ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾದರಿ ಅಂಗಡಿಗಳು ಮತ್ತು ಮುಂಗಟ್ಟು (ಉದ್ಯೋಗ ಮತ್ತು ಸೇವಾ ಪರಿಸ್ಥಿತಿ ನಿಯಂತ್ರಣ) ಮಸೂದೆ 2016ನ್ನು ಪರಿಗಣಿಸಿದೆ. ಈಗ ಈ ಮಸೂದೆಯನ್ನು ತಮ್ಮ ವೈಯಕ್ತಿಕ ಕಾಯಿದೆಗಳನ್ನು ಮಾರ್ಪಾಡು ಮಾಡಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಿದೆ. ಅವರು ಈ ಮಸೂದೆಯನ್ನು ಯಥಾವತ್ ಅಥವಾ ಅದರ ಕೆಲವು ನಿಯಮಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡ ಬಳಿಕ ಅಳವಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಬಹುದು. ಈ ಮಸೂದೆಯನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರೊಂದಿಗೆ ಮತ್ತು ಕಾರ್ಮಿಕರು/ಉದ್ಯೋಗಿಗಳು, ಮಾಲೀಕರ ಸಂಘಗಳು/ಒಕ್ಕೂಟಗಳ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ತ್ರಿಪಕ್ಷೀಯ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಸುದೀರ್ಘ ಚರ್ಚೆ ಮತ್ತು ಮಾತುಕತೆಯ ಬಳಿಕ ಆಖೈರುಗೊಳಿಸಲಾಗಿದೆ. ಈ ಕರಡು ಮಾದರಿ ಮಸೂದೆಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:-
• ಉತ್ಪಾದನೆ ಘಟಕಗಳ ಹೊರತುಪಡಿಸಿ ಹತ್ತು ಅಥವಾ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಸ್ಥಾಪನೆಗಳ ವ್ಯಾಪ್ತಿಗೆ ಮಾತ್ರ ಇದು ಅನ್ವಯಿಸುತ್ತದೆ.
• ಈ ಮಸೂದೆಯು ಸ್ಥಾಪನೆಗಳಿಗೆ ವರ್ಷದಲ್ಲಿ 365 ದಿನಗಳೂ ಕಾರ್ಯ ನಿರ್ವಹಿಸಲು ಮತ್ತು ಬಾಗಿಲು ತೆರೆಯುವ/ಮುಚ್ಚುವ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
• ಆಶ್ರಯ, ಮಹಿಳೆಯರ ಶೌಚಾಲಯ, ವಿಶ್ರಾಂತಿ ಕೋಣೆ, ಅವರ ಗೌರವಕ್ಕೆ ಸೂಕ್ತ ರಕ್ಷಣೆ ಮತ್ತು ಸಾರಿಗೆ ವ್ಯವಸ್ಥೆಯ ಅನುಕೂಲತೆ ಇದ್ದಲ್ಲಿ ಮಹಿಳೆಯರಿಗೂ ರಾತ್ರಿ ಪಾಳಿಯ ಕೆಲಸಕ್ಕೆ ಅನುಮತಿ ನೀಡುತ್ತದೆ,
•ನೇಮಕಾತಿ, ತರಬೇತಿ, ವರ್ಗಾವಣೆ ಅಥವಾ ಬಡ್ತಿ ವಿಚಾರದಲ್ಲಿ ಮಹಿಳೆಯರೊಂದಿಗೆ ಯಾವುದೇ ತಾರತಮ್ಯ ಮಾಡುವಂತಿಲ್ಲ.
•ಆನ್ ಲೈನ್ ಮೂಲಕ ಒಂದು ಸಮಾನ ನೋಂದಣಿಯ ಮೂಲಕ ಸರಳೀಕೃತ ಪ್ರಕ್ರಿಯೆ.
•ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಮಾಲೀಕರಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಿಯಮ ರೂಪಿಸಲು ಸರ್ಕಾರಗಳಿಗೆ ಅಧಿಕಾರ.
•ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು.
• ಶೌಚಾಲಯ, ಕ್ರೀಚ್, ಪ್ರಥಮ ಚಿಕಿತ್ಸೆ ಮತ್ತು ವೈಯಕ್ತಿಕ ಸಂಸ್ಥೆಯಿಂದ ಜಾಗದ ಸಮಸ್ಯೆಯಿಂದ ಅಥವಾ ಇನ್ನಾವುದೇ ಸಮಸ್ಯೆಯಿಂದ ಇದು ಸಾಧ್ಯವಾಗದಿದ್ದರೆ ಸ್ಥಾಪನೆಗಳ ಸಮೂಹದಿಂದ ಫಲಹಾರ ಮಂದಿರ.
• ರಾಷ್ಟ್ರೀಯ ರಜಾದಿನಗಳ ಜೊತೆಗೆ ಐದು ವೇತನ ಸಹಿತ ಹಬ್ಬದ ರಜೆಗಳು ಇತ್ಯಾದಿ.
• ಹೆಚ್ಚು ನುರಿತ ಕಾರ್ಮಿಕರ (ಉದಾಹರಣೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಆರ್. ಅಂಡ್ ಡಿ ವಿಭಾಗದ ಸಂಸ್ಥೆಗಳಲ್ಲಿನ ಉದ್ಯೋಗಿಗಳು), ದಿನದ ಕೆಲಸದ ಅವಧಿಯನ್ನು 9 ಗಂಟೆ ಮತ್ತು ವಾರದ ಕೆಲಸದ ಅವಧಿಯನ್ನು 48 ಗಂಟೆ ಮತ್ತು ನಿಬಂಧನೆಗಳಿಗೊಳಪಟ್ಟು ತ್ರೈಮಾಸಿಕದಲ್ಲಿ ಗರಿಷ್ಠ 125 ಹೆಚ್ಚುವರಿ ಕೆಲಸದ ಅವಧಿಗೆ ವಿನಾಯಿತಿ.
ಈ ಮಾದರಿ ಮಸೂದೆಯು ಶಾಸನಾತ್ಮಕ ನಿಬಂಧನೆಗಳಲ್ಲಿ ಏಕರೂಪತೆ ತರುತ್ತದೆ, ಎಲ್ಲ ರಾಜ್ಯಗಳಿಗೂ ಅಳವಡಿಸಿಕೊಳ್ಳಲು ಸುಲಭಗೊಳಿಸುತ್ತದೆ ಮತ್ತು ಸಮಾನವಾದ ಕೆಲಸದ ಪರಿಸ್ಥಿತಿಯನ್ನು ದೇಶದಾದ್ಯಂತ ಮೂಡಿಸುತ್ತದೆ ಮತ್ತು ಸುಲಭವಾಗಿ ಕೆಲಸ ಮಾಡುವ ಅವಕಾಶ ಒದಗಿಸುತ್ತದೆ ಹಾಗೂ ಉದ್ಯೋಗ ಸೃಷ್ಟಿಸುತ್ತದೆ.