ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ನಾಯಕತ್ವವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಕೇಂದ್ರ ಸಚಿವ ಸಂಪುಟ ಇಂದು ನಿರ್ಣಯವನ್ನು ಅಂಗೀಕರಿಸಿತು. ಇದು ಕೇವಲ ಸಾಂಪ್ರದಾಯಿಕ ಅಭಿನಂದನೆಗೆ ಸೀಮಿತವಾಗಿಲ್ಲ. ‘ರಾಷ್ಟ್ರ ಮೊದಲು’ ಮತ್ತು ‘ನಾಗರಿಕರು ಮೊದಲು’ ಎಂಬ ತತ್ವಗಳಿಂದ ಮಾರ್ಗದರ್ಶನ ಪಡೆದ ಪ್ರಧಾನಮಂತ್ರಿ ಶ್ರೀ ಮೋದಿ ಅವರ ಅಸಾಧಾರಣ ಪಯಣವನ್ನು ಈ ನಿರ್ಣಯವು ಸಂಭ್ರಮಿಸುತ್ತದೆ. ಗುಜರಾತ್‌ನಲ್ಲಿ ಸತತವಾಗಿ ಮೂರು ಬಾರಿ ದೊರೆತ ಜನಾದೇಶ ಹಾಗೂ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ದೊರೆತ ಜನಬೆಂಬಲವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮೇಲಿನ ಜನರ ನಿರಂತರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಈ 10 ಪ್ರಮುಖ ಅಂಶಗಳು ಗುಜರಾತ್‌ನ ನಾಯಕತ್ವದಿಂದ ಭಾರತದ ನಾಯಕತ್ವದವರೆಗೆ ಅವರ ಪಯಣವನ್ನು ಸಂಪರ್ಕಿಸುವ ನಿರಂತರ ನಾಯಕತ್ವದ ಎಳೆಯನ್ನು ಸ್ಪಷ್ಟಪಡಿಸುತ್ತವೆ.
1. ಗುಜರಾತ್‌ನಿಂದ ಭಾರತಕ್ಕೆ: ಅಭಿವೃದ್ಧಿಯ ದೃಷ್ಟಿಕೋನದ ವಿಸ್ತರಣೆ
ಪ್ರಧಾನಮಂತ್ರಿ ಶ್ರೀ ಮೋದಿ ಅವರು ಗುಜರಾತ್‌ನಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ ಹಲವು ಉಪಕ್ರಮಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಹೇಗೆ ವಿಸ್ತರಿಸಿದರು ಎಂಬುದನ್ನು ನಿರ್ಣಯವು ವಿವರಿಸುತ್ತದೆ. ನಾಗರಿಕರ ಕುಂದುಕೊರತೆಗಳನ್ನು ಸ್ವತಃ ಆಲಿಸುತ್ತಿದ್ದ ‘ಸ್ವಾಗತ್’ ಕಾರ್ಯಕ್ರಮಕ್ಕೆ 2010ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ದೊರೆಯಿತು. ಇದೇ ಅನುಭವದ ಆಧಾರದಲ್ಲಿ ಮುಂದೆ ‘ಪ್ರಗತಿ’ ರೂಪುಗೊಂಡಿತು. ಸ್ಥಗಿತಗೊಂಡ ಯೋಜನೆಗಳ ಪರಿಶೀಲನೆ, ಅಡೆತಡೆಗಳ ನಿವಾರಣೆ ಮತ್ತು ಯೋಜನೆಗಳ ಕಾಮಗಾರಿ ತ್ವರಿತಗೊಳಿಸಲು ವಿವಿಧ ಸರ್ಕಾರಗಳನ್ನು ಒಂದೇ ವೇದಿಕೆಗೆ ತರುವ ವ್ಯವಸ್ಥೆಯಾಗಿ ‘ಪ್ರಗತಿ’ ಕಾರ್ಯನಿರ್ವಹಿಸಿತು. ಕೃಷಿಗಾಗಿ ಪ್ರತ್ಯೇಕ ವಿದ್ಯುತ್ ಫೀಡರ್‌ಗಳನ್ನು ಒದಗಿಸಿದ ಜ್ಯೋತಿಗ್ರಾಮ್ ಯೋಜನೆಯೂ ಇದೇ ರೀತಿಯಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯವಿಧಾನಕ್ಕೆ ಮಾದರಿಯಾಯಿತು. ಈ ಮೂಲಕ ಗುಜರಾತ್‌ನ ಅನುಭವವನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು.
2. ಬಡವರ ಬಗ್ಗೆ ಕಾಳಜಿಯಿಂದ, ಗೌರವಯುತ ಬದುಕಿನತ್ತ
ಪ್ರಧಾನಮಂತ್ರಿ ಶ್ರೀ ಮೋದಿ ಅವರ ಬಡತನದ ಕುರಿತ ಸಂವೇದನಾಶೀಲತೆಯು, ತಮ್ಮ ತಾಯಿಯ ದೈನಂದಿನ ಸಂಕಷ್ಟಗಳು ಮತ್ತು ತಮ್ಮ ಪ್ರವಾಸಗಳ ಸಂದರ್ಭದಲ್ಲಿ ನೇರವಾಗಿ ಕಂಡ ಬಡತನ ಹಾಗೂ ಅಭಾವಗಳ ಅನುಭವದಿಂದ ಗಾಢವಾಯಿತು. ಈ ಅನುಭವಗಳು ಮನೆ, ನೀರು, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಕಾರ್ಯಕ್ರಮಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ನಿರ್ಣಯವು ವಿವರಿಸುತ್ತದೆ. ಸುಮಾರು 60 ಕೋಟಿ ಜನಧನ್ ಖಾತೆಗಳು, 4 ಕೋಟಿಗೂ ಹೆಚ್ಚು ಮನೆಗಳು ಮತ್ತು 25 ಕೋಟಿ ಜನರು ಬಡತನದಿಂದ ಹೊರಬಂದಿರುವುದು ವೈಯಕ್ತಿಕ ಅನುಭವವು ಹೇಗೆ ಜನಪರ ಕೆಲಸವಾಗಿ ಪರಿವರ್ತನೆಯಾಗಿದೆ ಎಂಬುದನ್ನು ತೋರಿಸುತ್ತದೆ. ಇದರಿಂದ ಕುಟುಂಬಗಳಿಗೆ ಗೌರವಯುತ ಬದುಕು ದೊರೆತಿದೆ.
3. ಸಬಲೀಕರಣದ ಮೂಲಕ ಸಮಾಜದ ಎಲ್ಲ ವರ್ಗಗಳಿಗೆ ಹೊಸ ಅವಕಾಶಗಳು
ಜನರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ನೆರವಾಗಬೇಕು ಎಂಬ ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಢಸಂಕಲ್ಪವು ಈ ನಿರ್ಣಯದ ಉದ್ದಕ್ಕೂ ಕಾಣಿಸುತ್ತದೆ. ಸುಮಾರು 3.5 ಕೋಟಿ ಮಹಿಳೆಯರು ‘ಲಕ್ಷಾಧಿಪತಿ ದೀದಿ’ಗಳಾಗಿದ್ದಾರೆ. ‘ನಾರಿ ಶಕ್ತಿ ವಂದನ ಅಧಿನಿಯಮ’ವು ಮಹಿಳೆಯರಿಗೆ ಮೀಸಲಾತಿಗೆ ಅವಕಾಶ ಕಲ್ಪಿಸಿದೆ. ನವೋದ್ಯಮಗಳು, ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ ಸುಧಾರಣೆಗಳು ಯುವಜನರಿಗೆ ಹೊಸ ಅವಕಾಶಗಳನ್ನು ವಿಸ್ತರಿಸಿವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ನೀಡಲಾದ ಹಣಕಾಸು ನೆರವು ₹₹4 ಲಕ್ಷ ಕೋಟಿಯನ್ನು ಮೀರಿದೆ. ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮನ್) ಮೂಲಕ ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯಗಳಿಗೆ ಕೇಂದ್ರೀಕೃತ ನೆರವು ಒದಗಿಸಲಾಗಿದೆ. ಈ ಮೂಲಕ ಇತಿಹಾಸದಲ್ಲಿ ಅಭಿವೃದ್ಧಿಯ ಅವಕಾಶಗಳಿಂದ ದೂರ ಉಳಿದವರಿಗೂ ಅಭಿವೃದ್ಧಿಯ ಪ್ರಯೋಜನ ತಲುಪುವಂತೆ ಮಾಡಲಾಗಿದೆ.
4. ಸುಧಾರಣೆಗಳತ್ತ ಅಚಲ ಬದ್ಧತೆ
ರಾಜಕೀಯ ಅಪಾಯಗಳಿದ್ದರೂ ಸುಧಾರಣೆಗಳನ್ನು ಜಾರಿಗೆ ತರಲು ಪ್ರಧಾನಮಂತ್ರಿ ಶ್ರೀ ಮೋದಿ ಅವರು ತೋರಿದ ಬದ್ಧತೆಗೆ ನಿರ್ಣಯವು ವಿಶೇಷ ಒತ್ತು ನೀಡುತ್ತದೆ. ಜಿಎಸ್‌ಟಿ, ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ವಸಾಹತುಶಾಹಿ ಕಾಲದ ಕಾನೂನುಗಳ ಬದಲಾವಣೆಗಳು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸವಾಲುಗಳನ್ನು ಪರಿಹರಿಸುವ ಅವರ ದೃಢನಿಶ್ಚಯವನ್ನು ತೋರಿಸುತ್ತವೆ. ಸ್ವಚ್ಛತೆ, ಡಿಜಿಟಲ್ ಪಾವತಿ ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆಯ ಕುರಿತು ಅವರು ನೀಡಿದ ಕರೆಗಳು ನಾಗರಿಕರನ್ನು ಬದಲಾವಣೆಯ ಭಾಗವಾಗಿಸಿದವು. ದೃಢನಂಬಿಕೆ, ಜನರ ಭಾಗವಹಿಸುವಿಕೆ ಮತ್ತು ರಾಷ್ಟ್ರೀಯ ಉದ್ದೇಶದಿಂದ ಬಲಗೊಂಡ ಸುಧಾರಣೆಗಳು ಅವರ ನಾಯಕತ್ವದ ನಿರಂತರ ಬದ್ಧತೆಯಾಗಿ ಹೊರಹೊಮ್ಮಿವೆ.
5. ಸ್ವಾವಲಂಬಿ ಭಾರತದ ಬುನಾದಿ ನಿರ್ಮಾಣ
ಪ್ರಧಾನಮಂತ್ರಿ ಶ್ರೀ ಮೋದಿ ಅವರ ನಾಯಕತ್ವದಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವು ₹₹2 ಲಕ್ಷ ಕೋಟಿಯಿಂದ ₹₹12 ಲಕ್ಷ ಕೋಟಿಗೂ ಹೆಚ್ಚು ಅಧಿಕವಾಗಿದೆ. ಇದೇ ಅವಧಿಯಲ್ಲಿ ಹೆದ್ದಾರಿಗಳ ವಿಸ್ತರಣೆ ಮತ್ತು ರೈಲ್ವೆ ವಿದ್ಯುದೀಕರಣವೂ ವೇಗ ಪಡೆದುಕೊಂಡಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು ₹₹2 ಲಕ್ಷ ಕೋಟಿಯಿಂದ ₹13 ಲಕ್ಷ ಕೋಟಿಗೂ ಹೆಚ್ಚಾಗಿದೆ. ರಕ್ಷಣಾ ಉತ್ಪಾದನೆ ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿನ ಪ್ರಗತಿಯೂ ತನ್ನ ಅಗತ್ಯಗಳನ್ನು ತಾನೇ ಪೂರೈಸುವ ಭಾರತದ ಸಾಮರ್ಥ್ಯವನ್ನು ಬಲಪಡಿಸುವ ಅವರ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
6. ನಾಗರಿಕರ ಸೇವೆಗೆ ತಂತ್ರಜ್ಞಾನ, ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ವಿಸ್ತರಿಸುತ್ತದೆ
ದೈನಂದಿನ ಸಾರ್ವಜನಿಕ ಸೇವೆಗಳಿಂದ ಹಿಡಿದು ಅತ್ಯಾಧುನಿಕ ವೈಜ್ಞಾನಿಕ ಕ್ಷೇತ್ರಗಳವರೆಗೆ ಸಾಧಿಸಿರುವ ಪ್ರಗತಿಯ ಮೂಲಕ ತಂತ್ರಜ್ಞಾನದ ಮೇಲಿನ ಪ್ರಧಾನಮಂತ್ರಿ ಶ್ರೀ ಮೋದಿ ಅವರ ವಿಶ್ವಾಸ ಸ್ಪಷ್ಟವಾಗಿ ಕಾಣಿಸುತ್ತದೆ. ಜನಧನ್, ಆಧಾರ್ ಮತ್ತು ಮೊಬೈಲ್ ಸಂಪರ್ಕ ವ್ಯವಸ್ಥೆಗಳು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದನ್ನು ಸುಧಾರಿಸಿವೆ. ಯುಪಿಐ ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತಂದಿದೆ. ಭಾರತದಲ್ಲಿಯೇ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಚಂದ್ರನ ದಕ್ಷಿಣ ಧ್ರುವದ ಸಮೀಪ ಚಂದ್ರಯಾನ-3 ಅನ್ನು ಇಳಿಸುವುದು ವೈಜ್ಞಾನಿಕವಾಗಿ ಸಮರ್ಥ ಮತ್ತು ಸ್ವಾವಲಂಬಿ ‘ಆತ್ಮನಿರ್ಭರ ಭಾರತ’ದ ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಷ್ಟಿಕೋನವನ್ನು ತೋರಿಸಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಹಾಗೂ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಕಾರ್ಯಗಳು ಈ ದೃಷ್ಟಿಕೋನವನ್ನು ಮತ್ತಷ್ಟು ಮುಂದುವರಿಸಿವೆ. ನಿರ್ಣಯದಲ್ಲಿ ಬಿಂಬಿಸಿರುವ ಈ ದೃಷ್ಟಿಕೋನದ ಸಾರವೆಂದರೆ, ತಂತ್ರಜ್ಞಾನವು ಜನರ ಜೀವನವನ್ನು ಸುಧಾರಿಸುವುದರ ಜೊತೆಗೆ ದೇಶದ ಹೊಸ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂಬುದಾಗಿದೆ.
7. ಪ್ರಕ್ಷುಬ್ಧ ಕಾಲಘಟ್ಟದಲ್ಲೂ ಸ್ಥಿರ ನಾಯಕತ್ವ
ಜಾಗತಿಕ ಮಟ್ಟದಲ್ಲಿ ಉಂಟಾದ ಅಸ್ಥಿರತೆಯ ನಡುವೆಯೂ ಭಾರತಕ್ಕೆ ದಿಕ್ಕು ತೋರಿಸುವ ಪ್ರಧಾನಮಂತ್ರಿ ಶ್ರೀ ಮೋದಿ ಅವರ ಸಾಮರ್ಥ್ಯವನ್ನು ನಿರ್ಣಯವು ಎತ್ತಿ ತೋರಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಅವರು ದೇಶವನ್ನು ಒಗ್ಗೂಡಿಸಿದರು. ದೇಶೀಯ ಲಸಿಕೆಗಳ ಅಭಿವೃದ್ಧಿಗೆ ಬೆಂಬಲ ನೀಡಿದರು. ತ್ವರಿತಗತಿಯಲ್ಲಿ ಲಸಿಕಾ ಅಭಿಯಾನ ನಡೆಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡರು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಯೋಚಿತ ನಿರ್ಧಾರಗಳು ಮತ್ತು ಇಂಧನ ಭದ್ರತೆಗೆ ಕೈಗೊಂಡ ಕ್ರಮಗಳು ಅಡಚಣೆಗಳ ನಡುವೆಯೂ ಭಾರತ ಸ್ಥಿರವಾಗಿ ಮುಂದುವರಿಯಲು ನೆರವಾದವು. ತಕ್ಷಣದ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸುವುದರ ಜೊತೆಗೆ, ಹಲವು ವರ್ಷಗಳಲ್ಲಿ ನಿರ್ಮಿಸಿದ ಸಾಮರ್ಥ್ಯಗಳನ್ನೂ ಬಳಸಿಕೊಂಡ ಅವರ ನಾಯಕತ್ವವು ಕಠಿಣ ಸಂದರ್ಭಗಳಲ್ಲಿ ದೇಶಕ್ಕೆ ಸ್ಥಿತಿಸ್ಥಾಪಕತ್ವ ಮತ್ತು ಆತ್ಮವಿಶ್ವಾಸವನ್ನು ನೀಡಿದೆ.
8. ಶಾಂತಿ ಮತ್ತು ವಿಶ್ವಾಸವನ್ನು ಖಾತರಿಪಡಿಸಿದ ನಿರ್ಣಾಯಕ ನಾಯಕತ್ವ
2016ರ ಸರ್ಜಿಕಲ್ ದಾಳಿಗಳು, 2019ರ ಬಾಲಾಕೋಟ್ ವಾಯುದಾಳಿ ಮತ್ತು 2025ರ ಆಪರೇಷನ್ ಸಿಂಧೂರ್ ಪ್ರಧಾನಮಂತ್ರಿ ಶ್ರೀ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಭಾರತ ನಿಗದಿಪಡಿಸಿದ ಸ್ಪಷ್ಟತೆಗಳನ್ನು ತೋರಿಸುತ್ತವೆ. 370ನೇ ವಿಧಿಯ ರದ್ದು, ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್‌ಒಪಿ) ಜಾರಿ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ಹುದ್ದೆ ಸೃಷ್ಟಿಯನ್ನೂ ನಿರ್ಣಯವು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದೆ. ಮಾವೋವಾದಿ ಭಯೋತ್ಪಾದನೆಯ ವಿರುದ್ಧದ ಕ್ರಮಗಳು ಮತ್ತು ಈಶಾನ್ಯ ಭಾರತದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಗಳು ರಾಷ್ಟ್ರೀಯ ದೃಢಸಂಕಲ್ಪದೊಂದಿಗೆ ಅಭಿವೃದ್ಧಿ, ಸ್ಥಿರತೆ ಮತ್ತು ಜನರ ವಿಶ್ವಾಸವನ್ನು ಸಂಯೋಜಿಸುವ ನಾಯಕತ್ವವನ್ನು ಪ್ರತಿಬಿಂಬಿಸುತ್ತವೆ.
9. ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಮತ್ತಷ್ಟು ಬಲಿಷ್ಠ
ವಿಭಿನ್ನ ಅಭಿಪ್ರಾಯಗಳ ನಡುವೆಯೂ ಸಹಕಾರವನ್ನು ರೂಪಿಸುವ ಪ್ರಧಾನಮಂತ್ರಿ ಶ್ರೀ ಮೋದಿ ಅವರ ಸಾಮರ್ಥ್ಯದೊಂದಿಗೆ ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನವನ್ನು ನಿರ್ಣಯವು ಜೋಡಿಸುತ್ತದೆ. ಜಿ20 ಮತ್ತು ಬ್ರಿಕ್ಸ್‌ನಲ್ಲಿ ಒಮ್ಮತ, ಜಾಗತಿಕ ದಕ್ಷಿಣದ ಹಿತಾಸಕ್ತಿಗಳ ಪರವಾಗಿ ಧ್ವನಿ ಹಾಗೂ ಜಿ20ಕ್ಕೆ ಆಫ್ರಿಕನ್ ಒಕ್ಕೂಟದ ಸೇರ್ಪಡೆ ಅವರ ರಾಜತಾಂತ್ರಿಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ‘ಲಸಿಕೆ ಮೈತ್ರಿ’ ಮೂಲಕ ಭಾರತದ ಸಾಮರ್ಥ್ಯಗಳನ್ನು ಇತರ ದೇಶಗಳ ಸೇವೆಗೆ ಬಳಸಿಕೊಳ್ಳುವ ಅವಕಾಶ ದೊರೆಯಿತು. 36 ದೇಶಗಳು ನೀಡಿರುವ ಗೌರವಗಳು ಪ್ರಧಾನಮಂತ್ರಿ ಶ್ರೀ ಮೋದಿ ಅವರಿಗೆ ಮಾತ್ರವಲ್ಲದೆ, ಭಾರತಕ್ಕೆ ದೊರೆತಿರುವ ಅಂತರರಾಷ್ಟ್ರೀಯ ಮನ್ನಣೆಯನ್ನೂ ಪ್ರತಿಬಿಂಬಿಸುತ್ತವೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಮತ್ತು ಸಾಮೂಹಿಕ ಪರಿಹಾರಗಳಿಗೆ ಭಾರತದ ಕೊಡುಗೆಯೂ ಇದರಲ್ಲಿ ವ್ಯಕ್ತವಾಗುತ್ತದೆ.
10. ಪರಂಪರೆ ಮತ್ತು ಹೊಣೆಗಾರಿಕೆಯಿಂದ ಬಲ ಪಡೆದ ಪ್ರಗತಿ
ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಷ್ಟಿಕೋನವು ಅಭಿವೃದ್ಧಿ, ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಪರಿಸರ ಹೊಣೆಗಾರಿಕೆಯನ್ನು ಒಟ್ಟುಗೂಡಿಸುತ್ತದೆ. ಗುಜರಾತ್‌ನಲ್ಲಿ ಪ್ರತ್ಯೇಕ ಹವಾಮಾನ ಇಲಾಖೆಯನ್ನು ಸ್ಥಾಪಿಸುವುದರಿಂದ ಹಿಡಿದು ನವೀಕರಿಸಬಹುದಾದ ಇಂಧನದ ವಿಸ್ತರಣೆ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವದವರೆಗೆ ಹವಾಮಾನ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸಿದೆ. ಯೋಗ, ಸಿರಿಧಾನ್ಯಗಳು, ಕಾಶಿ ವಿಶ್ವನಾಥ ಧಾಮ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ಭಾರತದ ಪರಂಪರೆಯೊಂದಿಗಿನ ನಂಟನ್ನು ಮತ್ತಷ್ಟು ಬಲಪಡಿಸಿವೆ. 2047ರ ವೇಳೆಗೆ ಸಮೃದ್ಧ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ಮೋದಿ ಅವರ ದೃಷ್ಟಿಕೋನದತ್ತ ಸಾಮೂಹಿಕ ಪ್ರಯತ್ನವನ್ನು ಮುಂದುವರಿಸುವ ಹೊಸ ಬದ್ಧತೆಯೊಂದಿಗೆ ಈ ನಿರ್ಣಯವು ಸಮಾಪನಗೊಳ್ಳುತ್ತದೆ.
Please Click here to see the Union Cabinet Resolution in Hindi
*****