ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಂಜಾಬ್ ಸರ್ಕಾರದ ಆಹಾರ ದಾಸ್ತಾನು ಕಾರ್ಯಾಚರಣೆಗಾಗಿ ಲೆಗಸಿ ಆಹಾರ ನಗದು ಸಾಲ ಖಾತೆಗಳ (2014-15ನೇ ಬೆಳೆ ಅವಧಿವರೆಗೆ) ಇತ್ಯರ್ಥಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ವೆಚ್ಚ ಇಲಾಖೆಯ ಈ ಪ್ರಸ್ತಾಪಕ್ಕೆ 2.1.2017ರಂದು ಪ್ರಧಾನಮಂತ್ರಿಯವರು ನಿಯಮ 12 (ಕಲಾಪ ನಿರ್ವಹಣೆ) ಕಾನೂನು 1961ರ ಅಡಿಯಲ್ಲಿ ಅನುಮೋದನೆ ನೀಡಿದ್ದರು.
ಲೆಗಸಿ ವಿಷಯಗಳ ಶೀಘ್ರ ಇತ್ಯರ್ಥವು ಬ್ಯಾಂಕ್ ಗಳಿಗೆ ಆಹಾರ ಸಾಲವನ್ನು ರಾಜ್ಯದ ರೈತರ ಹಿತದೃಷ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ವಿತರಿಸಲು ಮತ್ತು ದೇಶದ ಆಹಾರ ಭದ್ರತೆ ಖಾತ್ರಿಪಡಿಸಲು ನಿರಂತರವಾಗಿ ಆಹಾರ ದಾಸ್ತಾನು ಕಾರ್ಯಚಟುವಟಿಕೆಗೆ ನೆರವಾಗುತ್ತದೆ. ಪಂಜಾಬ್ ಸರ್ಕಾರದಿಂದ ಅವಧಿ ಸಾಲ ಪಡೆಯುವ ಮೂಲಕ ಬಾಕಿ ಇರುವ ನಗದು ಸಾಲ ಮಿತಿಗಳ (ಸಿಸಿಎಲ್) ಖಾತೆಗಳ ಇತ್ಯರ್ಥ ಪಡಿಸುವುದರಿಂದ ಬಡ್ಡಿ ಪಾವತಿಯನ್ನು ಉಳಿಸುತ್ತದೆ. ಇದು ಪಂಜಾಬ್ ಸರ್ಕಾರಕ್ಕೆ ಬಂಡವಾಳ ವೆಚ್ಚ ಕೈಗೊಳ್ಳಲು ಹೆಚ್ಚವರಿ ಮೂಲವನ್ನು ಸೃಷ್ಟಿಸುತ್ತದೆ. ಪಂಜಾಬ್ ಸರ್ಕಾರದಿಂದ ಆಹಾರ ದಾಸ್ತಾನು ಕಾರ್ಯಾಚರಣೆಗಾಗಿ ಲೆಗಸಿ ನಗದು ಸಾಲ ಖಾತೆ (2014-15ನೇ ಸಾಲಿನ ಬೆಳೆ ಅವಧಿವರೆಗೆ)ಗಳನ್ನು ಈ ಕೆಳಕಂಡಂತೆ ಇತ್ಯರ್ಥ ಮಾಡಲಾಗುತ್ತದೆ:
a) 2014-15ರ ಮುಂಗಾರು ಮಾರುಕಟ್ಟೆ ಹಂಗಾಮಿನವರೆಗೆ ಪಂಜಾಬ್ ಸರ್ಕಾರದಿಂದ ಇರುವ ನಗದು ಸಾಲ ಖಾತೆಯ ಬಾಕಿ ಮೊತ್ತ ಸುಮಾರು 31,000 ಕೋಟಿ ರೂಪಾಯಿ ಆಗಿದ್ದು, ಇದನ್ನು ಅವಧಿ ಸಾಲವಾಗಿ ಪರಿವರ್ತಿಸಲಾಗುತ್ತದೆ. ಇದನ್ನು ಪೂರ್ವ ಪಾವತಿಯ ಆಯ್ಕೆಯೊಂದಿಗೆ 20 ವರ್ಷಗಳ ಅವಧಿಯಲ್ಲಿ ಅರ್ಧವಾರ್ಷಿಕ ಕಂತುಗಳಲ್ಲಿ ಮರು ಪಾವತಿ ಮಾಡಬಹುದಾಗಿದೆ. ಸಾಲದ ನಿಯಮ ಮತ್ತು ಷರತ್ತುಗಳು ಸಾಲ ನೀಡುವ ಬ್ಯಾಂಕ್ ಮತ್ತು ಆರ್.ಬಿ.ಐ. ನೀತಿಗನುಗುಣವಾಗುರುತ್ತದೆ.
b) ಸಾಲದ ನಿಖರ ಮೊತ್ತವು, 31.03.2015ರವರೆಗೆ ಇರುವ ಬಾಕಿಯೇ ಆಗಿರುತ್ತದೆ, ಇದು ದಾಸ್ತಾನಿರುವ ಆಹಾರ ಧಾನ್ಯದ ಖಾತ್ರಿಯನ್ನು ಹೊಂದಿರುವುದಿಲ್ಲ. ಎಸ್.ಬಿ.ಐ. ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಪಂಜಾಬ್ ಸರ್ಕಾರ ಮತ್ತು ಆರ್.ಬಿ.ಐ. ಸೇರಿದಂತೆ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿ ಮೊತ್ತವನ್ನು ಆಖೈರುಗೊಳಿಸುತ್ತದೆ.
c) 14ನೇ ಹಣಕಾಸು ಆಯೋಗವು ತನ್ನ ಆದೇಶದಲ್ಲಿ ಪ್ರತಿಯೊಂದು ರಾಜ್ಯಕ್ಕೂ 2015-20ರ ಅವಧಿಯಲ್ಲಿ ಹಣಕಾಸು ನಕಾಶೆಯನ್ನು ನಿರ್ದಿಷ್ಟಪಡಿಸಿದೆ ಮತ್ತು ರಾಜ್ಯಗಳ ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿಎಸ್.ಡಿ.ಪಿ.)ಯ ಶೇ.3ರ ವಾರ್ಷಿಕ ಮಿತಿಯಲ್ಲಿ ವಿತ್ತೀಯ ಕೊರತೆಯನ್ನು ಎಲ್ಲ ರಾಜ್ಯಗಳಿಗೂ ನಿಗದಿ ಮಾಡಿದೆ. ಮೇಲೆ ತಿಳಿಸಲಾದ ಅವಧಿ ಸಾಲವನ್ನು ಪಂಜಾಬ್ ಸರ್ಕಾರಕ್ಕೆ 2016-17ನೇ ಸಾಲಿನ ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡಲು ಉದ್ದೇಶಿಸಲಾಗಿದ್ದು, ಇದನ್ನು ಪಂಜಾಬ್ ಸರ್ಕಾರದ 2016-17ನೇ ಸಾಲಿನ ವಿತ್ತೀಯ ಕೊರತೆ ಮಿತಿಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
d) ಲೆಗಸಿ ಖಾತೆಗಳನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಿದ ತರುವಾಯ, ಪಂಜಾಬ್ ರಾಜ್ಯ ಸರ್ಕಾರವು, ದೀರ್ಘಾವಧಿ ಸಾಲವನ್ನು ಮಾತ್ರ ಮರು ಪಾವತಿ ಮಾಡಲು ಬಾಂಡ್ ಗಳನ್ನು ಬಿಡುಗಡೆ ಮಾಡಬಹುದು. ಆರ್.ಬಿ.ಐ. ಮತ್ತು ಬ್ಯಾಂಕ್ ಗಳ ಒಕ್ಕೂಟದ ಅನುಮೋದನೆಯ ನಂತರವಷ್ಟೇ ಇದನ್ನು ಮಾಡಬಹುದಾಗಿದೆ. ಸಾಲ ವಿನಿಮಯಕ್ಕೆ ಭಾರತ ಸರ್ಕಾರವು ಬಾಂಡ್ ಬಿಡುಗಡೆ ಮಾಡುವ ವರ್ಷದಲ್ಲಿ ತನ್ನ ಸಹಮತವನ್ನು ನೀಡಲಿದೆ.
e) ಪಂಜಾಬ್ ಸರ್ಕಾರವು ಭಾರತ ಸರ್ಕಾರ ಮತ್ತು ಆರ್.ಬಿ.ಐ.ನೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಒಂದೊಮ್ಮೆ ಪಂಜಾಬ್ ಸರ್ಕಾರ ದೀರ್ಘಾವಧಿ ಸಾಲದ ಅಸಲು ಅಥವಾ ಬಡ್ಡಿಯನ್ನು ನಿಗದಿತ ದಿನಗಳ ಒಳಗಾಗಿ ಮರು ಪಾವತಿ ಮಾಡಲು ವಿಫಲವಾದಲ್ಲಿ ಅಂಥ ಬಾಕಿ ಮೊತ್ತವನ್ನು ಕೇಂದ್ರ ತೆರಿಗೆಗಳಲ್ಲಿ ರಾಜ್ಯಕ್ಕೆ ಸಲ್ಲಬೇಕಾದ ಪಾಲಿನಿಂದ ಮುರಿದುಕೊಂಡು ಅದನ್ನು ಎಸ್.ಬಿ.ಐ. ಒಕ್ಕೂಟಕ್ಕೆ ಪಾವತಿ ಮಾಡುವ ಹಿಂಪಡೆಯಲಾಗದಂಥ ಅಧಿಕಾರವನ್ನು ನೀಡುತ್ತದೆ.
f) 2014-15ರವರೆಗಿನ ಲೆಗಸಿ ಖಾತೆಯಲ್ಲಿನ ಬಾಕಿ ಮೊತ್ತವನ್ನು ಇತ್ಯರ್ಥ ಮಾಡಲು ಇದು ಒಂದೇ ಒಂದು ಬಾರಿಯ ಕ್ರಮವಾಗಿರುತ್ತದೆ. ಪಂಜಾಬ್ ಸರ್ಕಾರವು ಸಿಸಿಎಲ್ ಕಂದಕವನ್ನು ನಿಯಮಿತವಾಗಿ ಮುಚ್ಚಲು ಮತ್ತು ಮುಂಬರುವ ವರ್ಷಗಳಲ್ಲಿ ಮತ್ತೆ ಸಿಸಿಎಲ್ ಕಂದಕ ನಿರ್ಮಾಣವಾಗದಂತೆ ನೋಡಿಕೊಳ್ಳಲು ಬಜೆಟ್ ನಲ್ಲಿ ಸೂಕ್ತ ವಾರ್ಷಿಕ ಹಂಚಿಕೆಗಳನ್ನು ಮಾಡಬೇಕಾಗುತ್ತದೆ. ತನ್ನ ಸ್ವಂತ ಮೂಲದಿಂದ ಅವಧಿ ಸಾಲದ ಮರುಪಾವತಿಗೆ ಇದು ಸಬ್ಸಿಡಿ ಬಿಲ್ ಕಡಿಮೆ ಮಾಡುವ ಪ್ರಯತ್ನವನ್ನೂ ಮಾಡಲಿದೆ.
AKT/VBA/SH