Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ‘ಎನ್‌ಡಿಟಿವಿ ವಿಶ್ವ ಶೃಂಗಸಭೆ 2026’ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

ನವದೆಹಲಿಯಲ್ಲಿ ‘ಎನ್‌ಡಿಟಿವಿ ವಿಶ್ವ ಶೃಂಗಸಭೆ 2026’ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ನಡೆದ ಎನ್‌ಡಿಟಿವಿ ವಿಶ್ವ ಶೃಂಗಸಭೆ 2026 ಉದ್ದೇಶಿಸಿ ಭಾಷಣ ಮಾಡಿದರು. ದೇಶದಲ್ಲಿ ಸಂತಸ, ಸಂಭ್ರಮದ ಹಬ್ಬದ ಋತುವಿನ ನಡುವೆ ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಸ್ವಾಗತಿಸಿದ ಅವರು, ಗಂಭೀರ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಕ್ಕಾಗಿ ಸಭೆಯನ್ನು ಶ್ಲಾಘಿಸಿದರು.

ಎನ್‌ಡಿಟಿವಿ ಶೃಂಗಸಭೆಯ ಚರ್ಚೆಗಳ ಸಕಾಲಿಕ ಪ್ರಸ್ತುತತೆಯನ್ನು ಎತ್ತಿ ತೋರಿಸಿದ ಪ್ರಧಾನಿ ಅವರು, ಜಾಗತಿಕ ಬದಲಾವಣೆಗಳು ಈಗ ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಹೊಸ ವಿಶ್ವ ಕ್ರಮ ಕುರಿತ ಚರ್ಚೆಗಳು ಸರ್ವವ್ಯಾಪಿಯಾಗಿವೆ. ಈ ನೈಜ-ಪ್ರಪಂಚದ ಪರಿಣಾಮಗಳು ಅಂತಹ ಅಂತಾರಾಷ್ಟ್ರೀಯ ವೇದಿಕೆಗಳ ಅಗತ್ಯವನ್ನು ಹೆಚ್ಚಿಸುತ್ತವೆ. “ಇಂತಹ ಸನ್ನಿವೇಶದಲ್ಲಿ, ಅಂತಹ ವಿಶ್ವ ಶೃಂಗಸಭೆಗಳ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.

ವ್ಯವಸ್ಥೆಗಳ ನಡುವಿನ ಜಗತ್ತಿನ(‘ದಿ ವರ್ಲ್ಡ್ ಬಿಟ್ವೀನ್ ಆರ್ಡರ್ಸ್’) ಸುತ್ತ ಪ್ರಮುಖ ಚರ್ಚೆಗೆ ಒತ್ತು ನೀಡಿ ಪ್ರಧಾನಿ, ಜಾಗತಿಕ ಸಮುದಾಯವು ಅಸ್ತಿತ್ವದಲ್ಲಿರುವ ಕ್ರಮ ಏಕೆ ಬದಲಾಗುತ್ತಿದೆ, ಪಾರಂಪರಿಕ ವ್ಯವಸ್ಥೆಗಳು ಸಮಕಾಲೀನ ಬಿಕ್ಕಟ್ಟುಗಳನ್ನು ಪರಿಹರಿಸಲು ಏಕೆ ವಿಫಲವಾಗುತ್ತಿವೆ ಎಂಬುದನ್ನು ಮೂಲಭೂತವಾಗಿ ಪರಿಶೀಲಿಸಬೇ. ಈ ಪ್ರಶ್ನೆಗಳಿಗೆ ಉತ್ತರಿಸುವುದು ಸ್ವಾಭಾವಿಕವಾಗಿ ವಿಶ್ವ ವೇದಿಕೆಯಲ್ಲಿ ರಾಷ್ಟ್ರ ನಿರ್ದಿಷ್ಟ ಜವಾಬ್ದಾರಿಗಳನ್ನು ಪರೀಕ್ಷಿಸಲು ಕಾರಣವಾಗುತ್ತದೆ. “ಎರಡನೆಯದಾಗಿ, ಈ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಪಾತ್ರವೇನು” ಎಂದು ಮೋದಿ ಪ್ರಶ್ನೆ ಮಾಡಿದರು.

2ನೇ ಮಹಾಯುದ್ಧದ ನಂತರದ ಅಂತಾರಾಷ್ಟ್ರೀಯ ಸಂಬಂಧಗಳ ಸ್ವಾಭಾವಿಕ ವಿಕಾಸವನ್ನು ಪತ್ತೆ ಹಚ್ಚಿದ ಪ್ರಧಾನಿ, ಸಂವಾದ ಮತ್ತು ಸಹಕಾರವು ನೈಜ ಶಕ್ತಿಯನ್ನು ಮೀರಿಸಬೇಕು ಎಂಬ ಅರಿವಿನ ಮೇಲೆ ವಿಶ್ವಸಂಸ್ಥೆಯನ್ನು ಹೇಗೆ ಸ್ಥಾಪಿಸಲಾಯಿತು ಎಂಬುದನ್ನು ನೆನಪು ಮಾಡಿದರು, ಆದರೆ ಹೊಸ ಆರ್ಥಿಕತೆಗಳು, ತಂತ್ರಜ್ಞಾನಗಳು ಮತ್ತು ಮೂಲ ನಿರ್ಧಾರ ತೆಗೆದುಕೊಳ್ಳುವ ಮೇಜಿನ ಹೊರಗಿನ ರಾಷ್ಟ್ರಗಳ ಪ್ರಾಮುಖ್ಯತೆಗೆ ಬಂದಂತೆ ಜಾಗತಿಕ ಸಂಸ್ಥೆಗಳು ಹೊಂದಿಕೊಳ್ಳುವಲ್ಲಿ ವಿಫಲವಾದವು. ವ್ಯಾಪಾರ, ತಂತ್ರಜ್ಞಾನ ಮತ್ತು ಸಮುದ್ರ ಮಾರ್ಗಗಳಂತಹ ಹಿಂದಿನ ಸಂಪರ್ಕಗಳು ಈಗ ಶಸ್ತ್ರಾಸ್ತ್ರೀಕರಣ, ಸಂಘರ್ಷ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಕ್ಷೇತ್ರಗಳಾಗಿ ಪರಿವರ್ತನೆಯಾಗಿವೆ. ಸಾಂಸ್ಥಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪ್ರಸ್ತುತ ವಾಸ್ತವಗಳ ನಡುವಿನ ಅಂತರ ಕಡಿಮೆ ಮಾಡುವ ಎಲ್ಲರನ್ನೂ ಒಳಗೊಂಡ ಕ್ರಮಗಳನ್ನು ನಿರ್ಮಿಸುವುದು ಆಧುನಿಕ ಕಡ್ಡಾಯವಾಗಿದೆ. “ಇಲ್ಲಿಂದಲೇ, ಭಾರತದ ಪಾತ್ರದ ಪ್ರಶ್ನೆ ಮುನ್ನೆಲೆಗೆ ಬರುತ್ತದೆ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜಾಗತೀಕರಣದ ಪ್ರತಿಪಾದಕರು ಸ್ವಹಿತಾಸಕ್ತಿಗೆ ಆದ್ಯತೆ ನೀಡಿದಾಗ ಆಳವಾದ ಜಾಗತಿಕ ವಿಭಜನೆಗಳು, ಪರಸ್ಪರ ಅನುಮಾನ ಮತ್ತು ನಂಬಿಕೆಯ ಕೊರತೆಗಳು ಕಾಣಿಸಿಕೊಂಡವು. ಮನುಕುಲದ ಸಾಮೂಹಿಕ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಿದ ಮತ್ತು ಮಾನವತೆಯ ಸುತ್ತ ಕೇಂದ್ರೀಕೃತವಾದ ಹೊಸ ವಿಶ್ವ ಕ್ರಮವನ್ನು ನಿರ್ಮಿಸುವ ಜಿ-20 ವೇದಿಕೆಯಿಂದ 2020ರಲ್ಲಿ ಮಾಡಿದ ಮನವಿಯನ್ನು ಸಭಿಕರಿಗೆ ನೆನಪಿಸಿದರು. ಸಾಂಸ್ಥಿಕ ವಿಕಾಸದ ತುರ್ತು ಅಗತ್ಯದ ಕುರಿತು ಅದೇ ವರ್ಷ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆ(ಯುಎನ್‌ಜಿಎ)ಯ ವೇದಿಕೆಯಿಂದ ನೀಡಿದ ಸಂದೇಶವನ್ನು ಪುನರುಚ್ಚರಿಸಿದರು. “ಶತಮಾನ ಬದಲಾದರೂ ನಾವು ಬದಲಾಗದಿದ್ದರೆ, ಬದಲಾವಣೆ ತರುವ ನಮ್ಮ ಸಾಮರ್ಥ್ಯವೂ ದುರ್ಬಲಗೊಳ್ಳುತ್ತದೆ” ಎಂದು ಮೋದಿ ಪ್ರತಿಪಾದಿಸಿದರು.

 

ಪ್ರಸ್ತುತ ಜಾಗತಿಕ ಮಾರ್ಗಸೂಚಿಯ ನಿಖರವಾದ ವಾಸ್ತುಶಿಲ್ಪವನ್ನು ಪ್ರಶ್ನಿಸಿದ ಪ್ರಧಾನಿ, ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸುವ ಮತ್ತು ಜಾಗತಿಕ ದಕ್ಷಿಣದ ಧ್ವನಿಗೆ ಸೂಕ್ತ ಸ್ಥಳವನ್ನು ನೀಡುವ ತುರ್ತು ಅಗತ್ಯವಿದೆ. ತೀವ್ರ ಬಿಕ್ಕಟ್ಟುಗಳ ಸಮಯದಲ್ಲಿ ಹೊಂದಾಣಿಕೆ ಅಥವಾ ಚೇತರಿಕೆ ಕಾಪಾಡಿಕೊಳ್ಳಲು ಅಂತಾರಾಷ್ಟ್ರೀಯ ಸಹಕಾರವು ಅನುಕೂಲಕರ ಅವಧಿಗಳನ್ನು ಮೀರಿ ವಿಸ್ತರಿಸಬೇಕು. “ಇದಕ್ಕಾಗಿ, ಎಲ್ಲಾ ಪಾಲುದಾರರು ಪರಿಣಾಮಕಾರಿ ಒಮ್ಮತ ಹೊಂದಿರುವುದು ಅತ್ಯಗತ್ಯ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಚಾಣಕ್ಯನ ‘ಅರ್ಥಶಾಸ್ತ್ರ’ದಲ್ಲಿ ಉಲ್ಲೇಖಿಸಲಾದ ‘ಮತ್ಸ್ಯ ನ್ಯಾಯ’ದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಇಂತಹ ಪರಭಕ್ಷಕ ಜಾಗತಿಕ ಸನ್ನಿವೇಶಗಳನ್ನು ತಡೆಯುವುದೇ ರಾಷ್ಟ್ರದ ಮೂಲ ದೃಷ್ಟಿಕೋನವಾಗಿದೆ. ಸಾಂಕ್ರಾಮಿಕ ರೋಗದ ಸಂದರ್ಭವನ್ನು ಉದಾಹರಣೆಯಾಗಿ ನೀಡಿದ ಅವರು, ಶ್ರೀಮಂತ ರಾಷ್ಟ್ರಗಳು ತಮ್ಮ ಆಂತರಿಕ ಸಮಸ್ಯೆಗಳಲ್ಲಿ ಮಗ್ನವಾಗಿದ್ದಾಗ, ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ಪೂರೈಸುವ ಮೂಲಕ ಮಾನವತೆಯ ಪರವಾಗಿ ನಿಂತಿತು. “ಜಗತ್ತಿಗೆ ‘ಮತ್ಸ್ಯ ನ್ಯಾಯ’ದಂತಹ ಪರಿಸ್ಥಿತಿ ಉದ್ಭವಿಸದಂತೆ ತಡೆಯಬಲ್ಲ ವ್ಯವಸ್ಥೆಯ ಅಗತ್ಯವಿದೆ,” ಎಂದು ಮೋದಿ ಪ್ರತಿಪಾದಿಸಿದರು.

‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂಬ ಮೂಲ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಭಾರತವು, ಜಗತ್ತಿಗೆ ಒಂದು ‘ವಿಶ್ವ-ಬಂಧು’ ವಾಗಿ ತನ್ನ ಪಾತ್ರವನ್ನು ಹೇಗೆ ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಪ್ರಧಾನ ಮಂತ್ರಿ ವಿವರಿಸಿದರು. ಭಾರತವು ಜಿ-20 ಮತ್ತು ಬ್ರಿಕ್ಸ್ ಶೃಂಗಸಭೆಗಳನ್ನು ಆಯೋಜಿಸಿದಾಗ, ಒಮ್ಮತ ಮೂಡುವುದು ಕಷ್ಟ ಎಂಬ ಸಂಶಯಗಳು ವ್ಯಕ್ತವಾಗಿದ್ದವು. ಆದರೆ, ಭಿನ್ನಾಭಿಪ್ರಾಯಗಳನ್ನು ಮೀರಿ ಸೇತುವೆಗಳನ್ನು ನಿರ್ಮಿಸುವ ಮೂಲಕ, ಎರಡೂ ಸಂದರ್ಭಗಳಲ್ಲಿ ಸರ್ವಾನುಮತದ ‘ದೆಹಲಿ ಘೋಷಣೆ’ಗಳನ್ನು ಹೊರತರುವಲ್ಲಿ ಭಾರತ ಯಶಸ್ವಿಯಾಯಿತು. “ಇದು ‘ವಿಶ್ವ-ಬಂಧು’ವಾಗಿ ಭಾರತದ ಪಾತ್ರದ ಮೇಲಿರುವ ನಂಬಿಕೆಯಾಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ಹೆಚ್ಚುತ್ತಿರುವ ಶಕ್ತಿಯನ್ನು ಜಾಗತಿಕ ಕಲ್ಯಾಣದೊಂದಿಗೆ ಸಂಪರ್ಕ ಕಲ್ಪಿಸಿದ ಪ್ರಧಾನ ಮಂತ್ರಿ, ದೇಶದ ಆಂತರಿಕ ನೀತಿಗಳು ಕ್ಷಣಿಕ ಪ್ರವೃತ್ತಿಗಳ ಮೇಲೆ ಅಲ್ಲದೆ, ಕಾಲಾತೀತ ನಾಗರಿಕ ಮೌಲ್ಯಗಳ ಮೇಲೆ ಆಧಾರಿತವಾಗಿವೆ. ಹೀಗಾಗಿ, ಬಲಿಷ್ಠ ಭಾರತವು ಜಾಗತಿಕ ಸ್ಥಿರತೆ ಮತ್ತು ನಿರಂತರತೆಗೆ ಭರವಸೆಯಾಗುತ್ತದೆ. ತಮ್ಮ ‘ಸಬಲೀಕರಣಕ್ಕಾಗಿ ಶಕ್ತಿ’ ಎಂಬ ದೃಷ್ಟಿಕೋನ ಉಲ್ಲೇಖಿಸಿದ ಅವರು, ಸ್ವಾವಲಂಬಿ, ಆರ್ಥಿಕವಾಗಿ ಸದೃಢ ಮತ್ತು ಕೌಶಲ್ಯಯುತ ‘ವಿಕಸಿತ ಭಾರತ’ವು ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ, ಉತ್ಪಾದಕತೆ ಹೆಚ್ಚಿಸುತ್ತದೆ ಮತ್ತು ಜಾಗತಿಕ ಸಮೃದ್ಧಿಗೆ ಸ್ಫೂರ್ತಿಯಾಗುತ್ತದೆ. “ಅಂದರೆ, ಜಗತ್ತಿನ ಸಾಮರ್ಥ್ಯವೂ ಹೆಚ್ಚಾಗಲಿ ಎಂಬ ಉದ್ದೇಶದಿಂದ ಭಾರತ ಇಂದು ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ,” ಎಂದು ಮೋದಿ ಹೇಳಿದರು.

ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುವ ಭಾರತದ ನಿರಂತರ ಪ್ರಯತ್ನವನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿ, ಕಠಿಣ ಅಂತಾರಾಷ್ಟ್ರೀಯ ಸವಾಲುಗಳ ನಡುವೆಯೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವುದು ರಾಷ್ಟ್ರೀಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಹಸಿರು ಇಂಧನ, ಕೃತಕ ಬುದ್ಧಿಮತ್ತೆ, ಸ್ಟಾರ್ಟಪ್‌ಗಳು ಮತ್ತು ಡಿಜಿಟಲ್ ಆರ್ಥಿಕತೆ ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು. “ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ,” ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಮೊದಲ ಬಾರಿಗೆ ಸಾಧಿಸಿದ ಐತಿಹಾಸಿಕ ತಾಂತ್ರಿಕ ಮತ್ತು ಪರಿಸರ ಮೈಲಿಗಲ್ಲುಗಳ ಸರಣಿಯನ್ನು ಪ್ರಸ್ತಾಪಿಸಿದ ಪ್ರಧಾನಿ, ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕತೆಯನ್ನು ಸಾಧಿಸುವುದು, ರಾಷ್ಟ್ರೀಯ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಏಕೀಕರಣ ಮತ್ತು ಹೈಡ್ರೋಜನ್ ರೈಲಿನ ಉದ್ಘಾಟನಾ ಸಂಚಾರವನ್ನು ಪಟ್ಟಿ ಮಾಡಿದರು. ದೇಶವು ಸ್ವಚ್ಛ ಇಂಧನ ಪರಿವರ್ತನೆಯಲ್ಲಿ ಅಗಾಧವಾದ ಜಿಗಿತ ಕಂಡಿದೆ. “ಮೊದಲ ಬಾರಿಗೆ, ಭಾರತವು ಉರವಲುಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ 300 ಗಿಗಾವ್ಯಾಟ್‌ ದಾಟಿದೆ” ಎಂದು ಶ್ರೀ ಮೋದಿ ತಿಳಿಸಿದರು.

85 ಪದಕಗಳನ್ನು ಗಳಿಸಿದ ವಿಜಯಶಾಲಿ ಏಷ್ಯಾ ಕ್ರೀಡಾಕೂಟದ ತಂಡದೊಂದಿಗೆ ತಮ್ಮ ಇತ್ತೀಚಿನ ಸಂವಾದ ಒಳನೋಟಗಳನ್ನು ಹಂಚಿಕೊಂಡ ಪ್ರಧಾನಿ, ಹಲವಾರು ಅಭೂತಪೂರ್ವ ಕ್ರೀಡಾ ಸಾಧನೆಗಳನ್ನು ಮಾಡಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಆವೃತ್ತಿಯಲ್ಲಿ 3 ಬಾಕ್ಸಿಂಗ್ ಚಿನ್ನದ ಪದಕಗಳನ್ನು ಗೆದ್ದ ಭಾರತೀಯ ಬಾಕ್ಸರ್‌ಗಳ ಜತೆಗೆ, ಚೊಚ್ಚಲ ತಂಡ ಮತ್ತು ವೈಯಕ್ತಿಕ ಚಿನ್ನವನ್ನು ಗೆದ್ದ ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವನ್ನು ಅವರು ಶ್ಲಾಘಿಸಿದರು.

ಫುಟ್‌ಬಾಲ್ ಮತ್ತು ವಾಲಿಬಾಲ್‌ನ ಅದ್ಭುತ ಪ್ರದರ್ಶನ, ಸಂಪೂರ್ಣವಾಗಿ ಪಾದಗಳಿಂದ ಆಡುವ ಸೆಪಕ್ ಟಕ್ರಾ ಎಂಬ ವಿಶಿಷ್ಟ ಕ್ರೀಡೆಯನ್ನು ಉಲ್ಲೇಖಿಸಿದ ಅವರು, ಜಾಗತಿಕ ಸ್ಪರ್ಧಿಗಳು ಆಟದಲ್ಲಿ ಬಹಳ ಹಿಂದಿನಿಂದಲೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ “ಇತ್ತೀಚಿನ ಏಷ್ಯಾ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಈ ಅಸಾಂಪ್ರದಾಯಿಕ ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು. “ಇತ್ತೀಚಿನ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವು ಪುರುಷರ ಕ್ವಾಡ್ರಂಟ್ ಎಂಬ ಕ್ರೀಡೆಯಲ್ಲಿ ಪದಕ ಗೆದ್ದಿದೆ ಎಂದು ಶ್ರೀ ಮೋದಿ ಶ್ಲಾಘಿಸಿದರು.

ಈ ವೈವಿಧ್ಯಮಯ ಪ್ರಗತಿಗಳನ್ನು ಪರಿವರ್ತನೆಗೊಳ್ಳುತ್ತಿರುವ ರಾಷ್ಟ್ರದ ಲಕ್ಷಣವೆಂದು ಬಣ್ಣಿಸಿದ ಪ್ರಧಾನಿ, ದೇಶವು ಏಕಕಾಲದಲ್ಲಿ ತನ್ನ ಸಾಂಪ್ರದಾಯಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಜತೆಗೆ, ಸಂಪೂರ್ಣವಾಗಿ ಹೊಸ ಕ್ಷೇತ್ರಗಳಲ್ಲಿ ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ವ್ಯಾಪಕ ಸಾಧನೆಗಳು ಪ್ರತ್ಯೇಕ ಘಟನೆಗಳಲ್ಲ, ಆದರೆ ಉದ್ದೇಶಪೂರ್ವಕ ಆಡಳಿತ ನೀತಿಗಳ ನೇರ ಫಲಿತಾಂಶವಾಗಿದೆ. “ಇದೆಲ್ಲವೂ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ನೀತಿಯ ಫಲಿತಾಂಶವಾಗಿದೆ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಸಾಮೂಹಿಕ ರಾಷ್ಟ್ರೀಯ ಇಚ್ಛಾಶಕ್ತಿಯ ಪರಿವರ್ತನಾತ್ಮಕ ಶಕ್ತಿಯನ್ನು ಪ್ರಧಾನ ಮಂತ್ರಿ ಅವರು ಶ್ಲಾಘಿಸಿದರು. ದೃಢನಿಶ್ಚಯದ ರಾಷ್ಟ್ರವು ಮುಂದೆ ಸಾಗಿದಾಗ, ಅದರ ಅಡಿಪಾಯದ ಮೂಲಸೌಕರ್ಯವು ದುರ್ಬಲತೆಯ ಬದಲು ಚೇತರಿಕೆಯ ಸಂಕೇತವಾಗುತ್ತದೆ. “ಬದಲಾಗಿ, ಆ ವಿದ್ಯುತ್ ಗ್ರಿಡ್ ದೇಶದ ಪ್ರಗತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ” ಎಂದು ಮೋದಿ ತಿಳಿಸಿದರು.

‘ವಿಕಸಿತ ಭಾರತ’ ನಿರ್ಮಿಸುವಲ್ಲಿ ಯುವಜನರು, ಮಹಿಳೆಯರು, ರೈತರು, ಮೀನುಗಾರರು, ಬಡವರು ಮತ್ತು ಮಧ್ಯಮ ವರ್ಗದ ಉತ್ಸಾಹವನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ, ಸೆಪ್ಟೆಂಬರ್ ತಿಂಗಳಲ್ಲಿ ಸರಕು ಮತ್ತು ಉತ್ಪನ್ನಗಳ ರಫ್ತಿನಲ್ಲಿ ಶೇಕಡ 25ರಷ್ಟು ಏರಿಕೆ ಹಾಗೂ ಕಳೆದ 12 ವರ್ಷಗಳಲ್ಲಿ ಸಮುದ್ರಾಹಾರ ರಫ್ತು ಪ್ರಮಾಣ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಸರ್ಕಾರವು 6 ಕೋಟಿ ‘ಲಕ್ಷಪತಿ ದೀದಿ’ಗಳನ್ನು ಸೃಷ್ಟಿಸುವ ಗುರಿಯತ್ತ ಕೆಲಸ ಮಾಡುತ್ತಿದ್ದು, ಈಗಾಗಲೇ ಹಳ್ಳಿಗಳಲ್ಲಿ 3.5 ಕೋಟಿಗೂ ಹೆಚ್ಚು ಲಕ್ಷಪತಿ ದೀದಿಗಳನ್ನು ಸೃಷ್ಟಿಸಲಾಗಿದೆ. ಇದರೊಂದಿಗೆ, ‘ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ’ಯ ಅಡಿ 70 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ.  ಮಧ್ಯಮ ವರ್ಗದವರಿಗೆ 12 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ ಜಾರಿಗೆ ತರಲಾಗಿದೆ. “ದೇಶದಲ್ಲಿ ಜೀವನ ಸುಗಮತೆ ಸುಧಾರಿಸುತ್ತಿದೆ, ಉದ್ಯೋಗಕ್ಕಾಗಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ” ಎಂದು ಪ್ರಧಾನಿ ಮೋದಿ ದೃಢಪಡಿಸಿದರು.

ಒಂದು ಕಾಲದಲ್ಲಿ ಕೇವಲ ‘ಜಗತ್ತಿನ ಬ್ಯಾಕ್ ಆಫೀಸ್’ ಮತ್ತು ಮೂಲಭೂತ ಸೇವೆಗಳನ್ನು ಮಾತ್ರ ಒದಗಿಸುವ ಕೇಂದ್ರವಾಗಿದ್ದ ಭಾರತವು, ಇಂದು ಜಗತ್ತಿಗಾಗಿ ಸ್ವಂತ ತಂತ್ರಜ್ಞಾನಗಳನ್ನು ಆವಿಷ್ಕರಿಸುವ, ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಹಂತಕ್ಕೆ ಬೆಳೆದಿ. ಸಂಶೋಧನಾ ಪ್ರಕಟಣೆಗಳ ವಿಷಯದಲ್ಲಿ ಭಾರತವು ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. 2025ರ ಒಂದೇ ವರ್ಷದಲ್ಲಿ ಸುಮಾರು 1.5 ಲಕ್ಷ ಪೇಟೆಂಟ್ ಅರ್ಜಿಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. “ಸಂಶೋಧನೆ ಮತ್ತು ನಾವೀನ್ಯತೆಯ ವಿಷಯದಲ್ಲಿ ಇದು ಭಾರತದಲ್ಲಿ ಅಡಗಿರುವ ಅಪಾರ ಸಾಧ್ಯತೆಗಳ ಒಂದು ಸಣ್ಣ ನೋಟ ಅಷ್ಟೇ” ಎಂದು ಮೋದಿ ಹೇಳಿದರು.

ದೇಶೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ, ಜಾಗತಿಕ ಚಿಪ್-ವಿನ್ಯಾಸ ಕಾರ್ಯಪಡೆಯ ಶೇಕಡ 20ರಷ್ಟು ಜನರು ಭಾರತದಲ್ಲಿದ್ದಾರೆ. ಭಾರತೀಯ ಎಂಜಿನಿಯರ್‌ಗಳು ಅತ್ಯಾಧುನಿಕ 2ರಿಂದ 3 ನ್ಯಾನೊಮೀಟರ್ ಚಿಪ್‌ಗಳನ್ನು ಸಕ್ರಿಯವಾಗಿ ವಿನ್ಯಾಸಗೊಳಿಸುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಪ್ರತಿಭಾವಂತರ ಸಂಖ್ಯೆ ವಿಸ್ತರಿಸಲು ಸಮಗ್ರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. “ನಮ್ಮ ವಿದ್ಯಾರ್ಥಿಗಳು ಇಲ್ಲಿಯವರೆಗೆ 325ಕ್ಕೂ ಹೆಚ್ಚು ಚಿಪ್ ವಿನ್ಯಾಸಗಳನ್ನು ಸಿದ್ಧಪಡಿಸಿದ್ದಾರೆ” ಎಂದು ಪ್ರಧಾನಿ ಮೋದಿ ತಿಳಿಸಿದರು.

ಜಗತ್ತಿನ ಒಟ್ಟು ‘ಜಾಗತಿಕ ಸಾಮರ್ಥ್ಯ ಕೇಂದ್ರ’ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದಲ್ಲಿವೆ ಎಂದು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಈ ಕೇಂದ್ರಗಳು ಕೇವಲ ಮೂಲಭೂತ ಬೆಂಬಲ ಸೇವೆಗಳನ್ನು ಒದಗಿಸುವುದರಿಂದ ಮುಂದುವರಿದು, ಈಗ ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಎಂಜಿನಿಯರಿಂಗ್, ದತ್ತಾಂಶ ವಿಶ್ಲೇಷಣೆ ಮತ್ತು ಉತ್ಪನ್ನ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. “ಜಗತ್ತು ತನ್ನ ನಂಬಿಕೆಯನ್ನು ಭಾರತೀಯ ಮಾನವಶಕ್ತಿಯಿಂದ ಭಾರತೀಯ ಮನಸ್ಸಿನ ಶಕ್ತಿಯ ಕಡೆಗೆ ಬದಲಾಯಿಸುತ್ತಿದ್ದಂತೆ, ರಾಷ್ಟ್ರವು ‘ಟ್ಯಾಲೆಂಟ್ ಅಟ್ ಸ್ಕೇಲ್’ನಿಂದ ‘ಥಿಂಕಿಂಗ್ ಅಟ್ ಸ್ಕೇಲ್’ಗೆ ಪರಿವರ್ತನೆಗೊಂಡಿದೆ ಎಂದು ಅವರು ಘೋಷಿಸಿದರು.” ನಾವು ಈಗ ಜಗತ್ತಿನೊಂದಿಗೆ ಕೇವಲ ಬ್ಯಾಕ್ ಆಫೀಸ್ ಆಗಿ ಮಾತ್ರವಲ್ಲದೆ, ಬ್ರೈನ್ ಆಫೀಸ್ ಆಗಿಯೂ ಕೆಲಸ ಮಾಡುತ್ತಿದ್ದೇವೆ” ಎಂದು ಮೋದಿ ಪ್ರತಿಪಾದಿಸಿದರು.

ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸಲು, ವಿದೇಶಿ ಅವಲಂಬನೆ ಕಡಿಮೆ ಮಾಡಲು ಮತ್ತು ಭವಿಷ್ಯದ ಬಿಕ್ಕಟ್ಟುಗಳಿಗೆ ಸಿದ್ಧತೆ ನಡೆಸಲು ವಿನ್ಯಾಸಗೊಳಿಸಲಾದ ಸರ್ಕಾರಿ ನೀತಿಗಳು ಮತ್ತು ದೀರ್ಘಕಾಲೀನ ಹೂಡಿಕೆಗಳ ಹಿಂದಿನ ಕಾರ್ಯತಂತ್ರ ದೂರದೃಷ್ಟಿಯನ್ನು ವಿವರಿಸಿದ ಪ್ರಧಾನಿ, ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಮೇಲೆ ಔಷಧೀಯ ವಲಯದ ಐತಿಹಾಸಿಕ ಅವಲಂಬನೆ ಕಡಿಮೆಯಾಗಿದೆ. ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ(ಪಿಎಲ್ಐ) ಯೋಜನೆಯಡಿ ಅಗತ್ಯ ಪ್ರತಿಜೀವಕ ಪೂರ್ವಗಾಮಿ ಪೆನ್ಸಿಲಿನ್ ಜಿ ಅನ್ನು ದಶಕಗಳ ಕಾಲ ಸ್ಥಗಿತಗೊಳಿಸಿದ ನಂತರ ಅದರ ದೇಶೀಯ ಉತ್ಪಾದನೆಯನ್ನು ಹೇಗೆ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಲಾಯಿತು ಎಂಬುದನ್ನು ಅವರು ವಿವರಿಸಿದರು. “ಈಗ, ಆಂಧ್ರಪ್ರದೇಶದ ಕಾಕಿನಾಡದಲ್ಲಿ ಹಲವು ವರ್ಷಗಳ ನಂತರ, ಪೆನ್ಸಿಲಿನ್ ಜಿ ದೇಶೀಯ ಉತ್ಪಾದನೆ ಪುನಾರಂಭವಾಗಿದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.

‘ಪೆನಿಸಿಲಿನ್ ಜಿ’ಯನ್ನು ಮೀರಿ ಔಷಧೀಯ ವಲಯದಲ್ಲಿ ಸ್ವಾವಲಂಬನೆ ವಿಸ್ತರಿಸುವ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ‘ಪಿಎಲ್‌ಐ’ ನೀತಿಗಳ ಮೂಲಕ ‘ಸಕ್ರಿಯ ಔಷಧೀಯ ಘಟಕಗಳ’ ಪೂರೈಕೆಗಾಗಿ ಸಂಪೂರ್ಣ ದೇಶೀಯ ಸರಪಳಿಯನ್ನು ಸರ್ಕಾರ ನಿರ್ಮಿಸುತ್ತಿದೆ. ಈ ನಿರ್ದಿಷ್ಟ ನೀತಿ ಕ್ರಮವು ಈಗಾಗಲೇ ಸುಮಾರು 40 ಕಾರ್ಯಾಚರಣಾ ಯೋಜನೆಗಳಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಆಕರ್ಷಿಸಿದೆ. “ಇಂತಹ ನೀತಿಗಳು ಮತ್ತು ನಿರ್ಧಾರಗಳು ಭಾರತವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುತ್ತಿವೆ” ಎಂದು ಶ್ರೀ ಮೋದಿ ಹೇಳಿದರು.

140 ಕೋಟಿ ನಾಗರಿಕರ ಅಪಾರ ಆಕಾಂಕ್ಷೆಗಳು ಮತ್ತು ‘ನಾವು ಇದನ್ನು ಸಾಧಿಸಬಲ್ಲೆವು’ ಎಂಬ ದೃಢ ಸಂಕಲ್ಪದೊಂದಿಗೆ ‘ವಿಕಸಿತ ಭಾರತ’ ನಿರ್ಮಿಸುವ ಬೃಹತ್ ಗುರಿಯತ್ತ ಗಮನ ಹರಿಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನ ಮಂತ್ರಿ, ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು, ಹೊಸ ಹಾದಿಗಳನ್ನು ರೂಪಿಸಲು, ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಮತ್ತು ಭಾರತದ ಯಶಸ್ಸನ್ನು ಜಾಗತಿಕ ಸಮೃದ್ಧಿಯೊಂದಿಗೆ ಬೆಸೆಯಬೇಕು ಎಂದು ಸಂಕಲ್ಪ ಮಾಡಿದರು. ಈ ಶೃಂಗಸಭೆಯಲ್ಲಿ ಮೂಡಿಬಂದ ವಿಚಾರಗಳು ರಾಷ್ಟ್ರೀಯ ಸಂಕಲ್ಪಗಳಿಗೆ ಹೊಸ ಚೈತನ್ಯ ನೀಡಲಿವೆ ಎಂಬ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಅವರು, ಭಾಗವಹಿಸಿದ ಎಲ್ಲ ಪ್ರತಿನಿಧಿಗಳಿಗೂ ಶುಭ ಹಾರೈಸಿದರು. “ನಾವು ದೊಡ್ಡ ಕನಸು ಕಾಣುತ್ತೇವೆ, ಪ್ರತಿಯೊಂದು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸುತ್ತೇವೆ, ಕೈಗೊಂಡ ಪ್ರತಿಯೊಂದು ಸಂಕಲ್ಪವನ್ನು ಸಾಕಾರಗೊಳಿಸುತ್ತೇವೆ” ಎಂದು ಪ್ರಧಾನಿ ಮೋದಿ ಸದೃಢವಾಗಿ ನುಡಿದರು.

 

*****