಈ ಕಾರ್ಯಕ್ರಮವು ಅತ್ಯಂತ ಬೃಹತ್ ಪ್ರಮಾಣದ್ದಾಗಿದೆ. ಹಾಗಾಗಿ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯು ಹಿಂದೆಂದೂ ಕಾಣದ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಹಿಡಿದು ಪಶ್ಚಿಮ ಏಷ್ಯಾ ಬಿಕ್ಕಟ್ಟಿನವರೆಗೆ, ಜಗತ್ತು ಹಲವಾರು ಪ್ರಮುಖ ಸವಾಲುಗಳನ್ನು ಎದುರಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಆದರೆ, ಇತರೆ ಅನೇಕ ದೇಶಗಳಿಗಿಂತ ನಾವು ಈ ಸವಾಲುಗಳನ್ನು ಉತ್ತಮವಾಗಿ ನಿಭಾಯಿಸಿದ್ದೇವೆ. ಈ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ ಉನ್ನತ ಮಟ್ಟದಲ್ಲಿ ಉಳಿದಿದೆ ಎಂಬುದು 140 ಕೋಟಿ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ದಶಕದಲ್ಲಿ ಭಾರತವು ಸ್ವಚ್ಛ ಇಂಧನದಲ್ಲಿ ಹೂಡಿಕೆ ಮಾಡದಿದ್ದರೆ, ಈ ವಲಯದಲ್ಲಿ ಹೊಸ ವ್ಯವಸ್ಥೆಗಳನ್ನು ರೂಪಿಸದಿದ್ದರೆ, ನಾವು ಎದುರಿಸಬೇಕಾಗಿದ್ದ ಬಿಕ್ಕಟ್ಟು ಜಗತ್ತಿನ ಇತರೆ ಭಾಗಗಳು ಎದುರಿಸಿದ ಬಿಕ್ಕಟ್ಟಿಗಿಂತಲೂ ಹೆಚ್ಚು ತೀವ್ರತರವಾಗಿರುತ್ತಿತ್ತು.

ಸ್ನೇಹಿತರೆ,

ಈ ಜಾಗತಿಕ ಬಿಕ್ಕಟ್ಟು ಪ್ರತಿಯೊಂದು ದೇಶಕ್ಕೂ ಒಂದು ಸ್ಪಷ್ಟ ಸಂದೇನ್ನು ನೀಡಿದೆ. ಇಂಧನ ಭದ್ರತೆಯು ಆರ್ಥಿಕ ಭದ್ರತೆಯೊಂದಿಗೆ ನೇರ ಸಂಬಂಧ ಹೊಂದಿದೆ. ಇಂಧನ ಭದ್ರತೆಯ ಭವಿಷ್ಯವು ಸ್ವಚ್ಛ ಇಂಧನದಲ್ಲಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾವು ಉರವಲು ಇಂಧನಗಳ ಮೇಲೆ ಅತಿಯಾಗಿ ಅವಲಂಬಿತರಾಗುವುದನ್ನು ಮುಂದುವರಿಸಿದರೆ, ಜಾಗತಿಕ ಆರ್ಥಿಕತೆಯು ಪದೇಪದೆ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಉರವಲು ಇಂಧನಗಳ ಸಂಗ್ರಹವು ಸೀಮಿತವಾಗಿದೆ, ಕೇವಲ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಮತ್ತೊಂದೆಡೆ, ನವೀಕರಿಸಬಹುದಾದ ಇಂಧನವು ಅಪಾರ ಸಾಮರ್ಥ್ಯ ಹೊಂದಿದೆ, ಪ್ರತಿಯೊಂದು ಪ್ರದೇಶ ಹಾಗೂ ಪ್ರತಿಯೊಂದು ದೇಶವೂ ಇದರಿಂದ ಪ್ರಯೋಜನ ಪಡೆಯಬಹುದು.

ಸ್ನೇಹಿತರೆ,

ಕಳೆದ 12 ವರ್ಷಗಳಲ್ಲಿ ಈ ವಲಯದಲ್ಲಿ ಭಾರತದ ಪಯಣವು ಭರವಸೆ, ಉತ್ಸಾಹ ಮತ್ತು ಸಾಧನೆಯಿಂದ ಕೂಡಿದೆ. ಸಿಒಪಿ-26 ಸಮ್ಮೇಳನದಲ್ಲಿ ನಾವು ನೀಡಿದ ಬದ್ಧತೆಯೇ ಇದಕ್ಕೆ ಸಾಕ್ಷಿ. 2021ರ ಶೃಂಗಸಭೆಯಲ್ಲಿ, 2030ರ ವೇಳೆಗೆ ಉರವಲುಯೇತರ ಇಂಧನ ಮೂಲಗಳಿಂದ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದುವ ಗುರಿಯನ್ನು ಭಾರತ ಹಾಕಿಕೊಂಡಿತು. “ನಾವು ಇದನ್ನು ಸಾಧಿಸುತ್ತೇವೆ!” ಎಂದು ಹೇಳಿದೆವು. ಪ್ಯಾರಿಸ್ ಒಪ್ಪಂದದ ಸಂದರ್ಭದಲ್ಲಿ, ಭಾರತವು ತನ್ನ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟನ್ನು ಉಱವಲುಯೇತರ ಇಂಧನ ಮೂಲಗಳಿಂದ ಪಡೆಯುವ ಗುರಿ ನಿಗದಿಪಡಿಸಿತ್ತು. ಭಾರತವು 2025ರಲ್ಲೇ ಆ ಗುರಿ ಸಾಧಿಸಿತು. ಅಂದರೆ, ನಿಗದಿತ ಸಮಯಕ್ಕಿಂತ 5 ವರ್ಷ ಮೊದಲೇ ನಾವು ಈ ಗುರಿ ಸಾಧಿಸಿದೆವು. ಇಂದು ನಮ್ಮ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡ 50ಕ್ಕಿಂತ ಹೆಚ್ಚು ಭಾಗವು ಉರವಲುಯೇತರ ಇಂಧನ ಮೂಲಗಳಿಂದ ಬರುತ್ತದೆ. ಭಾರತವು 500 ಗಿಗಾವ್ಯಾಟ್ ಗುರಿಯತ್ತವೂ ದೃಢವಾಗಿ ಸಾಗುತ್ತಿದೆ. ನಾವು ಈಗಾಗಲೇ ಸುಮಾರು 300 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸಿದ್ದೇವೆ. ಇಂದು ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ವಿಶ್ವದ ಅಗ್ರ 3 ದೇಶಗಳಲ್ಲಿ ಒಂದಾಗಿದೆ. ಮುಂದಿನ 10-11 ವರ್ಷಗಳಲ್ಲಿ, ಉರವಲುಯೇತರ ಇಂಧನ ಮೂಲಗಳಿಂದ ಇನ್ನೂ 500 ಗಿಗಾವ್ಯಾಟ್ ಹೊಸ ಸಾಮರ್ಥ್ಯ ಸೇರಿಸುವುದು ನಮ್ಮ ಪ್ರಯತ್ನವಾಗಿದೆ. ಈ ಗುರಿಯು ಸ್ವಲ್ಪ ಸವಾಲಿನದ್ದಾಗಿದೆ, ಆದರೆ ನನ್ನ ದೇಶದ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಹಾಗಾಗಿ ನಾನು ಹೇಳುತ್ತೇನೆ: ನಾವು ಇದನ್ನು ಕೂಡ ಸಾಧಿಸುತ್ತೇವೆ!

ಸ್ನೇಹಿತರೆ,

ಭಾರತದ ಆವಿಷ್ಕಾರಗಳು ಮತ್ತು ಭಾರತದ ಅನುಭವಗಳು ಇಡೀ ಮನುಕುಲಕ್ಕೆ ಪ್ರಯೋಜನವಾಗಬೇಕೆಂದು ನಾವು ಬಯಸುತ್ತೇವೆ. ಹಸಿರು ಇಂಧನದ ವಿಷಯದಲ್ಲಿಯೂ ನಮ್ಮ ದೃಷ್ಟಿಕೋನ ಇದೇ ಆಗಿದೆ. ಈ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಯಶಸ್ಸು ವಿಶ್ವದ ಅನೇಕ ದೇಶಗಳಿಗೆ ಉಪಯುಕ್ತವಾಗಬಲ್ಲದು. ನಾನು ಇದನ್ನು ಉದಾಹರಣೆಗಳ ಮೂಲಕ ವಿವರಿಸುತ್ತೇನೆ.

ಸ್ನೇಹಿತರೆ,

2024 ಫೆಬ್ರವರಿಯಲ್ಲಿ ನಾವು ‘ಪಿಎಂ ಸೂರ್ಯ ಘರ್ ಮುಫತ್ ಬಿಜ್ಲಿ ಯೋಜನೆ’ ಆರಂಭಿಸಿದೆವು. ಈ ಯೋಜನೆಯ ಅಡಿ, 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಕಳೆದ 24-25 ತಿಂಗಳುಗಳಲ್ಲೇ, 65 ಲಕ್ಷಕ್ಕೂ ಹೆಚ್ಚು ಮನೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿವೆ. ನಮ್ಮ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಈಗಷ್ಟೇ ಹೇಳಿದಂತೆ, ಪ್ರತಿ 6 ದಿನಗಳಿಗೊಮ್ಮೆ 1 ಲಕ್ಷ ಹೊಸ ಮನೆಗಳು ಈ ಸೌರ ಆಂದೋಲನದ ಭಾಗವಾಗುತ್ತಿವೆ. ಇದರ ಪರಿಣಾಮವನ್ನು ವಿದ್ಯುತ್ ಬಿಲ್‌ಗಳಲ್ಲಿಯೂ ಕಾಣಬಹುದು. ಒಂದು ಅಧ್ಯಯನದ ಪ್ರಕಾರ, ಈ 65 ಲಕ್ಷ ಕುಟುಂಬಗಳ ವಿದ್ಯುತ್ ಬಿಲ್‌ಗಳಲ್ಲಿ ಸುಮಾರು ಶೇಕಡ 76ರಷ್ಟು ಕಡಿಮೆಯಾಗಿವೆ. ಲಕ್ಷಾಂತರ ಕುಟುಂಬಗಳ ವಿದ್ಯುತ್ ಬಿಲ್‌ಗಳು ಶೂನ್ಯಕ್ಕೆ ತಲುಪಿವೆ. ಅನೇಕ ಕುಟುಂಬಗಳು ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದ್ದು, ಅದನ್ನು ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿವೆ. ಈ ಯೋಜನೆಯು ಅನೇಕ ದೇಶಗಳಲ್ಲಿ, ವಿಶೇಷವಾಗಿ ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ ಇಂಧನ ಭದ್ರತೆಯನ್ನು ಗಮನಾರ್ಹವಾಗಿ ಬಲಪಡಿಸಬಲ್ಲದು.

ಸ್ನೇಹಿತರೆ,

ಭಾರತವು ಸೌರಶಕ್ತಿಯನ್ನು ತನ್ನ ನಾಗರಿಕರ ಜೀವನದ ಅವಿಭಾಜ್ಯ ಅಂಗವಾಗಿಸುತ್ತಿದೆ. ಕಳೆದ 12 ವರ್ಷಗಳಲ್ಲಿ ನಾವು ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರಗಳನ್ನು ಸೌರಶಕ್ತಿಯೊಂದಿಗೆ ಜೋಡಿಸಲು ಪ್ರಯತ್ನಿಸಿದ್ದೇವೆ. ಭಾರತದಲ್ಲಿ 44,000ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳು ಈಗ ಸೌರಶಕ್ತಿಯೊಂದಿಗೆ ಸಂಪರ್ಕ ಹೊಂದಿವೆ. ಇದರಿಂದ ವಾರ್ಷಿಕವಾಗಿ ಸುಮಾರು 700 ಕೋಟಿ ರೂ. ಉಳಿತಾಯವಾಗುತ್ತಿದೆ. ಭಾರತದ ರೈತರು ‘ಕುಸುಮ್’ ಯೋಜನೆಯಿಂದಲೂ ಅಪಾರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯ ಮೂಲಕ, 30 ಲಕ್ಷಕ್ಕೂ ಹೆಚ್ಚು ರೈತರು ಸೌರಶಕ್ತಿ ಚಾಲಿತ ನೀರಾವರಿ ಸೌಲಭ್ಯ ಪಡೆದಿದ್ದಾರೆ. ಸೌರ ಪಂಪ್‌ಸೆಟ್‌ಗಳಿಂದ ಪ್ರಯೋಜನ ಪಡೆಯುತ್ತಿರುವ ಪ್ರತಿಯೊಬ್ಬ ರೈತರು ವರ್ಷಕ್ಕೆ ಸುಮಾರು 1 ಲಕ್ಷ ರೂಪಾಯಿ ಉಳಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಪಿಎಂ ಸೂರ್ಯ ಸರೋವರ ಯೋಜನೆ’ಯ ಉದಾಹರಣೆಯನ್ನೂ ನಾನು ನೀಡಬಯಸುತ್ತೇನೆ. ಕೆರೆಗಳು, ಸರೋವರಗಳು ಮತ್ತು ಜಲಾಶಯಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸುವುದು ಇದರ ಪರಿಕಲ್ಪನೆಯಾಗಿದೆ. ಇದು ಜಲಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇಂತಹ ಯೋಜನೆಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತಗಲುವ ವೆಚ್ಚವನ್ನೂ ಕಡಿಮೆ ಮಾಡುತ್ತವೆ.

ಸ್ನೇಹಿತರೆ,

ನಮ್ಮ ಸ್ವಚ್ಛ ಇಂಧನ ಪರಿಸರ ವ್ಯವಸ್ಥೆಯು ಕೇವಲ ಜಲಶಕ್ತಿ, ಸೌರಶಕ್ತಿ, ಪವನ ಶಕ್ತಿ ಮತ್ತು ಪರಮಾಣು ಶಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಭಾರತವು ‘ಗ್ರೀನ್ ಹೈಡ್ರೋಜನ್'(ಹಸಿರು ಜಲಜನಕ) ಕ್ಷೇತ್ರದಲ್ಲಿ ದೊಡ್ಡ ಜಿಗಿತ ಕಾಣಲು ‘ಕಾರ್ಯಾಚರಣೆ ಮಾದರಿ’ಯಲ್ಲಿ (ಕಾರ್ಯಕ್ರಮ ಆಧಾರಿತ ವಿಧಾನದಲ್ಲಿ) ಮುನ್ನಡೆಯುತ್ತಿದೆ. ‘ರಾಷ್ಟ್ರೀಯ ಹಸಿರು ಜಲಜನಕ ಮಿಷನ್’ ಅಡಿ, ಈ ದಶಕದ ಅಂತ್ಯದ ವೇಳೆಗೆ 5 ದಶಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ನಮ್ಮ ಸಾರಿಗೆ ವಲಯವನ್ನೂ ಹಸಿರು ಜಲಜನಕದೊಂದಿಗೆ ಜೋಡಿಸುತ್ತಿದ್ದೇವೆ. ಕೆಲವೇ ತಿಂಗಳುಗಳ ಹಿಂದೆ, ಭಾರತವು ತನ್ನ ಮೊದಲ ಹಸಿರು ಹೈಡ್ರೋಜನ್ ರೈಲು ಆರಂಭಿಸಿತು.

ಸ್ನೇಹಿತರೆ,

ವಿದ್ಯುತ್ ಉತ್ಪಾದನೆ ಮಾತ್ರ ಸಾಕಾಗುವುದಿಲ್ಲ ಎಂದು ನಿಮ್ಮೆಲ್ಲ ತಜ್ಞರಿಗೆ ತಿಳಿದಿದೆ. ಅದನ್ನು ಪರಿಣಾಮಕಾರಿಯಾಗಿ ವಿತರಿಸುವುದು ಮತ್ತು ಅಗತ್ಯವಿರುವಲ್ಲಿ ತಲುಪಿಸುವುದು ಅಷ್ಟೇ ಮುಖ್ಯ. ಭಾರತದ ಕೆಲವು ಪ್ರದೇಶಗಳಲ್ಲಿ ಸೌರ ಮತ್ತು ಪವನ ಶಕ್ತಿಯನ್ನು ಹೇರಳವಾಗಿ ಉತ್ಪಾದಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಕಡಿಮೆ ಇರುವ ಪ್ರದೇಶಗಳು ಸಹ ಇದರಿಂದ ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು, ಇದರಿಂದಾಗಿ ಅಲ್ಲಿನ ಮನೆಗಳು, ತೋಟಗಳು ಮತ್ತು ಕೈಗಾರಿಕೆಗಳು ಸಹ ಸ್ವಚ್ಛ ವಿದ್ಯುತ್‌ನಿಂದ ಕಾರ್ಯ ನಿರ್ವಹಿಸಬಹುದು. ಅದಕ್ಕಾಗಿಯೇ ಹಸಿರು ಇಂಧನ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರಿಡಾರ್‌ಗಳ ಅಡಿ, ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳ ಸಮರ್ಪಿತ ಜಾಲವನ್ನು ಸ್ಥಾಪಿಸಲಾಗುತ್ತಿದೆ. ಇದು ಉತ್ಪಾದನಾ ಸ್ಥಳಗಳಿಂದ ಬೇಡಿಕೆಯ ಸ್ಥಳಗಳಿಗೆ ಸೌರ ಮತ್ತು ಪವನ ಶಕ್ತಿ ವರ್ಗಾಯಿಸುವುದನ್ನು ಸುಲಭಗೊಳಿಸುತ್ತಿದೆ. ಈ ಪ್ರಯತ್ನದಲ್ಲಿ, ಒಂದು ರಾಷ್ಟ್ರ, ಒಂದು ವಿದ್ಯುತ್ ಗ್ರಿಡ್‌ನ ಕೊಡುಗೆ ಅಪಾರವಾಗಿದೆ. ಅನೇಕ ವರ್ಷಗಳಲ್ಲಿ, ನಾವು 5 ಪ್ರಾದೇಶಿಕ ಗ್ರಿಡ್‌ಗಳನ್ನು ಒಂದೇ ರಾಷ್ಟ್ರೀಯ ಜಾಲಕ್ಕೆ ಸಂಯೋಜಿಸಿದ್ದೇವೆ. ಇಂದು ಇಡೀ ದೇಶವು ಸಾಮಾನ್ಯ ಆವರ್ತನದಲ್ಲಿ ಕಾರ್ಯ ನಿರ್ವಹಿಸುವ ವಿದ್ಯುತ್ ಗ್ರಿಡ್ ಮೂಲಕ ಸಂಪರ್ಕ ಹೊಂದಿದೆ. ಈ ಹಸಿರು ಇಂಧನ ಕಾರಿಡಾರ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಾವು ಈಗ ಮುಂದಿನ ಹಂತಕ್ಕೆ ಸಾಗಿದ್ದೇವೆ. ಇತ್ತೀಚೆಗೆ ಭಾರತವು ಈ ಉದ್ದೇಶಕ್ಕಾಗಿ ಸುಮಾರು 2 ಲಕ್ಷ ಕೋಟಿ ರೂ. ಹೂಡಿಕೆ ಗುರಿ ನಿಗದಿಪಡಿಸಿದೆ.

ಸ್ನೇಹಿತರೆ,

ಹಸಿರು ಇಂಧನ ಕ್ಷೇತ್ರದಲ್ಲಿ ನಮ್ಮ ಯಶಸ್ಸಿಗೆ ನಮ್ಮ ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯವೂ ಒಂದು ಪ್ರಮುಖ ಕಾರಣವಾಗಿದೆ. ಕೆಲವೇ ವರ್ಷಗಳ ಹಿಂದೆ, ಸೌರಶಕ್ತಿಗೆ ಸಂಬಂಧಿಸಿದ ಅತ್ಯಂತ ಸಣ್ಣ ಬಿಡಿಭಾಗಗಳಿಗೂ ನಾವು ಸಂಪೂರ್ಣವಾಗಿ ಆಮದುಗಳನ್ನೇ ಅವಲಂಬಿಸಿದ್ದೆವು. ಒಂದು ದಶಕದ ಹಿಂದೆ, ನಮ್ಮ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಕೇವಲ 2 ಗಿಗಾವ್ಯಾಟ್‌ಗಳಷ್ಟಿತ್ತು. ಇಂದು ಅದು 200 ಗಿಗಾವ್ಯಾಟ್‌ಗಳನ್ನು ದಾಟಿದೆ. ಸೌರ ಕೋಶ ಉತ್ಪಾದನಾ ಸಾಮರ್ಥ್ಯವೂ ಸುಮಾರು 40 ಗಿಗಾವ್ಯಾಟ್‌ಗಳನ್ನು ತಲುಪಿದೆ. ಈಗ ನಾವು ಇತರೆ ಬಿಡಿಭಾಗಗಳ ಉತ್ಪಾದನೆಯನ್ನೂ ವಿಸ್ತರಿಸುತ್ತಿದ್ದೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸಿರು ಇಂಧನ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಗಳು, ನಮ್ಮ ‘ಆತ್ಮನಿರ್ಭರ ಭಾರತ’ ಅಭಿಯಾನ ಮತ್ತು ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿವೆ.

ಸ್ನೇಹಿತರೆ,

ಭಾರತವು ಬಹಳ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಶ್ರಮಿಸುತ್ತಿದೆ. ನಾವು ಇಲ್ಲಿಗೆ ನಿಲ್ಲಬಾರದು. ನಾವು ಪ್ರತಿಯೊಂದು ಸರ್ಕಾರಿ ಕಟ್ಟಡ, ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಇಡೀ ಬೀದಿ ದೀಪ ವ್ಯವಸ್ಥೆಯನ್ನು ಸೌರಶಕ್ತಿಗೆ ಸಂಪರ್ಕಿಸಬೇಕು. ಇದನ್ನು ಅತ್ಯಂತ ವೇಗವಾಗಿ ಮಾಡಬೇಕು. ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಪ್ರೋತ್ಸಾಹಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಇದರಿಂದ ಉತ್ತಮ ಸಾಧನೆ ಮಾಡುವವರಿಗೆ ಬಹುಮಾನ ನೀಡಬಹುದು ಮತ್ತು ಇತರರು ಅವರ ಯಶಸ್ಸಿನ ಕಥೆಗಳಿಂದ ಕಲಿಯಬಹುದು.

ಸ್ನೇಹಿತರೆ,

ಕೃಷಿ ವಲಯದಲ್ಲಿ ಸೌರಶಕ್ತಿಯ ಬಳಕೆಗೆ ಸಂಬಂಧಿಸಿದಂತೆ ನನಗೊಂದು ಸಲಹೆ ಇದೆ. ನಾವು ಲಕ್ಷಾಂತರ ಸೌರ ಪಂಪ್‌ಗಳನ್ನು ವಿತರಿಸಿದ್ದೇವೆ, ಆದರೆ ಈಗ ನಾವು ಕೇವಲ ಸೌರ ಪಂಪ್‌ಗಳನ್ನು ಮೀರಿ ಯೋಚಿಸಬೇಕಿದೆ. ‘ಅನ್ನದಾತ’ ‘ಊರ್ಜಾದಾತ'(ವಿದ್ಯುತ್ ಒದಗಿಸುವವರು) ಆಗಬೇಕೆಂಬುದು ನನ್ನ ದೂರದೃಷ್ಟಿ. ರೈತರು ತಮ್ಮ ಬಳಕೆಯಾಗದ ಜಮೀನುಗಳಲ್ಲಿ ಸೌರಫಲಕಗಳನ್ನು ಅಳವಡಿಸಿಕೊಳ್ಳಬೇಕು. ಹೊಲಗಳ ಆಸುಪಾಸನ್ನು ಖಾಲಿ ಬಿಡಬಾರದು. ಅಲ್ಲಿಯೂ ಸೌರ ಫಲಕಗಳನ್ನು ಅಳವಡಿಸಬೇಕು. ಇದು ಸಾಧ್ಯವಾದಷ್ಟು ಹೆಚ್ಚು ಹಳ್ಳಿಗಳನ್ನು ತಲುಪುವಂತೆ ನಾವು ನೋಡಿಕೊಳ್ಳಬೇಕು.

ಸ್ನೇಹಿತರೆ,

ಸೌರ ಕ್ರಾಂತಿಯ ಈ ಹೊಸ ಹಂತವು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ನಾವೀನ್ಯತೆಯ ಮೇಲೂ ಅವಲಂಬಿತವಾಗಿದೆ. ಆದ್ದರಿಂದ, ನಮ್ಮ ಸ್ಟಾರ್ಟಪ್‌ಗಳು, ಐಐಟಿಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ನನ್ನದೊಂದು ವಿಶೇಷ ಮನವಿ. ಮುಂದೆ ಬನ್ನಿ ಮತ್ತು ಸೌರಶಕ್ತಿಯ ಮೂಲಕ ಗೃಹಬಳಕೆಯ ಬಹುತೇಕ ಅಗತ್ಯಗಳನ್ನು ಪೂರೈಸಬಲ್ಲ ಮಾದರಿಗಳನ್ನು ಸೃಷ್ಟಿಸಿ. ನಮಗೆ ಅಂತಹ ಪರಿಹಾರಗಳು ಬೇಕಿವೆ, ಇವು ದಿನದ 24 ಗಂಟೆಯೂ ಮತ್ತು ಎಲ್ಲಾ ಋತುಮಾನಗಳಲ್ಲೂ ಸೌರಶಕ್ತಿ ಲಭ್ಯವಾಗಿಸಬೇಕು. ಒಂದು ಕುಟುಂಬವು ತನ್ನ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಿದ ಸೌರ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ಬಳಸಿ ಅಡುಗೆ ಮಾಡಬಲ್ಲ ಪರಿಸ್ಥಿತಿಯತ್ತ ನಾವು ಸಾಗಬೇಕು. ನಾವು ‘ಸ್ವಚ್ಛ ಅಡುಗೆ’ ಆಂದೋಲನ ಆರಂಭಿಸಬೇಕಿದೆ. ಆಮದು ಮಾಡಿಕೊಳ್ಳುವ ಅನಿಲದ ಮೇಲಿನ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಮಧ್ಯಮ ವರ್ಗದ ಹೆಚ್ಚಿನ ಕುಟುಂಬಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಆಯ್ಕೆ ಸಿಗುವಂತಹ ಪರಿಸ್ಥಿತಿಯನ್ನು ನಾವು ನಿರ್ಮಿಸಬೇಕು. ಅವರು ತಮ್ಮ ಸ್ಕೂಟರ್‌ಗಳು, ಬೈಕ್‌ಗಳು ಮತ್ತು ಕಾರುಗಳನ್ನು ತಮ್ಮದೇ ಆದ ಸೌರಶಕ್ತಿ ವ್ಯವಸ್ಥೆಗಳಿಂದ ಉತ್ಪಾದಿಸಿದ ವಿದ್ಯುತ್ ಬಳಸಿ ಮನೆಯಲ್ಲೇ ಚಾರ್ಜ್ ಮಾಡಿಕೊಳ್ಳುವಂತಾಗಬೇಕು. ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರತಿ ವರ್ಷ ಸಾವಿರಾರು ರೂಪಾಯಿನ್ನು ಉಳಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಹೈನುಗಾರಿಕೆ ವಲಯದಲ್ಲಿ ಸೌರಶಕ್ತಿಯ ಬಳಕೆ ಉತ್ತೇಜಿಸುವ ಉತ್ಪನ್ನಗಳೂ ನಮಗೆ ಬೇಕಾಗಿವೆ. ಪಶು ಆಹಾರ ತಯಾರಿಕೆಯಿಂದ ಹಿಡಿದು, ಬೆಳೆ ಕಟಾವು ಮತ್ತು ಕೊಯ್ಲು ನಂತರದ ಚಟುವಟಿಕೆಗಳ ತನಕ ಪ್ರತಿಯೊಂದು ಕೆಲಸಕ್ಕೂ ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕಿದೆ.

ಸ್ನೇಹಿತರೆ,

ಮುಂದಿನ ಪೀಳಿಗೆಯ ನಾವೀನ್ಯತೆಯಿಲ್ಲದೆ ಇವೆಲ್ಲವೂ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ದೇಶಕ್ಕೆ ಅಗತ್ಯವಾದ ಹಾರ್ಡ್‌ವೇರ್ (ಭೌತಿಕ ತಂತ್ರಜ್ಞಾನ) ಬೇಕು. ನಮಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ದಾಸ್ತಾನು ಪರಿಹಾರಗಳು ಬೇಕಾಗಿವೆ. ನಾವು ಹೊಸ ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು ನಿರ್ಮಿಸಬೇಕಿದೆ. ಇದು ನಿಮ್ಮೆಲ್ಲರಿಗೂ ಮತ್ತು ದೇಶದ ಯುವಜನತೆಗೆ ಸಿಕ್ಕಿರುವ ಒಂದು ಅದ್ಭುತ ಅವಕಾಶವಾಗಿದೆ. ಸಂಶೋಧನಾ ಕ್ಷೇತ್ರದಲ್ಲಿರುವವರು ಮತ್ತು ಹೂಡಿಕೆದಾರರು ಈ ಅವಕಾಶವನ್ನು ಕೈಚೆಲ್ಲಬೇಡಿ ಎಂದು ನಾನು ಕೋರುತ್ತೇನೆ. ಭಾರತದಲ್ಲಿ ನೀವು ಅಭಿವೃದ್ಧಿಪಡಿಸುವ ಪರಿಹಾರಗಳು ಜಗತ್ತಿನ ಅನೇಕ ದೇಶಗಳಿಗೆ ಉಪಯುಕ್ತವಾಗಲಿವೆ.

ಸ್ನೇಹಿತರೆ,

ಭಾರತವು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಯುವ ಸಮುದಾಯ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರತಿಯೊಂದು ಪ್ರಯತ್ನವೂ ಅಪಾರ ಸಂಖ್ಯೆಯ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇಂದಿಗೂ ಸಹ, ಸಾವಿರಾರು ಜನರು ಈ ವಲಯದಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇಲ್ಲಿ ‘ಹಸಿರು ಉದ್ಯೋಗ’ಗಳಿಗೆ ಅಪಾರ ಸಾಮರ್ಥ್ಯವಿದೆ. ಸೌರ ಫಲಕಗಳು ಮತ್ತು ಇತರೆ ಉಪಕರಣಗಳ ತಯಾರಿಕೆಯಿಂದ ಹಿಡಿದು, ಅವುಗಳ ಅಳವಡಿಕೆ, ನಿರ್ವಹಣೆ ಮತ್ತು ಸಾಗಣೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಈ ಅವಕಾಶಗಳು ಸೃಷ್ಟಿಯಾಗುತ್ತಿವೆ. ಭವಿಷ್ಯದಲ್ಲಿ, ಸೌರಶಕ್ತಿ ಸಾಮರ್ಥ್ಯವು ಇನ್ನಷ್ಟು ಹೆಚ್ಚಾದಂತೆ, ಇನ್ನೂ ಎಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು ಎಂಬುದನ್ನು ಊಹಿಸಿಕೊಳ್ಳಿ! ಅಡುಗೆ ಒಲೆಗಳಿಂದ ಹಿಡಿದು ಸಾರಿಗೆ ವ್ಯವಸ್ಥೆಗಳವರೆಗೆ, ಎಲ್ಲವೂ ಸೌರಶಕ್ತಿ ಮತ್ತು ಹಸಿರು ಇಂಧನವನ್ನು ಆಧರಿಸಿದಾಗ, ಸಂಪೂರ್ಣವಾಗಿ ಹೊಸದೊಂದು ಉದ್ಯಮವೇ ಉದಯಿಸುತ್ತದೆ.

ಸ್ನೇಹಿತರೆ,

ನಿಮ್ಮೆಲ್ಲರಿಗೂ ಹಾಗೂ ಜಾಗತಿಕ ಹೂಡಿಕೆದಾರರಿಗೆ, ಭಾರತವು ಬೃಹತ್ ಅವಕಾಶಗಳನ್ನು ಒದಗಿಸುತ್ತಿದೆ. ಭಾರತದಲ್ಲಿರುವಂತಹ ಬೇಡಿಕೆ, ವ್ಯಾಪ್ತಿ ಮತ್ತು ಅವಕಾಶಗಳನ್ನು ಬೇರೆಲ್ಲೂ ಕಾಣುವುದು ಕಷ್ಟ. ಹಾಗೆಯೇ, ಭಾರತವು ಒದಗಿಸುವ ರಾಜಕೀಯ ಮತ್ತು ನೀತಿ ನಿರೂಪಣೆಯ ಸ್ಥಿರತೆಯನ್ನು ಬೇರೆಡೆ ಕಂಡುಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇದರ ಫಲಿತಾಂಶಗಳನ್ನು ನಾವೀಗ ಕಾಣುತ್ತಿದ್ದೇವೆ. ಕಳೆದ ದಶಕದಲ್ಲಿ, ನವೀಕರಿಸಬಹುದಾದ ಇಂಧನ ವಲಯದಲ್ಲಿ 15 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಅಂದರೆ 164 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಲಾಗಿದೆ. 2024ರ ‘ಆರ್‌ಇ-ಇನ್ವೆಸ್ಟ್'(RE-INVEST) ಶೃಂಗಸಭೆಯಿಂದ ಇಂದಿನವರೆಗೆ, ಕೇವಲ 2 ವರ್ಷಗಳಲ್ಲಿ, ಈ ವಲಯಕ್ಕೆ ಸುಮಾರು 6 ಲಕ್ಷ ಕೋಟಿ ರೂ. ಅಂದರೆ 63 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಹೂಡಿಕೆ ಹರಿದುಬಂದಿದೆ. ಈ ದಶಕದ ಅಂತ್ಯದ ವೇಳೆಗೆ, ಈ ವಲಯದಲ್ಲಿ 20 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಅಂದರೆ ಸುಮಾರು 220 ಶತಕೋಟಿ ಡಾಲರ್‌ ಮೌಲ್ಯದ ಹೂಡಿಕೆ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಭಾರತದ ಸ್ವಚ್ಛ ಇಂಧನ ವಲಯದಲ್ಲಿ ನಿಮ್ಮೆಲ್ಲರಿಗೂ ಅವಕಾಶಗಳ ಹೊಸ ಲೋಕವೇ ತೆರೆದುಕೊಳ್ಳುತ್ತಿದೆ.

ಸ್ನೇಹಿತರೆ,

ಭಾರತವು ಜಗತ್ತಿಗೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಸಂದೇಶ ನೀಡಿದೆ. ನಮ್ಮ ಸ್ವಚ್ಛ ಇಂಧನ ಪಯಣದಲ್ಲೂ ಇದೇ ತತ್ವವು ಪ್ರತಿಬಿಂಬಿತವಾಗಿದೆ. ‘ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ’ದ ಹಿಂದಿರುವ ಆಲೋಚನೆಯೂ ಇದೇ ಆಗಿದೆ. ನವೀಕರಿಸಬಹುದಾದ ಇಂಧನಕ್ಕೆ ಅಗತ್ಯವಿರುವ ಹಣಕಾಸು, ತಂತ್ರಜ್ಞಾನ ಮತ್ತು ಪರಿಣತಿಯು, ಅವುಗಳ ಅಗತ್ಯವಿರುವ ಪ್ರತಿಯೊಂದು ದೇಶಕ್ಕೂ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಇದೇ ಕಾರಣಕ್ಕಾಗಿ, ಆಫ್ರಿಕಾ ಖಂಡಕ್ಕಾಗಿ 200 ದಶಲಕ್ಷ ಡಾಲರ್‌ ಮೌಲ್ಯದ ‘ಆಫ್ರಿಕಾ ಸೌರಶಕ್ತಿ ಸೌಲಭ್ಯ’ ಪ್ರಸ್ತಾಪ ಮುಂದಿಡಲಾಗಿದೆ.

ಸ್ನೇಹಿತರೆ,

ನಮ್ಮ ಹವಾಮಾನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮುಂಬರುವ ದಶಕವು ಅತ್ಯಂತ ನಿರ್ಣಾಯಕವಾಗಿದೆ. ಈ ಭವಿಷ್ಯವನ್ನು ಭದ್ರಪಡಿಸುವಲ್ಲಿ ಈ ಶೃಂಗಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವು ಪ್ರತಿಯೊಂದು ದೇಶವನ್ನೂ ಈ ಅಭಿಯಾನದೊಂದಿಗೆ ಜೋಡಿಸಬೇಕು. ಪ್ರತಿಯೊಂದು ಪ್ರದೇಶವೂ ಈ ಪರಿವರ್ತನೆಯಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ನಾವು ಸ್ವಚ್ಛ, ಹಸಿರು ಮತ್ತು ಸುರಕ್ಷಿತ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ. ಈ ಮಾತುಗಳೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****