Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಕೈಗಾರಿಕಾ ಒಕ್ಕೂಟದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ


ನಮಸ್ತೇ, ಮೊದಲಿಗೆ ನಾನು ನಿಮ್ಮೆಲ್ಲರಿಗೂ 125 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ಶುಭಾಶಯಗಳನ್ನು ಹೇಳುತ್ತೇನೆ! ಶುಭಾಶಯಗಳು!. 125 ವರ್ಷಗಳ ಪ್ರಯಾಣ ಒಂದು ಧೀರ್ಘ ಪ್ರಯಾಣ. ಅಲ್ಲಿ ಹಲವಾರು ಮೈಲಿಗಲ್ಲುಗಳಿರಬಹುದು; ನೀವೂ ಹಲವು ಏರು –ಪೇರುಗಳನ್ನು ಅನುಭವಿಸಿರಬಹುದು, ಆದರೆ ಸಂಸ್ಥೆಯೊಂದನ್ನು 125 ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗುವುದು ಒಂದು ದೊಡ್ಡ ಸಂಗತಿ. ಅದು ಮಾದರಿ ಬದಲಾವಣೆಗಳನ್ನು ಅಳವಡಿಸಿಕೊಂಡಿದೆ, ವ್ಯವಸ್ಥೆಗಳು ಬದಲಾಗಿವೆ. ಮೊದಲಿಗೆ, ನಾನು ಈ 125 ವರ್ಷಗಳಲ್ಲಿ ಸಿ.ಐ.ಐ. ಯನ್ನು ಬಲಪಡಿಸಲು ಕೊಡುಗೆ ನೀಡಿದ ಹಿಂದಿನ ಮಹನೀಯರು ಸೇರಿದಂತೆ ಎಲ್ಲಾ ದಿಗ್ಗಜರಿಗೆ ಅಭಿನಂದನೆಯನ್ನು ಹೇಳಬಯಸುತ್ತೇನೆ. ನಮ್ಮೊಂದಿಗೆ ಇಂದು ಇಲ್ಲದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ಮತು ಭವಿಷ್ಯದಲ್ಲಿ ಇದರ ಜವಾಬ್ದಾರಿ ಹೊರಲಿರುವವರಿಗೆ ನಾನು ಶುಭ ಹಾರೈಸುತ್ತೇನೆ.

ಕೊರೊನಾ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂತಹ ಆನ್ ಲೈನ್ ಕಾರ್ಯಕ್ರಮಗಳು ಹೊಸ ಸಹಜತೆಯಾಗುತ್ತಿವೆ. ಪ್ರತೀ ಕಷ್ಟದ , ಸಂಕಷ್ಟದ ಸಂದರ್ಭದಲ್ಲಿಯೂ ಅದನ್ನು ದಾಟಲು ಮನುಷ್ಯ ಹೊಸ ದಾರಿ ಹುಡುಕಿಕೊಳ್ಳುತ್ತಾನೆ, ಇದು ಆತನ ಅತ್ಯಂತ ದೊಡ್ದ ಬಲ. ಇಂದೂ ನಾವು ಒಂದೆಡೆಯಲ್ಲಿ ಈ ವೈರಸ್ ವಿರುದ್ದ ಹೋರಾಟಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಜೊತೆಗೆ ನಾವು ಆರ್ಥಿಕತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಒಂದೆಡೆ ನಾವು ನಮ್ಮ ದೇಶವಾಸಿಗಳ ಪ್ರಾಣ ರಕ್ಷಣೆ ಮಾಡಬೇಕಾಗಿದೆ, ಮತ್ತೊಂದೆಡೆ ನಾವು ದೇಶದ ಆರ್ಥಿಕತೆಗೆ ವೇಗ ದೊರಕಿಸಿಕೊಟ್ಟು ಅದನ್ನು ಸ್ಥಿರಗೊಳಿಸಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ನೀವು ಬೆಳವಣಿಗೆಯನ್ನು ಮತ್ತೆ ಪಡೆಯುವ ಮಾತುಗಳನ್ನು ಆಡುತ್ತಿದ್ದೀರಿ, ಮತ್ತು ಇದು ಖಂಡಿತವಾಗಿಯೂ ಮೆಚ್ಚತಕ್ಕದ್ದು !. ನಾನು ಮತ್ತೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ ಮತ್ತು ಹೇಳುತ್ತೇನೆ, ಹೌದು, ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಗಳಿಸುತ್ತೇವೆ. ನಿಮ್ಮಲ್ಲಿ ಕೆಲವರು ಆಶ್ಚರ್ಯಪಡುತ್ತಿರಬಹುದು, ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ , ನಾನು ಇದನ್ನು ಇಷ್ಟೊಂದು ವಿಶ್ವಾಸಪೂರ್ವಕವಾಗಿ ಹೇಗೆ ಹೇಳುತ್ತಿದ್ದೇನೆ ಎಂಬುದಾಗಿ.

ನನ್ನ ದೃಢ ವಿಶ್ವಾಸಕ್ಕೆ ಹಲವು ಕಾರಣಗಳಿವೆ. ನಾನು ಭಾರತದ ಸಾಮರ್ಥ್ಯಗಳಲ್ಲಿ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ಭಾರತದ ಪ್ರತಿಭೆ ಮತ್ತು ತಂತ್ರಜ್ಞಾನದಲ್ಲಿ ವಿಶ್ವಾಸ ಇರಿಸಿದ್ದೇನೆ. ನಾನು ಅನ್ವೇಷಣೆಗಳಲ್ಲಿ ಮತ್ತು ಭಾರತದ ಬುದ್ದಿವಂತಿಕೆಯಲ್ಲಿ ಭರವಸೆ ಇಟ್ಟಿದ್ದೇನೆ. ನಾನು ರೈತರನ್ನು ನಂಬುತ್ತೇನೆ. ಎಂ.ಎಸ್.ಎಂ.ಇ. ಗಳು ಮತ್ತು ಭಾರತದ ಉದ್ಯಮಶೀಲತ್ವದಲ್ಲಿ ನನಗೆ ವಿಶ್ವಾಸವಿದೆ. ಮತ್ತು ನಾನು ಕೈಗಾರಿಕೆಗಳ ನಾಯಕರಾದಂತಹ ನಿಮ್ಮಲ್ಲಿ ನಂಬಿಕೆ ಇಟ್ಟಿದ್ದೇನೆ. ಆದುದರಿಂದಾಗಿಯೇ ನಾನು ಹೇಳುತ್ತಿದ್ದೇನೆ –ಹೌದು !. ನಾವು ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ. ಭಾರತ ತನ್ನ ಬೆಳವಣಿಗೆಯನ್ನು ಮರಳಿ ಗಳಿಸುತ್ತದೆ.

ಸ್ನೇಹಿತರೇ,

ಕೊರೊನಾ ನಮ್ಮ ಅಭಿವೃದ್ದಿಯ ವೇಗವನ್ನು ಕಡಿಮೆ ಮಾಡಿರಬಹುದು. ಆದರೆ ದೇಶದ ಅತ್ಯಂತ ದೊಡ್ದ ಸತ್ಯವೆಂದರೆ ಭಾರತವು ಲಾಕ್ ಡೌನ್ ದಾಟಿ ಅನ್ ಲಾಕ್ ಹಂತಕ್ಕೆ ಪ್ರವೇಶಿಸಿದೆ ಎಂಬುದು. ಅನ್ ಲಾಕ್ ಹಂತ 1 ರಲ್ಲಿ ಆರ್ಥಿಕತೆಯ ಬಹಳ ದೊಡ್ದ ಭಾಗವನ್ನು ತೆರೆಯಲಾಗಿದೆ. ಜೂನ್ 8 ರ ಬಳಿಕ ಇನ್ನೂ ಬಹಳಷ್ಟು ಕ್ಷೇತ್ರಗಳು ತೆರೆಯಲ್ಪಡಲಿವೆ. ಅಂದರೆ ಬೆಳವಣಿಗೆ ಮರಳಿ ಆರಂಭವಾಗಿದೆ.

ಕೊರೊನಾ ವೈರಸ್ ತನ್ನ ಬಾಹುಗಳನ್ನು ವಿಶ್ವದ ಸುತ್ತ ಹರಡುತ್ತಿರುವಾಗ ಇಂದು ನಾವು ಇದನ್ನೆಲ್ಲ ಮಾಡಲು ಸಾಧ್ಯವಾಗುತ್ತಿದೆ. ಭಾರತವು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಂಡಿದೆ. ನಾವು ನಮ್ಮ ಪರಿಸ್ಥಿತಿಯನ್ನು ವಿಶ್ವದ ಇತರ ದೇಶಗಳ ಜೊತೆ ಹೋಲಿಸಿಕೊಂಡರೆ , ಭಾರತದಲ್ಲಿ ಲಾಕ್ ಡೌನ್ ಪರಿಣಾಮ ಹೇಗೆ ವ್ಯಾಪಕವಾಯಿತು ಎಂಬುದನ್ನು ನಾವು ಕಾಣಬಹುದಾಗಿದೆ. ಕೊರೊನಾ ವಿರುದ್ದ ಹೋರಾಡಲು ಭಾರತ ಭೌತಿಕ ಸಂಪನ್ಮೂಲಗಳನ್ನು ತಯಾರು ಮಾಡಿದ್ದು ಮಾತ್ರವಲ್ಲ ಅದು ತನ್ನ ಮಾನವ ಸಂಪನ್ಮೂಲಗಳನ್ನೂ ಉಳಿಸಿಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಮುಂದೇನು ಎಂಬ ಪ್ರಶ್ನೆ ಬಂದಿದೆ. ಕೈಗಾರಿಕೆಗಳ ನಾಯಕರಾಗಿ, ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ- ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿರಬಹುದು. ಈಗ ಸರಕಾರ ಏನು ಮಾಡಬಹುದು ? ಎಂಬುದಾಗಿ. ಆತ್ಮನಿರ್ಭರ ಭಾರತದ ಬಗ್ಗೆಯೂ ನಿಮಗೆ ಕೆಲವು ಪ್ರಶ್ನೆಗಳಿರಬಹುದು. ಇದು ಬಹಳ ಸಹಜ ಮತ್ತು ಸರಿಯಾದುದು ಕೂಡಾ.

ಸ್ನೇಹಿತರೇ,

ಕೊರೊನಾ ವಿರುದ್ದ ಆರ್ಥಿಕತೆಗೆ ಚೇತರಿಕೆ ನೀಡುವುದು ನಮ್ಮ ಅತಿ ಮುಖ್ಯ ಆದ್ಯತೆಗಳಲ್ಲಿ ಒಂದು. ಇದಕ್ಕಾಗಿ ಸರಕಾರ ತಕ್ಷಣ ಕೈಗೊಳ್ಳಬೇಕಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಮತ್ತು ಇದರ ಜೊತೆಗೆ , ಅಂತಹ ನಿರ್ಧಾರಗಳನ್ನು ದೇಶಕ್ಕೆ ಧೀರ್ಘಾವಧಿಯಲ್ಲಿ ಸಹಾಯವಾಗುವಂತೆ ಕೈಗೊಳ್ಳಲಾಗುತ್ತದೆ.

ಸ್ನೇಹಿತರೇ,

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾವು ಬಡವರಿಗೆ ತಕ್ಷಣಕ್ಕೆ ಪ್ರಯೋಜನಗಳನ್ನು ಒದಗಿಸುವಲ್ಲಿ ಬಹಳ ಸಹಾಯ ಮಾಡಿತು. ಈ ಯೋಜನೆಯಡಿ 74 ಕೋಟಿ ಫಲಾನುಭವಿಗಳಿಗೆ ಪಡಿತರವನ್ನು ಒದಗಿಸಲಾಯಿತು. ವಲಸೆ ಕಾರ್ಮಿಕರಿಗೆ ಉಚಿತ ರೇಶನ್ ಒದಗಿಸಲಾಯಿತು. ಇದಲ್ಲದೆ ಬಡ ಕುಟುಂಬಗಳಿಗೆ ಇದುವರೆಗೆ ಐವತ್ತಮೂರು ಸಾವಿರ ಕೋ.ರೂ.ಗಳ ಹಣಕಾಸು ಸಹಾಯ ನೀಡಲಾಯಿತು. ಮಹಿಳೆಯರಿರಲಿ, ದಿವ್ಯಾಂಗರಿರಲಿ, ಹಿರಿಯರಿರಲಿ, ಅಥವಾ ಕಾರ್ಮಿಕರಿರಲಿ , ಇದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆದರು. ಲಾಕ್ ಡೌನ್ ನಲ್ಲಿ ಸರಕಾರ 8 ಕೋಟಿಗೂ ಅಧಿಕ ಅನಿಲ ಸಿಲಿಂಡರುಗಳನ್ನು ಬಡವರಿಗಾಗಿ ಒದಗಿಸಿತು. ಅದೂ ಉಚಿತವಾಗಿ. ಇದೆಲ್ಲಕ್ಕಿಂತ ಹೆಚ್ಚಾಗಿ ಸರಕಾರವು ಖಾಸಗಿ ವಲಯದ 50 ಲಕ್ಷ ಸಿಬ್ಬಂದಿಗಳ ಖಾತೆಗೆ 24 ಶೇಕಡಾ ಇ.ಪಿ.ಎಫ್. ದೇಣಿಗೆಯನ್ನು ಜಮಾ ಮಾಡಿತು. ಸುಮಾರು 800 ಕೋ.ರೂ. ಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.

ಸ್ನೇಹಿತರೇ,

ಸ್ವಾವಲಂಬೀ ಭಾರತ ನಿರ್ಮಾಣ ಮಾಡಲು ಐದು ವಿಷಯಗಳು ಬಹಳ ಮುಖ್ಯ. ಭಾರತವನ್ನು ಮತ್ತೆ ತ್ವರಿತಗತಿಯ ಅಭಿವೃದ್ದಿ ಪಥಕ್ಕೆ ತರಲು- ಇಚ್ಚೆ, ಒಳಗೊಳ್ಳುವಿಕೆ, ಹೂಡಿಕೆ , ಮೂಲಸೌಕರ್ಯ ಮತ್ತು ಅನ್ವೇಷಣೆಗಳು ಬೇಕು. ಇತ್ತೀಚೆಗೆ ಕೈಗೊಂಡ ಧೈರ್ಯದ ನಿರ್ಧಾರಗಳಲ್ಲಿ ಇದರ ಹೊಳಹುಗಳನ್ನು ನೀವು ಕಾಣಬಹುದು. ಈ ನಿರ್ಧಾರಗಳೊಂದಿಗೆ ನಾವು ಪ್ರತೀ ವಲಯವನ್ನೂ ಭವಿಷ್ಯಕ್ಕೆ ಸಿದ್ದ ಮಾಡಿಟ್ಟಿದ್ದೇವೆ. ಹೀಗಾಗಿ ಭಾರತವಿಂದು ಹೊಸ ಬೆಳವಣಿಗೆಯ ಭವಿಷ್ಯತ್ತಿನತ್ತ ದೊಡ್ಡ ಹೆಜ್ಜೆ ಇಡಲು ಸಿದ್ದವಾಗಿದೆ. ಸ್ನೇಹಿತರೇ, ಸುಧಾರಣೆಗಳು ನಮಗೆ ಯಾದೃಚ್ಚಿಕವಾದವಲ್ಲ, ಅಥವಾ ಅಲ್ಲಲ್ಲಿ ಮಾತ್ರವೇ ಆಗಿರುವಂತಹವಲ್ಲ. ನಮಗೆ ಸುಧಾರಣೆಗಳೆಂದರೆ ಅವು ವ್ಯವಸ್ಥಿತ, ಯೋಜನಾಬದ್ಧ, ಸಮಗ್ರ , ಅಂತರ್ ಸಂಪರ್ಕಿತ ಮತ್ತು ಭವಿಷ್ಯವಾದೀ ಪ್ರಕ್ರಿಯೆಗಳು.

ನಮಗೆ ಸುಧಾರಣೆಗಳೆಂದರೆ ನಿರ್ಧಾರ ಕೈಗೊಳ್ಳುವ ಛಾತಿ ಮತ್ತು ಅವುಗಳನ್ನು ತಾರ್ಕಿಕ ಮುಕ್ತಾಯದತ್ತ ಕೊಂಡೊಯ್ಯುವುದು. ಅದು ಐ.ಬಿ.ಸಿ. ಇರಲಿ, ಬ್ಯಾಂಕ್ ವಿಲಯನ ಇರಲಿ, ಜಿ.ಎಸ್.ಟಿ. , ಮುಖ ರಹಿತ ಆದಾಯ ತೆರಿಗೆ ಮೌಲ್ಯಮಾಪನ ಇರಲಿ, ನಾವು ಸದಾ ವ್ಯವಸ್ಥೆಗಳಲ್ಲಿ ಸರಕಾರದ ಮಧ್ಯಪ್ರವೇಶವನ್ನು ಕಡಿಮೆ ಮಾಡುವುದಕ್ಕೆ ಒತ್ತು ಕೊಟ್ಟಿದೇವೆ. ಮತ್ತು ಖಾಸಗಿ ಉದ್ಯಮಗಳಿಗಾಗಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತಿದ್ದೇವೆ. ಈ ಕಾರಣಕ್ಕಾಗಿ ಸರಕಾರವು ಇಂತಹ ನೀತಿ ಸುಧಾರಣಾ ನಿರ್ದಾರಗಳನ್ನು ಕೈಗೊಳ್ಳುತ್ತಿದೆ. ನಾನು ಕೃಷಿ ವಲಯದ ಬಗ್ಗೆ ಮಾತನಾಡುವುದಾದರೆ , ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ಮಾಡಲಾದ ನಿಯಮ ಮತ್ತು ನಿಯಂತ್ರಣಾವಳಿಗಳು ರೈತರನ್ನು ಮಧ್ಯವರ್ತಿಗಳ ಕರುಣೆಗೆ ಒಳಗಾಗುವಂತಹ ಸ್ಥಿತಿಯನ್ನು ತಂದಿದ್ದವು. ರೈತರು ತಮ್ಮ ಉತ್ಪನ್ನ ಮಾರಾಟ ಮಾಡುವುದಕ್ಕೆ ಸಂಬಂಧಿಸಿ ನಿಯಮಗಳು ಕಠಿಣವಾಗಿದ್ದವು. ನಮ್ಮ ಸರಕಾರ ದಶಕಗಳಿಂದ ರೈತರಿಗೆ ಆಗುತ್ತಿದ್ದ ಅಂತಹ ಅನ್ಯಾಯವನ್ನು ತೊಡೆದು ಹಾಕುವ ಧೈರ್ಯ ತೋರಿತು.

ಎ.ಪಿ.ಎಂ.ಸಿ. ಕಾಯ್ದೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತಂದ ಬಳಿಕ , ಈಗ ರೈತರು ತಮ್ಮ ಹಕ್ಕುಗಳನ್ನು ಪಡೆಯಲಾರಂಭಿಸಿದ್ದಾರೆ. . ಅವರು ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ , ಯಾವಾಗ ಬೇಕಾದರೂ ಮಾರಾಟ ಮಾಡಬಹುದು. ಈಗ ರೈತರು ತಮ್ಮ ಕೃಷ್ಯುತ್ಪನ್ನಗಳನ್ನು ದೇಶದ ಯಾವ ರಾಜ್ಯಕ್ಕಾದರೂ ಕೊಂಡೊಯ್ದು ಮಾರಾಟ ಮಾಡಬಹುದು. ದಾಸ್ತಾನುಗಾರಗಳಲ್ಲಿ ಇಟ್ಟ ಆಹಾರ ಧಾನ್ಯಗಳು, ಕೃಷಿ ಉತ್ಪನ್ನಗಳನ್ನು ಇಲೆಕ್ಟ್ರಾನಿಕ್ ವ್ಯಾಪಾರದ ಮೂಲಕ ಮಾರಾಟ ಮಾಡಬಹುದು. ಸುಮ್ಮನೆ ಕಲ್ಪಿಸಿಕೊಳ್ಳಿ,! . ಎಷ್ಟೊಂದು ಹೊಸ ಹಾದಿಗಳು ಕೃಷಿ-ವ್ಯಾಪಾರದಲ್ಲಿ ತೆರೆದುಕೊಳ್ಳುತ್ತಿವೆ!. ಸ್ನೇಹಿತರೇ, ಅದೇ ರೀತಿ. ನಮ್ಮ ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು , ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರ್ಮಿಕ ಸುಧಾರಣೆಗಳನ್ನೂ ಮಾಡಲಾಗಿದೆ.

ವ್ಯೂಹಾತ್ಮಕವಲ್ಲದ ವಲಯಗಳಲ್ಲಿ ಇದುವರೆಗೆ ಖಾಸಗಿ ವಲಯಕ್ಕೆ ಅವಕಾಶಗಳಿಲ್ಲದಿರುವ ಕ್ಷೇತ್ರಗಳನ್ನು ಈಗ ಖಾಸಗಿಯವರಿಗೆ ತೆರೆಯಲಾಗಿದೆ. ನಿಮ್ಮ ಗಮನಕ್ಕೂ ಬಂದಿರಬಹುದು, ನಾವು ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಅದೂ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್’ ಹಾದಿಯಲ್ಲಿ ನಡೆಯುತ್ತಾ ಇವುಗಳನ್ನು ಮಾಡಿದ್ದೇವೆ. ಸ್ನೇಹಿತರೇ , ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕಲ್ಲಿದ್ದಲು ಸಂಪತ್ತು ಹೊಂದಿರುವ ರಾಷ್ಟ್ರಗಳಲ್ಲಿ ಮೂರನೇಯದ್ದು ! ಮತ್ತು ಭಾರತವು ನಿಮ್ಮಂತಹ ಧೈರ್ಯಶಾಲೀ ಮತ್ತು ಪರಿಶ್ರಮೀ ಉದ್ಯಮ ನಾಯಕರನ್ನು ಹೊಂದಿದೆ. ಹಾಗಿರುವಾಗ ಯಾಕೆ ಕಲ್ಲಿದ್ದಲು ಹೊರಗಿನಿಂದ ಬರಬೇಕು?. ಕಲ್ಲಿದ್ದಲನ್ನು ಯಾಕೆ ಆಮದು ಮಾಡಬೇಕು? . ಕೆಲವೊಮ್ಮೆ ಸರಕಾರ ದಾರಿಯಲ್ಲಿ ನಿಲ್ಲುತ್ತದೆ ಮತ್ತು ಕೆಲವೊಮ್ಮೆ ನೀತಿಗಳಲ್ಲಿ ನಿಲ್ಲುತ್ತದೆ. ಈಗ ಕಲ್ಲಿದ್ದಲನ್ನು ಈ ಅಡೆ ತಡೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ.

ಈಗ ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯಿಕ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆಂಶಿಕವಾಗಿ ಅನ್ವೇಷಿಸಿದ ಬ್ಲಾಕುಗಳ ಮಂಜೂರಾತಿಗೂ ಅನುಮತಿ ನೀಡಲಾಗಿದೆ. ಅದೇ ರೀತಿ ಖನಿಜ ಗಣಿಗಾರಿಕೆಯಲ್ಲೂ ಈಗ ಕಂಪೆನಿಗಳು ಗಣಿಗಾರಿಕೆ ಕೆಲಸವನ್ನು ಅನ್ವೇಷಣೆಯ ಜೊತೆ ಜೊತೆಯಲ್ಲಿಯೇ ನಡೆಸಬಹುದು. ಈ ವಲಯದಲ್ಲಿಯ ಅನುಭವಿಗಳು ಈ ನಿರ್ಧಾರಗಳ ದೂರಗಾಮಿ ಪರಿಣಾಮಗಳ ಬಗ್ಗೆ ಸ್ಪಷ್ಟವಾದ ಅರಿವು ಹೊಂದಿದ್ದಾರೆ.

ಸ್ನೇಹಿತರೇ,

ಸರಕಾರ ಸಾಗುತ್ತಿರುವ ದಿಕ್ಕು , ಅದು ಗಣಿಗಾರಿಕೆ ವಲಯವಿರಲಿ, ಇಂಧನ ಕ್ಷೇತ್ರ, ಸಂಶೋಧನಾ ಮತ್ತು ತಂತ್ರಜ್ಞಾನ ಕ್ಷೇತ್ರವೇ ಇರಲಿ, ಕೈಗಾರಿಕೆಗಳು ಮತ್ತು ಯುವಕರಿಗೆ ಪ್ರತೀ ಕ್ಷೇತ್ರದಲ್ಲಿಯೂ ಅವಕಾಶಗಳು ಲಭಿಸುತ್ತವೆ. ಇದರಿಂದಲೂ ಮುಂದೆ ಹೋಗಿ, ಈಗ ದೇಶದ ವ್ಯೂಹಾತ್ಮಕ ವಲಯಗಳಲ್ಲಿ ಖಾಸಗಿಯವರ ಪಾಲುದಾರಿಕೆ ವಾಸ್ತವವಾಗುತ್ತಿದೆ. ನೀವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಾಗಿದ್ದರೆ , ಅಥವಾ ಅಣು ಶಕ್ತಿ ವಲಯದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡುವವರಾಗಿದ್ದರೆ ಅಲ್ಲಿ ನಿಮಗೆ ಸಂಪೂರ್ಣವಾಗಿ ತೆರೆದಿರುವ ಹಲವಾರು ಅವಕಾಶಗಳಿವೆ.

ಸ್ನೇಹಿತರೇ,

ನಿಮಗೆಲ್ಲರಿಗೂ ಗೊತ್ತಿದೆ, ಎಂ.ಎಸ್.ಎಂ.ಇ. ವಲಯದ ಲಕ್ಷಾಂತರ ಘಟಕಗಳು ನಮ್ಮ ದೇಶದ ಆರ್ಥಿಕತೆಯ ಇಂಜಿನುಗಳಿದ್ದಂತೆ. ಅವು ದೇಶದ ಜಿ.ಡಿ.ಪಿ.ಗೆ ದೊಡ್ದ ಕಾಣಿಕೆ ಕೊಡುತ್ತವೆ. ಈ ಕೊಡುಗೆ 30 ಶೇಕಡಾದಷ್ಟಿದೆ. ಬಹಳ ಧೀರ್ಘ ಕಾಲದಿಂದ ಉದ್ಯಮವು ಎಂ.ಎಸ್.ಎಂ.ಇ. ಯ ವ್ಯಾಖ್ಯೆಯನ್ನು ಸ್ಪಷ್ಟ ಮಾಡುವಂತೆ ಆಗ್ರಹಿಸುತ್ತಲೇ ಬಂದಿತ್ತು. ಅದನ್ನೀಗ ಈಡೇರಿಸಲಾಗಿದೆ.ಇದು ಎಂ.ಎಸ್.ಎಂ.ಇ. ಗಳು ಯಾವುದೇ ಚಿಂತೆ ಇಲ್ಲದೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಮತು ಅವು ಎಂ.ಎಸ್.ಎಂ.ಇ. ಸ್ಥಾನಮಾನಗಳನ್ನು ಕಾಪಾಡಿಕೊಳ್ಳಲು ಇತರ ಹಾದಿಗಳಲ್ಲಿ ನಡೆಯಬೇಕಿಲ್ಲ. 200 ಕೋ.ರೂ.ಗಳವರೆಗಿನ ಸರಕಾರಿ ಖರೀದಿಗೆ ಜಾಗತಿಕ ಟೆಂಡರುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ದೇಶದ ಎಂ.ಎಸ್. ಎಂ.ಇ. ವಲಯದಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಜನರಿಗೆ ಪ್ರಯೋಜನವಾಗಲಿದೆ. ಇದು ನಮ್ಮ ಸಣ್ಣ ಕೈಗಾರಿಕೆಗಳಿಗೆ ಇನ್ನಷ್ಟು ಅವಕಾಶಗಳನ್ನು ತೆರೆಯಲಿದೆ. ಈ ರೀತಿಯಲ್ಲಿ ಆತ್ಮನಿರ್ಭರ ಭಾರತ್ ಪ್ಯಾಕೇಜ್ ಎಂ.ಎಸ್.ಎಂ.ಇ. ವಲಯದ ಇಂಜಿನಿಗೆ ಇಂಧನವಾಗಲಿದೆ.

ಸ್ನೇಹಿತರೇ,

ಈ ನಿರ್ಧಾರಗಳ ಪ್ರಸ್ತುತತೆಯನ್ನು ತಿಳಿದುಕೊಳ್ಳಬೇಕಿದ್ದರೆ , ಇಂದಿನ ಜಾಗತಿಕ ಪರಿಸ್ಥಿತಿಗಳನ್ನು ನೋಡುವುದು ಮತ್ತು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ವಿಶ್ವದ ಎಲ್ಲಾ ದೇಶಗಳೂ ಪರಸ್ಪರ ಬೆಂಬಲವನ್ನು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನಿರೀಕ್ಷೆ ಮಾಡುತ್ತಿವೆ. ವಿಶ್ವದಲ್ಲಿ ಒಬ್ಬರಿಗೊಬ್ಬರು ಅವಶ್ಯಕತೆ ಬಹಳ ಹೆಚ್ಚಿದೆ. ಆದರೆ ಹಳೆಯ ಚಿಂತನೆ, ಹಳೆಯ ಸಂಪ್ರದಾಯಗಳು, ಮತ್ತು ಹಳೆಯ ನೀತಿಗಳು ಎಷ್ಟು ಸಮರ್ಪಕ ಎಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೊಸ ಆಲೋಚನೆಗಳು ಸಹಜವಾಗಿಯೇ ನಡೆಯುತ್ತಿವೆ. ಇಂತಹ ಸಮಯದಲ್ಲಿ ಭಾರತದಿಂದ ವಿಶ್ವದ ಅಪೇಕ್ಷೆ ಗಳು ಇನ್ನಷ್ಟು ಹೆಚ್ಚಾಗಿವೆ. ಇಂದು ಭಾರತದ ಮೇಲೆ ವಿಶ್ವದ ನಂಬಿಕೆಯೂ ಹೆಚ್ಚಿದೆ ಮತ್ತು ಹೊಸ ಭರವಸೆಗಳೂ ಮೂಡಿವೆ. ಈ ಕೊರೋನಾ ಬಿಕ್ಕಟ್ಟಿನ ನಡುವೆ , ಒಂದು ದೇಶ ಇನ್ನೊಂದು ದೇಶಕ್ಕೆ ಸಹಾಯ ಮಾಡಲು ಕಷ್ಟದ ಸ್ಥಿತಿ ಇರುವಾಗ , ಭಾರತವು 150 ಕ್ಕೂ ಅಧಿಕ ದೇಶಗಳಿಗೆ ವೈದ್ಯಕೀಯ ಪೂರೈಕೆಗಳನ್ನು ಕಳುಹಿಸುವ ಮೂಲಕ ನೆರವಿನ ಹಸ್ತ ಚಾಚಿದೆ.

ಸ್ನೇಹಿತರೇ,

ವಿಶ್ವವಿಂದು ನಂಬಿಕೆ ಇಡಬಹುದಾದ , ವಿಶ್ವಾಸಾರ್ಹ ಭಾಗೀದಾರರನ್ನು ಭಾರತದಲ್ಲಿ ಹುಡುಕುತ್ತಿದೆ. ಅಲ್ಲಿ ಭಾರೀ ಅವಕಾಶಗಳು ಮತ್ತು ಶಕ್ತಿ ಹಾಗು ಸಾಮರ್ಥ್ಯಗಳಿವೆ.

ಇಂದು, ನೀವೆಲ್ಲರೂ , ಭಾರತದ ಕೈಗಾರಿಕಾ ವಲಯವು, ವಿಶ್ವವು ಭಾರತದ ವಿಷಯದಲ್ಲಿ ಬೆಳೆಸಿಕೊಳ್ಳುತ್ತಿರುವ ನಂಬಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.ಇದು ನಿಮ್ಮೆಲ್ಲರ ಜವಾಬ್ದಾರಿ, ಇದು ಸಿ.ಐ.ಐ.ಯಂತಹ ಸಂಘಟನೆಗಳ ಜವಾಬ್ದಾರಿಯೂ ಹೌದು. ಸಿ.ಐ.ಐ.ಯು “ ಭಾರತದ ಉತ್ಪಾದನೆ” ಗೆ ಸಂಬಂಧಿಸಿದ ನಂಬಿಕೆ , ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಖಾತ್ರಿಪಡಿಸಬೇಕು. ನೀವು ಎರಡು ಹೆಜ್ಜೆ ಮುಂದಿಟ್ಟರೆ , ಸರಕಾರ ನಾಲ್ಕು ಹೆಜ್ಜೆ ಮುಂದಿಟ್ಟು ನಿಮ್ಮನ್ನು ಬೆಂಬಲಿಸುತ್ತದೆ. ಪ್ರಧಾನ ಮಂತ್ರಿಯಾಗಿ , ನಾನು ನಿಮಗೆ ಭರವಸೆ ಕೊಡುತ್ತೇನೆ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂಬುದಾಗಿ. ಇದು ಭಾರತದ ಕೈಗಾರಿಕೆಗಳಿಗಾಗಿ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುವ ನಿಲುವು. ನನ್ನನ್ನು ನಂಬಿ.; “ಬೆಳವಣಿಗೆಯನ್ನು ಮರಳಿ ತರುವುದು” ಕಷ್ಟವಲ್ಲ. ಮತ್ತು ನಿಮ್ಮೆದುರು ಇರುವ ಅತ್ಯಂತ ದೊಡ್ದ ಸಂಗತಿ ಎಂದರೆ, ಭಾರತೀಯ ಕೈಗಾರಿಕೆಗಳು ಸ್ಪಷ್ಟವಾದ ಹಾದಿಯನ್ನು ಹೊಂದಿವೆ. ಅಂದರೆ ಆತ್ಮ ನಿರ್ಭರ ಭಾರತದ ಹಾದಿ. ಸ್ವಾವಲಂಬಿ ಭಾರತದ ಹಾದಿ. ಸ್ವಾವಲಂಬಿ ಭಾರತ ಎಂದರೆ ನಾವು ಬಲಿಷ್ಟರಾಗುವುದು ಮತ್ತು ವಿಶ್ವದ ಜೊತೆ ಸೇರುವುದು.

ಸ್ವಾವಲಂಬಿ ಭಾರತ ವಿಶ್ವದ ಆರ್ಥಿಕತೆಯೊಂದಿಗೆ ಪೂರ್ಣವಾಗಿ ಮಿಳಿತವಾಗಿರುತ್ತದೆ. ಮತ್ತು ಅದಕೆ ಪೂರಕವಾಗಿ ಬೆಂಬಲಿಸುವಂತಿರುತ್ತದೆ. ಆದರೆ ಸದಾ ನೆನಪಿಡಿ, ಸ್ವಾವಲಂಬಿ ಭಾರತ ಎಂದರೆ ವ್ಯೂಹಾತ್ಮಕ ವಲಯಗಳಲ್ಲೂ ನಾವು ಯಾರನ್ನೂ ಅವಲಂಬಿಸುವಂತಿರಬಾರದು. ಇದು ಭಾರತದಲ್ಲಿ ಬಲಿಷ್ಟ ಉದ್ಯಮವನ್ನು ಕಟ್ಟುವ, ಬೆಳೆಸುವ ಇರಾದೆಯದ್ದು,ಮತ್ತು ಅವು ಜಾಗತಿಕ ಶಕ್ತಿಯಾಗಿ ಬೆಳೆಯುವಂತೆ ಅದು ನೋಡಿಕೊಳ್ಳುತ್ತದೆ. ಅದು ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತದೆ. ಅದು ಜನರನ್ನು ಹೊರಬರುವಂತೆ ಸಶಕ್ತೀರಣಗೊಳಿಸುತ್ತದೆ. ಮತ್ತು ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಅಂಶಗಳನ್ನು ನಿರ್ಧರಿಸುತ್ತದೆ. ನಾವೀಗ ಬಲಿಷ್ಟ ಸ್ಥಳೀಯ ಪೂರೈಕೆ ಸರಪಳಿಯನ್ನು ನಿರ್ಮಾಣ ಮಾಡುವಲ್ಲಿ ಹೂಡಿಕೆ ಮಾಡಬೇಕಾಗಿದೆ, ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾಲನ್ನು ಬಲಗೊಳಿಸುತ್ತದೆ. ಸಿ.ಐ.ಐ.ಯಂತಹ ದೈತ್ಯ ಸಂಸ್ಥೆಗಳು ಮುಂದೆ ಬಂದು ಈ ಆಂದೋಲನದಲ್ಲಿ ಹೊಸ ಪಾತ್ರವನ್ನು ವಹಿಸಬೇಕಾಗುತ್ತದೆ. ಈಗ ನೀವು ಭಾರತೀಯ , ದೇಶೀಯತೆಯ ಪ್ರೇರಣೆಗಳ ಚಾಂಪಿಯನ್ ಗಳಾಗಿ ಮುಂದೆ ಬರಬೇಕು. ನೀವು ದೇಶೀಯ ಕೈಗಾರಿಕೆಗಳ ಪುನಶ್ಚೇತನಕ್ಕೆ ಅನುಕೂಲ ಮಾಡಿಕೊಡಬೇಕು, ಮುಂದಿನ ಹಂತದ ಬೆಳವಣಿಗೆಗೆ ಸಹಾಯ ಮತ್ತು ನೆರವು ನೀಡಬೇಕು ಮತ್ತು ನೀವು ಕೈಗಾರಿಕೆಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಸಹಾಯ ಮಾಡಬೇಕು.

ಸ್ನೇಹಿತರೇ,

ಈಗ ದೇಶದಲ್ಲಿ “ ಭಾರತದಲ್ಲಿ ತಯಾರಾದದ್ದು” ಎಂದರೆ ’ವಿಶ್ವಕ್ಕಾಗಿ ತಯಾರಾದದ್ದು” ಎಂಬಂತಹ ಉತ್ಪಾದನೆಗಳನ್ನು ತಯಾರಿಸಬೇಕಾದಂತಹ ಅವಶ್ಯಕತೆ ಇದೆ. ನಾವು ದೇಶದ ಆಮದು ಪ್ರಮಾಣವನ್ನು ಹೇಗೆ ಕಡಿಮೆ ಮಾಡಬಹುದು. ? . ಯಾವ ಹೊಸ ಗುರಿಗಳನ್ನು ನಿಗದಿ ಮಾಡಬಹುದು?. ನಾವು ಎಲ್ಲಾ ವಲಯಗಳಲ್ಲಿಯೂ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಗಳನ್ನು ನಿಗದಿ ಮಾಡಬೇಕು. ನಾನು ಕೈಗಾರಿಕೆಗಳಿಗೆ ಈ ಸಂದೇಶವನ್ನು ನೀಡಲು ಇಚ್ಚಿಸುತ್ತೇನೆ. ಮತ್ತು ಇಡೀ ದೇಶವೂ ನಿಮ್ಮಿಂದ ಇದನ್ನೇ ನಿರೀಕ್ಷಿಸುತ್ತದೆ.

ಸ್ನೇಹಿತರೇ,

ಭಾರತದಲ್ಲಿ ಉತ್ಪಾದನೆಯನ್ನು ಮಾಡಲು, ಮೇಕ್ ಇನ್ ಇಂಡಿಯಾ ಒಂದು ಉದ್ಯೋಗ ಜನಕ ಮಾಧ್ಯಮ. ನಿಮ್ಮಂತಹ ಹಲವು ವಿವಿಧ ಕೈಗಾರಿಕೆಗಳ ಸಂಘಟನೆಗಳ ಜೊತೆ ಸಮಾಲೋಚಿಸಿ ಹಲವು ಆದ್ಯತಾ ರಂಗಗಳನ್ನು ಗುರುತಿಸಲಾಗಿದೆ. ಈ ವಲಯಗಳಲ್ಲಿ ಕೆಲಸ ಈಗಾಗಲೇ ಆರಂಭಿಸಲಾಗಿದೆ. ಪೀಠೋಪಕರಣಗಳು, ಹವಾನಿಯಂತ್ರಕಗಳು, ಚರ್ಮ ಕೈಗಾರಿಕೆ ಮತ್ತು ಪಾದರಕ್ಷೆ ಉದ್ಯಮಗಳನ್ನು ಇದಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ನಾವು ನಮ್ಮ ಹವಾ ನಿಯಂತ್ರಕಗಳ ಬೇದಿಕೆಯ 30 % ನಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.ಇದನ್ನು ನಾವು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಕಡಿಮೆ ಮಾಡಿಕೊಳ್ಳಬೇಕು. ಅದೇ ರೀತಿ ವಿಶ್ವದಲ್ಲಿ ಚರ್ಮೋತ್ಪಾದನೆಯಲ್ಲಿ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿದ್ದರೂ ಜಾಗತಿಕ ರಫ್ತಿನಲ್ಲಿ ನಮ್ಮ ಪಾಲು ಬಹಳ ಕಡಿಮೆ.

ಸ್ನೇಹಿತರೇ,

ನಾವು ಉತ್ತಮ ಸಾಧನೆ ತೋರಿಸಬಹುದಾದ ಅನೇಕ ವಲಯಗಳಿವೆ. ಕಳೆದ ವರ್ಷಗಳಲ್ಲಿ ವೇಗದ ರೈಲುಗಳಾದ ವಂದೇ ಭಾರತ್ ರೈಲನ್ನು ನಿಮ್ಮಂತಹ ಸ್ನೇಹಿತರ ಸಹಾಯ ಪಡೆದು ಭಾರತದಲ್ಲಿಯೇ ನಿರ್ಮಾಣ ಮಾಡಲಾಯಿತು. ಭಾರತವಿಂದು ಮೆಟ್ರೋ ಕೋಚ್ ಗಳನ್ನು ರಫ್ತು ಮಾಡುತ್ತಿದೆ. ಅದೇ ರೀತಿ ಹಲವು ಏರಿಯಾಗಳಲ್ಲಿ ನಮ್ಮ ಆಮದು ಅವಲಂಬನೆ ಇಳಿಕೆ ಮಾಡಲು ಪ್ರಯತ್ನಗಳು ನಡೆದಿವೆ. ಅದು ಮೊಬೈಲ್ ಫೋನು ತಯಾರಿಕೆ ಇರಲಿ, ಅಥವಾ ರಕ್ಷಣಾ ತಯಾರಿಕಾ ಸಾಮಗ್ರಿ ಇರಲಿ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಗಳು ಸಾಗಿವೆ. ನಾನು ಹೆಮ್ಮೆಯಿಂದ ಹೇಳುತ್ತೇನೆ ಮೂರು ತಿಂಗಳಲ್ಲಿ ನೀವು ವೈಯಕ್ತಿಕ ರಕ್ಷಣಾ ಕವಚ ನಿರ್ಮಾಣ ಮಾಡಿದ್ದೀರಿ. ಪಿ.ಪಿ.ಇ. ಕೈಗಾರಿಕೆ ಇಂದು ಸಾವಿರಾರು ಕೋಟಿ ರೂಪಾಯಿಗಳದ್ದು. ಮೂರು ತಿಂಗಳ ಹಿಂದೆ ಭಾರತದಲ್ಲಿ ಒಂದೇ ಒಂದು ಪಿ.ಪಿ.ಇ. ಕಿಟ್ ತಯಾರಾಗುತ್ತಿರಲಿಲ್ಲ. ಇಂದು ಭಾರತ ದಿನಕ್ಕೆ ಮೂರು ಲಕ್ಷ ಪಿ.ಪಿ.ಇ. ಕಿಟ್ ಉತ್ಪಾದಿಸುತ್ತಿದೆ. ಇದು ನಮ್ಮ ಕೈಗಾರಿಕೋದ್ಯಮದ ಬಲ ಮತ್ತು ಶಕ್ತಿ. ನೀವು ಈ ಸಾಮರ್ಥ್ಯವನ್ನು ಎಲ್ಲಾ , ಪ್ರತೀ ವಲಯದಲ್ಲಿಯೂ ಬಳಸಬೇಕು. ಸಿ.ಐ.ಐ. ಯ ಎಲ್ಲಾ ಸ್ನೇಹಿತರನ್ನು ನಾನು ಕೋರಿಕೊಳ್ಳುವುದೇನೆಂದರೆ ಗ್ರಾಮೀಣ ಆರ್ಥಿಕತೆಯಲ್ಲಿ ಹೂಡಿಕೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಿ, ಮತ್ತು ರೈತರೊಂದಿಗೆ ಸಹಭಾಗಿತ್ವದ ಸಾಧ್ಯತೆಯನ್ನೂ ಅವಲೋಕಿಸಿ. ಈಗ ಗ್ರಾಮಗಳ ಬಳಿಯಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳ ಗುಚ್ಚಗಳಿಗೆ ಅವಶ್ಯ ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಅಲ್ಲಿ ಸಿ.ಐ.ಐ.ಯ ಎಲ್ಲಾ ಸದಸ್ಯರಿಗೆ ಹಲವಾರು ಅವಕಾಶಗಳಿವೆ.

ಸ್ನೇಹಿತರೇ,

ಅದು ಕೃಷಿ ಇರಲಿ, ಮೀನುಗಾರಿಕೆ, ಆಹಾರ ಸಂಸ್ಕರಣೆ , ಪಾದರಕ್ಷೆ ಅಥವಾ ಫಾರ್ಮಾ ಇರಲಿ ಹಲವಾರು ಕ್ಷೇತ್ರಗಳಲ್ಲಿ ಹೊಸ ಅವಕಾಶಗಳ ಗೇಟುಗಳು ನಿಮಗಾಗಿ ತೆರೆದಿವೆ. ನಗರಗಳಲ್ಲಿ ವಲಸೆಗಾರರಿಗೆ ವಸತಿ ಒದಗಿಸಲು ಸರಕಾರ ಘೋಷಿಸಿದ ಬಾಡಿಗೆ ಯೋಜನೆಯಲ್ಲಿ ನೀವೆಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ನಾನು ಆಹ್ವಾನ ನೀಡುತ್ತೇನೆ.

ಸ್ನೇಹಿತರೇ,

ನಮ್ಮ ಸರಕಾರ ಖಾಸಗಿ ವಲಯವು ದೇಶದ ಅಭಿವೃದ್ದಿ ಪಥದ ಪಯಣದಲ್ಲಿ ಜತೆಗಾರನಗಿರಬೇಕೆಂದು ಬಯಸುತ್ತದೆ. ಆತ್ಮನಿರ್ಭರ ಭಾರತ ಆಂದೋಲನಕ್ಕೆ ಸಂಬಂಧಿಸಿದ ನಿಮ್ಮ ಪ್ರತೀ ಆವಶ್ಯಕತೆಯ ಬಗ್ಗೆಯೂ ಗಮನ ಹರಿಸಲಾಗುತ್ತದೆ. ನಾನು ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಎಲ್ಲಾ ಭಾಗೀದಾರರ ಜೊತೆಗೂ ಸಂಪರ್ಕದಲ್ಲಿರುತ್ತೇನೆ. ಮತ್ತು ಇದು ಮುಂದುವರೆಯುತ್ತದೆ. ಪ್ರತೀ ವಲಯದ ಬಗ್ಗೆ ವಿವರವಾದ ಅಧ್ಯಯನ ನಡೆಸಿ, ಒಟ್ಟಾಭಿಪ್ರಾಯ ರೂಪಿಸಿ , ಚಿಂತನಾಕ್ರಮವನ್ನು ಅಭಿವೃದ್ದಿಪಡಿಸಿ ಮತ್ತು ದೊಡ್ದದಾಗಿ ಆಲೋಚಿಸಿ ಎಂದು ನಾನು ಕೋರುತ್ತೇನೆ.ನಾವು ಒಟ್ಟು ಸೇರಿ ನಮ್ಮ ದೇಶದ ದಿಕ್ಕು- ದಿಸೆಯನ್ನು ಬದಲು ಮಾಡಬಲ್ಲ ಇನ್ನಷ್ಟು ರಾಚನಿಕ ಸುಧಾರಣೆಗಳನ್ನು ಕೈಗೊಳ್ಳೋಣ.

ನಾವೆಲ್ಲರೂ ಒಟ್ಟಾಗಿ ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುವ. ಸ್ನೇಹಿತರೇ, ಬನ್ನಿ . ದೇಶವನ್ನು ಸ್ವಾವಲಂಬಿ ಮಾಡುವ ಪ್ರತಿಜ್ಞೆ ಸ್ವೀಕರಿಸಿ. ಈ ನಿರ್ಣಯವನ್ನು ಈಡೇರಿಸಲು ನಿಮ್ಮ ಪೂರ್ಣ ಬಲವನ್ನು ಉಪಯೋಗಿಸಿ. ಸರಕಾರ ನಿಮ್ಮೊಂದಿಗೆ ನಿಲ್ಲುತ್ತದೆ, ಮತು ನೀವು ದೇಶದ ಗುರಿಗಳ ಜೊತೆ ನಿಲ್ಲಬೇಕಾಗುತ್ತದೆ. ನೀವು ಯಶಸ್ಸು ಗಳಿಸುತ್ತೀರಿ ಮತ್ತು ದೇಶವು ಹೊಸ ಎತ್ತರಗಳನ್ನು ತಲುಪುತ್ತದೆ. ಹಾಗು ಸ್ವಾವಲಂಬಿಯಾಗುತ್ತದೆ. ನಾನು ಮತ್ತೊಮ್ಮೆ ಸಿ.ಐ.ಐ.ಯನ್ನು 125 ವರ್ಷ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ತುಂಬಾ ಧನ್ಯವಾದಗಳು !!.