ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಕೆನಡಾ ನಡುವೆ ಅಂಕಿತ ಹಾಕಲ್ಪಟ್ತ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು. ಈ ಒಡಂಬಡಿಕೆಗೆ ಹೊಸದಿಲ್ಲಿಯಲ್ಲಿ 2018, ಫೆಬ್ರವರಿ 21 ರಂದು ಅಂಕಿತ ಹಾಕಲಾಗಿತ್ತು.
ಈ ತಿಳುವಳಿಕಾ ಒಡಂಬಡಿಕೆ ಭಾರತ ಮತ್ತು ಕೆನಡಾ ನಡುವೆ ಸಂಶೋಧನಾ ಪ್ರಾವೀಣ್ಯತೆ ಮತ್ತು ಕೈಗಾರಿಕಾ-ಶೈಕ್ಷಣಿಕ ಸಹಕಾರ ಪ್ರಧಾನ ಉದ್ದೇಶವಾಗುಳ್ಳ ಗಡಿಯಾಚೆಗಿನ ಸಹಯೋಗವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಇದರಿಂದ ಎರಡೂ ದೇಶಗಳಿಗೆ ಅನ್ವೇಷಣಾ ಕ್ಷೇತ್ರದಲ್ಲಿ ಹೆಚ್ಚಿನ ಲಾಭವಾಗಲಿದೆ.
ಪ್ರತಿಭೆಯನ್ನು ಸೇರಿಸುವ ಮೂಲಕ ಸಹಯೋಗವನ್ನು ಪ್ರಚೋದಿಸುವುದು ಈ ಸಹಭಾಗಿತ್ವದ ಪ್ರಮುಖೋದ್ದೇಶವಾಗಿದೆ. ಈ ತಿಳುವಳಿಕಾ ಒಡಂಬಡಿಕೆ ಭಾರತ ಮತ್ತು ಕೆನಡಾದ ಸಂಶೋಧಕರು ಪದವಿ ಮಟ್ಟದಲ್ಲಿ ಶೈಕ್ಷಣಿಕ ಸಂಶೋಧನಾ ಚಟುವಟಿಕೆಗಳನ್ನು ಸಜ್ಜುಗೊಳಿಸಲು ಅವಕಾಶ ಕೊಡುತ್ತದೆ. ಮತ್ತು ಗಡಿಯಾಚೆ ಕೈಗಾರಿಕಾ-ಶೈಕ್ಷಣಿಕ ಸಹಕಾರಕ್ಕೆ ಅನುಕೂಲತೆ ಒದಗಿಸುತ್ತದೆ. ಪದವಿ ಮಟ್ಟದ ಶೈಕ್ಷಣಿಕ ಸಂಶೋಧನಾ ಸಜ್ಜುಗೊಳಿಸುವಿಕೆ ಕಾರ್ಯಕ್ರಮದಡಿಯಲ್ಲಿ , ಎರಡೂ ಕಡೆಯವರು 110 ಮಂದಿಯವರೆಗೆ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ವಿದ್ಯಾರ್ಥಿಗಳನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಮತ್ತು ಗಣಿತ (ಎಸ್.ಟಿ.ಇ.ಎಂ.-ಸ್ಟೆಮ್) ಕ್ಷೇತ್ರಗಳಿಗೆ ಸಂಬಂಧಿಸಿ ಭಾರತದ ಅರ್ಹ ವಿಶ್ವವಿದ್ಯಾಲಯಗಳಿಂದ ಆಯ್ಕೆ ಮಾಡಿ ಕೆನಡಾದ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಯೋಗಾಲಯಗಳಲ್ಲಿ 12 ರಿಂದ 24 ವಾರಗಳ ಸಂಶೋಧನೆಗೆ ಕಳುಹಿಸಲು ಉದ್ದೇಶಿಸಿವೆ.
ಅದೇ ರೀತಿ ಅಷ್ಟೇ ಸಂಖ್ಯೆಯ ಕೆನಡಾದ ವಿದ್ಯಾರ್ಥಿಗಳು ಭಾರತದ ಅರ್ಹ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಯೋಗಾಲಯಗಳಲ್ಲಿ 12 ರಿಂದ 24 ವಾರಗಳ ಕಾಲ ಸಂಶೋಧನಾ ನಿರತರಾಗುವರು. ಗಡಿಯಾಚೆಗಿನ ಕೈಗಾರಿಕಾ-ಶೈಕ್ಷಣಿಕ ಸಹಕಾರದಡಿಯಲ್ಲಿ 40 ಮಂದಿಯವರೆಗೆ ಸ್ನಾತಕೋತ್ತರ ಪದವೀಧರರು ಮತ್ತು ಪಿ.ಎಚ್.ಡಿ. ವಿದ್ಯಾರ್ಥಿ ಸಂಶೋಧಕರು ಮೂರು ವರ್ಷಗಳ ಅವಧಿಯಲ್ಲಿ 16 ರಿಂದ 24 ವಾರಗಳವರೆಗೆ ಉಭಯ ದೇಶಗಳ ಕೈಗಾರಿಕಾ ಸಹಭಾಗಿ ಸಂಸ್ಥೆಗಳಲ್ಲಿ ಸಂಶೋಧನಾ ನಿರತರಾಗುವರು.
ಈ ಸಹಯೋಗ ಹೊಸ ಜ್ಞಾನವನ್ನು ನಿರ್ಮಾಣ ಮಾಡಲಿದೆ, ಜಂಟಿ ವೈಜ್ಞಾನಿಕ ಪ್ರಕಟಣೆಗಳಿಗೆ, ಕೈಗಾರಿಕಾ ತಿಳುವಳಿಕೆಗೆ , ಭೌದ್ಧಿಕ ಹಕ್ಕುಗಳ ಸೃಷ್ಟಿಗೆ , ಇತ್ಯಾದಿಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ತಿಳುವಳಿಕಾ ಒಡಂಬಡಿಕೆ ಕೆನಡಾದ ಜತೆಗಿನ ವಿಜ್ಞಾನ, ತಂತ್ರಜ್ಞಾನ, ಮತ್ತು ಅನ್ವೇಷಣಾ ಸಹಕಾರಕ್ಕೆ ಸಂಬಂಧಿಸಿದ ಧೀರ್ಘ ಕಾಲೀನ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ.