Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 24, 2016ರಂದು ಆಕಾಶವಾಣಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರೀತಿಯ ದೇಶಬಾಂಧವರೇ, ನಿಮಗೆಲ್ಲ ನಮಸ್ಕಾರ. ರಜಾದಿನಗಳಲ್ಲಿ ಒಬ್ಬೊಬ್ಬರು ಒಂದೊಂದು ಕಾರ್ಯಕ್ರಮ ಹಾಕಿಕೊಂಡಿರ್ತಾರೆ. ಈ ದಿನಗಳಲ್ಲಿ ಮಾವಿನ ಸೀಸನ್ ಇರುತ್ತೆ, ಮಾವಿನ ಹಣ್ಣು ತಿನ್ನಬೇಕು ಅಂತ ಮನಸ್ಸಾಗುತ್ತೆ;  ಮಧ್ಯಾಹ್ನದ ಹೊತ್ತು ಸ್ವಲ್ಪ ಹೊತ್ತು ಮಲಗಬೇಕು,  ಸಮಯ ಸಿಕ್ಕರೆ ಒಳ್ಳೆಯದು ಅನ್ಸುತ್ತೆ. ಆದರೆ, ಈ ಬಾರಿಯ ಭಯಂಕರ ಸೆಖೆ ರಜಾದಿನಗಳ ಮಜಾವನ್ನೇ ಹಾಳು ಮಾಡಿದೆ ಅನ್ನಬಹುದು. ಈ ಕಾರಣಕ್ಕೆ ದೇಶ ಚಿಂತಿತವಾಗೋದು ಸಹಜವೇ ಆಗಿದೆ. ಮತ್ತೆ ಮತ್ತೆ ಬರ ಬಂದರಂತೂ ನೀರಿನ ಆಕರಗಳು ಬತ್ತಿ ಹೋಗುತ್ತವೆ. ಕೆಲವೊಮ್ಮೆ ಒತ್ತುವರಿಯಿಂದಾಗಿಯೋ, ಹೂಳು ಸೇರಿಕೊಂಡಿರೋದ್ರಿಂದಾಗಿಯೋ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯೂ ಕಡಿಮೆ ಆಗುತ್ತದೆ. ಬರದ ಸಂಕಷ್ಟವನ್ನು ನೀಗೋದಕ್ಕಾಗಿ ಸರಕಾರಗಳು ಹಲವು ಬಗೆಯ ಪ್ರಯತ್ನಗಳನ್ನು ಮಾಡಬೇಕು ಅನ್ನೋದಂತೂ ನಿಜ, ಅದರ ಜೊತೆಯಲ್ಲಿ ನಾಗರಿಕರೂ ಕೂಡ ಅನೇಕ ಬಗೆಯಲ್ಲಿ ಪ್ರಯತ್ನಗಳನ್ನು ಮಾಡ್ತಾ ಇರೋದನ್ನು ನಾನು ನೋಡ್ತಾ ಇದ್ದೇನೆ. ಹಲವು ಗ್ರಾಮಗಳಲ್ಲಿ ಈ ಕುರಿತು ಮುನ್ನೆಚ್ಚರಿಕೆ ವಹಿಸುತ್ತಾರೆ; ನೀರಿಗಾಗಿ ಪರಿತಪಿಸೋರಿಗೆ ನೀರಿನ ಮೌಲ್ಯ ಏನು ಅಂತ ಗೊತ್ತಿರುತ್ತೆ.  ಆದ್ದರಿಂದ ಇಂಥ ಸ್ಥಳಗಳಲ್ಲಿ ನೀರಿನ ಕುರಿತು ಒಂದು ಬಗೆಯ ಸಂವೇದನಾಶೀಲತೆ ಬೆಳೆದಿರುತ್ತೆ; ಏನಾದರೊಂದು ಮಾಡುವ ಸಕ್ರಿಯತೆಯೂ ಮೂಡಿರುತ್ತೆ. 
 
ಕೆಲವು ದಿನಗಳ ಹಿಂದೆ ನನಗೆ ಯಾರೋ ಹೇಳ್ತಾ ಇದ್ದರು, ಮಹಾರಾಷ್ಟ್ರದ ಅಹ್ಮದ್ ನಗರ  ಜಿಲ್ಲೆಯ ಹಿವರೇ ಬಾಜ಼ಾರ್ ಗ್ರಾಮದ ಗ್ರಾಮಪಂಚಾಯಿತಿ ಮತ್ತು ಅಲ್ಲಿನ ಗ್ರಾಮವಾಸಿಗಳು ನೀರಿನ ಸಮಸ್ಯೆಯನ್ನು ಬಹಳ ಸೂಕ್ಷ್ಮರೀತಿಯಲ್ಲಿ ನಿಭಾಯಿಸಿದ್ದಾರೆ ಅಂತ.  ನೀರಿನ ಸಂಗ್ರಹ ಮಾಡುವವರು ಹಲವು ಗ್ರಾಮಗಳಲ್ಲಿ ಸಿಗ್ತಾರೆ; ಆದರೆ, ಇವರು ಊರಿನ ರೈತರ ಜೊತೆ ಸಮಾಲೋಚನೆ ಮಾಡಿ, ಅಲ್ಲಿನ ಬೆಳೆಯ ವಿಧಾನವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಕಬ್ಬು, ಬಾಳೆ ಇಂಥ ಹೆಚ್ಚು ನೀರಿನ ಅಗತ್ಯ ಬೀಳೋ  ಬೆಳೆಯನ್ನು ಅವರು ಬೆಳೀಬಾರದು ಅಂತ ನಿರ್ಧಾರ ಮಾಡಿದ್ದಾರೆ. ಕೇಳೋದಕ್ಕೇನೋ ಬಹಳ ಸರಳ ಅನ್ಸುತ್ತೆ; ಆದರೆ ಇದು ಅಷ್ಟು ಸರಳವಾದ ಮಾತಲ್ಲ. ಎಲ್ಲರೂ ಸೇರಿ ಇವರು ಎಂಥ ದೊಡ್ಡ ಸಂಕಲ್ಪವನ್ನು ಮಾಡಿದ್ದಾರೆ ನೋಡಿ. ಯಾರಾದರೂ ಕಾರ್ಖಾನೆಯವರು ನೀರನ್ನು ಬಳಸ್ತಾ ಇರ್ತಾರೆ; ಅವರಿಗೆ, ನೋಡಿ ನೀವು ಬಹಳಷ್ಟು ನೀರನ್ನು ಬಳಸ್ತಾ ಇದ್ದೀರಿ, ಆದ್ರಿಂದ ಕಾರ್ಖಾನೆಯನ್ನು ಬಂದ್ ಮಾಡಿ ಅಂತ ಹೇಳಿದರೆ ಪರಿಣಾಮ ಏನಾಗುತ್ತೆ ಅಂತ ಗೊತ್ತಲ್ವಾ? 
 
ಆದರೆ ಈ ನನ್ನ ರೈತಬಾಂಧವರು, ನೋಡಿ, ಅವರಿಗೆ ಅನ್ನಿಸ್ತು, ಕಬ್ಬಿಗೆ ಬಹಳಷ್ಟು ನೀರು ಬೇಕಲ್ವಾ, ಅದನ್ನು ಬೆಳೆಯೋದೇ ಬೇಡ ಅಂತ. ಅದನ್ನು ಬಿಟ್ಟುಬಿಟ್ರು. ಅದರ ಬದಲು ಕಡಿಮೆ ನೀರಿನ ಅಗತ್ಯ ಇರುವಂಥ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯೋದಕ್ಕೆ ಶುರು ಮಾಡಿದರು. ಅವರು, ತುಂತುರು, ಹನಿನೀರಾವರಿ, ಮಳೆನೀರಿನ ಸಂಗ್ರಹಣೆ, ಅಂತರ್ಜಲ ಮರುಪೂರಣ ಇಂಥ ಎಷ್ಟೊಂದು ಕ್ರಮಗಳನ್ನು ಅನುಸರಿಸಿದ್ದಾರೆ ಅಂತಂದ್ರೆ, ನೀರಿನ ಸಂಕಷ್ಟವನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವ ಸಾಮರ್ಥ್ಯವನ್ನು ಇವತ್ತು ಈ ಗ್ರಾಮ ಪಡೆದಿದೆ. ಆದರೂ, ನಾನು ಹಿವರೇ ಬಾಜ಼ಾರ್ ಅನ್ನೋ ಒಂದು ಚಿಕ್ಕ ಗ್ರಾಮದ ವಿಚಾರ ಮಾತ್ರ ಮಾತಾಡ್ತಾ ಇದ್ದೀನಾ? ಇಲ್ಲ. ಇಂಥ ಅನೇಕ ಗ್ರಾಮಗಳು ನಮ್ಮಲ್ಲಿ ಇವೆ. ಇಂಥ ಎಲ್ಲಾ ಗ್ರಾಮಗಳ ಜನತೆಯ ಇಂಥ ಉತ್ತಮ ಕೆಲಸಕ್ಕಾಗಿ ಅವರಿಗೆ ನಾನು ಅಭಿನಂದನೆಯನ್ನು ಹೇಳ್ತಾ ಇದ್ದೀನಿ. 
 
ಇನ್ನೊಂದು ವಿಷಯ ನನಗೆ ಗೊತ್ತಾಯ್ತು. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಗೋರವಾ ಗ್ರಾಮದಲ್ಲಿ ಗ್ರಾಮಪಂಚಾಯಿತಿಯು ಕೃಷಿ ಹೊಂಡಗಳನ್ನು ತೋಡುವ ಕಾರ್ಯಯೋಜನೆಯನ್ನು ಹಾಕಿಕೊಂಡಿತು. ಸುಮಾರು 27 ಕೃಷಿ ಹೊಂಡಗಳನ್ನು ತೋಡಿತು. ಇದರಿಂದಾಗಿ ಊರಲ್ಲಿನ ಅಂತರ್ಜಲ ಮಟ್ಟ ಸುಧಾರಿಸಿತು; ಬಾವಿಗಳಲ್ಲಿ ನೀರು ಮೇಲೆ ಬಂತು. ಬೆಳೆಗೆ ನೀರಿನ ಅಗತ್ಯ ಬಿದ್ದಾಗಲೆಲ್ಲಾ ನೀರು ಸಿಕ್ತು. ಅವರು ಒಂದು ಅಂದಾಜಿನಲ್ಲಿ ಹೇಳ್ತಾರೆ, ಅವರ ಕೃಷಿ ಉತ್ಪನ್ನದಲ್ಲಿ ಸುಮಾರು ಶೇಕಡಾ 20ರಷ್ಟು ವೃದ್ಧಿಯಾಗಿದೆ ಅಂತ. ನೀರಿನ ಉಳಿತಾಯ ಅಂತೂ ಆಯಿತು; ಜೊತೆಗೆ ಅಂತರ್ಜಲದ ಮಟ್ಟ ಮೇಲೆ ಬಂದಾಗ, ನೀರಿನ ಗುಣಮಟ್ಟದಲ್ಲಿಯೂ ಸುಧಾರಣೆ ಆಗುತ್ತೆ. ಜಗತ್ತಿನಲ್ಲಿ ಹೇಳ್ತಾರೆ, ಶುದ್ಧ ಕುಡಿಯುವ ನೀರು ದೇಶದ ಜಿಡಿಪಿಯ ವೃದ್ಧಿಗೆ ಕಾರಣವಾಗುತ್ತೆ ಅಂತ. ಆರೋಗ್ಯದ ಸುಧಾರಣೆಯಂತೂ ಆಗೇ ಆಗುತ್ತೆ. 
ಕೆಲವೊಮ್ಮೆ ಅನ್ನಿಸುತ್ತೆ, ಭಾರತ ಸರಕಾರ ರೈಲಿನ ಮುಖಾಂತರ ಲಾತೂರಿಗೆ ನೀರನ್ನು ತಲುಪಿಸಿದ್ದು ಜಗತ್ತಿನ ಮಟ್ಟಿಗೆ ಒಂದು ಸುದ್ಧಿ ಆಗುತ್ತೆ. ರೈಲ್ವೇ ಇಲಾಖೆ ಎಷ್ಟೊಂದು ಶೀಘ್ರಗತಿಯಲ್ಲಿ ಕಾರ್ಯಾಚರಣೆ ಮಾಡಿತು ಅನ್ನೋದು ಪ್ರಶಂಸನೀಯವೇ ಸರಿ, ಅದಕ್ಕಿಂತ ಹೆಚ್ಚಿನ ಪ್ರಶಂಸೆಗೆ ಪಾತ್ರರು ಅಂದರೆ ಆ ಊರಿನ ನಾಗರಿಕರು. ಇಂಥ ಅನೇಕ ಜನೋಪಯೋಗಿ ಕಾರ್ಯಕ್ರಮಗಳು ಜನರ ಪ್ರಯತ್ನದಿಂದಲೇ ನಡೆಯುತ್ವೆ; ಆದರೆ ಇವು ಬೆಳಕಿಗೆ ಬರೋದಿಲ್ಲ. ಸರಕಾರದ ಒಳ್ಳೆ ಕೆಲಸಗಳಂತೂ ಆಗೀಗ ಪ್ರಕಟ ಆಗುತ್ವೆ; ಆದರೆ, ನಮ್ಮ ಸುತ್ತಮುತ್ತ ನೋಡೋದಾದರೆ, ಬರದ ಸಮಸ್ಯೆಯನ್ನು ಬಗೆಹರಿಸೋದಕ್ಕೋಸ್ಕರ ಜನರೇ ಹೊಸಹೊಸ ರೀತಿಯಲ್ಲಿ ಪ್ರಯತ್ನಗಳನ್ನು ಮಾಡ್ತಾ ಇದ್ದಾರೆ ಅನ್ನೋದು ನಮ್ಮ ಗಮನಕ್ಕೆ ಬರುತ್ತೆ. ಎಷ್ಟೇ ಸಂಕಟದಲ್ಲಿದ್ದರೂ, ಎಲ್ಲಿಂದಾದರೂ ಒಂದು ಒಳ್ಳೆಯ ಸುದ್ದಿ ಕೇಳಿಬಂದರೆ, ಇಡೀ ಸಂಕಟ ದೂರ ಆಯ್ತೇನೋ ಅನ್ನೋ ತರಹ ಭಾವನೆ ಬರುತ್ತೆ,  ಇದು ಒಂದು ರೀತಿ ಮನುಷ್ಯನ ಸ್ವಭಾವ. ಈ ವರ್ಷ ಮಳೆ ಶೇಕಡಾ 106ರಿಂದ ಶೇ.110ರಷ್ಟು ಆಗೋ ಸಂಭವ ಇದೆ ಅನ್ನೋ ಸುದ್ದಿ ಕೇಳಿದಾಗ ಒಂದು ಬಹಳ ಮಹತ್ವದ ಶಾಂತಿಯ ಸಂದೇಶವನ್ನು ಕೇಳಿದ ಅನುಭವ ಆಗಿದೆ. ಮಳೆ ಬರೋದಕ್ಕೆ ಇನ್ನೂ ಸಮಯ ಇದೆ. ಆದರೂ ಒಳ್ಳೆಯ ಮಳೆ ಆಗುತ್ತೆ ಅನ್ನೋ ಸುದ್ದಿನೇ ಒಂದು ರೀತಿಯ ಹೊಸ ಚೈತನ್ಯವನ್ನ ತಂದಿದೆ.
 
ಆದರೆ, ನನ್ನ ಪ್ರೀತಿಯ ದೇಶಬಾಂಧವರೇ, ಒಳ್ಳೆ ಮಳೆ ಆಗುತ್ತೆ ಅಂತನ್ನೋ ಸುದ್ದಿ ಆನಂದವನ್ನು ತರುತ್ತೆ; ಜೊತೆಗೆ ಅದು ಎಲ್ಲರಿಗಾಗಿ ಹೊಸ ಅವಕಾಶಗಳನ್ನೂ ತರುತ್ತೆ; ಹೊಸ ಸವಾಲುಗಳನ್ನು ಒಡ್ಡುತ್ತೆ. ನಾವು ಪ್ರತಿ ಗ್ರಾಮದಲ್ಲಿಯೂ ನೀರಿನ ಸಂಗ್ರಹಣೆ, ನೀರಿನ ಉಳಿತಾಯವನ್ನು ಮಾಡುವ ಒಂದು ಅಭಿಯಾನವನ್ನು ಈಗಿನಿಂದಲೇ ಆರಂಭಿಸಬಹುದೇ? ರೈತರಿಗೆ ಫಲವತ್ತಾದ ಮಣ್ಣು ಬೇಕು; ಅದನ್ನು ಹೊಲಗಳಲ್ಲಿ ಹಾಕಿದರೆ ಒಳ್ಳೆ ಬೆಳೆ ಬರುತ್ತೆ. ನಾವು ಯಾಕೆ ಈ ಬಾರಿ ಊರಿನ ಕೆರೆಗಳಲ್ಲಿ ತುಂಬಿಕೊಂಡಿರೋ ಮಣ್ಣನ್ನು ಎತ್ತಿಕೊಂಡು ಬಂದು ಹೊಲಗಳಲ್ಲಿ ಹಾಕಬಾರದು? ಇದರಿಂದ ಒಂದು ಹೊಲದ ಫಲವತ್ತತೆಯೂ ಹೆಚ್ಚಾಗುತ್ತೆ, ಅದರ ನೀರು ಸಂಗ್ರಹಣೆಯ ಸಾಮರ್ಥ್ಯನೂ ಹೆಚ್ಚಾಗುತ್ತೆ. ಸಿಮೆಂಟಿನ ಚೀಲ, ರಸಗೊಬ್ಬರದ ಚೀಲ ಇವುಗಳಲ್ಲಿ ಕಲ್ಲು ಮಣ್ಣು ತುಂಬಿ, ನೀವು ವ್ಯರ್ಥ ಹರಿದು ಹೋಗೋ ದಾರಿಗಳಿಗೆ ಅಡ್ಡ ಇಟ್ಟು ನೀರನ್ನು ತಡೆಗಟ್ಟಬಹುದಲ್ವೇ?  ಐದು ದಿನ, ಏಳು ದಿನ ನೀರು ನಿಂತರೆ ಅದು ಭೂಮಿಯಲ್ಲಿ ಇಂಗುತ್ತೆ. ಭೂಮಿಯಲ್ಲಿ ನೀರಿನ ಮಟ್ಟ ಮೇಲೆ ಬರುತ್ತೆ. ನಮ್ಮ ಬಾವಿಗಳಲ್ಲೂ ನೀರು ತುಂಬುತ್ತೆ. ಎಷ್ಟು ಸಾಧ್ಯವೋ ಅಷ್ಟು ನೀರನ್ನು ತಡೆಯಬೇಕು. ಗ್ರಾಮದಲ್ಲಿ ಬೀಳುವ ಮಳೆಯ ನೀರು ಆ ಗ್ರಾಮದ ನೀರು. ಅದು ಅಲ್ಲೇ ಇರಬೇಕು, ಅಲ್ಲೇ ಬಳಕೆ ಆಗಬೇಕು ಅಂತನ್ನೋ ಸಂಕಲ್ಪವನ್ನು ನಾವು ಮಾಡಬೇಕು; ಮತ್ತು ಇದನ್ನು ಸಾಧ್ಯಮಾಡೋದಕ್ಕಾಗಿ ತಕ್ಕ ಕಾರ್ಯಯೋಜನೆಯನ್ನು ಹಾಕಿಕೊಳ್ಳಬೇಕು; ಇದು ಸಾಮೂಹಿಕ ಪ್ರಯತ್ನದಿಂದ ಸಾಧ್ಯವಾಗುತ್ತೆ. 
 
ಇವತ್ತು ನೀರಿನ ಸಂಕಷ್ಟ ಇರಬಹುದು, ಬರದ ಪರಿಸ್ಥಿತಿ ಇರಬಹುದು, ಆದರೆ, ಈಗ ನಮ್ಮ ಮುಂದೆ ಒಂದು ಒಂದೂವರೆ ತಿಂಗಳ ಸಮಯ ಇದೆ. ನಾನು ಯಾವಾಗಲೂ ಹೇಳ್ತಾ ಇರ್ತೇನೆ, ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಪೋರ್ ಬಂದರಿಗೆ ಹೋದರೆ, ಅಲ್ಲಿ ಬೇರೆಬೇರೆ ಸ್ಥಳಗಳನ್ನು ನಾವು ನೋಡ್ತೇವೆ. ಅಲ್ಲಿ ನೋಡಲೇ ಬೇಕಾದ ಇನ್ನೊಂದು ಸ್ಥಳಾನೂ ಇದೆ. ಅಲ್ಲಿನ ಮನೆಗಳ ಅಡಿಯಲ್ಲಿ ಮಳೆ ನೀರಿನ ಸಂಗ್ರಹ ಮಾಡೋದಕ್ಕಾಗಿ ದೊಡ್ಡದೊಡ್ಡ ಟ್ಯಾಂಕುಗಳನ್ನು ಕಟ್ಟಿದ್ದಾರೆ; ಅವುಗಳಲ್ಲಿ ಸಂಗ್ರಹ ಆಗಿರೋ ನೀರು ಅದೆಷ್ಟು ಶುದ್ಧವಾಗಿರುತ್ತೆ. ಇದು ನೂರಿನ್ನೂರು ವರ್ಷಗಳಿಂದ ನಡೆದುಕೊಂಡು ಬಂದಿರೋ ಸಂಪ್ರದಾಯ. ಇದನ್ನೂ ಅಲ್ಲಿ ನೋಡಬಹುದು.
 
ಒಬ್ಬರು, ಕುಮಾರ್ ಕೃಷ್ಣ ಅನ್ನೋರು, ಮೈ ಗೌನಲ್ಲಿ ಬರೆದಿದ್ದಾರೆ, ಒಂದು ರೀತಿ ಜಿಜ್ಞಾಸೆಯನ್ನೂ ಮಾಡಿದ್ದಾರೆ, ಅವರು ಅಂತಾರೆ, ನಾವು ಇರುವ ವರೆಗೆ ಗಂಗೆಯ ಶುದ್ಧೀಕರಣ ಅಭಿಯಾನ ಸಾಧ್ಯವಾಗುತ್ತದೆಯೇ? ಅವರ ಆತಂಕ ಬಹಳ ಸ್ವಾಭಾವಿಕವಾಗಿದೆ. ಯಾಕೆಂದ್ರೆ, ಈ ಕಾರ್ಯ ಸುಮಾರು 30 ವರ್ಷಗಳಿಂದ ನಡೀತಾ ಇದೆ. ಹಲವು ಸರಕಾರಗಳು ಬಂದವು, ಹಲವು ಯೋಜನೆಗಳು ಆದವು, ಬೃಹತ್ ಪ್ರಮಾಣದಲ್ಲಿ ವೆಚ್ಚವೂ ಆಯಿತು. ಹೀಗಾಗಿ, ಕುಮಾರ್ ಕೃಷ್ಣರಂತಹ ಕೋಟ್ಯಂತರ ದೇಶವಾಸಿಗಳ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆ ಏಳೋದು ಸ್ವಾಭಾವಿಕವೇ ಆಗಿದೆ. 
 
ಧಾರ್ಮಿಕ ಮನೋಭಾವದವರಿಗೆ ಗಂಗೆ ಮೋಕ್ಷದಾಯಿನಿ ಆಗಿದ್ದಾಳೆ. ನಾನು ಆ ಉದಾತ್ತತೆಯನ್ನು ಸ್ವೀಕರಿಸುತ್ತೇನೆ. ಆದರೆ ಅದಕ್ಕಿಂತ ಮಹತ್ವದ ವಿಚಾರ ಅಂತಂದ್ರೆ ಗಂಗೆಯು ಜೀವನದಾಯಿನಿ ಆಗಿದ್ದಾಳೆ. ಗಂಗೆಯಿಂದಾಗಿ ನಮಗೆ ತಿನ್ನಲು ಅನ್ನ ಸಿಗುತ್ತೆ. ಗಂಗೆಯಿಂದಾಗಿ ನಮಗೆ ಹೊಟ್ಟೆಹೊರೆಯುವ ಮಾರ್ಗ ಸಿಗುತ್ತೆ. ಗಂಗೆಯಿಂದಾಗಿ ನಮಗೆ ಬದುಕುವ ಒಂದು ಹೊಸ ಚೈತನ್ಯ ಸಿಗುತ್ತೆ. ಗಂಗೆ ತಾನು ಹರಿದ ಕಡೆಯೆಲ್ಲಾ, ದೇಶದ ಆರ್ಥಿಕ ಚಟುವಟಿಕೆಗಳಿಗೆ ಒಂದು ಹೊಸ ಆವೇಗವನ್ನು ನೀಡುತ್ತೆ. ಒಬ್ಬ ಭಗೀರಥ ನಮಗೆ ಗಂಗೆಯನ್ನು ತಂದೇನೋ ಕೊಟ್ಟಿದ್ದಾನೆ, ಆದರೆ, ಇದನ್ನು ಉಳಿಸಿಕೊಳ್ಳಲು ಕೋಟ್ಯಂತರ ಭಗೀರಥರ ಶ್ರಮದ ಅಗತ್ಯವಿದೆ. ಜನರ ಸಹಭಾಗಿತ್ವದ ಹೊರತಾಗಿ ಈ ಕೆಲಸ ಅಗುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಶುದ್ಧೀಕರಣಕ್ಕಾಗಿ, ಸ್ವಚ್ಛತೆಗಾಗಿ ನಾವು ಒಂದು ಚೇಂಜ್ ಏಜೆಂಟ್ ಆಗಬೇಕಾಗಿದೆ. ಮತ್ತೆ ಮತ್ತೆ ಈ ಮಾತನ್ನು ಹೇಳಬೇಕಾಗುತ್ತೆ. ಸರಕಾರದ ಕಡೆಯಿಂದ ಅನೇಕ ಪ್ರಯತ್ನಗಳು ನಡೀತಾ ಇವೆ. ಗಂಗಾ ನದಿಯ ದಡದಲ್ಲಿರುವ ರಾಜ್ಯಗಳ ಸಹಯೋಗವನ್ನೂ ಪಡೆಯುವ ಪ್ರಯತ್ನಗಳೂ ನಡೆದಿವೆ. ಸಮತಲದ ಸ್ವಚ್ಛತೆ, ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವುದು ಇವುಗಳ ಕುರಿತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನ ನಾಲೆಗಳ ಮುಖಾಂತರ ಬಹಳ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಗಂಗೆಯಲ್ಲಿ ಸೇರಿಕೊಳ್ಳುತ್ತೆ. ಇಂಥ ಕಸವನ್ನು ಸ್ವಚ್ಛಗೊಳಿಸುವ ಸಲುವಾಗಿ ವಾರಣಾಸಿ, ಅಲಹಾಬಾದ್, ಕಾನ್ಪುರ್, ಪಟನಾ ಇಂಥ ಜಾಗಗಳಲ್ಲಿ ಟ್ರ್ಯಾಷ್ ಸ್ಕಿಮ್ಮರುಗಳು ನೀರಿನಲ್ಲಿ ತೇಲುವ ಕಸವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತಿವೆ. ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ, ಇದನ್ನು ನಿರಂತರವಾಗಿ ನಡೆಸಿ ಅಲ್ಲಲ್ಲಿಯೇ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ. ನನಗೆ ತಿಳಿದುಬಂದಿರೋ ಪ್ರಕಾರ, ಈ ಕಾರ್ಯ ಚೆನ್ನಾಗಿ ನಡಿತಾ ಇರೋ ಕಡೆ ದಿನವೊಂದಕ್ಕೆ ಮೂರರಿಂದ ಹನ್ನೊಂದು ಟನ್ನುಗಳಷ್ಟು ತ್ಯಾಜ್ಯವನ್ನು ತೆಗೆಯಲಾಗುತ್ತಿದೆ. 
 
ಇದರರ್ಥ, ಅಷ್ಟೊಂದು ಪ್ರಮಾಣದಲ್ಲಿ ಹೊಲಸು ನದಿಯಲ್ಲಿ ಸೇರಿಕೊಳ್ಳುವುದನ್ನು ತಡೆದಂತಾಯಿತು. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಾನಗಳಲ್ಲಿ ಟ್ರ್ಯಾಷ್ ಸ್ಕಿಮ್ಮರ್ ಗಳನ್ನು ಸ್ಥಾಪಿಸುವ ಯೋಜನೆ ಇದೆ; ಬಹಳ ಬೇಗನೇ ಇವುಗಳ ಲಾಭದ ಅನುಭವ ಗಂಗೆ ಮತ್ತು  ಯಮುನೆಯ ದಡದಲ್ಲಿ ವಾಸಿಸುವ ಜನರಿಗೆ ಆಗುತ್ತೆ. ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ, ಪಲ್ಪ್ ಮತ್ತು ಪೇಪರ್, ಡಿಸ್ಟಿಲರಿ ಮತ್ತು ಸಕ್ಕರೆ ಕಾರ್ಖಾನೆಗಳ ಜೊತೆಯಲ್ಲಿ ಒಂದು ಕ್ರಿಯಾಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸ್ವಲ್ಪ ಮಟ್ಟಿಗೆ ಇದರ ಅನುಷ್ಠಾನ ಆಗ್ತಾ ಇದೆ. ಈ ಯೋಜನೆಯೂ ಉತ್ತಮ ಪರಿಣಾಮಗಳನ್ನು ನೀಡಬಲ್ಲುದು ಅಂತ ನನಗೆ ಈಗಲೇ ಅನ್ನಿಸ್ತಾ ಇದೆ.
 
ನನಗೆ ತಿಳಿದುಬಂದ ಪ್ರಕಾರ, ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಇರೋ ಡಿಸ್ಟಿಲರಿಗಳ ಡಿಸ್ಚಾರ್ಜ್ ಇರುತ್ತಲ್ಲ, ಕೆಲವು ಅಧಿಕಾರಿಗಳು ನನಗೆ ಹೇಳಿದ ಪ್ರಕಾರ ಅವು ಜೀರೋ ಲಿಕ್ವಿಡ್ ಡಿಸ್ಚಾರ್ಜ್ ಸ್ಥಿತಿಯನ್ನು ಸಾಧಿಸಿವೆ. ಪಲ್ಪ್ ಮತ್ತು ಪೇಪರ್ ಉದ್ಯಮ ಅಥವಾ ಬ್ಲ್ಯಾಕ್ ಲಿಕ್ಕರ್ ಇವುಗಳ ವಿಸರ್ಜನೆ ಪೂರ್ತಿಯಾಗಿ ನಿಲ್ತಾ ಇದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗ್ತಾ ಇದ್ದೇವೆ; ಜನರಲ್ಲಿ ಜಾಗೃತಿಯೂ ಹೆಚ್ಚಾಗಿದೆ ಅನ್ನೋದಕ್ಕೆ ಇವು ಸಾಕ್ಷಿಯಾಗಿವೆ.  
 
ನಾನು ನೋಡಿರೋ ಹಾಗೆ, ಗಂಗೆಯ ದಡದಲ್ಲಿ ವಾಸಿಸೋ ಜನ ಅಷ್ಟೇ ಅಲ್ಲ, ದೂರದ ದಕ್ಷಿಣದ ವ್ಯಕ್ತಿಗಳು ಸಿಕ್ಕಾಗಲೂ ಖಂಡಿತ ಕೇಳ್ತಾರೆ, ಸ್ವಾಮೀ, ಗಂಗೆಯ ಶುದ್ಧೀಕರಣ ಆಗುತ್ತಲ್ವಾ? ಜನರಲ್ಲಿ ಇರುವ ಈ ಶ್ರದ್ಧೇನೇ ಖಂಡಿತವಾಗಿ ನಮಗೆ ಗಂಗೆಯ ಶುದ್ಧೀಕರಣದ ಕಾರ್ಯದಲ್ಲಿ ಸಫಲತೆಯನ್ನು ತಂದುಕೊಡುತ್ತೆ. ಗಂಗೆಯ ಶುದ್ಧೀಕರಣ ಕಾರ್ಯಕ್ಕಾಗಿ ಜನ ದೇಣಿಗೆಯನ್ನೂ ನೀಡೋದಕ್ಕೆ ಶುರು ಮಾಡಿದ್ದಾರೆ. ಬಹಳ ಉತ್ತಮವಾದ ರೀತಿಯಲ್ಲಿ ಈ ಯೋಜನೆಯನ್ನು ನಡೆಸಲಾಗ್ತಾ ಇದೆ. 
ನನ್ನ ಪ್ರೀತಿಯ ದೇಶಬಾಂಧವರೇ, ಇವತ್ತು ಏಪ್ರಿಲ್ 24. ಭಾರತದಲ್ಲಿ ಇದನ್ನು ಪಂಚಾಯಾತ್ ರಾಜ್ ದಿನದ ರೂಪದಲ್ಲಿ ಆಚರಿಸಲಾಗುತ್ತದೆ. ಇಂದಿನ ದಿನವೇ ನಮ್ಮ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಆರಂಭ ಆಗಿತ್ತು. ಕ್ರಮೇಣ ಇಡೀ ದೇಶದಲ್ಲಿ ಇವತ್ತು ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ಜನತಂತ್ರದ ಮಹತ್ವಪೂರ್ಣ ಘಟಕದ ರೂಪದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಾ ಇದೆ. 
 
ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ನಾವು ಆಚರಿಸಿದ್ವಿ, ಇವತ್ತು ಏಪ್ರಿಲ್ 24ರಂದು ನಾವು ಪಂಚಾಯತ್ ರಾಜ್ ದಿನವನ್ನು ಆಚರಣೆ ಮಾಡ್ತಾ ಇದ್ದೀವಿ. ಒಂದು ಸುಯೋಗದ ಸಂಗತಿ ಅಂತಂದ್ರೆ, ನಮಗೆ ಭಾರತ ಸಂವಿಧಾನವನ್ನು ನೀಡಿದ ಮಹಾಪುರುಷರ ಜನ್ಮದಿನ ಏಪ್ರಿಲ್ 14, ಹಾಗೆನೇ, ಸಂವಿಧಾನದ ಅತ್ಯಂತ ಶಕ್ತಿಶಾಲಿ ಕೊಂಡಿಯಾದ ಪಂಚಾಯತ್ ರಾಜ್ ದಿನ ಏಪ್ರಿಲ್ 24. ಆದ್ದರಿಂದ ಭಾರತ ಸರಕಾರ, ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಏಪ್ರಿಲ್ 14ರಿಂದ ಏಪ್ರಿಲ್ 24ರ ವರೆಗೆ ಹತ್ತು ದಿನಗಳ ಕಾಲ ಗ್ರಾಮೋದಯದಿಂದ ಭಾರತೋದಯ ಎಂಬ ಅಭಿಯಾನವನ್ನು ನಡೆಸಿತು. 
ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನದಂದು ನನಗೆ ಅವರ ಜನ್ಮಸ್ಥಳವಾದ  ಮಹೂವಾಗೆ ಹೋಗುವ ಅವಕಾಶ ಸಿಕ್ಕಿದ್ದು, ಆ ಪವಿತ್ರ ಭೂಮಿಯನ್ನು ನಮಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ. ಏಪ್ರಿಲ್ 24, ಅಂದರೆ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿ ಬಾಂಧವರು ವಾಸಿಸುವಂಥ ಝಾರಖಂಡ್ ಗೆ ಹೋಗಿ ಅಲ್ಲಿ ಪಂಚಾಯತ್ ರಾಜ್ ದಿನದ ಆಚರಣೆಯಲ್ಲಿ ಭಾಗವಹಿಸಿದ್ದೇನೆ. ಈ ಅಭಿಯಾನವು ಬಹುದೊಡ್ಡ ಜಾಗೃತಿಯನ್ನು ತರುವ ಕೆಲಸವನ್ನು ಮಾಡಿದೆ. ಭಾರತದ ಮೂಲೆಮೂಲೆಗಳಲ್ಲಿರುವ ಗ್ರಾಮಗಳ ಮಟ್ಟದಲ್ಲಿ ಜನತಂತ್ರ ಸಂಸ್ಥೆಗಳು ಹೇಗೆ ಶಕ್ತಿಶಾಲಿಯಾಗಿ ಬೆಳೆಯಬೇಕು? ಗ್ರಾಮಗಳು ಹೇಗೆ ಸ್ವಾವಲಂಬಿಗಳಾಗಬೇಕು? ಗ್ರಾಮವು ತಮ್ಮ ವಿಕಾಸದ ಯೋಜನೆಯನ್ನು ತಾನೇ ಹಾಕಿಕೊಳ್ಳುವುದು ಹೇಗೆ? ಮೂಲಸೌಕರ್ಯಕ್ಕೂ ಮಹತ್ವ ಇರಬೇಕು; ಸಾಮಾಜಿಕ ಮೂಲಸೌಕರ್ಯಕ್ಕೂ ಮಹತ್ವ ಇರಬೇಕು. ಗ್ರಾಮದಲ್ಲಿ ಶಾಲೆಬಿಟ್ಟ ಮಕ್ಕಳು ಇರಬಾರದು. ‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಅಭಿಯಾನವು ಪರಿಣಾಮಕಾರಿಯಾಗಿ ನಡೆಯಬೇಕು. ಮಗಳು ಹುಟ್ಟಿದ ದಿನದಂದು ಗ್ರಾಮದಲ್ಲಿ ಉತ್ಸವವನ್ನು ಆಚರಿಸಬೇಕು; ಇಂಥ ಹಲವು ಯೋಜನೆಗಳು ಇವೆ. ಕೆಲವು ಗ್ರಾಮಗಳಲ್ಲಂತೂ ಆಹಾರ ದೇಣಿಗೆ ಕಾರ್ಯಕ್ರಮಗಳು ಜರುಗಿದವು. ಭಾರತದ ಇಷ್ಟೊಂದು ಗ್ರಾಮಗಳಲ್ಲಿ ಒಂದೇ ಬಾರಿಗೆ ಇಷ್ಟೊಂದು ಕಾರ್ಯಕ್ರಮಗಳು ಹತ್ತು ದಿನಗಳಲ್ಲಿ ನಡೆದಿದ್ದು ಬಹುಶಃ ಬಹಳ ಅಪರೂಪ.
 
ಗ್ರಾಮದ ಒಳ್ಳೆಯದಕ್ಕಾಗಿ, ವಿಕಾಸಕ್ಕಾಗಿ, ಲೋಕತಂತ್ರವನ್ನು ಗಟ್ಟಿಗೊಳಿಸುವುದಕ್ಕಾಗಿ   ಈ ಒಂದು ಮಹತ್ವದ ಅವಕಾಶವನ್ನು ಬಳಸಿಕೊಂಡು, ಬಹಳ ಮೌಲಿಕವಾಗಿ, ಹೊಸ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ನಾನು ಎಲ್ಲಾ ರಾಜ್ಯಸರಕಾರಗಳು, ಗ್ರಾಮಪ್ರಧಾನರಿಗೆ ಮತ್ತು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗ್ರಾಮಗಳಲ್ಲಿ ಆಗಿರುವ ಜಾಗೃತಿಯೇ ಭಾರತೋದಯಕ್ಕೆ ಸಾಕ್ಷಿಯಾಗಿದೆ. ಗ್ರಾಮೋದಯವೇ ಭಾರತೋದಯದ ಆಧಾರವಾಗಿದೆ. ಆದ್ದರಿಂದ, ನಾವೆಲ್ಲರೂ ಗ್ರಾಮೋದಯದ ಮೇಲೆ ಒತ್ತು ಕೊಡುತ್ತಲೇ ಇದ್ದರೆ ನಾವು ಅಪೇಕ್ಷಿಸಿದ ಫಲಿತಾಂಶವನ್ನು ಪಡೆಯಬಹುದಾಗಿದೆ. 
 
ಮುಂಬಯಿಯಿಂದ ಶರ್ಮಿಳಾ ಧಾರ್ಪುರೇ ಅವರು ನನ್ನೊಂದಿಗೆ ಫೋನ್ ನಲ್ಲಿ 
ಮಾತನಾಡಿ ತಮ್ಮ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ:
“ಮಾನ್ಯ ಪ್ರಧಾನ ಮಂತ್ರಿಯವರೇ, ಮುಂಬಯಿಯಿಂದ ನಾನು, ಶರ್ಮೀಳಾ ಧಾರ್ಪುರೇ ಮಾತಾಡ್ತಾ ಇದ್ದೇನೆ, ಶಾಲೆ ಮತ್ತು ಕಾಲೇಜು ಶಿಕ್ಷಣದ ಬಗ್ಗೆ ನನ್ನದೊಂದು ಪ್ರಶ್ನೆ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳ ದಿನಗಳಿಂದ ಸುಧಾರಣೆಯ ಅಗತ್ಯ ಕಂಡುಬಂದಿದೆ. ಸಾಕಷ್ಟು ಶಾಲಾ ಕಾಲೇಜುಗಳಿಲ್ಲ. ಶಿಕ್ಷಣದ ಗುಣಮಟ್ಟವೂ ಸರಿಯಾಗಿಲ್ಲ. ಮಕ್ಕಳು ಶಿಕ್ಷಣವನ್ನು ಮುಗಿಸಿದ ನಂತರವೂ ಅವರಿಗೆ ಮೂಲಭೂತವಾದ ವಿಚಾರಗಳೂ ಗೊತ್ತಿಲ್ಲದೇ ಇರುವ ಪರಿಸ್ಥಿತಿ ಇದೆ. ಇದರಿಂದಾಗಿ ನಮ್ಮ ಮಕ್ಕಳು ಜಗತ್ತಿನ ಸ್ಪರ್ಧೆಯಲ್ಲಿ ಹಿಂದೆ ಉಳಿಯುತ್ತಾರೆ. ಈ ಕುರಿತು ನಿಮ್ಮ ವಿಚಾರಗಳೇನು; ಈ ಕ್ಷೇತ್ರದಲ್ಲಿ ಯಾವ ಬಗೆಯ ಸುಧಾರಣೆಯನ್ನು ತಾವು ತರಬಯಸುತ್ತೀರಿ? ಈ ಕುರಿತು ದಯವಿಟ್ಟು ನಮಗೆ ತಿಳಿಸಿಕೊಡಿ, ಧನ್ಯವಾದ.”
 
ಇವರ ಆತಂಕ ಬಹಳ ಸ್ವಾಭಾವಿಕವಾಗಿದೆ. ಇವತ್ತು ಯಾವುದೇ ಕುಟುಂಬ ಒಂದು ಕನಸನ್ನು ಕಾಣ್ತಾ ಇದೆ ಅಂದರೆ, ಅದು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುವ ಕನಸಾಗಿರುತ್ತೆ. ನಾಗರಿಕರ ಇಂಥ ಭಾವನೆಗಳೇ ದೇಶದ ಬಹುದೊಡ್ಡ ಶಕ್ತಿಯಾಗಿದೆ. ಮಕ್ಕಳನ್ನು ಓದಿಸಬೇಕು; ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು ಅನ್ನೋದು. ಒಳ್ಳೆಯ ಶಿಕ್ಷಣ ಸಿಗಬೇಕು ಅನ್ನೋ ಜನರ ಆಸೆಗೆ ಇಂಬು ಕೊಡಬೇಕು; ಈ ಕುರಿತು ಹೆಚ್ಚು ಜಾಗೃತಿಯನ್ನು ಮೂಡಿಸಬೇಕು. ನನಗೆ ಗೊತ್ತಿದೆ, ಕುಟುಂಬಗಳಲ್ಲಿ ಈ ಕುರಿತು ಜಾಗೃತಿ ಇದ್ದಷ್ಟೂ ಅದು ಶಾಲೆಗಳ ಮೇಲೆ ಪರಿಣಾಮ ಬೀರುತ್ತೆ. ಶಿಕ್ಷಕರ ಮೇಲೆ ಪರಿಣಾಮ ಬೀರುತ್ತೆ. ತಾವು ಯಾವ ಉದ್ದೇಶಕ್ಕಾಗಿ ಶಾಲೆಗೆ ಹೋಗ್ತಾ ಇದ್ದೀವಿ ಅನ್ನೋದರ ಕುರಿತು ಮಕ್ಕಳೂ ಜಾಗರೂಕರಾಗ್ತಾರೆ. ಆದ್ರಿಂದ, ನಾವು ಸಂಬಂಧಪಟ್ಟ ಎಲ್ಲ ಬಾಧ್ಯಸ್ಥರಲ್ಲಿ, ಮುಖ್ಯವಾಗಿ ಪೋಷಕರಲ್ಲಿ ಕೇಳುವುದೇನಂದ್ರೆ, ಶಾಲೆಯಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಮಕ್ಕಳೊಂದಿಗೆ ಹೆಚ್ಚು ವಿವರವಾಗಿ ಮಾತಾಡಿ. ಅದರಿಂದ ಏನಾದರೂ ಮಹತ್ವದ ವಿಚಾರ ಗೊತ್ತಾದ್ರೆ, ನೀವೇ ಖುದ್ದಾಗಿ ಶಾಲೆಗೆ ಹೋಗಿ ಶಿಕ್ಷಕರ ಜೊತೆ ಮಾತಾಡಿ. ಇಂಥ ವಿಚಕ್ಷಣೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಅನೇಕ ಕೊರತೆಗಳನ್ನು ಕಡಿಮೆ ಮಾಡುತ್ತೆ; ಜನರ ಸಹಭಾಗಿತ್ವದಿಂದ ಇದು ಖಂಡಿತ ಆಗುತ್ತೆ.
 
ನಮ್ಮ ದೇಶದಲ್ಲಿ ಎಲ್ಲಾ ಸರಕಾರಗಳು ಶಿಕ್ಷಣದ ಮೇಲೆ ಹೆಚ್ಚು ಒತ್ತು ಕೊಟ್ಟಿವೆ. ಈ ಕುರಿತು ಎಲ್ಲಾ ಸರಕಾರಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳು ಮಾಡಿವೆ. ಶೈಕ್ಷಣಿಕ ಸಂಸ್ಥೆಗಳು ಸ್ಥಾಪನೆಯಾಗಬೇಕು; ಶೈಕ್ಷಣಿಕ ವ್ಯವಸ್ಥೆ ವಿಸ್ತಾರಗೊಳ್ಳಬೇಕು. ಶಾಲೆ, ಕಾಲೇಜುಗಳನ್ನು ತೆರೆಯಬೇಕು. ಶಿಕ್ಷಕರ ನೇಮಕಾತಿ ಆಗಬೇಕು. ಅಧಿಕ ಸಂಖ್ಯೆಯಲ್ಲಿ ಮಕ್ಕಳು ಶಾಲೆಗಳನ್ನು ಸೇರಬೇಕು- ಅನೇಕ ವರ್ಷಗಳಿಂದ ನಮ್ಮ ಲಕ್ಷ್ಯ ಈ ವಿಚಾರಗಳ ಕುರಿತು ಇದೆಯೆನ್ನುವ ಮಾತು ಸತ್ಯ. ಅಂದ್ರೆ ಒಂದು ರೀತಿಯಲ್ಲಿ ಶಿಕ್ಷಣವನ್ನು ನಾಲ್ಕೂ ದಿಕ್ಕುಗಳಿಗೆ ಹರಡುವ ಒಂದು ಪ್ರಯತ್ನ ಪ್ರಾಥಮಿಕ ಮಹತ್ವವನ್ನು ಪಡೆದಿದೆ; ಮತ್ತು ಇದು ಅತ್ಯವಶ್ಯಕವಾಗಿದೆ. ಶೈಕ್ಷಣಿಕ ವ್ಯವಸ್ಥೆಯನ್ನು ವಿಸ್ತಾರಗೊಳಿಸುವುದಕ್ಕೆ ನಾವು ನೀಡುವ ಮಹತ್ವಕ್ಕಿಂತ ಇವತ್ತು ಅದರ ಗುಣಮಟ್ಟವನ್ನು ಸುಧಾರಣೆ ಮಾಡುವ ಕಡೆಗೆ ನೀಡಬೇಕಾಗಿದೆ. ವಿಸ್ತರಣೆಯ ಕೆಲಸವನ್ನು ನಾವು ಸಾಕಷ್ಟು ಮಾಡಿದ್ದೇವೆ. ಈಗ ನಾವು ಶಿಕ್ಷಣದ ಗುಣಮಟ್ಟದ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ. ಸಾಕ್ಷರತಾ ಅಭಿಯಾನದಿಂದ ಮುಂದುವರಿದು ಈಗ ಒಳ್ಳೆಯ ಶಿಕ್ಷಣ, ಇದು ನಮ್ಮ ಪ್ರಾಥಮಿಕತೆ ಆಗಬೇಕಾಗಿದೆ. ಈ ವರೆಗೆ ಔಟ್ ಲೇ ಯ ಲೆಕ್ಕಾಚಾರ ನಡೀತಾ ಇತ್ತು; ಇವತ್ತು ಔಟ್ ಕಮ್ ಮೇಲೆ ಫ಼ೋಕಸ್ ಮಾಡಬೇಕಾಗಿದೆ. ಈ ವರೆಗೆ, ಶಾಲೆಗೆ ಎಷ್ಟು ಜನ ಮಕ್ಕಳು ಹಾಜರಾದರು ಅನ್ನೋದರ ಕಡೆ ಲಕ್ಷ್ಯ ಇರ್ತಿತ್ತು; ಇವತ್ತು ಹಾಜರಿಗಿಂತ ಹೆಚ್ಚಾಗಿ ಕಲಿಕೆಯ ಮೇಲೆ ಹೆಚ್ಚು ಒತ್ತು ಕೊಡಬೇಕಾಗಿದೆ. ಎನ್ರೋಲ್ಮೆಂಟ್, ಎನ್ರೋಲ್ಮೆಂಟ್, ಎನ್ರೋಲ್ಮೆಂಟ್ ?  ಯಾವಾಗಲೂ ಈ ಮಂತ್ರ ಮೊಳಗ್ತಾ ಇತ್ತು. ಆದರೆ ಈಗ, ಶಾಲೆಯನ್ನು ತಲುಪಿರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಯೋಗ್ಯ ಶಿಕ್ಷಣ ನೀಡೋ ಕಡೆಗೆ ನಾವು ಗಮನ ಹರಿಸಬೇಕಾಗಿದೆ. ಈಗಿನ ಸರಕಾರದ ಬಜೆಟನ್ನೂ ನೀವು ಗಮನಿಸಿರಬಹುದು. ಗುಣಮಟ್ಟದ ಶಿಕ್ಷಣದ ಮೇಲೆ ಒತ್ತುಕೊಡುವ ಪ್ರಯತ್ನವನ್ನು ಇಲ್ಲಿ ನೀವು ಕಾಣಬಹುದು. ಕ್ರಮಿಸಬೇಕಾದ ಹಾದಿ ತುಂಬಾ ದೀರ್ಘವಾಗಿದೆ, ನಿಜ. ಆದರೆ, ನಾವು ಈ ದೇಶದ ನೂರಾಇಪ್ಪತ್ತೈದು ಕೋಟಿ ಜನ ನಿರ್ಧಾರ ಮಾಡಿದರೆ, ದೀರ್ಘ ಪಯಣವೂ ಸಾಧ್ಯವಾಗುತ್ತೆ. ಶರ್ಮಿಳಾ ಅವರು ಹೇಳೋ ಮಾತು ನಿಜ; ನಮ್ಮಲ್ಲಿ ಆಮೂಲಾಗ್ರ ಸುಧಾರಣೆ ಆಗಬೇಕಾಗಿದೆ.  
 
ನೀವು ಈ ಬಾರಿಯ  ಮುಂಗಡಪತ್ರದಲ್ಲಿ ನೋಡಿರಬಹುದು; ಸ್ವಲ್ಪ ವಿಭಿನ್ನವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇವೆ.  ಹತ್ತು ಸರಕಾರಿ ವಿಶ್ವವಿದ್ಯಾಲಯಗಳು ಮತ್ತು ಹತ್ತು ಖಾಸಗಿ ವಿಶ್ವವಿದ್ಯಾಲಯಗಳು -ಇವುಗಳಿಗೆ ಸರಕಾರದ ಬಂಧನದಿಂದ ಮುಕ್ತಿ ನೀಡಿ, ಚಾಲೆಂಜ್ ರೂಟ್ ನಲ್ಲಿ ಬರುವ ಕುರಿತು ಪ್ರಸ್ತಾವ ನೀಡಲಾಗಿದೆ, ಅವರಿಗೆ, ‘ನಿಮ್ಮದು ಟಾಪ್ ಮೋಸ್ಟ್ ಯುನಿವರ್ಸಿಟಿ ಅಗೋದಕ್ಕೆ ನೀವು ಏನು ಮಾಡಬೇಕು ಅಂತೀರಿ, ಹೇಳಿ ಅಂತ ಅವರಿಗೆ ಕೇಳಿದ್ದೇವೆ. ಅವರಿಗೆ ಮುಕ್ತವಾದ ಅವಕಾಶವನ್ನು ನೀಡುವುದಕ್ಕಾಗಿ ಈ ಯೋಜನೆಯನ್ನು ಮುಂದಿಡಲಾಗಿದೆ. ಭಾರತದ ವಿಶ್ವವಿದ್ಯಾಲಯಗಳೂ ಕೂಡ ಜಾಗತಿಕ ಸ್ಪರ್ಧೆಯಲ್ಲಿ ಇಳಿಯುವ ವಿಶ್ವವಿದ್ಯಾಲಯಗಳಾಗಬಹುದು. ಆಗಲೂ ಬೇಕು. ಇದರ ಜೊತೆಯಲ್ಲಿ ಈಗ ಶಿಕ್ಷಣಕ್ಕೆ ಎಷ್ಟು ಮಹತ್ವ ಸಿಗ್ತಾ ಇದೆಯೋ ಅಷ್ಟೇ ಮಹತ್ವ ಕೌಶಲ್ಯಕ್ಕೂ ಸಿಗಬೇಕು.  ಇದೇ ರೀತಿ, ಶಿಕ್ಷಣದಲ್ಲಿ ತಂತ್ರಜ್ಞಾನವೂ ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ. ದೂರಶಿಕ್ಷಣ, ತಂತ್ರಜ್ಞಾನ, ಇವು ನಮ್ಮ ಶಿಕ್ಷಣವನ್ನು ಸರಳಗೊಳಿಸುತ್ತವೆ; ಮತ್ತು ಬಹಳ ಬೇಗನೆ ಇದರ ಪರಿಣಾಮಗಳೂ ಗೋಚರಿಸುತ್ತವೆ ಅನ್ನೋ ವಿಶ್ವಾಸ ನನಗಿದೆ. 
 
ಬಹಳ ಸಮಯದಿಂದ ಜನ ನನಗೊಂದು ಪ್ರಶ್ನೆಯನ್ನು ಕೇಳ್ತಾ ಇರ್ತಾರೆ; ಕೆಲವರು ಮೈಗೌ ವೆಬ್ ಪೋರ್ಟಲ್ ನಲ್ಲಿ ಬರೀತಾನೂ ಇರ್ತಾರೆ. ಇನ್ನು ಕೆಲವರು ನನಗೆ ನರೇಂದ್ರ ಮೋದಿ ಆಪ್ ನಲ್ಲಿ ಬರೀತಾನೂ ಇರ್ತಾರೆ, ಈ ಯುವಜನ ಹೆಚ್ಚಾಗಿ ಬರೆಯೋದು ಏನೆಂದರೆ:
“ಪ್ರಧಾನ ಮಂತ್ರಿಯವರೇ, ನಮಸ್ಕಾರ, ನಾನು ಮೋನಾ ಕರ್ಣವಾಲ್ ಮಾತಾಡ್ತಾ ಇದ್ದೀನಿ. ಇವತ್ತಿನ ದಿನ ಯುವಜನರು ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕಾಗಿದೆ. ಅವರಲ್ಲಿ  ಟೀಮ್ ಸ್ಪಿರಿಟ್ ಭಾವನೆಯೂ ಬೆಳೆಯೋದು ಬಹಳ ಮಹತ್ವದ್ದಾಗಿದೆ; ಒಳ್ಳೆಯ ನಾಯಕರಾಗುವ ಗುಣವೂ ಅವರಲ್ಲಿ ಬೆಳೀಬೇಕಾಗಿದೆ. ಇದರಿಂದ ಅವರ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತೆ. ಇದನ್ನು ನಾನು ಸ್ವಂತ ಅನುಭವದಿಂದ ಹೇಳ್ತಾ ಇದ್ದೇನೆ. ಏಕೆಂದರೆ, ನಾನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿದ್ದೆ, ಅದು ನನ್ನ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಿದೆ. ಹೆಚ್ಚು ಹೆಚ್ಚು ಯುವಜನರಿಗೆ ನೀವು ಪ್ರೇರಣೆಯನ್ನು ನೀಡಿ, ಸರಕಾರವೂ ಹೆಚ್ಚಿನ ಸಂಖ್ಯೆಯಲ್ಲಿ ಎನ್ ಸಿ ಸಿ, ಎನ್ ಎಸ್ ಎಸ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಇವುಗಳನ್ನು ಉತ್ತೇಜಿಸಬೇಕು ಅನ್ನೋದು ನನ್ನ ಆಶಯವಾಗಿದೆ.”
 
ನೀವು ಇಷ್ಟೊಂದು ಸಲಹೆಗಳನ್ನು ನೀಡ್ತಾ ಇರೋದನ್ನು ನೋಡಿ ನನಗೆ ಒಂದಿನ ಅನ್ನಿಸಿತು, ನಿಮ್ಮ ಜೊತೆ ಮಾತಾಡಬೇಕು ಅಂತ. ಅದಕ್ಕೆ ಮುಂಚೆ ಇವರೆಲ್ಲರ ಜೊತೆ ಮಾತಾಡಬೇಕು ಅಂದ್ಕೊಂಡೆ. ನಿಮ್ಮಿಂದಲೇ ಒತ್ತಾಯ ಇತ್ತು; ನಿಮ್ಮಿಂದಲೇ ಸಲಹೆ ಬಂದವು. ಇದರ ಪರಿಣಾಮದಿಂದಾಗಿ ನಾನು ಈಗ ಒಂದು ಸಭೆಯನ್ನು ಕರೆದಿದ್ದೆ. ಇದರಲ್ಲಿ ಎನ್ ಸಿಸಿ ಯ ಮುಖ್ಯಸ್ಥರಿದ್ದರು, ಎನ್ ಎಸ್ ಎಸ್ ಮುಖ್ಯಸ್ಥರಿದ್ದರು, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ಕ್ರಾಸ್, ನೆಹರು ಯುವ ಕೇಂದ್ರ, ಈ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿದ್ರು. ನಾನು ಅವರಿಗೆ ಕೇಳಿದೆ, ಈ ಮುಂಚೆ ಇಂಥ ಒಂದು ಸಭೆ ಯಾವಾಗ ನಡೆದಿತ್ತು ಅಂತ. ಅದಕ್ಕೆ ಅವರಂದ್ರು, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ನಾವು ಹೀಗೆ ಪರಸ್ಪರ ಭೇಟಿಯಾಗಿರೋದು ಇದೇ ಮೊದಲನೇ ಸಲ ಅಂತ. ನಾನು ಮೊಟ್ಟಮೊದಲು, ಈ ಬಗೆಯ ಕಾರ್ಯಕ್ಕಾಗಿ ನನ್ನ ಮೇಲೆ ಒತ್ತಾಯ ಹೇರಿದ ಎಲ್ಲಾ ಯುವಮಿತ್ರರಿಗೆ ಅಭಿನಂದನೆಯನ್ನು ಸಲ್ಲಿಸಬೇಕು. ಇದರಿಂದಾಗಿಯೇ ನಾನು ಸಭೆಯನ್ನು ಕರೆದೆ, ಇಂಥ ಸಭೆಯನ್ನು ಕರೆದದ್ದು ಒಳ್ಳೆಯದೆ ಆಯಿತು ಅಂತ ನನಗನ್ನಿಸಿತು. ಬಹಳಷ್ಟು ಸಮನ್ವಯದ ಅಗತ್ಯ ಇದೆ ಅನ್ನಿಸ್ತು ನನಗೆ. ಪ್ರತ್ಯೇಕ ಸಂಘಟನೆ ತನ್ನದೇ ಆದ ರೀತಿಯಲ್ಲಿ ಬಹಳಷ್ಟು ಮಾಡ್ತಾ ಇದೆ; ಆದರೆ, ನಮ್ಮ ಈ ಎಲ್ಲ ಸಂಘಟನೆಗಳು ಸಂಯೋಜಿತ ರೂಪದಲ್ಲಿ ಕೆಲಸ ಮಾಡಿದರೆ ಎಂಥ ಅದ್ಭುತ ಪರಿಣಾಮಗಳು ಆಗುತ್ತೆ, ಎಷ್ಟೊಂದು ವಿಸ್ತಾರವಾಗಿ, ಅಷ್ಟೊಂದು ಕುಟುಂಬಗಳನ್ನು ಇದು ತಲುಪಬಲ್ಲುದು ಅಂತ ಮನವರಿಕೆ ಆಯ್ತು. ಇದರ ವ್ಯಾಪ್ತಿಯನ್ನು ಕಂಡು ನನಗೆ ಬಹಳ ಸಮಾಧಾನವಾಯ್ತು. ಅವರಲ್ಲಿ ಉತ್ಸಾಹ ಇತ್ತು; ಏನನ್ನಾದರೂ ಮಾಡುವ ಪ್ರೇರಣೆ ಇತ್ತು. ನಾನೂ ಎನ್ ಸಿಸಿ ಕೆಡೆಟ್ ಆಗಿದ್ದೆ. ಆದ್ದರಿಂದ ನನಗೆ ಗೊತ್ತು, ಇಂಥ ಸಂಘಟನೆಗಳಿಂದ ಒಂದು ಹೊಸ ದೃಷ್ಟಿಕೋನ ಸಿಗುತ್ತೆ, ಪ್ರೇರಣೆ ಲಭಿಸುತ್ತೆ, ಒಂದು ರಾಷ್ಟ್ರೀಯ ದೃಷ್ಟಿಕೋನದ ವಿಕಾಸ ಆಗುತ್ತೆ. ನನಗೆ ನನ್ನ ಬಾಲ್ಯದಲ್ಲಿ ಇದರ ಲಾಭವಂತೂ ಸಿಕ್ಕಿತ್ತು. ನನಗೆ ಅನ್ನಿಸ್ತು, ಇಂಥ ಸಂಘಟನೆಗಳಿಗೆ ಹೊಸ ಚೈತನ್ಯ ಸಿಗಬೇಕು, ಹೊಸ ಶಕ್ತಿ ತುಂಬಬೇಕು ಅಂತ. ನಾನು ಈ ಬಾರಿ ಅವರ ಮುಂದೆ ಕೆಲವು ವಿಚಾರಗಳನ್ನು ಇಟ್ಟಿದ್ದೇನೆ. ಈ ಸೀಸನ್ನಿನಲ್ಲಿ ನಮ್ಮ ಯುವಜನ ಜಲಸಂಗ್ರಹಣೆಯ ಮಹತ್ವದ ಕಾರ್ಯದಲ್ಲಿ ದೊಡ್ಡ ಸಂಘಟನೆಯೊಂದಿಗೆ ಏಕೆ ಕೈಜೋಡಿಸಬಾರದು? ನಮ್ಮ ಪ್ರಯತ್ನದಿಂದ ಎಷ್ಟು ಬ್ಲಾಕುಗಳಲ್ಲಿ, ಎಷ್ಟು ಜಿಲ್ಲೆಗಳಲ್ಲಿ ಶೌಚಕ್ಕಾಗಿ ಬಯಲಿಗೆ ಹೋಗುವುದನ್ನು ನಿಲ್ಲಿಸಬಹುದು? ಗ್ರಾಮವನ್ನು ಬಯಲು ಶೌಚಾಲಯ ಮುಕ್ತ ಹೇಗೆ ಮಾಡಬಹುದು? ದೇಶವನ್ನು ಒಂದುಗೂಡಿಸಲು ಇಂಥ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು? ನಮ್ಮ ಈ ಎಲ್ಲ ಸಂಘಟಣೆಗಳ ಸಾಮಾನ್ಯ ಯುವಗೀತೆ ಏನಾಗಬೇಕು? ಇವೆಲ್ಲವುಗಳ ಕುರಿತು ಅವರ ಜೊತೆ ಮಾತಾಡಿದ್ದೇನೆ. 
 
ಇವತ್ತು ನಾನು ನಿಮಗೂ ಹೇಳ್ತಾ ಇದ್ದೇನೆ, ಉತ್ತಮ ಸಲಹೆಗಳನ್ನು ನೀಡಿ. ಅನೇಕ ಯುವಸಂಘಟನೆಗಳು ಇವೆ. ಅವುಗಳ ಚಟುವಟಿಕೆಗಳಿಗೆ ಯಾವ ಹೊಸ ಗುರಿಗಳನ್ನು ಸೇರಿಸಬಹುದು? ನೀವು ನನ್ನ ನರೇಂದ್ರ ಮೋದಿ ಆಪ್ ನಲ್ಲಿ ಬರೆದರೆ, ನಾನು ನಿಮ್ಮ ಸಲಹೆಗಳನ್ನು ಸೂಕ್ತವಾದ ವ್ಯಕ್ತಿಗಳಿಗೆ ತಲುಪಿಸ್ತೇನೆ. ನಾವು ನಡೆಸಿದ ಸಭೆಯ ನಂತರ ಅವರೆಲ್ಲರ ಕಾರ್ಯಗಳು ಚುರುಕುಗೊಳ್ಳುತ್ತವೆ ಅಂತ ನನಗಂತೂ ಅನ್ಸುತ್ತೆ. ನಿಮಗೂ ಇದರಲ್ಲಿ ಕೈಜೋಡಿಸುವ ಅವಕಾಶ ಸಿಗುತ್ತೆ.
 
ನನ್ನ ಪ್ರೀತಿಯ ದೇಶಬಾಂಧವರೇ, ನಾವು ಇವತ್ತು ಒಂದು ಮಾತನ್ನು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ.  ಇದು ನಮ್ಮನ್ನು ಜರ್ಜರಿತ ಗೊಳಿಸುವ ಮಾತು ಅಂತ ನನಗನ್ನಿಸುತ್ತೆ. ನೀವು ನೋಡಿರಬಹುದು, ನಮ್ಮ ದೇಶದ ರಾಜಕೀಯ ಪರಿಸ್ಥಿತಿ ಹೇಗಿದೆ ಅಂದ್ರೆ, ಕಳೆದ ಕೆಲವು ಚುನಾವಣೆಗಳಲ್ಲಿ ಈ ಕುರಿತು ಚರ್ಚೆ ನಡೀತಾನೇ ಇತ್ತು. ಯಾವ ಪಕ್ಷ ಎಷ್ಟು ಸಿಲಿಂಡರ್ ಗಳನ್ನು ನೀಡುತ್ತೆ, ಅಂತ. 12 ಸಿಲಿಂಡರಾ, 9 ಸಿಲಿಂಡರಾ? ಇದು ಚುನಾವಣೆಗಳಲ್ಲಿ ಬಹುದೊಡ್ಡ ವಿಷಯವಾಗಿರ್ತಾ ಇತ್ತು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಚುನಾವಣೆಯ ದೃಷ್ಟಿಯಿಂದ ಮಧ್ಯಮವರ್ಗದವರನ್ನು ತಲುಪುವುದು ಅನಿವಾರ್ಯವಾಗಿತ್ತು. ಹೀಗಾಗಿ ಗ್ಯಾಸ್ ಸಿಲಿಂಡರ್ ಬಹುದೊಡ್ಡ ವಿಷಯ ಆಗಿತ್ತು. 
 
ಇನ್ನೊಂದು ಕಡೆ, ಅರ್ಥಶಾಸ್ತ್ರಜ್ಞರಿಂದ ಸಬ್ಸಿಡಿಯನ್ನು ಕಡಿಮೆ ಮಾಡಬೇಕು ಅಂತನ್ನೋ ಒತ್ತಡವೂ ಇತ್ತು ಮತ್ತು ಇದಕ್ಕಾಗಿ ಹಲವಾರು ಸಮಿತಿಗಳು ಸೇರ್ತಾ ಇದ್ವು. ಇವುಗಳಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಕಡಿಮೆ ಮಾಡೋದರ ಕುರಿತು ದೊಡ್ಡದೊಡ್ಡ ಪ್ರಸ್ತಾವಗಳು ಬರುತ್ತಿದ್ವು. ಸಲಹೆಗಳೂ ಬರ್ತಾ ಇದ್ವು. ಈ ಸಮಿತಿಗಳಿಗಾಗಿಯೇ ಕೋಟಿಗಟ್ಟಲೆ ಖರ್ಚೂ ಆಗುತ್ತಾ ಇತ್ತು. ಆದರೆ ಸ್ಥಿತಿ ಮಾತ್ರ ಹೇಗಿತ್ತೋ ಹಾಗೆ ಇರ್ತಿತ್ತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಾವು ಈ ಚೌಕಟ್ಟಿನಿಂದ ಹೊರಗೆ ಯಾವತ್ತೂ ಯೋಚನೆ ಮಾಡಲಿಲ್ಲ. ಇವತ್ತು, ನನ್ನ ದೇಶಬಾಂಧವರೇ, ನನ್ನ ಲೆಕ್ಕಾಚಾರವನ್ನು ನಿಮ್ಮೆದುರಿಗೆ ಒಪ್ಪಿಸೋದಕ್ಕೆ ನನಗೆ ಸಂತೋಷವಾಗ್ತಾ ಇದೆ, ನಾನು ಮೂರನೇ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಜನತಾ ಜನಾರ್ದನರ ಮೇಲೆ ಭರವಸೆಯನ್ನು ಇಡುವ ಮಾರ್ಗ. ರಾಜಕಾರಣಿಗಳು ತಮಗಿಂತ ಹೆಚ್ಚಾಗಿ ತಮ್ಮವರ ಮೇಲೆ ವಿಶ್ವಾಸವನ್ನು ತಾಳುವುದು ಒಳ್ಳೆಯದು. ನಾನು ಜನತಾ ಜನಾರ್ದನರ ಮೇಲೆ ವಿಶ್ವಾಸವಿಟ್ಟು, ಹೀಗೇ ಒಮ್ಮೆ  ಮಾತುಮಾತಿನಲ್ಲಿ ಅಂದಿದ್ದೆ, ನೀವು ಒಂದು ವರ್ಷದಲ್ಲಿ ಹದಿನೈದು ನೂರು, ಅಥವಾ ಎರಡು ಸಾವಿರ ರೂಪಾಯಿ ವೆಚ್ಚವನ್ನು ಸಹಿಸ್ತೀರೀ ಅಂತಾದರೆ, ನೀವು ಗ್ಯಾಸ್ ಸಬ್ಸಿಡಿಯನ್ನು ಏಕೆ ಬಿಟ್ಟುಕೊಡಬಾರದು? ಇದರಿಂದ ಬಡವರಿಗೆ ಪ್ರಯೋಜನ ಆಗುತ್ತೆ. ನಾನು ಹೀಗೇ ಒಂದು ಮಾತು ಹೇಳಿದ್ದೆ, ಆದರೆ ಇವತ್ತು ಎದೆತುಂಬಿ ಹೇಳ್ತೇನೆ. ನನಗೆ ನನ್ನ ದೇಶಬಾಂಧವರ ಬಗ್ಗೆ ತುಂಬಾ ಹೆಮ್ಮೆ ಇದೆ. 
ಒಂದು ಕೋಟಿ ಕುಟುಂಬದವರು ಸ್ವಯಿಚ್ಛೆಯಿಂದ ತಮ್ಮ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ. ಹಾಗೆ ನೋಡಿದರೆ, ಈ ಒಂದು ಕೋಟಿ ಕುಟುಂಬದವರು ಬಹಳ ದೊಡ್ಡ ಶ್ರೀಮಂತರಲ್ಲ, ನನಗೆ ಗೊತ್ತು, ನಿವೃತ್ತ ಶಿಕ್ಷಕರು, ನಿವೃತ್ತ ಕಾರಕೂನರು, ರೈತರು, ಚಿಕ್ಕ ಅಂಗಡಿ ಮಾಲೀಕರು ಹೀಗೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನ – ಇವರು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ. 
 
ಇನ್ನೊಂದು ವಿಶೇಷತೆ ಅಂತಂದ್ರೆ, ಸಬ್ಸಿಡಿಯನ್ನು ಬಿಟ್ಟುಕೊಡೋದ್ರ ಬಗ್ಗೆ ಮೊಬೈಲ್ ಫ಼ೋನ್ ಬಳಸಿ ಮಾಡಬಹುದಾಗಿತ್ತು. ಆನ್ ಲೈನ್ ಮಾಡಬಹುದಾಗಿತ್ತು. ಟೆಲಿಫ಼ೋನ್ ನಲ್ಲಿ ಮಿಸ್ಡ್ ಕಾಲ್ ಕೊಡಬಹುದಾಗಿತ್ತು; ಅನೇಕ ವಿಧಾನಗಳಿದ್ವು. ಆದರೆ, ಲೆಕ್ಕಾಚಾರಗಳಿಂದ ಆಮೇಲೆ ಗೊತ್ತಾಗಿದ್ದು ಅಂದ್ರೆ, ಹೀಗೆ ಸಬ್ಸಿಡಿಯನ್ನು ಬಿಟ್ಟುಕೊಟ್ಟವರಲ್ಲಿ ನೂರಕ್ಕೆ ಎಂಭತ್ತು ಜನ ತಾವೇ ಖುದ್ದಾಗಿ ಗ್ಯಾಸ್ ವಿತರಕರ ಬಳಿ ಹೋಗಿ, ಕ್ಯೂನಲ್ಲಿ ನಿಂತು, ಲಿಖಿತವಾಗಿ ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ.
ನನ್ನ ಪ್ರೀತಿಯ ದೇಶಬಾಂಧವರೇ, ಇದು ಸಣ್ಣ ವಿಚಾರವಲ್ಲ, ಸರಕಾರವು ಯಾವುದೇ ಒಂದು ತೆರಿಗೆಯಲ್ಲಿ ಚಿಕ್ಕದೊಂದು ರಿಯಾಯತಿ ಕೊಟ್ಟರೂ, ವಿನಾಯಿತಿ ಕೊಟ್ಟರೂ ಸಾಕು, ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಅಂಥ ಸರಕಾರದ ಕುರಿತು ಹೊಗಳಿಕೆಗಳ ಹೊಳೆಯೇ ವಾರವಿಡೀ ಹರಿಯುತ್ತೆ. ಆದರೆ, ನಮ್ಮ ದೇಶದಲ್ಲಿ ಸಬ್ಸಿಡಿ ಅನ್ನೋದು ಒಂದು ಬಗೆಯ ಹಕ್ಕು ಅನ್ನುವಂಥ ಪರಿಸ್ಥಿತಿಯಲ್ಲಿ, ಒಂದು ಕೋಟಿ  ಕುಟುಂಬಗಳು ಸಬ್ಸಿಡಿಯನ್ನು ಬಿಟ್ಟುಕೊಟ್ಟವು. ನಾನು ಮೊಟ್ಟಮೊದಲು ಈ ಒಂದು ಕೋಟಿ ಕುಟುಂಬಗಳಿಗೆ ಶತಶತ ನಮನಗಳನ್ನು ಸಲ್ಲಿಸುತ್ತೇನೆ. ಅಭಿನಂದಿಸುತ್ತೇನೆ. ಏಕೆಂದರೆ, ಇವರು, ರಾಜಕಾರಣಿಗಳಿಗೆ ಹೊಸ ರೀತಿಯಲ್ಲಿ ಆಲೋಚನೆ ಮಾಡುವುದನ್ನು ಕಲಿಸಿದ್ದಾರೆ. ಈ ಒಂದು ಘಟನೆ, ಅರ್ಥಶಾಸ್ತ್ರಜ್ಞರಿಗೂ ಹೊಸ ರೀತಿಯಲ್ಲಿ ಯೋಚನೆ ಮಾಡುವುದನ್ನು ಅನಿವಾರ್ಯಗೊಳಿಸಿದೆ. ಜಾಗತಿಕ ಮಟ್ಟದ ಅರ್ಥಶಾಸ್ತ್ರಜ್ಞರು ರೂಪಿಸುವ ಸಮೀಕರಣಗಳ ಹೊರತಾಗಿ ಇದೆ ಈ ಘಟನೆ. ಈ ಕುರಿತು ಒಂದಿಲ್ಲೊಂದು ದಿನ ಯೋಚಿಸಬೇಕು. ಒಂದು ಕೋಟಿ ಕುಟುಂಬಗಳು ಸಬ್ಸಿಡಿಯನ್ನು ಬಿಟ್ಟುಕೊಡುವುದು; ಅದರ ಬದಲಿಗೆ, ಕೋಟಿಗಟ್ಟಲೆ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಿಗುವುದು – ಹೊರಗಡೆಯಿಂದ ನೋಡುವುದಕ್ಕೆ ಇದು ಸಾಮಾನ್ಯವಾದ ಮಾತಾಗಿದೆ. ಅಸಾಮಾನ್ಯವಾದ ಮಾತು ಅಂತಂದ್ರೆ, ಜನತೆಯ ಮೇಲೆ ವಿಶ್ವಾಸವಿಟ್ಟು ಈ ಕೆಲಸವನ್ನು ಮಾಡಿದರೆ ಎಷ್ಟೊಂದು ದೊಡ್ಡ ಸಾಧನೆ ಮಾಡಬಹುದು ಎನ್ನುವುದು. ನಾನು ಮುಖ್ಯವಾಗಿ ಎಲ್ಲಾ ರಾಜಕೀಯ ವರ್ಗಕ್ಕೆ ಇವತ್ತು ಆಗ್ರಹದಿಂದ ಹೇಳಬಯಸುತ್ತೇನೆ, ಜನರ ಮೇಲೆ ವಿಶ್ವಾಸವನ್ನು ಇಡುವ ಒಂದು ವಿಚಾರವನ್ನು ಯಾವಾಗಲೂ ಮಾಡಬೇಕು. ನೀವು ಊಹೆಯನ್ನೇ ಮಾಡಿರದಂಥ ಪರಿಣಾಮ ಇದರಿಂದ ಸಿಗಬಹುದು. ನಾನು ಈ ದಿಕ್ಕಿನಲ್ಲಿ ಮುನ್ನಡೆಯಬೇಕು. 
 
ನನಗೆ ಯಾವಾಗಲೂ ಅನ್ನಿಸ್ತಾ ಇತ್ತು, ಮೂರನೇ ಮತ್ತು ನಾಲ್ಕನೇ ವರ್ಗದ ಹುದ್ದೆಗಳಿಗಾಗಿ ಸಂದರ್ಶನವನ್ನು ಏಕೆ ಮಾಡಬೇಕು ಅಂತ. ಪರೀಕ್ಷೆಯನ್ನು ಬರೆದು ಅಂಕಗಳನ್ನು ಗಳಿಸುತ್ತಾರಲ್ಲ, ಅದರ ಮೇಲೆ ವಿಶ್ವಾಸ ಇಡಿ. ನನಗೆ ಇನ್ನೊಂದು ಅನ್ನಿಸ್ತಾ ಇರುತ್ತೆ, ನಮ್ಮ ರೈಲು ಮಾರ್ಗಗಳು ಇವೆಯಲ್ಲ, ಯಾವುದಾದರೂ ಒಂದು ರೂಟಿನಲ್ಲಿ ಟಿಕೆಟ್ ಚೆಕ್ಕರ್ ಇರಲ್ಲ ಅಂತ ಘೋಷಣೆ ಮಾಡಿ. ನಾವು ದೇಶದ ಜನರ ಮೇಲೆ ವಿಶ್ವಾಸವನ್ನು ಇಡಬೇಕು. ಬೇಕಾದಷ್ಟು ಇಂಥ ಪ್ರಯೋಗಗಳನ್ನು ಮಾಡಬಹುದು. ಒಂದು ಸಲ ನಾವು ದೇಶದ ಜನರನ್ನು ನಂಬಿದರೆ, ಅಪ್ರತಿಮ ಪರಿಣಾಮಗಳೂ ಲಭಿಸುತ್ತವೆ. ಇರಲಿ, ಇವು ನನ್ನ ಮನಸ್ಸಿನ ವಿಚಾರಗಳು. ಇದರಿಂದ ಯಾವುದೇ ಸರಕಾರ ನಿಯಮಗಳು ಆಗುವುದಿಲ್ಲ. ಆದರೆ, ಒಂದು ವಾತಾವರಣವಂತೂ ಸೃಷ್ಟಿಯಾಗುತ್ತೆ, ಅನ್ನೋ ಮಾತು ನಿಜ. ಈ ವಾತಾವರಣವನ್ನು ಯಾವುದೇ ರಾಜಕಾರಣಿ ಸೃಷ್ಟಿ ಮಾಡ್ಲಿಲ್ಲ. ಈ ದೇಶದ ಒಂದು ಕೋಟಿ ಕುಟುಂಬಗಳು ಸೃಷ್ಟಿ ಮಾಡಿವೆ. 
 
ರವಿ ಅಂತ ಒಬ್ಬ ಮಹನೀಯರು ನನಗೆ ಪತ್ರ ಬರೆದಿದ್ದಾರೆ – “ಗುಡ್ ನ್ಯೂಸ್ ಎವ್ರಿ ಡೆ.” ಅವರು ಬರೆದಿದ್ದಾರೆ: ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಹೇಳಿ, ಪ್ರತಿ ದಿನ ಯಾವುದಾದರೂ ಒಂದು ಒಳ್ಳೆಯ ಘಟನೆಯ ಬಗ್ಗೆ ಪೋಸ್ಟ್ ಮಾಡಿ ಅಂತ. ಯಾವುದೇ ಪತ್ರಿಕೆ, ನ್ಯೂಸ್ ಚಾನಲ್ ನೋಡಿ, ಪ್ರತಿಯೊಂದು ಬ್ರೇಕಿಂಗ್ ನ್ಯೂಸ್ ಅಂದರೆ ಒಂದು ಕೆಟ್ಟ ಸುದ್ದಿಯೇ ಆಗಿರುತ್ತೆ. ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ನಮ್ಮ ಸುತ್ತಮುತ್ತ ಏನೂ ಒಳ್ಳೆಯದು ನಡೆಯುವುದಿಲ್ಲವೇ? ದಯವಿಟ್ಟು ಈ ಪರಿಸ್ಥಿತಿಯನ್ನು ಬದಲಾಯಿಸಿ.
 
ರವಿಯವರು ಬಹಳ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅದು ನನ್ನ ಮೇಲೆ ಅಲ್ಲ, ಪರಿಸ್ಥಿತಿಯ ಕುರಿತು ಕೋಪ ತೋರಿಸ್ತಾ ಇದ್ದಾರೆ ಅಂತ ನಾನು ಅಂದುಕೊಂಡಿದ್ದೇನೆ. ನಿಮಗೆ ನೆನಪಿರಬಹುದು, ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ಯಾವಾಗಲೂ ಇದನ್ನು ಹೇಳ್ತಾ ಇದ್ದರು- ಪತ್ರಿಕೆಯ ಮೊದಲ ಪುಟದಲ್ಲಿ ಯಾವಾಗಲೂ ಸಕಾರಾತ್ಮಕವಾದ ಸುದ್ದಿಗಳನ್ನು ಪ್ರಕಟಿಸಿ ಅಂತ. ಅವರು ನಿರಂತರವಾಗಿ ಈ ಮಾತನ್ನು ಹೇಳ್ತಾನೇ ಇದ್ದರು.  
 
ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯವರು ನನಗೆ ಬರೆದಿದ್ದರು, ಸೋಮವಾರದ ದಿನ ನಾವು ಒಂದೂ ನಕಾರಾತ್ಮಕ ಸುದ್ದಿಯನ್ನು ಪ್ರಕಟಿಸುವುದಿಲ್ಲ ಅಂತ ನಿರ್ಧಾರ ಮಾಡಿದ್ದೇವೇಂತ. ಕೇವಲ ಸಕಾರಾತ್ಮಕ ಸುದ್ದಿ ಮಾತ್ರ ಇರುತ್ತೆ, ಅವತ್ತು. ನಾವು ನೋಡಿರುವ ಹಾಗೆ ಕೆಲವು ಟಿವಿ ಚಾನೆಲ್ ನವರು ಸಕಾರಾತ್ಮಕ ಸುದ್ದಿಗಳನ್ನು ವಿಶೇಷ ಸಮಯದಲ್ಲಿ ಪ್ರಸಾರ ಮಾಡ್ತಾ ಇದ್ದಾರೆ. ಇದರಿಂದಾಗಿ ಇತ್ತೀಚೆಗೆ ಸಕಾರಾತ್ಮಕ ಸುದ್ದಿಗಳ ವಾತಾವರಣ ಮೂಡ್ತಾ ಇದೆ ಅನ್ನೊ ಮಾತು ನಿಜ. ಒಳ್ಳೆ ಸುದ್ದಿಗಳು, ಸರಿಯಾದ ಸುದ್ದಿಗಳು ಜನರನ್ನು ತಲುಪುತ್ತಾ ಇರಲಿ ಅಂತ ಎಲ್ಲರಿಗೂ ಅನ್ನಿಸ್ತಾ ಇದೆ. ದೊಡ್ಡದೊಡ್ಡ ವ್ಯಕ್ತಿಗಳೂ ಕೂಡ ಉತ್ತಮೋತ್ತಮವಾದ ವಿಚಾರವನ್ನೇ ಹೇಳಲಿ. ಒಳ್ಳೊಳ್ಳೆ ಶಬ್ದಗಳನ್ನು ಬಳಸಿ, ಉತ್ತಮವಾದ ವಿಧಾನಗಳಲ್ಲಿ ಹೇಳಲಿ. ಒಂದು ಒಳ್ಳೆಯ ಸುದ್ದಿಯ ಪ್ರಭಾವ ಅಷ್ಟೊಂದು ಉತ್ತಮವಾಗಿರುತ್ತದೆ. ಒಳ್ಳೆಯ ಸುದ್ದಿ ಒಳ್ಳೆಯದನ್ನು ಮಾಡುವ ಪ್ರೇರಣೆಯನ್ನು ನೀಡುತ್ತದೆ. ನಾವು ಎಷ್ಟೊಂದು ಒಳ್ಳೆಯದಕ್ಕೆ ಬೆಂಬಲ ನೀಡುತ್ತೇವೆಯೋ ಅಷ್ಟೊಂದು ಪ್ರಮಾಣದಲ್ಲಿ ಕೆಟ್ಟವುಗಳಿಗೆ ಕಡಿಮೆ ಅವಕಾಶ ಸಿಗುತ್ತೆ. ದೀಪವನ್ನು ಬೆಳಗಿಸಿದರೆ ಅಂಧಕಾರವು ಅಳಿಯಲೇ ಬೇಕು. ಅನುಮಾನವೇ ಇಲ್ಲ. ಆದ್ದರಿಂದ, ನಿಮಗೆ ಗೊತ್ತಿರಬಹುದು, ಸರಕಾರದ ವತಿಯಿಂದ, ‘ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ಅಂತನ್ನೋ  ವೆಬ್ ಸೈಟ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಸಕಾರಾತ್ಮಕ ಸುದ್ದಿಗಳು ಇರುತ್ತವೆ. ಸರಕಾರದ ಸುದ್ದಿಗಳಷ್ಟೇ ಅಲ್ಲ. ಜನತೆಯ ಸುದ್ದಿಗಳೂ ಇರುತ್ವೆ. ನಿಮ್ಮ ಬಳಿ ಏನಾದರೂ ಒಳ್ಳೆಯ ಸುದ್ದಿಯಿದ್ದರೆ ನೀವು ಅದನ್ನು ಈ ಪೋರ್ಟಲ್ ಗೆ ಕಳಿಸಬಹುದು. ರವಿಯವರೇ, ನೀವು ಒಳ್ಳೆಯ ಸಲಹೆಯನ್ನು ನೀಡಿದ್ದೀರಿ. ಆದರೆ, ದಯವಿಟ್ಟು ನನ್ನ ಮೇಲೆ ಕೋಪ ಮಾಡ್ಕೋಬೇಡಿ. ನಾವೆಲ್ಲರೂ ಸೇರಿ ಸಕಾರಾತ್ಮಕವಾದುದ್ದನ್ನು ಮಾಡುವ, ಸಕಾರಾತ್ಮಕವಾದ ಮಾತನ್ನು ಆಡುವ, ಸಕಾರಾತ್ಮಕವಾದದ್ದನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡೋಣ. 
 
ನಮ್ಮ ದೇಶದ ಒಂದು ವಿಶೇಷತೆ ಅಂತಂದ್ರೆ, ಕುಂಭ ಮೇಳ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಹೌದು. ಇಷ್ಟು ದೀರ್ಘ ಸಮಯದ ವರೆಗೆ ನದಿಯ ದಡದಲ್ಲಿ ಕೋಟಿಗಟ್ಟಲೆ ಜನ ಸಮಾವೇಶಗೊಳ್ಳುತ್ತಾರೆ ಎನ್ನುವುದು ಜಗತ್ತಿನ ಬಹಳ ಕಡಿಮೆ ಜನರಿಗೆ ಗೊತ್ತು. ಶಾಂತ ಚಿತ್ತದಿಂದ, ಶಾಂತಿಪೂರ್ಣವಾಗಿ ಈ ಒಂದು ಮಹೋತ್ಸವ ಸಂಪನ್ನವಾಗಬೇಕು. ಸಂಘಟನೆ ಅಥವಾ ಇವೆಂಟ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ, ಜನರ ಸಹಭಾಗಿತ್ವದ ದೃಷ್ಟಿಯಿಂದ, ಬಹುದೊಡ್ಡ ಮತ್ತು ಹೊಸ ಮಾನಕಗಳನ್ನು ಸೃಷ್ಟಿ ಮಾಡುವ ಮೇಳ ಇದಾಗಿರುತ್ತೆ. 
 
ಕೆಲವು ದಿನಗಳಿಂದ ನಾನು ನೋಡ್ತಾ ಇದ್ದೇನೆ, ಹಲವರು ಸಿಂಹಸ್ಥ ಕುಂಭದ ಚಿತ್ರಗಳನ್ನು ಅಪ್ಲೋಡ್ ಮಾಡ್ತಾ ಇದ್ದಾರೆ. ಭಾರತ ಸರಕಾರ, ರಾಜ್ಯ ಸರಕಾರಗಳು ಪ್ರವಾಸೋದ್ಯಮ ಇಲಾಖೆಗಳು ಈ ಕುರಿತು ಒಂದು  ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಬೇಕು. ಅತ್ಯುತ್ತಮವಾದ ಫ಼ೋಟೋಗಳನ್ನು ತೆಗೆದು ಅಪ್ಲೋಡ್ ಮಾಡಿ ಅಂತ ಜನರಿಗೆ ಆಹ್ವಾನ ನೀಡಬೇಕು. ಕುಂಭಮೇಳಕ್ಕೊಂದು ವಾತಾವರಣ ನಿರ್ಮಾಣ ಆಗುತ್ತೆ; ಕುಂಭಮೇಳದ ಮೂಲೆ ಮೂಲೆಗಳು ಎಷ್ಟೊಂದು ವೈವಿಧ್ಯದಿಂದ ಕೂಡಿರುತ್ತವೆ ಅನ್ನೋದು ಜನರಿಗೆ ಗೊತ್ತಾಗುತ್ತೆ. 
 
ಈ ನಡುವೆ ಮಧ್ಯಪ್ರದೇಶದ ಮುಖ್ಯಮಂತ್ರಿಯವರು ನನ್ನನ್ನು ಭೇಟಿ ಮಾಡಿದ್ದರು. ಸ್ವಚ್ಛತೆಯ ಬಗ್ಗೆ ನಾವು ಒತ್ತು ಕೊಡುತ್ತೇವೆ; ಅದರೆ ಸ್ವಚ್ಛತೆ ಆಗುವುದೇ ಇಲ್ಲ. ಹೀಗೆ ಆಗಬಾರದು. ಅಲ್ಲಿಂದ ಜನ ಸ್ವಚ್ಛತೆಯ ಸಂದೇಶವನ್ನೂ ತಮ್ಮೊಂದಿಗೆ ಒಯ್ಯಬೇಕು, ಹಾಗೇ ಆಗಬೇಕು. ನನಗನ್ನಿಸುತ್ತೆ, ಕುಂಭಮೇಳ ಧಾರ್ಮಿಕ, ಆಧ್ಯಾತ್ಮಿಕ ಮೇಳ, ಹೌದು. ಆದರೆ, ಇದರಲ್ಲಿಯೇ ನಾವು ಒಂದು ಸಾಮಾಜಿಕವಾದ ಅವಕಾಶವನ್ನು, ಸಂಸ್ಕಾರದ ಅವಕಾಶವನ್ನು  ಕಂಡುಕೊಳ್ಳಬಹುದು. ಅಲ್ಲಿಂದ ಒಳ್ಳೆಯ ಸಂಕಲ್ಪಗಳನ್ನು, ಒಳ್ಳೆಯ ವರ್ತನೆಗಳನ್ನು ಪಡೆದುಕೊಂಡು ತಮ್ಮ ತಮ್ಮ ಊರಿಗೆ ಹಿಂದಿರುಗುವ ಅವಕಾಶವನ್ನು ಕಲ್ಪಿಸಬಹುದು. ನೀರಿನ ಕುರಿತು ಪ್ರೀತಿ, ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಹೇಗೆ? ನೀರಿನ ಸ್ವಯಂಸಂಗ್ರಹಣೆ ಮಾಡುವುದು ಹೇಗೆ? ಎನ್ನುವ ಕುರಿತು ಜಾಗೃತಿಯನ್ನು ಮೂಡಿಸಲು ಈ ಕುಂಭಮೇಳವನ್ನು ನಾವು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಬೇಕಾಗಿದೆ. 
 
ನನ್ನ ಪ್ರೀತಿಯ ದೇಶಬಾಂಧವರೇ, ಪಂಚಾಯತ್ ರಾಜ್ ದಿನದ ಮಹತ್ವದ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ಅನಂತ ಧನ್ಯವಾದ, ಮತ್ತು ಪ್ರತಿಸಲದ ಹಾಗೆ ನಿಮ್ಮ ಮನದ ಮಾತು ನನ್ನ ಮನದಾಳದ ಮಾತಿನೊಂದಿಗೆ ಅನನ್ಯ ಸಂಬಂಧವನ್ನು ಕಲ್ಪಿಸಿಕೊಂಡಿದೆ. ಇದು ನನಗೆ ಬಹಳ ಸಂತೋಷವನ್ನು ನೀಡುವ ಸಂಗತಿಯಾಗಿದೆ. ಇನ್ನೊಮ್ಮೆ ನಿಮಗೆಲ್ಲ ಅನಂತ ಧನ್ಯವಾದಗಳು.
***