ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2015ರ ನವೆಂಬರ್ ನಲ್ಲಿ ಪ್ರಕಟಿಸಲಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ -2015 ಅನ್ವಯ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಓಜೆಕೆ) ಮತ್ತು ಛಂಬ್ ನಿಂದ ಸ್ಥಳಾಂತರಗೊಂಡಿರುವ 36,384 ಕುಟುಂಬಗಳಿಗೆ 2000 ಕೋಟಿ ರೂಪಾಯಿಗಳ ಕೇಂದ್ರ ನೆರವಿಗೆ ತನ್ನ ಅನುಮೋದನೆ ನೀಡಿದೆ.
ಈ ಪ್ಯಾಕೇಜ್ ರೀತ್ಯ ಸ್ಥಳಾಂತರಗೊಂಡಿರುವ ಪ್ರತಿ ಕುಟುಂಬಕ್ಕೆ ಆದಾಯ ಗಳಿಕೆಗಾಗಿ ಮತ್ತು ತಮ್ಮ ಜೀವನೋಪಾಯ ರೂಪಿಸಿಕೊಳ್ಳಲು 5.5 ಲಕ್ಷ ರೂಪಾಯಿಗಳ ಸೌಲಭ್ಯವನ್ನು ವಿತರಿಸಲಾಗುತ್ತದೆ. ಅರ್ಹ ಕುಟುಂಬಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ವಿತರಿಸಲು ಹಣವನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಲಾಗುತ್ತದೆ.
1947ರಲ್ಲಿ ದೇಶ ವಿಭಜನೆಯಾದ ತರುವಾಯ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದಿಂದ ಸಾವಿರಾರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಲಸೆ ಬಂದವು. ತರುವಾಯ, 1965 ಮತ್ತು 1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಛಂಬ್ ನಯಾಬಟ್ ಪ್ರದೇಶದಿಂದ ದೊಡ್ಡ ಸಂಖ್ಯೆಯ ಕುಟುಂಬಗಳು ಸ್ಥಳಾಂತರಗೊಂಡವು. ಪಿಓಜೆಕೆ ಮತ್ತು ಛಂಬ್ ನಿಂದ ಸ್ಥಳಾಂತರಗೊಂಡ ಜನರು ಅನುಭವಿಸುತ್ತಿರುವ ತೊಂದರೆ ತಪ್ಪಿಸಲು ಮತ್ತು ಪುನರ್ವಸತಿ ಕಲ್ಪಿಸಲು ಕಾಲ ಕಾಲಕ್ಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರಗಳು ಹಲವು ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ ಒದಗಿಸುತ್ತಿವೆ.
AKT/VBA/SH