Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 21,800 ಕೋಟಿ ರೂ.ಗಳ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 21,800 ಕೋಟಿ ರೂ.ಗಳ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಮಾರು 21,800 ಕೋಟಿ ರೂ.ಗಳ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪುಣೆ ಮತ್ತು ಮಹಾರಾಷ್ಟ್ರದ ಜನರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು ಮತ್ತು ದೈನಂದಿನ ಜೀವನಕ್ಕೆ ಹೊಸ ಸಾರ್ವಜನಿಕ ಅನುಕೂಲತೆಗಳನ್ನು ಸೇರಿಸಿದಾಗ ಹಬ್ಬದ ಸಂತೋಷವು ದ್ವಿಗುಣಗೊಳ್ಳುತ್ತದೆ ಎಂದು ಹೇಳಿದರು. ಹತ್ತು ವರ್ಷಗಳ ಹಿಂದೆ ಪುಣೆ ಮೆಟ್ರೋದ ಮೊದಲ ಹಂತಕ್ಕೆ ತಾವು  ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಿದ ಅವರು, ಹಿಂಜವಾಡಿಯಿಂದ ಶಿವಾಜಿನಗರ ಕಾರಿಡಾರ್ ಉದ್ಘಾಟನೆಯು ಪ್ರಮುಖ ಐಟಿ ಹಬ್ ಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಇಂದು ಪ್ರಾರಂಭಿಸಲಾದ ಹೊಸ ಮಾರ್ಗವು ನಗರದ ಹಳೆಯ ಮತ್ತು ಹೊಸ ಭಾಗಗಳನ್ನು ಮತ್ತಷ್ಟು ನಿಕಟವಾಗಿ  ಸಂಪರ್ಕಿಸುತ್ತದೆ ಎಂದು ಹೇಳಿದರು.

ಪುಣೆಯನ್ನು ರಾಷ್ಟ್ರ ಮತ್ತು ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ , ಚಿಂತನೆಯನ್ನು ನೀಡಿದ ವಿಚಾರಗಳ ಐತಿಹಾಸಿಕ ಕೇಂದ್ರ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ನಗರವು ಈಗ ಯುವಜನರ ಆಕಾಂಕ್ಷೆಗಳ ಕೇಂದ್ರವಾಗಿ ವಿಕಸಿತ  ಭಾರತದ ತಾಜಾ ಶಕ್ತಿಯನ್ನು ಐಟಿ, ಆಟೋಮೊಬೈಲ್ಸ್, ಫಾರ್ಮಾಸ್ಯುಟಿಕಲ್ಸ್, ಸ್ಟಾರ್ಟ್ಅಪ್ಗಳು, ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಪ್ರವಹಿಸುವಂತೆ  ಮಾಡುತ್ತಿದೆ ಎಂದು ಹೇಳಿದರು. “ಅಂತಹ ಸನ್ನಿವೇಶದಲ್ಲಿ, ಇಲ್ಲಿ ಮೆಟ್ರೋ ಸಂಪರ್ಕವನ್ನು ಬಲಪಡಿಸುವುದು ಪುಣೆ ನಗರದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡಲಿದೆ” ಎಂದು ಮೋದಿ ಹೇಳಿದರು.

ಪುಣೆ ಮೆಟ್ರೋದ ವಿಸ್ತರಣೆಯು ವಿಕಸಿತ ಭಾರತಕ್ಕಾಗಿ ಆಧುನಿಕ ನಗರಗಳನ್ನು ಹೇಗೆ ರೂಪಿಸಲಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದ ಪ್ರಧಾನಮಂತ್ರಿಯವರು, ಕೈಗಾರಿಕೆಗಳು, ಪಾಕಪದ್ಧತಿ ಅಥವಾ ಸ್ಥಳೀಯ ಉತ್ಪನ್ನಗಳಂತಹ ಸಾಂಪ್ರದಾಯಿಕ ಗುರುತುಗಳನ್ನು ಮೀರಿ, ನಗರ ಕೇಂದ್ರಗಳನ್ನು ಈಗ ಅವುಗಳ ಸ್ಪರ್ಧಾತ್ಮಕತೆ ಮತ್ತು ಸುಗಮ ಜೀವನದ ಅವಕಾಶಗಳಿಂದ  ನಿರ್ಣಯಿಸಲಾಗುತ್ತದೆ, ಇವೆರಡನ್ನೂ ಮೆಟ್ರೋ ಜಾಲಗಳು ಹೆಚ್ಚಿಸುತ್ತವೆ, ಇದು ಪ್ರಯಾಣದ ಸಮಯವನ್ನು ಉಳಿಸುತ್ತದೆ ಮತ್ತು ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎಂದು ಹೇಳಿದರು. ನಗರದ ಸಮಯವನ್ನು ಉಳಿಸುವುದರಿಂದ ನಗರ ಉತ್ಪಾದಕತೆ ಹೆಚ್ಚಾಗುತ್ತದೆ, ಇದು ರಾಷ್ಟ್ರೀಯ ಆರ್ಥಿಕತೆಯನ್ನು ವೇಗಗೊಳಿಸುತ್ತದೆ ಎಂಬುದರತ್ತ  ಅವರು ಗಮನಸೆಳೆದರು. “ಆರ್ಥಿಕತೆಯು ಬೆಳೆದಾಗ, ಬಡವರು ಮತ್ತು ಮಧ್ಯಮ ವರ್ಗದವರು ಅದರಿಂದ ಪ್ರಯೋಜನ ಪಡೆಯುತ್ತಾರೆ” ಎಂದೂ ಶ್ರೀ ಮೋದಿ ಪ್ರತಿಪಾದಿಸಿದರು.

ಈ ಸಂದರ್ಭವನ್ನು ಜನಪರ ಮತ್ತು ಸಕ್ರಿಯ  ಆಡಳಿತದ ಪ್ರಮುಖ ಉದಾಹರಣೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಳೆದ 12 ವರ್ಷಗಳಲ್ಲಿ, ಭಾರತದ ಮೆಟ್ರೋ ಜಾಲವು 26 ನಗರಗಳಲ್ಲಿ ಸುಮಾರು 1,200 ಕಿಲೋಮೀಟರ್ಗೆ ವಿಸ್ತರಿಸಿದೆ, ಇದು ಒಂದು ಕೋಟಿಗೂ ಹೆಚ್ಚು ದೈನಂದಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಒತ್ತಿ ಹೇಳಿದರು. “ಇಂದು ಭಾರತೀಯ ಮೆಟ್ರೋ ಜಾಲವು ವಿಶ್ವದ ಅಗ್ರ ಮೂರು ಮೆಟ್ರೋ ಜಾಲಗಳಲ್ಲಿ ಒಂದಾಗಿದೆ” ಎಂದು ಹೇಳಿದರು.

2014 ರಲ್ಲಿ ರಾಜ್ಯದಲ್ಲಿ ಕೇವಲ 10 ರಿಂದ 11 ಕಿಲೋಮೀಟರ್ ಮೆಟ್ರೋ ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದಾಗಿನಿಂದ ಮಹಾರಾಷ್ಟ್ರವು ರಾಷ್ಟ್ರೀಯ ಪರಿವರ್ತನೆಯನ್ನು ಪ್ರತಿಬಿಂಬಿಸಿದೆ ಎಂದು ಹೇಳಿದ ಪ್ರಧಾನಮಂತ್ರಿ, ಸುಮಾರು 175 ಕಿಲೋಮೀಟರ್ ಈಗ ಸೇವೆಯಲ್ಲಿದೆ ಮತ್ತು 2.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ 680 ಕಿಲೋಮೀಟರ್ಗಳಲ್ಲಿ ನಿರ್ಮಾಣ ನಡೆಯುತ್ತಿದೆ ಎಂಬುದರತ್ತ  ಗಮನಸೆಳೆದರು. “ಈ ಹಣವು ಕಾರ್ಮಿಕರ ಜೇಬಿಗೆ ಹೋಗುತ್ತಿದೆ, ಈ ಹಣವು ಎಂಜಿನಿಯರ್ಗಳಿಗೆ ಉದ್ಯೋಗವನ್ನು ನೀಡುತ್ತಿದೆ ಮತ್ತು ಈ ಹಣವು ಅಂಗಡಿಗಳು ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.

ಹೊಸದಾಗಿ ಉದ್ಘಾಟನೆಗೊಂಡ ಕಾರಿಡಾರ್ನ ಮತ್ತೊಂದು ವಿಶಿಷ್ಟ ಅಂಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸರ್ಕಾರ ಮತ್ತು ಖಾಸಗಿ ವಲಯದ ಸಂಯೋಜಿತ ಪ್ರಯತ್ನಗಳ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗಿದೆ ಎಂದರು. “ಇದು ಅಭಿವೃದ್ಧಿಯ ಒಂದು  ಮಾದರಿಯಾಗಿದ್ದು, ಇದರ ಯಶಸ್ಸು ದೇಶದ ಪ್ರಗತಿಗೆ ಮತ್ತಷ್ಟು ವೇಗವನ್ನು ನೀಡುತ್ತದೆ” ಎಂದರು.

ಭಾರತದ ಪ್ರತಿಯೊಬ್ಬ ನಾಗರಿಕ ಮತ್ತು ಯುವ ಪುತ್ರ ಮತ್ತು ಯುವ  ಪುತ್ರಿ ‘ನಾವು ಅದನ್ನು ಮಾಡುತ್ತೇವೆ’ ಎಂಬ ರಾಷ್ಟ್ರವ್ಯಾಪಿ ಮನೋಭಾವದೊಂದಿಗೆ ವಿಕಸಿತ ಭಾರತವನ್ನು ನಿರ್ಮಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 12 ವರ್ಷಗಳಲ್ಲಿ ರಾಷ್ಟ್ರವು ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ಎಕ್ಸ್ಪ್ರೆಸ್ವೇಗಳು, ಹೊಸ ಮತ್ತು ವಿದ್ಯುದ್ದೀಕರಿಸಿದ ರೈಲು ಮಾರ್ಗಗಳು, ಉದ್ದನೆಯ ಸುರಂಗಗಳು ಮತ್ತು ಎತ್ತರದ ಸೇತುವೆಗಳನ್ನು ನಿರ್ಮಿಸುವತ್ತ ತನ್ನ ಶಕ್ತಿಯನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು. “ಇದರೊಂದಿಗೆ ಮುಂಬರುವ ವರ್ಷಗಳಲ್ಲಿ, ದೇಶವು ತನ್ನ ನಗರಗಳನ್ನು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ಮಾಡಲು ತನ್ನ ಶಕ್ತಿಯನ್ನು ಹೂಡಿಕೆ ಮಾಡಲಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು

ನಗರಗಳು ಕೇವಲ ವಸತಿ ಸ್ಥಳಗಳಾಗಿರುವುದುಮಾತ್ರವಲ್ಲದೆ  ಆರ್ಥಿಕ ಚಟುವಟಿಕೆಯ ಪ್ರಮುಖ ಎಂಜಿನ್ ಗಳಾಗಿವೆ ಮತ್ತು ನೂರಾರು ಸಣ್ಣ ಪಟ್ಟಣಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಗರ ಹೂಡಿಕೆಯಲ್ಲಿ ಲಕ್ಷಾಂತರ ಕೋಟಿ ರೂ.ಗಳನ್ನು ಕ್ರೋಢೀಕರಿಸಲು ಈ ವರ್ಷದ ಫೆಬ್ರವರಿಯಲ್ಲಿ ನಗರ ಸವಾಲು ನಿಧಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಬೆಂಬಲದೊಂದಿಗೆ ಅರ್ಬನ್ ಚಾಲೆಂಜ್ ಫಂಡ್ ಗೆ ಅನುಮೋದನೆ ನೀಡಿರುವುದನ್ನು ಒತ್ತಿ ಹೇಳಿದರು. ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪಾಲುದಾರರು ಈ ಪ್ರಯತ್ನಕ್ಕೆ ಆಂದೋಲನದೋಪಾದಿಯಲ್ಲಿ (ಮಿಷನ್ ಮೋಡ್ನಲ್ಲಿ) ಸೇರಬೇಕೆಂದು ಅವರು ಒತ್ತಾಯಿಸಿದರು. “ಮಹಾರಾಷ್ಟ್ರವು ಇದರಲ್ಲಿ ತನ್ನ ಪಾತ್ರವನ್ನು ಇನ್ನಷ್ಟು ವಿಸ್ತರಿಸುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ಭಾರತದ ಬಗ್ಗೆ ಜಾಗತಿಕ ಚರ್ಚೆಯನ್ನು  ಹುಟ್ಟುಹಾಕಿ ಮುನ್ನಡೆಸುವ ಎರಡು ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ವಿಶ್ವಬ್ಯಾಂಕ್ ವರದಿಯ ಪ್ರಕಾರ ಕೇವಲ 10 ರಿಂದ 12 ವರ್ಷಗಳಲ್ಲಿ 50 ಕೋಟಿ ನಾಗರಿಕರನ್ನು ತೀವ್ರ ಬಡತನದಿಂದ ಮೇಲೆತ್ತುವ ಮೂಲಕ ಕಠಿಣ ಅಂತರರಾಷ್ಟ್ರೀಯ ಪರಿಸ್ಥಿತಿಗಳ ನಡುವೆ ರಾಷ್ಟ್ರವು ವಿಶ್ವದ ಅತ್ಯಂತ ವೇಗದ ಬೆಳವಣಿಗೆಯ ದರವನ್ನು ಕಾಯ್ದುಕೊಂಡಿದೆ ಎಂದು ಹೇಳಿದರು. “ಈ ಮೊದಲು, ಬಡತನದ ವಿರುದ್ಧದ ಹೋರಾಟವು ಕೇವಲ ಘೋಷಣೆಗಳಲ್ಲಿ ಮಾತ್ರ ಇತ್ತು, ಇಂದು ಭಾರತವು ವಾಸ್ತವದಲ್ಲಿ ಬಡತನವನ್ನು ಸೋಲಿಸುತ್ತಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ವೇಗವಾಗಿ ಬಡತನ ನಿವಾರಣೆ ಮಾಡುವ ದೇಶವಾಗಿ ಭಾರತದ ಅವಳಿ ಮೈಲಿಗಲ್ಲುಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಬೆಳೆಯುತ್ತಿರುವ ಆರ್ಥಿಕತೆ ಮತ್ತು ವಿಸ್ತರಿಸುತ್ತಿರುವ ಬಜೆಟ್ ಹೆಚ್ಚಿನ ಸಾರ್ವಜನಿಕ ಹೂಡಿಕೆಯನ್ನು ಸಕ್ರಿಯಗೊಳಿಸುತ್ತದೆ, ಆದರೆ ಒಂದು ಕಾಲದಲ್ಲಿ ಹಗರಣಗಳು ಮತ್ತು ಸೋರಿಕೆಗಳಿಂದ ಕಳೆದುಹೋಗುತ್ತಿದ್ದ ಹಣವು ಈಗ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದೆ ಎಂದು ವಿವರಿಸಿದರು. ರಸ್ತೆಗಳು, ರೈಲು, ವಿಮಾನ ನಿಲ್ದಾಣಗಳು, ಮೆಟ್ರೋಗಳು, ವಿದ್ಯುತ್, ನೀರು ಮತ್ತು ಅನಿಲ ಪೈಪ್ಲೈನ್ಗಳಲ್ಲಿ ಖಜಾನೆ ಹೂಡಿಕೆಗಳು ಏಕಕಾಲದಲ್ಲಿ ಜೀವನಮಟ್ಟವನ್ನು ಸುಧಾರಿಸುತ್ತವೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು. “ಈ ಎರಡೂ ಸಾಧನೆಗಳು ಪರಸ್ಪರ ಸಂಪರ್ಕ ಸಂಬಂಧ ಹೊಂದಿವೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಬಡವರಿಗೆ ಮನೆಗಳು, ಶೌಚಾಲಯಗಳು, ಹರ್ ಘರ್ ಜಲ್ ನಲ್ಲಿ ನೀರಿನ ಸಂಪರ್ಕಗಳು ಮತ್ತು ಅಡುಗೆ ಅನಿಲ ಸಂಪರ್ಕಗಳಂತಹ ಕಲ್ಯಾಣ ಕಾರ್ಯಕ್ರಮಗಳ ವಿತರಣೆಗಳ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಅಗತ್ಯ ಸೌಲಭ್ಯಗಳು ಸಾರ್ವಜನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಮತ್ತು ಅಮೂಲ್ಯವಾದ ದೈನಂದಿನ ಸಮಯವನ್ನು ಉಳಿಸಿವೆ ಎಂದು ಹೇಳಿದರು. “ಮತ್ತು ಈ ಸಮಯವನ್ನು ಅವರ ಕುಟುಂಬಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಬಳಸಿಕೊಳ್ಳಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು

ಬಡವರನ್ನು ಸಬಲೀಕರಣಗೊಳಿಸುವುದರಿಂದ ಅವರಿಗೆ ಬಡತನದಿಂದ ಹೊರಬರಲು ಧೈರ್ಯ ನೀಡುತ್ತದೆ ಎಂಬ ಮಂತ್ರದಿಂದ ಮಾರ್ಗದರ್ಶಿಸಲ್ಪಟ್ಟ ಸರ್ಕಾರದ ಮುಖ್ಯಸ್ಥರಾಗಿ ಕಳೆದ ತಿಂಗಳು ತಾವು 25 ವರ್ಷಗಳನ್ನು ಪೂರೈಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಯೋಜನೆ ವಿತರಣೆಯತ್ತ ಗಮನ ಹರಿಸಲು ಮತ್ತು ಬಡತನದ ವಿರುದ್ಧ ಪ್ರತಿಜ್ಞೆ ಮಾಡಲು ಫಲಾನುಭವಿಗಳನ್ನು ವೇದಿಕೆಗೆ ಆಹ್ವಾನಿಸಲು ಗರೀಬ್ ಕಲ್ಯಾಣ್ ಮೇಳಗಳನ್ನು ಪ್ರಾರಂಭಿಸಿದ ಬಗ್ಗೆ ಉಲ್ಲೇಖಿಸಿದರು. “ಅವರು ಕಾರ್ಯಕ್ರಮದಿಂದ ಹಿಂತಿರುಗುವಾಗ  ಬಡತನವನ್ನು ಸೋಲಿಸುವ ನಿರ್ಧಾರ ಮತ್ತು ಆತ್ಮವಿಶ್ವಾಸವನ್ನು  ತುಂಬಿಕೊಳ್ಳುವ  ಸಂಕಲ್ಪ ಮಾಡುತ್ತಿದ್ದರು” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಆಗ ಪ್ರಾರಂಭಿಸಲಾದ ಅಭಿಯಾನವು ‘ಸಬಲೀಕರಣದ ಶಕ್ತಿ’ ಯಿಂದ ವ್ಯಾಖ್ಯಾನಿಸಲ್ಪಟ್ಟ ನಿಜವಾದ ಉತ್ತಮ ಆಡಳಿತವಾಗಿ ಅಡೆತಡೆಯಿಲ್ಲದೆ ಮುಂದುವರೆದಿದೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಪರಿವರ್ತನೆಯು ಹಠಾತ್ ಘಟನೆಗಿಂತ ಹೆಚ್ಚಾಗಿ ವರ್ಷಗಳ ಉದ್ದೇಶಪೂರ್ವಕ ಮತ್ತು ಯೋಜಿತ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಒತ್ತಿ ಹೇಳಿದರು. “ಆದ್ದರಿಂದ, 50 ಕೋಟಿ ಭಾರತೀಯರು ಬಡತನವನ್ನು ಸೋಲಿಸಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.

ಬಡತನ ನಿವಾರಣೆಯು ಅಭಾವದಿಂದ ಪಾರಾಗುವ ಕುಟುಂಬಗಳನ್ನು ಮೀರಿ ವಿಶಾಲ ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ವಿವರಿಸಿದ ಪ್ರಧಾನಮಂತ್ರಿಯವರು, ಇದು ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಹೊಸ ಮಧ್ಯಮ ವರ್ಗವನ್ನು ಸೃಷ್ಟಿಸುತ್ತದೆ, ಅವರ ಖರೀದಿ ಶಕ್ತಿಯು ಮಾರುಕಟ್ಟೆಯ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅಂಗಡಿಗಳಿಂದ ಕಾರ್ಖಾನೆಗಳವರೆಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಎಂಬುದರತ್ತ  ಗಮನಸೆಳೆದರು. “ಅಂದರೆ, ಭಾರತದಲ್ಲಿ ಬಡತನ ಕಡಿಮೆಯಾಗುತ್ತಿರುವುದು ಭಾರತದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ವಿಕಸಿತ ಭಾರತ ಪಯಣದಲ್ಲಿ ರೈತರ ಪ್ರಮುಖ ಪಾತ್ರ ಮತ್ತು ಅವರನ್ನು ಸಬಲೀಕರಣಗೊಳಿಸಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾಯಕತ್ವದ ಅಡಿಯಲ್ಲಿ ವ್ಯಾಪಕ ಜಲ ಸಂರಕ್ಷಣಾ ಕಾರ್ಯಗಳ ಹೊರತಾಗಿಯೂ ಪ್ರತಿಕೂಲ ಹವಾಮಾನ ಮತ್ತು ನೈಸರ್ಗಿಕ ವಿಪತ್ತಿನಿಂದಾಗಿ ಮಹಾರಾಷ್ಟ್ರದ ರೈತ ಕುಟುಂಬಗಳು ಪ್ರಸ್ತುತ ಎದುರಿಸುತ್ತಿರುವ ತೀವ್ರ ಕಷ್ಟಗಳನ್ನು  ಗುರುತಿಸಿದರು. ಬರಗಾಲದ ಬಗ್ಗೆ ತಮ್ಮ ಗಮನಕ್ಕೆ ಬಂದಿರುವುದನ್ನು ,  ರಾಜ್ಯ ಸರ್ಕಾರದಿಂದ ಮುಂಗಡ ನೆರವು ಒದಗಿಸುವಿಕೆ ಮತ್ತು ಪಿಎಂ ಕಿಸಾನ್ ನಿಧಿಯ ವರ್ಗಾವಣೆಯ ಬಗ್ಗೆ ತಮ್ಮ ಅರಿವನ್ನು  ಉಲ್ಲೇಖಿಸಿದ ಅವರು ಸರ್ಕಾರದ ಪರವಾಗಿ ಸಂಪೂರ್ಣ ಸಂವೇದನಾಶೀಲತೆ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದರು. “ಚಿಂತಿಸಬೇಡಿ, ನಾವೆಲ್ಲರೂ ರೈತರೊಂದಿಗೆ ಇದ್ದೇವೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಈ ಹಬ್ಬದ ಋತುವಿನಲ್ಲಿ ಬರಪೀಡಿತ ನಾಗರಿಕರು, ಕೃಷಿ ಕುಟುಂಬಗಳು ಮತ್ತು ಸಂಕಷ್ಟದಲ್ಲಿರುವ ಇತರರನ್ನು ನೆನಪಿಸಿಕೊಳ್ಳುವ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಾಗರಿಕರಿಗೆ ಪ್ರಧಾನಮಂತ್ರಿ ನೆನಪಿಸಿದರು. ಇದರಿಂದಾಗಿ ದೀಪಾವಳಿಯ ಸಂತೋಷವು ಅವರ ಮನೆಗಳಲ್ಲಿಯೂ ಉಳಿಯುತ್ತದೆ, ವಿಪತ್ತನ್ನು ಮೆಟ್ಟಿ ನಿಲ್ಲಲು ರಾಷ್ಟ್ರವು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಪ್ರಧಾನಮಂತ್ರಿ ಆಗ್ರಹಿಸಿದರು. “ನಾವು ಒಟ್ಟಾಗಿ ಈ ವಿಪತ್ತನ್ನು ಎದುರಿಸುತ್ತೇವೆ” ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

ಮೆಟ್ರೋ ಯೋಜನೆಗಳಿಗೆ ಶುಭ ಹಾರೈಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಸಾಮೂಹಿಕ ಮತ್ತು ಒಗ್ಗಟ್ಟಿನ ಪ್ರಯತ್ನ, ಸಬ್ ಕಾ ಪ್ರಯಾಸ್ ವಿಕಸಿತ ಭಾರತದ ಜೀವಾಳವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. “ಇದೇ ಮನೋಭಾವದಿಂದ, ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿರಬೇಕು” ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

 

*****