Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆ ಮೆಟ್ರೊ ಯೋಜನೆಗಳ ಶಂಕುಸ್ಥಾಪನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ

ಪುಣೆ ಮೆಟ್ರೊ ಯೋಜನೆಗಳ ಶಂಕುಸ್ಥಾಪನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ


ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಜಿಷ್ಣು ದೇವ್ ವರ್ಮಾ ಜಿ, ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಮನೋಹರ್ ಲಾಲ್ ಜಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಶ್ರೀಮತಿ ಸುನೇತ್ರಾ ಅಜಿತ್ ಪವಾರ್ ಜಿ, ಎಲ್ಲಾ ಸಚಿವರೆ, ಸಂಸದರೆ ಮತ್ತು ಶಾಸಕರೆ, ಇತರೆ ಜನಪ್ರತಿನಿಧಿಗಳೆ ಹಾಗೂ ಪುಣೆಯ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ದೀಪಾವಳಿ ಹಬ್ಬ ಹತ್ತಿರದಲ್ಲೇ ಇದೆ. ಎಲ್ಲಕ್ಕಿಂತ ಮೊದಲು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ!

ಸ್ನೇಹಿತರೆ,

ಜನರ ಜೀವನದಲ್ಲಿ ಹೊಸ ಸೌಲಭ್ಯವೊಂದು ಸೇರ್ಪಡೆಯಾದಾಗ ಹಬ್ಬಗಳ ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತದೆ. ಪುಣೆಯ ಜನರಿಗೆ ಇಂದೊಂದು ಅತ್ಯಂತ ಸಂತೋಷದ ಸಂದರ್ಭ. ಪುಣೆ ಮೆಟ್ರೊದ ಮತ್ತೊಂದು ಮಾರ್ಗವನ್ನು ಇಂದು ಉದ್ಘಾಟಿಸುತ್ತಿರುವುದು ನನಗೆ ಸಂತೋಷ ತಂದಿದೆ. 10 ವರ್ಷಗಳ ಹಿಂದೆ ಪುಣೆಯಲ್ಲಿ ಈ ಯೋಜನೆಯ ಮೊದಲ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. ಹಿಂಜವಾಡಿ ಮತ್ತು ಶಿವಾಜಿನಗರದ ನಡುವೆ ಮೆಟ್ರೊ ಸೇವೆ ಆರಂಭವಾಗುತ್ತಿರುವುದರಿಂದ, ಪುಣೆಯ ಪ್ರಮುಖ ಐಟಿ ಕೇಂದ್ರಗಳಲ್ಲಿ ಒಂದಕ್ಕೆ ಉತ್ತಮ ಸಂಪರ್ಕ ಸೌಲಭ್ಯ ದೊರೆಯಲಿದೆ. ಇಂದು ಕಾಮಗಾರಿ ಆರಂಭವಾಗಿರುವ ಈ ಹೊಸ ಮಾರ್ಗವು ಪುಣೆಯ ಹಳೆಯ ಮತ್ತು ಹೊಸ ಭಾಗಗಳ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ. ಇದಕ್ಕಾಗಿ ಪುಣೆ ಮತ್ತು ಮಹಾರಾಷ್ಟ್ರದ ಎಲ್ಲಾ ಜನರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಪುಣೆ ಯಾವಾಗಲೂ ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಹೊಸ ದಿಕ್ಕು ಮತ್ತು ಆಲೋಚನೆಗಳನ್ನು ನೀಡಿದ ಕೇಂದ್ರವಾಗಿದೆ. ಇಂದು ‘ವಿಕಸಿತ ಭಾರತ’ದ ಹೊಸ ಚೈತನ್ಯಕ್ಕೆ ಪುಣೆ ದಿಕ್ಸೂಚಿಯಾಗಿದೆ. ಐಟಿ, ವಾಹನ ಉದ್ಯಮ, ಔಷಧ ವಲಯ, ಸ್ಟಾರ್ಟಪ್‌ಗಳು, ನಾವೀನ್ಯತೆ ಮತ್ತು ಉತ್ಪಾದನಾ ವಲಯ ಹೀಗೆ ಹಲವು ಕ್ಷೇತ್ರಗಳಲ್ಲಿ ಪುಣೆಯು ದೇಶದ ಯುವಜನರ ಕನಸುಗಳು ಮತ್ತು ಆಕಾಂಕ್ಷೆಗಳ ಗಮ್ಯತಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಮೆಟ್ರೊ ಸಂಪರ್ಕ ಬಲಗೊಳ್ಳುತ್ತಿರುವುದು ಪುಣೆ ನಗರದ ಅಭಿವೃದ್ಧಿಗೆ ಹೊಸ ಆವೇಗ ನೀಡಲಿದೆ.

ಸ್ನೇಹಿತರೆ,

ಪುಣೆ ಮೆಟ್ರೊದ ಉದ್ಘಾಟನೆ ಮತ್ತು ವಿಸ್ತರಣೆಯು ‘ವಿಕಸಿತ ಭಾರತ’ಕ್ಕಾಗಿ ನಾವು ನಗರಗಳನ್ನು ಹೇಗೆ ರೂಪಿಸುತ್ತಿದ್ದೇವೆ ಎಂಬುದನ್ನು ತೋರಿಸುತ್ತಿದೆ. ಹಿಂದೆ, ಒಂದು ನಗರದ ಗುರುತು ಅದರ ಕೈಗಾರಿಕೆಗಳು, ಪ್ರಸಿದ್ಧ ಖಾದ್ಯಗಳು, ಹಣ್ಣುಗಳು ಅಥವಾ ಬೆಳೆಗಳಿಂದ ನಿರ್ಧಾರವಾಗುತ್ತಿತ್ತು. ಆದರೆ ಇಂದು ನಗರಗಳ ಗುರುತಿಗೆ ಇನ್ನೂ 2 ಮಾನದಂಡಗಳು ಸೇರ್ಪಡೆಗೊಂಡಿವೆ. ಮೊದಲನೆಯದು, ಆ ನಗರವು ಎಷ್ಟು ಸ್ಪರ್ಧಾತ್ಮಕವಾಗಿದೆ ಎಂಬುದು. ಎರಡನೆಯದು, ಅಲ್ಲಿ ಜೀವನ ನಡೆಸಲು ಎಷ್ಟು ಅನುಕೂಲಕರವಾಗಿದೆ ಎಂಬುದು. ಮೆಟ್ರೊ ಯೋಜನೆಗಳು ಯಾವುದೇ ನಗರಕ್ಕೆ ಈ ಎರಡೂ ಮಾನದಂಡಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಪುಣೆ ಮೆಟ್ರೊ ವಿಸ್ತರಣೆಯಾಗುತ್ತಿದ್ದಂತೆ, ಅದು ಪುಣೆಯ ನಿವಾಸಿಗಳ ಸಮಯ ಉಳಿಸುತ್ತಿದೆ, ಅವರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತಿದೆ. ಒಂದು ನಗರದಲ್ಲಿ ಸಮಯ ಉಳಿತಾಯವಾದರೆ, ಅಲ್ಲಿನ ಉತ್ಪಾದಕತೆ ಹೆಚ್ಚಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ನಗರದ ಉತ್ಪಾದಕತೆ ಹೆಚ್ಚಾದಾಗ, ದೇಶದ ಆರ್ಥಿಕತೆಯು ವೇಗ ಪಡೆದುಕೊಳ್ಳುತ್ತದೆ. ಆರ್ಥಿಕತೆಯು ಬೆಳೆದಾಗ, ಬಡವರು ಮತ್ತು ಮಧ್ಯಮ ವರ್ಗದವರು – ಇಬ್ಬರಿಗೂ ಪ್ರಯೋಜನವಾಗುತ್ತದೆ.

ಸ್ನೇಹಿತರೆ,

ಇಂದಿನ ಈ ಕಾರ್ಯಕ್ರಮವು ಜನಪರ ಮತ್ತು ಕ್ರಿಯಾಶೀಲ ಉತ್ತಮ ಆಡಳಿತಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ದೇಶದಲ್ಲಿ ಮೊದಲ ಮೆಟ್ರೊ 1984ರಲ್ಲಿ ಕಾರ್ಯಾರಂಭ ಮಾಡಿತು. ನಂತರದ 30 ವರ್ಷಗಳಲ್ಲಿ ಕೇವಲ 248 ಕಿಲೋಮೀಟರ್‌ ಮೆಟ್ರೊ ಮಾರ್ಗಗಳನ್ನು ಮಾತ್ರ ನಿರ್ಮಿಸಲಾಯಿತು. ಕೇವಲ 248 ಕಿಲೋಮೀಟರ್‌ಗಳು! 2014ರ ವರೆಗೆ, ದೇಶದ ಕೇವಲ 5 ನಗರಗಳಲ್ಲಿ ಮಾತ್ರ ಮೆಟ್ರೊ ಸೇವೆಗಳು ಲಭ್ಯವಿದ್ದವು. ಒಂದು ವೇಳೆ ಅದೇ ಹಳೆಯ ಚಿಂತನೆ ಮುಂದುವರಿದಿದ್ದರೆ, ಹಳೆಯ ಸರ್ಕಾರವೇ ಅಧಿಕಾರದಲ್ಲಿ ಉಳಿದಿದ್ದರೆ, ಹಳೆಯ ಕೆಲಸ ಸಂಸ್ಕೃತಿಯೇ ಮುಂದುವರಿದಿದ್ದರೆ, ಪುಣೆಗೆ ಮೆಟ್ರೊ ತಲುಪಲು ಇನ್ನೂ ಅನೇಕ ದಶಕಗಳೇ ಬೇಕಾಗುತ್ತಿದ್ದವು. ಆದರೆ 2014ರಲ್ಲಿ ಜನರು ಎನ್‌ಡಿಎ ಮೈತ್ರಿಕೂಟಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾವು ದೃಢ ಸಂಕಲ್ಪದೊಂದಿಗೆ ಮುನ್ನಡೆದೆವು. ನಮ್ಮ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಗೆ ಜೀವನ ಸುಲಭಗೊಳಿಸುವುದು, ಸಾರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು ನಮ್ಮ ಸಂಕಲ್ಪವಾಗಿತ್ತು. ಇಂದು ಅದರ ಫಲಿತಾಂಶಗಳನ್ನು ನಾವು ಕಾಣಬಹುದು. ಕಳೆದ 12 ವರ್ಷಗಳಲ್ಲಿ, ದೇಶದ ಮೆಟ್ರೊ ಸಾರಿಗೆ ವ್ಯವಸ್ಥೆ ಸಂಪೂರ್ಣ ಬದಲಾವಣೆಯಾಗಿದೆ. 2014ರಲ್ಲಿ 248 ಕಿಲೋಮೀಟರ್‌ಗಳಷ್ಟಿದ್ದ ಮೆಟ್ರೊ ಜಾಲವು ಇಂದು ಸುಮಾರು 1,200 ಕಿಲೋಮೀಟರ್‌ಗಳಿಗೆ ವಿಸ್ತರಿಸಿದೆ. 2014ರಲ್ಲಿ ಕೇವಲ 5 ನಗರಗಳಲ್ಲಿದ್ದ ಮೆಟ್ರೊ ಸೇವೆಗಳು ಇಂದು 26 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿದಿನ 1 ಕೋಟಿಗೂ ಹೆಚ್ಚು ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂದು ಭಾರತದ ಮೆಟ್ರೊ ಜಾಲವು ವಿಶ್ವದ ಅಗ್ರ 3 ಮೆಟ್ರೊ ಜಾಲಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಸ್ನೇಹಿತರೆ,

ಮಹಾರಾಷ್ಟ್ರದ ಪರಿಸ್ಥಿತಿಯೂ ದೇಶದ ಇತರೆ ಭಾಗಗಳಂತೆಯೇ ಇತ್ತು. 2014ರಲ್ಲಿ ಮೊದಲ ಬಾರಿಗೆ ಎನ್‌ಡಿಎ ನೇತೃತ್ವದ ‘ಡಬಲ್ ಇಂಜಿನ್’ ಸರ್ಕಾರ ರಚನೆಯಾದಾಗ, ಮಹಾರಾಷ್ಟ್ರದಲ್ಲಿ ಕೇವಲ 10-11 ಕಿಲೋಮೀಟರ್‌ಗಳಷ್ಟು ಮೆಟ್ರೊ ಮಾರ್ಗಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇಂದು ಮಹಾರಾಷ್ಟ್ರದಲ್ಲಿ ಸುಮಾರು 175 ಕಿಲೋಮೀಟರ್‌ ಮೆಟ್ರೊ ಮಾರ್ಗಗಳು ಸೇವೆಯಲ್ಲಿವೆ. 680 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಮೆಟ್ರೊ ಕಾರಿಡಾರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಂದು ಕೇವಲ ಮಹಾರಾಷ್ಟ್ರದ ಮೆಟ್ರೊ ಮೂಲಸೌಕರ್ಯವೊಂದರಲ್ಲೇ 2.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ಈ ಹಣವು ಕಾರ್ಮಿಕರ ಕೈ ಸೇರುತ್ತಿದೆ. ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ,  ಅಂಗಡಿಗಳು ಮತ್ತು ಕಾರ್ಖಾನೆಗಳಲ್ಲಿಯೂ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೆ,

ಈ ಮೆಟ್ರೊ ಯೋಜನೆಯು ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. ಈ ಮೆಟ್ರೊ ಮಾರ್ಗವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಂದರೆ, ಸರ್ಕಾರ ಮತ್ತು ಖಾಸಗಿ ವಲಯದ ಜಂಟಿ ಪ್ರಯತ್ನದಿಂದ ಇದನ್ನು ನಿರ್ಮಿಸಲಾಗಿದೆ. ಇದೊಂದು ಅಭಿವೃದ್ಧಿ ಮಾದರಿಯಾಗಿದ್ದು, ಇದರ ಯಶಸ್ಸು ದೇಶದ ಪ್ರಗತಿಯನ್ನು ಇನ್ನಷ್ಟು ವೇಗಗೊಳಿಸಲಿದೆ.

ಸ್ನೇಹಿತರೆ,

ಇಂದು ಭಾರತದ ಪ್ರತಿಯೊಬ್ಬ ನಾಗರಿಕ, ಭಾರತದ ಪ್ರತಿಯೊಬ್ಬ ಯುವ ಪುತ್ರ ಮತ್ತು ಪುತ್ರಿ ‘ವಿಕಸಿತ ಭಾರತ’ ನಿರ್ಮಿಸಲು ತಮ್ಮ ಪೂರ್ಣ ಶಕ್ತಿಯೊಂದಿಗೆ ಶ್ರಮಿಸುತ್ತಿದ್ದಾರೆ. ಇಂದು ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ “ನಾವು ಇದನ್ನು ಸಾಧಿಸುತ್ತೇವೆ! ನಾವು ಇದನ್ನು ಸಾಧಿಸುತ್ತೇವೆ!” ಎಂದು ಹೇಳುತ್ತಿದ್ದಾರೆ. ಇಂತಹ ಉತ್ಸಾಹ ಮತ್ತು ಮನೋಭಾವ ದೇಶಾದ್ಯಂತ ಎದ್ದು ಕಾಣುತ್ತಿದೆ. ಕಳೆದ 12 ವರ್ಷಗಳಲ್ಲಿ ದೇಶದ ಶಕ್ತಿಯು ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಹೊಸ ರೈಲು ಮಾರ್ಗಗಳ ವಿದ್ಯುದೀಕರಣ, ಉದ್ದನೆಯ ಸುರಂಗಗಳು ಮತ್ತು ಬೃಹತ್ ಸೇತುವೆಗಳ ರೂಪದಲ್ಲಿ ಪ್ರತಿಬಿಂಬಿತವಾಗಿದೆ. ದೇಶಾದ್ಯಂತ ಹಲವಾರು ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಾಕಾರಗೊಳ್ಳುತ್ತಿವೆ. ಮುಂಬರುವ ವರ್ಷಗಳಲ್ಲಿ ಇದರ ಜತೆಗೆ, ತಮ್ಮ ನಗರಗಳನ್ನು ವಿಶ್ವದ ಅತ್ಯುತ್ತಮ ನಗರಗಳನ್ನಾಗಿ ರೂಪಿಸಲು ದೇಶವು ತನ್ನ ಶಕ್ತಿಯನ್ನು ವಿನಿಯೋಗಿಸಲಿದೆ.

ಸ್ನೇಹಿತರೆ,

ನಮ್ಮ ನಗರಗಳು ಕೇವಲ ವಾಸಸ್ಥಳಗಳಲ್ಲ, ಅವು ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರಗಳೂ ಆಗಿವೆ. ದೇಶಾದ್ಯಂತ ಇರುವ ನೂರಾರು ಸಣ್ಣ ನಗರಗಳನ್ನು ನಾವು ‘ಅಭಿವೃದ್ಧಿ ಕೇಂದ್ರ’ಗಳನ್ನಾಗಿ ಪರಿವರ್ತಿಸಬೇಕಿದೆ. ಇದೇ ದೂರದೃಷ್ಟಿಯೊಂದಿಗೆ, ಈ ವರ್ಷದ ಫೆಬ್ರವರಿಯಲ್ಲಿ ‘ಅರ್ಬನ್ ಚಾಲೆಂಜ್ ಫಂಡ್’ಗೆ ಅನುಮೋದನೆ ನೀಡಲಾಯಿತು. ಈ ನಿಧಿಗಾಗಿ ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಬೆಂಬಲ ನೀಡುತ್ತಿದೆ. ಮುಂಬರುವ ವರ್ಷಗಳಲ್ಲಿ ದೇಶದಾದ್ಯಂತ ಇರುವ ನಗರಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವುದು ಇದರ ಗುರಿಯಾಗಿದೆ. ಸ್ಥಳೀಯ ಸಂಸ್ಥೆಗಳು, ಖಾಸಗಿ ವಲಯದ ನಮ್ಮ ಸ್ನೇಹಿತರು ಮತ್ತು ಇತರೆ ಎಲ್ಲರೂ ಈ ನಿಟ್ಟಿನಲ್ಲಿ ಮುಂದೆ ಬರಬೇಕೆಂದು ನಾನು ಕೋರುತ್ತೇನೆ. ನಾವೆಲ್ಲರೂ ಒಂದು ‘ಮಿಷನ್'(ಕಾರ್ಯಯೋಜನೆ) ಮಾದರಿಯಲ್ಲಿ ಕೆಲಸ ಮಾಡಬೇಕಿದೆ. ಈ ಪ್ರಯತ್ನದಲ್ಲಿ ಮಹಾರಾಷ್ಟ್ರವು ತನ್ನ ಪಾತ್ರವನ್ನು ಇನ್ನಷ್ಟು ವಿಸ್ತರಿಸಲಿದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಇಂದು ಜಗತ್ತಿನಾದ್ಯಂತ ಭಾರತದ ಬಗ್ಗೆ ಚರ್ಚೆಯಾಗಲು ಇನ್ನ 2 ಕಾರಣಗಳಿವೆ. ಮೊದಲನೆಯದಾಗಿ, ಜಾಗತಿಕ ಮಟ್ಟದಲ್ಲಿ ಕಠಿಣ ಸನ್ನಿವೇಶಗಳಿದ್ದರೂ, ಭಾರತವು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ದರ ಕಾಯ್ದುಕೊಂಡಿದೆ. ಎರಡನೆಯದಾಗಿ, ಕೇವಲ 10-12 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ಈ ಸಂಗತಿಯು ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿಯಲ್ಲಿ ಬಹಿರಂಗಗೊಂಡಿದೆ. ನಮ್ಮ ದೇಶದಲ್ಲಿ ಅನೇಕ ತಲೆಮಾರುಗಳು ಬಡತನ ನಿರ್ಮೂಲನೆಯ ಭರವಸೆಗಳು ಮತ್ತು ಹೇಳಿಕೆಗಳನ್ನು ಕೇಳುತ್ತಲೇ ಬೆಳೆದವು. ಹಿಂದೆ, ಬಡತನದ ವಿರುದ್ಧದ ಹೋರಾಟವು ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಭಾರತವು ವಾಸ್ತವ ನೆಲೆಯಲ್ಲಿ ಬಡತನವನ್ನು ಸೋಲಿಸುತ್ತಿದೆ.

ಸ್ನೇಹಿತರೆ,

ಇಂದು ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶವಾಗಿದ್ದಲ್ಲದೆ, ಅತ್ಯಂತ ವೇಗವಾಗಿ ಬಡತನ ಕಡಿಮೆ ಮಾಡುತ್ತಿರುವ ದೇಶವೂ ಆಗಿದೆ. ಈ ಎರಡೂ ಸಾಧನೆಗಳು ಪರಸ್ಪರ ಸಂಬಂಧ ಹೊಂದಿವೆ. ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಭಾರತದ ಬಜೆಟ್ ವಿಸ್ತರಿಸುತ್ತಿದೆ. ಜನರ ಕಲ್ಯಾಣಕ್ಕಾಗಿ ಮಾಡುವ ಹೂಡಿಕೆಗಳು ಹೆಚ್ಚಾಗುತ್ತಿವೆ. ಹಿಂದೆ ಹಗರಣಗಳು, ಪಕ್ಷಪಾತ ಮತ್ತು ಸೋರಿಕೆಗಳ ಮೂಲಕ ಕಣ್ಮರೆಯಾಗುತ್ತಿದ್ದ ಹಣ, ಈಗ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದೆ. ದೇಶದ ಸಂಪನ್ಮೂಲಗಳನ್ನು ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಮೆಟ್ರೊ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಿದಾಗ ಹಾಗೂ ಸರ್ಕಾರವು ವಿದ್ಯುತ್, ನೀರು ಮತ್ತು ಅನಿಲ ಪೈಪ್‌ಲೈನ್‌ಗಳಲ್ಲಿ ಹೂಡಿಕೆ ಹೆಚ್ಚಿಸಿದಾಗ, ಜನರ ಜೀವನಮಟ್ಟ ಸುಧಾರಿಸುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.

ಸ್ನೇಹಿತರೆ,

ಬಡವರಿಗಾಗಿ ಮನೆಗಳು, ಶೌಚಾಲಯಗಳು, ಪ್ರತಿ ಮನೆಗೂ ನಲ್ಲಿ ನೀರು ಮತ್ತು ಅನಿಲ ಸಂಪರ್ಕ ಸೌಲಭ್ಯಗಳು ಜನರ ಆತ್ಮವಿಶ್ವಾಸ ಹೆಚ್ಚಿಸಿವೆ, ಅವರ ಸಮಯ ಉಳಿಸಿವೆ. ಈ ಉಳಿತಾಯವಾದ ಸಮಯವನ್ನು ಅವರು ತಮ್ಮ ಕುಟುಂಬಗಳಿಗೆ ಹೆಚ್ಚುವರಿ ಆದಾಯ ಗಳಿಸಲು ಬಳಸಿಕೊಳ್ಳುತ್ತಿದ್ದಾರೆ.

ಸ್ನೇಹಿತರೆ,

ಕಳೆದ ತಿಂಗಳಷ್ಟೇ ನಿಮ್ಮ ಆಶೀರ್ವಾದದೊಂದಿಗೆ ಸರ್ಕಾರಿ ಮುಖ್ಯಸ್ಥನಾಗಿ ನಾನು 25 ವರ್ಷಗಳನ್ನು ಪೂರೈಸಿದೆ. “ಬಡವರನ್ನು ಸಬಲೀಕರಣಗೊಳಿಸಿದರೆ, ಅವರು ಬಡತನದಿಂದ ಹೊರಬರಲು ಧೈರ್ಯ ಬರುತ್ತದೆ” ಎಂಬುದು ನಮ್ಮ ಸರ್ಕಾರದ ಧ್ಯೇಯವಾಕ್ಯವಾಗಿದೆ. ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಇದೇ ಆಲೋಚನೆಯೊಂದಿಗೆ ‘ಗರೀಬ್ ಕಲ್ಯಾಣ ಮೇಳ’ಗಳ ಸಂಪ್ರದಾಯ ಆರಂಭಿಸಿದ್ದು ನನಗೆ ನೆನಪಿದೆ. ಈ ಕಾರ್ಯಕ್ರಮಗಳು ಕಲ್ಯಾಣ ಯೋಜನೆಗಳನ್ನು ನೇರವಾಗಿ ಬಡವರಿಗೆ ತಲುಪಿಸುವತ್ತ ಗಮನ ಹರಿಸಿದ್ದವು. ಬಡ ನಾಗರಿಕರನ್ನು ವೇದಿಕೆಯ ಮೇಲೆ ಆಹ್ವಾನಿಸಲಾಗುತ್ತಿತ್ತು. ಅವರು ಬಡತನ ಸೋಲಿಸುವ ಪ್ರತಿಜ್ಞೆ ಮಾಡುತ್ತಿದ್ದರು, ಹೊಸ ಆತ್ಮವಿಶ್ವಾಸದೊಂದಿಗೆ ಮನೆಗೆ ಮರಳುತ್ತಿದ್ದರು.

ಸ್ನೇಹಿತರೆ,

25 ವರ್ಷಗಳ ಹಿಂದೆ ನಾನು ಆರಂಭಿಸಿದ ಕೆಲಸವು ಇಂದಿಗೂ ಎಡೆಬಿಡದೆ ಮುಂದುವರಿದಿದೆ. ಇದನ್ನೇ ನಾನು ‘ಸಬಲೀಕರಣಕ್ಕಾಗಿ ಅಧಿಕಾರ’ ಎಂದು ಕರೆಯುತ್ತೇನೆ. ‘ಸಬಲೀಕರಣಕ್ಕಾಗಿ ಅಧಿಕಾರ’ವೇ ನಿಜವಾದ ಉತ್ತಮ ಆಡಳಿತ. ಈ ಪರಿವರ್ತನೆಯು ಒಂದೇ ರಾತ್ರಿಯಲ್ಲಿ ಸಂಭವಿಸಿದ್ದಲ್ಲ. ಹಿಂದಿನ ಸರ್ಕಾರಗಳು ಕೇವಲ ಘೋಷಣೆಗಳನ್ನು ಕೂಗುತ್ತಾ ಸುಸ್ತಾಗಿದ್ದವು. ನಾವು ಪ್ರತಿಯೊಂದು ಕೊಂಡಿಯನ್ನು ಜೋಡಿಸಿದೆವು. ಲಕ್ಷಾಂತರ ಜನರ ಕನಸುಗಳನ್ನು ಒಟ್ಟಿಗೆ ಹೆಣೆದೆವು. ಇದು ವರ್ಷಗಳ ಕಾಲ ನಡೆಸಿದ ಚಿಂತನಾಶೀಲ ಮತ್ತು ಸುಯೋಜಿತ ಪ್ರಯತ್ನಗಳ ಫಲವಾಗಿದೆ. ಇದೇ ಕಾರಣಕ್ಕಾಗಿಯೇ 50 ಕೋಟಿ ಭಾರತೀಯರು ಬಡತನ ಸೋಲಿಸಿದ್ದಾರೆ.

ಸ್ನೇಹಿತರೆ,

ಬಡತನ ಕಡಿಮೆಯಾದಾಗ, ಅದರ ಪ್ರಯೋಜನಗಳು ಬಡತನದಿಂದ ಹೊರಬಂದ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬುತ್ತದೆ. ಇದು ಹೊಸ ಮಧ್ಯಮ ವರ್ಗವನ್ನು ಸೃಷ್ಟಿಸುತ್ತದೆ. ಈ ಹೊಸ ಮಧ್ಯಮ ವರ್ಗಕ್ಕೆ ಹೊಸ ಕನಸುಗಳನ್ನು ಹೊತ್ತು ತರುತ್ತದೆ. ಅವರ ಖರೀದಿ ಶಕ್ತಿಯು ಮಾರುಕಟ್ಟೆಗಳಿಗೆ ಚಾಲನೆ ನೀಡುತ್ತದೆ. ಅಂಗಡಿಗಳಿಂದ ಹಿಡಿದು ಕಾರ್ಖಾನೆಗಳವರೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದಲ್ಲಿ ಬಡತನ ಇಳಿಕೆಯು ಭಾರತೀಯ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಸ್ನೇಹಿತರೆ,

‘ವಿಕಸಿತ ಭಾರತ’ದ ಕಡೆಗಿನ ಈ ಪಯಣದಲ್ಲಿ, ನಮ್ಮ ರೈತ ಸಹೋದರ ಸಹೋದರಿಯರೂ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ, ನಮ್ಮ ಸರ್ಕಾರವು ನಿರಂತರವಾಗಿ ರೈತರನ್ನು ಸಬಲೀಕರಣಗೊಳಿಸುತ್ತಿದೆ. ಆದಾಗ್ಯೂ, ಮಹಾರಾಷ್ಟ್ರದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ, ಅನೇಕ ರೈತ ಕುಟುಂಬಗಳು ಪ್ರಸ್ತುತ ತೊಂದರೆಗಳನ್ನು ಎದುರಿಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಆದರೆ, ಈ ನೈಸರ್ಗಿಕ ವಿಕೋಪವು ದೊಡ್ಡ ಸವಾಲುಗಳನ್ನು ಸೃಷ್ಟಿಸಿದೆ. ಮಹಾರಾಷ್ಟ್ರದ ಪ್ರತಿಯೊಬ್ಬ ರೈತ ಸಹೋದರ ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡಲು ಬಯಸುತ್ತೇನೆ; ಈ ಕಠಿಣ ಸಮಯದಲ್ಲಿ, ಎನ್‌ಡಿಎ ಸರ್ಕಾರವು ಸಂಪೂರ್ಣ ಸಂವೇದನೆ ಮತ್ತು ಬದ್ಧತೆಯೊಂದಿಗೆ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಮಹಾರಾಷ್ಟ್ರದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ನನಗೆ ಅರಿವಿದೆ. ರಾಜ್ಯ ಸರ್ಕಾರವು ಈಗಾಗಲೇ ಮುಂಗಡ ನೆರವು ಒದಗಿಸಿದೆ. ನಾನು ‘ಪಿಎಂ-ಕಿಸಾನ್’ ನಿಧಿ ವರ್ಗಾಯಿಸಿದ್ದೇನೆ. ದಯವಿಟ್ಟು ಯಾವುದೇ ಚಿಂತೆ ಮಾಡಬೇಡಿ. ನಾವು ಪ್ರತಿಯೊಬ್ಬ ರೈತನ ಬೆಂಬಲಕ್ಕೆ ನಿಂತಿದ್ದೇವೆ.

ಸ್ನೇಹಿತರೆ,

ದೇಶದ ಜನರಿಗೆ ನಾನು ಮತ್ತೊಂದು ವಿಷಯ ಹೇಳಲು ಬಯಸುತ್ತೇನೆ. ಇದು ಹಬ್ಬಗಳು ಮತ್ತು ಸಂಭ್ರಮಾಚರಣೆಗಳ ಕಾಲ. ಈ ಸಮಯದಲ್ಲಿ ನಾವು ನಮ್ಮ ರೈತ ಸಹೋದರ ಸಹೋದರಿಯರನ್ನು ನೆನಪಿಸಿಕೊಳ್ಳಬೇಕು. ದೀಪಾವಳಿಯ ಸಂತೋಷವು ಅವರ ಮನೆಗಳಲ್ಲೂ ಉಳಿದುಕೊಳ್ಳುವಂತೆ ನಾವು ನೋಡಿಕೊಳ್ಳಬೇಕು. ಇದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು. ಬರಪೀಡಿತ ಪ್ರದೇಶಗಳಲ್ಲಿರುವ ನಮ್ಮ ನಾಗರಿಕರು, ರೈತರು ಮತ್ತು ಹಳ್ಳಿಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಕಷ್ಟಗಳನ್ನು ನಾವು ಮರೆಯಬಾರದು. ನಾವೆಲ್ಲರೂ ಒಟ್ಟಾಗಿ ಈ ಸವಾಲನ್ನು ಎದುರಿಸೋಣ.

ಸ್ನೇಹಿತರೆ,

ಸಾಮೂಹಿಕ ಪ್ರಯತ್ನ ಮತ್ತು ಒಗ್ಗಟ್ಟಿನ ಶ್ರಮವೇ ‘ವಿಕಸಿತ ಭಾರತ’ದ ಜೀವಾಳವಾಗಿದೆ. ಇದೇ ಸ್ಫೂರ್ತಿಯೊಂದಿಗೆ, ನಾವು ರಾಷ್ಟ್ರದ ಅಭಿವೃದ್ಧಿಗಾಗಿ ಸಮರ್ಪಣಾ ಭಾವದಿಂದ ಶ್ರಮಿಸೋಣ. ಈ ಮೆಟ್ರೊ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯಗಳು. ಮುಂಬರುವ ಹಬ್ಬಗಳಿಗಾಗಿ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ತುಂಬು ಧನ್ಯವಾದಗಳು. ಪುಣೆಯ ಜನರೇ, ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ, ಪೂರ್ಣ ಶಕ್ತಿಯೊಂದಿಗೆ ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಮತ್ತು ಕೆಲವು ಭಾಗ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.  ಅವುಗಳ ಮೂಲ ಆಶಯವನ್ನು ತಿಳಿಸುವ ರೀತಿಯಲ್ಲಿ ಇಲ್ಲಿ ಅನುವಾದ ಮಾಡಲಾಗಿದೆ.

 

*****