Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಯವರಿಂದ ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ; ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಅನುಭವ ಹಂಚಿಕೆಗೆ ಸಾಕ್ಷಿ; ಜೈಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೈಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜಸ್ತಾನದಲ್ಲಿ 13 ನಗರ ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ ಫಲಕವನ್ನು ಅವರು ಅನಾವರಣಗೊಳಿಸಿದರು.

ಅವರು ಬಳಿಕ ಭಾರತ ಸರಕಾರ ಮತ್ತು ರಾಜಸ್ಥಾನ ಸರಕಾರದ ವಿವಿಧ ಯೋಜನೆಗಳ ಆಯ್ದ ಫಲಾನುಭವಿಗಳ ಅನುಭವ ಹಂಚಿಕೆಯ ದೃಶ್ಯ-ಶ್ರಾವ್ಯ ಪ್ರದರ್ಶಿಕೆಯನ್ನು ವೀಕ್ಷಿಸಿದರು. ಈ ಪ್ರದರ್ಶಿಕೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೇ ಅವರು ಸಮನ್ವೀಕರಿಸಿದ್ದರು. ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಪ್ರಧಾನ ಮಂತ್ರಿ ಮುದ್ರಾ ಯೋಜನಾ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನಾ ಸಹಿತ ವಿವಿಧ ಯೋಜನೆಗಳು ಇದರಲ್ಲಿ ಅಡಕಗೊಂಡಿದ್ದವು.

ಉತ್ಸಾಹಿಗಳು ಭಾಗವಹಿಸಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ರಾಜಸ್ಥಾನವು ತನ್ನಲ್ಲಿಗೆ ಭೇಟಿ ಕೊಡುವ ವೀಕ್ಷಕರನ್ನು ಹೇಗೆ ಸ್ವಾಗತಿಸುತ್ತದೆ ಎಂಬುದನ್ನು ತಾನು ಸ್ವತಹ ಸಾಕ್ಷೀಕರಿಸಿಕೊಂಡಿರುವುದಾಗಿ ಹೇಳಿದರು. ಇಲ್ಲಿಗೆ ಭೇಟಿ ನೀಡುವ ಸಂದರ್ಶಕರು ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಯಾವ ರೀತಿ ಪ್ರಗತಿ ಸಾಧಿಸಿದೆ ಎಂಬುದರ ನೈಜ ಚಿತ್ರಣವನ್ನು ನೋಡಬಹುದಾಗಿದೆ ಎಂದವರು ಹೇಳಿದರು. ರಾಜಸ್ಥಾನವು ಧೈರ್ಯ ಸಾಹಸದ ಭೂಮಿ ಎಂದವರು ಬಣ್ಣಿಸಿದರು. ಪ್ರಕೃತಿಯ ಜೊತೆ ಸೌಹಾರ್ದತೆಯಿಂದ ಬದುಕುವ ಬಗ್ಗೆ ಅಥವಾ ದೇಶವನ್ನು ರಕ್ಷಿಸುವ ಬಗ್ಗೆ ರಾಜಸ್ಥಾನವು ದಾರಿಯನ್ನು ತೋರಿಸಿಕೊಟ್ಟಿದೆ, ಎಂದೂ ಅವರು ನುಡಿದರು.

ರಾಜಸ್ಥಾನ ಮುಖ್ಯಮಂತ್ರಿ ಶ್ರೀಮತಿ ವಸುಂಧರ ರಾಜೇ ಅವರನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಯವರು ಅವರು ರಾಜ್ಯದ ಕೆಲಸದ ಸಂಸ್ಕೃತಿಯನ್ನು ಬದಲಿಸಿದ್ದಾರೆ ಎಂದರು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ರಾಜಸ್ಥಾನದ ಪ್ರಗತಿಗಾಗಿ ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದ ಪ್ರಧಾನ ಮಂತ್ರಿಗಳು ಇಂದು ಪ್ರದರ್ಶಿಕೆಯಲ್ಲಿ ನೋಡಿದ ಫಲಾನುಭವಿಗಳ ಸಂತಸ ಇಲ್ಲಿ ಹಾಜರಿದ್ದ ಪ್ರತಿಯೊಬ್ಬರಿಗೂ ಖಚಿತವಾಗಿದೆ ಎಂದರು.

ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಹೇಗೆ ಕಾರ್ಯೋನ್ಮುಖವಾಗಿದೆ ಎಂಬುದರ ಬಗ್ಗೆ ಪ್ರಧಾನ ಮಂತ್ರಿಯವರು ವಿಸ್ತಾರವಾಗಿ ಮಾತನಾಡಿದರು. ವಿವಿಧ ಬೆಳೆಗಳಿಗೆ ಖಾರೀಫ್ ಅವಧಿಯಲ್ಲಿ ಮಾಡಲಾಗಿರುವ ಕನಿಷ್ಟಬೆಂಬಲ ಬೆಲೆಗಳ ಹೆಚ್ಚಳದ ಬಗ್ಗೆಯೂ ಅವರು ವಿವರಿಸಿದರು.

ರಾಜಸ್ಥಾನ ರಾಜ್ಯದಲ್ಲಿ ಸ್ವಚ್ಚ ಭಾರತ್ ಆಂದೋಲನ , ಜನ ಧನ ಯೋಜನಾ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಮುದ್ರಾ ಯೋಜನಾ, ಉಜ್ವಲ ಯೋಜನಾ ಮತ್ತು ಸೌಭಾಗ್ಯ ಯೋಜನಾ ಸಹಿತ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು.

ಮುಂದಿನ ವರ್ಷ ರಾಜಸ್ಥಾನವು 70 ವರ್ಷ ಪೂರ್ಣಗೊಳಿಸುತ್ತಿರುವುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿಯವರು ಅಭಿವೃದ್ದಿ ಹೊಂದಿದ ರಾಜಸ್ಥಾನ ನಿರ್ಮಾಣದಲ್ಲಿ ಬದ್ದತೆಯನ್ನು ಮತ್ತೆ ದೃಢೀಕರಿಸುವಂತೆ ಕರೆ ನೀಡಿದರಲ್ಲದೆ, ಇದು ನವ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.