ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಯುವಜನರ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕ್ರೀಡಾ ಶಕ್ತಿಯನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತಾ, 2026-27 ರಿಂದ 2030-31ರ ಅವಧಿಗೆ ಒಟ್ಟು ₹36,441 ಕೋಟಿ ವೆಚ್ಚದ ವಿಸ್ತರಿತ ಖೇಲೋ ಇಂಡಿಯಾ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎ ಎನ್ ಎಸ್ ಎಫ್) ನೀಡಲಾಗುವ ವಿಸ್ತೃತ ನೆರವಿಗೆ ಅನುಮೋದನೆ ನೀಡಿದೆ.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಕೈಗೊಳ್ಳಲಾದ ಅತ್ಯಂತ ಮಹತ್ವಾಕಾಂಕ್ಷೆಯ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಕ್ರೀಡೆಯತ್ತ ದೇಶದ ಯುವಜನರ ಆಕಾಂಕ್ಷೆಗಳಿಗೆ ದೊಡ್ಡ ಉತ್ತೇಜನ ಸಿಕ್ಕಿದ್ದು, ಮುಂಬರುವ ದಶಕದಲ್ಲಿ ಇದು ಕ್ರಾಂತಿಕಾರಿ ಪರಿಣಾಮ ಬೀರಲಿದೆ.
ಅನುಮೋದಿತ ವೆಚ್ಚವು ಹಿಂದಿನ ಖೇಲೋ ಇಂಡಿಯಾ ಯೋಜನೆಗಿಂತ ಸುಮಾರು ಎಂಟು ಪಟ್ಟು ಹೆಚ್ಚಾಗಿದ್ದು, ಕ್ರೀಡೆಯನ್ನು ಯುವಜನರ ಅಭಿವೃದ್ಧಿ, ರಾಷ್ಟ್ರ ನಿರ್ಮಾಣ ಮತ್ತು ಜಾಗತಿಕ ಕ್ರೀಡಾ ಶಕ್ತಿಯಾಗಿ ಭಾರತದ ಹೊರಹೊಮ್ಮುವಿಕೆಗೆ ಪ್ರಮುಖ ಅಡಿಪಾಯವನ್ನಾಗಿ ಮಾಡಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪರಿಷ್ಕೃತ ಯೋಜನೆಯನ್ನು ಪ್ರತಿಯೊಬ್ಬ ಪ್ರತಿಭಾವಂತ ಯುವ ಭಾರತೀಯನಿಗೆ ಶಾಲಾ ಕ್ರೀಡಾಂಗಣಗಳು ಮತ್ತು ಗ್ರಾಮೀಣ ಕ್ರೀಡಾ ಮೈದಾನಗಳಿಂದ ಒಲಿಂಪಿಕ್ ವೇದಿಕೆಯವರೆಗೆ ತಡೆರಹಿತ ಮಾರ್ಗವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಭೌಗೋಳಿಕತೆ, ಆರ್ಥಿಕ ಹಿನ್ನೆಲೆ ಅಥವಾ ಅವಕಾಶಗಳ ಕೊರತೆಯಿಂದಾಗಿ ಯಾವುದೇ ಕ್ರೀಡಾ ಪ್ರತಿಭೆಯು ಗುರುತಿಸಲ್ಪಡದೆ ಉಳಿಯದಂತೆ ನೋಡಿಕೊಳ್ಳಲು ಇದು ಪ್ರಯತ್ನಿಸುತ್ತದೆ.
ಖೇಲೋ ಭಾರತ್ ನೀತಿ 2025 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಯೋಜನೆಯು 2030 ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಭಾರತದ ಬಿಡ್ ಸೇರಿದಂತೆ ದೇಶದ ದೀರ್ಘಕಾಲೀನ ಕ್ರೀಡಾ ಆಕಾಂಕ್ಷೆಗಳಿಗೆ ಬಲವಾದ ಅಡಿಪಾಯವನ್ನು ಹಾಕುವ ಜೊತೆಗೆ ಕ್ರೀಡೆಯನ್ನು ಶಿಕ್ಷಣ, ಫಿಟ್‌ನೆಸ್, ತಂತ್ರಜ್ಞಾನ ಮತ್ತು ಉನ್ನತ ಮಟ್ಟದ ತರಬೇತಿಯೊಂದಿಗೆ ಸಂಯೋಜಿಸುತ್ತದೆ.
ಪ್ರತಿಯೊಬ್ಬ ಪ್ರತಿಭಾವಂತ ಯುವಕನಿಗೆ ಶ್ರೇಷ್ಠತೆಯ ಮಾರ್ಗ:
ಮೊದಲ ಬಾರಿಗೆ, ಯುವ ಕ್ರೀಡಾಪಟುಗಳನ್ನು ಪ್ರತಿಯೊಂದು ಹಂತದಲ್ಲೂ ಪ್ರತಿಭೆ ಗುರುತಿಸುವಿಕೆ ಮತ್ತು ವೈಜ್ಞಾನಿಕ ತರಬೇತಿಯಿಂದ ಹಿಡಿದು ಅಂತಾರಾಷ್ಟ್ರೀಯ ಸ್ಪರ್ಧೆ ಮತ್ತು ಒಲಿಂಪಿಕ್ ಸಿದ್ಧತೆಯವರೆಗೆ ಬೆಂಬಲಿಸಲು ಸಮಗ್ರ ಅಥ್ಲೀಟ್ ಅಭಿವೃದ್ಧಿ ಮಾರ್ಗವನ್ನು ನಿರ್ಮಿಸಲಾಗಿದೆ.
ಈ ಯೋಜನೆಯು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳು (ಎನ್ ಸಿ ಒ ಇ), ಖೇಲೋ ಇಂಡಿಯಾ ಶ್ರೇಷ್ಠತಾ ಕೇಂದ್ರಗಳು (ಕೆ ಐ ಸಿ ಒ ಇ), ಸಾಯ್ (ಎಸ್ ಎ ಐ) ತರಬೇತಿ ಕೇಂದ್ರಗಳು (ಎಸ್ ಟಿ ಸಿ), ಖೇಲೋ ಇಂಡಿಯಾ ಮಾನ್ಯತೆ ಪಡೆದ ಅಕಾಡೆಮಿಗಳು (ಕೆಐಎಎ), ಖೇಲೋ ಇಂಡಿಯಾ ಕೇಂದ್ರಗಳು (ಕೆಐಸಿ) ಮತ್ತು ಸಶಸ್ತ್ರ ಪಡೆಗಳ ಯುವ ಕ್ರೀಡಾ ಕಂಪನಿಗಳನ್ನು (ವೈ ಎಸ್ ಸಿ) ಒಳಗೊಂಡ ಸಮಗ್ರ ದೇಶವ್ಯಾಪಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಒಟ್ಟಾಗಿ, ಈ ಸಂಸ್ಥೆಗಳು ದೇಶಾದ್ಯಂತ ವಿಶ್ವ ದರ್ಜೆಯ ತರಬೇತಿ, ಕ್ರೀಡಾ ವಿಜ್ಞಾನ ಬೆಂಬಲ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒದಗಿಸಲಿವೆ.
ಶಾಲಾ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ಸರ್ಕಾರವು ಎರಡು ಹೊಸ ಉಪಕ್ರಮಗಳನ್ನು ಪರಿಚಯಿಸಿದೆ—ಖೇಲೋ ಇಂಡಿಯಾ ಫೀಡರ್ ಸ್ಕೂಲ್ಸ್ (ಕೆ ಐ ಎಫ್ ಎಸ್) ಮತ್ತು ಖೇಲೋ ಇಂಡಿಯಾ ಉತ್ಕೃಷ್ಟ ವಿದ್ಯಾಲಯಗಳು (ಕೆಐಯುವಿ)—ಇವು ಕ್ರೀಡೆಯನ್ನು ಮುಖ್ಯವಾಹಿನಿಯ ಶಿಕ್ಷಣದೊಂದಿಗೆ ಸಂಯೋಜಿಸುತ್ತವೆ ಮತ್ತು ಪ್ರತಿಭಾವಂತ ಮಕ್ಕಳನ್ನು ಮುಂಚಿತವಾಗಿಯೇ ಗುರುತಿಸಲು ಹಾಗೂ ವ್ಯವಸ್ಥಿತವಾಗಿ ಪೋಷಿಸಲು ನೆರವಾಗುತ್ತವೆ.
ಭಾರತದ ಅಥ್ಲೀಟ್ ಗಳ ಸಂಖ್ಯೆ ಸುಮಾರು ಹತ್ತು ಪಟ್ಟು ವಿಸ್ತರಣೆಯಾಗಲಿದೆ:
ಈ ಯೋಜನೆಯಡಿಯಲ್ಲಿನ ಪ್ರಮುಖ ಸುಧಾರಣೆಯೆಂದರೆ, ಹಾಲಿ ಇರುವ ಖೇಲೋ ಇಂಡಿಯಾ ಅಥ್ಲೀಟ್ಸ್ ಕಾರ್ಯಕ್ರಮದ ಜೊತೆಗೆ ‘ಎಮರ್ಜಿಂಗ್ ಖೇಲೋ ಇಂಡಿಯಾ ಅಥ್ಲೀಟ್ಸ್’ (E-KIA) ವರ್ಗವನ್ನು ರಚಿಸಿರುವುದು. ಇದು ರಚನಾತ್ಮಕ ಅಥ್ಲೀಟ್ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಸುಮಾರು ಹತ್ತು ಪಟ್ಟು ವಿಸ್ತರಿಸುತ್ತದೆ, ಸಾವಿರಾರು ಹೆಚ್ಚುವರಿ ಯುವ ಕ್ರೀಡಾಪಟುಗಳನ್ನು ವೃತ್ತಿಪರ ತರಬೇತಿ, ವೈಜ್ಞಾನಿಕ ಬೆಂಬಲ ಮತ್ತು ದೀರ್ಘಕಾಲೀನ ಮಾರ್ಗದರ್ಶನದ ಅಡಿಯಲ್ಲಿ ತರುತ್ತದೆ.
ಪ್ರತಿಭೆ ಗುರುತಿಸುವಿಕೆ ಅಭಿವೃದ್ಧಿ ಸಮಿತಿಗಳು, ವಲಯ ಸಮಿತಿಗಳು, ಪ್ರತಿಭಾ ಸ್ಕೌಟ್ ಗಳು, ಉನ್ನತ ಕಾರ್ಯಕ್ಷಮತೆ ನಿರ್ದೇಶಕರು ಮತ್ತು ಉನ್ನತ ಕಾರ್ಯಕ್ಷಮತೆ ವ್ಯವಸ್ಥಾಪಕರನ್ನು ಒಳಗೊಂಡ ಬಲವರ್ಧಿತ ದೇಶವ್ಯಾಪಿ ಪ್ರತಿಭೆ ಗುರುತಿಸುವಿಕೆಯ ಚೌಕಟ್ಟು, ದೇಶಾದ್ಯಂತ ಭರವಸೆಯ ಕ್ರೀಡಾಪಟುಗಳ ನಿರಂತರ ಗುರುತಿಸುವಿಕೆ, ಟ್ರ್ಯಾಕಿಂಗ್ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
ಈ ಯೋಜನೆಯು ತಳಮಟ್ಟದ ಸ್ಪರ್ಧೆಗಳಿಂದ ಖೇಲೋ ಇಂಡಿಯಾಗೆ ಮತ್ತು ನಂತರ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಗೆ ಸ್ಪಷ್ಟ ಪ್ರಗತಿಯ ಮಾರ್ಗವನ್ನು ಸ್ಥಾಪಿಸುತ್ತದೆ, ಇದರಿಂದ ಅರ್ಹ ಕ್ರೀಡಾಪಟುಗಳು ಅತ್ಯುನ್ನತ ಮಟ್ಟದಲ್ಲಿ ಪದಕಗಳಿಗಾಗಿ ಸ್ಪರ್ಧಿಸಲು ವಿಶ್ವ ದರ್ಜೆಯ ತರಬೇತಿ, ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಸಮಗ್ರ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಸ್ಪರ್ಧೆಗಳು, ಹೆಚ್ಚಿನ ಅವಕಾಶಗಳು:
ಕ್ರೀಡಾ ಶ್ರೇಷ್ಠತೆಯು ನಿಯಮಿತ ಸ್ಪರ್ಧೆಯನ್ನು ಅವಲಂಬಿಸಿದೆ ಎಂಬುದನ್ನು ಗುರುತಿಸಿ, ಪರಿಷ್ಕರಿಸಿದ ಯೋಜನೆಯು ಭಾರತದ ದೇಶೀಯ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸುತ್ತದೆ. ಯುವ ಕ್ರೀಡಾಪಟುಗಳಿಗೆ ನಿರಂತರ ಸ್ಪರ್ಧಾತ್ಮಕ ವಾತಾವರಣವನ್ನು ಒದಗಿಸಲು ಇದು ರಾಷ್ಟ್ರೀಯ ಚಾಂಪಿಯನ್‌ಷಿಪ್ ಗಳ ಜೊತೆಗೆ ಶಾಲೆ, ವಿಶ್ವವಿದ್ಯಾಲಯ, ಪ್ರಾದೇಶಿಕ ಮತ್ತು ಕ್ರೀಡಾ-ನಿರ್ದಿಷ್ಟ ಲೀಗ್ ಗಳನ್ನು ಬೆಂಬಲಿಸುತ್ತದೆ.
ಮಹಿಳಾ ಕ್ರೀಡಾಪಟುಗಳು, ಪ್ಯಾರಾ-ಕ್ರೀಡಾಪಟುಗಳು, ದೇಸೀಯ ಕ್ರೀಡೆಗಳು ಮತ್ತು ಶಾಂತಿ, ಒಳಗೊಳ್ಳುವಿಕೆ ಹಾಗೂ ಸಮುದಾಯ ಅಭಿವೃದ್ಧಿಗೆ ಕ್ರೀಡೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ವಿಸ್ತರಿಸಲು ವಿಶೇಷ ಒತ್ತು ನೀಡಲಾಗಿದೆ. ಈ ಯೋಜನೆಯು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಸಂಘಟಿಸಲು ಮತ್ತು ಭಾರತದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಬೆಂಬಲವನ್ನು ಒದಗಿಸುತ್ತದೆ.
ಸದೃಢ ಮತ್ತು ಆರೋಗ್ಯಕರ ಭಾರತ ನಿರ್ಮಾಣ:
ವಿಶೇಷವಾಗಿ ಯುವಜನರಲ್ಲಿ ಫಿಟ್‌ನೆಸ್ ಅನ್ನು ದೇಶವ್ಯಾಪಿ ಚಳವಳಿಯಾಗಿ ಉತ್ತೇಜಿಸಲು ಫಿಟ್ ಇಂಡಿಯಾ ಚಳವಳಿಯನ್ನು ಗಮನಾರ್ಹವಾಗಿ ವಿಸ್ತರಿಸಲಾಗುವುದು. ಅಭಿಯಾನಗಳು ಸಕ್ರಿಯ ಜೀವನಶೈಲಿ, ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ, ಗಡಿ ಮತ್ತು ಸಣ್ಣ/ದೂರದ ಪ್ರದೇಶಗಳಲ್ಲಿ ತಲುಪುವಿಕೆ ಮತ್ತು ಮಾದಕದ್ರವ್ಯ ಸೇವನೆಯ ವಿರುದ್ಧ ಕ್ರೀಡಾ ಆಧಾರಿತ ಉಪಕ್ರಮಗಳನ್ನು ಪ್ರೋತ್ಸಾಹಿಸುತ್ತವೆ, ಇದು ಸಾಮಾಜಿಕ ಪರಿವರ್ತನೆಗೆ ಕ್ರೀಡೆಯನ್ನು ಸಾಧನವಾಗಿ ಬಲಪಡಿಸುತ್ತದೆ.
ತರಬೇತುದಾರರು, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ:
ಕ್ರೀಡಾಪಟುಗಳು ವಿಶ್ವ ದರ್ಜೆಯ ಬೆಂಬಲ ವ್ಯವಸ್ಥೆಗಳೊಂದಿಗೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಗುರುತಿಸಿ, ತರಬೇತಿ ಅರ್ಹತೆಗಳನ್ನು ಪ್ರಮಾಣೀಕರಿಸಲು, ವೃತ್ತಿಪರ ಮಾನದಂಡಗಳನ್ನು ಸುಧಾರಿಸಲು ಮತ್ತು ದೇಶಾದ್ಯಂತ ತರಬೇತುದಾರರು ಹಾಗೂ ಬೆಂಬಲ ಸಿಬ್ಬಂದಿಯ ಸಾಮರ್ಥ್ಯವನ್ನು ಬಲಪಡಿಸಲು ಸರ್ಕಾರವು ರಾಷ್ಟ್ರೀಯ ತರಬೇತುದಾರರ ಮಾನ್ಯತೆ ಮಂಡಳಿಯನ್ನು (ಎನ್ ಸಿ ಎ ಬಿ) ಸ್ಥಾಪಿಸಲಿದೆ.
ಈ ಯೋಜನೆಯು ಅಥ್ಲೀಟ್ ಡೇಟಾಬೇಸ್ ಗಳು, ಮೂಲಸೌಕರ್ಯ, ಸ್ಪರ್ಧೆಗಳು, ತರಬೇತಿ ಸಂಪನ್ಮೂಲಗಳು, ಪ್ರತಿಭೆ ಮೌಲ್ಯಮಾಪನಗಳು, ಧನಸಹಾಯ ಮತ್ತು ಫಿಟ್ ಇಂಡಿಯಾ ಭಾಗವಹಿಸುವಿಕೆಯನ್ನು ಸಂಯೋಜಿಸುವ ಏಕೀಕೃತ ಡಿಜಿಟಲ್ ಕ್ರೀಡಾ ವೇದಿಕೆಯನ್ನು ಸಹ ಕಲ್ಪಿಸುತ್ತದೆ. ಈ ಪ್ಲಾಟ್‌ಫಾರ್ಮ್ ಡೇಟಾ-ಚಾಲಿತ ಯೋಜನೆ, ಪಾರದರ್ಶಕ ಆಡಳಿತ ಮತ್ತು ವೈಯಕ್ತಿಕಗೊಳಿಸಿದ ಅಥ್ಲೀಟ್ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ.
ಕ್ರೀಡಾ ಶ್ರೇಷ್ಠತೆಗಾಗಿ ಬಲವಾದ ಸಹಭಾಗಿತ್ವ:
ಸಾರ್ವಜನಿಕ ಮತ್ತು ಖಾಸಗಿ ಭಾಗವಹಿಸುವಿಕೆಯಿಂದ ನಡೆಸಲ್ಪಡುವ ನಿಜವಾದ ರಾಷ್ಟ್ರೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು, ಕ್ರೀಡಾ ಮೂಲಸೌಕರ್ಯ, ಪ್ರತಿಭೆ ಅಭಿವೃದ್ಧಿ ಮತ್ತು ಅಥ್ಲೀಟ್ ಬೆಂಬಲದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ಪರಿಣತಿಯನ್ನು ಪಡೆದುಕೊಳ್ಳಲು ಸರ್ಕಾರವು ಖಾಸಗಿ ಅಕಾಡೆಮಿಗಳು, ಕಾರ್ಪೊರೇಟ್ ಪಾಲುದಾರರು ಮತ್ತು ಇತರ ಸಂಸ್ಥೆಗಳೊಂದಿಗಿನ ಸಹಯೋಗವನ್ನು ಹೆಚ್ಚಿಸಲಿದೆ.
ಭಾರತದ ಜಾಗತಿಕ ಕ್ರೀಡಾ ಆಕಾಂಕ್ಷೆಗಳಿಗೆ ಬೆಂಬಲ:
ಪರಿಷ್ಕರಿಸಿದ ಖೇಲೋ ಇಂಡಿಯಾ ಯೋಜನೆಯನ್ನು ಪೂರೈಸಲು, ಸರ್ಕಾರವು 2026-31 ರ ಅವಧಿಗೆ ಬಲವರ್ಧಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ನೆರವು (ಎ ಎನ್ ಎಸ್ ಎಫ್) ಯೋಜನೆಗೂ ಅನುಮೋದನೆ ನೀಡಿದೆ. ಈ ಯೋಜನೆಯು ತರಬೇತಿ, ಕ್ರೀಡಾ ವಿಜ್ಞಾನ, ಆಧುನಿಕ ಉಪಕರಣಗಳು, ಅಂತಾರಾಷ್ಟ್ರೀಯ ಮಾನ್ಯತೆ, ತರಬೇತಿ ಶಿಬಿರಗಳು, ವಿದೇಶಿ ತಜ್ಞರ ನಿಯೋಜನೆ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಧನಸಹಾಯ ನೀಡುವ ಮೂಲಕ ಭಾರತೀಯ ಕ್ರೀಡಾಪಟುಗಳು ಮತ್ತು ತಂಡಗಳನ್ನು ಬೆಂಬಲಿಸುತ್ತದೆ. ಇದು ಗ್ಲೋಬಲ್ ಸೌತ್ ದೇಶಗಳೊಂದಿಗೆ ಕ್ರೀಡಾ ಸಹಕಾರವನ್ನು ಬೆಂಬಲಿಸುತ್ತದೆ ಮತ್ತು ಭಾರತದ ದೇಸೀಯ ಕ್ರೀಡೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುತ್ತದೆ.
ವಿಕಸಿತ ಭಾರತಕ್ಕಾಗಿ ರಾಷ್ಟ್ರೀಯ ಮಿಷನ್:
ಪರಿಷ್ಕರಿಸಿದ ಖೇಲೋ ಇಂಡಿಯಾ ಯೋಜನೆಯು ಭಾರತದ ಕ್ರೀಡಾ ಭವಿಷ್ಯದಲ್ಲಿ ಮಾಡಲಾದ ಅತ್ಯಂತ ದೊಡ್ಡ ಹೂಡಿಕೆಗಳಲ್ಲಿ ಒಂದಾಗಿದೆ. ಕ್ರೀಡಾ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ, ಇದು ಯುವ ಭಾರತೀಯರಿಗೆ ಅವಕಾಶ, ಆತ್ಮವಿಶ್ವಾಸ ಮತ್ತು ಶ್ರೇಷ್ಠತೆಯೊಂದಿಗೆ ಸಬಲೀಕರಣಗೊಳಿಸುವ ರಾಷ್ಟ್ರೀಯ ಮಿಷನ್ ಆಗಿದೆ.
ತಳಮಟ್ಟದ ಪ್ರತಿಭೆಯಿಂದ ಜಾಗತಿಕ ಕ್ರೀಡಾ ಯಶಸ್ಸಿನವರೆಗೆ ತಡೆರಹಿತ ಮಾರ್ಗವನ್ನು ಸೃಷ್ಟಿಸುವ ಮೂಲಕ, ಈ ಯೋಜನೆಯು ಚಾಂಪಿಯನ್ ಗಳನ್ನು ಪೋಷಿಸಲು, ಫಿಟ್‌ನೆಸ್ ಸಂಸ್ಕೃತಿಯನ್ನು ಪ್ರೇರೇಪಿಸಲು, ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಕಸಿತ ಭಾರತ@2047 ರ ದೃಷ್ಟಿಕೋನದತ್ತ ಸಾಗುತ್ತಿರುವಾಗ ದೇಶವನ್ನು ವಿಶ್ವದ ಪ್ರಮುಖ ಕ್ರೀಡಾ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಗುರಿಯನ್ನು ಹೊಂದಿದೆ.
*****