Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಷ್ಟ್ರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಅನಾವರಣ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ

ಮಹಾರಾಷ್ಟ್ರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಅನಾವರಣ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ


ಇಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಪ್ರಿಯ ಸೋದರರೇ ಮತ್ತು ಸೋದರಿಯರೇ,

ಮುಂಬಯಿ ಮತ್ತು ಥಾಣೆ ದೇಶದ ಕನಸುಗಳನ್ನು ನನಸು ಮಾಡಲು ನೆರವಾದ ಪ್ರಮುಖ ಭಾಗಗಳು. ಸಣ್ಣ ಹಳ್ಳಿಗಳು ಹಾಗೂ ಪಟ್ಟಣಗಳ ಹಲವು ಜನಸಾಮಾನ್ಯರು ಇಲ್ಲಿ ಪ್ರಖ್ಯಾತಿ ಹಾಗೂ ಶ್ರೀಮಂತಿಕೆಯನ್ನು ಗಳಿಸಿದ್ದಾರೆ. ಇಲ್ಲಿ ಜನಿಸಿದವರು ಹಾಗೂ ನೆಲೆಸಿರುವವರು ಉದಾರಿಗಳು ಹಾಗೂ ದಯಾಪರರು. ಇಲ್ಲಿನ ಜನರು ಎಲ್ಲರಿಗೂ ತಮ್ಮ ಹೃದಯದಲ್ಲಿ ಜಾಗ ಕೊಟ್ಟಿದ್ದಾರೆ. ಭಾರತದ ಸಂಪೂರ್ಣ ವರ್ಣಪಟಲವೊಂದನ್ನು ಇಲ್ಲಿ ನೋಡಲು ಸಾಧ್ಯವಾಗಿರುವುದು ಇದೇ ಕಾರಣದಿಂದ. ಇಲ್ಲಿಗೆ ಬರುವವರು ಯಾರೇ ಆಗಿರಲಿ, ಮುಂಬೈಯ ಜನಮಾನಸದಲ್ಲಿ ಬೆರೆತು ಹೋಗುತ್ತಾರೆ ಮತ್ತು ಮರಾಠಿ ಸಂಸ್ಕೃತಿಯ ಭಾಗವಾಗಿ ಬಿಡುತ್ತಾರೆ.

ಸೋದರರೇ ಮತ್ತು ಸೋದರಿಯರೇ,

ಇಂದು ಮುಂಬೈ ವಿಸ್ತರಿಸುತ್ತಿದೆ ಮತ್ತು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಇದೇ ಹೊತ್ತಿನಲ್ಲಿ ಪ್ರಗತಿಯು ಸಂಪನ್ಮೂಲಗಳ ಮೇಲೆ ಒತ್ತಡ ಹೇರುತ್ತಿದೆ. ಇದರ ಪರಿಣಾಮವನ್ನು ಸಂಚಾರ ವ್ಯವಸ್ಥೆ, ರಸ್ತೆ ಮತ್ತು ರೈಲ್ವೆಯಲ್ಲಿ ನೋಡಬಹುದು. ಇದನ್ನು ಗಮನದಲ್ಲಿ ಇರಿಸಿಕೊಂಡು ಕಳೆದ ನಾಲ್ಕೂವರೆ ವರ್ಷದಲ್ಲಿ ಮುಂಬೈ ಮತ್ತು ಥಾಣೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಯನ್ನು ಸುಧಾರಿಸಲು ಸತತ ಪ್ರಯತ್ನ ನಡೆಸಲಾಗಿದೆ.

ಇಂದು ಮೆಟ್ರೋದ ಎರಡು ಮಾರ್ಗ ಸೇರಿದಂತೆ 33,000 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಇಷ್ಟಲ್ಲದೆ, ಇಂದು ಥಾಣೆಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ 90,000 ಮನೆಗಳ ನಿರ್ಮಾಣ ಯೋಜನೆಯನ್ನು ಆರಂಭಿಸಲಾಗಿದೆ.

ಸ್ನೇಹಿತರೇ,

ಯಾವುದೇ ನಗರ ಇಲ್ಲವೇ ದೇಶದ ಅಭಿವೃದ್ಧಿಯಲ್ಲಿ ಸಂಚಾರ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ವೇಗವಾಗಿ ನಗರೀಕರಣಗೊಳ್ಳುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಮುಂಬರುವ ವರ್ಷಗಳಲ್ಲಿ ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಗೊಳ್ಳುತ್ತಿರುವ ಹತ್ತು ನಗರಗಳಲ್ಲಿ ಎಲ್ಲವೂ ಭಾರತದಲ್ಲಿರುತ್ತವೆ. ದೇಶ ವೇಗವಾಗಿ ಅಭಿವೃದ್ಧಿಗೊಳ್ಳಲು ಪ್ರಮುಖ ಕಾರಣವೆಂದರೆ, ಇಲ್ಲಿನ ನಗರಗಳಲ್ಲಿ ವಾಸ ಮಾಡುತ್ತಿರುವ ಜನರು.

ಮುಂಬೈ ಹಿಂದಿನಿಂದಲೂ ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರ. ಭವಿಷ್ಯದಲ್ಲಿ ಅದು ಇನ್ನಷ್ಟು ವಿಸ್ತರಿಸಲಿದೆ. ಆದ್ದರಿಂದ,ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಾವು ಇಲ್ಲಿನ ಮೂಲಸೌಲಭ್ಯ ಅಭಿವೃದ್ಧಿಗೆ ಗಮನ ನೀಡಲು ಆರಂಭಿಸಿದೆವು. ಮುಂಬೈ ಸ್ಥಳೀಯ ರೈಲುಗಳಿಗೆ ಹಲವು ಕೋಟಿ ರೂ.ಮೀಸಲಿರಿಸಲಾಯಿತು. ಹಳೆಯ ರೈಲು ಸೇತುವೆಗಳನ್ನು ಆಧುನೀಕರಣಗೊಳಿಸಲಾಯಿತು. ಮುಂಬೈ ಲೋಕಲ್ ಅಲ್ಲದೆ ಇನ್ನಿತರ ಸಂಚಾರ ವ್ಯವಸ್ಥೆಯನ್ನು ವಿಸ್ತರಿಸಿದೆವು. ಇದರಲ್ಲಿ ಮೆಟ್ರೋ ರೈಲು ವ್ಯವಸ್ಥೆ ಒಂದು ಪ್ರಭಾವಶಾಲಿ ಮಾಧ್ಯಮವಾಯಿತು. ಥಾಣೆಯಲ್ಲಿ ಮೆಟ್ರೋ ವಿಸ್ತರಣೆ ಬಳಿಕ ಮುಂಬೈ, ಥಾಣೆ ಹಾಗೂ ಇನ್ನಿತರ ಹತ್ತಿರದ ಪ್ರದೇಶಗಳಿಗೆ ಉತ್ತಮ ಸಂಪರ್ಕ ಸಾಧ್ಯವಾಗಲಿದೆ.

ಸ್ನೇಹಿತರೇ,

ಮುಂಬೈ ಮೆಟ್ರೋದ ಮೊದಲ ಯೋಜನೆ 2006ರಲ್ಲಿ ಆರಂಭಗೊಂಡಿತು. ಆದರೆ, ಆನಂತರ ಎಂಟು ವರ್ಷ ಕಾಲ ಯೋಜನೆ ಏಕೆ ನಿಂತಲ್ಲೇ ನಿಂತಿತು ಎನ್ನುವುದನ್ನು ಹೇಳುವುದು ಕಷ್ಟ, ಮೊದಲ ಮಾರ್ಗವನ್ನು 2014ರಲ್ಲಿ ಆರಂಭಿಸಲಾಯಿತು ಮತ್ತು ಅದು ಕೂಡ 11 ಕಿಮೀ ಮಾತ್ರ. ಎಂಟು ವರ್ಷದಲ್ಲಿ 11 ಕಿಮೀ! 2014ರಲ್ಲಿ ಯೋಜನೆಯ ವೇಗವನ್ನು ಹೆಚ್ಚಳಗೊಳಿಸಬೇಕು ಹಾಗೂ ಮೆಟ್ರೋ ಹಳಿಗಳ ಅಳವಡಿಕೆ ಪ್ರಮಾಣವನ್ನು ಕೂಡ ಹೆಚ್ಚಿಸಬೇಕು ಎಂದು ನಿರ್ಧರಿಸಿದೆವು. ಕಳೆದ ನಾಲ್ಕು ವರ್ಷದಲ್ಲಿ ಮುಂಬೈಯಲ್ಲಿ ಮೆಟ್ರೋ ಸಂಪರ್ಕ ಜಾಲವನ್ನು ಕಲ್ಪಿಸಲು ಹಲವು ಹೊಸ ಯೋಜನೆಗಳನ್ನು ಆರಂಭಿಸಿದೆವು. ಈ ಆಲೋಚನೆಗೆ ಅನುಗುಣವಾಗಿ ಇಂದು ಎರಡು ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಇದರಿಂದ ಮುಂದಿನ ಮೂರು ವರ್ಷದಲ್ಲಿ ಹಾಲಿ ಇರುವ ಮೆಟ್ರೋ ಜಾಲಕ್ಕೆ 35 ಕಿಮೀ ಸೇರ್ಪಡೆ ಯಾಗಲಿದೆ. ಇಷ್ಟಲ್ಲದೆ, 2022 ಮತ್ತು 2024ರ ಅವಧಿಯಲ್ಲಿ ಮುಂಬೈ ಜನರಿಗೆ 275 ಕಿಮೀ ಉದ್ದದ ಮೆಟ್ರೋ ಮಾರ್ಗ ಲಭ್ಯವಾಗಲಿದೆ. ಇಂದು ಶಿಲಾನ್ಯಾಸ ಮಾಡಿದ ಯೋಜನೆಗಳಿಂದ ಥಾಣೆ, ಭಿವಂಡಿ, ಕಲ್ಯಾಣ್, ದಹೀಸರ್ ಮತ್ತು ಮೀರಾ -ಭಯಂದರ್ ನ ಜನರಿಗೆ ಪ್ರಯೋಜನ ಮಾತ್ರವಲ್ಲದೆ, ಮುಂಬೈಯಹಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ಸ್ನೇಹಿತರೇ,

ಈ ಸೌಲಭ್ಯಗಳು ಇಂದಿನ ಅಗತ್ಯಕ್ಕೆ ಅನುಗುಣವಾಗಿರುವುದಲ್ಲದೆ, 2035 ರ ಅಗತ್ಯಗಳನ್ನೂ ಪೂರೈಸಲಿದೆ.

ಸೋದರರೇ ಮತ್ತು ಸೋದರಿಯರೇ,

ನಾವು ನಿಮ್ಮ ಜೀವನವನ್ನು ಉತ್ತಮ ಹಾಗೂ ಸುಲಭಗೊಳಿಸಲು ಪ್ರಯತ್ನಿ ಸುತ್ತಿರುವುದಲ್ಲದೆ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೂಡ ಮನೆ ದೊರೆಯುವಂತೆ ಮಾಡುತ್ತಿದ್ದೇವೆ. 2022ರಲ್ಲಿ ದೇಶ ಸ್ವಾತಂ ತ್ರ್ಯೋತ್ಸವದ 75ನೇ ವರ್ಷಾಚರಣೆ ಮಾಡುತ್ತಿದ್ದು, ಅಷ್ಟರೊಳಗೆ ದೇಶದ ಎಲ್ಲ ಕುಟುಂಬಗಳು ಸಿಮೆಂಟ್ ಚಾವಣಿ ಇರುವ ಮನೆಯನ್ನು ಹೊಂದಿರ ಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಗುರಿಯನ್ನು ಮುಟ್ಟಲು ಇಂದು 90,000 ಮನೆಗಳ ನಿರ್ಮಾಣ ಕಾಮಗಾರಿಯನ್ನು ಆರಂಭಿಸ ಲಾಗಿದೆ.

ಸ್ನೇಹಿತರೇ,

ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ, ನಮ್ಮ ಕಾಯಕ ಸಂಸ್ಕ್ರತಿ, ಮನಸ್ಥಿತಿ ಹಾಗೂ ವೇಗ ಭಿನ್ನವಾಗಿದೆ. ಹಿಂದಿನ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ನಾಲ್ಕು ವರ್ಷದಲ್ಲಿ ನಿರ್ಮಿಸಿದ್ದು 25.5 ಲಕ್ಷ ಮನೆ ಮಾತ್ರ. ಆದರೆ, ನಮ್ಮ ಸರ್ಕಾರ ಅದೇ ನಾಲ್ಕು ವರ್ಷದಲ್ಲಿ 1 ಕೋಟಿ 25 ಲಕ್ಷ ಮನೆಗಳನ್ನು ನಿರ್ಮಿಸಿದೆ. ಇದು ಮೊದಲಿಗಿಂತ ಐದು ಪಟ್ಟು ಹೆಚ್ಚು.

ಇದರರ್ಥ ಏನೆಂದರೆ, ಪ್ರಾಯಶಃ ಈ ಸಾಧನೆಯನ್ನು ಮಾಡಲು ಅವರಿಗೆ ಎರಡು ತಲೆಮಾರು ಬೇಕಾಗುತ್ತಿತ್ತು.

ಪ್ರಧಾನ ಮಂತ್ರಿ ಶಹರಿ ಆವಾಸ್ ಯೋಜನೆಯಡಿ ಮಹಾರಾಷ್ಟ್ರದಲ್ಲಿ 8 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಸ್ನೇಹಿತರೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿರಹಿತರಿಗೆ ಉತ್ತಮ ಗುಣಮಟ್ಟದ ಸೊಸೈಟಿ ಫ್ಲಾಟ್ ಗಳನ್ನು ನಿರ್ಮಿಸಲಾಗುತ್ತಿದೆ. ಮತ್ತು, ಇದು ಕಳೆದ ಸರ್ಕಾರದ ಅವಧಿಯಲ್ಲಿ ಸುದ್ದಿ ಮಾಡಿದ್ದ ಆದರ್ಶ್ ಸೊಸೈಟಿಯಂತಲ್ಲ. ನಿಜ ಹೇಳ ಬೇಕೆಂದರೆ, ವಾಸ್ತವಿಕ ಆದರ್ಶ ಅಥವಾ ಮಾದರಿ ಸೊಸೈಟಿಯೊಂದನ್ನು ಸೃಷ್ಟಿಸಲಾಗಿದ್ದು, ಸಾಮಾನ್ಯ ಪುರುಷ ಮತ್ತು ಸ್ತ್ರೀಯರ ಕನಸುಗಳನ್ನು ಪೋಷಿಸಲಾಗುತ್ತಿದೆ ಮತ್ತು ಆತ್ಮವಿಶ್ವಾಸ ಬೆಳೆಸುವ ಮೂಲಕ ಉತ್ತಮ ಭವಿಷ್ಯ ರೂಪಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ನಮ್ಮ ಸರ್ಕಾರ 2.5 ಲಕ್ಷ ರೂ.ವರೆಗಿನ ಆರ್ಥಿಕ ನೆರವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಇದರಿಂದ 2.5 ಲಕ್ಷ ರೂ. ಸಾಲ ಮೊತ್ತ ತಕ್ಷಣ ಕಡಿಮೆಯಾಗಲಿದೆ. ಇದರರ್ಥ-ಬಡವರು ಹಾಗೂ ಮಧ್ಯಮ ವರ್ಗದವರಿಗೆ ಗೃಹ ಸಾಲ ದಲ್ಲೂ ನೆರವು ಸಿಗುತ್ತಿದೆ.

ಇಷ್ಟಲ್ಲದೆ, ಮೊದಲಿಗೆ ಹೋಲಿಸಿದರೆ ಗೃಹ ಸಾಲದ ಬಡ್ಡಿ ದರ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಯೋಜನೆಯಡಿ, ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಾಗೂ ಕಡಿಮೆ ಆದಾಯದ ಗುಂಪು ಗಳಿಗೆ ಶೇ 6.5 ಬಡ್ಡಿ ಸಬ್ಸಿಡಿ ನೀಡುತ್ತಿದೆ. ಮಧ್ಯಮ ಆದಾಯದ ಗುಂಪಿನ ಜನರಿಗೆ ಶೇ. 3-4 ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ. ಇದರರ್ಥ- ವ್ಯಕ್ತಿಯೊಬ್ಬರು 20 ವರ್ಷ ಅವಧಿಗೆ 20 ಲಕ್ಷ ರೂ. ಗೃಹ ಸಾಲ ಪಡೆದಿದ್ದರೆ, ಆತ ಸರ್ಕಾರದಿಂದ 6 ಲಕ್ಷ ರೂ. ನೆರವು ಪಡೆಯಲಿದ್ದಾನೆ.

ಸ್ನೇಹಿತರೇ,

ಸರ್ಕಾರದ ಈ ಪ್ರಾಮಾಣಿಕ ಪ್ರಯತ್ನಗಳಿಂದಾಗಿ ಕಳೆದ 1-1.5 ವರ್ಷ ದಿಂದ ಲಕ್ಷಾಂತರ ಜನರು ತಮ್ಮ ಮೊದಲನೇ ಮನೆಯನ್ನು ಕಾಯ್ದಿರಿಸಿ ದ್ದಾರೆ, ಖರೀದಿಸಿದ್ದಾರೆ. ವರದಿಯೊಂದರ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ 7-8 ತಿಂಗಳಿನಲ್ಲಿ ಹೊಸ ಮನೆ ಖರೀದಿ ದರ ದುಪ್ಪಟ್ಟಿಗಿಂತ ಹೆಚ್ಚು ಆಗಿದೆ. ಇಂದು ಚಾಲನೆಗೊಂಡ ಯೋಜನೆಗಳಿಂದ ಇಂಥ ಜನರಿಗೆ ಪ್ರಯೋಜನವಾಗಲಿದೆ. ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 85,000 ಜನರು 2,000 ಕೋಟಿ ರೂ. ನೆರವು ಪಡೆದುಕೊಂಡಿದ್ದಾರೆ.

ಸ್ನೇಹಿತರೇ,

ಮನೆಯನ್ನು ಹೊಂದಲು ಮಧ್ಯಮ ವರ್ಗದವರಿಗೆ ನೆರವು ನೀಡುವುದು ಮಾತ್ರವಲ್ಲದೆ, ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾಲ್ಕು ವರ್ಷಗಳ ಹಿಂದೆ, ನಿಮ್ಮ ಜೀವಮಾನ ದ ಉಳಿತಾಯವನ್ನು ನೀಡಿದರೂ,ಮನೆಯೊಂದನ್ನು ಕಾಯ್ದಿರಿಸಲು ಎಷ್ಟೆಲ್ಲ ಸಮಸ್ಯೆಯಿತ್ತು ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಕೆಲವು ಜನರ ನಿರಂಕುಶ ಹಾಗೂ ಕೇಡುಂಟು ಮಾಡುವ ಪ್ರವೃತ್ತಿಯಿಂದಾಗಿ ನೀವು ನಿಮ್ಮದೇ ಮನೆಯನ್ನು ಪಡೆದುಕೊಳ್ಳುವುದು ಸಾಧ್ಯವಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಭರವಸೆ ನೀಡಿದ್ದೇ ಒಂದು, ಅಂತಿಮವಾಗಿ ವಿತರಣೆ ಮಾಡಿದ್ದೇ ಬೇರೆಯದು. ನಮ್ಮ ಸರ್ಕಾರವು ಈ ಪ್ರವøತ್ತಿಯನ್ನು ಮಟ್ಟ ಹಾಕಲು ಭಾರಿ ಪ್ರಯತ್ನ ಹಾಕಿದೆ. ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಆರ್.ಇ.ಆರ್.ಎ) ಕ್ಕೆ ಅಧಿ ಸೂಚನೆ ಹೊರಡಿಸಲಾಗಿದೆ. 21 ರಾಜ್ಯಗಳಲ್ಲಿ ನ್ಯಾಯಾಧಿಕರಣ ಕಾರ್ಯ ನಿರ್ವಹಿಸುತ್ತಿದೆ.

ಮಹಾರಾಷ್ಟ್ರ ರೇರಾವನ್ನು ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯಗಳಲ್ಲಿ ಒಂದು. ಇದಕ್ಕಾಗಿ ನಾನು ಮಾನ್ಯ ಫಡ್ನವೀಸ್ ಅವರನ್ನು ಅಭಿನಂದಿಸುತ್ತೇನೆ. ದೇಶದೆಲ್ಲೆಡೆ ಸುಮಾರು 35,000 ರಿಯಲ್ ಎಸ್ಟೇಟ್ ಯೋಜನೆಗಳು ಹಾಗೂ 27,000 ರಿಯಲ್ ಎಸ್ಟೇಟ್ ಏಜೆಂಟರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮತ್ತು, ಇದರಲ್ಲಿ ಮಹಾರಾಷ್ಟ್ರ ಹೆಚ್ಚು ಸಂಖ್ಯೆಯ ಯೋಜನೆಗಳನ್ನು ಹೊಂದಿದೆ.

ಸ್ನೇಹಿತರೇ,

ಹಾಗೆಯೇ ಊಹಿಸಿಕೊಳ್ಳಿ, ಕಳೆದ 70 ವರ್ಷ ಕಾಲ ರಿಯಲ್ ಎಸ್ಟೇಟ್ ಉದ್ಯಮ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದೆ ನಡೆಯುತ್ತಿತ್ತು. ಹಿಂದಿನ ಸರ್ಕಾರಗಳು ಇಂಥ ಕಾಯಿದೆಯೊಂದನ್ನು ಸೃಷ್ಟಿಸಿದ್ದರೆ, ಮನೆ ಖರೀದಿಸುವವರು ನ್ಯಾಯಾಲಯಗಳ ಮೆಟ್ಟಿಲು ಹತ್ತಬೇಕಿರಲಿಲ್ಲ ಮತ್ತು ಪಾರದರ್ಶಕತೆಯಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರ ಸಮೃದ್ಧವಾಗುತ್ತಿತ್ತು.

ಸೋದರರೇ ಮತ್ತು ಸೋದರಿಯರೇ,

ಸರ್ಕಾರವು ಬಡ ಹಾಗೂ ಮಧ್ಯಮ ಆದಾಯದ ಗುಂಪುಗಳು ತಮ್ಮ ವಿದ್ಯುತ್ ಬಿಲ್ ಕಡಿಮೆಗೊಳಿಸಲು ನೆರವಾಗಲು ನಿರಂತರವಾಗಿ ಪ್ರಯತ್ನಿ ಸುತ್ತಿದೆ. ಉಜಲಾ ಯೋಜನೆಯಡಿ ದೇಶಾದ್ಯಂತ 30 ಕೋಟಿ ಎಲ್ಇಡಿ ಬಲ್ಬು ಗಳನ್ನು ವಿತರಿಸಲಾಗಿದೆ. ಇದರಲ್ಲಿ 2.25 ಕೋಟಿ ಬಲ್ಬು ಗಳನ್ನು ಮಹಾರಾಷ್ಟ್ರದಲ್ಲಿ ಹಾಗೂ ಥಾಣೆಯಲ್ಲಿ ಲಕ್ಷಾಂತರ ಬಲ್ಬು ಗಳನ್ನು ವಿತರಿ ಸಲಾಗಿದೆ. 60 ವ್ಯಾಟ್ನ ಬಲ್ಬ್ ಮಾಡುವ ಕೆಲಸವನ್ನು 7-8 ವ್ಯಾಟ್ ಬಲ್ಬು ಗಳು ಮಾಡುತ್ತಿವೆ. ಇದರರ್ಥ- ವಿದ್ಯುತ್ ಉಳಿತಾಯ ಆಗುತ್ತಿದೆ ಮತ್ತು ವಿದ್ಯುತ್ ಬಿಲ್ ಕಡಿಮೆಯಾಗುತ್ತಿದೆ. ಈ ಯೋಜನೆಯ ನೆರವಿ ನಿಂದ ದೇಶದ ಹಲವಾರು ಕುಟುಂಬಗಳು ವಾರ್ಷಿಕ ಅಂದಾಜು 16,000 ಕೋಟಿ ರೂ. ಉಳಿತಾಯ ಮಾಡುತ್ತಿವೆ. ಮಹಾರಾಷ್ಟ್ರದ ವಿದ್ಯುತ್ ಬಿಲ್ನಲ್ಲಿ ವಾರ್ಷಿಕ 1,100 ಕೊಟಿ ರೂ ಉಳಿತಾಯವಾಗಿದೆ.

ಎಲ್ಇಡಿ ಉತ್ಪಾದಿಸುವ ಕಂಪನಿಗಳ ಜೊತೆಗೆ ಸರ್ಕಾರ ಕೈ ಜೋಡಿಸಿ, ಉತ್ಪಾದನೆ ಹೆಚ್ಚಳ, ಸ್ಪರ್ಧಾತ್ಮಕತೆ ಹೆಚ್ಚಳವಲ್ಲದೆ, ದಲ್ಲಾಳಿಗಳನ್ನು ನಿವಾರಿಸಿದ್ದರಿಂದ ಇದು ಸಾಧ್ಯವಾಯಿತು. ಇದರಿಂದಾಗಿ, 4 ವರ್ಷಗಳ ಹಿಂದೆ 250-300 ರೂ ಇದ್ದ ಎಲ್ಇಡಿ ಇಂದು 50 ರೂ.ಗೆ ದೊರೆ ಯುತ್ತಿದೆ.

ಸ್ನೇಹಿತರೇ,

ಕೇಂದ್ರ ಸರ್ಕಾರವು “ಎಲ್ಲರ ಜೊತೆಗೆ ಎಲ್ಲರ ವಿಕಾಸ’ ಪಥದಲ್ಲಿ ಮುನ್ನಡೆಯುತ್ತಿದೆ. ದೇಶದ ಯಾವುದೇ ಹಳ್ಳಿ, ನಗರ ಇಲ್ಲವೇ ವರ್ಗಗಳು ಅಭಿವೃದ್ಧಿಯ ಸ್ಪರ್ಶಕ್ಕೆ ಹೊರತಾಗದಂತೆ ಪ್ರಯತ್ನ ನಡೆಸಲಾಗುತ್ತಿದೆ. ಬಡವರ ಜೀವನ ಮಟ್ಟವನ್ನು ಮೇಲೆತ್ತಲು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಉಜ್ವಲಾ ಕಾರ್ಯಕ್ರಮದಡಿ ದೇಶದೆಲ್ಲೆಡೆ ಪುಕ್ಕಟೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮೂಲಕ ಬಡ ಸೋದರಿ ಯರನ್ನು ಹೊಗೆಮುಕ್ತಗೊಳಿಸುವ ಹಾಗೂ ಅವರ ಸಮಯವನ್ನು ಉಳಿಸ ಲಾಗುತ್ತಿದೆ. ದೇಶದೆಲ್ಲೆಡೆ 6 ಕೋಟಿ ಅನಿಲ ಸಂಪರ್ಕ ನೀಡಲಾಗಿದ್ದು, ಇದರಲ್ಲಿ ಥಾಣೆ ಸೇರಿದಂತೆ ಮಹಾರಾಷ್ಟ್ರದ 34 ಲಕ್ಷ ಸೋದರಿಯರು ಇದ್ದಾರೆ.

ಸ್ನೇಹಿತರೇ,

ತಮ್ಮದೇ ಸಣ್ಣ ಉದ್ಯಮ, ಅಂದರೆ, ಸಲೂನ್, ಬಟ್ಟೆ ಹೊಲಿಗೆ, ನೇಕಾರಿಕೆ, ಕರಕುಶಲ ಉತ್ಪನ್ನಗಳು ಇತ್ಯಾದಿಯನ್ನು ಆರಂಭಿಸಬೇಕು ಎಂದು ಕೊಂಡಿರುವ ಸೋದರಿಯರಿಗೆ ಬ್ಯಾಂಕ್ಗಳ ಬಾಗಿಲು ಸದಾ ತೆರೆದಿರುತ್ತದೆ. ಮುದ್ರಾ ಯೋಜನೆಯಡಿ ಯಾವುದೇ ಖಾತ್ರಿ ಇಲ್ಲದೆ 50,000 ದಿಂದ 10 ಲಕ್ಷ ರೂ.ಸಾಲ ನೀಡಲಾಗುತ್ತದೆ. ಮಹಾರಾಷ್ಟ್ರದಲ್ಲಿ 1.25 ಕೋಟಿ ಮಂದಿಗೆ ಈ ಸಾಲ ನೀಡಲಾಗಿದ್ದು, ಇದರಲ್ಲಿ ಸೋದರಿಯರ ಪಾಲು 1 ಕೋಟಿ.

ಸೋದರರೇ ಮತ್ತು ಸೋದರಿಯರೇ,

ಬಡವರು ಹಾಗೂ ಮಹಿಳೆಯರಿಗೆ ಗೌರವಯುತ ಬದುಕು ನೀಡುವುದು ನಮ್ಮ ಉದ್ದೇಶ. ನಮ್ಮ ಸರ್ಕಾರವು ಅಭಿವೃದ್ಧಿಯ ಐದು ಹೊನಲು ಗಳಾದ- ಮಕ್ಕಳಿಗೆ ಶಿಕ್ಷಣ, ಯುವಜನರಿಗೆ ಆದಾಯ, ಹಿರಿಯ ನಾಗರಿಕರಿಗೆ ಔಷಧ, ರೈತರಿಗೆ ನೀರಾವರಿ ಹಾಗೂ ಜನತೆಗೆ ಪ್ರೋತ್ಸಾಹ ನೀಡಲು ಸಮರ್ಪಿತವಾಗಿದೆ.

ಅಂತಿಮವಾಗಿ, ನೂತನ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ನೀವೆಲ್ಲರೂ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಹಾಗೂ ನಿಮ್ಮ ಅನುಗ್ರಹವನ್ನು ತೋರಿಸಿದ್ದಕ್ಕೆ ನಾನು ನಿಜವಾಗಿಯೂ ಆಭಾರಿಯಾಗಿದ್ದೇನೆ. ನಾನು ಇಲ್ಲಿಂದ ಪುಣೆಗೆ ಹೋಗಲಿದ್ದೇನೆ. ಅಲ್ಲಿ ಹಲವು ಸಾವಿರ ಕೋಟಿ ರೂ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದೇನೆ. ಅಪಾರ ಸಂಖ್ಯೆಯಲ್ಲಿ ನೆರೆಯುವ ಮೂಲಕ ಬಲ ಪ್ರದರ್ಶನ ಮಾಡಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ!

ಎಲ್ಲರಿಗೂ ಧನ್ಯವಾದಗಳು!

***