Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ ಮತ್ತು ಸ್ವಾಮಿ ವಿವೇಕಾನಂದ ಅವರ ಶಿಕಾಗೊ ಭಾಷಣದ 125ನೇ ವರ್ಷಾಚರಣೆಯ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ಇಲ್ಲಿ ಸ್ಥಳಾವಕಾಶ ಸಾಲದೆ ಮತ್ತೊಂದು ಸಭಾಂಗಣದಲ್ಲಿ ಸಹ ಸಾಕಷ್ಟು ಜನರು ಕುಳಿತಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಅವರನ್ನೂ ನಾನು ಆದರದಿಂದ ನೆನೆಯುತ್ತೇನೆ.
ಇಂದು ಸೆಪ್ಟೆಂಬರ್ 11ನೇ ತಾರೀಖು. 2001ಕ್ಕಿಂತ ಮೊದಲು ಸೆಪ್ಟೆಂಬರ್ 11ರ ಮಹತ್ವವೇನೆಂದು ವಿಶ್ವಕ್ಕೆ ತಿಳಿದಿರಲಿಲ್ಲ. ತಪ್ಪು ಪ್ರಪಂಚದ್ದಲ್ಲ, ತಪ್ಪು ನಮ್ಮದು. ಏಕೆಂದರೆ ನಾವೇ ಅದನ್ನು ಮರೆತಿದ್ದೆವು. ನಾವು ಮರೆಯದೆ ಇದ್ದಿದ್ದರೆ ಬಹುಶಃ 21ನೆಯ ಶತಮಾನದ ಆ ಭಯಾನಕ ಘಟನೆ ಸೆಪ್ಟೆಂಬರ್ 11ರಂದು ನಡೆಯುತ್ತಿರಲಿಲ್ಲ. ನೂರಾ ಇಪ್ಪತ್ತೈದು ವರ್ಷಗಳ ಹಿಂದೆ ಇದೇ ಸೆಪ್ಟೆಂಬರ್ 11ರಂದು ನಮ್ಮ ದೇಶದ ತರುಣ ಸುಮಾರು ನಿಮ್ಮೆಲ್ಲರಿಗಿಂತ ಐದೋ, ಏಳೋ ವರ್ಷ ದೊಡ್ಡವನಿರಬಹುದು, ಕಾವಿ ವಸ್ತ್ರಧಾರಿಯಾಗಿದ್ದ ಆತನ ಉಡುಪು ವಿಶ್ವಕ್ಕೆ ಅಪರಿಚಿತವಾಗಿತ್ತು. ವಿಶ್ವವು ಈತನನ್ನು ಗುಲಾಮ ಭಾರತದ ಪ್ರತಿನಿಧಿಯಾಗಿ ನೋಡುತ್ತಿತ್ತು. ಆದರೆ ಆತನ ಆತ್ಮವಿಶ್ವಾಸದಲ್ಲಿ ಅದೆಂತಹ ಶಕ್ತಿ ಇತ್ತೆಂದರೆ ಗುಲಾಮಗಿರಿಯ ಛಾಯೆಯೂ ಆತನ ಚಿಂತನೆಗಳಲ್ಲಿ ಸುಳಿಯಲಿಲ್ಲ, ನಡವಳಿಕೆಯಲ್ಲೂ ಇರಲಿಲ್ಲ ಮತ್ತು ಆತನ ಮಾತುಗಳಲ್ಲೂ ಇರಲಿಲ್ಲ. ಗುಲಾಮಗಿರಿಯ ಸಾವಿರಾರು ವರ್ಷಗಳನ್ನು ದೇಶ ಕಂಡ ನಂತರವೂ ಆತನ ಒಳಗಿನ ಜ್ವಾಲೆ ಧಗಧಗಿಸುತ್ತಿತ್ತು, ಪ್ರಪಂಚಕ್ಕೆ ಕೊಡುವ ಸಾಮರ್ಥ್ಯ ಈ ಮಣ್ಣಿನಲ್ಲಿದೆ, ಇಲ್ಲಿಯ ಚಿಂತನೆಗಳಲ್ಲಿದೆ, ಇಲ್ಲಿಯ ಜೀವನಶೈಲಿಯಲ್ಲಿದೆ ಎಂದರೆ ಆತ ಅದೆಂತಹ ಪರಂಪರೆಯನ್ನು ತನ್ನೊಳಗೆ ಹುದುಗಿಸಿಕೊಂಡಿರಬಹುದು. ಇದೊಂದು ಅಸಾಧಾರಣ ಘಟನೆಯಾಗಿದೆ.
ನಮ್ಮ ನಾಲ್ಕೂ ಕಡೆ ನಕಾರಾತ್ಮಕವಾದುದು ಘಟಿಸುತ್ತಿರುವಾಗ, ನಮ್ಮ ಯೋಚನೆಗೆ ವಿರುದ್ಧವಾದುದು ನಡೆಯುತ್ತಿರುವಾಗ, ನಾಲ್ಕೂ ಕಡೆ ನಮ್ಮ ವಿರುದ್ಧದ ದನಿಯಿರುವಾಗ ನಮಗೆ ನಮ್ಮ ಮಾತನ್ನು ಹೇಳಲು ಅದೆಷ್ಟು ಭಯವಾಗುತ್ತದೆ ಎಂದು ಸ್ವತಃ ನಾವೇ ಯೋಚಿಸೋಣ. ಎಂತಹ ದಮನ ಉಂಟಾಗಿರುತ್ತದೆ. ಆದರೆ ಈ ದಮನವನ್ನು ಆತ ಎಂದಿಗೂ ಅನುಭವಿಸಲಿಲ್ಲ ಎಂದರೆ ಆ ಮಹಾಪುರುಷನಲ್ಲಿ ಅದೆಂತಹ ಶಕ್ತಿ ಅಡಗಿತ್ತು. ಆಂತರ್ಯದ ಜ್ವಾಲೆ, ಆಂತರ್ಯದ ಉತ್ಸಾಹ, ಆಂತರ್ಯದ ಆತ್ಮವಿಶ್ವಾಸದಿಂದ ಈ ಮಣ್ಣಿನ ಶಕ್ತಿಯನ್ನು ಚೆನ್ನಾಗಿ ಬಲ್ಲ ವ್ಯಕ್ತಿ ವಿಶ್ವಕ್ಕೆ ಸಾಮರ್ಥ್ಯ ಕೊಡುವ, ಸರಿಯಾದ ದಿಕ್ಕು ತೋರಿಸುವ, ಸಮಸ್ಯೆಗಳಿಗೆ ಪರಿಹಾರದ ದಾರಿ ತೋರಿಸುವ ಯಶಸ್ವೀ ಪ್ರಯತ್ನ ಮಾಡುತ್ತಾನೆ. ” Ladies and ಜಂಟಲ್ಮ್ಯಾನ್ ”  ಹೊರತುಪಡಿಸಿ ಬೇರೆ ರೀತಿಯಲ್ಲೂ ಮಾತು ಆರಂಭಿಸಬಹುದು ಎಂದು ವಿಶ್ವಕ್ಕೆ ಗೊತ್ತೇ ಇರಲಿಲ್ಲ. ಆ ಸಮಯದಲ್ಲಿ ”  Brothers and Sisters of ಅಮೇರಿಕಾ”  ಎಂಬ ಎರಡು ಪದಗಳನ್ನು ಕೇಳಿ ಇಡೀ ಸಭಾಂಗಣದಲ್ಲಿ ಕೆಲವು ನಿಮಿಷಗಳವರೆಗೆ ನಿರಂತರವಾಗಿ ಚಪ್ಪಾಳೆ ಸದ್ದು ಕೇಳಿ ಬರುತ್ತಿತ್ತು. ಆ ಎರಡೇ ಪದಗಳಲ್ಲಿ ಭಾರತದ ಅಗಾಧ ಶಕ್ತಿಯನ್ನು ಆತ ಪರಿಚಯಿಸಿದ್ದ. ಅದು 9/11 ಆಗಿತ್ತು. ತನ್ನ ತಪ್ಪಸ್ಸಿನ ಬಲದಿಂದ ತಾಯಿ ಭಾರತಿಯನ್ನು ಒಲಿಸಿಕೊಂಡ ನಂತರ ಆತ ಆ ತಾಯಿ ಭಾರತಿಯನ್ನು ತನ್ನೊಳಗೆ ಆವಾಹಿಸಿಕೊಂಡಿದ್ದ. ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದವರೆಗೆ ಪ್ರತಿಯೊಂದು ಭಾಷೆಯನ್ನು, ಪ್ರತಿಯೊಂದು ವಾಣಿಯನ್ನು ತನ್ನದಾಗಿಸಿಕೊಂಡಿದ್ದ. ಒಂದು ರೀತಿಯಲ್ಲಿ ಭಾರತಮಾತೆಯ ತಪಸ್ಸಿನ ಜಾದೂವನ್ನು ತನ್ನೊಳಗೆ ಕಂಡುಕೊಂಡಿದ್ದ. ಇಂತಹ ಒಬ್ಬ ಮಹಾಪುರುಷ ಒಂದೆರಡು ಕ್ಷಣಗಳಲ್ಲಿ ಇಡೀ ವಿಶ್ವವನ್ನು ತನ್ನದಾಗಿ ಮಾಡಿಕೊಳ್ಳುತ್ತಾನೆ. ಇಡೀ ವಿಶ್ವವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾನೆ. ಸಾವಿರಾರು ವರ್ಷಗಳಿಂದ ವಿಕಾಸಗೊಂಡ ಭಿನ್ನಭಿನ್ನ ಮಾನವ ಸಂಸ್ಕೃತಿಯನ್ನು ತನ್ನೊಳಗೆ ಸೇರಿಸಿಕೊಂಡು ವಿಶ್ವಕ್ಕೆ ತನ್ನತನದ ಭಾವನೆಯನ್ನು ನೀಡುತ್ತಾನೆ. ವಿಶ್ವವನ್ನು ಗೆಲ್ಲುತ್ತಾನೆ. ನನ್ನ ಪಾಲಿಗೆ 9/11 ವಿಶ್ವ ವಿಜಯೀ ದಿವಸವಾಗಿದೆ. 21ನೆಯ ಶತಮಾನದ ಪ್ರಾರಂಭದ ಅದೇ 9/11 ಅನ್ನು ಮಾನವನು ವಿನಾಶದ ಮಾರ್ಗವಾಗಿ, ಸಂಹಾರದ ಮಾರ್ಗವಾಗಿ ಅದೇ ಅಮೆರಿಕಾ ನೆಲದ ಮೇಲೆ ಪ್ರಯೋಗಿಸುತ್ತಾನೆ. ಪ್ರೀತಿ ಮತ್ತು ತನ್ನತನದ ಸಂದೇಶ ನೀಡಿದ 9/11ರಂದು ಅದೇ ಅಮೆರಿಕಾ ನೆಲದ ಮೇಲೆ ಮಾನವನು ಸಂಹಾರದ ಮಾರ್ಗವನ್ನು ಒಂದು ವಿಕೃತ ರೂಪದಲ್ಲಿ ವಿಶ್ವವನ್ನೇ ಅಲುಗಾಡಿಸಿದ್ದು  ಆ ಸಂದೇಶವನ್ನು ಮರೆತಿದ್ದರ ಪರಿಣಾಮವಾಗಿತ್ತು. ಅದೇ 9/11ರಂದು ದಾಳಿ ನಡೆದಿತ್ತು. ಭಾರತದಿಂದ ಹೊರಟ 9/11ರ ಆ ವಾಣಿಯನ್ನು ಇತಿಹಾಸವು ಯಾವ ರೂಪದಲ್ಲಿ ಎಚ್ಚರಿಸುತ್ತದೆ ಎಂದು ವಿಶ್ವಕ್ಕೆ ಅರಿವಾಯಿತು. ವಿನಾಶ ಮತ್ತು ವಿಕೃತಿಯ ಮಾರ್ಗದಲ್ಲಿ ಸಾಗಿದ ಈ ಶತಮಾನದ 9/11 ವಿಶ್ವದ ಚರಿತ್ರೆಯಲ್ಲಿ ಯಾವ ರೀತಿ ಚಿಗುರಿಸುತ್ತದೆ ಎಂದು ಅರಿವಾಗಿತ್ತು. ಆದ್ದರಿಂದ ಈ 9/11ರ ದಿನವನ್ನು ಸ್ವಾಮಿ ವಿವೇಕಾನಂದ ಅವರನ್ನು ಬೇರೆ ರೂಪದಿಂದ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ನನಗನ್ನಿಸಿದೆ.
ನೀವು ಬಹಳ ಸೂಕ್ಷ್ಮವಾಗಿ ನೋಡಿದರೆ ವಿವೇಕಾನಂದ ಅವರ ಎರಡು ರೂಪಗಳು ಕಾಣುತ್ತವೆ. ವಿಶ್ವದಲ್ಲಿ ಎಲ್ಲಿಗೇ ಹೋದರೂ, ಎಲ್ಲೇ ಮಾತನಾಡುವ ಅವಕಾಶ ಸಿಕ್ಕರೂ ಅವರು ಬಹಳ ವಿಶ್ವಾಸದಿಂದ, ಬಹಳ ಗೌರವದಿಂದ ಭಾರತದ ಮಹಿಮೆಯನ್ನು, ಭಾರತದ ಮಹಾನ್ ಪರಂಪರೆಗಳನ್ನು, ಭಾರತದ ಮಹಾನ್ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸುವುದನ್ನು ಎಂದೂ ಬಿಡುತ್ತಿರಲಿಲ್ಲ. ಎಂದೂ ತಡೆಯುತ್ತಿರಲಿಲ್ಲ, ಹಿಂಜರಿಕೆಯನ್ನು ಅನುಭವಿಸುತ್ತಿರಲಿಲ್ಲ. ಅದು ವಿವೇಕಾನಂದ ಅವರ ಒಂದು ರೂಪವಾಗಿದ್ದರೆ, ಮತ್ತೊಂದು ರೂಪವಾಗಿ ಭಾರತದಲ್ಲಿ ನಮ್ಮ ಕೆಡುಕುಗಳನ್ನು ಮುಕ್ತವಾಗಿ ಟೀಕಿಸುತ್ತಿದ್ದರು. ನಮ್ಮ ಒಳಗಿನ ದೌರ್ಬಲ್ಯಗಳ ಬಗ್ಗೆ ಕಠಿಣವಾಗಿ ಮಾತನಾಡುತ್ತಿದ್ದರು. ಆಗೆಲ್ಲ ಅವರು ಬಳಸುತ್ತಿದ್ದ ಭಾಷೆಯನ್ನು ಇಂದಿಗೂ ಯಾರಾದರೂ ಪ್ರಯೋಗಿಸಿದರೆ ಇದೇನು ಇವರು ಈ ರೀತಿ ಮಾತನಾಡುತ್ತಿದ್ದಾರಲ್ಲ ಎಂದು ಜನರಿಗೆ ಆಶ್ಚರ್ಯವಾಗುತ್ತದೆ. ಅವರು ಸಮಾಜದ ಎಲ್ಲ ಕೆಡುಕುಗಳ ವಿರುದ್ಧ ದನಿ ಎತ್ತುತ್ತಿದ್ದರು. ಆ ಸಮಯದಲ್ಲಿ ಧಾರ್ಮಿಕತೆಗೆ ಮಹತ್ವ ಹೆಚ್ಚಾಗಿತ್ತು, ಪೂಜೆಪುನಸ್ಕಾರ, ಪರಂಪರೆ ಇವೆಲ್ಲ ಸಹಜವಾಗಿ ಸಾಮಾಜಿಕ ಜೀವನಶೈಲಿಯಾಗಿತ್ತು ಎಂದು ನೀವು ಕಲ್ಪಿಸಿಕೊಳ್ಳಿ. ಇಂತಹ ಸಮಯದಲ್ಲಿ 30 ವರ್ಷ ವಯಸ್ಸಿನ ಯುವಕನೊಬ್ಬ ಪೂಜೆಪುನಸ್ಕಾರಗಳಿಂದ, ದೇವಸ್ಥಾನದಲ್ಲಿ ಪೂಜಾರ್ಚನೆ ಮಾಡುವುದರಿಂದ ದೇವರು ಸಿಗುವುದಿಲ್ಲ ಎಂದು ಧೈರ್ಯವಾಗಿ ನಿಂತು ಹೇಳುತ್ತಿದ್ದರು. ಜನಸೇವೆಯೇ ಜನಾರ್ಧನ ಸೇವೆ, ಹೋಗಿ ಜನತಾ ಜನಾರ್ಧನರ, ಬಡವರ ಸೇವೆ ಮಾಡಿ. ಆಗ ದೇವರು ಸಿಗುತ್ತಾನೆ ಎನ್ನುತ್ತಿದ್ದರು. ಎಂತಹ ಅದ್ಭುತ ಶಕ್ತಿ!
ವಿಶ್ವ ಪರ್ಯಟನೆ ಮಾಡುವಾಗ ಭಾರತದ ಗುಣಗಾನ ಮಾಡುತ್ತಿದ್ದ ವ್ಯಕ್ತಿ ಭಾರತಕ್ಕೆ ಮರಳಿದ ಮೇಲೆ ಇಲ್ಲಿದ್ದ ಕೆಡುಕುಗಳ ಬಗ್ಗೆ ಕಟುವಾಗಿ ಪ್ರಹಾರ ನಡೆಸುತ್ತಿದ್ದರು. ಅವರು ಸಂತ ಪರಂಪರೆಯವರಾಗಿದ್ದರು. ಆದರೆ ಜೀವನದಲ್ಲಿ ಯಾವತ್ತೂ ಗುರುವನ್ನು ಹುಡುಕಿಕೊಂಡು ಹೋಗಿರಲಿಲ್ಲ. ಇದು ಕಲಿಯುವ ಮತ್ತು ಅರ್ಥ ಮಾಡಿಕೊಳ್ಳುವ ವಿಷಯವಾಗಿದೆ. ಅವರು ಗುರುವನ್ನು ಹುಡುಕಿಕೊಂಡು ಹೋಗಿರಲಿಲ್ಲ. ಅವರು ಸತ್ಯದ ಹುಡುಕಾಟದಲ್ಲಿದ್ದರು. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ರಾಮಕೃಷ್ಣ ಪರಮಹಂಸ ಅವರು ವಿವೇಕಾನಂದ ಅವರನ್ನು ಕಾಳಿಮಾತೆಯ ಬಳಿ ಕಳಿಸುತ್ತಾರೆ. ನಿನಗೇನು ಬೇಕೋ ಅದೆಲ್ಲವನ್ನು ಕಾಳಿಮಾತೆಯ ಬಳಿ ಬೇಡು ಎಂದು ಕಳಿಸಿದರು. ನಂತರ ಏನಾದರೂ ಬೇಡಿದೆಯಾ ಎಂದಾಗ ಇಲ್ಲ ಏನೂ ಬೇಡಲಿಲ್ಲ ಎಂದರು. ಕಾಳಿಯ ಎದುರಿಗೆ ನಿಂತಾಗಲೂ ಕೇಳದೆ ಇರುವುದಕ್ಕೆ ಅವರ ಮನಸ್ಸಿನಲ್ಲಿ ಏನು ನಡೆಯಿತು? ಅಂದಿನ ಸಮಾಜದಲ್ಲಿ ಕೆಡುಕುಗಳು ಇರುವುದನ್ನು ಕಂಡುಕೊಳ್ಳುವ ಸಾಮರ್ಥ್ಯ ಅವರಲ್ಲಿ ಹೇಗೆ ಹುಟ್ಟಿತು? ಅವರ ಒಳಗೆ ಅದಾವ ಶಕ್ತಿ ಹುಟ್ಟಿತು. ನಮ್ಮ ಸಮಾಜದ ಅನಿಷ್ಟಗಳ ವಿರುದ್ಧ ನಾವು ಹೋರಾಡಬಾರದೆ? ನಾವು ಈ ಮಾತನ್ನು ಸ್ವೀಕರಿಸುತ್ತೇವೆ. ಅಮೆರಿಕಾದ ನೆಲದಲ್ಲಿ ಸ್ವಾಮಿ ವಿವೇಕಾನಂದ ಅವರು  ” Brothers and Sisters of America ” ಎಂದರು. ನಾವು ಸ್ವತಃ ಕುಣಿದಾಡಿದೆವು. ಆದರೆ ನಮ್ಮ ದೇಶದಲ್ಲೇ ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆಯೇ ಎಂದು ನಾವು ನಮ್ಮ ಯುವಕರಿಗೆ ವಿಶೇಷವಾಗಿ ಕೇಳಲು ಬಯಸುತ್ತೇನೆ. ಹುಡುಗಿಯರನ್ನು ಗೌರವಭಾವದಿಂದ ಕಾಣುವವರಿಗೆ ನಾನು 100 ಸಲ ನಮಿಸುತ್ತೇನೆ. ಆದರೆ ಅವರೊಳಗೆ ಮಾನವರನ್ನು ಕಾಣುವುದಿಲ್ಲ, ಅವರೂ ಮನುಷ್ಯರೇ ಎಂದು ನೋಡುವುದಿಲ್ಲ. ಇವರೂ ದೇವರ ಸೃಷ್ಟಿಯೇ, ನಮಗೆ ಸರಿಸಮಾನರು ಎಂಬ ಭಾವ ನಮ್ಮಲ್ಲಿ ಕಾಣದಿದ್ದರೆ ಸ್ವಾಮಿ ವಿವೇಕಾನಂದ ಅವರ “Brothers and Sisters of America ” ಎಂಬ ಶಿಷ್ಟ ಪದಗಳಿಗೆ ಚಪ್ಪಾಳೆ ಹೊಡೆಯುವ ಹಕ್ಕು ನಮಗೆ ಇದೆಯೇ, ಇಲ್ಲವೇ ಎಂದು ನಾವು 50 ಸಲ ಯೋಚಿಸಬೇಕು.
ವಿವೇಕಾನಂದ ಅವರು ಜನಸೇವೆಯೇ ಜನಾರ್ಧನ ಸೇವೆ ಎಂದವರು. ಒಬ್ಬ ವ್ಯಕ್ತಿ ತನ್ನ 30ನೆಯ ವಯಸ್ಸಿನಲ್ಲಿ ಇಡೀ ವಿಶ್ವದಲ್ಲಿ ನಾವು ಗುಲಾಮರೆನಿಸಿಕೊಂಡ ಕಾಲಘಟ್ಟದಲ್ಲಿ ನಮ್ಮ ದೇಶದ ಉನ್ನತಿಯನ್ನು ಎತ್ತಿ ಹಿಡಿದವರು, ಜೈಕಾರ ಹಾಕಿ ಬಂದವರು. ಎರಡು ವ್ಯಕ್ತಿತ್ವಗಳು ಭಾರತದಲ್ಲಿ ಬೇರೊಂದು ಹೊಸ ಚೇತನ, ಹೊಸ ಶಕ್ತಿಯನ್ನು ತೋರಿಸಿದ್ದವು. ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿತ್ತು ಮತ್ತು ಸ್ವಾಮಿ ವಿವೇಕಾನಂದ ಅವರ 9/11ರ ಶಿಕಾಗೊ ಭಾಷಣ, ಇವೆರಡೂ ವಿಷಯಗಳು ದೇಶದೊಳಗೆ ಚರ್ಚೆಯಾಗತೊಡಗಿದವು. ಭಾರತವು ಗುಲಾಮಗಿರಿಗೆ ಒಳಪಟ್ಟ ಕಾಲದಲ್ಲಿ ಈ ಎರಡೂ ಘಟನೆಗಳು ಒಂದು ನವಚೈತನ್ಯವನ್ನು ಜಾಗೃತಿಗೊಳಿಸಿದ್ದವು. ಈ ಇಬ್ಬರೂ ಬಂಗಾಳದ ಪುತ್ರರೇ ಆಗಿದ್ದರು. ನನ್ನ ದೇಶದ ರವೀಂದ್ರನಾಥ ಟ್ಯಾಗೋರ್ ಅವರು ಭಾರತದ ರಾಷ್ಟ್ರಗೀತೆಯನ್ನು ಬರೆದರು, ಶ್ರೀಲಂಕಾದ ರಾಷ್ಟ್ರಗೀತೆಯನ್ನೂ ಬರೆದರು, ಬಾಂಗ್ಲಾ ದೇಶದ ರಾಷ್ಟ್ರಗೀತೆಯನ್ನೂ ಬರೆದರು ಎಂಬುದನ್ನು ವಿಶ್ವದಲ್ಲಿ ಎಲ್ಲಿಗೆ ಹೋದರೂ ಹೇಳಿದಾಗ ನಮಗೆ ಅದೆಷ್ಟು ಹೆಮ್ಮೆಯಾಗುತ್ತದೆ. ಇಂದು ಇಡೀ ವಿಶ್ವದಲ್ಲಿ ನಮ್ಮದು ಯುವಕರ ದೇಶವಾಗಿದೆ. ನಾವು ನಮ್ಮ ಈ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು ಪೊಳ್ಳು ಸಂಗತಿಯಲ್ಲ ಅಲ್ಲವೇ? ವಿವೇಕಾನಂದ ಅವರು ಶಿಕಾಗೊದಲ್ಲಿ ಭಾಷಣ ಮಾಡಿದಾಗ ಇದ್ದ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನ ಯುವಕರು ಇಲ್ಲಿದ್ದಾರೆ. ವಿಶ್ವದಲ್ಲಿ ಭಾರತದ ಹಿರಿಮೆಯನ್ನು ಸಾರಿದ ವಿವೇಕಾನಂದ ಅವರಿಗಿಂತ ಕಡಿಮೆ ವಯಸ್ಸಿನ ಯುವಕರು ನಮ್ಮ ದೇಶದ ಜನಸಂಖ್ಯೆಯಲ್ಲಿ 65ರಷ್ಟು ಇದ್ದಾರೆ. ಈ ರೀತಿ ಕಡಿಮೆ ವಯಸ್ಸಿನ ಯುವಕರೇ ಶೇಕಡಾ 65ರಷ್ಟಿರುವ ದೇಶದಲ್ಲಿ ವಿವೇಕಾನಂದ ಅವರಿಗಿಂತ ದೊಡ್ಡ ಪ್ರೇರಣೆ ಯಾವುದಿದೆ. ವಿವೇಕಾನಂದ ಅವರು ಕೇವಲ ಉಪದೇಶ ಕೊಡುವವರಾಗಿರಲಿಲ್ಲ, ಕೆಲಸ ಮಾಡಿ ತೋರಿಸಿದವರಾಗಿದ್ದರು. ಅವರು ಕೇವಲ Idea ಗಳನ್ನು Idealism ಆಗಿ ಪರಿವರ್ತಿಸಿದರು ಮತ್ತು ಇವೆರಡರ ಸಂಯೋಜನೆ ಮಾಡಿ ಅದಕ್ಕೆ ಸಾಂಸ್ಥಿಕ ರೂಪ ನೀಡಿದರು. ಇಂದಿಗೂ ಸುಮಾರು 120 ವರ್ಷ ಮೊದಲು ಈ ಮಹಾಪುರುಷ ರಾಮಕೃಷ್ಣ ಮಿಶನ್ ಗೆ ಜನ್ಮ ನೀಡಿದರು. ಅವರು ವಿವೇಕಾನಂದ ಮಿಶನ್ ಸ್ಥಾಪಿಸಲಿಲ್ಲ, ರಾಮಕೃಷ್ಣ ಮಿಶನ್ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ವಿಷಯ ಸಣ್ಣದಿರಬಹುದು, ಆದರೆ ಅವರು ರಾಮಕೃಷ್ಣ ಮಿಶನ್ ಅನ್ನು ಯಾವ ಭಾವದಿಂದ ಸ್ಥಾಪಿಸಿದರು ಎಂದು ಬುದ್ಧಿವಂತರಿಗೆ ಸುಲಭವಾಗಿ ಅರ್ಥವಾಗುತ್ತದೆ. 120 ವರ್ಷಗಳು ಕಳೆದ ನಂತರವೂ ಇಂದಿಗೂ Dilusion ಆಗಲಿ, Diversion ಆಗಲಿ ಆಗಿಲ್ಲ ಎಂದರೆ ಇಂತಹ ಒಂದು ಸಂಸ್ಥೆಗೆ ಅವರು ಅದೆಷ್ಟು ಭದ್ರವಾದ ಬುನಾದಿ ಹಾಕಿರಬಹುದು. ಅಡಿಪಾಯ ಅದೆಷ್ಟು ಬಲವಾಗಿರಬಹುದು. ಅವರ ದೂರದೃಷ್ಟಿ ಎಷ್ಟು ಸ್ಪಷ್ಟವಾಗಿರಬಹುದು. ಕಾರ್ಯ ಯೋಜನೆ ಅದೆಷ್ಟು ಶಕ್ತಿಶಾಲಿಯಾಗಿರಬಹುದು. ಭಾರತದ ವಿಷಯದಲ್ಲಿ ಪ್ರತಿ ವಸ್ತುವಿನ ಬಗ್ಗೆ ಎಷ್ಟು ಗಾಢವಾದ ಅನುಭೂತಿ ಇರಬಹುದು. ಆದ್ದರಿಂದಲೇ ಒಂದು ಸಂಸ್ಥೆಯು ಸ್ಥಾಪನೆಯಾಗಿ 120 ವರ್ಷಗಳ ನಂತರವೂ ಆ ಆಂದೋಲನವು ಇಂದಿಗೂ ಅದೇ ಭಾವದೊಂದಿಗೆ ಸಾಗುತ್ತಿದೆ.
ಈ ಮಹಾನ್ ಪರಂಪರೆಯಲ್ಲಿ ಕೆಲವು ಕ್ಷಣ ಭಾಗವಹಿಸುವ ಅವಕಾಶ ನನಗೂ ದೊರೆತಿದ್ದುದು ನನ್ನ ಸೌಭಾಗ್ಯವಾಗಿದೆ. ವಿವೇಕಾನಂದ ಅವರ ಭಾಷಣದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನನಗೆ ಶಿಕಾಗೊಗೆ ಹೋಗುವ ಸೌಭಾಗ್ಯ ದೊರೆತಿತ್ತು. ಶತಮಾನೋತ್ಸವದ ಆಚರಣೆ ನಡೆದ ಸಭಾಂಗಣಕ್ಕೆ ಹೋಗುವ ಅದೃಷ್ಟ ನನ್ನದಾಗಿತ್ತು. ಆ ಶತಮಾನೋತ್ಸವ ಆಚರಣೆಯಲ್ಲಿ ನನಗೂ ಸಭಿಕನಾಗಿ ಹೋಗುವ ಅದೃಷ್ಟ ದೊರಕಿತ್ತು. ಆಗ ವಿಶ್ವದ ಭಾವ ಹೇಗಿತ್ತು, ಆ ಕ್ಷಣಗಳು ಯಾವ ಭಾವವಿತ್ತು ಎಂದು ಕಲ್ಪನೆ ಮಾಡಿಕೊಳ್ಳಬಹುದು.
ಯಾವುದೇ ಒಂದು ಭಾಷಣವು 125 ವರ್ಷಗಳು ಕಳೆದ ನಂತರವೂ ಜೀವಂತವಾಗಿದೆ, ಜಾಗೃತವಾಗಿದೆ ಮತ್ತು ಜಾಗೃತಿ ಮೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂದು ಇಂತಹ ಒಂದು ಮಹಾನ್ ಪರಂಪರೆಯಲ್ಲಿ ಪಾಲುಗೊಳ್ಳುವ ಅವಕಾಶ ನಮಗೆ ದೊರೆತಿದೆ.
ನಾನು ಈ ಸಭಾಂಗಣಕ್ಕೆ ಕಾಲಿಟ್ಟಾಗ ಎಲ್ಲರೂ ಶಕ್ತಿ ಒಗ್ಗೂಡಿಸಿ ವಂದೇಮಾತರಂ, ವಂದೇಮಾತರಂ ಎಂದು ಹೇಳುವುದು ಕೇಳಿಸುತ್ತಿತ್ತು. ಆಗ ರೋಮರೋಮಗಳು ಎದ್ದು ನಿಲ್ಲುತ್ತವೆ. ಹೃದಯದ ಒಳಗೆ ದೇಶಭಕ್ತಿಯ ಭಾವ ಸಹಜವಾಗಿಯೇ ಜಾಗೃತವಾಗುತ್ತದೆ. ಆದರೆ ನಾನು ಈ ಸಭೆಯನ್ನು ಕೇಳುತ್ತಿಲ್ಲ, ಇಡೀ ಭಾರತವನ್ನು ಕೇಳುತ್ತಿದ್ದೇನೆ. ನಮಗೆ ವಂದೇಮಾತರಂ ಎಂದು ಹೇಳುವ ಹಕ್ಕು ಇದೆಯೇ? ನನ್ನ ಈ ಮಾತು ಬಹಳ ಜನರಿಗೆ ಘಾಸಿಯುಂಟು ಮಾಡಬಹುದು ಎಂದು ನನಗೆ ಗೊತ್ತು. ನಮಗೆ ವಂದೇಮಾತರಂ ಎಂದು ಹೇಳುವ ಹಕ್ಕು ಇದೆಯೇ ಎಂದು ನಾವು 50 ಸಲ 50 ಸಲ ಯೋಚಿಸಬೇಕು. ನಾವು ಪಾನ್ ಬೀಡಾ ತಿಂದು ಭಾರತಮಾತೆಯ ಮೇಲೆ ಉಗಿಯುತ್ತೇವೆ, ಮತ್ತೆ ವಂದೇಮಾತರಂ ಹೇಳುತ್ತೇವೆ. ನಾವು ಪ್ರತಿದಿನ ಇಡೀ ಗಲೀಜನ್ನು ಭಾರತಮಾತೆಯ ಮೇಲೆ ಎಸೆಯುತ್ತೇವೆ, ಮತ್ತೆ ವಂದೇಮಾತರಂ ಹೇಳುತ್ತೇವೆ. ದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಭಾರತಮಾತೆಯ ಆ ಮಕ್ಕಳಿಗೆ ಮಾತ್ರ ವಂದೇಮಾತರಂ ಎಂದು ಹೇಳುವ ಹಕ್ಕಿದೆ. ಆದ್ದರಿಂದ ನಮ್ಮ ಭಾರತಮಾತೆಯೆಂದರೆ ಸುಜಲಾಂ ಸುಫಲಾಂ ಭಾರತಮಾತೆ ಎಂದು ನಾವು ಖಂಡಿತವಾಗಿ ಯೋಚಿಸಬೇಕು. ನಾವು ಸ್ವಚ್ಛ ಮಾಡಲಿ ಅಥವಾ ಮಾಡದಿರಲಿ ಗಲೀಜು ಮಾಡುವ ಹಕ್ಕು ನಮಗಿಲ್ಲ. ಗಂಗೆಯನ್ನು ಪೂಜಿಸುತ್ತೇವೆ, ಗಂಗೆಯಲ್ಲಿ ಮುಳುಗಿ ಪಾಪ ತೊಳೆದುಕೊಳ್ಳಲು ಮುಂದಾಗುತ್ತೇವೆ. ನಮ್ಮ ತಂದೆತಾಯಿಗೆ ಒಂದು ಸಲ ಗಂಗೆ ಸ್ನಾನ ಮಾಡಿಸಬೇಕು ಎಂದು ಯುವಜನರು ಯೋಚಿಸುತ್ತಾರೆ, ಆದರೆ ಅದೇ ಗಂಗೆಯನ್ನು ಮಲಿನಗೊಳಿಸುವುದನ್ನು ತಡೆಯಲು ಮುಂದಾಗುತ್ತೇವೆಯೆ? ವಿವೇಕಾನಂದ ಅವರು ಇಂದು ಜೀವಂತವಾಗಿದ್ದರೆ ಈ ವಿಷಯವಾಗಿ ನಮ್ಮನ್ನು ಟೀಕಿಸುತ್ತಿರಲಿಲ್ಲವೇ? ವೈದ್ಯರಿದ್ದಾರೆ, ಅತ್ಯುತ್ತಮ ವೈದ್ಯರಿದ್ದಾರೆ, ಆರೋಗ್ಯ ಪಡೆಯಲು ಹೋಗುತ್ತೇವೆ ಎಂದು ನಮಗೆ ಅನ್ನಿಸಿದೆ, ಹಾಗಾಗಿ ನಾವು ಏನಾದರೂ ಹೇಳುವುದಿಲ್ಲ. ನಮ್ಮ ಬಳಿ ಉತ್ತಮಕ್ಕಿಂತ ಉತ್ತಮ ವೈದ್ಯರಿರುವುದರಿಂದ ನಾವು ಆರೋಗ್ಯವಾಗಿಲ್ಲ.
ನಮ್ಮ ಕೆಲಸದವರು ಸ್ವಚ್ಛತೆಯ ಕೆಲಸ ಮಾಡುತ್ತಿರುವುದಕ್ಕೆ ನಾವು ಆರೋಗ್ಯವಾಗಿದ್ದೇವೆ. ವೈದ್ಯರಿಗಿಂತಲೂ ಹೆಚ್ಚಾಗಿ ಇವರ ಬಗ್ಗೆ ಗೌರವವಿದ್ದರೆ ವಂದೇಮಾತರಂ ಹೇಳುವುದರಲ್ಲಿ ಆನಂದ ಸಿಗುತ್ತದೆ. ಈ ಕಾರಣಕ್ಕೇ ನಾನು ಮೊದಲು ಶೌಚಾಲಯ, ನಂತರ ಶಿವಾಲಯ ಎಂದು ಒಂದು ಸಲ ಹೇಳಿದ್ದು ನನಗೆ ನೆನಪಿದೆ. ಬಹಳಷ್ಟು ಜನರು ನನ್ನ ಕೂದಲನ್ನೇ ಕಿತ್ತರು. ಆದರೆ ನಮ್ಮ ದೇಶದಲ್ಲಿ ಶೌಚಾಲಯ ಇಲ್ಲದಿದ್ದರೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿರುವ ಹೆಣ್ಣು ಮಕ್ಕಳಿದ್ದಾರೆ. ಸಾವಿರಾರು ವರ್ಷಗಳಿಂದ ಕದಲದೆ ನಿಂತಿದ್ದೇವೆ. ನಾವು ಕಾಲಕ್ಕೆ ತಕ್ಕಂತೆ ಬದಲಾಗುವ ಜನರು. ನಮ್ಮ ಕೆಡುಕುಗಳ ವಿರುದ್ಧ ಹೋರಾಡುವುದಕ್ಕೆ ಮುಂದಾಳತ್ವ ವಹಿಸುವ ಜನರಿಗೆ ನಾವು ನಮ್ಮ ಒಳಗೆ ಜನ್ಮ ಕೊಡುತ್ತೇವೆ ಮತ್ತು ಇದೇ ನಮ್ಮ ಶಕ್ತಿಯಾಗಿದೆ. ನಾವು ಸ್ವಾಮಿ ವಿವೇಕಾನಂದ ಅವರನ್ನು ಯಾಕೆ ಸ್ಮರಿಸುತ್ತೇವೆ ಎಂದರೆ ಅಂದಿನ 9/11 ಕೇವಲ ಶಬ್ದಗಳ ಭಂಡಾರವಾಗಿರಲಿಲ್ಲ. ಅದೊಂದು ತಪಸ್ವಿಯ ವಾಣಿಯಾಗಿತ್ತು, ಒಂದು ತಪೋವಾಣಿಯಾಗಿತ್ತು. ಅದನ್ನು ಅವರು ವಿಶ್ವದ ಮುಂದೆ ಪ್ರಸ್ತುತಪಡಿಸುತ್ತಿದ್ದರು. ಇಲ್ಲವಾದರೆ ಭಾರತವು ಹಾವು ಚೇಳುಗಳ ದೇಶ, ಮಾಟಮಂತ್ರ ಮಾಡುವ ದೇಶ, ಏಕಾದಶಿಯಂದು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಹೇಳುವ ದೇಶ, ಇವೇ ನಮ್ಮ ಗುರುತುಗಳಾಗಿದ್ದವು. ವಿವೇಕಾನಂದ ಅವರು ನಮ್ಮ ಸಂಸ್ಕೃತಿಯು ಅವರು ಸಂಸ್ಕೃತಿಗಿಂತ ಕೀಳಲ್ಲ ಎಂದು ವಿಶ್ವದ ಮುಂದೆ ಹೇಳಿದ್ದರು. ಏನು ತಿನ್ನಬಾರದು, ಏನು ತಿನ್ನಬೇಕು ಎನ್ನುವುದೇ ನಮ್ಮ ದೇಶದ ಸಂಸ್ಕೃತಿಯಲ್ಲ, ಅದು ನಮ್ಮ ವ್ಯವಸ್ಥೆಗಳ ಒಂದು ಭಾಗವಾಗಿದೆ, ನಮ್ಮ ಸಾಂಸ್ಕೃತಿಕ ಪರಂಪರೆ ವಿಭಿನ್ನವಾಗಿದೆ. – ಆತ್ಮವತ್ ಸರ್ವ ಭೂತೇಷು  –  ಎಂಬುದು ನಮ್ಮ ವಿಚಾರಧಾರೆಯಾಗಿದೆ. ಅಹಂ ಬ್ರಹ್ಮಾಸ್ಮಿ ಎನ್ನುವುದು ಸುಮ್ಮನೆ ಹೊರಟ ಮಾತಲ್ಲ. ಗುಣತಮ್ ವಿಶ್ವ್ ಮಾರ್ಯಂ ಎಂಬ ಈ ಆರ್ಯ ಶಬ್ದಗಳು ನಮ್ಮ ಇಡೀ ವಿಶ್ವವನ್ನು ಸುಸಂಸ್ಕೃತಗೊಳಿಸುತ್ತವೆ. ಯಾವುದೇ ಜಾತಿ ಪರಿವರ್ತನೆ, ಧರ್ಮ ಪರಿವರ್ತನೆಗಾಗಿ ಅಲ್ಲ ಎಂದು ಇದರರ್ಥ. ಈ ಮಹಾನ್ ಪರಂಪರೆಯನ್ನು ಹೊಂದಿರುವ ಪರಿಸರದಲ್ಲಿ ಹುಟ್ಟಿ ಬೆಳೆದವರಾಗಿದ್ದೇವೆ, ಇದೆಲ್ಲ ಈ ಮಣ್ಣಿನಲ್ಲಿ ಹುಟ್ಟಿದ್ದಾಗಿದೆ.
ಶತಮಾನಗಳ ತಪಸ್ಸಿನಿಂದ ಹೊರಟ ವಸ್ತುಗಳು. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಇದರೊಳಗೆ ಸ್ವಲ್ಪವಾದರೂ ಸೇರಿದ್ದಾರೆ. ಭಿಕ್ಷೆ ಬೇಡುವವನೂ ಜ್ಞಾನವನ್ನು ಹೊಂದಿರುವಂತಹ ದೇಶವಿದು. ಅವರು ಭಿಕ್ಷೆ ನೀಡಿದವರಿಗೂ ಒಳ್ಳೆಯದಾಗಲಿ, ನೀಡದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಸ್ವಾಮಿ ವಿವೇಕಾನಂದ ಅವರೊಳಗೆ ಆತ್ಮಗೌರವದ ಭಾವವಿದ್ದುದೇ ಅವರ ಯಶಸ್ಸಿನ ಮೂಲಮಂತ್ರವಾಗಿತ್ತು. ಇಲ್ಲಿ ಆತ್ಮ ಎಂದರೆ ವ್ಯಕ್ತಿಯಲ್ಲ, ಅವರು ಪ್ರತಿನಿಧಿಸುತ್ತಿದ್ದ ಈ ದೇಶದ ಮಹಾನ್ ಪರಂಪರೆಯನ್ನು ಆತ್ಮಗೌರವದ ರೂಪದಲ್ಲಿ ಪ್ರಸ್ತುತಪಡಿಸಿದ್ದರು. ನಾವು ಏನನ್ನು ಹೇಳುತ್ತೇವೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೆ? ಸುಂದರ ಪ್ರಾಕೃತಿಕ ವಾತಾವರಣವಿರುವ, ಸ್ವಚ್ಛವಾಗಿರುವ, ಮನಸ್ಸಿಗೆ ಬಹಳ ಹಿಡಿಸಿದ ಒಂದು ಒಳ್ಳೆಯ ಜಾಗಕ್ಕೆ ಹೋದಾಗ ನಮ್ಮ ಬಾಯಿಂದ ಮೊದಲು ಹೊರಡುವ ಮಾತೇ ಇದು ನಮ್ಮ ಭಾರತ, ಹಾಗೆಂದು ಹೇಳುತ್ತೇವೊ, ಇಲ್ಲವೊ? ಹೀಗೆ ಅನ್ನಿಸುತ್ತದೊ, ಇಲ್ಲವೊ ಹೇಳಿ. ದೇಶದ ಹೊರಗಡೆ ಹೋದಾಗ ಆತ್ಮಗೌರವದಿಂದ ಬೆಳೆದು ದೊಡ್ಡವರಾಗಿದ್ದರೆ ಇಂತಹ ಭಾವ ಮೂಡುವುದಿಲ್ಲ, ನಮ್ಮ ದೇಶದಲ್ಲೂ ಇದೇ ಇದೆ, ಹೀಗೇ ಇದೆ ಎಂದು ನಮಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಾಗುತ್ತದೆ.
ಗೆಳೆಯರೆ, ಇಂದಿನ ಸಂದರ್ಭದಲ್ಲಿ ವಿವೇಕಾನಂದ ಅವರತ್ತ ನೋಡಿ ಎಂದು ನಾನು ನಿಜವನ್ನು ಹೇಳುತ್ತೇನೆ. Make in India, Make in India ಎಂದು ನಾನು ಹೇಳಿದಾಗ ಬಹುತೇಕ ಜನರೂ ಇದನ್ನೇ ಹೇಳುತ್ತಾರೆ, ಆದರೆ ಇದನ್ನು ವಿರೋಧಿಸುವ ಜನರೂ ಇದ್ದಾರೆ. ಕೆಲವರು ಹೇಳುತ್ತಾರೆ Make in India ಬೇಡ, Made in India ಬೇಕು ಎಂದು. ದೊಡ್ಡ ದೊಡ್ಡ ಬುದ್ಧಿವಂತ ಜನರು ಇಂತಹ ಮಾತುಗಳನ್ನು ಹೇಳುತ್ತಾರೆ. ಆದರೆ ಸ್ವಾಮಿ ವಿವೇಕಾನಂದ ಮತ್ತು ಜಮ್ ಷೆಡ್ ಟಾಟಾ ಅವರ ನಡುವೆ ನಡೆದ ಮಾತುಕತೆಯನ್ನು ಗಮನಿಸಬೇಕು. ಅವರಿಬ್ಬರ ನಡುವೆ ನಡೆದ ಪತ್ರವ್ಯವಹಾರವನ್ನು ಯಾರಾದರೂ ಓದಿದ್ದರೆ ಆ ಸಮಯದಲ್ಲಿ ಗುಲಾಮಗಿರಿಗೆ ಒಳಗಾದ ಭಾರತವಿತ್ತು ಎಂಬುದು ಗೊತ್ತಾಗುತ್ತದೆ. ಅಂತಹ ಸಮಯದಲ್ಲೂ 30 ವರ್ಷ ವಯಸ್ಸಿನ ಯುವಕ ವಿವೇಕಾನಂದ ಅವರು ಜಮ್ ಷೆಡ್ ಟಾಟಾ ಅವರಂತಹ ವ್ಯಕ್ತಿಗೆ ಭಾರತದಲ್ಲಿ ಉದ್ಯಮ ಸ್ಥಾಪಿಸಲು ಹೇಳುತ್ತಾರೆ. Make in India ಮಾಡು ಎನ್ನುತ್ತಾರೆ. ವಿವೇಕಾನಂದ ಅವರ ಈ ಮಾತುಗಳು ನನ್ನ ಪಾಲಿಗೆ ಪ್ರೇರಣೆಯಾದವು ಎಂದು ಜಮ್ ಷೆಡ್ ಜಿ ಬರೆದಿದ್ದಾರೆ. ಇದೇ ಕಾರಣಕ್ಕೆ ನಾನು ಭಾರತದ ಒಳಗೆ ಭಾರತದ ಉದ್ಯೋಗಗಳನ್ನು ಸೃಷ್ಟಿಸಲು ಬಂದೆ ಎಂದು ಸ್ವತಃ ಹೇಳಿದ್ದಾರೆ.
ಭಾರತದಲ್ಲಿ ಕೃಷಿ ಕ್ರಾಂತಿಯನ್ನು ಹೇಗೆ ಮಾಡಬೇಕು ಎಂಬ ವಿವೇಕಾನಂದ ಅವರ ಮಾತಿನಲ್ಲಿ ನಮ್ಮ ದೇಶದಲ್ಲಿ ಮೊದಲ ಕೃಷಿ ಕ್ರಾಂತಿಯ ವಿಚಾರಗಳು ಕಾಣುತ್ತವೆ. ಪ್ರಥಮ ಕೃಷಿ ಕ್ರಾಂತಿಯ ಮುಂದಾಳು ಎಂದು ಭಾವಿಸಲಾಗುವ ಡಾಕ್ಟರ್ ಸೇನ್ ಅವರು ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಅದಕ್ಕೆ ವಿವೇಕಾನಂದ ಕೃಷಿ ಸಂಶೋಧನಾ ಕೇಂದ್ರ ಎಂಬ ಹೆಸರಿಟ್ಟಿದ್ದರು. ಅಂದರೆ ಭಾರತದಲ್ಲಿ ಕೃಷಿಯನ್ನು ಆಧುನೀಕರಣಗೊಳಿಸಬೇಕು, ವೈಜ್ಞಾನಿಕ ಸಂಶೋಧನೆಗಳನ್ನು ಮಾಡಬೇಕು ಎಂದು ವಿವೇಕಾನಂದ ಅವರು ಆ ಕಾಲದಲ್ಲಿ ಯೋಚಿಸುತ್ತಿದ್ದರು.
ನಮ್ಮ ಯುವಜನರು ವಿಶ್ವವಿದ್ಯಾನಿಲಯಕ್ಕೆ ಹೋದಾಗ ಈ ವಿಷಯವಾಗಿ ಚರ್ಚೆ ಮಾಡುತ್ತಾರೆ. ಸೆಪ್ಟೆಂಬರ್ 11ರ ಈ ದಿನ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿಯ ಸಮಾರಂಭವೂ ಆಗಿದೆ. ಮಹಾತ್ಮ ಗಾಂಧಿ ಅವರಿಗೆ ‘ಜೀ’ ಎಂದು ಮಾಡಿ ತೋರಿಸಿದ ಆಚಾರ್ಯ ವಿನೋಬಾ ಭಾವೆ ಅವರ ಜನ್ಮ ಜಯಂತಿಯೂ ಆಗಿದೆ. ದೀನದಯಾಳ್ ಅವರ ವಿಚಾರಗಳನ್ನು ಕಂಡವರು, ಕೇಳಿದವರು, ಓದಿದವರು ಇದ್ದಾರೆ. ಇದೇ ವಿಚಾರಗಳನ್ನು ಆಧುನಿಕ ಸಂದರ್ಭದಲ್ಲಿ ಪ್ರಗತೀಕರಣ, ಅಂತ್ಯೋದಯ ಎನ್ನುತ್ತೇವೆ. ಜನ ಸೇವೆಯೇ ಜನಾರ್ಧನ ಸೇವೆ ಎಂಬುದನ್ನು ವಿವೇಕಾನಂದ ಅವರು ಹೇಳುತ್ತಿದ್ದರು. ಆಚಾರ್ಯ ವಿನೋಬಾ ಭಾವೆ ಅವರ ಅತ್ಯಂತ ನಿಕಟವರ್ತಿಯಾಗಿದ್ದವರು ದಾದಾ ಧರ್ಮಾಧಿಕಾರಿ. ಗಾಂಧೀಜಿ ಅವರು ಏನನ್ನು ಯೋಚಿಸುತ್ತಿದ್ದರೊ, ಹೇಳುತ್ತಿದ್ದರೊ ಅದನ್ನು ಆಚರಣೆಗೆ ತರುವ ಕಾರ್ಯವನ್ನು ವಿನೋಬಾ ಭಾವೆ ಅವರು ತಮ್ಮ ಜೀವನದಲ್ಲಿ ಮಾಡಿದರು. ಹಾಗೆಯೇ ವಿನೋಬಾ ಭಾವೆ ಅವರು ಯೋಚಿಸುತ್ತಿದ್ದುದನ್ನು ಮಾತಿನ ರೂಪದಲ್ಲಿ ಹೇಳುವ ಕಾರ್ಯ ಮಾಡಿದ್ದನ್ನು ದಾದಾ ಧರ್ಮಾಜಿ ಅವರ ಚಿಂತನೆಗಳಲ್ಲಿ ಕಾಣಬಹುದು. ದಾದಾ ಧರ್ಮಾಜಿ ಅವರು ಒಂದು ಒಳ್ಳೆಯ ಪುಸ್ತಕವನ್ನು ಸ್ವಾರಸ್ಯಕವಾಗಿ ಬರೆದಿದ್ದಾರೆ. ಒಬ್ಬ ಯುವಕ ಅವರ ಪರಿಚಿತರ ಮೂಲಕ ಕೆಲಸ ಕೇಳಿಕೊಂಡು ಬಂದಿದ್ದ. ಧರ್ಮಾಧಿಕಾರಿ ಅವರು ಶಿಫಾರಸ್ಸು ಮಾಡಿದರೆ, ಸ್ವಲ್ಪ ಸಹಾಯ ಮಾಡಿದರೆ ಎಲ್ಲಾದರೂ ಕೆಲಸ ಸಿಗಬಹುದು ಎಂಬುದು ಅವನ ಆಸೆಯಾಗಿತ್ತು. ನಿನಗೇನು ಬರುತ್ತದೆ ಎಂದು ಧರ್ಮಾಜಿ ಆ ಯುವಕನನ್ನು ಕೇಳಿದಾಗ ಆತ ತಾನು ಪದವೀಧರ ಎಂದು ಹೇಳಿದ. ಆಗ ಅವರು ಮತ್ತೊಮ್ಮೆ ನಿನಗೆ ಏನು ಬರುತ್ತದೆ ಎಂದು ಕೇಳಿದಾಗ ಆಗಲೂ ಅವನು ತಾನು ಪದವೀಧರ ಎಂಬ ಮಾತನ್ನೇ ಹೇಳಿದ. ಧರ್ಮಾಧಿಕಾರಿ ಅವರು ಏನು ಕೇಳುತ್ತಿದ್ದಾರೆ ಎಂದೇ ಅವನಿಗೆ ಅರ್ಥವಾಗಲಿಲ್ಲ. ಮೂರನೆಯ ಸಲ ನಿನಗೇನು ಬರುತ್ತದೆ ಎಂದು ಕೇಳಿದಾಗ ಆತ ತಾನು ಪದವೀಧರ ಎಂಬ ಮಾತನ್ನು ಮತ್ತೆ ಹೇಳದೆ ಸುಮ್ಮನಿದ್ದ. ಆಗ ಧರ್ಮಾಧಿಕಾರಿ ಅವರು ನಿನಗೆ ಟೈಪಿಂಗ್ ಮಾಡಲು ಬರುತ್ತದೆಯೆ ಎಂದು ಕೇಳಿದಾಗ ಆತ ಇಲ್ಲ ಎಂದು ಉತ್ತರಿಸಿದ. ಅಡುಗೆ ಮಾಡಲು ಬರುತ್ತದೆಯೇ ಎಂದು ಕೇಳಿದಾಗ ಇಲ್ಲ ಎಂಬ ಉತ್ತರ ಬಂದಿತು. ಪೀಠೋಪಕರಣಗಳನ್ನು ತಯಾರಿಸಲು ಬರುತ್ತದೆಯೇ ಎಂದು ಕೇಳಿದಾಗ ಇಲ್ಲವೆಂಬ ಉತ್ತರ ಬಂದಿತು. ಟೀ, ತಿಂಡಿ ತಯಾರಿಸಲು ಬರುವುದೇ ಎಂಬ ಪ್ರಶ್ನೆಗೆ ಇಲ್ಲ ನನಗೆ ಬರುವುದಿಲ್ಲ, ನಾನಂತೂ ಪದವೀಧರನಾಗಿದ್ದೇನೆ ಎಂದು ಆ ಯುವಕ ಹೇಳಿದ. ಈಗ ನೋಡಿ, ವಿವೇಕಾನಂದ ಅವರ ಪ್ರತಿಯೊಂದು ವಾಣಿಯಲ್ಲೂ ನಮ್ಮ ಮನಸ್ಸನ್ನು ದೊಡ್ಡ ರೀತಿಯಲ್ಲಿ ಅಲುಗಾಡಿಸುವಂತಹ ಶಕ್ತಿಯಿತ್ತು. ಅವರು ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ‘Education is not the amount of information that we put into your brain and runs ride the undigested all your life’ ಎಂದು ಬಹಳ ಸ್ವಾರಸ್ಯಕರವಾಗಿ ಹೇಳಿದ್ದರು. ಅವರು ಇಂತಹ ಜ್ಞಾನದ ಖಜಾನೆಯನ್ನು ತುಂಬಿಸುತ್ತಾರೆ, ಇದನ್ನು ಅರಗಿಸಿಕೊಳ್ಳಲಾಗದು. ‘It be have assimilated five ideas and made than your life and character you have more education than any man who has got by heart whole library’. ಅಂದರೆ ಇಡೀ ಗ್ರಂಥಾಲಯ ತುಂಬಿದೆ, ಎಲ್ಲರೂ ಮನಸ್ಸಿನಲ್ಲಿ ಐದು ಸಿದ್ಧಾಂತಗಳನ್ನು ಇಟ್ಟುಕೊಂಡು ಜೀವಿಸುತ್ತಾರೆ. ಅಂದರೆ ಇದರರ್ಥ ಅವರು ಜ್ಞಾನ ಮತ್ತು ಕೌಶಲವನ್ನು ಬೇರೆ ಮಾಡಿದ್ದಾರೆ. ಇಂದು ಇಡೀ ವಿಶ್ವದ ಕೈಯಲ್ಲಿ ಸರ್ಟಿಫಿಕೇಟ್ ಇದ್ದರೆ ಅದಕ್ಕೆ ಮಹತ್ವವಿದೆ. ಅಂದರೆ ಅವರಲ್ಲಿ ಕೌಶಲವಿದೆ, ಅದಕ್ಕೆ ಮಹತ್ವವಿದೆ. ಈ ಸರ್ಕಾರವು ಕೌಶಲ ಅಭಿವೃದ್ಧಿ ಎಂಬ ಅದೇ ವಿಚಾರವನ್ನು ಇಟ್ಟುಕೊಂಡು ಮುಂದೆ ಬರಲು ಪ್ರಯತ್ನಿಸುತ್ತಿದೆ.
ನಮ್ಮ ದೇಶದಲ್ಲಿ ಕೌಶಲ ಅಭಿವೃದ್ಧಿ ಎಂಬುದು ಹೊಸ ವಿಷಯವಲ್ಲ, ಆದರೆ ಹಿಂದೆ ಅದು ವಿವಿಧ ಇಲಾಖೆಗಳಲ್ಲಿ ಬಿದ್ದಿರುತ್ತಿತ್ತು, ಅದಕ್ಕೆ ಮಾಲೀಕರು ಯಾರೂ ಇರಲಿಲ್ಲ. ಇನ್ನೊಬ್ಬರ ಮರ್ಜಿಯಂತೆ ಅವರು ತೋರಿಸಿದ ದಿಕ್ಕಿನಲ್ಲಿ ನಡೆಯುತ್ತಿತ್ತು. ನಾವು ಬಂದ ಮೇಲೆ ಈ ಎಲ್ಲ ಕೌಶಲಗಳ ಅಭಿವೃದ್ಧಿಯನ್ನು ಒಟ್ಟಿಗೇ ಸೇರಿಸಿ ಅದಕ್ಕೆ ಪ್ರತ್ಯೇಕ ಸಚಿವಾಲಯ ಮಾಡಿದೆವು, ಪ್ರತ್ಯೇಕ ಇಲಾಖೆ ಮಾಡಿದೆವು. ನಮ್ಮ ದೇಶದಲ್ಲಿ ಯುವಜನರು ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಅವರು ಎಂದಿಗೂ ಬೇರೆಯವರನ್ನು ಅವಲಂಬಿಸದಂತೆ ಮಾಡಿದೆವು. ನನ್ನ ದೇಶದ ಯುವಜನರು ಉದ್ಯೋಗ ಅರಸುವವರಾಗಬಾರದು, ಉದ್ಯೋಗ ಕೊಡುವಂತವರಾಗಬೇಕು. ನನ್ನ ದೇಶದ ಯುವಜನರು ಬೇಡುವವರಾಗಬಾರದು, ಕೊಡುವಂತಹವರಾಗಬೇಕು. ಆದ್ದರಿಂದ ನಾನು ಇಂದು ಸ್ವಾಮಿ ವಿವೇಕಾನಂದ ಅವರ ವಿಚಾರಗಳನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಆವಿಷ್ಕಾರದ ನಂತರ, ಸಂಶೋಧನೆಯ ನಂತರ ಕೆಲವು ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಅವರು ಕರೆ ನೀಡುತ್ತಾರೆ. ಅದು ಎಷ್ಟೇ ಮಹಾನ್ ಆಗಿರಲಿ, ಎಷ್ಟೇ ಒಳ್ಳೆಯದಾಗಿರಲಿ ಅದನ್ನು ಬಿಡಬೇಕೆಂಬ ಕರೆ ಕೊಡುತ್ತಾರೆ.
ಸಾಮಾಜಿಕ ಜೀವನದಲ್ಲಿ ಪ್ರಗತಿ ಹೊಂದಬೇಕೆಂದರೆ ಅದು ನಿತ್ಯ ನೂತನವಾಗಿರಬೇಕು, ನಿತ್ಯ ನೂತನ ಪ್ರಾಣವಾಗಿರಬೇಕು. ಆಗಲೇ ನಾವು ಸಫಲರಾಗುತ್ತೇವೆ. ಆದ್ದರಿಂದ ನಮ್ಮ ದೇಶದ ಯುವ ಪೀಳಿಗೆಯಲ್ಲಿ ಸಾಹಸದ ಮನೋಭಾವವಿರಬೇಕು, ಆವಿಷ್ಕಾರದ ಮನೋಭಾವ ಕಡಿಮೆ ಮಾಡುವ ಕೆಲವು ಜನರಿಗೆ ತಾನು ಇದರಲ್ಲಿ ಸೋತರೆ ಎಂಬ ಭಯವಿರುತ್ತದೆ. ಆದರೆ ಸೋಲಿಗೆ ಅಂಜಬೇಕಿಲ್ಲ, ವೈಫಲ್ಯಗಳನ್ನು ಕಾಣದೆಯೇ ಯಶಸ್ಸನ್ನು ಪಡೆದ ಯಾವುದೇ ವ್ಯಕ್ತಿಯನ್ನು ಪ್ರಪಂಚದಲ್ಲಿ ನೋಡಿದ್ದೀರಾ? ಸೋಲೇ ಗೆಲುವಿನ ಮೆಟ್ಟಿಲು. ಆದ್ದರಿಂದ ಗೆಳೆಯರೆ, ವೈಫಲ್ಯಕ್ಕೆ ಹೆದರುವುದು ಜೀವನವಲ್ಲ. ಸ್ನೇಹಿತರೆ, ದಡದಲ್ಲಿ ನಿಂತವನು ಮುಳುಗುವುದಿಲ್ಲ. ನೀರಿಗೆ ಇಳಿದವನು ಮುಳುಗುತ್ತಾನೆ, ಹಾಗೆ ಮುಳುಗುತ್ತಲೇ ಈಜುವುದನ್ನು ಕಲಿಯುತ್ತಾನೆ. ದಡದಲ್ಲಿ ನಿಂತವನು ಅಲೆಗಳನ್ನು ಎಣಿಸುತ್ತಲೇ ಜೀವನ ಕಳೆದುಬಿಡುತ್ತಾನೆ. ಅದೇ ಅಲೆಗಳನ್ನು ದಾಟುವ ಸಾಮರ್ಥ್ಯ ಬಂದಾಗ ನದಿ, ಕೆರೆ, ಸಮುದ್ರಕ್ಕೆ ಜಿಗಿಯುವ ಆಸೆ ಇಟ್ಟುಕೊಂಡು ಮುನ್ನಡೆಯುತ್ತಾನೆ. ಸ್ವಾಮಿ ವಿವೇಕಾನಂದ ಅವರು ಇಂತಹ ಯುವಜನರು ಇರಬೇಕೆಂಬ ಅಪೇಕ್ಷೆ ಹೊಂದಿದ್ದವರು. ಪ್ರಸ್ತುತ ಭಾರತ ಸರ್ಕಾರವು ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಮತ್ತು ಮುದ್ರಾ ಯೋಜನೆಗಳ ಮೂಲಕ ಯಾವುದೇ ಭದ್ರತೆ ನೀಡದೆ ಸಾಲ ದೊರಕಿಸಿಕೊಡುವ ಅಭಿಯಾನವನ್ನು ನಡೆಸುತ್ತಿದೆ. ನನ್ನ ದೇಶದ ಯುವಜನರು ನನ್ನ ದೇಶದ ಸಮಸ್ಯೆಗಳಿಗೆ ಪರಿಹಾರ ಕೊಡಲು ಹೊಸ ಆವಿಷ್ಕಾರಗಳು, ಹೊಸ ಉತ್ಪನ್ನಗಳನ್ನು ತಯಾರಿಸಬೇಕು ಮತ್ತು ಭಾರತವು ಬಹಳ ದೊಡ್ಡ ಮಾರುಕಟ್ಟೆ ಎಂದು ಜನರ ಬಳಿ ಹೋಗಿ ಹೇಳುಬೇಕು. ನನ್ನ ದೇಶದ ಯುವಜನರ ಬುದ್ಧಿ, ಸಾಮರ್ಥ್ಯಗಳ ನಿರೀಕ್ಷೆ ಮಾಡುತ್ತಿದ್ದೇನೆ. ವಿವೇಕಾನಂದ ಅವರು ಜ್ಞಾನ ಮತ್ತು ಕೌಶಲಗಳನ್ನು ಪ್ರತ್ಯೇಕವಾಗಿ ಮಾಡಿದ್ದರು. ಅದೇ ಭಾವದಿಂದ ನಾವು ಕೌಶಲವನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಸಮಯದ ಬೇಡಿಕೆಯಾಗಿದೆ. ಇದು ರಾತ್ರೋರಾತ್ರಿ ಆಗುವಂತಹುದಲ್ಲ, ಹೆಚ್ಚಿಸಿಕೊಳ್ಳುತ್ತಾ ಹೋಗುವಂತಹುದು. ನೀವೇ ನೋಡಿ, ಪರಿಣಾಮ ಬೇರೆಯದಾಗಿರುತ್ತದೆ. ನಾವು ನಮ್ಮ ನೀತಿ ಆಯೋಗದ ಮುಖಾಂತರ ‘ಅಟಲ್ ಇನ್ನೊವೇಷನ್ ಮಿಷನ್ ಆ್ಯಪ್’ ಮಾಡಿದ್ದೇವೆ. ಅದರ ಜೊತೆಗೆ ‘ಅಟಲ್ ಟಿಂಕರಿಂಗ್ ಲ್ಯಾಬ್ಸ್’ ಅಭಿಯಾನವನ್ನು ಆರಂಭಿಸಿದ್ದು ಇದರ ಮೂಲಕ ದೇಶದ ಸಣ್ಣಸಣ್ಣ ಬಾಲಕರು ಹೊಸ ಆವಿಷ್ಕಾರಗಳನ್ನು ಮಾಡಿದರೆ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದೇವೆ. ಇದು ಮೌನ ಅಭಿಯಾನವಾದರೂ ಮುನ್ನಡೆಯುತ್ತಿದೆ. ಬಹಳಷ್ಟು ಪ್ರತಿಭಾನ್ವಿತ ಮಕ್ಕಳು ಹೊಸ ಹೊಸ ಉತ್ಪನ್ನಗಳನ್ನು ತೆಗೆದುಕೊಂಡು ಬಂದಿದ್ದರು. ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿದ್ದಾಗ ದೇಶಾದ್ಯಂತ ಇರುವ ಇಂತಹ ಮಕ್ಕಳನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡಿದ್ದರು. ಪ್ರಣಬ್ ದಾ ಅವರು ಈ ಮಕ್ಕಳನ್ನು ಭೇಟಿಯಾಗುವಂತೆ ಹೇಳಿದಾಗ ನಾನು ಅವರನ್ನು ನೋಡಲು ಹೋದೆ. ಸುಮಾರು 12ರಿಂದ 15 ಮಕ್ಕಳಿದ್ದರು. ತಾವು ಕಂಡು ಹಿಡಿದ ವಸ್ತುಗಳನ್ನು ತಂದಿದ್ದ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು 8ನೆಯ, 9ನೆಯ ಮತ್ತು 10ನೆಯ ತರಗತಿಯ ಮಕ್ಕಳಾಗಿದ್ದನ್ನು ನೋಡಿ ನಾನು ಅಚ್ಚರಿಗೊಂಡೆ. ಕಸಕಡ್ಡಿಗಳ Waste ಅನ್ನು Best ಆಗಿ ಹೇಗೆ Create ಮಾಡಬಹುದು ಎಂಬುದನ್ನು ತೋರಿಸುವ ಪ್ರಾಜೆಕ್ಟ್ ಗಳನ್ನು ಅವರು ತಂದಿದ್ದರು. ಸ್ವಚ್ಛತೆಯ ಅಭಿಯಾನದ ಪ್ರಭಾವ ಹೇಗಿದೆ ನೋಡಿ. ತ್ಯಾಜ್ಯದಿಂದ ಏನೇನು ತಯಾರಿಸಬಹುದು ಎಂಬ ಪ್ರಾಜೆಕ್ಟ್ ಗಳನ್ನು ಅವರು ತಯಾರಿಸಿದ್ದರು. ಅಂದರೆ ಇದರರ್ಥ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂದು ಇಡೀ ವಿಶ್ವವು ವಿದೇಶಾಂಗ ನೀತಿಗಳ ಬಗ್ಗೆ ಚರ್ಚಿಸುತ್ತದೆ, ನಾವು ಅದರ ಬಗ್ಗೆ ಯೋಚಿಸಬೇಕು. ಈ ಶಿಬಿರ, ಆ ಶಿಬಿರ, ಈ ಗುಂಪು, ಆ ಗುಂಪು, ಶೀತಲ ಯುದ್ಧ, ದೊಡ್ಡವರು ಏನೇನಲ್ಲ ಶಬ್ದಗಳನ್ನು ಆರಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರ ವಿದೇಶ ನೀತಿಗಳು ಏನಿದ್ದವು ಎಂದು ಯಾರಾದರೂ ಓದಿ ತಿಳಿದುಕೊಂಡಿದ್ದಾರೆಯೆ? ಸ್ವಾಮಿ ವಿವೇಕಾನಂದ ಅವರು ಆ ಸಮಯದಲ್ಲಿ ಹೇಳಿದ್ದು ಇಂದು 120 ವರ್ಷಗಳಾದ ಬಳಿಕ ಪ್ರಪಂಚಕ್ಕೆ ಕಾಣುತ್ತಿದೆ. ಅವರು One Asia, One Asia ಅಂದರೆ ಒಂದೇ ಏಷ್ಯಾದ ಕಲ್ಪನೆಯನ್ನು ಮಾಡಿದ್ದರು. ವಿಶ್ವವು ಸಂಕಟಗಳಲ್ಲಿ ಸಿಲುಕಿಕೊಳ್ಳುತ್ತದೆ, ಆಗ ಅವರಿಗೆ ದಾರಿ ತೋರಿಸುವ ಶಕ್ತಿ ಇರುವುದು ಕೇವಲ ಏಷ್ಯಾಗೆ ಮಾತ್ರ. One Asia ಅಂದರೆ ಏಷ್ಯಾ ಖಂಡವು ಸಾಂಸ್ಕೃತಿಕ ಪರಂಪರೆಗಳ ಗಣಿಯಾಗಿದೆ. 21ನೆಯ ಶತಮಾನವು ಏಷ್ಯಾದ್ದು ಎಂದು ಇಂದು ಪ್ರಪಂಚವೇ ಹೇಳುತ್ತಿದೆ. ಒಬ್ಬರು ಚೈನಾ ಎಂದರೆ ಮತ್ತೊಬ್ಬರು ಭಾರತ ಎನ್ನುತ್ತಾರೆ. ಆದರೆ 21ನೆಯ ಶತಮಾನ ಏಷ್ಯಾದ್ದು ಎಂಬ ಮಾತನ್ನು ಮತಭೇದವಿಲ್ಲದೆ ಇಡೀ ವಿಶ್ವವೇ ಹೇಳುತ್ತಿದೆ.
125 ವರ್ಷಗಳ ಹಿಂದೆ ಒಬ್ಬ ಮಹಾಪುರುಷ One Asiaದ ಕಲ್ಪನೆ ಮಾಡಿದ್ದರು. ದರ್ಶನ ಮಾಡಿದ್ದರು. ವಿಶ್ವದ ಇಡೀ ನಕ್ಷೆಯೊಳಗೆ One Asiaದ ಪಾತ್ರವೇನು? ಸಮಸ್ಯೆಗಳಿಗೆ ಸಮಾಧಾನ ನೀಡುವ ಮೂಲಭೂತ ಶಕ್ತಿ ಈ One Asiaಗಿದೆ. ಸಾವಿರಾರು ವರ್ಷಗಳ ಪರಂಪರೆಗಳು ಯಾವ ರೀತಿ ಇಲ್ಲಿ ಇವೆ ಎಂಬುದರ ದರ್ಶನವು ವಿವೇಕಾನಂದ ಅವರಿಗೆ ಆಗಿತ್ತು. ಆದ್ದರಿಂದ ಆಧುನಿಕ ಸಂದರ್ಭದಲ್ಲಿ ವಿವೇಕಾನಂದ ಅವರನ್ನು ನೋಡಬೇಕು. ಅವರು ಉದ್ಯಮಶೀಲತೆಯನ್ನು ಹೆಚ್ಚಿಸುವ ಮಾತುಗಳನ್ನಾಡುತ್ತಿದ್ದರು. ಅವರ ಪ್ರತಿಯೊಂದು ಮಾತುಕತೆಯಲ್ಲಿ ಭಾರತವು ಸಾಮರ್ಥ್ಯ ಹೊಂದಲು, ಸಶಕ್ತವಾಗಲು ಅದಕ್ಕೆ ಆಧಾರವಾಗಿ ಕೃಷಿ ಕ್ರಾಂತಿಯಾಗಬೇಕೆಂಬ ಮಾತು ಹೇಳುತ್ತಿದ್ದರು. ಮತ್ತೊಂದೆಡೆ ಆವಿಷ್ಕಾರಗಳ ಮಾತಾಡುತ್ತಿದ್ದರು. ಮೂರನೆಯದಾಗಿ ಉದ್ಯಮಶೀಲತೆಯ ಕುರಿತು ಹೇಳುತ್ತಿದ್ದರು. ಸಮಾಜದಲ್ಲಿರುವ ಕೆಡುಕುಗಳ ವಿರುದ್ಧ ಹೋರಾಡಬೇಕೆಂಬ ಮಾತನ್ನೂ ಆಡುತ್ತಿದ್ದರು. ಅಸ್ಪೃಶತೆಯ ಆಚರಣೆಯ ವಿರುದ್ಧ ಅವರು ಯಾವ ರೀತಿ ಮಾತನಾಡುತ್ತಿದ್ದರೆಂದರೆ ಅದನ್ನು ಅವರು ಹುಚ್ಚುತನ ಎನ್ನುತ್ತಿದ್ದರು. ಈ ಸ್ಪೃಶ್ಯ-ಅಸ್ಪೃಶ್ಯ, ಮೇಲು-ಕೀಳು ಎಂಬ ಭೇದಭಾವಗಳನ್ನು ಹುಚ್ಚುತನ ಎಂದು ಹೇಳುತ್ತಿದ್ದರು. ಈ ಮಹಾಪುರುಷ ಇಷ್ಟೆಲ್ಲ ನೀಡಿದ್ದಾರೆ. ಇಂದು ದೀನದಯಾಳ ಅವರ ಜನ್ಮಶತಾಬ್ದಿಯನ್ನು ಆಚರಿಸುತ್ತಿದ್ದೇವೆ. ಆಗ ಅವರು ಸಹ ಅಂತ್ಯೋದಯದ ಮಾತಾಡುತ್ತಿದ್ದರು.
ಯಾವುದೇ ನಿರ್ಣಯಗಳನ್ನು ಜಾರಿಗೊಳಿಸಿದರೂ ಅದು ಸಮಾಜದ ಕಟ್ಟಕಡೆಯಲ್ಲಿ ಇರುವವರಿಗೆ ಒಳಿತಾಗುತ್ತದೆಯೆ, ಇಲ್ಲವೇ ಎಂದು ನೋಡಬೇಕು, ಆಗ ನಿಮ್ಮ ನಿರ್ಣಯ ಸರಿಯಾಗುತ್ತದೆಂದು ಮಹಾತ್ಮ ಗಾಂಧೀಜಿ ಅವರು ಸಹ ಹೇಳುತ್ತಿದ್ದರು.
ಕೆಲವು ದಿನಗಳ ಹಿಂದೆ ಯುವಜನರು ಒಂದು ಕಾರ್ಯಕ್ರಮವನ್ನು ಮಾಡಿದರು. ವಾಜಪೇಯಿ ಅವರ ಸರ್ಕಾರವಿದ್ದಾಗ ಸುವರ್ಣ ಚತುಷ್ಪಥವನ್ನು ನಿರ್ಮಿಸಿದ್ದರು. ಕೆಲ ಯುವಜನರು ಆ ಮಾರ್ಗದಲ್ಲಿ ಪ್ರಯಾಣ ಮಾಡುವ ಸಲುವಾಗಿ ಸೈಕಲ್ ಗಳನ್ನು ತೆಗೆದುಕೊಂಡು ಬಂದರು. ರಿಲೇ ಸ್ಪರ್ಧೆ ಏರ್ಪಡಿಸಿದರು. ಅವರು 6000 ಕಿಲೊಮೀಟರ್ ದೂರವನ್ನು ರಿಲೇ ಸ್ಪರ್ಧೆಯ ಮೂಲಕವೇ ಪೂರೈಸಿದರು. ಅವರ ಬಳಿ ಒಂದು ಒಳ್ಳೆಯ ಮಂತ್ರವಿತ್ತು. ಅವರು Follow the rule and India will Rule ಎಂದು ಹೇಳಿದ್ದರು. ನಾವು 125 ಕೋಟಿ ಭಾರತೀಯರು ನಿಯಮಗಳನ್ನು ಪಾಲಿಸಬೇಕು. ನನ್ನ ಭಾರತವು ವಿಶ್ವಗುರುವಾಗುತ್ತದೆ, ಎಂದು ವಿವೇಕಾನಂದ ಅವರು ಕನಸು ಕಂಡಿದ್ದರು. ಭಾರತವು ಆಳುತ್ತದೆ, ಆದರೆ ನಾವು ನಿಯಮಗಳನ್ನು ಪಾಲಿಸಬೇಕು. ಆದ್ದರಿಂದ ಈ ಎಲ್ಲ ಭಾವಗಳ ಆಧಾರದ ಮೇಲೆ ಈ ದಿನ ಸ್ವಾಮಿ ವಿವೇಕಾನಂದ ಅವರ ಭಾಷಣದ 126ನೇ ವರ್ಷಾಚರಣೆ, ಪಂಡಿತ್ ದೀನದಯಾಳ್ ಜನ್ಮಶತಾಬ್ದಿ, ಅದೃಷ್ಟವಶಾತ್ ವಿನೋಬಾ ಭಾವೆ ಅವರ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಮತ್ತೊಂದೆಡೆ ಈ ಶತಮಾನದ 9/11ರಂದು ನಡೆದ ಆ ವಿಧ್ವಂಸಕ ಕೃತ್ಯವು ಪ್ರಪಂಚಕ್ಕೆ ಭಯೋತ್ಪಾದನೆಯ ಹೊಡೆತ ನೀಡಿತು. ಮನುಷ್ಯ ಮನುಷ್ಯನ ಶತ್ರುವಾದ. ಇಂತಹ ಸಮಯದಲ್ಲಿ ‘ವಸುಧೈವ ಕುಟುಂಬಕಂ’ ವಿಚಾರಧಾರೆಯನ್ನು ತೆಗೆದುಕೊಂಡು ಸಾಗಬೇಕು. ಪ್ರಕೃತಿಯಲ್ಲೂ ಪರಮಾತ್ಮನನ್ನು ಕಾಣುವ ಜನರು ನಾವು, ಗಿಡಗಳಲ್ಲೂ ದೇವರನ್ನು ಕಾಣುವವರು ನಾವು, ನದಿಯನ್ನು ತಾಯಿಯೆಂದು ಭಾವಿಸುವವರು ನಾವು. ಇಡೀ ವಿಶ್ವವನ್ನು ಒಂದು ಕುಟುಂಬವೆಂದು ಭಾವಿಸುವ ನಾವು ಸಂಕಟಗಳಲ್ಲಿ ಸಿಲುಕಿದ ಮಾನವೀಯತೆಯನ್ನು, ಸಂಕಟಗಳಿಂದ ಆವರಿಸಿದ ವಿಶ್ವಕ್ಕೆ ಏನಾದರೂ ಕೊಡಬಲ್ಲೆವಾದರೆ ಅದು ನಮಗೆ ಹೆಮ್ಮೆಯ ವಿಷಯವಾಗುತ್ತದೆ. ಸಮಯಕ್ಕೆ ಅನುಗುಣವಾಗಿ ಬದಲಾವಣೆ ತರಬೇಕು. ಯಾವುದು ತಪ್ಪೊ, ಸಮಾಜಕ್ಕೆ ವಿನಾಶಕಾರಿಯಾಗಿದೆಯೊ, ಅದು ಎಷ್ಟೇ ಮಾನ್ಯತೆ ಗಳಿಸಿದ್ದರೂ ಆ ಕಾಲಕ್ಕೆ ಸರಿ. ಇಂದಿನ ಕಾಲಕ್ಕೆ ಅದು ಒಳ್ಳೆಯದಲ್ಲ ಎಂದಾದರೆ ಅದರ ವಿರುದ್ಧ ದನಿಯೆತ್ತಿ ಅದನ್ನು ತೊಡೆದು ಹಾಕಲು ಮುಂದಾಗಬೇಕು.
ನನ್ನ ಯುವಜನರೆ, ಸ್ವಾಮಿ ವಿವೇಕಾನಂದ ಅವರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಗೆ 2022ರಲ್ಲಿ 125 ವರ್ಷಗಳಾಗುತ್ತವೆ. ಆಗ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತದೆ. ಅದಕ್ಕಾಗಿ ನಾವು ಏನಾದರೂ ಸಂಕಲ್ಪ ಮಾಡಲು ಸಾಧ್ಯವೆ? ಸಂಕಲ್ಪವೆಂದರೆ ಅದು ನನ್ನ ಜೀವನದ ವ್ರತವಾಗಬೇಕು. ನಾನು ಇದನ್ನು ಮಾಡುತ್ತೇನೆ ಎಂದು ಸಂಕಲ್ಪ ಮಾಡಿದರೆ ನಂತರ ಜೀವನ ನಡೆಸುವ ಆನಂದವೇ ಬೇರೆಯಾಗುತ್ತದೆ ಎಂಬುದನ್ನು ನೀವೇ ನೋಡುವಿರಿ.
ವಿಶ್ವವಿದ್ಯಾಲಯಗಳ ಅಧ್ಯಕ್ಷ ಪದವಿಗಾಗಿ ನಡೆಯುವ ಎಲ್ಲ ಚುನಾವಣೆಗಳನ್ನು ಎದುರಿಸಿ ಆಯ್ಕೆಯಾದವರು ಒಳ್ಳೆಯ ವಿದ್ಯಾರ್ಥಿ ಮುಖಂಡರು. ಆದರೆ ಕೆಲವೊಮ್ಮೆ ರಾಜಕೀಯ ಹಿನ್ನೆಲೆ ಇರುವವರು ಚುನಾವಣೆ ಎದುರಿಸಿದರೆ ಅವರು ನಾವು ಅದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಎಂದೆಲ್ಲ ಹೇಳುವುದನ್ನು ನಾನು ನೋಡಿದ್ದೇನೆ. ಕೆಲವೊಮ್ಮೆ ವಿವಾದಗಳೂ ಆಗುತ್ತವೆ. ಆದರೆ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳು ನಾವು ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛವಾಗಿಡುತ್ತೇವೆ ಎಂದು ಹೇಳುವುದನ್ನು ನಾನು ಇದುವರೆಗೂ ಕಂಡಿಲ್ಲ. ಚುನಾವಣೆ ನಡೆದ ಮರುದಿನ ನೀವು ಯಾವುದೇ ವಿಶ್ವವಿದ್ಯಾಲಯದ ಆವರಣಕ್ಕೆ ಹೋದರೂ ಅಲ್ಲಿ ಕಸದ ರಾಶಿಯೇ ಬಿದ್ದಿರುವುದನ್ನು ಕಾಣುವಿರಿ. ಮತ್ತೆ ಈ ವಂದೇಮಾತರಂ… 21ನೆಯ ಶತಮಾನವನ್ನು ಭಾರತದ ಶತಮಾನವಾಗಿ ಮಾಡುವುದೇನು? 2022ರಲ್ಲಿ ಸ್ವಾತಂತ್ರ್ಯದ 75ನೆಯ ವರ್ಷವನ್ನು ಆಚರಿಸಲಿದ್ದೇವೆ. ಗಾಂಧೀಜಿ ಅವರ ಕನಸಿನ ಭಾರತ, ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಕನಸುಗಳ ಭಾರತ, ಸುಭಾಷ್ ಚಂದ್ರ ಬೋಸ್ ಅವರ ಕನಸಿನ ಭಾರತ, ಸ್ವಾಮಿ ವಿವೇಕಾನಂದ ಅವರ ಕನಸಿನ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಲ್ಲವೆ? ಆದ್ದರಿಂದ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳಿಗೆ Everybody is somebody, nobody ಎಂದು ಕಲಿಸಲಾಗುತ್ತದೆ. ಅಂತಿಮವಾಗಿ ಏನೂ ಇಲ್ಲ ಎಂದು ಅವರಿಗೆ ಓದಿರಬಹುದು. ಆದ್ದರಿಂದ ಇದನ್ನು ನಾನು ಮಾಡುತ್ತೇನೆ, ಇದು ನನ್ನ ಜವಾಬ್ದಾರಿ ಎಂದು ಹೇಳುವ ಅವಶ್ಯಕತೆಯಿದೆ. ಆಗ ಭಾರತವು ಬದಲಾಗುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂಬುದನ್ನು ನೀವೇ ನೋಡುವಿರಿ. 125 ಕೋಟಿ ಭಾರತೀಯರು ಒಂದು ಹೆಜ್ಜೆ ಮುಂದಿಟ್ಟರೆ ಭಾರತವು 125 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ.
ಕಾಲೇಜುಗಳಲ್ಲಿ ಒಬ್ಬರಿಗೆ ಇಷ್ಟವಾಗಬಹುದು, ಒಬ್ಬರಿಗೆ ಇಷ್ಟವಾಗದಿರಬಹುದು, ವಿರೋಧಿಸುವಂತಹ ಕೆಲವು ಜನರೂ ಇರುವುದನ್ನು ನಾನು ನೋಡಿದ್ದೇನೆ. ಕಾಲೇಜುಗಳಲ್ಲಿ ಬೇರೆಬೇರೆ ರೀತಿಯ Dayಗಳನ್ನು ಆಚರಿಸುತ್ತಾರೆ. ಇಂದು Rose Day, ಹಲವು ಜನರು ಇದನ್ನು ವಿರೋಧಿಸುತ್ತಾರೆ, ಇಲ್ಲಿ ಕುಳಿತ ಕೆಲವರು ಇದಕ್ಕೆ ವಿರೋಧಿಗಳಲ್ಲದೆಯೂ ಇರಬಹುದು. ನೋಡಿ, ನಾವು ರೋಬಾಟ್ ತಯಾರಿಸಬೇಕಿಲ್ಲ, ನಮಗೆ ಸೃಜನಶೀಲತೆ ಬೇಕು. ನಮ್ಮೊಳಗಿನ ವ್ಯಕ್ತಿಯನ್ನು, ನಮ್ಮ ಸಂವೇದನೆಗಳನ್ನು ಪ್ರಕಟಪಡಿಸಲು ವಿಶ್ವವಿದ್ಯಾನಿಲಯದ ಆವರಣಗಳಿಗಿಂತ ದೊಡ್ಡ ಜಾಗ ಬೇರಾವುದಿಲ್ಲ. ಆದರೆ ಹರಿಯಾಣದ ಕಾಲೇಜಿನಲ್ಲಿ ಇಂದು ತಮಿಳು ದಿನವನ್ನು ಆಚರಿಸೋಣ ಎಂದು ನಿರ್ಧಾರ ತೆಗೆದುಕೊಳ್ಳುವ ವಿಚಾರ ನಮಗೆ ಎಂದಾದರೂ ಬರುತ್ತದೆಯೆ? ಪಂಜಾಬ್ ಕಾಲೇಜಿನಲ್ಲಿ ಕೇರಳ ದಿನವನ್ನು ಆಚರಿಸೋಣ ಎನ್ನುತ್ತೇವೆಯೆ? ಅವರ ಭಾಷೆಯ ಎರಡು ಹಾಡುಗಳನ್ನು ಹಾಡೋಣ, ಅವರಿಂದ ಎರಡು ಹಾಡುಗಳನ್ನು ಹಾಡಿಸೋಣ, ಆ ದಿನ ಅವರಂತಹುದೇ ಉಡುಪುಗಳನ್ನು ಧರಿಸಿ ಬರೋಣ, ಕೈಯಿಂದ ಅನ್ನ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳೋಣ. ಕಾಲೇಜಿನಲ್ಲಿ ಯಾವುದಾದರೂ ಮಲಯಾಳಂ ಸಿನಿಮಾ ನೋಡೋಣ, ತಮಿಳು ಸಿನಿಮಾ ನೋಡೋಣ. ಅಲ್ಲಿಂದ ಕೆಲವು ಯುವಜನರನ್ನು ಕರೆಸೋಣ.
ಸೋದರರೆ, ನಿಮ್ಮ ತಮಿಳುನಾಡಿನಲ್ಲಿ ಹಳ್ಳಿಗಳಲ್ಲಿ ಯಾವ್ಯಾವ ಆಟಗಳಿವೆ. ಆಡೋಣ ಬನ್ನಿ ಎನ್ನೋಣ. ಇಂತಹ ದಿನಗಳನ್ನು ಆಚರಿಸುವಿರೊ, ಇಲ್ಲವೊ ಎಂದು ನನಗೆ ತಿಳಿಸಿ. ಆ   ಡೇ  ಫಲದಾಯಕವಾಗುತ್ತದೊ, ಇಲ್ಲವೊ? ಭಾರತವು ಶ್ರೇಷ್ಠ ಭಾರತವಾಗುವುದೊ, ಇಲ್ಲವೊ? ವಿವಿಧತೆಯಲ್ಲಿ ಏಕತೆಯುಳ್ಳ ದೇಶ ನಮ್ಮದು ಎಂದು ನಿಮಲ್ಲಿ ಬಹುತೇಕರು ಘೋಷಣೆಗಳನ್ನು ಕೂಗುತ್ತೀರಿ, ಆದರೆ ಈ ವೈವಿಧ್ಯತೆಯನ್ನು ಗೌರವಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆಯೇ? ಭಾರತದಲ್ಲಿರುವ ಪ್ರತಿಯೊಂದು ರಾಜ್ಯದ ಬಗ್ಗೆ ಗೌರವದ ಭಾವ ಮೂಡದಿದದ್ದರೆ, ಪ್ರತಿಯೊಂದು ಭಾಷೆಯ ಕುರಿತು ಗೌರವವಿರದಿದದ್ದರೆ ಏನು ಬಂತು? ಈಗಷ್ಟೇ ತಮಿಳುನಾಡಿನಿಂದ ಬಂದ ತಮಿಳು ವಿಶ್ವವಿದ್ಯಾಲಯದ ಯುವಕರು ವೇದಿಕೆಗೆ ಬಂದಿದ್ದರು. ಅವರಿಗೆ ನಾನು ವಣಕ್ಕಂ ಎಂದು ಹೇಳಿದಾಗ ಅವರು ಬಹಳ ಸಂತೋಷಗೊಂಡರು. ವಿಶ್ವವಿದ್ಯಾಲಯಗಳಲ್ಲೂ ಇಂತಹ ಡೇಗಳನ್ನು ಆಚರಿಸಬೇಕು, ಇಂತಹ ವಾತಾವರಣ ಸೃಷ್ಟಿಸಬೇಕು ಎಂದು ಅನಿಸುವುದಿಲ್ಲವೇ? ನಮ್ಮ ವಿಶ್ವವಿದ್ಯಾಲಯದಲ್ಲಿ ಸಿಖ್ ಗುರುಗಳ ದಿನವನ್ನು ಆಚರಿಸಿ ಪಂಜಾಬ್ ನ ಸಿಖ್ ಗುರುಗಳು ಯಾವ್ಯಾವ ತ್ಯಾಗ, ತಪಸ್ಸು, ಬಲಿದಾನಗಳನ್ನು ಮಾಡಿದ್ದರು ಎಂದು ಸ್ಮರಿಸಿದರೆ ಸರಿ, ಕೇವಲ ಭಾಂಗ್ಡಾ ನೃತ್ಯಕ್ಕೆ ಮೀಸಲಾದರೆ ಸಾಕೆ? ಪರೋಟ ಮತ್ತು ಭಾಂಗ್ಡಾ, ಈ ಎರಡಕ್ಕಿಂತಲೂ ಪಂಜಾಬ್ ಬಹಳ ಮುಂದಿದೆ. ಆದ್ದರಿಂದ ಏನಾದರೂ ಮಾಡಿ, ಸೃಜನಶೀಲತೆ ಇಲ್ಲದೆ ಜೀವನವಿಲ್ಲ. ನಮಗೆ ರೋಬೊಟ್ ತಯಾರಿಸಲು ಆಗುವುದಿಲ್ಲ, ನಮ್ಮೊಳಗಿನ ವ್ಯಕ್ತಿತ್ವವನ್ನು ಪ್ರತಿಕ್ಷಣ ಬೆಳಗಿಸುತ್ತಾ ಇರೋಣ. ಆದರೆ ದೇಶದ ಶಕ್ತಿ ಹೆಚ್ಚಿಸುವ, ದೇಶದ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ದೇಶದ ಅವಶ್ಯಕತೆ ಏನಿದೆ ಅದನ್ನು ಪೂರೈಸುವ ಕೆಲಸವನ್ನು ಮಾಡೋಣ. ಇವುಗಳಿಂದ ನಾವು ದೂರವಿದಷ್ಟೂ ನಾವು ನಿಧಾನವಾಗಿ ಮುದುಡುತ್ತಾ ಹೋಗುತ್ತೇವೆ.
ವಿವೇಕಾನಂದ ಅವರು ಕೂಪಮಂಡೂಕಗಳ ಬಗ್ಗೆ ಒಂದು ಕಥೆ ಹೇಳುತ್ತಿದ್ದರು. ಬಾವಿಯ ಕಪ್ಪೆಗಳ ವಿಷಯ ಹೇಳುತ್ತಿದ್ದರು. ನಾವು ಆ ರೀತಿ ಆಗಲು ಸಾಧ್ಯವಿಲ್ಲ. ನಾವು ಇಡೀ ವಿಶ್ವವನ್ನು ನಮ್ಮೊಳಗೆ ಸೇರಿಸಿಕೊಳ್ಳಬೇಕು, ಜಗತ್ತನ್ನು ಗೆಲ್ಲುವವರಾಗಬೇಕು. ನಾವು ಒಂದು ಪರಿಧಿಯಲ್ಲಿ ಬಂಧಿಯಾದರೆ ನಮಗೆ ಏನನ್ನೂ ಯೋಚಿಸಲೂ ಆಗುವುದಿಲ್ಲ. ಉಪನಿಷತ್ತುಗಳಿಂದ ಹಿಡಿದು ಉಪಗ್ರಹಗಳವರೆಗಿನ ನಮ್ಮ ಯಾತ್ರೆಯು ನಡೆದಿದೆ. ವಿಶ್ವದ ಪ್ರತಿಯೊಂದು ವಿಚಾರವು ನಮಗೆ ಅನುಕೂಲಕರವಾದರೆ, ಮಾನವತೆಗೆ ಒಳಿತಾದರೆ ಅದನ್ನು ಸಂಕೋಚ ಪಡದೆ ಸ್ವೀಕರಿಸಿದ್ದೇವೆ. ಯಾರಾದರೂ ಬರುತ್ತಾರೆ, ನಮ್ಮನ್ನು ತುಳಿಯುತ್ತಾರೆ ಎಂದು ನಾವು ಹೆದರುವುದೂ ಇಲ್ಲ. ಹಾಗೆ ಬಂದವರನ್ನು ಒಪ್ಪಿಕೊಳ್ಳೋಣ ಎಂದು ಯೋಚಿಸುವವರು ನಾವು. ಅವರನ್ನು ನಮ್ಮವರಾಗಿಸಿಕೊಳ್ಳೋಣ, ಅವರಲ್ಲಿರುವ ಒಳ್ಳೆಯದನ್ನು ಸ್ವೀಕರಿಸಿ ಮುಂದೆ ಸಾಗೋಣ. ಆಗಷ್ಟೇ ಭಾರತವು ವಿಶ್ವಕ್ಕೆ ಏನನ್ನಾದರೂ ಕೊಡುವ ಸಾಮರ್ಥ್ಯ ಹೊಂದುತ್ತದೆ. ಗುಲಾಮಗಿರಿಯ ಬದುಕನ್ನು ನಡೆಸುತ್ತಿದ್ದ ಒಂದು ಕಾಲಘಟ್ಟದಲ್ಲಿ ನಾವು ರಕ್ಷಣಾತ್ಮಕ ಗುಣದೊಂದಿಗೆ ನಮ್ಮ ಬದುಕನ್ನು ಕಳೆದಿರಬಹುದು. ಗೆಳೆಯರೆ, ಹೊರಗಿನ ಶಕ್ತಿಗಳಿಂದ ನಮಗೇನಾದರೂ ತೊಂದರೆಯಾದರೆ ನಾವು ಯೋಚಿಸುವ ಅಗತ್ಯವಿಲ್ಲ, ನಮ್ಮಲ್ಲಿ ಅದನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಿದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಭಾರತದ ಬಗ್ಗೆ ಅವರ ದೃಷ್ಟಿಕೋನ ಬದಲಾಗಿರುವುದು ನನ್ನ ಅನುಭವಕ್ಕೆ ಬರುತ್ತಿದೆ. ಈ ಶಕ್ತಿ ರಾಜಕೀಯ ಶಕ್ತಿಯಿಂದ ಬಂದದ್ದಲ್ಲ, ಜನಶಕ್ತಿಯಿಂದ ಬಂದದ್ದು. ಇದು 125 ಕೋಟಿ ಭಾರತೀಯರ ಶಕ್ತಿಯಿಂದ ಬಂದದ್ದು. ಆದರೆ ನಾವು ನಮ್ಮಲ್ಲಿರುವ ಕೆಡುಕುಗಳನ್ನು ಈಗಲೇ ದೂರ ಮಾಡದಿದ್ದರೆ ದುರ್ಗಂಧ ಬೀರುವುದು ಮತ್ತು ಕೊಳೆತು ಹೋಗುವುದು ಬಿಟ್ಟು ಬೇರೇನೂ ಆಗದು. ನಾವು ಈ ಕೆಡಕುಗಳ ವಿರುದ್ಧ ಹೋರಾಡಬೇಕು. ನಮ್ಮೊಳಗಿನ ಕೆಡಕುಗಳ ವಿರುದ್ಧ ಹೋರಾಡಬೇಕು. ಭಾರತವನ್ನು ಆಧುನಿಕಗೊಳಿಸುವ ಕನಸು ನಮ್ಮದಾಗಬೇಕು. ನನ್ನ ದೇಶ ಆಧುನಿಕವಾಗಬಾರದೇಕೆ? ನನ್ನ ದೇಶದ ಯುವಜನರು ವಿಶ್ವದಲ್ಲಿ ಸರಿಸಮಾನರಾಗಬಾರದೇಕೆ? ದೇಶ ಸಮರ್ಥವಾಗಬಾರದೇಕೆ? ನಾನು ಹಿಂದೊಮ್ಮೆ ಒಬ್ಬ ಮಹಾಪುರುಷರನ್ನು ಭೇಟಿಯಾಗಿದ್ದೆ. ಬಹಳ ಹಿಂದಿನ ಮಾತಿದು. ಅವರು ನನ್ನ ಭಾಷಣ ಕೇಳಿದ್ದರೇನೊ, ಅದರ ಚರ್ಚೆ ಆರಂಭವಾಯಿತು. ಆಗ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರು ನನಗೆ ಸೋದರ, ಭಾರತದ ಕಷ್ಟ ಏನು ಎಂದು ನಿಮಗೆ ಗೊತ್ತೆ ಎಂಬ ಪ್ರಶ್ನೆ ಹಾಕಿದರು. ನಾನು ಏನದು ಎಂದು ಕೇಳಿದೆ. ನಾವು ಇಲ್ಲಿ ಐದು ಸಾವಿರ ವರ್ಷಗಳ ಹಿಂದೆ ಹೀಗಿದ್ದೆವು, ಎರಡು ಸಾವಿರ ವರ್ಷಗಳ ಹಿಂದೆ ಹೀಗಿದ್ದೆವು, ರಾಮನ ಕಾಲದಲ್ಲಿ ಹೀಗಿದ್ದೆವು, ಬುದ್ಧನ ಕಾಲದಲ್ಲಿ ಹೀಗಿದ್ದೆವು ಎನ್ನುತ್ತೇವೆ. ಈ ಎಲ್ಲದರಿಂದ ನಾವು ಹೊರಬಂದಿಲ್ಲ. ನೀವು ಇಂದು ಹೇಗಿದ್ದೀರಿ ಎಂಬುದರ ಮೇಲೆ ವಿಶ್ವವು ನಿಮ್ಮ ಮೌಲ್ಯಮಾಪನ ಮಾಡುತ್ತದೆ. ನಮ್ಮ ಬಳಿ ಒಂದು ಮಹಾನ್ ಪರಂಪರೆ ಇದೆ ಎನ್ನುವುದು ನಮ್ಮ ಭಾಗ್ಯವಾದರೆ ನಾವು ಅದೇ ಗೌರವದಿಂದ ಅದನ್ನು ಮುಂದುವರಿಸಲು ಸಿದ್ಧರಿಲ್ಲದಿರುವುದು ನಮ್ಮ ದೌರ್ಭಾಗ್ಯವಾಗಿದೆ. ಆ ಗೌರವದ ಗುಣಗಾನವು ನಮಗೆ ಮುನ್ನಡೆಯಲು ಪ್ರೇರಣೆಯಾಗಬೇಕು. ಆ ಗೌರವದ ಗುಣಗಾನವು ನಮ್ಮನ್ನು ಹಿಂದಕ್ಕೆ ತಳ್ಳಿ ತಡೆಯುವಂತಾಗಬಾರದು ಎಂದು ಅವರು ಹೇಳಿದರು. ನಾವು ಅದೇ ರೀತಿ ಮುಂದೆ ಸಾಗಬೇಕು. ಯುವಜನತೆ ಪರಿಸ್ಥಿತಿಯ ಹೆಸರಲ್ಲ, ಒಂದು ಮನಃಸ್ಥಿತಿಯ ಹೆಸರು. ಆಗಿ ಹೋದ ನಿನ್ನೆಯಲ್ಲಿ ಕಳೆದು ಹೋದಂತೆ ಇರುವವರನ್ನು ಯುವಜನತೆ ಎಂದು ಒಪ್ಪಿಕೊಳ್ಳಲಾಗದು. ಆದರೆ ಕಳೆದುಹೋದ ವಿಚಾರಗಳ ಶ್ರೇಷ್ಠತೆಯನ್ನು ತೆಗೆದುಕೊಂಡು ಮುಂದೆ ಸಾಗುವವರು, ನಾಳೆಯ ಕುರಿತು ಯೋಚಿಸುವವರು, ಅರಿಯುವವರು. ಆಲಿಸುವವರೇ ಯುವಜನರು. ಈ ಯುವ ಭಾವವನ್ನು ನಿಮ್ಮೊಳಗೆ ಅಡಗಿಸಿಕೊಂಡು ಮುಂದೆ ಬರುವುದು ಹೇಗೆ ಎಂಬ ಸಂಕಲ್ಪ ಮಾಡಿ ನೀವು ಮುಂದೆ ಸಾಗಿರಿ. ನಾನು ಇದೇ ಭಾವನೆಯೊಂದಿಗೆ ದೀನದಯಾಳ್ ಅವರಿಗೆ ಇಂದು ನಮಿಸುತ್ತೇನೆ, ಸ್ವಾಮಿ ವಿವೇಕಾನಂದ ಅವರಿಗೆ ನಮಿಸುತ್ತೇನೆ, ವಿನೋಬಾ ಭಾವೆ ಅವರಿಗೆ ನಮಿಸುತ್ತೇನೆ ಮತ್ತು ನನ್ನ ದೇಶದ ಯುವಜನರಿಗೆ ಬಹಳ ಬಹಳ ಶುಭ ಹಾರೈಸುತ್ತೇನೆ.
ಧನ್ಯವಾದಗಳು.