ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಆರ್ಮೇನಿಯಾ ನಡುವಿನ ಬಾಹ್ಯಾಕಾಶದ ಶಾಂತಿಯುತ ಬಳಕೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.
ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಏಪ್ರಿಲ್ ನಲ್ಲಿ ಅಂಕಿತ ಹಾಕಲಾಗಿದೆ.
ಈ ತಿಳಿವಳಿಕೆ ಒಪ್ಪಂದವು, ಭೂ ದೂರ ಸಂವೇದಿ, ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ಪಥದರ್ಶನ, ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಶೋಧನೆ, ಬಾಹ್ಯಾಕಾಶ ನೌಕೆಗಳ ಮತ್ತು ಬಾಹ್ಯಾಕಾಶ ವ್ಯವಸ್ಥೆ ಹಾಗೂ ಭೂ ವ್ಯವಸ್ಥೆಗಳ ಬಳಕೆ, ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳು ಸೇರಿದಂತೆ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಆನ್ವಯಿಕಗಳ ಕ್ಷೇತ್ರದ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ.
ಈ ತಿಳಿವಳಿಕೆ ಒಪ್ಪಂದವು ಬಾಹ್ಯಾಕಾಶ ಇಲಾಖೆ/ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಓಎಸ್/ಇಸ್ರೋ) ಮತ್ತು ಆರ್ಮೇನಿಯಾ ಗಣರಾಜ್ಯದ ಶಿಕ್ಷಮ ಮತ್ತು ವಿಜ್ಞಾನ ಸಚಿವಾಲಯದ ರಾಜ್ಯ ಸಮಿತಿಯಿಂದ ಸದಸ್ಯರನ್ನು ಸೇರಿಸಿಕೊಂಡು ಜಂಟಿ ಕಾರ್ಯ ಗುಂಪು ರಚಿಸಲು ಅವಕಾಶ ಕಲ್ಪಿಸುತ್ತದೆ, ಇದು ತಿಳಿವಳಿಕೆ ಒಪ್ಪಂದದ ಅನುಷ್ಠಾನದ ಮಾರ್ಗೋಪಾಯ ಮತ್ತು ಕಾಲಮಿತಿ ಸೇರಿದಂತೆ ಇತರ ಕ್ರೀಯಾ ಯೋಜನೆಗಳ ಕುರಿತು ಕಾರ್ಯಕ್ರಮ ರೂಪಿಸುತ್ತದೆ.
ಇದು ಭೂ ದೂರ ಸಂವೇದಿ; ಉಪಗ್ರಹ ಸಂವಹನ; ಉಪಗ್ರಹ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಪರಿಶೋಧನೆ ಕ್ಷೇತ್ರದಲ್ಲಿ ಹೊಸ ಸಂಶೋಧನಾ ಚಟುವಟಿಕೆಗಳನ್ನು ಮತ್ತು ಆನ್ವಯಿಕಗಳ ಸಾಧ್ಯತೆಗಳನ್ನು ಅನ್ವೇಷಿಸಲು ಉತ್ತೇಜನ ನೀಡುತ್ತದೆ.
ಈ ತಿಳಿವಳಿಕೆ ಒಪ್ಪಂದವು ಮಾನವತೆಯ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಆನ್ವಯಿಕಗಳ ಕ್ಷೇತ್ರದಲ್ಲಿನ ಜಂಟಿ ಚಟುವಟಿಕೆಗಳ ಅಭಿವೃದ್ಧಿಗೆ ಇಂಬು ನೀಡುತ್ತದೆ. ಆ ಮೂಲಕ ದೇಶದ ಎಲ್ಲ ವಲಯಗಳ ಎಲ್ಲ ವರ್ಗದವರಿಗೂ ಇದರ ಲಾಭ ದೊರಕಲಿದೆ.
ಲಭ್ಯವಿರುವ ಸಂಪನ್ಮೂಲದ ಮಿತಿಯೊಳಗೆ, ಆಯಾ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಬಜೆಟ್ ನಿಯಂತ್ರಣಗಳ ರಾಷ್ಟ್ರೀಯ ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟು ಈ ಎಲ್ಲ ಕಾರ್ಯಚಟುವಟಿಕೆ ಕೈಗೊಳ್ಳಲು ಹಣಕಾಸು ನೆರವು ಒದಗಿಸಲು ತಿಳಿವಳಿಕೆ ಒಪ್ಪಂದವು ಆಯಾ ಕಾರ್ಯನಿರ್ವಾಹಕ ಸಂಸ್ಥೆಗಳಿಗೆ ಅವಕಾಶ ಕೊಡುತ್ತದೆ.
ಜಂಟಿ ಯೋಜನೆಗಳು ಮತ್ತು ಕಾರ್ಯಗಳನ್ನು ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಸ್ವರೂಪ ಮತ್ತು ಕ್ಷೇತ್ರೀಯ ಚಟುವಟಿಕೆಗೆ ಅನುಗುಣವಾಗಿ ವಾಣಿಜ್ಯೇತರ ಅಥವಾ ವಾಣಿಜ್ಯದ ಆಧಾರದ ಮೇಲೆ ಮತ್ತು ಪರಸ್ಪರ ಪಾವತಿಯಿಲ್ಲದೆ ಅಥವಾ ಪರಿಹಾರಾತ್ಮಕ ಒಪ್ಪಂದದ ಸಿದ್ಧತೆಗಳಿಗೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ.
ಹಿನ್ನೆಲೆ:
ಆರ್ಮೇನಿಯಾವು ಭಾರತದೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ ಹೊಂದುವ ಆಸಕ್ತಿಯನ್ನು ವ್ಯಕ್ತಪಡಿಸಿತ್ತು. ಆ ಪ್ರಕಾರವಾಗಿ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಪ್ರಕ್ರಿಯೆಗಳಿಗಾಗಿ ಬಾಹ್ಯಾಕಾಶ ಸಹಕಾರವನ್ನು ಒದಗಿಸಲು ತಿಳಿವಳಿಕೆ ಒಪ್ಪಂದದ ಚೌಕಟ್ಟಿನ ಮಾದರಿಗೆ 2017ರ ಏಪ್ರಿಲ್ ನಲ್ಲಿ ಆರ್ಮೇನಿಯಾ ಕಡೆಯಿಂದ ಸಮ್ಮತಿ ವ್ಯಕ್ತವಾಗಿತ್ತು. ಆ ಪ್ರಕಾರವಾಗಿ ಭಾರತ ಗಣರಾಜ್ಯ ಮತ್ತು ಆರ್ಮೇನಿಯಾ ಗಣರಾಜ್ಯದ ಸರ್ಕಾರಗಳ ನಡುವೆ ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ ಏರ್ಪಟ್ಟಿತು, ಇದಕ್ಕೆ ಭಾರತದ ಮಾನ್ಯ ಉಪರಾಷ್ಟ್ರಪತಿಗಳ ಭೇಟಿ ವೇಳೆ ಯೆರೇವಾನ್ ನಲ್ಲಿ 2017ರ ಏಪ್ರಿಲ್ 25ರಂದು ಅಂಕಿತ ಹಾಕಲಾಗಿತ್ತು.
*****
KSD/VBA/SH