Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಧನಬಾದ್ ಮತ್ತು ಪತ್ರಾತುಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ

ಧನಬಾದ್ ಮತ್ತು ಪತ್ರಾತುಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ

ಧನಬಾದ್ ಮತ್ತು ಪತ್ರಾತುಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ

ಧನಬಾದ್ ಮತ್ತು ಪತ್ರಾತುಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ


ಪಾಲರಾದ ಶ್ರೀಮತಿ ದ್ರೌಪದಿ ಮುರ್ಮು ಅವರೇ, ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ರಘುವರ ದಾಸ್ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಶ್ರೀ ಆರ್ ಕೆ ಸಿಂಗ್, ಶ್ರೀ ಅಶ್ವನಿ, ಶ್ರೀ ಸುದರ್ಶನ್ ಭಗತ್ ಅವರೇ, ಜಾರ್ಖಂಡ್ ಸಚಿವ ಸಂಪುಟದಲ್ಲಿರುವ ಶ್ರೀ ಅಮರ್ ಕುಮಾರ್ ಮತ್ತು ಶ್ರೀ ರಾಮಚಂದ್ರ ಅವರೇ, ನಮ್ಮ ಸಂಸದರಾದ ಶ್ರೀ ಪ್ರೇಮ್ ಸಿಂಗ್ ಅವರೇ, ಶಾಸಕರಾದ ಶ್ರೀ ಫೂಲ್ ಚಂದ್ ಅವರೇ ಮತ್ತು ಇಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ನನ್ನ ಆತ್ಮೀಯ ಸೋದರ-ಸೋದರಿಯರೇ,
 
 
 
 ಮೊಟ್ಟಮೊದಲಿಗೆ ನಾನು, ಈ ನೆಲದ ಕೆಚ್ಚೆದೆಯ ಕಲಿಯಾದ ಭಗವಾನ್ ಬಿರ್ಸಾ ಮುಂಡಾ ಅವರಿಗೆ ನಮಿಸುತ್ತೇನೆ. ಇದು ತ್ಯಾಗಭೂಮಿ. ಇದು ಶ್ರೀ ಜೈಪಾಲ್ ಸಿಂಗ್ ಮತ್ತು ಶ್ರೀ ಮುಂಡಾ ಅವರು ಹೋರಾಡಿದಂತಹ ಪವಿತ್ರ ಭೂಮಿ. ಜತೆಗೆ, ಇದು ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಕಂಡ ಕನಸುಗಳ ಆಡುಂಬೊಲ. ಜಾರ್ಖಂಡ್ನಲ್ಲಿರುವ ಖನಿಜ ಸಂಪತ್ತು ದೇಶದ ಅಭಿವೃದ್ಧಿಯ ಯಂತ್ರವನ್ನು ಮುನ್ನಡೆಸುತ್ತಿರುವ ನಿಜವಾದ ಚಾಲಕ ಶಕ್ತಿಯಾಗಿದೆ.
 
ನೀವೆಲ್ಲರೂ ಇಲ್ಲಿ 2-3 ಗಂಟೆಗಳ ಕಾಲದಿಂದ ಕಾಯುತ್ತಿದ್ದೀರಿ ಎಂದು ನನಗೆ ತಿಳಿಯಿತು. ನೀವೆಲ್ಲರೂ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದೀರಲ್ಲದೆ, ನಮ್ಮನ್ನು ಮನಸಾರೆ ಆಶೀರ್ವದಿಸಿದ್ದೀರಿ. ನಿಮ್ಮ ಈ ಪ್ರೀತಿ ಮತ್ತು ಹಾರೈಕೆಗಳಿಗಾಗಿ ನಾನು ನಿಜಕ್ಕೂ ಕೃತಜ್ಞನಾಗಿದ್ದೇನೆ. ಚುನಾವಣೆ ಸಮಯದಲ್ಲಿ ನಾನು ಜಾರ್ಖಂಡ್ ಗೆ ಬಂದಾಗಲೆಲ್ಲ ನಾನು ಒಂದು ಮಾತನ್ನು ಹೇಳುತ್ತಲೇ ಇದ್ದೆ. ಅದೇನೆಂದರೆ, ಈ ರಾಜ್ಯದ ಅಭಿವೃದ್ಧಿಗೆ ಜಾರ್ಖಂಡ್ ಸರಕಾರದ ರೂಪದಲ್ಲಿ ಒಂದು ಎಂಜಿನ್ ಮತ್ತು ದೆಹಲಿಯಿಂದ ಆಳ್ವಿಕೆ ನಡೆಸುವ ಕೇಂದ್ರ ಸರಕಾರದ ರೂಪದ ಇನ್ನೊಂದು ಎಂಜಿನ್ ಅಗತ್ಯವೆಂಬ ಮಾತು. ಕಳೆದ ನಾಲ್ಕು ವರ್ಷಗಳಲ್ಲಿ ಜಾರ್ಖಂಡ್ ಸರಕಾರ ಮತ್ತು ಕೇಂದ್ರ ಸರಕಾರಗಳೆರಡೂ ಜತೆಗೂಡಿ ಪೂರ್ವನಿಗದಿತ ಗುರಿಗಳೊಂದಿಗೆ ಈ ರಾಜ್ಯದ ಅಭಿವೃದ್ಧಿಗೆ ಕೈಗೊಂಡಿರುವ ಪ್ರಯತ್ನಗಳನ್ನು ಸ್ವತಃ ನೀವೆಲ್ಲರೂ ನೋಡಿದ್ದೀರಿ. ಜಾರ್ಖಂಡ್ ರಾಜ್ಯದ ಜನತೆಗಂತೂ ಇದು ಚೆನ್ನಾಗಿಯೇ ಅನುಭವಕ್ಕೆ ಬಂದಿದೆ.
 
 ನಮ್ಮ ಕಾರ್ಯವಿಧಾನ ಸರಿಯಾಗಿದೆಯೋ ಇಲ್ಲವೋ ಮತ್ತು ನಾವು ನಿಜಕ್ಕೂ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದೆವೆಯೋ ಇಲ್ಲವೋ ಎನ್ನುವುದನ್ನು ಪ್ರಜಾಪ್ರಭುತ್ವದಲ್ಲಿ ಒಂದೇಒಂದು ಅಂಶವು ನಿರ್ಧರಿಸುತ್ತದೆ. ಅದ್ಯಾವುದೆಂದರೆ, ಜನರ ಒಪ್ಪಿಗೆ. ಈ ಸಂದರ್ಭದಲ್ಲಿ ನಾನು, ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ರಘುವರ್ ದಾಸ್ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಈ ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಿತಷ್ಟೆ. ಅದರ ಫಲಿತಾಂಶವು ಜಾರ್ಖಂಡ್ ಸರಕಾರ ಮತ್ತು ಕೇಂದ್ರ ಸರಕಾರವು ಮಾಡಿರುವಂತಹ ಕೆಲಸಗಳಿಗೆ ಜನರ ಸಂಪೂರ್ಣ ಬೆಂಬಲವಿದೆ ಎನ್ನುವುದನ್ನು ತೋರಿಸುತ್ತಿದೆ.
  ಅಣ್ಣ-ತಮ್ಮಂದಿರೇ ಮತ್ತು ಅಕ್ಕ-ತಂಗಿಯರೇ,
 
 2014ರ ಚುನಾವಣೆಯ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿದ್ದಾಗ, ಜಾರ್ಖಂಡ್ ರಾಜ್ಯವು ನನ್ನ ಬಗ್ಗೆ ತೋರುತ್ತಿರುವ ಪ್ರೀತಿಯನ್ನು ನಾನು ಬಡ್ಡಿಸಹಿತ ಹಿಂದಿರುಗಿಸುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ತಕ್ಕಂತೆ ನಾನು, ನಿಮ್ಮ ಪ್ರೀತಿಯ ಋಣವನ್ನು ಅಭಿವೃದ್ಧಿ ಕಾರ್ಯಗಳೊಂದಿಗೆ ಹಿಂದಿರುಗಿಸುತ್ತಿದ್ದೇನೆ. ಕೇಂದ್ರ ಸರಕಾರವು ಇಲ್ಲಿ ಒಂದರ ಹಿಂದೊದರಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳು, ಜಾರ್ಖಂಡ್ ರಾಜ್ಯದ ಅಭಿವೃದ್ಧಿಗೆ ನಾವು ಎಷ್ಟೊಂದು ಬದ್ಧರಾಗಿದ್ದೇವೆ ಎನ್ನುವುದನ್ನು ತೋರಿಸುತ್ತಿವೆ. ದಲಿತರು, ಶೋಷಿತರು, ದಮನಿತರು, ಅವಕಾಶ ವಂಚಿತರು, ಬುಡಕಟ್ಟು ಸಮುದಾಯಗಳ ಸಹೋದರ-ಸಹೋದರಿಯರು, ಮಹಿಳೆಯರು, ಯುವಜನರು ಮತ್ತು ಸಮಾಜದ ಸಕಲ ವರ್ಗಗಳ ಏಳಿಗೆಗಾಗಿ ನಾವು ಸಮಗ್ರವಾದ/ವಿಸ್ತೃತವಾದ ಯೋಜನೆಗಳೊಂದಿಗೆ ಮುಂದಡಿ ಇಡುತ್ತಿದ್ದೇವೆ.
 
 ಇಂದು ಇಲ್ಲಿ 27 ಸಾವಿರ ಕೋಟಿ ರೂ. ಮೊತ್ತದ ಐದು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಮೊತ್ತವು ಎಷ್ಟೋ ರಾಜ್ಯಗಳ ಬಜೆಟ್ ಮೊತ್ತಕ್ಕಿಂತ ದೊಡ್ಡದಾಗಿದೆ.  
 
27 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಗಳು ಯಾವುವೆಂದರೆ- ಸಿಂದ್ರಿಯಲ್ಲೊಂದು ಕೈಗಾರಿಕೆ, ಪತ್ರಾತುವಿನಲ್ಲೊಂದು ವಿದ್ಯುತ್ ಉತ್ಪಾದನಾ ಯೋಜನೆ, ಭಗವಾನ್ ಶಿವನ ಸ್ಥಾನವಾದ ದೇವಗಢದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ದೇವಗಢದಲ್ಲಿ ಅಸ್ತಿತ್ವಕ್ಕೆ ಬರಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಮತ್ತು ರಾಂಚಿ ನಗರದಲ್ಲಿ ಅನಿಲ ಸಾಗಣೆಗೆ ಕೊಳವೆ ಮಾರ್ಗ ಸ್ಥಾಪನೆ. ಅಂದಂತೆ, ಜಾರ್ಖಂಡ್ ನಲ್ಲಿ ಈಗಾಗಲೇ 80 ಸಾವಿರ ಕೋಟಿ ರೂ. ಮೊತ್ತದ 50 ಯೋಜನೆಗಳು ಪ್ರಗತಿಯಲ್ಲಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಜಾರ್ಖಂಡ್ ಎಷ್ಟೊಂದು ಪ್ರಗತಿ ಸಾಧಿಸಲಿದೆ ಮತ್ತು ಅಭಿವೃದ್ಧಿ ಹೊಂದಲಿದೆ ಎನ್ನುವುದನ್ನು ನೀವು ಊಹಿಸಿಕೊಳ್ಳಬಹುದು.
 
            ಜಾರ್ಖಂಡ್ ಜನತೆಯ ಕೈಯಲ್ಲಿ ಅಮೂಲ್ಯವಾದ ವಜ್ರದ ಸಂಪತ್ತಿದೆ ಎಂದು ನಾನು ಸದಾ ಹೇಳುತ್ತಿರುತ್ತೇನೆ. ನಿಜ, ಇಲ್ಲಿರುವ ಅಪಾರ ಪ್ರಮಾಣದ ಕಲ್ಲಿದ್ದಲು `ಕಪ್ಪು ವಜ್ರ’ವೇ ಆಗಿದೆ. ಅದು ನೋಡಲು ಗಾಢ ಬಣ್ಣದಿಂದ ಕೂಡಿದ್ದರೂ, ತಾನಿರುವ ಪ್ರದೇಶವನ್ನು ಅದು ಜ್ವಾಜಲ್ಯಮಾನವಾಗಿ ಹೊಳೆಯಿಸುವ ಶಕ್ತಿಯನ್ನು ಹೊಂದಿದೆ. ಕಲ್ಲಿದ್ದಲಿಗೆ ಬೆಳಕು ಮತ್ತು ವಿದ್ಯುತ್ತನ್ನು ಹೊರಹೊಮ್ಮಿಸುವ ಗುಣ/ಸಾಮರ್ಥ್ಯವಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಪತ್ರಾತುವಿನಲ್ಲಿ ಮೈದಾಳಲಿರುವ 18 ಸಾವಿರ ಕೋಟಿ ರೂ. ಮೊತ್ತದ ವಿದ್ಯುತ್ ಉತ್ಪಾದನಾ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಕಲ್ಲಿದ್ದಲು ಜಾರ್ಖಂಡ್ ರಾಜ್ಯಕ್ಕೆ ಕೇವಲ ಆರ್ಥಿಕ ಶಕ್ತಿಯನ್ನಷ್ಟೆ ನೀಡುವುದಿಲ್ಲ; ಬದಲಿಗೆ, ಇಲ್ಲಿನ ಯುವಜನರಿಗೆ ಉದ್ಯೋಗವನ್ನೂ ಕೊಡುತ್ತದೆ. ಪತ್ರಾತುವಿನಲ್ಲಿ ಸಾಕಾರಗೊಳ್ಳಲಿರುವ ಈ ಯೋಜನೆಯ ನೆರವಿನೊಂದಿಗೆ ಇಲ್ಲಿ ಅಭಿವೃದ್ಧಿಯ ಹೊಸ ಹಾದಿಗಳೇ ತೆರೆದುಕೊಳ್ಳಲಿವೆ. ಈ ಯೋಜನೆಯಿಂದಾಗಿ ನಿರಾಶ್ರಿತಗೊಳ್ಳಲಿರುವ ಕುಟುಂಬಗಳಿಗೆ ಇಲ್ಲಿ ಸರಿಯಾದ ಉದ್ಯೋಗ ಸಿಗುವಂತೆ ನಾವು ನೋಡಿಕೊಳ್ಳಲಿದ್ದೇವೆ. ಜತೆಗೆ, ಈ ಕುಟುಂಬಗಳ ಯೋಗಕ್ಷೇಮದ ಹೊಣೆಯನ್ನು ಕೂಡ ನಾವು ಹೊತ್ತುಕೊಳ್ಳಲಿದ್ದೇವೆ.
 
 
 
            ಇಂದು ಇಲ್ಲಿನ ಕೆಲವು ಯುವಜನರಿಗೆ ಉದ್ಯೋಗ ಪತ್ರಗಳನ್ನು ನೀಡುವ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅಂದಂತೆ, ಭವಿಷ್ಯದಲ್ಲಿ ಇಲ್ಲಿನ ಸಾವಿರಾರು ಯುವಕ-ಯುವತಿಯರಿಗೆ ಅನೇಕ ಬಗೆಯ ಉದ್ಯೋಗಗಳ ಇಲ್ಲಿ ಸಿಗಲಿವೆ.
 
 
 
            ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕವನ್ನು ಒದಗಿಸಬೇಕೆಂಬುದು ನಮ್ಮ ಕನಸಾಗಿತ್ತು. 2014ರಲ್ಲಿ ನಾನು ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನಮ್ಮ18 ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಈ ಹಳ್ಳಿಗಳು ಶತಶತಮಾನಗಳಿಂದ ಕತ್ತಲಲ್ಲೇ ಮುಳುಗಿದ್ದವು. ಈ ಹಳ್ಳಿಗಳು ವಿದ್ಯುತ್ ಕಂಬಗಳನ್ನಾಗಲಿ, ತಂತಿಗಳನ್ನಾಗಲಿ ಕಂಡಿರಲಿಲ್ಲ. ಆದರೆ, ಈ ಹಳ್ಳಿಗಳಿಗೆ ವಿದ್ಯುತ್ತನ್ನು ಒದಗಿಸಲೇಬೇಕೆಂಬ ಕೆಲಸವನ್ನು ನಾವು ಕೈಗೆತ್ತಿಕೊಂಡೆವು. ಈ ಹಳ್ಳಿಗಳು ತುಂಬಾ ಕುಗ್ರಾಮಗಳಾಗಿದ್ದವು, ಯಾರೂ ಅಲ್ಲಿಗೆ ಹೋಗಲು ಆಗುತ್ತಿರಲಿಲ್ಲ ಎನ್ನುವುದು ನಿಜ. ಜತೆಗೆ, ಈ ಹಳ್ಳಿಗಳನ್ನು ಉದಾಸೀನ ಮಾಡಲಾಗಿತ್ತು. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗಿದ್ದ ಜನರು ಈ ಹಳ್ಳಿಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನಾವು “ಎಲ್ಲರೊಂದಿಗೆ, ಎಲ್ಲರ ವಿಕಾರ’ (Please Check) ಎನ್ನುವ ಮಂತ್ರವನ್ನು ಪಾಲಿಸುವವರು. ಹೀಗಾಗಿ, ಈ ಗ್ರಾಮಗಳು ಎಷ್ಟೇ ದೂರದಲ್ಲಿರಲಿ ಅಥವಾ ದುರ್ಗಮವಾದ ಕಾಡುಮೇಡುಗಳ ನಡುವೆಯೇ ಇರಲಿ, ಈ 18 ಸಾವಿರ ಹಳ್ಳಿಗಳಿಗೂ ವಿದ್ಯುತ್ತನ್ನು ನೀಡಲೇಬೇಕು ಎಂದು ನಾವು ಸಂಕಲ್ಪ ಮಾಡಿದೆವು. ಇದಕ್ಕಾಗಿ ನಾವು ಕೋಟ್ಯಂತರ ರೂಪಾಯಿಗಳನ್ನು ವಿನಿಯೋಗಿಸಲು ಮನಸ್ಸು ಮಾಡಿದೆವು.
 
 
 
            ಇಷ್ಟೇ ಅಲ್ಲ, ಇಷ್ಟೂ ಹಳ್ಳಿಗಳಿಗೆ ನಾವು ನಿಗದಿತ ಕಾಲಮಿತಿಗೂ ಮೊದಲೇ ವಿದ್ಯುತ್ತನ್ನು ನೀಡಲು ಶಕ್ತರಾಗಿದ್ದೇವೆ ಎನ್ನುವುದು ನನಗೆ ಸಂತೋಷದ ವಿಚಾರವಾಗಿದೆ. ನಾವು ಅಧಿಕಾರಕ್ಕೆ ಬರುವುದಕ್ಕೂ ಮೊದಲು, ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ 50-60 ವರ್ಷಗಳ ಕಾಲ ಆಳ್ವಿಕೆ ನಡೆಸಿದವರಿಗೆ ವಿದ್ಯುತ್ತಿಲ್ಲದೆ ಗಾಢಾಂಧಕಾರದಲ್ಲಿ ಮುಳುಗಿದ್ದ ಈ ಹಳ್ಳಿಗಳ ಬಗ್ಗೆ ಯೋಚಿಸಲೂ/ ವಿಚಾರಿಸಲೂ ಪುರಸೊತ್ತಿರಲಿಲ್ಲ. ಆದರೆ ಒಂದು ಸಲ ನಾವು ಅಧಿಕಾರಕ್ಕೆ ಬಂದ ಕೂಡಲೇ, ಈ ಮೋದಿ ಸತ್ಯವನ್ನು ಹೇಳುತ್ತಾನೋ, ಇಲ್ಲವೋ ಎನ್ನುವುದನ್ನು ಜನರು ಖುದ್ದಾಗಿ ಅನುಭವಿಸತೊಡಗಿದರು. ಅಂದಂತೆ, ಈ 18 ಸಾವಿರ ಹಳ್ಳಿಗಳ ಬಗ್ಗೆ ಯೋಚಿಸಲೂ ಪುರಸೊತ್ತಿಲ್ಲದಿದ್ದವರು ಇಂದು ಈ ಹಳ್ಳಿಗಳಿಗೆ ಭೇಟಿ ನೀಡಲೇಬೇಕಾಗಿದೆ ಎನ್ನುವುದನ್ನು ತಿಳಿದು ನನಗೆ ತಮಾಷೆ ಎನಿಸುತ್ತಿದೆ. ಇದರ ಪರಿಣಾಮವಾಗಿ ಏನಾಗಿದೆಯೆಂದರೆ, ಇಂದು ಅಧಿಕಾರಿಗಳು ಕೂಡ ಸದಾ ಜಾಗೃತ ಸ್ಥಿತಿಯಲ್ಲಿರುವಂತಾಗದೆ. ನಾವು ಅವರ ಮೇಲೆ ಈ ವಿಷಯದಲ್ಲಿ ಸಾತ್ವಿಕ ಒತ್ತಡ ಹೇರುತ್ತಿದ್ದೇವೆ. ಈ ಒತ್ತಡದಡಿ ಅವರೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಯಾವಾಗ ಒಂದು ಘೋಷಣೆಯ ಮೂಲಕ ಕೆಲಸಗಳು ಶುರುವಾಗುತ್ತವೋ ಆಗ ಸಹಜವಾಗಿಯೇ ಒತ್ತಡ ನಿರ್ಮಾಣವಾಗುತ್ತದೆ. ನಾವು ಈ ಹಳ್ಳಿಗಳಲ್ಲೆಲ್ಲ ವಿದ್ಯುತ್ ಕಂಬವನ್ನು ನೆಟ್ಟು, ಅಲ್ಲೆಲ್ಲ ಈಗಾಗಲೇ 5ರಿಂದ 25 ಮನೆಗಳಿಗೆ ವಿದ್ಯುತ್ತನ್ನು ನೀಡಿದ್ದೇವೆ. ಆದರೂ ಕೆಲವರು `ಕೆಲಸ ಎಲ್ಲಾಗಿದೆ?’ ಎಂದು ಕೇಳುತ್ತ, ದೇಶವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಏನೇ ಇರಲಿ, ಇವರು ಕೇಳುತ್ತಿರುವ ಪ್ರಶ್ನೆ ಕೂಡ ಮುಖ್ಯವೇ ಆಗಿದೆ.
 
 
 
            ಈ ಪ್ರಶ್ನೆಯನ್ನು ಕೇಳುತ್ತಿರುವವರು ಒಂದು ಸಂಗತಿಯನ್ನು ಅರಿತುಕೊಳ್ಳಬೇಕು. ಅದೇನೆಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳಾದ ನಂತರವೂ ನಮ್ಮ ನಾಲ್ಕು ಕೋಟಿ ಅಥವಾ ಶೇಕಡ 20ರಷ್ಟು ಮನೆಗಳೇಕೆ ವಿದ್ಯುತ್ನಿಂದ ವಂಚಿತವಾಗಿವೆ ಎನ್ನುವ ಸಂಗತಿ. ಇಷ್ಟೊಂದು ದೊಡ್ಡ ಸಂಖ್ಯೆಯ ಕುಟುಂಬಗಳು ಇದುವರೆಗೂ ವಿದ್ಯುತ್ತನ್ನೇ ಕಂಡಿಲ್ಲದೆ ಇರುವುದಕ್ಕೇನು ಕಾರಣ? ಈ ಮನೆಗಳಿಗೆ ಮೊದಲು ವಿದ್ಯುತ್ ಸಂಪರ್ಕವಿತ್ತು, ಆದರೆ ಈ ಮೋದಿ ಅಧಿಕಾರಕ್ಕೆ ಬಂದಮೇಲೆ ಇವುಗಳಿಗೆಲ್ಲ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಂದೇನಲ್ಲ! ಹೀಗಾಗಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ 60 ವರ್ಷಗಳ ಕಾಲ ಇಷ್ಟೊಂದು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲವೆಂದಾದರೆ ಅದಕ್ಕೆ ಈಗ ನಮ್ಮನ್ನು ಪ್ರಶ್ನಿಸುತ್ತಿರುವವರನ್ನೇ ನಾವು ದೂಷಿಸಬೇಕು. ಆದರೆ, ಒಂದು ನಿಗದಿತ ಗಡುವಿನೊಳಗೆ ಈ ಹದಿನೆಂಟೂ ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲೇಬೇಕೆಂಬ ಹೊಣೆಯನ್ನು ನಾವು ಹೊತ್ತುಕೊಂಡೆವು. ಅಂದರೆ, ವಿದ್ಯುತ್ತಿನಿಂದ ವಂಚಿತವಾಗಿದ್ದ ಈ ನಾಲ್ಕು ಕೋಟಿ ಜನರಿಗೆ `ಸೌಭಾಗ್ಯ’ ಯೋಜನೆಯಡಿ ವಿದ್ಯುತ್ತಿನ ಅನುಕೂಲವನ್ನು ನೀಡಲೇಬೇಕೆಂದು ನಾವು ಸಂಕಲ್ಪ ಮಾಡಿದೆವು.
 
 
 
            ಕೆಲವರು ತಮಗೆ ಬಡವರ ಪರ ಕಾಳಜಿ ಇದೆ ಎನ್ನುವುದನ್ನು ತೋರಿಸಲು ಯಾವಾಗಲೂ ಶ್ರೀಮಂತರನ್ನು ದೂಷಿಸುತ್ತಿರುತ್ತಾರೆ. ಇಂಥವರು ಸದಾ “ಈ ಮೋದಿಯೇನಿದ್ದರೂ ಬರೀ ಶ್ರೀಮಂತರಿಗಷ್ಟೇ ಅನುಕೂಲ ಮಾಡಿಕೊಡುತ್ತಿದ್ದಾರೆ,” ಎನ್ನುತ್ತಿರುತ್ತಾರೆ. ಇಂದಂತೂ ಒಂದು ಬಗೆಯ ಚಟವೇ ಆಗಿಹೋಗಿದೆ. ಆದರೆ, ವಿದ್ಯುತ್ತನೇ ಕಾಣದಿದ್ದ ಈ 18,000 ಹಳ್ಳಿಗಳಲ್ಲಿ ನಮ್ಮ ಸಮಾಜದ ಯಾವ ಶ್ರೀಮಂತರು ವಾಸಿಸುತ್ತಿದ್ದಾರೆ ಎಂದ ನಾನು ಇವರಿಗೆ ಕೇಳಲು ಇಷ್ಟಪಡುತ್ತೇನೆ. ಈ ಮೋದಿಯು ವಿದ್ಯುತ್ತನ್ನು ನೀಡಲು ಬಯಸಿರುವ 4 ಕೋಟಿ ಮನೆಗಳಲ್ಲಿ ಯಾವ ಸಿರಿವಂತರು ನೆಲೆಸಿದ್ದಾರೆ? ಸಾಮಾನ್ಯ ಜನರು ಪಡುತ್ತಿರುವ ಪಾಡಿನ ಬಗ್ಗೆ ಕಿಂಚಿತ್ತೂ ಕಲ್ಪನೆ ಇಲ್ಲದ ಈ ಜನರಿಗೆ ನಾನು ಈ ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ಸೋದರ-ಸೋದರಿಯರೇ, ಈ ಸಮಾಜದ ತೀರಾ ಕೆಳಸ್ತರದಲ್ಲಿರುವ ದಲಿತರು, ಶೋಷಿತರು ಮತ್ತು ಅವಕಾಶ ವಂಚಿತರನ್ನು ನಾನು ಅಭಿವೃದ್ಧಿಯ ಪಯಣದಲ್ಲಿ ಸೇರಿಸಿಕೊಳ್ಳಲು ಇಷ್ಟಪಡುತ್ತೇನೆ. ಅಂದಂತೆ, ಇದುವರೆಗೂ ವಿದ್ಯುತ್ತನೇ ಕಾಣದ ದೇಶದ 4 ಕೋಟಿ ಮನೆಗಳ ಪೈಕಿ 32 ಲಕ್ಷ ಮನೆಗಳು ಜಾರ್ಖಂಡ್ನಲ್ಲೇ ಇವೆ. ಇಲ್ಲಿನ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಜತೆಗೂಡಿ ಇಷ್ಟೂ ಮನೆಗಳಿಗೆ ವಿದ್ಯುತ್ತನ್ನು ಒದಗಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿರುವುದನ್ನು ನೋಡಿ ನನಗೆ ಖುಷಿಯಾಗಿದೆ. ಈ ಉಪಕ್ರಮವು ಖಂಡಿತವಾಗಿಯೂ ಯಶಸ್ಸನ್ನು ಕಾಣಲಿದೆ ಎನ್ನುವ ನಂಬಿಕೆ ನನಗಿದೆ.
 
 
 
            ಸಹೋದರ-ಸಹೋದರಿಯರೇ,
 
ಸಿಂದ್ರಿಯಲ್ಲಿದ್ದ ಯೂರಿಯಾ ರಸಗೊಬ್ಬರ ಕಾರ್ಖಾನೆಯನ್ನು ಪುನಾರಂಭಿಸುವ ಸದವಕಾಶ ನನಗಿಂದು ಸಿಕ್ಕಿದೆ. ಈ ಕಾರ್ಖಾನೆಯನ್ನು ಮುಚ್ಚಿ ಈಗಾಗಲೇ 16 ವರ್ಷಗಳಾಗಿದ್ದವು. ಆದರೆ ಈ ಕಾರ್ಖಾನೆಯು ಭಾರತೀಯ ಜನಸಂಘದ ವತಿಯಿಂದ ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಡಾ.ಶಾಮಪ್ರಸಾದ್ ಮುಖರ್ಜಿ ಅವರ ಕಾಲಕ್ಕೆ ಸಂಬಂಧಿಸಿದ್ದು. ಸ್ವತಃ ಶ್ರೀ ಮುಖರ್ಜಿಯವರೇ ಈ ಕಾರ್ಖಾನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಆದರೆ, ನಂತರದ ವರ್ಷಗಳಲ್ಲಿ ಇದಕ್ಕೆ ಬೀಗ ಹಾಕಲಾಯಿತು. 2014ರ ಚುನಾವಣೆಯ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿದ್ದಾಗ, ಈ ಕಾರ್ಖಾನೆಯನ್ನು ಪುನಃ ಆರಂಭಿಸುವುದಾಗಿ ನಿಮಗೆ ಮಾತು ಕೊಟ್ಟಿದ್ದೆ.
 
 
 
            ಸಹೋದರ-ಸಹೋದರಿಯರೇ,
 
 
 
            ಕಾಲ ಉರುಳಿದಂತೆ ತಂತ್ರಜ್ಞಾನವೂ ಬದಲಾಗಬೇಕು. ನಾವೀಗ ಅನಿಲವನ್ನು ಇಂಧನದ ಒಂದು ಮೂಲವಾಗಿ ಬಳಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಕೈಗಾರಿಕೆ ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಇಂಥದೇ ಇನ್ನೊಂದು ಕಾರ್ಖಾನೆಯು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗೋರಖಪುರದಲ್ಲಿ ತಲೆಯೆತ್ತಲಿದೆ.
 
 
 
            ಸೋದರ-ಸೋದರಿಯರೇ,
 
 
 
            ಸಿಂದ್ರಿ ಮತ್ತು ಧನಬಾದ್ ಎರಡನ್ನೂ ನಾವು ಅಭಿವೃದ್ಧಿಯ ದೃಷ್ಟಿಯಿಂದ ಎರಡು ಪ್ರಮುಖ ನಗರಗಳನ್ನಾಗಿ ನೋಡಬಹುದು. ಏಕೆಂದರೆ, ಇವೆರಡಕ್ಕೂ ಅಗಾಧವಾದ ಸಾಮರ್ಥ್ಯವಿದೆ.
 
 
 
            ಅಣ್ಣ-ತಮ್ಮಂದಿರೇ ಮತ್ತು ಅಕ್ಕ-ತಂಗಿಯರೇ,
 
 
 
            ಯೂರಿಯಾ ಕಾರ್ಖಾನೆಗಳಿಗೆ ಅನಿಲವು ಸುಲಭವಾಗಿ ಸಿಗಲಿದೆ. ಹೀಗಾಗಿ ಬಿಹಾರದ ಬರೌನಿ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗೋರಖಪುರ ಮತ್ತು ಜಾರ್ಖಂಡ್ನ ಸಿಂದ್ರಿಯಲ್ಲಿರುವ ಈ ಒಂದು ಕಾರ್ಖಾನೆಗಳು ದೇಶದ ಪೂರ್ವ ಭಾಗಕ್ಕೆ ಅಗತ್ಯವಾಗಿರುವ ಯೂರಿಯಾದ ಸಾಗಾಣಿಕೆ ವೆಚ್ಚವನ್ನು ಗಮನಾರ್ಹವಾಗಿ ಇಳಿಸಲಿವೆ. ಇದರಿಂದಾಗಿ ನಮ್ಮ ಯುವಜನರಿಗೂ ಉದ್ಯೋಗಗಳು ಸಿಗಲಿವೆ. ಯೂರಿಯಾದ ಸುಲಭ ಲಭ್ಯತೆಯು ದೇಶದ ಪೂರ್ವ ಭಾಗದಲ್ಲಿ ನಡೆಯುತ್ತಿರುವ ಎರಡನೇ ಕೃಷಿ ಕ್ರಾಂತಿಗೆ ನೆರವು ನೀಡಲಿದೆ. ಈ ಆಶಯವನ್ನು ನಾವು ಹಾಗೆಯೇ ಮುಂದುವರಿಸಿಕೊಂಡು ಹೋಗಲಿದ್ದೇವೆ.
 
 
 
            ಅಂದಂತೆ, ಯೂರಿಯಾ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಒಂದು ಉಪಕ್ರಮವನ್ನು ಆರಂಭಿಸಿದೆವು. ಅದೇನೆಂದರೆ, ಬೇವಿನ ರಸವನ್ನು ಲೇಪಿಸುವುದು. ಮೊದಲೆಲ್ಲ, ರಸಗೊಬ್ಬರ ಸಹಾಯಧನವನ್ನು ರೈತರಿಗೆ ಕೊಡಲಾಗುತ್ತಿತ್ತು. ಆದರೆ, ಯೂರಿಯಾ ಮಾತ್ರ ನಮ್ಮ ರೈತರ ಹೊಲ-ಗದ್ದೆಗಳನ್ನು ತಲುಪುತ್ತಲೇ ಇರಲಿಲ್ಲ. ಬದಲಿಗೆ, ಯೂರಿಯಾವನ್ನು ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿತ್ತು. ಆದರೆ, ಯೂರಿಯಾ ಹೀಗೆ ಬೇರೆಲ್ಲಿಗೋ ಹೋಗುತ್ತಿರುವುದನ್ನು ತಡೆಯಬೇಕೆಂಬ ಒಂದು ಸಣ್ಣ ಆಲೋಚನೆ ಕೂಡ ಈ ದೇಶವನ್ನು 70 ವರ್ಷಗಳ ಕಾಲ ಆಳಿದವರಿಗೆ ಬರಲಿಲ್ಲ. ಇದರಿಂದಾಗಿ, ದೇಶದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ಅಷ್ಟಿಷ್ಟಲ್ಲ.
 
 
 
            ಇದರ ಬಗ್ಗೆ ಗಮನ ಹರಿಸಿದ ನಾವು, ತಕ್ಷಣವೇ ಯೂರಿಯಾ ರಸಗೊಬ್ಬರಕ್ಕೆ ನೂರಕ್ಕೆ ನೂರರಷ್ಟು ಬೇವಿನ ರಸವನ್ನು ಲೇಪಿಸುವ ಉಪಕ್ರಮವನ್ನು ಆರಂಭಿಸಿದೆವು. ಯೂರಿಯಾಕ್ಕೆ ಹೀಗೆ ಬೇವಿನ ರಸವನ್ನು ಲೇಪಿಸಿದರೆ ಅದನ್ನು ಕೈಗಾರಿಕಾ ಉದ್ದೇಶಗಳಿಗಾಗಿ ದುರುಪಯೋಗ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅಂದರೆ, ಈಗ ಯೂರಿಯಾವನ್ನು ಸಂಪೂರ್ಣವಾಗಿ ಕೃಷಿ ಕಾರ್ಯಗಳಿಗಾಗಿ ಮಾತ್ರ ಬಳಸಬಹುದು. ಹೀಗೆ ಮಾಡುವ ಮೂಲಕ ಯೂರಿಯಾದ ಕಳ್ಳತನವನ್ನು ಕೂಡ ತಡೆಯಬಹುದು.
 
 
 
            ನಾವು ಈ ಹೆಜ್ಜೆಯನ್ನು ಇಟ್ಟಿದ್ದರಿಂದಾಗಿ ಏನಾಗಿದೆಯೆಂದರೆ, ನಿಜವಾಗಿಯೂ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದರಿಗೆ ತಲೆನೋವಾಗಿದೆ. ಏಕೆಂದರೆ, ರೈತರು ಈಗ ಹಿಂದಿನಂತೆ ಯೂರಿಯಾಗಾಗಿ ಸಾಲುಗಟ್ಟಿ ನಿಲ್ಲುವ ಪ್ರಮೇಯವೇ ಇಲ್ಲ. ಇಷ್ಟೇ ಅಲ್ಲ, ಯೂರಿಯಾ ಖರೀದಿದಾಗಿ ನಮ್ಮ ಕೃಷಿಕರು ಕಾಳಸಂತೆಯನ್ನೂ ಆಶ್ರಯಿಸಬೇಕಾಗಿಲ್ಲ. ಒಂದು ಕಾಲದಲ್ಲಿ, ಯೂರಿಯಾಗೆ ಎಷ್ಟೊಂದು ಮುಗ್ಗಟ್ಟು ಸೃಷ್ಟಿಯಾಗುತ್ತಿತ್ತೆಂದರೆ, ನಮ್ಮ ರೈತರು ಇದಕ್ಕಾಗಿ ಪೊಲೀಸರ ಲಾಠಿ ಏಟನ್ನೂ ತಿಂದಿದ್ದಾರೆ. ಆದರೆ, ಈಗ ಇವೆಲ್ಲದರಿಂದಲೂ ಅವರಿಗೆ ವಿಮೋಚನೆಯನ್ನು ನೀಡಲಾಗಿದೆ. ದೇಶದ ಯಾವ ಭಾಗದಲ್ಲೇ ಆಗಲಿ, ಯೂರಿಯಾ ಕೊರತೆ ಉಂಟಾಗಿದೆ ಎನ್ನುವ ಒಂದು ಸಣ್ಣ ದೂರು ಕೂಡ ಕಳೆದ ಎರಡು ವರ್ಷಗಳಲ್ಲಿ ಬಂದಿಲ್ಲ. ಏಕೆಂದರೆ, ಯೂರಿಯಾ ಕಳವನ್ನು ನಾವು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ.
 
 
 
            ಸಹೋದರರೇ ಮತ್ತು ಸಹೋದರಿಯರೇ,
 
 
 
            ನಾನು ಭ್ರಷ್ಟಾಚಾರ ಮತ್ತು ವಂಚನೆಗಳ ವಿರುದ್ಧ ಹೋರಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಂಚಿಯಲ್ಲಿ ನಡೆಯಲಿರುವ ಅನಿಲ ಕೊಳವೆ ಮಾರ್ಗದ ಯೋಜನೆಗೆ ಅಡಿಗಲ್ಲನ್ನು ಹಾಕುವ ಅವಕಾಶ ನನಗಿಂದು ಸಿಕ್ಕಿದೆ. ಅಂದಹಾಗೆ 21ನೇ ಶತಮಾನದ ಮೂಲಸೌಲಭ್ಯ ಕ್ಷೇತ್ರವು ಅನಿಲ ವಿತರಣೆ ಜಾಲ, ಆಪ್ಟಿಕಲ್ ಫೈಬರ್ ಜಾಲ, ನೀರು ಪೂರೈಕೆ ಜಾಲ, ವಿದ್ಯುತ್ ಜಾಲ ಮತ್ತು ಆಧುನಿಕ ಬಗೆಯ ಸಕಲ ಸೌಲಭ್ಯಗಳನ್ನೂ ಒಳಗೊಂಡಿರಬೇಕು. ಈ ವಿಷಯದಲ್ಲಿ ಜಾರ್ಖಂಡ್ ಏಕೆ ಹಿಂದುಳಿಯಬೇಕು? ಭಾರತವನ್ನು ಕ್ಷಿಪ್ರ ಗತಿಯಲ್ಲಿ ಮುನ್ನಡೆಸುವ ಮಹತ್ತ್ವಾಕಾಂಕ್ಷಿ ಯೋಜನೆಯಲ್ಲಿ ರಾಂಚಿ ಕೂಡ ಇರಲಿದೆ. ಈ ಕನಸಿನೊಂದಿಗೆ ನಾವು, ಈ ಅನಿಲ ಕೊಳವೆ ಮಾರ್ಗ ಸ್ಥಾಪನೆಯ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಂದು ಮನೆಗೂ ಅನಿಲ ಸೌಲಭ್ಯ ಸಿಗಲಿದೆ. ಇಷ್ಟೇ ಅಲ್ಲ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನ 70 ಜಿಲ್ಲೆಗಳಿಗೆ ಈ ಕೊಳವೆ ಮಾರ್ಗದ ಮೂಲಕವೇ ಅನಿಲ ಪೂರೈಕೆ ಆಗಲಿದೆ.
 
 
 
            ದೇಶದ ಪ್ರತಿಯೊಂದು ಅಡುಗೆಮನೆಯನ್ನೂ ಹೊಗೆರಹಿತವನ್ನಾಗಿ ಮಾಡಬೇಕೆಂಬುದು ನಮ್ಮ ಕನಸಾಗಿದೆ. ಈ ಗುರಿಯನ್ನು ಸಾಧಿಸಲೆಂದೇ ನಾವು `ಉಜ್ವಲಾ’ ಯೋಜನೆಯನ್ನು ಆರಂಭಿಸಿದ್ದೇವೆ. ಕೊಳವೆ ಮಾರ್ಗದ ಮೂಲಕ ಅನಿಲ ಪೂರೈಕೆ ಮಾಡುವುದು ಈ ನಿಟ್ಟಿನಲ್ಲಿ ನಮ್ಮ ಎರಡನೇ ಹೆಜ್ಜೆಯಾಗಿದೆ. ಹಾಗೆಯೇ, ನಾವು ಈಗಾಗಲೇ ಮೂರನೇ ಹೆಜ್ಜೆಯನ್ನೂ ಇಟ್ಟಿದ್ದೇವೆ. ಅಂದರೆ, ಸೌರಶಕ್ತಿಯ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ನಮ್ಮ ಅಡುಗೆ ಮನೆಗಳಲ್ಲಿ ನಮ್ಮ ತಿಂಡಿತೀರ್ಥಗಳು ಸಿದ್ಧವಾಗುವಂತೆ ಮಾಡಬೇಕೆನ್ನುವುದು ನಮ್ಮ ಹಂಬಲವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿವೆ.
 
 
 
            ದೇವಗಢದಲ್ಲಿ ಅಸ್ತಿತ್ವಕ್ಕೆ ಬರಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆಗೆ ಶಂಕುಸ್ಥಾಪನೆ ಮಾಡುವ ಅವಕಾಶವೂ ನನಗಿಂದು ಸಿಕ್ಕಿದೆ. ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ದೇಶದ ಪೂರ್ವ ಭಾಗಗಳಲ್ಲಿ ಯಾರಿಗಾದರೂ ಗಂಭೀರವಾದ ಅನಾರೋಗ್ಯ ಕಾಣಿಸಿಕೊಂಡರೆ ಅವರನ್ನೆಲ್ಲ ದೆಹಲಿಯಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಗೆ ಕಳಿಸಲಾಗುತ್ತಿದೆ. ಬಡವರಿಗಂತೂ ಇದು ಖಂಡಿತವಾಗಿಯೂ ಕೈಗೆಟುಕುವುದಿಲ್ಲ. ಹೀಗಾಗಿ, ದೇಶದ ಪೂರ್ವ ಭಾಗದಲ್ಲಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಕಡುಬಡವರಿಗೆ ಕೂಡ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡೇ ನಾವೀಗ ದೇವಗಢದಲ್ಲಿ ಈ ಸಂಸ್ಥೆಯನ್ನು ಆರಂಭಿಸುತ್ತಿದ್ದೇವೆ. ಅಂದಹಾಗೆ, ದೇವಗಢವು ಹೆಸರುವಾಸಿಯಾದ ಯಾತ್ರಾಸ್ಥಳವೂ ಆಗಿದೆ. ಇದು ಮುಖ್ಯವಾಗಿ ಶಿವನ/ಭೋಲೇನಾಥನ ಆವಾಸಸ್ಥಾನ. ಹಾಗೆಯೇ, ಇದೊಂದು ಶಕ್ತಿಪೀಠವೂ ಅಹುದು. ಹೀಗಾಗಿ, ದೇಶದ ಮೂಲೆಮೂಲೆಗಳ ಜನರು ಇಲ್ಲಿಗೆ ಬರಲು ಬಯಸುತ್ತಾರೆ. ಈ ಊರಿಗೆ ಬಹುದೊಡ್ಡ ಪ್ರವಾಸಿ ತಾಣವಾಗಿ ಬೆಳೆಯುವ ಸಾಮರ್ಥ್ಯವಿದೆ. ಆದ್ದರಿಂದ, ಈ ಊರಿಗೆ ವಿಮಾನ ನಿಲ್ದಾಣವೂ ಇರಬೇಕೆಂಬುದು ನಮ್ಮ ಆಸೆಯಾಗಿದೆ.
 
 
 
            ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯ ಕೂಡ ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿದೆ. ಮಾಮೂಲಿ ಚಪ್ಪಲಿ ಹಾಕಿಕೊಂಡು ಓಡಾಡುವ ಜನರು ಕೂಡ ವಿಮಾನಗಳಲ್ಲಿ ಪ್ರಯಾಣಿಸಬೇಕೆನ್ನುವುದು ನಮ್ಮ ಕನಸಾಗಿದೆ. ನಿಜ, ಇದು ನಮ್ಮ ಕನಸು. ಕಳೆದ ವರ್ಷ ನಮ್ಮ ದೇಶದಲ್ಲಿ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣ ಮಾಡಿರುವವರಿಗಿಂತ ಹೆಚ್ಚಿನ ಜನರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದರೆ ನಿಜಕ್ಕೂ ನಿಮಗೆ ಸಂತೋಷವಾಗುವುದರಲ್ಲಿ ಅನುಮಾನವಿಲ್ಲ. ಅಂದರೆ, ಶ್ರೀಸಾಮಾನ್ಯರ ಬದುಕಿನಲ್ಲಿ ನಾವು ಎಂತಹ ಬದಲಾವಣೆಗಳನ್ನು ತರುತ್ತಿದ್ದೇವೆ ಎನ್ನುವುದನ್ನು ಇದು ಹೇಳುತ್ತದೆ.
 
 
 
            ಸಹೋದರರೇ ಮತ್ತು ಸಹೋದರಿಯರೇ,
 
 
 
            ನಾವು ಅನೇಕ ಅಭಿವೃದ್ಧಿ ಯೋಜನೆಗಳೊಂದಿಗೆ ದಾಪುಗಾಲಿಡುತ್ತಿದ್ದೇವೆ. 2022ನೇ ಇಸವಿಯ ಹೊತ್ತಿಗೆ ನಮ್ಮ ದೇಶದ ಪ್ರತಿಯೊಬ್ಬ ಬಡವನಿಗೂ ಸೂರನ್ನು ಒದಗಿಸಬೇಕೆಂಬುದು ನಮ್ಮ ಕನಸು. ಈ ಸಂಬಂಧ ನಾವು ರೂಪಿಸಿರುವ ಯೋಜನೆಯು ಪ್ರತಿಯೊಬ್ಬ ಬಡವನಿಗೂ ಒಂದು ಶೌಚಾಲಯ, ನೀರಿನ ಅನುಕೂಲ ಮತ್ತು ವಿದ್ಯುತ್ ಸಂಪರ್ಕವಿರುವ ಮನೆ ಮತ್ತು ಹತ್ತಿರದಲ್ಲೇ ಶಾಲೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಂದಂತೆ, 2022ನೇ ಇಸವಿಯು ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವೂ ಆಗಲಿದೆ. ಹೀಗಾಗಿ, ಆ ವೇಳೆಗೆ ಒಬ್ಬೇಒಬ್ಬ ಬಡವನೂ ಸೂರಿಲ್ಲದೆ ಇರುವಂತಹ ಸ್ಥಿತಿಯಲ್ಲಿ ಇರಬಾರದು. ಆದ್ದರಿಂದ, ನಾವು ಈ ಕನಸಿನೊಂದಿಗೆ ಮುಂದಡಿ ಇಡುತ್ತಿದ್ದೇವೆ.
 
 
 
            ಸಹೋದರ-ಸಹೋದರಿಯರೇ,
 
 
 
            ದೇಶದ ಅಭಿವೃದ್ಧಿಯ ಪಯಣದಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಮ್ಮ ದೇಶವು ಈಗ ಪ್ರಾಮಾಣಿಕತೆಯ ಹೊರಳು ಹಾದಿಯಲ್ಲಿದೆ. ಸಾಮಾನ್ಯ ಜನರು ಯಾವಾಗಲೂ ಸತ್ಯಸಂಧತೆಯಿಂದ ಕೂಡಿದ ಜೀವನವನ್ನೇ ನಡೆಸುತ್ತಾರೆ. ನಮ್ಮ ಸರಕಾರ ಕೂಡ ಪ್ರಾಮಾಣಿಕರು ಮತ್ತು ಪ್ರಾಮಾಣಿಕತೆಗಾಗಿ ಹೋರಾಡುವವರ ಪರವಾಗಿದೆ. ಆದ್ದರಿಂದ, ನಾವು ನಿಮ್ಮೆಲ್ಲರ ಕನಸುಗಳನ್ನು ಈಡೇರಿಸುವ ಬಹುಮುಖ್ಯ ಜವಾಬ್ದಾರಿಯೊಂದಿಗೆ ಮುಂದಡಿ ಇಡುತ್ತಿದ್ದೇವೆ. ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನೀವೆಲ್ಲರೂ ನಮ್ಮನ್ನು ಆಶೀರ್ವದಿಸಿದ್ದೀರಿ. ಜಾರ್ಖಂಡ್ ರಾಜ್ಯವು ಮುಂಬರುವ ದಿನಗಳಲ್ಲಿ ಹೊಸ ಎತ್ತರವನ್ನು ತಲುಪಲಿದೆ ಮತ್ತು ನವ ಜಾರ್ಖಂಡ್ ನಿರ್ಮಾಣದ ನಿಟ್ಟಿನಲ್ಲಿ ಇದು ಪ್ರಗತಿಯನ್ನು ಸಾಧಿಸಲಿದೆ ಎಂದು ನಾನು ನಂಬಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು!