Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶಾದ್ಯಂತ ಇರುವ `ಮುದ್ರಾ’ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾನ್ಯ ಪ್ರಧಾನಮಂತ್ರಿಗಳ ಸಮಾಲೋಚನೆ


ದೇಶಾದ್ಯಂತ ಇರುವ `ಮುದ್ರಾ’ ಯೋಜನೆಯ ಫಲಾನುಭವಿಗಳೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂವಾದ ನಡೆಸಿದರು. ಕೇಂದ್ರ ಸರಕಾರದ ಹಲವು ಯೋಜನೆಗಳ ಫಲಾನುಭವಿಗಳೊಂದಿಗೆ ಮಾನ್ಯ ಪ್ರಧಾನಮಂತ್ರಿಗಳು ನಡೆಸುತ್ತಿರುವ `ವಿಡಿಯೋ ಸಂವಾದ’ ಸರಣಿಯಲ್ಲಿ ಇದು ಎರಡನೆಯ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮವಾಗಿದೆ.

ತಮ್ಮ ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ಸಾಧ್ಯವಾದುದಕ್ಕೆ ಸಂತೋಷ ವ್ಯಕ್ತಪಡಿಸಿದ ಮಾನ್ಯ ಪ್ರಧಾನಮಂತ್ರಿಗಳು, “ಮುದ್ರಾ ಯೋಜನೆಯು ದೇಶದಲ್ಲಿ ಉದ್ಯೋಗಗಳನ್ನು ಹಲವು ಪಟ್ಟುಗಳಷ್ಟು ವರ್ಧಿಸಿದೆ,” ಎಂದರು. ಅಲ್ಲದೆ, ಈ ಯೋಜನೆಯು ಉದ್ಯಮಿಗಳನ್ನು/ಉದ್ಯಮಶೀಲ ವ್ಯಕ್ತಿಗಳನ್ನು ಲೇವಾದೇವಿದಾರರು ಮತ್ತು ದಲ್ಲಾಳಿಗಳ ವಿಷವರ್ತುಲದಿಂದ ಪಾರು ಮಾಡಿದೆ. ಮುದ್ರಾ ಯೋಜನೆಯು ವಿಶೇಷವಾಗಿ ಯುವಜನರು, ಮಹಿಳೆಯರು ಮತ್ತು ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಬಯಸುತ್ತಿದ್ದವರು ಅಥವಾ ತಮ್ಮ ವ್ಯಾಪಾರ-ವಹಿವಾಟುಗಳನ್ನು ವಿಸ್ತರಿಸಲು ಬಯಸುತ್ತಿದ್ದವರಿಗೆ ಹೊಸ ಬಗೆಯ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ನುಡಿದರು.

ಪ್ರಧಾನಮಂತ್ರಿಗಳ `ಮುದ್ರಾ’ ಯೋಜನೆಯಡಿ ಕೇಂದ್ರ ಸರಕಾರವು ಇದುವರೆಗೆ 12 ಕೋಟಿ ಸಾಲಗಳನ್ನು ನೀಡಿದ್ದು, ಈ ಮೂಲಕ 5.75 ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಒದಗಿಸಿದೆ. ಈ ಪೈಕಿ ಶೇ.28ರಷ್ಟು ಹಣವನ್ನು, ಅಂದರೆ 3.25 ಲಕ್ಷ ಕೋಟಿ ರೂ.ಗಳನ್ನು ಇದೇ ಮೊದಲ ಬಾರಿಗೆ ಉದ್ಯಮಿಗಳಾಗಲು ಮುಂದಾದವರಿಗೆ ನೀಡಲಾಗಿದೆ. ಅಲ್ಲದೆ, `ಮುದ್ರಾ’ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇ.74ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಜೊತೆಗೆ, ಒಟ್ಟು ನೆರವಿನಲ್ಲಿ ಶೇಕಡ 55ರಷ್ಟು ಸಾಲವನ್ನು ಪರಿಶಿಷ್ಟ ಜಾತಿ/ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳವರಿಗೆ ಕೊಡಲಾಗಿದೆ.

ಮಾನ್ಯ ಪ್ರಧಾನಮಂತ್ರಿಗಳು `ಮುದ್ರಾ’ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಈ ಯೋಜನೆಯು ಬಡವರ ಜೀವನದಲ್ಲಿ ಪರಿವರ್ತನೆಯನ್ನು ತಂದಿದೆ ಎಂದು ಬಣ್ಣಿಸಿದರು. ಸಣ್ಣ ಮತ್ತು ಸೂಕ್ಷ್ಮ ವಹಿವಾಟುಗಳನ್ನು/ಉದ್ದಿಮೆಗಳನ್ನು ಒಳಗೊಳ್ಳುವ ಮೂಲಕ ಈ ಯೋಜನೆಯು ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಪಡಿಸಿದ್ದು, ಜನರು ಯಶಸ್ವಿಯಾಗಲು ಒಂದು ವೇದಿಕೆಯನ್ನು ನೀಡಿದೆ ಎಂದು ವಿವರಿಸಿದರು.

ಸ್ವಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿದ ಮಾನ್ಯ ಪ್ರಧಾನಮಂತ್ರಿಗಳು, “ಈ ಹಿಂದೆ ಅದೆಷ್ಟೋ ಸಂಗತಿಗಳನ್ನು ಸಾಧಿಸುವುದೇ ಅಸಾಧ್ಯವಾಗಿತ್ತು. ಆದರೆ, ಈಗ ಅಂತಹ ಅಹಿತಕರ ವಾತಾವರಣ ನಿವಾರಣೆಯಾಗಿದೆ. ಸ್ವಯಂ ಉದ್ಯೋಗಿಗಳಾಗುವುದು ಈಗ ಹೆಮ್ಮೆಯ ಸಂಗತಿಯಾಗಿದೆ,” ಎಂದರು.

“ಮುದ್ರಾ ಯೋಜನೆಯನ್ನು ಇನ್ನೂ ಒಂದಿಷ್ಟು ವರ್ಷಗಳ ಮೊದಲೇ ಜಾರಿಗೆ ತಂದಿದ್ದರೆ, ಅದರಿಂದ ಲಕ್ಷಾಂತರ ಮಂದಿ ತಮ್ಮದೇ ಆದ ವ್ಯಾಪಾರ-ವಹಿವಾಟುಗಳನ್ನು/ಉದ್ದಿಮೆಗಳನ್ನು ಆರಂಭಿಸಲು ಸಹಾಯವಾಗುತ್ತಿತ್ತು. ಹೀಗಾಗಿದ್ದರೆ, ಸಾಕಷ್ಟು ಮಟ್ಟಿಗೆ ವಲಸೆಯನ್ನು ತಡೆಗಟ್ಟಲು ಸಾಧ್ಯವಾಗುತ್ತಿತ್ತು,” ಎಂದು ಮಾನ್ಯ ಪ್ರಧಾನಮಂತ್ರಿಗಳು ತಮ್ಮ ಸಂವಾದದಲ್ಲಿ ಪ್ರತಿಪಾದಿಸಿದರು.

ಮಾನ್ಯ ಪ್ರಧಾನಮಂತ್ರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಮುದ್ರಾ ಯೋಜನೆಯ ಫಲಾನುಭವಿಗಳು, “ಈ ಯೋಜನೆಯಿಂದಾಗಿ ತಮ್ಮದೇ ಆದ ವ್ಯಾಪಾರ-ವಹಿವಾಟನ್ನು/ಉದ್ದಿಮೆಗಳನ್ನು ಆರಂಭಿಸಲು ಮತ್ತು ಈ ಮೂಲಕ ಇತರರಿಗೆ ಉದ್ಯೋಗಗಳನ್ನು ಸೃಷ್ಟಿಸಲು ತಮಗೆ ಸಾಧ್ಯವಾಗಿದೆ,” ಎಂದು ಹೇಳಿದರು.

ಮಾನ್ಯ ಪ್ರಧಾನಮಂತ್ರಿಗಳು 2015ರ ಏಪ್ರಿಲ್ 8ರಂದು ಹಸಿರು ನಿಶಾನೆ ತೋರಿದ `ಮುದ್ರಾ’ ಯೋಜನೆಯ ಮೂಲಕ ಕಾರ್ಪೊರೇಟ್ ವಲಯಕ್ಕೆ ಮತ್ತು ಕೃಷಿ ವಲಯೇತರ ಸಣ್ಣ/ಸೂಕ್ಷ್ಮ ಉದ್ದಿಮೆಗಳಿಗೆ 10 ಲಕ್ಷ ರೂಪಾಯಿಗಳಷ್ಟು ಸಾಲವನ್ನು ನೀಡಲಾಗುತ್ತಿದೆ. ಇದನ್ನು `ಪ್ರಧಾನಮಂತ್ರಿಗಳ ಮುದ್ರಾ ಯೋಜನೆಯಡಿ ನೀಡುವ ಸಾಲ’ ಎಂದು ವರ್ಗೀಕರಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ಎಂಎಫ್ಐಗಳು ಮತ್ತು ಎನ್ ಬಿ ಎಫ್ ಸಿ ಗಳು ಈ ಸಾಲವನ್ನು ನೀಡುತ್ತಿವೆ.