ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 31 ಆಗಸ್ಟ್ 2026 ರಂದು ಬಿಷ್ಕೆಕ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿ ಒ) ಶೃಂಗಸಭೆಯ ಬದಿಯಲ್ಲಿ ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸಾದಿರ್ ಜಪಾರೋವ್ ಅವರನ್ನು ಭೇಟಿಯಾದರು.
ಕಿರ್ಗಿಜ್ ಗಣರಾಜ್ಯದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಧ್ಯಕ್ಷರಾದ ಜಪಾರೋವ್ ಅವರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅದೇ ದಿನ ಎಸ್ ಸಿ ಒ ಶೃಂಗಸಭೆಯ ಉದ್ಘಾಟನೆಯಾಗುತ್ತಿರುವುದು ವಿಶೇಷ ಅರ್ಥವನ್ನು ನೀಡಿದೆ ಎಂದು ಹೇಳಿದರು. 26ನೇ ಎಸ್ ಸಿ ಒ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರು ಅಧ್ಯಕ್ಷ ಜಪಾರೋವ್ ಅವರನ್ನು ಅಭಿನಂದಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಬಾಂಧವ್ಯದಲ್ಲಿ ಸಾಧಿಸಿದ ಪ್ರಗತಿಯನ್ನು ಪರಾಮರ್ಶಿಸಿದರು ಮತ್ತು ಭಾರತ ಹಾಗೂ ಕಿರ್ಗಿಜ್ ಗಣರಾಜ್ಯದ ನಡುವಿನ ಆಯಕಟ್ಟಿನ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಉಭಯ ದೇಶಗಳ ಅರ್ಥವ್ಯವಸ್ಥೆಗಳ ನಡುವಿನ ಪೂರಕತೆಗಳನ್ನು ಗಮನದಲ್ಲಿಟ್ಟುಕೊಂಡು, ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಅವರು ಒಪ್ಪಿಕೊಂಡರು. ವಿದ್ಯಾರ್ಥಿ ವಿನಿಮಯ ಮತ್ತು ಸಾಂಸ್ಕೃತಿಕ ಸಹಯೋಗಗಳು ಸೇರಿದಂತೆ ಬೆಳೆಯುತ್ತಿರುವ ಸಾರ್ವಜನಿಕ ಸಂಪರ್ಕಗಳ ಕುರಿತು ಅವರು ಚರ್ಚಿಸಿದರು.
ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷತೆಯಲ್ಲಿ ನಡೆದ ಎಸ್ ಸಿ ಒ ಸಭೆಗಳಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದು ಎರಡೂ ದೇಶಗಳ ನಡುವಿನ ನಿಕಟ ಮತ್ತು ಸುದೀರ್ಘ ಸಂಬಂಧಗಳನ್ನು ನಿರೂಪಿಸುವ ಪರಸ್ಪರ ಗೌರವ, ನಂಬಿಕೆ ಮತ್ತು ಬೆಂಬಲವನ್ನು ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷ ಸಾದಿರ್ ಜಪಾರೋವ್ ಅವರ ಆತ್ಮೀಯತೆ ಮತ್ತು ಆತಿಥ್ಯಕ್ಕಾಗಿ ಹಾಗೂ ಎಸ್ ಸಿ ಒ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು.
*****