ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ ಎಂದು ಹೇಳಿದರು. ಮತ್ತು ಖಾಸಗಿ ವಲಯವು ಎತ್ತರಕ್ಕೆ ಹಾರಾಡುತ್ತಿರುವುದರಿಂದ ಭಾರತದ ಬಾಹ್ಯಾಕಾಶ ಪೂರಕ ವ್ಯವಸ್ಥೆಯು ಭಾರಿ ಏರಿಕೆಯನ್ನು ಕಂಡಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಭಾರತದ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಯುವಕರ ನಾವೀನ್ಯತೆ, ಅಪಾಯ ಎದುರಿಸುವ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಇಂದಿನ ಕಾರ್ಯಕ್ರಮವು ಮುಂಬರುವ ದಿನಗಳಲ್ಲಿ ಜಾಗತಿಕ ಉಪಗ್ರಹ ಉಡಾವಣಾ ಪೂರಕ ವ್ಯವಸ್ಥೆಯಲ್ಲಿ ಭಾರತ ಹೇಗೆ ನಾಯಕನಾಗಿ ಹೊರಹೊಮ್ಮುತ್ತದೆ ಎಂಬುದರ ಪ್ರತಿಬಿಂಬವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಶ್ರೀ ಪವನ್ ಕುಮಾರ್ ಚಂದನ ಮತ್ತು ಶ್ರೀ ನಾಗ ಭರತ್ ಡಕಾ ಅವರಿಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಈ ಇಬ್ಬರು ಯುವ ಉದ್ಯಮಿಗಳು ದೇಶಾದ್ಯಂತದ ಅಸಂಖ್ಯಾತ ಯುವ ಬಾಹ್ಯಾಕಾಶ ಉದ್ಯಮಿಗಳಿಗೆ ಸ್ಫೂರ್ತಿ ಎಂದು ಹೇಳಿದರು. ಅವರಿಬ್ಬರೂ ತಮ್ಮನ್ನು ತಾವು ನಂಬಿದ್ದರು, ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಲಿಲ್ಲ ಮತ್ತು ಪರಿಣಾಮವಾಗಿ ಇಡೀ ರಾಷ್ಟ್ರವು ಇಂದು ಅವರ ಯಶಸ್ಸಿಗೆ ಸಾಕ್ಷಿಯಾಗುತ್ತಿದೆ, ದೇಶವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಅವರು ಒತ್ತಿ ಹೇಳಿದರು
ಭಾರತದ ಬಾಹ್ಯಾಕಾಶ ಪ್ರಯಾಣವು ಸೀಮಿತ ಸಂಪನ್ಮೂಲಗಳಿಂದ ಆರಂಭವಾಯಿತು, ಆದರೆ ದೇಶದ ಮಹತ್ವಾಕಾಂಕ್ಷೆಗಳು ಎಂದಿಗೂ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಸೈಕಲ್‌ನಲ್ಲಿ ರಾಕೆಟ್ ಭಾಗಗಳನ್ನು ಹೊತ್ತೊಯ್ಯುವುದರಿಂದ ಹಿಡಿದು ವಿಶ್ವದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುವವರೆಗೆ, ಕನಸುಗಳ ಎತ್ತರವನ್ನು ಸಂಪನ್ಮೂಲಗಳಿಂದಲ್ಲ, ಬದಲಾಗಿ ಸಂಕಲ್ಪದಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಭಾರತ ಸಾಬೀತುಪಡಿಸಿದೆ ಎಂದು ಹೇಳಿದರು. ”ಇಸ್ರೋ ದಶಕಗಳಿಂದ ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಹೊಸ ರೆಕ್ಕೆಗಳನ್ನು ನೀಡಿದೆ ಮತ್ತು ವಿಶ್ವಾಸಾರ್ಹತೆ, ಸಾಮರ್ಥ್ಯ ಮತ್ತು ಮೌಲ್ಯವು ಈ ವಲಯದಲ್ಲಿ ಭಾರತದ ವಿಶಿಷ್ಟ ಗುರುತನ್ನು ಸ್ಥಾಪಿಸಿದೆ ಎಂದು ಒತ್ತಿ ಹೇಳಿದೆ’’ ಎಂದು ಪ್ರಧಾನಮಂತ್ರಿ ಉದ್ಗರಿಸಿದರು.
ಬದಲಾಗುತ್ತಿರುವ ಕಾಲಘಟ್ಟವನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಬಾಹ್ಯಾಕಾಶ ಕ್ಷೇತ್ರದ ವಿಸ್ತರಣೆ ಸ್ಪಷ್ಟವಾಗಿದೆ. ಏಕೆಂದರೆ ಅದು ಸಂವಹನ, ಕೃಷಿ, ಸಾಗರ ಮೇಲ್ವಿಚಾರಣೆ, ನಗರ ಯೋಜನೆ, ಹವಾಮಾನ ಮುನ್ಸೂಚನೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಡಿಪಾಯವಾಗಿದೆ ಎಂದರು. ಅದಕ್ಕಾಗಿಯೇ ಭಾರತದ ಬಾಹ್ಯಾಕಾಶ ವಲಯದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಕೈಗೊಳ್ಳಲಾಯಿತು, ಸರ್ಕಾರವು ಅದನ್ನು ಖಾಸಗಿ ನಾವೀನ್ಯತೆಗೆ ಮುಕ್ತಗೊಳಿಸಿತು ಮತ್ತು ಹೊಸ ಬಾಹ್ಯಾಕಾಶ ನೀತಿಯನ್ನು ಸಿದ್ಧಪಡಿಸಿತು ಎಂದು ಅವರು ಹೇಳಿದರು. ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮವನ್ನು ನಾವೀನ್ಯತೆಯೊಂದಿಗೆ ಬೆಸೆಯಲು ಪ್ರಯತ್ನಗಳು ನಡೆದಿವೆ ಮತ್ತು ಇಸ್ರೋದ ಸೌಲಭ್ಯಗಳು ಮತ್ತು ತಂತ್ರಜ್ಞಾನವನ್ನು ಸ್ಟಾರ್ಟ್‌ಅಪ್‌ಗಳಿಗೆ ಒದಗಿಸಲು ಇನ್-ಸ್ಪೇಸ್ ಅನ್ನು ಸ್ಥಾಪಿಸಲಾಯಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ಕಳೆದ ಆರೇಳು ವರ್ಷಗಳಲ್ಲಿ, ಭಾರತವು ತನ್ನ ಬಾಹ್ಯಾಕಾಶ ವಲಯವನ್ನು ಮುಕ್ತ, ಸಹಕಾರಿ ಮತ್ತು ನಾವೀನ್ಯತೆ ಆಧರಿತ ಪೂರಕ ವ್ಯವಸ್ಥೆಯಾಗಿ ಪರಿವರ್ತಿಸಿದೆ” ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಂದಿನ ಕಾರ್ಯಕ್ರಮವು ಈ ಪರಿವರ್ತನೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಭಾರತದ ಯುವಕರು ಸದಾ ರಾಷ್ಟ್ರೀಯ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮೇಲಿನ ಸ್ಥರದಲ್ಲಿಡುತ್ತಾರೆ ಮತ್ತು ಪ್ರತಿಯೊಂದು ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸರ್ಕಾರ ಬಾಹ್ಯಾಕಾಶ ವಲಯವನ್ನು ತೆರೆದಾಗ, ದೇಶದ ಯುವಕರು, ವಿಶೇಷವಾಗಿ ಜೆನ್-ಝಡ್ ಪೀಳಿಗೆಯವರು, ಅದರ ಸಂಪೂರ್ಣ ಲಾಭ ಪಡೆಯಲು ಮುಂದೆ ಬಂದರು ಎಂದು ಹೇಳಿದರು. ಇಂದು 300 ಕ್ಕೂ ಅಧಿಕ ಬಾಹ್ಯಾಕಾಶ ನವೋದ್ಯಮಗಳು ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಹೊಸ ಭರವಸೆಗಳನ್ನು ನೀಡುತ್ತಿವೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಈ ನವೋದ್ಯಮಗಳಲ್ಲಿ ಹೆಚ್ಚಿನವು ಸಣ್ಣ ತಂಡಗಳೊಂದಿಗೆ – ಕೆಲವೊಮ್ಮೆ ಇಬ್ಬರು ವ್ಯಕ್ತಿಗಳು, ಕೆಲವೊಮ್ಮೆ ಐದು ಜನರು, ಕೆಲವೊಮ್ಮೆ ಸಣ್ಣ ಬಾಡಿಗೆ ಕೋಣೆಯಲ್ಲಿ – ಸೀಮಿತ ಸಂಪನ್ಮೂಲಗಳೊಂದಿಗೆ ಆರಂಭವಾಗಿ ಆದರೆ ಹೊಸ ಎತ್ತರವನ್ನು ತಲುಪುವ ದೃಢನಿಶ್ಚಯದಿಂದ ಆರಂಭವಾಯಿತು ಎಂದು ಉಲ್ಲೇಖಿಸಿದರು. “ಈಮನೋಭಾವವು ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಕ್ರಾಂತಿಗೆ ಜನ್ಮ ನೀಡಿದೆ’’ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಜೆನ್-ಝಡ್ ಎಂಜಿನಿಯರ್‌ಗಳು, ವಿನ್ಯಾಸಕರು, ಕೋಡರ್‌ಗಳು ಮತ್ತು ವಿಜ್ಞಾನಿಗಳು ಪ್ರೊಪಲ್ಷನ್ ಸಿಸ್ಟಮ್‌ಗಳು, ಸಂಯೋಜಿತ ವಸ್ತುಗಳು, ರಾಕೆಟ್ ಹಂತಗಳು ಅಥವಾ ಉಪಗ್ರಹ ವೇದಿಕೆಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಭಾರತದ ಯುವಕರು ಕೆಲವು ವರ್ಷಗಳ ಹಿಂದೆ ಊಹಿಸಲಾಗದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತದ ಖಾಸಗಿ ಬಾಹ್ಯಾಕಾಶ ಪ್ರತಿಭೆ ವಿಸಿಷ್ಟ ಹೆಜ್ಜೆ ಗುರುತನ್ನು ಸ್ಥಾಪಿಸುತ್ತಿದೆ ಮತ್ತು ಇಂದು ಜಾಗತಿಕ ಹೂಡಿಕೆದಾರರಿಗೆ, ಭಾರತದ ಬಾಹ್ಯಾಕಾಶ ವಲಯವು ಆಕರ್ಷಕ ಹೂಡಿಕೆ ತಾಣವಾಗುತ್ತಿದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ ಸಣ್ಣ ಉಪಗ್ರಹಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಉಡಾವಣಾ ಆವರ್ತನಗಳು ಹೆಚ್ಚುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಉಪಗ್ರಹ ಸೇವೆಗಳನ್ನು ಒದಗಿಸಲು ಹೊಸ ಕಂಪನಿಗಳು ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿವೆ ಎಂದು ಹೇಳಿದರು ಮತ್ತು ಬಾಹ್ಯಾಕಾಶವು ಈಗ ತನ್ನನ್ನು ತಾನು ಕಾರ್ಯತಂತ್ರದ ಆಸ್ತಿಯಾಗಿ ಸ್ಥಾಪಿಸಿಕೊಂಡಿದೆ ಎಂದು ಒತ್ತಿ ಹೇಳಿದರು. ಮುಂಬರುವ ವರ್ಷಗಳಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಹಲವು ಪಟ್ಟು ಬೆಳೆಯಲಿದೆ ಎಂದು ಹೇಳಿದಮ ಅವರು, ಇದು ಭಾರತದ ಯುವಕರಿಗೆ ಬಹಳ ಮಹತ್ವದ ಅವಕಾಶವನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದರು.
“ಭಾರತವು ವಿಶ್ವದ ಕೆಲವೇ ದೇಶಗಳು ಹೊಂದಿರುವ ಬಾಹ್ಯಾಕಾಶ ವಲಯದ ಸಾಮರ್ಥ್ಯಗಳನ್ನು ಹೊಂದಿದೆ, ಪರಿಣಿತ ಎಂಜಿನಿಯರ್‌ಗಳ ಉಪಸ್ಥಿತಿ, ಉತ್ತಮ ಗುಣಮಟ್ಟದ ಉತ್ಪಾದನಾ ಪೂರಕ ವ್ಯವಸ್ಥೆ, ವಿಶ್ವ ದರ್ಜೆಯ ಉಡಾವಣಾ ತಾಣಗಳು ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮನಸ್ಥಿತಿಯನ್ನು ಗಮನಿಸಿ” ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ಭಾರತದ ಬಾಹ್ಯಾಕಾಶ ಸಾಮರ್ಥ್ಯವು ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹವಾಗಿದೆ, ಅದಕ್ಕಾಗಿಯೇ ಜಗತ್ತು ದೇಶದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಜಾಗತಿಕ ಕಂಪನಿಗಳು ಭಾರತದಲ್ಲಿ ಉಪಗ್ರಹಗಳನ್ನು ತಯಾರಿಸಲು, ಭಾರತದಿಂದ ಉಡಾವಣಾ ಸೇವೆಗಳನ್ನು ಪಡೆಯಲು ಮತ್ತು ಭಾರತದೊಂದಿಗೆ ತಂತ್ರಜ್ಞಾನ ಪಾಲುದಾರಿಕೆಯನ್ನು ಪಡೆಯಲು ಬಯಸುತ್ತವೆ ಮತ್ತು ಆದ್ದರಿಂದ ರಾಷ್ಟ್ರವು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಬಾಹ್ಯಾಕಾಶ ವಲಯದಲ್ಲಿ ಕಂಡುಬರುತ್ತಿರುವ ಬದಲಾವಣೆಗಳು ಭಾರತದಲ್ಲಿ ನಡೆಯುತ್ತಿರುವ ವಿಸ್ತೃತ ನವೋದ್ಯಮ ಕ್ರಾಂತಿಯ ಭಾಗವಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕಳೆದೊಂದು ದಶಕದಲ್ಲಿ ಫಿನ್‌ಟೆಕ್, ಅಗ್ರಿಟೆಕ್, ಹೆಲ್ತ್‌ಟೆಕ್, ಕ್ಲೈಮೇಟ್‌ಟೆಕ್, ಎಜುಟೆಕ್ ಮತ್ತು ಡಿಫೆನ್ಸ್‌ಟೆಕ್‌ನಂತಹ ವೈವಿಧ್ಯಮಯ ವಲಯಗಳಲ್ಲಿ ನವೋದ್ಯಮಗಳ ಹೊಸ ಅಲೆಯೇ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು, ಭಾರತದ ಯುವಕರು, ವಿಶೇಷವಾಗಿ ಜನ್-ಝಡ್ ಪೀಳಿಗೆಯವರು ಪ್ರತಿಯೊಂದು ಕ್ಷೇತ್ರದಲ್ಲೂ ನವೀನ ಪರಿಹಾರಗಳನ್ನು ಒದಗಿಸುತ್ತಿದ್ದಾರೆ. ಭಾರತದ ಜನ್-ಝಡ್ ಪೀಳಿಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಅವರ ಸೃಜನಶೀಲತೆ, ಸಕಾರಾತ್ಮಕ ಮನಸ್ಥಿತಿ ಮತ್ತು ಸಾಮರ್ಥ್ಯ ನಿರ್ಮಾಣ ಸಾಮರ್ಥ್ಯಗಳು ವಿಶ್ವದ ಜನ್-ಝಡ್ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಬಹುದು ಎಂದು ಹೇಳಿದರು. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು ಮತ್ತು ನವೋದ್ಯಮಗಳು ಕೆಲವು ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಕಾಲವಿತ್ತು, ಆದರೆ ಇಂದು ಅವು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಬೆಳೆವಣಿಗೆ ಹೊಂದುತ್ತಿವೆ ಎಂದು ಉಲ್ಲೇಖಿಸಿದರು. ದೇಶವು ಈಗ 1.5 ಲಕ್ಷಕ್ಕೂ ಅಧಿಕ ನೋಂದಾಯಿತ ನವೋದ್ಯಮಗಳನ್ನು ಹೊಂದಿದೆ, ಅವುಗಳಲ್ಲಿ ಹಲವು ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸಿವೆ ಎಂದು ಅವರು ಒತ್ತಿ ಹೇಳಿದರು.
ಭಾರತವು ಇನ್ನು ಮುಂದೆ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಸೀಮಿತವಾಗಿಲ್ಲ ಮತ್ತು ಈಗ ಆಳವಾದ ತಂತ್ರಜ್ಞಾನ, ಉತ್ಪಾದನೆ ಮತ್ತು ಹಾರ್ಡ್‌ವೇರ್ ನಾವೀನ್ಯತೆಯತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಅದಕ್ಕಾಗಿ ಜೆನ್-ಝಡ್ ಪೀಳಿಗೆಗೆ ಧನ್ಯವಾದ ಅರ್ಪಿಸಿದರು. ಸರ್ಕಾರ ಕೈಗೊಂಡಿರುವ ಐತಿಹಾಸಿಕ ಕ್ರಮಗಳು ಭಾರತದ ತಂತ್ರಜ್ಞಾನ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತಿವೆ ಎಂದ ಅವರು ಸೆಮಿಕಂಡಕ್ಟರ್ ವಲಯವನ್ನು ಉದಾಹರಣೆಯನ್ನು ನೀಡಿದರು. ದೇಶಾದ್ಯಂತ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳು, ಚಿಪ್ ಉತ್ಪಾದನೆ ಮತ್ತು ವಿನ್ಯಾಸ ಕೇಂದ್ರಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮತ್ತು ಚಿಪ್‌ಗಳಿಂದ ವ್ಯವಸ್ಥೆಗಳವರೆಗೆ ಭಾರತವು ಬಲವಾದ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯನ್ನು ನಿರ್ಮಿಸುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಇದು ಸ್ವಾವಲಂಬನೆಯ ಸಂಕಲ್ಪದ ಭಾಗ ಮಾತ್ರವಲ್ಲದೆ ಭಾರತವನ್ನು ಜಾಗತಿಕ ಪೂರೈಕೆ ಸರಣಿಯ ಸದೃಢ ಮತ್ತು ವಿಶ್ವಾಸಾರ್ಹ ಸ್ತಂಭವನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ಸುಧಾರಣೆಗಳ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಬಾಹ್ಯಾಕಾಶ ನಾವೀನ್ಯತೆಯನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದಂತೆಯೇ ಭಾರತವು ಇದೀಗ ಪರಮಾಣು ವಲಯವನ್ನೂ ತೆರೆಯುವತ್ತ ಸಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಸದೃಢ ಪಾತ್ರವನ್ನು ವಹಿಸಲಾಗುತ್ತಿದೆ, ಇದು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು, ಸುಧಾರಿತ ರಿಯಾಕ್ಟರ್‌ಗಳು ಮತ್ತು ಪರಮಾಣು ನಾವೀನ್ಯತೆಯಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಸುಧಾರಣೆಯು ಭಾರತದ ಇಂಧನ ಭದ್ರತೆ ಮತ್ತು ತಾಂತ್ರಿಕ ನಾಯಕತ್ವಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.
ದೇಶದಲ್ಲಿಂದು ನಡೆಯುತ್ತಿರುವ ಸಂಶೋಧನೆಗಳ ಮೇಲೆ ಭವಿಷ್ಯವು ಹೆಚ್ಚಾಗಿ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸರ್ಕಾರವು ಯುವಜನರಿಗೆ ಸಂಶೋಧನೆಯಲ್ಲಿ ಗರಿಷ್ಠ ಅವಕಾಶಗಳನ್ನು ಒದಗಿಸುವತ್ತ ಗಮನಹರಿಸಿದೆ ಎಂದರು. ಆಧುನಿಕ ಸಂಶೋಧನೆಯನ್ನು ಬೆಂಬಲಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ ಮಾಡಲಾಗಿದೆ ಎಂದು ಪ್ರಸ್ತಾಪಿಸಿದ ಅವರು, ”ಒಂದು ರಾಷ್ಟ್ರ, ಒಂದು ಚಂದಾದಾರಿಕೆ’’ಉಪಕ್ರಮವು ಎಲ್ಲಾ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಜರ್ನಲ್‌ಗಳ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು. 1 ಲಕ್ಷ ಕೋಟಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿಯು ದೇಶಾದ್ಯಂತ ಯುವಕರಿಗೆ ಗಮನಾರ್ಹ ಬೆಂಬಲವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಮನೋಭಾವವನ್ನು ತುಂಬಲು 10 ಸಾವಿರಕ್ಕೂ ಅಧಿಕ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು ಮತ್ತು ಮುಂಬರುವ ದಿನಗಳಲ್ಲಿ 50ಸಾವಿರ ಹೊಸ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಈ ಪ್ರಯತ್ನಗಳು ಭಾರತದಲ್ಲಿ ಹೊಸ ಆವಿಷ್ಕಾರಗಳಿಗೆ ಅಡಿಪಾಯ ಹಾಕುತ್ತಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ಮುಂಬರುವ ಯುಗವು ಭಾರತ, ಅದರ ಯುವಜನರು ಮತ್ತು ಅದರ ನಾವೀನ್ಯತೆಗಳಿಗೆ ಸೇರಿದೆ ಎಂದು ಘೋಷಿಸಿದರು. ಕೆಲವು ತಿಂಗಳ ಹಿಂದೆ, ಬಾಹ್ಯಾಕಾಶ ದಿನದ ಸಂದರ್ಭದಲ್ಲಿ, ಭಾರತದ ಬಾಹ್ಯಾಕಾಶ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದನ್ನು ಅವರು ನೆನಪಿಸಿಕೊಂಡರು ಮತ್ತು ಮುಂದಿನ ಐದು ವರ್ಷಗಳಲ್ಲಿ ಭಾರತವು ತನ್ನ ಉಡಾವಣಾ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಐದು ಹೊಸ ಯುನಿಕಾರ್ನ್‌ಗಳನ್ನು ಸೃಷ್ಟಿಸುತ್ತದೆ ಎಂದು ದೃಢಪಡಿಸಿದರು. ಸ್ಕೈರೂಟ್ ತಂಡದ ಪ್ರಗತಿಯು ಭಾರತವು ತಾನು ನಿಗದಿಪಡಿಸಿದ ಪ್ರತಿಯೊಂದು ಗುರಿಯನ್ನು ಸಾಧಿಸುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಯುವಕ, ಪ್ರತಿಯೊಬ್ಬ ನವೋದ್ಯಮ, ವಿಜ್ಞಾನಿ, ಎಂಜಿನಿಯರ್ ಮತ್ತು ಉದ್ಯಮಿಗಳ ಪ್ರತಿ ಹೆಜ್ಜೆಯಲ್ಲೂ ಸರ್ಕಾರವು ಅವರ ಜತೆ ದೃಢವಾಗಿ ನಿಲ್ಲುತ್ತದೆ ಎಂದು ಪ್ರಧಾನಮಂತ್ರಿ ಭರವಸೆ ನೀಡಿದರು. ಅವರು ಮತ್ತೊಮ್ಮೆ ಇಡೀ ಸ್ಕೈರೂಟ್ ತಂಡವನ್ನು ಅಭಿನಂದಿಸಿದರು ಮತ್ತು ಭಾರತದ ಬಾಹ್ಯಾಕಾಶ ಪಯಣಕ್ಕೆ ಹೊಸ ಆವೇಗವನ್ನು ನೀಡುತ್ತಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು. ಭೂಮಿಯ ಮೇಲಾಗಲಿ ಅಥವಾ ಬಾಹ್ಯಾಕಾಶದಲ್ಲಾಗಲಿ 21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲು ಎಲ್ಲರಿಗೂ ಕರೆ ನೀಡುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಭಾರತೀಯ ಬಾಹ್ಯಾಕಾಶ ನವೋದ್ಯಮ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್, ಹಲವು ಉಡಾವಣಾ ವಾಹನಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ಸಂಯೋಜಿಸಲು ಮತ್ತು ಪರೀಕ್ಷಿಸಲು ಸುಮಾರು 200,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು, ಪ್ರತಿ ತಿಂಗಳು ಒಂದು ಕಕ್ಷೆಯ ರಾಕೆಟ್ ಅನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಕೈರೂಟ್ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದ್ದು, ಅದನ್ನು ಪವನ್ ಚಂದನ ಮತ್ತು ಭರತ್ ಢಾಕಾ ಸ್ಥಾಪಿಸಿದ್ದಾರೆ. ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಹಳೆಯ ವಿದ್ಯಾರ್ಥಿಗಳು ಮತ್ತು ಇಸ್ರೋದ ಮಾಜಿ ವಿಜ್ಞಾನಿಗಳು ಉದ್ಯಮಿಗಳಾಗಿ ಪರಿವರ್ತನೆಯಾಗಿದ್ದಾರೆ. ನವೆಂಬರ್ 2022ರಲ್ಲಿ ಸ್ಕೈರೂಟ್ ತನ್ನ ಸಬ್-ಆರ್ಬಿಟಲ್ ರಾಕೆಟ್, ವಿಕ್ರಮ್-ಎಸ್ ಅನ್ನು ಉಡಾಯಿಸಿತು, ಇದು ಬಾಹ್ಯಾಕಾಶಕ್ಕೆ ರಾಕೆಟ್ ಅನ್ನು ಉಡಾಯಿಸಿದ ಮೊದಲ ಭಾರತೀಯ ಖಾಸಗಿ ಕಂಪನಿಯಾಯಿತು.
ಖಾಸಗಿ ಬಾಹ್ಯಾಕಾಶ ಉದ್ಯಮಗಳ ಕ್ಷಿಪ್ರ ಪ್ರಗತಿಯು ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ, ಇದು ಆತ್ಮವಿಶ್ವಾಸ ಮತ್ತು ಸಮರ್ಥ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ.
*****
Speaking at the inauguration of Skyroot’s Infinity Campus. It is a significant leap forward for India’s space sector and its future. @SkyrootA https://t.co/EcLEWEcdIx
— Narendra Modi (@narendramodi) November 27, 2025
Our youth power, with its innovation, risk-taking ability and entrepreneurship, is reaching new heights. pic.twitter.com/zpPkT3g4IG
— PMO India (@PMOIndia) November 27, 2025
ISRO has powered India's space journey to new heights for decades. Through its credibility, capacity and value, India has carved out a distinct identity in the global space landscape. pic.twitter.com/50wE3B9cPh
— PMO India (@PMOIndia) November 27, 2025
In just the last six to seven years, India has transformed its space sector into an open, cooperative and innovation-driven ecosystem. pic.twitter.com/SHPWkZXNnN
— PMO India (@PMOIndia) November 27, 2025
When the government opened the space sector, our youth and especially Gen Z, came forward to make the most of the opportunity. pic.twitter.com/alb2rRvNjH
— PMO India (@PMOIndia) November 27, 2025
India possesses capabilities in the space sector that few nations in the world possess. pic.twitter.com/nSr0cQBXNt
— PMO India (@PMOIndia) November 27, 2025
Be it FinTech, AgriTech, HealthTech, Climate Tech, or Defence Tech, India's youth, especially our Gen Z, are delivering new solutions across every field. pic.twitter.com/eLOmePiQRZ
— PMO India (@PMOIndia) November 27, 2025