ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕುರಿತ ಎರಡು ದಿನಗಳ ರಾಷ್ಟ್ರೀಯ ಇಲಾಖಾ ಶೃಂಗಸಭೆಯ ಸಮಾರೋಪ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
ಈ ಶೃಂಗಸಭೆಯು ಪ್ರಧಾನಮಂತ್ರಿಯವರ ಪರಿಕಲ್ಪನೆಯ ಇಲಾಖಾ ಶೃಂಗಸಭೆಗಳ ಸರಣಿಯ ಭಾಗವಾಗಿದೆ. ಪೌಷ್ಟಿಕಾಂಶ, ಆರಂಭಿಕ ಬಾಲ್ಯದ ಆರೈಕೆ, ಮಕ್ಕಳ ರಕ್ಷಣೆ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಹಾಗೂ ಹೆಚ್ಚಿನ ಸಮನ್ವಯದ ಮೂಲಕ ಸೇವೆಗಳ ವಿತರಣೆಯನ್ನು ಬಲಪಡಿಸುವ ಕುರಿತು ಕೇಂದ್ರೀಕೃತ ಚರ್ಚೆಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಇದು ಒಟ್ಟುಗೂಡಿಸಿತು.
ತೀವ್ರ ಸ್ವರೂಪದ ಚರ್ಚೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಯೋಗದ ನಿರ್ಧಾರ ತೆಗೆದುಕೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಜಿಲ್ಲಾ ಮಟ್ಟದಲ್ಲಿ ಹಾಗೂ ನಗರಪಾಲಿಕೆ ಮತ್ತು ಮಹಾನಗರ ಪಾಲಿಕೆಗಳ ಮಟ್ಟದಲ್ಲಿ ಇಂತಹ ‘ಚಿಂತನ ಶಿಬಿರ’ಗಳನ್ನು ಆಯೋಜಿಸುವ ಮೂಲಕ ರಾಜ್ಯಗಳು ಈ ಮಾದರಿಯನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಅವರು ಸಲಹೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅನುಭವಗಳು, ಆವಿಷ್ಕಾರಗಳು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡಲು ಅವರಿಗಾಗಿಯೇ ಮೀಸಲಾದ ಚಿಂತನ ಶಿಬಿರಗಳನ್ನು ಆಯೋಜಿಸಲು ಅವರು ಸಲಹೆ ನೀಡಿದರು.
‘ಜನಭಾಗಿತ್ವ’ವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಅಂಗನವಾಡಿ ಕೇಂದ್ರವು ಕೇವಲ ಒಂದು ಪ್ರತ್ಯೇಕ ಸಂಸ್ಥೆಯಾಗಿ ಕಾರ್ಯನಿರ್ವಹಿಸದೆ, ಸಮುದಾಯದ ಸಹಭಾಗಿತ್ವದ ಕೇಂದ್ರವಾಗಬೇಕು ಎಂದು ಪ್ರತಿಪಾದಿಸಿದರು. ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ವಾಸಿಸುವ ಕುಟುಂಬಗಳನ್ನು ವಿಶೇಷ ಸಂದರ್ಭಗಳಲ್ಲಿ ಪೌಷ್ಟಿಕ ಆಹಾರ, ಆಟಿಕೆಗಳು ಮತ್ತು ಮಕ್ಕಳಿಗೆ ಸ್ಥಳೀಯವಾಗಿ ಸೂಕ್ತವಾದ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಕೊಡುಗೆ ನೀಡಲು ಪ್ರೋತ್ಸಾಹಿಸಬಹುದು ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಂಗನವಾಡಿ ಕೇಂದ್ರಗಳೊಂದಿಗೆ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ಹೊಂದಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ವಿಶ್ವವಿದ್ಯಾಲಯಗಳು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದು ಸಾಮಾಜಿಕ-ಪರಿಣಾಮದ ಅಧ್ಯಯನಗಳನ್ನು ಕೈಗೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಲು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಸೇವಾ ವಿತರಣೆಯನ್ನು ಸುಧಾರಿಸಲು ಉಪಯುಕ್ತ ಒಳನೋಟಗಳನ್ನು ಸಹ ಪಡೆದುಕೊಳ್ಳಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಸ್ವಯಂಸೇವಕರನ್ನು ಇದೇ ರೀತಿ ಅಂಗನವಾಡಿ ಕೇಂದ್ರಗಳು ಮತ್ತು ಸಮುದಾಯ ಉಪಕ್ರಮಗಳೊಂದಿಗೆ ಸಂಯೋಜಿಸಬಹುದು ಎಂದು ಅವರು ಹೇಳಿದರು. ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಮತ್ತು ಸರ್ವತೋಮುಖ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸುವಂತೆಯೂ ಅವರು ಕರೆ ನೀಡಿದರು.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ಮಹಿಳಾ ಸುರಕ್ಷತೆ, ಘನತೆ ಮತ್ತು ಸಬಲೀಕರಣದ ಕುರಿತು ಮಕ್ಕಳಿಗೆ ವಯಸ್ಸಿಗೆ ಸೂಕ್ತವಾದ ಪಠ್ಯಕ್ರಮಗಳನ್ನು (ಮಾಡ್ಯೂಲ್) ಅಭಿವೃದ್ಧಿಪಡಿಸಲು ಸಲಹೆ ನೀಡಿದರು. ವಿವಿಧ ಇಲಾಖೆಗಳ ಸಮನ್ವಯದ ಪ್ರಯತ್ನಗಳ ಮೂಲಕ ತಡೆಗಟ್ಟುವ ಕ್ರಮಗಳ ಬಗ್ಗೆಯೂ ಅವರು ಒತ್ತು ನೀಡಿದರು.
ಸ್ವಚ್ಛತೆ, ಆರೋಗ್ಯ ಮತ್ತು ಪೌಷ್ಟಿಕಾಂಶದ ನಡುವಿನ ನಿಕಟ ಸಂಬಂಧವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶಾದ್ಯಂತ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಉತ್ತಮ ಆರೋಗ್ಯ ಮತ್ತು ಪೌಷ್ಟಿಕಾಂಶವು ಸ್ವಚ್ಛತೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಈ ನಡವಳಿಕೆಯ ಬದಲಾವಣೆಯನ್ನು ಉತ್ತೇಜಿಸಲು ಅಂಗನವಾಡಿ ಕೇಂದ್ರಗಳು ಮತ್ತು ಸುತ್ತಮುತ್ತಲಿನ ಸಮುದಾಯಗಳು ಪ್ರಮುಖ ವೇದಿಕೆಗಳಾಗಬಹುದು ಎಂದು ಅವರು ಒತ್ತಿಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ‘ವೋಕಲ್ ಫಾರ್ ಲೋಕಲ್’ ಮತ್ತು ‘ಒಂದು ಜಿಲ್ಲೆ ಒಂದು ಉತ್ಪನ್ನದಂತಹ (ಒಡಿಒಪಿ) ರಾಷ್ಟ್ರೀಯ ಅಭಿಯಾನಗಳನ್ನು ಉತ್ತೇಜಿಸಬೇಕು ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಸ್ಥಳೀಯ ಉತ್ಪನ್ನಗಳು, ಜೀವನೋಪಾಯಗಳು ಮತ್ತು ಆರ್ಥಿಕ ಸಬಲೀಕರಣವನ್ನು ಬಲಪಡಿಸುವಲ್ಲಿ ಮಹಿಳಾ ಸಂಘಗಳು ಮತ್ತು ಸಮುದಾಯ ಸಂಸ್ಥೆಗಳು ಪ್ರಮುಖ ಪಾಲುದಾರರಾಗಬಹುದು ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ರಾಜ್ಯಗಳಲ್ಲಿನ ಅದರ ಅಂಗಸಂಸ್ಥೆಗಳಿಗೆ ಸಮಾಜದ ಅತಿದೊಡ್ಡ ಮತ್ತು ಪ್ರಮುಖ ವರ್ಗಗಳಲ್ಲಿ ಒಂದನ್ನು ತಲುಪುವ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. ಇಂದು ಅಂಗನವಾಡಿ ಕೇಂದ್ರಗಳಲ್ಲಿ ಪೋಷಣೆಯಾಗುತ್ತಿರುವ ಮಕ್ಕಳೇ ಮುಂದೆ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಯುವಜನರು ಮತ್ತು ನಾಗರಿಕರಾಗಲಿದ್ದಾರೆ ಎಂದರು.
*****
A great exchange of perspectives and best practices at the National Departmental Summit on Women and Child Development. The focus areas were: Strengthening Anganwadis as community hubs. Focus on healthcare and nutrition. Safety, dignity and empowerment of women. Encourage ‘Vocal for Local’ and ODOP initiatives where women play a key role. https://t.co/nCoTzzEH1t
— Narendra Modi (@narendramodi) October 9, 2026