Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಲ್ಲಿ ನ್ಯಾಯ ಪಂಚಾಯತಿಯನ್ನು ಬಲಪಡಿಸುವ ಮತ್ತು ಜಾರಿಗೊಳಿಸುವ ರಾಷ್ಟ್ರೀಯ ಆರಂಭಿಕ ಉಪಕ್ರಮ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಸಮಾರೋಪ ಭಾಷಣ.

ಭಾರತದಲ್ಲಿ ನ್ಯಾಯ ಪಂಚಾಯತಿಯನ್ನು ಬಲಪಡಿಸುವ ಮತ್ತು ಜಾರಿಗೊಳಿಸುವ ರಾಷ್ಟ್ರೀಯ ಆರಂಭಿಕ ಉಪಕ್ರಮ ಸಮಾವೇಶದಲ್ಲಿ  ಪ್ರಧಾನ ಮಂತ್ರಿ    ಅವರು ಮಾಡಿದ ಸಮಾರೋಪ ಭಾಷಣ.


ಭಾರತದ ಶ್ರೇಷ್ಠ  ನ್ಯಾಯಾಧೀಶರಾದ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರೇ
ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಚ ನ್ಯಾಯಾಲಯಗಳ ಗೌರವಾನ್ವಿತ ನ್ಯಾಯಮೂರ್ತಿಗಳೇ, 
ಗಣ್ಯ ಅತಿಥಿ ಗಳೇ ಮತ್ತು ಸ್ನೇಹಿತರೇ
ಮಹಿಳೆಯರೇ ಮತ್ತು ಮಹನೀಯರೇ
ಮೊದಲಿಗೆ ನಾನು ನೀತಿ ಆಯೋಗವು ಈ ಜಾಗತಿಕ ಸಮ್ಮೇಳನವನ್ನು ಆಯೋಜಿಸಿರುವುದಕ್ಕೆ ಅಭಿನಂದನೆಗಳನ್ನು ಹೇಳುತ್ತಾ ಆರಂಭಿಸುತ್ತೇನೆ.
 
    ನ್ಯಾಯ ಪಂಚಾಯತಿಯ ಬಗ್ಗೆ ಬಹುಷಃ ಮಹಾತ್ಮಾಗಾಂಧೀಜಿಯವರದ್ದು ಸರಳ ವ್ಯಾಖ್ಯಾನವೊಂದಿದೆ. ಅವರು ಹೇಳಿದ್ದು: ’ನಾನು ಕಾನೂನಿನ ನಿಜವಾದ ನ್ಯಾಯಾಚರಣೆಯ ನಡವಳಿಯನ್ನು ಅಭ್ಯಾಸ ಮಾಡಿದ್ದವನು. ನಾನು ಮನುಷ್ಯನ ಸ್ವಭಾವದ ಉತ್ತಮ ಅಂಶವನ್ನು ಹುಡುಕಲು ಅಭ್ಯಾಸ ಮಾಡಿದೆ ಮತ್ತು ಮನುಷ್ಯನ ಹೃದಯದೊಳಗೆ ಪ್ರವೇಶಿಸಲು ಕಲಿತೆ. ವಕೀಲನ ನಿಜವಾದ ಕೆಲಸ ಎಂದರೆ ವಿವಾದದಲ್ಲಿ ಭಾಗಿಯಾಗಿರುವ ಎರಡೂ ಕಡೆಯವರನ್ನು ಒಟ್ಟು ಸೇರಿಸುವುದು ಎಂಬುದನ್ನು ಅರಿತುಕೊಂಡೆ. ಆ ಪಾಠ ನನ್ನೊಳಗೆ ಅಳಿಸಲಾಗದಂತಹ ಭಾವವನ್ನು ಮೂಡಿಸಿತು.  ನನ್ನ ಇಪ್ಪತ್ತಮೂರು ವರ್ಷಗಳ ವಕೀಲಿಕೆ ವೃತ್ತಿಯಲ್ಲಿ ನಾನು ನನ್ನ ಸಮಯದ ಬಹುಭಾಗವನ್ನು ನೂರಾರು ಪ್ರಕರಣಗಳಲ್ಲಿ ಖಾಸಗಿಯಾಗಿ ರಾಜಿ ಪಂಚಾಯತಿ ಮಾಡುವುದಕ್ಕೆ ವಿನಿಯೋಗಿಸಿದೆ.  ಅದರಿಂದ ನಾನು ಕಳೆದುಕೊಂಡದ್ದೇನೂ ಇಲ್ಲ,. ಹಣವೂ ನಷ್ಟವಾಗಲಿಲ್ಲ ಮತ್ತು ಖಚಿತವಾಗಿ ನನ್ನ ಆತ್ಮಸಾಕ್ಷಿಗೂ ತೊಂದರೆಯಾಗಲಿಲ್ಲ’.
 
ಸ್ನೇಹಿತರೇ, 
   ಭಾರತವು ಇಂದು ತ್ವರಿತಗತಿಯಿಂದ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿದೆ. ಮತ್ತು ವಿದೇಶೀ ನೇರ ಹೂಡಿಕೆಗೆ ಅತ್ಯಂತ ಆಕರ್ಷಕ ತಾಣವಾಗಿದೆ. ಜಾಗತಿಕ ಆರ್ಥಿಕತೆಯಲ್ಲಿ ನಾವು ಹೊಳೆಯುವ ಪ್ರದೇಶವಾಗಿ ನಿಂತಿದ್ದೇವೆ. ಇದು ಭಾರತದ ಮೂಲಭೂತ ಶಕ್ತಿಗಳಾದ: ಪ್ರಜಾಪ್ರಭುತ್ವ, ಜನಶಕ್ತಿಯ ಲಾಭಾಂಶ ಮತ್ತು ಬೇಡಿಕೆಗಳ ಫಲಿತ.  ಈ ಶಕ್ತಿಗಳನ್ನು ನಾವು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕಾದ ಅಗತ್ಯವಿದೆ.  ಇದು ವ್ಯಾಪಾರ ಕ್ಷೇತ್ರವು  ಉದ್ಯೋಗ ಸೃಷ್ಟಿ ಮಾಡುವ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮಾಡುವ ದೀರ್ಘಾವಧಿ  ಹೂಡಿಕೆ ಮಾಡಿದಾಗ ಮಾತ್ರ ಸಾಧ್ಯವಿದೆ.
 
   ನಮ್ಮ ದೇಶೀಯ ಮಾರುಕಟ್ಟೆ ವಿಭಜನೆಗೊಂಡಿದೆ.   ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆಗಳು ಸರಕು ಮತ್ತು ಸೇವೆಗಳನ್ನು ದುಬಾರಿಯಾಗಿಸಿವೆ.   ಇದರಿಂದ ಅಂತಾರಾಜ್ಯ ವಾಣಿಜ್ಯ, ವ್ಯಾಪಾರ ವಹಿವಾಟಿನ ಅಭಿವೃದ್ಧಿಗೆ ಅಡ್ಡಿಯಾಗಿದೆ.   ನಾವು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ, ಇದರಿಂದ ಸಮಗ್ರ ರಾಷ್ಟ್ರೀಯ ಮಾರುಕಟ್ಟೆ ರಚನೆಗೆ  ಅನುಕೂಲವಾಗಲಿದೆ.   ಇದರಿಂದ ದೇಶೀಯ ಬೇಡಿಕೆ ಇನ್ನಷ್ಟು ವೃದ್ಧಿಸಲಿದೆ ಮತ್ತು ಭಾರತೀಯ ವ್ಯಾಪಾರೋದ್ಯಮಕ್ಕೆ ಅವಕಾಶಗಳು ಹೆಚ್ಚಿ,  ಉದ್ಯೋಗ ಸೃಷ್ಟಿಯೂ ಆಗಲಿದೆ.
 
 
  ಭಾರತವೀಗ ಡಿಜಿಟಲ್ ಕ್ರಾಂತಿಯನ್ನು ಅನುಭವಿಸುತ್ತಿದೆ. ಇದು ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿರುವ ಮತ್ತು ಗ್ರಾಮೀಣ ಸಮಾಜದಲ್ಲಿ ನಿರ್ದಿಷ್ಟವಾಗಿರುವ  ಡಿಜಿಟಲ್ ಮತ್ತು ಆರ್ಥಿಕ ಕಂದರವನ್ನು ಬೆಸೆಯಲಿದೆ. ಗ್ರಾಮೀಣ ಆರ್ಥಿಕತೆಗೆ ಈ ಕ್ರಾಂತಿಯ ಮೂಲಕ ದೊರೆಯುವ ಪ್ರಚೋದನೆ ಭಾರತೀಯ ಆರ್ಥಿಕತೆಯನ್ನು ಹೆಚ್ಚು ಬಲಗೊಳಿಸಲಿದೆ.
 
 
  ಹೊಸ ವ್ಯಾಪಾರೋದ್ಯಮ ಮಾದರಿಗಳು ಮತ್ತು ಆಪ್ ಆಧಾರಿತ  ಸ್ಟಾರ್ಟ್ ಅಪ್ ಗಳು (ನವೋದ್ಯಮಗಳು) ಭಾರತೀಯರಲ್ಲಿ ಉದ್ಯಮದ ಸ್ಪೂರ್ತಿಯನ್ನು ಉದ್ದೀಪಿಸಿವೆ.   ನಿನ್ನೆಯ ಉದ್ಯೋಗಾಕಾಂಕ್ಷಿಗಳು ಇಂದಿನ ಉದ್ಯೋಗ ನಿರ್ಮಾತೃ ಗಳಾಗುತ್ತಿದ್ದಾರೆ.   ಕಾನೂನು ವೃತ್ತಿ ಕೂಡಾ ಡಿಜಿಟಲ್ ವಿಶ್ವದ ಭರವಸೆಗಳಿಗೆ ತೆರೆದುಕೊಳ್ಳುತ್ತಿದೆ. ಕಾರಣಗಳ ಪಟ್ಟಿಯಿಂದ ಹಿಡಿದು ಪ್ರಕರಣಗಳಿಗೆ ಸಂಬಂಧಿಸಿದ ಕಾನೂನುಗಳವರೆಗೆ ವಕೀಲರ ಗ್ರಂಥಾಲಯ ಇಂದು ನಿಮ್ಮ ಮೊಬೈಲ್ ದೂರವಾಣಿಯ ಮೇಲೆ ಒಂದು ಕ್ಲಿಕ್ ಕೊಡುವಷ್ಟು ಹತ್ತಿರದಲ್ಲಿದೆ.
 
ಸ್ನೇಹಿತರೇ,
 
   ವ್ಯಾಪಾರೋದ್ಯಮವು ಭಾರತೀಯ ಮಾರುಕಟ್ಟೆಯಲ್ಲಿ ಕಾನೂನಿನ ವ್ಯಾಪಕತೆಯ ಭರವಸೆಯನ್ನು ನಿರೀಕ್ಷಿಸುತ್ತದೆ. ನ್ಯಾಯ ಪಂಚಾಯತಿ ರೀತಿಯಲ್ಲಿ ನಿಯಮಗಳ ಆಟವನ್ನು ರಾತ್ರಿ ಬೆಳಗಾಗುವುದರೊಳಗೆ ಬದಲಾಯಿಸುವುದಿಲ್ಲ ಎಂಬ ಭರವಸೆ ಅವರಿಗೆ ಅಗತ್ಯವಾಗಿದೆ. ಮತ್ತು ವಾಣಿಜ್ಯ ವಿವಾದಗಳನ್ನು ದಕ್ಷತೆಯಿಂದ ಬಗೆಹರಿಸಬೇಕಾಗುತ್ತದೆ. ಒಂದು ಬಲವಾದ ಕಾನೂನು ಚೌಕಟ್ಟು ಜತೆಗೆ ಅಷ್ಟೇ ಉತ್ಸಾಹಯುತ  ನ್ಯಾಯ ಪಂಚಾಯತಿ ಸಂಸ್ಕೃತಿ ಅವಶ್ಯವಾಗಿದೆ.
 ಈ ನಿಟ್ಟಿನಲ್ಲಿ ನಾವು ದೂರಗಾಮೀ ಪರಿಣಾಮವುಳ್ಳ ಕಾನೂನು ಸುಧಾರಣೆಗಳನ್ನು ಆರಂಭಿಸಿದ್ದೇವೆ. ಸುಮಾರು ನೂರಕ್ಕೂ ಅಧಿಕ ಹಳೆಯ ಕಾಯಿದೆಗಳನ್ನು ತೆಗೆದು ಹಾಕಲಾಗಿದೆ. ನಾವು ಸಮಗ್ರ ಸಾಲ ಸುಸ್ತಿ ಮತ್ತು ದಿವಾಳಿ ಸಂಹಿತೆ-2016 ನ್ನು ಜಾರಿಗೆ ತಂದಿದ್ದು, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಶಾಸನಾತ್ಮಕ ಹಣಕಾಸು ನೀತಿ ಸಮಿತಿಯನ್ನು ಸ್ಥಾಪಿಸಿ ಸರಕು ಮತ್ತು ಸೆಕ್ಯೂರಿಟಿ ಮಾರುಕಟ್ಟೆಗಳ ವಿಲಯನವನ್ನೂ ಕಾರ್ಯರೂಪಕ್ಕೆ ತಂದಿದ್ದೇವೆ.
 
  ಇದಲ್ಲದೆ ದಿವಾಳಿ ಸಂಹಿತೆಯ ಜತೆಗೇ ನಾವು ಎಸ್.ಎ.ಆರ್.ಎಫ಼್.ಎ.ಇ.ಎಸ್.ಐ.ಮತ್ತು ಡಿ.ಆರ್.ಟಿ. ಕಾಯ್ದೆಗಳನ್ನು ಈ ವರ್ಷ ಸಾಲ ವ್ಯವಸ್ಥೆಯನ್ನು ಬದಲಾಯಿಸಲು ಹಾಗು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಒದಗಿಸುವ ಉದೇಶಕ್ಕೆ ಪೂರಕವಾಗಿರುವಂತೆ ತಿದ್ದುಪಡಿ ಮಾಡಿದ್ದೇವೆ.
 
     ಇಷ್ಟೆಲ್ಲದರ ನಡುವೆಯೂ ಕಾನೂನು ಸುಧಾರಣೆಗಳು ನಿರೀಕ್ಷಿತ ಫಲಿತಾಂಶ ನೀಡಲು ಸಾಧ್ಯವಾಗುವುದು, ಅಲ್ಲಿ ದಕ್ಷ ಮತ್ತು ಸಮರ್ಥ ವಿವಾದ ಪರಿಹಾರ ವ್ಯವಸ್ಥೆ ಇದ್ದಾಗ ಮಾತ್ರ. ನ್ಯಾಯಾಂಗದ ಸ್ವಾತಂತ್ರ್ಯ ಭಾರತೀಯ ಸಂವಿಧಾನದ ಮೂಲ ತತ್ವ. ಜನ ಸಾಮಾನ್ಯರು ಮಾತ್ರವಲ್ಲ ವ್ಯಾಪಾರೋದ್ಯಮಿಗಳು ಕೂಡಾ ನ್ಯಾಯಾಂಗ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ  ಅಪಾರ ನಂಬಿಕೆ ಇಟ್ಟಿದ್ದಾರೆ.ನಮ್ಮ ಸರಕಾರ ನ್ಯಾಯಾಂಗ ಮೂಲಸೌಕರ್ಯ ಮತ್ತು ಆಡಳಿತ ಸುಧಾರಿಸಲು ವಿವಿಧ ಮೊದಲ ಹೆಜ್ಜೆಯ ಕ್ರಮಗಳನ್ನು ಕೈಗೊಂಡಿದೆ.
 
  ನಾವು ವಾಣಿಜ್ಯಿಕ ನ್ಯಾಯಾಲಯಗಳನ್ನು , ಹೈಕೋರ್ಟ್ ಕಾಯ್ದೆ, 2015 ರ ವಾಣಿಜ್ಯಿಕ ವಿಭಾಗ ಮತ್ತು ವಾಣಿಜ್ಯಿಕ ಮೇಲ್ಮನವಿ ವಿಭಾಗಗಳನ್ನು ವಾಣಿಜ್ಯಿಕ ವಿವಾದಗಳ ತ್ವರಿತ ಇತ್ಯರ್ಥಕ್ಕಾಗಿ ಜಾರಿಗೆ ತಂದಿದ್ದೇವೆ.
 
  ದೇಶಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ದತ್ತಾಂಶ ಒದಗಿಸುವುದಕ್ಕಾಗಿ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲವನ್ನು ಸ್ಥಾಪಿಸಲಾಗಿದೆ. ಇಡೀಯ ನ್ಯಾಯಾಲಯ ವ್ಯವಸ್ಥೆಯನ್ನು ಕಂಪ್ಯೂಟರೀಕರಿಸಲು ಇ-ಕೋರ್ಟ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
 
  ಈಗಿರುವ ನ್ಯಾಯಮಂಡಳಿಗಳನ್ನು ಒಗ್ಗೂಡಿಸುವ ಬಗ್ಗೆ  ವ್ಯೂಹಾತ್ಮಕ ತಂತ್ರವೊಂದರ ಮೇಲೆ ಸರಕಾರ ಗಮನ ಹರಿಸಿದ್ದು, ಇದು ಹಾಲಿ ಇರುವ ಸಂಕೀರ್ಣ ನ್ಯಾಯಮಂಡಳಿ ವ್ಯವಸ್ಥೆಯನ್ನು ಸರಳ ರಚನೆಯತ್ತ ಬದಲಾಯಿಸಲಿದೆ.
ಇದೇ ಕಾಲಕ್ಕೆ ನ್ಯಾಯ ಪಂಚಾಯತಿ, ಮಧ್ಯಸ್ಥಿಕೆ ಮತ್ತು ರಾಜಿ ಏರ್ಪಡಿಸುವುದಕ್ಕಾಗಿ, ಪರ್ಯಾಯ ವಿವಾದ ಪರಿಹಾರಕ್ಕೆ ನಮಗೆ ಶಕ್ತಿಶಾಲೀ ಪರಿಸರ ವ್ಯವಸ್ಥೆಯೊಂದರ ಅಗತ್ಯವಿದೆ. ಇದರಿಂದ  ಹೂಡಿಕೆದಾರರಿಗೆ ಮತ್ತು ವ್ಯಾಪಾರೋದ್ಯಮಗಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಇದರಿಂದ ಭಾರತೀಯ ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೊರೆ ತಗ್ಗಲಿದೆ.
 
  ನ್ಯಾಯ ಪಂಚಾಯತಿ ಮೂಲಕ ವಿವಾದಗಳ ಪರಿಹಾರ ನಮಗೆ ಹೊಸತೇನಲ್ಲ. ಪ್ರಾಚೀನ ಭಾರತದಲ್ಲಿ  ಗುಂಪು, ಪಕ್ಷಗಳ ನಡುವೆ ವಿವಾದಗಳ ಇತ್ಯರ್ಥಕ್ಕಾಗಿ ಹಲವು ವ್ಯವಸ್ಥೆಗಳು ಇದ್ದವು. ಗ್ರಾಮ ಪರಿಷತ್ತು ಅಥವಾ ಕುಲಾನಿ, ಸ್ರೇನಿ ಅಥವಾ ಕಾರ್ಪೋರೇಶನ್, ಮತ್ತು ಪುಗ ಅಥವಾ ಸಭೆಗಳು ಇದರಲ್ಲಿ ಸೇರಿವೆ. ಅದೇ ರೀತಿ ವಾಣಿಜ್ಯಿಕ ವಿವಾದಗಳನ್ನು ಮಹಾಜನರು ಅಥವಾ ವ್ಯಾಪಾರೋದ್ಯಮ ಮಂಡಳಿಗಳು ಇತ್ಯರ್ಥ ಮಾಡುತ್ತಿದ್ದವು.
 
  ಇಂದು ಕಾರ್ಪೋರೇಟ್ ಮತ್ತು ಹಣಕಾಸು ಸಂಸ್ಥೆಗಳು ಯಾವುದೇ ವಿವಾದ ಮತ್ತು ಮೊಕದ್ದಮೆ/ಖಟ್ಲೆ ಇಲ್ಲದೆ ವ್ಯಾಪಾರ ವ್ಯವಹಾರಗಳನ್ನು ಮುಕ್ತಾಯಗೊಳಿಸಲು ಮತ್ತು ಹಣಕಾಸು ವ್ಯವಹಾರ ಮಾಡಲು ನೆರವಾಗುವಂತಹ ಕಾನೂನು ಪಂಡಿತರನ್ನು ಆಶ್ರಯಿಸುತ್ತಿವೆ. ವಿವಾದವೊಂದು ಉದ್ಭವಿಸಿದಾಗ  ಕಾರ್ಪೋರೇಟ್ ಗಳು ಅವುಗಳನ್ನುನ್ಯಾಯಾಲಯಕ್ಕೆ ಕೊಂಡೊಯ್ಯದೆ, ನ್ಯಾಯ ಪಂಚಾಯತಿ ಮೂಲಕ ತ್ವರಿತವಾಗಿ ಇತ್ಯರ್ಥಕ್ಕೆ ಮುಂದಾಗುತ್ತವೆ. ಇದಕ್ಕಾಗಿ ಅವರಿಗೆ ವಿಶೇಷ ತಜ್ಞತೆಯ ವಕೀಲರು, ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ ಬೇಕಾಗುತ್ತದೆ. ಅಲ್ಲದೇ ವಿರುದ್ಧಾತ್ಮಕ ಪ್ರಕ್ರಿಯೆಯಿಂದ ವ್ಯಾಪಾರೋದ್ಯಮದ ಬಾಂಧವ್ಯ ಮತ್ತು ವೈಯಕ್ತಿಕ ಬಾಂಧವ್ಯ ಉಳಿಸಿಕೊಳ್ಳುವುದೂ ಮುಖ್ಯವಾಗಿರುತ್ತದೆ.
 
  ಏಶ್ಯನ್ ಕೇಂದ್ರಗಳಾದ ಹಾಂಕಾಂಗ್ ಮತ್ತು ಸಿಂಗಾಪುರಗಳು ಹೆಚ್ಚು ಆಯ್ಕೆಯ ನ್ಯಾಯ ಪಂಚಾಯತಿ ಕೇಂದ್ರಗಳಾಗಿರುವುದನ್ನು ಇತ್ತೀಚಿನ ವಿದ್ಯಮಾನಗಳು ಸೂಚಿಸುತ್ತವೆ. ಜನಪ್ರಿಯ ವ್ಯಾಪಾರೋದ್ಯಮ ತಾಣಗಳಾಗಿಯೂ ಮತ್ತು ಅವು ವ್ಯಾಪಾರೋದ್ಯಮಕ್ಕೆ ಅತ್ಯಂತ ಹೆಚ್ಚು ಅನುಕೂಲಕರ ವಾತಾವರಣ ಇರುವ ತಾಣಗಳಾಗಿಯೂ ಗುರುತಿಸಲ್ಪಟ್ಟಿವೆ. ಆದ್ದರಿಂದ ಗುಣಮಟ್ಟದ ನ್ಯಾಯ ಪಂಚಾಯತಿ ವ್ಯವಸ್ಥೆಯೂ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳ ಅಂತರ್ಗತ ಘಟಕವೂ ಆಗಿರುತ್ತದೆ ಮತ್ತು ಸರಕಾರವೂ ಇದಕ್ಕೆ ಬದ್ಧವಾಗಿದೆ.
 
ಸ್ನೇಹಿತರೇ
  ಸಾಂಸ್ಥಿಕ ನ್ಯಾಯ ಪಂಚಾಯತಿಗಾಗಿ ಒಂದು ಶಕ್ತಿಶಾಲಿ, ಉತ್ಸಾಹಪೂರ್ಣ ಪರಿಸರ ವ್ಯವಸ್ಥೆಯ ಸೃಷ್ಟಿ, ನಮ್ಮ ಸರಕಾರದ ಪ್ರಥಮ ಆದ್ಯತೆಯಾಗಿದೆ. ಇತ್ತೀಚೆಗೆ ನ್ಯಾಯ ಪಂಚಾಯತಿ ಮತ್ತು ರಾಜಿ ಕಾಯ್ದೆಗೆ ಸಂಬಂಧಿಸಿ ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ. ಇದರಿಂದ ನ್ಯಾಯ ಪಂಚಾಯತಿ ಪ್ರಕ್ರಿಯೆ ಸುಲಭಗೊಂಡಿದೆ ಮತ್ತು ಅವಧಿ ಬದ್ಧವಾಗಿ, ಅಡೆ- ತಡೆ ರಹಿತವಾಗಿರುತ್ತದೆ. ನಮ್ಮ ಕಾನೂನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವ್ಯಾಪಾರ ಮಂಡಳಿ ಮಾದರಿಯನ್ನು (ಯು.ಎನ್.ಸಿ.ಐ.ಟಿ.ಆರ್.ಎ.ಎಲ್.) ಆಧರಿಸಿದೆ.
 
  ಸಾಮಾನ್ಯ ಪರಿಸ್ಥಿತಿಗಳಲ್ಲಿ  ನ್ಯಾಯ ಪಂಚಾಯತಿ ಮಂಡಳಿ ತನ್ನ ತೀರ್ಪನ್ನು 12 ತಿಂಗಳೊಳಗೆ ನೀಡುವುದನ್ನು ಖಾತ್ರಿಗೊಳಿಸುವುದು ಇದರ ಮುಖ್ಯ ಉದ್ದೇಶ. ತ್ವರಿತಗತಿಯ ಪ್ರಕ್ರಿಯೆಗಳಲ್ಲಿ ಇಂತಹ ತೀರ್ಪನ್ನು 6 ತಿಂಗಳೊಳಗೆ ನೀಡಬಹುದು. ನ್ಯಾಯ ಪಂಚಾಯತಿದಾರನ ನೇಮಕಕ್ಕೆ ಸಂಬಂಧಪಟ್ಟಂತೆಯೂ ಸಹ ನ್ಯಾಯಾಲಯ 60 ದಿನಗಳ ಒಳಗೆ ನಿರ್ಧಾರ ಕೈಗೊಳ್ಳುತ್ತದೆ. ತೀರ್ಪು ಪ್ರಕ್ರಿಯೆ ಮತ್ತು ಅದನ್ನು ನೀಡಲು ಈ ಮೊದಲು ಇದ್ದಂತಹ ಅಡೆ-ತಡೆಗಳನ್ನು ನಿವಾರಿಸಲಾಗಿದೆ.
 
   ಇನ್ನು ಮುಂದುವರಿಕೆಯಾಗಿ ಹೊಸ ಕಾನೂನಿನ ಪ್ರಕಾರ, ಆ ತೀರ್ಪನ್ನು ಪ್ರಶ್ನಿಸುವ ಯಾವುದೇ ಅರ್ಜಿಯನ್ನು ನ್ಯಾಯಾಲಯ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು. ತೀರ್ಪಿನ ಅನುಷ್ಠಾನ ವನ್ನು    ಅಂತಾರಾಷ್ಟ್ರೀಯ ಪದ್ಧತಿ ಪ್ರಕಾರ ಮಾತ್ರವೇ ನ್ಯಾಯಾಲಯಗಳು ತಿರಸ್ಕರಿಸಬಹುದಾಗಿರುತ್ತದೆ. ಈ ತಿದ್ದುಪಡಿಗಳು ನಮ್ಮ ನ್ಯಾಯ ಪಂಚಾಯತಿ ವ್ಯವಸ್ಥೆಯನ್ನು, ಜಾಗತಿಕವಾಗಿರುವ ಉತ್ತಮ ಪದ್ಧತಿಗಳಿಂದಾಗಿ ಹೆಚ್ಚು ಚುರುಕುಗೊಳಿಸಿವೆ. ಇದರಿಂದಾಗಿ ನಮಗೆ ಪ್ರಮುಖ ನ್ಯಾಯ ಪಂಚಾಯತಿ ತಾಣವಾಗಿ ಹೊರಹೊಮ್ಮುವ ಅವಕಾಶ ಲಭಿಸಿದೆ. ಆದಾಗ್ಯೂ, ದೊಡ್ಡ ಅವಕಾಶಗಳು ಅಷ್ಟೇ ದೊಡ್ಡ ಸವಾಲುಗಳನ್ನು ತರುತ್ತವೆ. ಅತ್ಯುತ್ತಮ ಗುಣಮಟ್ಟದ ಮತ್ತು ಜಾಗತಿಕವಾಗಿ ಮಾನ್ಯತೆ ಪಡೆದ ನ್ಯಾಯ ಪಂಚಾಯತಿದಾರರ ಲಭ್ಯತೆ: ವೃತ್ತಿ ಸಂಹಿತೆಯ ಪಾಲನೆ,ತಾಟಸ್ತ್ಯ ನಿಲುವಿಗೆ ಬದ್ಧವಾಗಿರುವುದು ಮತ್ತು ಸಮಯ ಬದ್ಧವಾಗಿ ಪ್ರಕ್ರಿಯೆಗಳನ್ನು ಮುಗಿಸುವುದು ಹಾಗು ತುಂಬಾ ವೆಚ್ಚದಾಯಕವಲ್ಲದ ನ್ಯಾಯಪಂಚಾಯತಿ ಪ್ರಕ್ರಿಯೆ-ಇವುಗಳು ಆ ಸವಾಲಿನ ಪಟ್ಟಿಯಲ್ಲಿ ಸೇರಿವೆ.
 
ಸ್ನೇಹಿತರೇ
 
  ಪ್ರತಿಭಾವಂತ ವಕೀಲರಿಗಾಗಲೀ, ನ್ಯಾಯಮೂರ್ತಿಗಳಿಗಾಗಲೀ ಭಾರತದಲ್ಲಿ ಕೊರತೆ ಇಲ್ಲ. ಭಾರತದಲ್ಲಿ ನಿವೃತ್ತ ನ್ಯಾಯಮೂರ್ತಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.  ವಿವಿಧ ಕ್ಷೇತ್ರಗಳಲ್ಲಿ ಇಂಜಿನಿಯರುಗಳು, ಮತ್ತು ವಿಜ್ಞಾನಿಗಳು ಸಮರ್ಥ/ ಸಕ್ಷಮ ನ್ಯಾಯ ಪಂಚಾಯತುದಾರರಾಗಿ ಕಾರ್ಯನಿರ್ವಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯ ಪಂಚಾಯತುದಾರ  ತಜ್ಞರು ಮತ್ತು ವಕೀಲರು ಇದ್ದರೆ ಭಾರತದ ಆರ್ಥಿಕ ಹಿತಾಸಕ್ತಿಗಳು ಉತ್ತಮವಾಗಿರಲು ಸಹಾಯವಾಗುತ್ತದೆ. ಇದಕ್ಕೆ ಪ್ರತಿಯಾಗಿ ಭಾರತದ ಕಾನೂನು ಶಿಕ್ಷಣದ  ವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅಗತ್ಯವಿದೆ. ಅಲ್ಲಿ  ವಿಶೇಷವಾದ ತಜ್ಞತೆಯ ನ್ಯಾಯ ಪಂಚಾಯತಿ ಬಾರ್ ಅಸೋಸಿಯೇಶನ್ ಗಳನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯ ಇದೆ. ಮಾತ್ರವಲ್ಲ ನಮಗೆ ವೃತ್ತಿಪರವಾಗಿ ನಡೆಸಲ್ಪಡುವ ನ್ಯಾಯ ಪಂಚಾಯತಿ ಸಂಸ್ಥೆಗಳು, ಅಂತಾರಾಷ್ಟ್ರೀಯ ಮಾನದಂಡದ ಸೇವೆಯನ್ನು ಹೆಚ್ಚು ವೆಚ್ಚದಾಯಕವಲ್ಲದೆ ಭಾರತದ ವ್ಯಾಪಾರೋದ್ಯಮಕ್ಕೆ ಒದಗಿಸುವಂತಿರುವ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವೂ ಇದೆ. ಈ ಪ್ರಯತ್ನದಲ್ಲಿ ನಾವು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸಂಸ್ಥೆಗಳನ್ನು ಸ್ವಾಗತಿಸುತ್ತೇವೆ.
 
  ನ್ಯಾಯಾಂಗ ಮತ್ತು ನ್ಯಾಯ ಪಂಚಾಯತಿ ವ್ಯವಸ್ಥೆಗೆ ಪೂರಕವಾಗುವ ಪ್ರಯತ್ನಗಳ ಬಗ್ಗೆ ನಾವು ಚಿಂತಿಸಬೇಕು. ಮಧ್ಯಸ್ಥಿಕೆ ಇಂತಹ ಒಂದು ವ್ಯವಸ್ಥೆ, ಇದರ ಸಾಮರ್ಥ್ಯ, ಸಾಧ್ಯತೆಯನ್ನು ದೇಶದಲ್ಲಿ ಹೆಚ್ಚು ಬಳಸಿಕೊಂಡಿಲ್ಲ.
 
ಸ್ನೇಹಿತರೇ,
  ಒಂದು ಸಮರ್ಥವಾದ,  ಪರ್ಯಾಯವಾದ, ವಿವಾದ ಪರಿಹಾರ ಪರಿಸರ ವ್ಯವಸ್ಥೆ ಭಾರತದ ರಾಷ್ಟ್ರೀಯ ಆದ್ಯತೆ. ನಾವು ಭಾರತವನ್ನು ಜಾಗತಿಕವಾಗಿ ನ್ಯಾಯ ಪಂಚಾಯತಿ ವ್ಯವಸ್ಥೆಯ ತಾಣವಾಗಿ ರೂಪಿಸಬೇಕಾಗಿದೆ.ರೋಶೋ ಪೌಂಡ್ ನ ಪ್ರಖ್ಯಾತ ಹೇಳಿಕೆಯಂತೆ ’ಕಾನೂನು ಸ್ಥಿರವಾಗಿರಬೇಕು, ಆದರೆ ಅದು ಚಲನೆ ಕಳೆದುಕೊಳ್ಳಬಾರದು’, (ಸ್ಥಗಿತವಾಗಿರಬಾರದು /ನಿಂತ ನೀರಾಗಿರಬಾರದು). ನಾವು ನಮ್ಮ ತೀರಗಳಿಗೆ ಹೊರಭಾಗಗಳಿಂದ ಸ್ಪೂರ್ತಿ ಪಡೆದುಕೊಳ್ಳಬೇಕು. ಈ ಸಮ್ಮೇಳನ ಈ ವಿಷಯಕ್ಕೆ ಸಂಬಂಧಿಸಿದ ನಿರ್ಣಾಯಕ ನಿಯಂತ್ರಕ ವ್ಯವಸ್ಥೆ, ನೀತಿ ಮತ್ತು ಮನೋಸ್ಥಿತಿಯ ಸುಧಾರಣೆಗಳ ಕುರಿತು ಸಂವಾದಕ್ಕೆ ಒಂದು ಉತ್ತಮ /ಆದರ್ಶ ವೇದಿಕೆಯನ್ನು ಒದಗಿಸಿದೆ.
  ನನಗೆ ಭರವಸೆ ಇದೆ, ಇಲ್ಲಿ ನಡೆದ ಚರ್ಚೆಗಳು ಭಾರತದಲ್ಲಿ ನ್ಯಾಯ ಪಂಚಾಯತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತವೆ ಮತ್ತು ಅಂತಾರಾಷ್ಟ್ರೀಯ ವೃತ್ತಿಪರರಲ್ಲಿ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕಾನೂನು ಸಮುದಾಯದಲ್ಲಿ  ನ್ಯಾಯ ಪಂಚಾಯತಿಯ ಜಾಗತಿಕ ತಾಣವಾಗಿ ಭಾರತವನ್ನು ಸ್ಥಾಪಿಸುವಲ್ಲಿ ಮೈಲಿಗಲ್ಲಾಗುತ್ತವೆ ಎಂಬುದಾಗಿ. ನಾವು ನಿಮ್ಮ ಶಿಫಾರಸುಗಳ ಯಶಸ್ವೀ ಅನುಷ್ಠಾನವನ್ನು  ಎದುರು ನೋಡುತ್ತಿರುತ್ತೇವೆ.
 
  ನಿಮಗೆ ಧನ್ಯವಾದಗಳು
***