ಪಿಎಂಇಂಡಿಯಾ
ನವದೆಹಲಿಯಲ್ಲಿ ಇಂದು ಜರುಗಿದ ‘ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮಿತ್ 2025’ನ್ನು ಉದ್ದೇಶಿಸಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಸಮಾವೇಶದಲ್ಲಿ ಉಪಸ್ಥಿತರಿದ್ದ ದೇಶ-ವಿದೇಶಗಳ ಗಣ್ಯರನ್ನು ಸ್ವಾಗತಿಸಿದ ಅವರು, ಆಯೋಜಕರಿಗೆ ಹಾಗೂ ತಮ್ಮ ವಿಚಾರಗಳನ್ನು ಹಂಚಿಕೊಂಡ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಶೋಭನಾ ಜೀ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಎರಡು ಪ್ರಮುಖ ಅಂಶಗಳನ್ನು ತಾವು ಸೂಕ್ಷ್ಮವಾಗಿ ಗಮನಿಸಿರುವುದಾಗಿ ಶ್ರೀ ಮೋದಿ ತಿಳಿಸಿದರು. ಮೊದಲನೆಯದಾಗಿ, ತಾವು ಹಿಂದೊಮ್ಮೆ ಭೇಟಿ ನೀಡಿದ್ದಾಗ ನೀಡಿದ್ದ ಸಲಹೆಯನ್ನು ಶೋಭನಾ ಜೀ ಪ್ರಸ್ತಾಪಿಸಿದರು. ಸಾಮಾನ್ಯವಾಗಿ ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡುವುದು ಅಪರೂಪವಾದರೂ, ತಾವು ಆ ಸಲಹೆ ನೀಡಿದ್ದೆ ಎಂದ ಯವರು, ಆ ಸಲಹೆಯನ್ನು ಶೋಭನಾ ಜೀ ಮತ್ತು ಅವರ ತಂಡ ಅತ್ಯಂತ ಉತ್ಸಾಹದಿಂದ ಅನುಷ್ಠಾನಕ್ಕೆ ತಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ತಾವು ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿದಾಗ, ಛಾಯಾಗ್ರಾಹಕರು ಆ ಕ್ಷಣಗಳನ್ನು ಎಷ್ಟು ಅದ್ಭುತವಾಗಿ ಸೆರೆಹಿಡಿದಿದ್ದಾರೆ ಎಂದರೆ, ಅವೆಲ್ಲವೂ ಅಜರಾಮರವಾಗಿ ಉಳಿಯುವಂತಿದೆ ಎಂದು ಬಣ್ಣಿಸಿದ ಅವರು, ಪ್ರತಿಯೊಬ್ಬರೂ ಈ ಪ್ರದರ್ಶನವನ್ನು ವೀಕ್ಷಿಸಬೇಕೆಂದು ಕರೆ ನೀಡಿದರು. ಇನ್ನು ಶೋಭನಾ ಜೀ ಅವರ ಎರಡನೇ ಅಂಶದ ಕುರಿತು ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು, “ನಾನು ರಾಷ್ಟ್ರ ಸೇವೆಯನ್ನು ಮುಂದುವರಿಸಬೇಕು ಎಂಬುದು ಕೇವಲ ಅವರ ಆಶಯವಷ್ಟೇ ಅಲ್ಲ, ಬದಲಿಗೆ ನಾನು ಇದೇ ರೀತಿಯಲ್ಲಿ ಸೇವೆಯನ್ನು ಮುಂದುವರಿಸಬೇಕೆಂದು ಸ್ವತಃ ‘ಹಿಂದೂಸ್ತಾನ್ ಟೈಮ್ಸ್’ ಸಂಸ್ಥೆಯೇ ಹೇಳುತ್ತಿದೆ ಎಂದು ಅರ್ಥೈಸಿಕೊಳ್ಳುವುದಾಗಿ ಹೇಳಿದರು. ಇದಕ್ಕಾಗಿ ಅವರು ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ವರ್ಷದ ಶೃಂಗಸಭೆಯ ಧ್ಯೇಯವಾಕ್ಯವು ‘ಟ್ರಾನ್ಸ್ ಫಾರ್ಮಿಂಗ್ ಟುಮಾರೋ’ (ಭವಿಷ್ಯದ ಪರಿವರ್ತನೆ) ಎಂಬುದಾಗಿದೆ ಎಂದು ಶ್ರೀ ಮೋದಿ ಅವರು ವಿಶೇಷವಾಗಿ ಪ್ರಸ್ತಾಪಿಸಿದರು. ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯು 101 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಮಹಾತ್ಮ ಗಾಂಧಿ, ಮದನ್ ಮೋಹನ್ ಮಾಳವೀಯ ಮತ್ತು ಘನಶ್ಯಾಮ್ ದಾಸ್ ಬಿರ್ಲಾ ಅವರಂತಹ ಮಹಾನ್ ನಾಯಕರ ಆಶೀರ್ವಾದವನ್ನು ಪಡೆದಿದೆ ಎಂದು ಅವರು ಸ್ಮರಿಸಿದರು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಪತ್ರಿಕೆಯು ಯಾವಾಗ ‘ಟ್ರಾನ್ಸ್ ಫಾರ್ಮಿಂಗ್ ಟುಮಾರೋ’ ಬಗ್ಗೆ ಚರ್ಚಿಸುತ್ತದೆಯೋ, ಆಗ ಅದು ಇಡೀ ರಾಷ್ಟ್ರಕ್ಕೆ ಒಂದು ಹೊಸ ಭರವಸೆಯನ್ನು ನೀಡುತ್ತದೆ. ಭಾರತದಲ್ಲಿ ನಡೆಯುತ್ತಿರುವ ಈ ಪರಿವರ್ತನೆಯು ಕೇವಲ ಸಾಧ್ಯತೆಗಳಲ್ಲ, ಬದಲಿಗೆ ಇದು ಜನರ ಬದುಕು, ಮನಸ್ಥಿತಿ ಮತ್ತು ದೇಶದ ಪಯಣದ ದಿಕ್ಕನ್ನೇ ಬದಲಿಸುತ್ತಿರುವ ನೈಜ ಕಥನವಾಗಿದೆ ಎಂದು ಅವರು ನುಡಿದರು.
ಇಂದು ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸ್ ಆಗಿರುವ ಹಿನ್ನೆಲೆಯಲ್ಲಿ, ಶ್ರೀ ಮೋದಿ ಅವರು ಸಮಸ್ತ ಭಾರತೀಯರ ಪರವಾಗಿ ಬಾಬಾಸಾಹೇಬರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು. 21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದುಹೋಗಿರುವಂತಹ ಒಂದು ನಿರ್ಣಾಯಕ ಘಟ್ಟದಲ್ಲಿ ನಾವಿಂದು ನಿಂತಿದ್ದೇವೆ ಎಂದು ಅವರು ವಿಶೇಷವಾಗಿ ಪ್ರಸ್ತಾಪಿಸಿದರು. ಕಳೆದ 25 ವರ್ಷಗಳಲ್ಲಿ ಜಗತ್ತು ಆರ್ಥಿಕ ಬಿಕ್ಕಟ್ಟು, ಜಾಗತಿಕ ಸಾಂಕ್ರಾಮಿಕ ಪಿಡುಗು, ತಾಂತ್ರಿಕ ವಲಯದ ಕ್ಷಿಪ್ರ ಬದಲಾವಣೆಗಳು, ವಿಘಟಿತ ಜಗತ್ತು ಮತ್ತು ನಡೆಯುತ್ತಿರುವ ಯುದ್ಧಗಳು ಸೇರಿದಂತೆ ಅನೇಕ ಏಳು-ಬೀಳುಗಳನ್ನು ಕಂಡಿದೆ ಎಂದು ಅವರು ಸ್ಮರಿಸಿದರು. ಅನಿಶ್ಚಿತತೆಗಳಿಂದ ತುಂಬಿರುವ ಇಂದಿನ ಜಗತ್ತಿಗೆ, ಈ ಎಲ್ಲಾ ಸನ್ನಿವೇಶಗಳು ಒಂದಲ್ಲ ಒಂದು ರೀತಿಯಲ್ಲಿ ಸವಾಲಾಗಿ ಪರಿಣಮಿಸಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಇಂತಹ ಅನಿಶ್ಚಿತತೆಯ ಯುಗದಲ್ಲೂ ಭಾರತವು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದು, ತಾನೊಂದು ವಿಶಿಷ್ಟ ಸ್ಥಾನದಲ್ಲಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ,” ಎಂದು ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, “ಇಡೀ ಜಗತ್ತು ಆರ್ಥಿಕ ಕುಸಿತದ ಬಗ್ಗೆ ಮಾತನಾಡುತ್ತಿರುವಾಗ, ಭಾರತವು ಪ್ರಗತಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಜಗತ್ತು ನಂಬಿಕೆಯ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಭಾರತವು ನಂಬಿಕೆಯ ಆಧಾರಸ್ತಂಭವಾಗಿ ಮಾರ್ಪಡುತ್ತಿದೆ. ಜಗತ್ತು ವಿಘಟನೆಯತ್ತ ಸಾಗುತ್ತಿರುವಾಗ, ಭಾರತವು ಎಲ್ಲರನ್ನೂ ಬೆಸೆಯುವ ಸೇತುವೆಯಾಗಿ ಹೊರಹೊಮ್ಮುತ್ತಿದೆ” ಎಂದು ಬಣ್ಣಿಸಿದರು.
ಕೆಲವೇ ದಿನಗಳ ಹಿಂದಷ್ಟೇ ಬಿಡುಗಡೆಯಾದ ಭಾರತದ ಎರಡನೇ ತ್ರೈಮಾಸಿಕದ ಜಿಡಿಪಿ (GDP) ಅಂಕಿಅಂಶಗಳು ಶೇಕಡಾ ಎಂಟಕ್ಕಿಂತ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸಿದ್ದು, ಇದು ದೇಶದ ಪ್ರಗತಿಯ ಹೊಸ ಆವೇಗವನ್ನು ಪ್ರತಿಬಿಂಬಿಸುತ್ತದೆ ಎಂದು ಯವರು ಬಣ್ಣಿಸಿದರು. “ಇದು ಕೇವಲ ಒಂದು ಅಂಕಿಸಂಖ್ಯೆಯಲ್ಲ, ಬದಲಿಗೆ ಇದೊಂದು ಪ್ರಬಲವಾದ ಸ್ಥೂಲ- ಆರ್ಥಿಕ ಸಂಕೇತವಾಗಿದೆ. ಇಂದಿನ ಭಾರತವು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಚಾಲಕ ಶಕ್ತಿಯಾಗುತ್ತಿದೆ ಎನ್ನುವ ಸಂದೇಶವನ್ನು ಇದು ಸಾರುತ್ತಿದೆ” ಎಂದು ಅವರು ಒತ್ತಿ ಹೇಳಿದರು. ಜಾಗತಿಕ ಬೆಳವಣಿಗೆ ದರವು ಶೇ. 3ರಷ್ಟಿರುವಾಗ ಮತ್ತು ಜಿ-7 (G-7) ರಾಷ್ಟ್ರಗಳ ಆರ್ಥಿಕತೆಯು ಸರಾಸರಿ ಶೇ. 1.5 ರಷ್ಟು ಇರುವಂತಹ ಈ ಸಮಯದಲ್ಲಿ ಭಾರತದ ಈ ಅಂಕಿಅಂಶಗಳು ಹೊರಬಂದಿರುವುದು ಗಮನಾರ್ಹ ಎಂದು ಅವರು ತಿಳಿಸಿದರು. ಇಂತಹ ಪರಿಸ್ಥಿತಿಯಲ್ಲೂ ಭಾರತವು ‘ಅಧಿಕ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ’ದ ಮಾದರಿಯಾಗಿ ಹೊರಹೊಮ್ಮಿದೆ. ಒಂದಾನೊಂದು ಕಾಲದಲ್ಲಿ ಅರ್ಥಶಾಸ್ತ್ರಜ್ಞರು ಅಧಿಕ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು, ಆದರೆ ಇಂದು ಅದೇ ಅರ್ಥಶಾಸ್ತ್ರಜ್ಞರು ಕಡಿಮೆ ಹಣದುಬ್ಬರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಶ್ರೀ ಮೋದಿ ಸ್ಮರಿಸಿದರು.
ಭಾರತದ ಈ ಸಾಧನೆಗಳು ಸಾಮಾನ್ಯವಾದುದಲ್ಲ ಅಥವಾ ಕೇವಲ ಅಂಕಿಅಂಶಗಳಿಗೆ ಸೀಮಿತವಾದುದಲ್ಲ, ಬದಲಿಗೆ ಇವು ಕಳೆದ ದಶಕದಲ್ಲಿ ರಾಷ್ಟ್ರವು ಕಂಡುಕೊಂಡ ಮೂಲಭೂತ ಬದಲಾವಣೆಯನ್ನು ಪ್ರತಿನಿಧಿಸುತ್ತವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. “ಈ ಮೂಲಭೂತ ಬದಲಾವಣೆಯು ದೇಶದ ದೃಢತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ, ಆತಂಕದ ಕಾರ್ಮೋಡಗಳನ್ನು ಹೋಗಲಾಡಿಸುವುದು ಮತ್ತು ಆಶೋತ್ತರಗಳನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದೆ. ಇದೇ ಕಾರಣಕ್ಕಾಗಿ ಇಂದಿನ ಭಾರತವು ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿದ್ದು, ಮುಂಬರುವ ಭವಿಷ್ಯವನ್ನೂ ಪರಿವರ್ತಿಸುತ್ತಿದೆ,” ಎಂದು ಅವರು ವಿವರಿಸಿದರು.
‘ಟ್ರಾನ್ಸ್ ಫಾರ್ಮಿಂಗ್ ಟುಮಾರೋ’ (ಭವಿಷ್ಯದ ಪರಿವರ್ತನೆ) ಬಗ್ಗೆ ಚರ್ಚಿಸುವಾಗ, ಪರಿವರ್ತನೆಯ ಮೇಲಿನ ಈ ವಿಶ್ವಾಸವು ಇಂದು ನಡೆಯುತ್ತಿರುವ ಕಾರ್ಯಗಳ ಭದ್ರ ಬುನಾದಿಯನ್ನು ಆಧರಿಸಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. “ಇಂದಿನ ಸುಧಾರಣೆಗಳು ಮತ್ತು ಇಂದಿನ ಕಾರ್ಯಕ್ಷಮತೆಯೇ ನಾಳಿನ ಪರಿವರ್ತನೆಗೆ ಹಾದಿ ಮಾಡಿಕೊಡುತ್ತಿವೆ” ಎಂದು ಅವರು ಒತ್ತಿ ಹೇಳಿದರು.
ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ವಿಧಾನವನ್ನು ಎತ್ತಿಹಿಡಿದ ಶ್ರೀ ಮೋದಿ ಅವರು, ಭಾರತದ ಸಾಮರ್ಥ್ಯದ ಬಹುಪಾಲು ದೀರ್ಘಕಾಲದವರೆಗೆ ಬಳಕೆಯಾಗದೆಯೇ ಉಳಿದಿತ್ತು ಎಂದು ತಿಳಿಸಿದರು. “ಯಾವಾಗ ಈ ಸುಪ್ತ ಸಾಮರ್ಥ್ಯಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆಯೋ, ಯಾವಾಗ ಅದು ರಾಷ್ಟ್ರದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣವಾಗಿ ಪಾಲ್ಗೊಳ್ಳುತ್ತದೆಯೋ, ಆಗ ದೇಶದ ಪರಿವರ್ತನೆ ನಿಶ್ಚಿತ” ಎಂದು ಅವರು ಪ್ರತಿಪಾದಿಸಿದರು. ಹಿಂದಿನ ದಶಕಗಳಲ್ಲಿ ಪೂರ್ವ ಭಾರತ, ಈಶಾನ್ಯ ಭಾಗ, ಹಳ್ಳಿಗಳು, ಎರಡನೇ ಮತ್ತು ಮೂರನೇ ಹಂತದ ನಗರಗಳು, ಮಹಿಳಾ ಶಕ್ತಿ, ಆವಿಷ್ಕಾರಿ ಯುವ ಸಮೂಹ, ಕಡಲ ಶಕ್ತಿ ಮತ್ತು ನೀಲಿ ಆರ್ಥಿಕತೆ ಹಾಗೂ ಬಾಹ್ಯಾಕಾಶ ವಲಯಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡಿರಲಿಲ್ಲ ಎಂದು ಯವರು ಹೇಳಿದರು. ಇಂದು ಭಾರತವು ಈ ‘ಬಳಕೆಯಾಗದ ಸಾಮರ್ಥ್ಯ’ವನ್ನು ಸದ್ಬಳಕೆ ಮಾಡಿಕೊಳ್ಳುವ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಮುಂದುವರಿದು ಮಾತನಾಡಿದ ಶ್ರೀ ಮೋದಿ, “ಪೂರ್ವ ಭಾರತದಲ್ಲಿ ಆಧುನಿಕ ಮೂಲಸೌಕರ್ಯ, ಸಂಪರ್ಕ ಮತ್ತು ಕೈಗಾರಿಕೆಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ಸಣ್ಣ ಪಟ್ಟಣಗಳು ಸ್ಟಾರ್ಟಪ್‌ಗಳು ಮತ್ತು MSMEಗಳ ಹೊಸ ಕೇಂದ್ರಗಳಾಗಿ ಬದಲಾಗುತ್ತಿವೆ. ಹಳ್ಳಿಗಳಲ್ಲಿನ ರೈತರು FPOಗಳನ್ನು ರಚಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ” ಎಂದು ಬಣ್ಣಿಸಿದರು.
“ಭಾರತದ ನಾರಿ ಶಕ್ತಿಯು ಅದ್ಭುತ ಸಾಧನೆಗಳನ್ನು ಮಾಡುತ್ತಿದೆ ಮತ್ತು ದೇಶದ ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ,” ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ಈ ಪರಿವರ್ತನೆಯು ಕೇವಲ ಮಹಿಳಾ ಸಬಲೀಕರಣಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇದು ಸಮಾಜದ ಮನಸ್ಥಿತಿ ಮತ್ತು ಶಕ್ತಿ ಎರಡನ್ನೂ ಪರಿವರ್ತಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಯಾವಾಗ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆಯೋ ಮತ್ತು ಅಡೆತಡೆಗಳನ್ನು ನಿವಾರಿಸಲಾಗುತ್ತದೆಯೋ, ಆಗ ಮುಗಿಲೆತ್ತರಕ್ಕೆ ಹಾರಲು ಹೊಸ ರೆಕ್ಕೆಗಳು ಬರುತ್ತವೆ ಎಂದು ಪ್ರಧಾನಮಂತ್ರಿ ಹೈಲೈಟ್ ಮಾಡಿದರು. ಹಿಂದೆ ಸರ್ಕಾರದ ನಿಯಂತ್ರಣದಲ್ಲಿದ್ದ ಭಾರತದ ಬಾಹ್ಯಾಕಾಶ ಕ್ಷೇತ್ರದ ಉದಾಹರಣೆಯನ್ನು ನೀಡಿದ ಶ್ರೀ ಮೋದಿ, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲು ಸುಧಾರಣೆಗಳನ್ನು ತರಲಾಯಿತು ಮತ್ತು ಅದರ ಫಲಿತಾಂಶಗಳು ಈಗ ದೇಶಕ್ಕೆ ಗೋಚರಿಸುತ್ತಿವೆ ಎಂದು ತಿಳಿಸಿದರು. ಕೇವಲ 10–11 ದಿನಗಳ ಹಿಂದಷ್ಟೇ ತಾವು ಹೈದರಾಬಾದ್‌ನಲ್ಲಿ ಸ್ಕೈರೂಟ್‌ನ ‘ಇನ್ಫಿನಿಟಿ ಕ್ಯಾಂಪಸ್’ ಅನ್ನು ಉದ್ಘಾಟಿಸಿರುವುದಾಗಿ ಅವರು ಉಲ್ಲೇಖಿಸಿದರು. ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಕೈರೂಟ್, ಪ್ರತಿ ತಿಂಗಳು ಒಂದು ರಾಕೆಟ್ ನಿರ್ಮಿಸುವ ಸಾಮರ್ಥ್ಯ ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಉಡಾವಣೆಗೆ ಸಿದ್ಧವಿರುವ ‘ವಿಕ್ರಮ್-1’ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ವಿವರಿಸಿದರು. ಸರ್ಕಾರವು ಕೇವಲ ವೇದಿಕೆಯನ್ನು ಒದಗಿಸಿತು, ಆದರೆ ಭಾರತದ ಯುವಕರು ಅದರ ಮೇಲೆ ಹೊಸ ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ. ಇದೇ ನಿಜವಾದ ಪರಿವರ್ತನೆ ಎಂದು ಯವರು ಬಣ್ಣಿಸಿದರು.
ಭಾರತದಲ್ಲಿ ಆಗಿರುವ ಮತ್ತೊಂದು ಬದಲಾವಣೆಯು ಚರ್ಚೆಗೆ ಅರ್ಹವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಒಂದು ಕಾಲದಲ್ಲಿ ಸುಧಾರಣೆಗಳು ಕೇವಲ ‘ಪ್ರತಿಕ್ರಿಯಾತ್ಮಕ’ವಾಗಿದ್ದವು, ಅಂದರೆ ರಾಜಕೀಯ ಹಿತಾಸಕ್ತಿಗಳಿಂದ ಅಥವಾ ಉಂಟಾದ ಬಿಕ್ಕಟ್ಟನ್ನು ನಿಭಾಯಿಸುವ ಅನಿವಾರ್ಯತೆಯಿಂದ ಕೂಡಿದ್ದವು ಎಂದು ಸ್ಮರಿಸಿದರು. ಆದರೆ, ಇಂದು ರಾಷ್ಟ್ರೀಯ ಗುರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಪ್ರತಿಯೊಂದು ವಲಯದಲ್ಲೂ ಸುಧಾರಣೆಗಳು ನಡೆಯುತ್ತಿವೆ. ಭಾರತದ ವೇಗ ಸ್ಥಿರವಾಗಿದೆ, ಅದರ ದಿಕ್ಕು ನಿರಂತರವಾಗಿದೆ ಮತ್ತು ಉದ್ದೇಶವು ‘ರಾಷ್ಟ್ರವೇ ಮೊದಲು’ ಎಂಬ ತತ್ವದಲ್ಲಿ ಭದ್ರವಾಗಿ ನೆಲೆಗೊಂಡಿದೆ ಎಂದು ಪ್ರಧಾನಮಂತ್ರಿ ಹೈಲೈಟ್ ಮಾಡಿದರು. 2025ನೇ ವರ್ಷವು ಇಂತಹ ಸುಧಾರಣೆಗಳ ವರ್ಷವಾಗಿದೆ ಎಂದು ಒತ್ತಿ ಹೇಳಿದ ಅವರು, ಇದರಲ್ಲಿ ಅತ್ಯಂತ ಮಹತ್ವದ್ದೆಂದರೆ ‘ಮುಂದಿನ ಪೀಳಿಗೆಯ ಜಿಎಸ್‌ಟಿ’ (Next-generation GST) ಎಂದು ಉಲ್ಲೇಖಿಸಿದರು. ಈ ಸುಧಾರಣೆಗಳ ಪರಿಣಾಮವು ದೇಶಾದ್ಯಂತ ಕಂಡುಬರುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, ಈ ವರ್ಷ ನೇರ ತೆರಿಗೆ ವ್ಯವಸ್ಥೆಯಲ್ಲಿಯೂ ಬೃಹತ್ ಸುಧಾರಣೆಯನ್ನು ಜಾರಿಗೆ ತರಲಾಗಿದೆ. 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ‘ಶೂನ್ಯ ತೆರಿಗೆ’ ವಿಧಿಸಲಾಗಿದ್ದು, ಒಂದು ದಶಕದ ಹಿಂದೆ ಇಂತಹದೊಂದು ಕ್ರಮವನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿತ್ತು ಎಂದು ಅವರು ಮಾರ್ಮಿಕವಾಗಿ ನುಡಿದರು.
ಸುಧಾರಣೆಗಳ ಸರಣಿಯನ್ನು ಮುಂದುವರಿಸಿರುವ ಕುರಿತು ಪ್ರಸ್ತಾಪಿಸಿದ ಶ್ರೀ ಮೋದಿ, “ಕೇವಲ ಮೂರು-ನಾಲ್ಕು ದಿನಗಳ ಹಿಂದಷ್ಟೇ ‘ಸಣ್ಣ ಕಂಪನಿ’ಯ ವ್ಯಾಖ್ಯಾನಕ್ಕೆ ತಿದ್ದುಪಡಿ ತರಲಾಗಿದೆ” ಎಂದು ತಿಳಿಸಿದರು. “ಇದರ ಪರಿಣಾಮವಾಗಿ, ಸಾವಿರಾರು ಕಂಪನಿಗಳು ಈಗ ಸರಳ ನಿಯಮಗಳು, ತ್ವರಿತ ಪ್ರಕ್ರಿಯೆಗಳು ಮತ್ತು ಉತ್ತಮ ಸೌಲಭ್ಯಗಳ ವ್ಯಾಪ್ತಿಗೆ ಒಳಪಟ್ಟಿವೆ,” ಎಂದು ಅವರು ಹೈಲೈಟ್ ಮಾಡಿದರು. ಸುಮಾರು 200 ಉತ್ಪನ್ನ ವರ್ಗಗಳನ್ನು ‘ಕಡ್ಡಾಯ ಗುಣಮಟ್ಟ ನಿಯಂತ್ರಣ ಆದೇಶ’ದಿಂದ ಕೈಬಿಡಲಾಗಿದೆ ಎಂದು ಪ್ರಧಾನಮಂತ್ರಿಯವರು ಇದೇ ವೇಳೆ ತಿಳಿಸಿದರು.
“ಇಂದಿನ ಭಾರತದ ಪಯಣವು ಕೇವಲ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇದೊಂದು ಮನಸ್ಥಿತಿಯ ಬದಲಾವಣೆ ಹಾಗೂ ‘ಮಾನಸಿಕ ಪುನರುಜ್ಜೀವನ’ವೂ ಆಗಿದೆ,” ಎಂದು ಯವರು ಬಣ್ಣಿಸಿದರು. ಆತ್ಮವಿಶ್ವಾಸವಿಲ್ಲದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್, ದೀರ್ಘಕಾಲದ ವಸಾಹತುಶಾಹಿ ಆಳ್ವಿಕೆಯು ವಸಾಹತುಶಾಹಿ ಮನಸ್ಥಿತಿಯಿಂದಾಗಿ ಭಾರತದ ಆತ್ಮವಿಶ್ವಾಸವನ್ನೇ ಕುಗ್ಗಿಸಿತ್ತು ಎಂದು ಅವರು ವಿಷಾದಿಸಿದರು. ಈ ‘ವಸಾಹತುಶಾಹಿ ಮನಸ್ಥಿತಿ’ಯೆ ‘ವಿಕಸಿತ ಭಾರತ’ದ ಗುರಿ ಸಾಧನೆಗೆ ಪ್ರಮುಖ ಅಡೆತಡೆಯಾಗಿದೆ. ಆದ್ದರಿಂದಲೇ ಇಂದಿನ ಭಾರತವು ಅದರಿಂದ ಮುಕ್ತವಾಗಲು ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಭಾರತವನ್ನು ದೀರ್ಘಕಾಲ ಆಳಬೇಕೆಂದರೆ ಭಾರತೀಯರ ಆತ್ಮವಿಶ್ವಾಸವನ್ನು ಕಸಿದುಕೊಂಡು, ಅವರಲ್ಲಿ ಕೀಳರಿಮೆಯನ್ನು ತುಂಬಬೇಕು ಎಂಬುದು ಬ್ರಿಟಿಷರಿಗೆ ಚೆನ್ನಾಗಿ ತಿಳಿದಿತ್ತು ಮತ್ತು ಅವರು ಆ ಕಾಲಘಟ್ಟದಲ್ಲಿ ಅದನ್ನೇ ಮಾಡಿದರು ಎಂದು ಶ್ರೀ ಮೋದಿ ಸ್ಮರಿಸಿದರು. “ಭಾರತೀಯ ಕುಟುಂಬ ವ್ಯವಸ್ಥೆಯನ್ನು ‘ಕಾಲಕಸ’ ಎನ್ನಲಾಯಿತು, ಭಾರತೀಯ ಉಡುಪುಗಳನ್ನು ‘ವೃತ್ತಿಪರವಲ್ಲದ್ದು’ ಎಂದು ಕರೆಯಲಾಯಿತು, ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿಯನ್ನು ‘ತರ್ಕಹೀನ’ ಎಂದು ಜರಿಯಲಾಯಿತು, ಯೋಗ ಮತ್ತು ಆಯುರ್ವೇದವನ್ನು ‘ಅವೈಜ್ಞಾನಿಕ’ ಎಂದು ತಿರಸ್ಕರಿಸಲಾಯಿತು ಹಾಗೂ ಭಾರತೀಯ ಆವಿಷ್ಕಾರಗಳನ್ನು ಗೇಲಿ ಮಾಡಲಾಯಿತು” ಎಂದು ಅವರು ವಿವರಿಸಿದರು. ದಶಕಗಳ ಕಾಲ ಈ ಕಲ್ಪನೆಗಳನ್ನು ಪದೇ ಪದೇ ಪ್ರಚಾರ ಮಾಡಲಾಯಿತು, ಬೋಧಿಸಲಾಯಿತು ಮತ್ತು ಬಲಪಡಿಸಲಾಯಿತು. ಇದು ಅಂತಿಮವಾಗಿ ಭಾರತೀಯರ ಆತ್ಮವಿಶ್ವಾಸವನ್ನು ಛಿದ್ರಗೊಳಿಸಲು ಕಾರಣವಾಯಿತು ಎಂದು ಅವರು ಒತ್ತಿ ಹೇಳಿದರು.
ವಸಾಹತುಶಾಹಿ ಮನಸ್ಥಿತಿಯ ವ್ಯಾಪಕ ಪ್ರಭಾವದ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿಯವರು, ಇದನ್ನು ವಿವರಿಸಲು ಕೆಲವು ಉದಾಹರಣೆಗಳನ್ನು ನೀಡುವುದಾಗಿ ಹೇಳಿದರು. “ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಒಂದರ ಮೇಲೊಂದು ಸಾಧನೆಗಳನ್ನು ಮಾಡುತ್ತಿರುವ ಭಾರತವನ್ನು ‘ಜಾಗತಿಕ ಬೆಳವಣಿಗೆಯ ಎಂಜಿನ್’ ಮತ್ತು ‘ಜಾಗತಿಕ ಶಕ್ತಿಕೇಂದ್ರ’ ಎಂದು ಬಣ್ಣಿಸಲಾಗುತ್ತಿದೆ” ಎಂದು ಅವರು ಹೈಲೈಟ್ ಮಾಡಿದರು. “ಇಂದು ಭಾರತ ಇಷ್ಟೊಂದು ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದರೂ, ಯಾರೂ ಇದನ್ನು ‘ಹಿಂದೂ ರೇಟ್ ಆಫ್ ಗ್ರೋತ್’ (ಹಿಂದೂ ಬೆಳವಣಿಗೆ ದರ) ಎಂದು ಕರೆಯುವುದಿಲ್ಲ,” ಎಂದು ಅವರು ಮಾರ್ಮಿಕವಾಗಿ ಹೇಳಿದರು. ಭಾರತವು ಕೇವಲ ಶೇ. 2 ರಿಂದ 3 ರಷ್ಟು ಬೆಳವಣಿಗೆ ದರಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಈ ಪದವನ್ನು ಬಳಸಲಾಗುತ್ತಿತ್ತು ಎಂಬುದನ್ನು ಅವರು ಸ್ಮರಿಸಿದರು. “ದೇಶದ ಆರ್ಥಿಕ ಬೆಳವಣಿಗೆಯನ್ನು ಅದರ ಜನರ ಧರ್ಮ ಅಥವಾ ಅಸ್ಮಿತೆಯೊಂದಿಗೆ ತಳುಕು ಹಾಕುವುದು ಕೇವಲ ಆಕಸ್ಮಿಕವಾಗಿ ನಡೆದಿರುವುದೇ?” ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. “ಇದು ಆಕಸ್ಮಿಕವಲ್ಲ, ಬದಲಿಗೆ ಇದು ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ” ಎಂದು ಅವರು ಪ್ರತಿಪಾದಿಸಿದರು. ಒಂದು ಇಡೀ ಸಮಾಜ ಮತ್ತು ಸಂಪ್ರದಾಯವನ್ನು ಅನುತ್ಪಾದಕತೆ ಮತ್ತು ಬಡತನದೊಂದಿಗೆ ಸಮೀಕರಿಸಲಾಯಿತು. ಭಾರತದ ಈ ನಿಧಾನಗತಿಯ ಬೆಳವಣಿಗೆಗೆ ಹಿಂದೂ ನಾಗರಿಕತೆ ಮತ್ತು ಸಂಸ್ಕೃತಿಯೇ ಕಾರಣ ಎಂದು ಸಾಬೀತುಪಡಿಸಲು ಪ್ರಯತ್ನಿಸಲಾಯಿತು ಎಂದು ಅವರು ವಿಷಾದಿಸಿದರು. “ಎಲ್ಲದರಲ್ಲೂ ಕೋಮುವಾದವನ್ನು ಹುಡುಕುವಂತಹ ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರು, ತಮ್ಮ ಕಾಲದಲ್ಲಿ ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳ ಭಾಗವಾಗಿದ್ದ ‘ಹಿಂದೂ ರೇಟ್ ಆಫ್ ಗ್ರೋತ್’ ಎಂಬ ಪದದಲ್ಲಿ ಕೋಮುವಾದವನ್ನು ಕಾಣದಿರುವುದು ವಿಪರ್ಯಾಸ” ಎಂದು ಶ್ರೀ ಮೋದಿ ಟೀಕಿಸಿದರು.
ವಸಾಹತುಶಾಹಿ ಮನಸ್ಥಿತಿಯು ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಹೇಗೆ ಧ್ವಂಸಗೊಳಿಸಿತ್ತು ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಮೋದಿ, ಈಗ ರಾಷ್ಟ್ರವು ಅದನ್ನು ಹೇಗೆ ಪುನರುಜ್ಜೀವನಗೊಳಿಸುತ್ತಿದೆ ಎಂದು ವಿವರಿಸಿದರು. “ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲೇ ಭಾರತವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿತ್ತು. ಅಂದು ನಮ್ಮಲ್ಲಿ ಆಯುಧ ಕಾರ್ಖಾನೆಗಳ ಬಲವಾದ ಜಾಲವಿತ್ತು, ಇಲ್ಲಿಂದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗುತ್ತಿತ್ತು ಮತ್ತು ಅವು ವಿಶ್ವ ಯುದ್ಧಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿದ್ದವು” ಎಂದು ಅವರು ಹೈಲೈಟ್ ಮಾಡಿದರು. ಆದರೆ ಸ್ವಾತಂತ್ರ್ಯದ ನಂತರ ರಕ್ಷಣಾ ಉತ್ಪಾದನಾ ವ್ಯವಸ್ಥೆಯು ನಾಶವಾಯಿತು ಎಂದು ಯವರು ಬೇಸರ ವ್ಯಕ್ತಪಡಿಸಿದರು. “ಸರ್ಕಾರದಲ್ಲಿದ್ದವರ ವಸಾಹತುಶಾಹಿ ಮನಸ್ಥಿತಿಯು ‘ಮೇಡ್ ಇನ್ ಇಂಡಿಯಾ’ ಶಸ್ತ್ರಾಸ್ತ್ರಗಳನ್ನು ಕೀಳಾಗಿ ಕಾಣುವಂತೆ ಮಾಡಿತು. ಪರಿಣಾಮವಾಗಿ, ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿ ಬದಲಾಯಿತು,” ಎಂದು ಅವರು ತಿಳಿಸಿದರು.
ಇದೇ ಮನಸ್ಥಿತಿಯು ಹಡಗು ನಿರ್ಮಾಣ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿತು ಎಂದು ಅವರು ಒತ್ತಿ ಹೇಳಿದರು. “ಶತಮಾನಗಳಿಂದ ಭಾರತವು ಹಡಗು ನಿರ್ಮಾಣದ ಪ್ರಮುಖ ಕೇಂದ್ರವಾಗಿತ್ತು. ಐದಾರು ದಶಕಗಳ ಹಿಂದೆಯೂ ಸಹ, ಭಾರತದ ಶೇಕಡಾ 40 ರಷ್ಟು ವ್ಯಾಪಾರವು ಭಾರತೀಯ ಹಡಗುಗಳ ಮೂಲಕವೇ ನಡೆಯುತ್ತಿತ್ತು. ಆದರೆ ವಸಾಹತುಶಾಹಿ ಮನಸ್ಥಿತಿಯು ವಿದೇಶಿ ಹಡಗುಗಳಿಗೆ ಆದ್ಯತೆ ನೀಡಿತು” ಎಂದು ಅವರು ಸ್ಮರಿಸಿದರು. ಇದರ ಫಲಿತಾಂಶ ಇಂದು ಕಣ್ಣಮುಂದೆಯೇ ಇದೆ ಎಂದು ಹೇಳಿದ ಅವರು, “ಒಂದು ಕಾಲದಲ್ಲಿ ತನ್ನ ಕಡಲ ಶಕ್ತಿಗೆ ಹೆಸರಾಗಿದ್ದ ರಾಷ್ಟ್ರವು, ಇಂದು ತನ್ನ ಶೇಕಡಾ 95 ರಷ್ಟು ವ್ಯಾಪಾರಕ್ಕಾಗಿ ವಿದೇಶಿ ಹಡಗುಗಳನ್ನು ಅವಲಂಬಿಸಿದೆ. ಇದರಿಂದಾಗಿ ಭಾರತವು ಇಂದು ವಿದೇಶಿ ಶಿಪ್ಪಿಂಗ್ ಕಂಪನಿಗಳಿಗೆ ವಾರ್ಷಿಕವಾಗಿ ಸುಮಾರು 75 ಬಿಲಿಯನ್ ಡಾಲರ್ ಅಥವಾ ಸುಮಾರು 6 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ” ಎಂದು ವಿವರಿಸಿದರು.
“ಹಡಗು ನಿರ್ಮಾಣವಾಗಲಿ ಅಥವಾ ರಕ್ಷಣಾ ಉತ್ಪಾದನೆಯಾಗಲಿ, ಇಂದು ಪ್ರತಿಯೊಂದು ವಲಯವು ಆ ವಸಾಹತುಶಾಹಿ ಮನಸ್ಥಿತಿಯನ್ನು ಹಿಂದಿಕ್ಕಿ, ಹೊಸ ವೈಭವವನ್ನು ಸಾಧಿಸಲು ಶ್ರಮಿಸುತ್ತಿದೆ” ಎಂದು ಯವರು ಒತ್ತಿ ಹೇಳಿದರು.
ವಸಾಹತುಶಾಹಿ ಮನಸ್ಥಿತಿಯು ಭಾರತದ ಆಡಳಿತ ವ್ಯವಸ್ಥೆಗೆ ದೊಡ್ಡ ಹಾನಿಯನ್ನುಂಟುಮಾಡಿದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. “ದೀರ್ಘಕಾಲದವರೆಗೆ ಸರ್ಕಾರಿ ವ್ಯವಸ್ಥೆಯು ತನ್ನದೇ ಆದ ನಾಗರಿಕರ ಮೇಲಿನ ಅಪನಂಬಿಕೆಯಿಂದ ಕೂಡಿತ್ತು,” ಎಂದು ಅವರು ತಿಳಿಸಿದರು. ಹಿಂದೆ ಜನರು ತಮ್ಮ ದಾಖಲೆಗಳನ್ನು ಸರ್ಕಾರಿ ಅಧಿಕಾರಿಯಿಂದ ದೃಢೀಕರಿಸಬೇಕಿತ್ತು ಎಂಬುದನ್ನು ಅವರು ಸ್ಮರಿಸಿದರು. ಆದರೆ, ಆ ಅಪನಂಬಿಕೆಯನ್ನು ಮುರಿದು, ಈಗ ‘ಸ್ವಯಂ ದೃಢೀಕರಣ’ವೇ ಸಾಕು ಎಂಬ ನಿರ್ಧಾರವನ್ನು ಜಾರಿಗೆ ತರಲಾಗಿದೆ ಎಂದರು.
ದೇಶದಲ್ಲಿ ಸಣ್ಣಪುಟ್ಟ ತಪ್ಪುಗಳನ್ನೂ ಗಂಭೀರ ಅಪರಾಧಗಳೆಂದು ಪರಿಗಣಿಸುವಂತಹ ಕಾನೂನುಗಳಿದ್ದವು ಎಂದು ಹೈಲೈಟ್ ಮಾಡಿದ ಶ್ರೀ ಮೋದಿ, “ಇದನ್ನು ಬದಲಾಯಿಸಲು ‘ಜನ್-ವಿಶ್ವಾಸ್ ಕಾಯ್ದೆ’ಯನ್ನು (Jan-Vishwas law) ತರಲಾಯಿತು. ಇದರ ಮೂಲಕ ಅಂತಹ ನೂರಾರು ನಿಯಮಗಳನ್ನು ಅಪರಾಧಮುಕ್ತಗೊಳಿಸಲಾಗಿದೆ” ಎಂದು ವಿವರಿಸಿದರು. ಅತಿಯಾದ ಅಪನಂಬಿಕೆಯಿಂದಾಗಿ, ಹಿಂದೆ ಬ್ಯಾಂಕುಗಳು ಸಾವಿರ ರೂಪಾಯಿ ಸಾಲಕ್ಕೂ ಗ್ಯಾರಂಟಿ ಕೇಳುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡರು. ಅಪನಂಬಿಕೆಯ ಈ ವಿಷವರ್ತುಲವನ್ನು ‘ಮುದ್ರಾ ಯೋಜನೆ’ಯ ಮೂಲಕ ಭೇದಿಸಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. “ಈ ಯೋಜನೆಯಡಿ ಇದುವರೆಗೆ 37 ಲಕ್ಷ ಕೋಟಿ ರೂಪಾಯಿಗಳಷ್ಟು ಭದ್ರತಾ ರಹಿತ ಸಾಲವನ್ನು ನೀಡಲಾಗಿದೆ. ಯಾವುದೇ ಗ್ಯಾರಂಟಿ ನೀಡಲು ಶಕ್ತರಲ್ಲದ ಕುಟುಂಬಗಳ ಯುವಕರಲ್ಲಿ ಈ ಹಣವು ಆತ್ಮವಿಶ್ವಾಸವನ್ನು ಮೂಡಿಸಿದೆ ಮತ್ತು ಅವರು ಉದ್ಯಮಿಗಳಾಗಲು ನೆರವಾಗಿದೆ” ಎಂದು ಅವರು ಬಣ್ಣಿಸಿದರು.
“ಸರ್ಕಾರಕ್ಕೆ ಒಮ್ಮೆ ಏನನ್ನಾದರೂ ನೀಡಿದರೆ ಅದು ‘ಏಕಮುಖ ಸಂಚಾರ’ವಿದ್ದಂತೆ (One-way traffic), ಅಲ್ಲಿಂದ ಏನೂ ವಾಪಸ್ ಬರುವುದಿಲ್ಲ ಎಂದು ದೇಶದಲ್ಲಿ ಯಾವಾಗಲೂ ನಂಬಲಾಗಿತ್ತು” ಎಂದು ಶ್ರೀ ಮೋದಿ ಹೇಳಿದರು. ಆದರೆ ಯಾವಾಗ ಸರ್ಕಾರ ಮತ್ತು ಜನರ ನಡುವಿನ ನಂಬಿಕೆ ಬಲವಾಗುತ್ತದೆಯೋ, ಆಗ ಅದರ ಫಲಿತಾಂಶಗಳು ಮತ್ತೊಂದು ಅಭಿಯಾನದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಬ್ಯಾಂಕುಗಳಲ್ಲಿ 78 ಸಾವಿರ ಕೋಟಿ ರೂ., ವಿಮಾ ಕಂಪನಿಗಳಲ್ಲಿ 14 ಸಾವಿರ ಕೋಟಿ ರೂ., ಮ್ಯೂಚುಯಲ್ ಫಂಡ್ ಕಂಪನಿಗಳಲ್ಲಿ 3 ಸಾವಿರ ಕೋಟಿ ರೂ. ಮತ್ತು ಡಿವಿಡೆಂಡ್ ರೂಪದಲ್ಲಿ 9 ಸಾವಿರ ಕೋಟಿ ರೂ. ಹಣವು ಯಾವುದೇ ವಾರಸುದಾರರಿಲ್ಲದೆ ಬಿದ್ದಿದೆ ಎಂಬುದು ನಿಮಗೆ ಆಶ್ಚರ್ಯ ತರಬಹುದು ಎಂದು ಪ್ರಧಾನಮಂತ್ರಿ ಹೈಲೈಟ್ ಮಾಡಿದರು. “ಈ ಹಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ್ದಾಗಿದೆ. ಆದ್ದರಿಂದ ಸರ್ಕಾರವು ಅದನ್ನು ಅದರ ನಿಜವಾದ ಮಾಲೀಕರಿಗೆ ಹಿಂದಿರುಗಿಸಲು ಕೆಲಸ ಮಾಡುತ್ತಿದೆ,” ಎಂದು ಅವರು ತಿಳಿಸಿದರು. ಇದಕ್ಕಾಗಿ ವಿಶೇಷ ಶಿಬಿರಗಳನ್ನು ಪ್ರಾರಂಭಿಸಲಾಗಿದೆ ಮತ್ತು ಇದುವರೆಗೆ ಸುಮಾರು 500 ಜಿಲ್ಲೆಗಳಲ್ಲಿ ಇಂತಹ ಶಿಬಿರಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಸರಿಯಾದ ಫಲಾನುಭವಿಗಳಿಗೆ ಹಿಂದಿರುಗಿಸಲಾಗಿದೆ ಎಂದು ಶ್ರೀ ಮೋದಿ ವಿವರಿಸಿದರು.
“ಇದು ಕೇವಲ ಹಣ ಅಥವಾ ಆಸ್ತಿಯನ್ನು ಹಿಂದಿರುಗಿಸುವುದಲ್ಲ, ಬದಲಿಗೆ ಇದು ನಂಬಿಕೆಯ ವಿಷಯವಾಗಿದೆ. ಜನರ ನಂಬಿಕೆಯನ್ನು ನಿರಂತರವಾಗಿ ಗಳಿಸುವ ಬದ್ಧತೆಯಾಗಿದೆ,” ಎಂದು ಪ್ರಧಾನಮಂತ್ರಿ ಹೇಳಿದರು. “ಜನರ ನಂಬಿಕೆಯೇ ರಾಷ್ಟ್ರದ ನಿಜವಾದ ಬಂಡವಾಳ. ವಸಾಹತುಶಾಹಿ ಮನಸ್ಥಿತಿಯಲ್ಲಿ ಇಂತಹ ಅಭಿಯಾನಗಳು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ,” ಎಂದು ಅವರು ಮಾರ್ಮಿಕವಾಗಿ ನುಡಿದರು.
“ರಾಷ್ಟ್ರವು ಪ್ರತಿಯೊಂದು ಕ್ಷೇತ್ರದಲ್ಲೂ ವಸಾಹತುಶಾಹಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತವಾಗಬೇಕು,” ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ದೇಶವಾಸಿಗಳಿಗೆ ಮನವಿ ಮಾಡಿದ್ದು, ಪ್ರತಿಯೊಬ್ಬರೂ ಹತ್ತು ವರ್ಷಗಳ ಕಾಲಮಿತಿಯೊಂದಿಗೆ ಕೆಲಸ ಮಾಡುವಂತೆ ಕೋರಿದ್ದಾಗಿ ಅವರು ತಿಳಿಸಿದರು. “ಭಾರತದಲ್ಲಿ ಮಾನಸಿಕ ಗುಲಾಮಗಿರಿಯ ಬೀಜ ಬಿತ್ತಿದ ಮೆಕಾಲೆ ನೀತಿಗೆ 2035ರಲ್ಲಿ 200 ವರ್ಷ ತುಂಬಲಿದೆ, ಅಂದರೆ ಇನ್ನು ಹತ್ತು ವರ್ಷಗಳು ಬಾಕಿ ಉಳಿದಿವೆ. ಈ ಹತ್ತು ವರ್ಷಗಳಲ್ಲಿ, ದೇಶವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುವಂತೆ ಪ್ರತಿಯೊಬ್ಬ ನಾಗರಿಕರೂ ಪಣತೊಡಬೇಕು” ಎಂದು ಅವರು ಕರೆ ನೀಡಿದರು.
“ಭಾರತವು ಕೇವಲ ಒಂದು ನಿರ್ದಿಷ್ಟ ಹಾದಿಯನ್ನು ಅನುಸರಿಸುವ ರಾಷ್ಟ್ರವಲ್ಲ, ಉತ್ತಮ ನಾಳೆಗಾಗಿ ಅದು ತನ್ನ ದಿಗಂತವನ್ನು ವಿಸ್ತರಿಸಿಕೊಳ್ಳಬೇಕು,” ಎಂದು ಯವರು ಒತ್ತಿ ಹೇಳಿದರು. ದೇಶದ ಭವಿಷ್ಯದ ಅಗತ್ಯಗಳನ್ನು ಅರ್ಥಮಾಡಿಕೊಂಡು, ವರ್ತಮಾನದಲ್ಲೇ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. “ಇದೇ ಕಾರಣಕ್ಕಾಗಿ ನಾನು ಆಗಾಗ್ಗೆ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನಗಳ ಬಗ್ಗೆ ಮಾತನಾಡುತ್ತೇನೆ. ಇಂತಹ ಉಪಕ್ರಮಗಳು ನಾಲ್ಕೈದು ದಶಕಗಳ ಹಿಂದೆಯೇ ಪ್ರಾರಂಭವಾಗಿದ್ದರೆ, ಇಂದಿನ ಭಾರತದ ಸ್ಥಿತಿಯೇ ಬೇರೆಯಾಗಿರುತ್ತಿತ್ತು” ಎಂದು ಅವರು ಹೈಲೈಟ್ ಮಾಡಿದರು. ಈ ಸಂದರ್ಭದಲ್ಲಿ ಸೆಮಿಕಂಡಕ್ಟರ್ ವಲಯದ ಉದಾಹರಣೆಯನ್ನು ನೀಡಿದ ಶ್ರೀ ಮೋದಿ, “ಐದಾರು ದಶಕಗಳ ಹಿಂದೆಯೇ ಕಂಪನಿಯೊಂದು ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾವರವನ್ನು ಸ್ಥಾಪಿಸಲು ಮುಂದೆ ಬಂದಿತ್ತು. ಆದರೆ ಅಂದು ಅದಕ್ಕೆ ಸೂಕ್ತ ಗಮನ ನೀಡದ ಪರಿಣಾಮವಾಗಿ, ಭಾರತವು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಹಿಂದೆ ಬೀಳುವಂತಾಯಿತು” ಎಂದು ಸ್ಮರಿಸಿದರು.
ಇಂಧನ ವಲಯವೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದೆ ಎಂದು ಹೇಳಿದರು. ಭಾರತವು ಪ್ರಸ್ತುತ ವಾರ್ಷಿಕವಾಗಿ ಸುಮಾರು 125 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು “ದೇಶದಲ್ಲಿ ವಿಫುಲವಾದ ಸೂರ್ಯನ ಬೆಳಕು ಲಭ್ಯವಿದ್ದರೂ, 2014 ರವರೆಗೆ ಭಾರತದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವು ಕೇವಲ 3 ಗಿಗಾವ್ಯಾಟ್ ಆಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಸಾಮರ್ಥ್ಯವು ಸುಮಾರು 130 ಗಿಗಾವ್ಯಾಟ್ ಗಳಿಗೆ ಏರಿಕೆಯಾಗಿದೆ. ಇದರಲ್ಲಿ 22 ಗಿಗಾವ್ಯಾಟ್ ಸಾಮರ್ಥ್ಯವು ಕೇವಲ ‘ರೂಫ್ ಟಾಪ್ ಸೋಲಾರ್’ ಮೂಲಕವೇ ಸೇರ್ಪಡೆಯಾಗಿದೆ” ಎಂದು ಅವರು ಹೈಲೈಟ್ ಮಾಡಿದರು.
‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಯು ಇಂಧನ ಭದ್ರತೆಯ ಅಭಿಯಾನದಲ್ಲಿ ನಾಗರಿಕರಿಗೆ ನೇರ ಪಾಲ್ಗೊಳ್ಳುವಿಕೆಯನ್ನು ನೀಡಿದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ವಾರಣಾಸಿಯ ಸಂಸದರಾಗಿ ತಾವು ಅಲ್ಲಿನ ಸ್ಥಳೀಯ ಅಂಕಿಅಂಶಗಳನ್ನು ಉಲ್ಲೇಖಿಸಬಲ್ಲೆ ಎಂದು ಹೇಳಿದ ಅವರು, “ಈ ಯೋಜನೆಯಡಿ ವಾರಣಾಸಿಯೊಂದರಲ್ಲೇ 26,000 ಕ್ಕೂ ಹೆಚ್ಚು ಮನೆಗಳು ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಿಕೊಂಡಿವೆ” ಎಂದು ಹೈಲೈಟ್ ಮಾಡಿದರು. ಈ ಘಟಕಗಳು ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದರಿಂದ ಜನರಿಗೆ ಪ್ರತಿ ತಿಂಗಳು ಸುಮಾರು ಐದು ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. “ಈ ಸೌರಶಕ್ತಿ ಉತ್ಪಾದನೆಯಿಂದ ವಾರ್ಷಿಕವಾಗಿ ಸುಮಾರು 90 ಸಾವಿರ ಮೆಟ್ರಿಕ್ ಟನ್ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತಿದೆ. ಈ ಪ್ರಮಾಣದ ಮಾಲಿನ್ಯವನ್ನು ತಡೆಯಲು ಸಾಂಪ್ರದಾಯಿಕವಾಗಿ 40 ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸಬೇಕಿತ್ತು” ಎಂದು ಯವರು ವಿವರಿಸಿದರು. ತಾವು ಕೇವಲ ವಾರಣಾಸಿಯ ಅಂಕಿಅಂಶಗಳನ್ನು ಮಾತ್ರ ನೀಡುತ್ತಿದ್ದು, ಈ ಯೋಜನೆಯಿಂದ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಬೃಹತ್ ಲಾಭದ ಬಗ್ಗೆ ಯೋಚಿಸುವಂತೆ ಅವರು ಮನವಿ ಮಾಡಿದರು. “ಒಂದೇ ಒಂದು ಯೋಜನೆಯು ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೇಗೆ ಹೊಂದಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ,” ಎಂದು ಅವರು ಬಣ್ಣಿಸಿದರು.
2014ಕ್ಕಿಂತ ಮೊದಲು ಭಾರತವು ತನ್ನ ಶೇಕಡಾ 75 ರಷ್ಟು ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಮೊಬೈಲ್ ಫೋನ್ ಆಮದು ಬಹುತೇಕ ಶೂನ್ಯಕ್ಕೆ ಇಳಿದಿದ್ದು, ದೇಶವು ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಶ್ರೀ ಮೋದಿ ಹೇಳಿದರು. “2014ರ ನಂತರ ಸುಧಾರಣೆಯನ್ನು ತರಲಾಯಿತು, ರಾಷ್ಟ್ರವು ಸಾಧನೆ ಮಾಡಿತು ಮತ್ತು ಅದರ ಪರಿವರ್ತನಾತ್ಮಕ ಫಲಿತಾಂಶಗಳನ್ನು ಜಗತ್ತು ಈಗ ಕಣ್ಣಾರೆ ಕಾಣುತ್ತಿದೆ” ಎಂದು ಅವರು ಒತ್ತಿ ಹೇಳಿದರು.
‘ಭವಿಷ್ಯದ ಪರಿವರ್ತನೆ’ಯ ಪಯಣವು ಅಸಂಖ್ಯಾತ ಯೋಜನೆಗಳು, ನೀತಿಗಳು, ನಿರ್ಧಾರಗಳು, ಜನರ ಆಕಾಂಕ್ಷೆಗಳು ಮತ್ತು ಜನರ ಪಾಲ್ಗೊಳ್ಳುವಿಕೆಯ ಪಯಣವಾಗಿದೆ. ಇದು ಕೇವಲ ಒಂದು ಶೃಂಗಸಭೆಯ ಚರ್ಚೆಗೆ ಸೀಮಿತವಲ್ಲ, ಬದಲಿಗೆ ಇದೊಂದು ನಿರಂತರ ಪಯಣ ಮತ್ತು ಭಾರತದ ರಾಷ್ಟ್ರೀಯ ಸಂಕಲ್ಪವಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಈ ಸಂಕಲ್ಪದಲ್ಲಿ ಪ್ರತಿಯೊಬ್ಬರ ಸಹಕಾರ ಮತ್ತು ಸಾಮೂಹಿಕ ಪ್ರಯತ್ನ ಅತ್ಯಗತ್ಯ ಎಂದು ಹೇಳುವ ಮೂಲಕ ಯವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಇದೇ ವೇಳೆ ಅವರು ಮತ್ತೊಮ್ಮೆ ಎಲ್ಲರಿಗೂ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.
*****
Speaking at the Hindustan Times Leadership Summit 2025. #HTLS2025@htTweets
— Narendra Modi (@narendramodi) December 6, 2025
https://t.co/D5ACi2xSwt
India is brimming with confidence. pic.twitter.com/5Cqes5YRWq
— PMO India (@PMOIndia) December 6, 2025
In a world of slowdown, mistrust and fragmentation, India brings growth, trust and acts as a bridge-builder. pic.twitter.com/4dxbPFlqXi
— PMO India (@PMOIndia) December 6, 2025
Today, India is becoming the key growth engine of the global economy. pic.twitter.com/IInnCzhgSA
— PMO India (@PMOIndia) December 6, 2025
India's Nari Shakti is doing wonders. Our daughters are excelling in every field today. pic.twitter.com/G5lordAkYn
— PMO India (@PMOIndia) December 6, 2025
Our pace is constant.
— PMO India (@PMOIndia) December 6, 2025
Our direction is consistent.
Our intent is always Nation First. pic.twitter.com/Z0N1oyAcjZ
Every sector today is shedding the old colonial mindset and aiming for new achievements with pride. pic.twitter.com/ua5dg0ttF4
— PMO India (@PMOIndia) December 6, 2025