Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾನ್ಯ ಪ್ರಧಾನಮಂತ್ರಿಗಳು 2018ರ ಜುಲೈ 24ರಂದು ರುವಾಂಡಾದ ಕಿಗಾಲಿ ಕನ್ವೆನ್ಷನ್ ಸೆಂಟರ್ ನಲ್ಲಿ ಭಾರತ-ರುವಾಂಡಾ ವಾಣಿಜ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಪೂರ್ಣಪಾಠ.


ಮೂಲಸೌಲಭ್ಯವೇ ಇರಲಿ, ಜೀವನದ ಗುಣಮಟ್ಟವೇ ಇರಲಿ, ಆಡಳಿತವೇ ಇರಲಿ, ಆರ್ಥಿಕ ಏರುಪೇರೇ  ಇರಲಿ, ತೃಪ್ತಿಯಿಂದ ಕೂಡಿರುವ ಕುಟುಂಬವೇ ಇರಲಿ, ಅಭಿವೃದ್ಧಿ ಎನ್ನುವುದು ಹೇಗೆ ಇವೆಲ್ಲವನ್ನೂ ಒಳಗೊಳ್ಳುತ್ತದೆ ಎನ್ನುವುದರ ಸುಂದರ ಮಾದರಿಯನ್ನು ನಾನು ಇಂದಿಲ್ಲಿ ನೋಡಿದೆ. ಇವೆಲ್ಲವನ್ನೂ ನಾನಿಲ್ಲಿ ತನ್ಮಯನಾಗಿ ನೋಡುತ್ತಿದ್ದುದರಿಂದ ಇಲ್ಲಿಗೆ ಬರುವುದು ತಡವಾಯಿತು.  

ಈ ದೇಶಕ್ಕೆ  ( ರುವಾಂಡಾಕ್ಕೆ ),  ಭೇಟಿ ನೀಡುತ್ತಿರುವ ಭಾರತದ ಮೊಟ್ಟಮೊದಲ ಪ್ರಧಾನಿ ನಾನಾಗಿದ್ದೇನೆ. ನನ್ನ ಜತೆ ಭಾರತೀಯ ವಾಣಿಜ್ಯ ನಿಯೋಗವವೂ ಬಂದಿರುವುದು ನನಗೆ ಸಂತೋಷ ನೀಡಿದೆ. ಭಾರತವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಆದರೆ, ನಾವು `ಎಲ್ಲರೊಂದಿಗೆ, ಎಲ್ಲರ ವಿಕಾಸ’ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಎನ್ನುವುದು ನಮ್ಮ ಸೂತ್ರವಾಗಿದೆ. ಹೀಗಾಗಿ, ಕೇವಲ ನಾವೊಬ್ಬರೇ ಅಭಿವೃದ್ಧಿ ಸಾಧಿಸಬೇಕು ಎನ್ನುವುದು ನಮ್ಮ ಗುರಿಯಲ್ಲ. ಬದಲಿಗೆ, ನಮ್ಮ ಜೊತೆಯಲ್ಲಿ ನಡೆಯುತ್ತಿರುವವರ ವಿಕಾಸವನ್ನೂ ನಾವು ಸಾಧಿಸಬೇಕು; ಈ ಮೂಲಕ ನಾವೆಲ್ಲರೂ ಜತೆಜತೆಯಾಗಿ ಸಾಗಬೇಕು. ಇದೇ ನಮ್ಮ ಮೂಲ ಚಿಂತನೆಯಾಗಿದೆ.  

ನನ್ನೊಂದಿಗೆ ರುವಾಂಡಾಕ್ಕೆ ಬಂದಿರುವ ಭಾರತೀಯ ವಾಣಿಜ್ಯ ನಿಯೋಗದ ಪ್ರತಿನಿಧಿಗಳಿಗೆ ನಾನು ಒಂದು ಮಾತನ್ನು ಹೇಳಬಯಸುತ್ತೇನೆ. ಅದೇನೆಂದರೆ,  ತಾವ್ಯಾರೂ ಯಾವುದೋ ಒಂದು ಯಃಕಶ್ಚಿತ್ ಉದ್ದೇಶದೊಂದಿಗೆ ರುವಾಂಡಾಕ್ಕೆ ಬಂದಿರುವುದಾಗಿ ಭಾವಿಸಬೇಡಿ. ಇವತ್ತು ರುವಾಂಡಾ ಹೇಗಿದೆಯೆಂದರೆ, ಇದು ಇಡೀ ಆಫ್ರಿಕಾದ ಹೆಬ್ಬಾಗಿಲಾಗಿದೆ. ರುವಾಂಡಾ ಮತ್ತು ಅದು ಅಳವಡಿಸಿಕೊಂಡಿರುವ ಅಥವಾ ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯನ್ನು ಕುರಿತು ಇಡೀ ಆಫ್ರಿಕಾದಲ್ಲಿ ಚರ್ಚಿಸಲಾಗುತ್ತಿದೆ. ಹಾಗೆ ನೋಡಿದರೆ, ಇದು ಇಡೀ ಆಫ್ರಿಕಾದಲ್ಲಿ ಒಂದು ಹೊಸ ಬಗೆಯ ಪ್ರವೃತ್ತಿ ಕಾಣುತ್ತಿದ್ದು, ಸ್ವತಃ ಇಲ್ಲಿನ ಅಧ್ಯಕ್ಷರೇ ಇದನ್ನು ಮುನ್ನಡೆಸುತ್ತಿದ್ದಾರೆ. ನೀವು ಈ ದೇಶಕ್ಕೆ ಭೇಟಿ ನೀಡುವುದೆಂದರೆ, ನೀವು ಕೇವಲ ಯಾವುದೋ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರ್ಥ. ಇದನ್ನು ನೀವು ಅರ್ಥ ಮಾಡಿಕೊಂಡಿರೆಂದರೆ, ನಿಮ್ಮ ಪಾಲಿಗೆ ಅನೇಕ ಸಾಧ್ಯತೆಗಳು, ಸವಾಲುಗಳು ಮತ್ತು ಅವಕಾಶಗಳು ತೆರೆದುಕೊಳ್ಳುತ್ತವೆ. ನೀವು ಇಂತಹ ಸದವಕಾಶವನ್ನು ಕಳೆದುಕೊಳ್ಳಲಾರಿರಿ ಎಂದು ನಾನು ನಂಬಿದ್ದೇನೆ. 

ನಾನು ಒಂದು ಸಂಗತಿಯನ್ನು ನಿನ್ನೆಯಿಂದಲೂ ಗಮನಿಸುತ್ತಿದ್ದೇನೆ. ಅದೇನೆಂದರೆ, ಇಲ್ಲಿನ ರಾಷ್ಟ್ರಾಧ್ಯಕ್ಷರು ತುಂಬಾ ಉತ್ಕಟವಾದ ಆಸಕ್ತಿಯನ್ನು/ ತತ್ಪರತೆಯನ್ನು ಹೊಂದಿದ್ದಾರೆ.  ಉತ್ತಮ ಆಡಳಿತ, ದೇಶದ ಅಭಿವೃದ್ಧಿ, ಜನರ ಪ್ರಗತಿ, ಸಮಾಜದಲ್ಲಿ ಶಾಂತಿ ಇವೆಲ್ಲವೂ ಅವರ ಚಿಂತನೆಯಲ್ಲಿ ಪ್ರಮುಖವಾಗಿದ್ದು,  ಹಾಸುಹೊಕ್ಕಾಗಿವೆ.  ಅಂದಹಾಗೆ, ಈ ಸಂಗತಿಗಳೆಲ್ಲವೂ ಭಾರತೀಯರಿಗೆ ತುಂಬಾ ಇಷ್ಟವಾದ ಸಂಗತಿಗಳಾಗಿವೆ. ಏಕೆಂದರೆ, ನಮ್ಮ ಸ್ವಭಾವಕ್ಕೆ ಈ ಸಂಗತಿಗಳೆಲ್ಲವೂ ತುಂಬಾ ಚೆನ್ನಾಗಿ ಹಿಡಿಸುತ್ತವೆ.  

ಇಡೀ ಜಗತ್ತು ಆಫ್ರಿಕಾದ ಬಗ್ಗೆ ಏನೊಂದನ್ನೂ ಮಾತನಾಡದೇ ಇದ್ದಂತಹ ದಿನಗಳಲ್ಲಿ ನಾವು –ಭಾರತ- ಇಲ್ಲಿಗೆ ಅಡಿಯಿಟ್ಟೆವು. ನಾವು ಇಲ್ಲಿಗೆ ಬಂದಾಗ ಜಗತ್ತಿನಲ್ಲಿ ಯಾರೊಬ್ಬರೂ ಆಫ್ರಿಕಾಗೆ  ಭೇಟಿ ನೀಡುವ ಒಂದು ಸಣ್ಣ ಆಲೋಚನೆಯನ್ನೂ ಮಾಡುತ್ತಿರಲಿಲ್ಲ. 

ನಾನು ಇಲ್ಲೊಂದು ಉದಾಹರಣೆ ಕೊಡಬಯಸುತ್ತೇನೆ. ಅದೇನೆಂದರೆ, ನಮ್ಮ ಗುಜರಾತಿನಲ್ಲಿ ರಾಜಸ್ತಾನದ ಜೋಧಪುರದಿಂದ ಬಂದಿರುವ ಒಂದು ಕುಟುಂಬವಿದೆ. ಪ್ರಾಯಶಃ ಈ ಕುಟುಂಬವು 19ನೇ ಶತಮಾನದ ಕೊನೆಯಲ್ಲಿ ಗುಜರಾತಿಗೆ ಬಂದಿತೆನಿಸುತ್ತದೆ.  ಆಗಿನಿಂದಲೂ ಭಾರತದಿಂದದೆಷ್ಟೋ ಕುಟುಂಬಗಳು ರುವಾಂಡಾಕ್ಕೆ ವಲಸೆ ಬಂದಿವೆ. ಹೀಗೆ ಬಂದವರೆಲ್ಲರೂ ಇಲ್ಲಿಯ ಸ್ಥಳೀಯರೊಂದಿಗೆ ಮಿಳಿತಗೊಂಡಿದ್ದಾರೆ. ಅಲ್ಲದೆ, ಇವರೆಲ್ಲರೂ ಈ ದೇಶದ ಅಭಿವೃದ್ಧಿಯ ಪಯಣದ ಭಾಗವಾಗಿದ್ದಾರೆ. ಈಗ ಇಡೀ ಜಗತ್ತಿನ ಗಮನ ಈ ದೇಶದ ಮೇಲಿದೆ ಎನ್ನುವುದು ಸತ್ಯ. ಒಟ್ಟಿನಲ್ಲಿ ಇಡೀ ಜಗತ್ತೇ ಈ ದೇಶಕ್ಕೆ ಬರಲು ಹಂಬಲಿಸುತ್ತಿದೆ. ಇದೇನೇ ಇರಲಿ, ನಮಗೆ ಯಾವಾಗ ಈ ದೇಶದಲ್ಲೊಂದು ಸ್ಥಳಾವಕಾಶ ಅಗತ್ಯವಿತ್ತೋ ಆ ಸಂದರ್ಭದಲ್ಲೇ ಇಲ್ಲಿಗೆ ಬಂದಿಳಿದೆವು. ಇಷ್ಟೇ ಅಲ್ಲ, ಇವತ್ತು ನಾವು ಇಲ್ಲಿಯವರ ವಿಕಾಸಕ್ಕೆ/ಅಭಿವೃದ್ಧಿಗೆ ಸಹಾಯ ನೀಡುತ್ತಿದ್ದೇವೆ. ಇದರಿಂದಾಗಿ ನಾವು ಜತೆಯಾಗಿ ಇಡೀ ಜಗತ್ತಿಗೆ ಸಹಾಯ ಮಾಡಬಹುದು. ಅಂದರೆ, ಇನ್ನೂ ತೀರಾ ಹಿಂದುಳಿದಿರುವವರನ್ನು ಮೇಲಕ್ಕೆತ್ತಲು ಕೈಚಾಚಬಹುದು; ಅವಕಾಶ ವಂಚಿತರಿಗೆ ಸಹಾಯಹಸ್ತ ನೀಡಬಹುದು. ನಾವು ಈ ಉದ್ದೇಶದೊಂದಿಗೆ ಜಗತ್ತಿನೆಡೆಗೆ ಹೋಗುತ್ತಿದ್ದು, ಉಳಿದ ದೇಶಗಳನ್ನೂ ಜತೆಯಲ್ಲಿ ಕರೆದುಕೊಂಡು ಸಾಗುತ್ತಿದ್ದೇವೆ. ಜಗತ್ತಿನ ಈ ದೇಶಗಳ ಜನರ ಕಲ್ಯಾಣಕ್ಕೆ ಕಿಂಚಿತ್ತಾದರೂ ನೆರವು ನೀಡಬೇಕೆನ್ನುವುದು ನಮ್ಮ ಹಂಬಲವಾಗಿದೆ.  

ಇಲ್ಲಿನ ಅಧ್ಯಕ್ಷರು ಗುಜರಾತಿಗೆ ಭೇಟಿ ನೀಡಿದ್ದರು. ಆಗ ಅವರು ಅಲ್ಲಿನ ಅನೇಕ ಸಂಗತಿಗಳನ್ನು ಕಣ್ಣಾರೆ ಕಂಡರಲ್ಲದೆ, ಅವುಗಳನ್ನು ಸ್ವತಃ ಅರ್ಥ ಮಾಡಿಕೊಂಡರು. ಇಲ್ಲಿನ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾಗ ಅಭಿವೃದ್ಧಿಯೊಂದಿಗೆ ಥಳುಕು ಹಾಕಿಕೊಂಡಿರುವ ಪ್ರತಿಯೊಂದರ ಬಗ್ಗೆಯೂ ಆಸಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಅಂದರೆ, ಎಲ್ಲವನ್ನೂ ಸ್ವತಃ ಅವರೇ ತಿಳಿದುಕೊಳ್ಳುತ್ತಿದ್ದರು. ಅಲ್ಲದೆ, ಜನರನ್ನು ತಮ್ಮ ದೇಶಕ್ಕೆ ಬರುವಂತೆ ಆಹ್ವಾನಿಸುತ್ತಿದ್ದರು.  

ಯಾವುದೇ ಒಂದು ದೇಶದ ಅಧ್ಯಕ್ಷರಿಗೇ ಸ್ವತಃ ಅಭಿವೃದ್ಧಿಯನ್ನು ಸಾಧಿಸುವ ಬಗ್ಗೆ ಇಷ್ಟೊಂದು ಬದ್ಧತೆಯಿದ್ದಾಗ ಮತ್ತು ಪ್ರತಿಯೊಂದನ್ನೂ ಸ್ವತಃ ಅರ್ಥ ಮಾಡಿಕೊಳ್ಳುವ, ಸ್ವೀಕರಿಸುವ ಹಾಗೂ ಹೊಸಹೊಸ ಸಂಗತಿಗಳನ್ನು ಸಾಕಾರಗೊಳಿಸುವ ಸ್ವಭಾವವಿದ್ದಾಗ ಯಾವ ಬಗೆಯ ಕೆಲಸವನ್ನು ಮಾಡಲೂ ಅಡೆತಡೆಗಳಿರುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ.  

ಸಾಧನೆಯನ್ನು ಮಾಡುವವರಿಗೆ ಅಥವಾ ಶ್ರಮಪಟ್ಟು ಕೆಲಸ ಮಾಡುವವರಿಗೆ ಸೀಮಾತೀತವಾದ ಸಾಧ್ಯತೆಗಳಿವೆ. ನೀವು ಒಂದು ಕಿಟಕಿಯನ್ನು ತೆರೆದರೆ ಸಾಕು, ಇನ್ನೊಂದು ಕಿಟಕಿ ತನ್ನಿಂತಾನೇ ತೆರೆದುಕೊಳ್ಳುತ್ತದೆ. ನೀವು ಎರಡನೆಯ ಕಿಟಕಿಯನ್ನು ತೆರೆಯಿರಿ, ಅದಕ್ಕಿಂತ ದೊಡ್ಡ ಅವಕಾಶ ನಿಮ್ಮತ್ತ ತಾನೇ ಬರುತ್ತದೆ. ಇದೇ ರೀತಿಯಲ್ಲಿ ನೀವು ಮುಂದಡಿ ಇಟ್ಟರೆ ಸಾಕು, ನೀವು ಮುಂದುಮುಂದಕ್ಕೆ ಸಾಗುತ್ತಲೇ ಇರುತ್ತೀರಿ. ಹೀಗೆ ಸಾಗುತ್ತ ಸಾಗುತ್ತ ಕೊನೆಗೆ ಯಶಸ್ಸನ್ನು ಕಾಣುತ್ತಲೇ ಹೋಗುತ್ತೀರಿ. ನಾನು ಅಂತಹ ಸಾಧ್ಯತೆಗಳನ್ನು ಇಲ್ಲಿ ತುಂಬಾ ಸ್ಪಷ್ಟವಾಗಿ ಕಾಣುತ್ತಿದ್ದೇನೆ. ಇಷ್ಟೇ ಅಲ್ಲ, ಭಾರತದಲ್ಲೂ ಇಂತಹುದೇ ಸಮಾನ ಅವಕಾಶಗಳಿವೆ. ರುವಾಂಡಾದಲ್ಲಿ ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ವಾಣಿಜ್ಯ ವಹಿವಾಟು ನಡೆಸುವವರಿದ್ದಾರೆ. ಇವರು ಭಾರತಕ್ಕೆ ಬರಲು ಬಯಸಿದರೆ, ಅವರಿಗೆ ಅಗತ್ಯವಾದ ಸಕಲ ಸೌಲಭ್ಯಗಳನ್ನೂ ಒದಗಿಸಲು ನಾವು ಸಿದ್ಧರಾಗಿದ್ದೇವೆ. ಹೀಗಾಗಿ, ನಾನು ಇಂತಹವರನ್ನೆಲ್ಲ ಆಹ್ವಾನಿಸುತ್ತಿದ್ದೇನೆ. 

ರುವಾಂಡಾ ದೇಶವು ಇಂದು ಒಂದು ವಿಶಿಷ್ಟ ಬಗೆಯ ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ. ಅದು ಮೂಲಸೌಲಭ್ಯ ಸುಧಾರಣೆಯೇ ಇರಲಿ ಅಥವಾ ಗ್ರಾಮೀಣಾಭಿವೃದ್ಧಿಯೇ ಇರಲಿ, ಅದು ಆರ್ಥಿಕ ಚಟುವಟಿಕೆಗಳೇ ಇರಲಿ ಅಥವಾ ಸಣ್ಣ ಕೈಗಾರಿಕೆಗಳ ಜಾಲವನ್ನು ಸ್ಥಾಪಿಸುವ ವಿಚಾರವೇ ಆಗಿರಲಿ, ಅದು ತನ್ನ ಉತ್ಪನ್ನಗಳಿಗಾಗಿ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ವಿಚಾರವೇ ಇರಲಿ ಅಥವಾ ಇನ್ನಾವುದೇ ಸಂಗತಿಯಾಗಿರಲಿ, ರುವಾಂಡಾ ತುಂಬಾ ಅನನ್ಯವಾದ ಹಾದಿಯಲ್ಲಿ ಸಾಗುತ್ತಿದೆ. ಇದನ್ನೆಲ್ಲ ಭಾರತೀಯ ವಾಣಿಜ್ಯ ವಹಿವಾಟುದಾರರು ಗಮನಿಸಬೇಕು. ಅಂದರೆ, ನೀವೆಲ್ಲರೂ ಜತೆಗೂಡಿ ಸಾಕಷ್ಟು ಕೆಲಸ ಮಾಡಬಹುದು. 

ಭಾರತವು ಈಗ `ಮೇಕ್ ಇನ್ ಇಂಡಿಯಾ’ ಆಂದೋಲನವನ್ನೇ ಆರಂಭಿಸಿದೆ. ಈ ಅನುಭವವನ್ನು ನಾವು ರುವಾಂಡಾದೊಂದಿಗೆ ಹಂಚಿಕೊಳ್ಳಬಹುದು. ಈ ವಿಚಾರದಲ್ಲಿ ನಾವು (ಭಾರತೀಯರು) ರುವಾಂಡಾದವರೊಂದಿಗೆ ಕೈ ಜೋಡಿಸಬಹುದು. ನಾವೀಗ ಅಂತಾರಾಷ್ಟ್ರೀಯ ಸೌರ ಒಕ್ಕೂಟದವರೊಂದಿಗೆ ಕೆಲಸ ಮಾಡುತ್ತಿದ್ದು, ಈ ಮೂಲಕ ಹವಾಮಾನ ಬದಲಾವಣೆಯೊಂದಿಗೆ ಥಳುಕು ಹಾಕಿಕೊಂಡಿರುವ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದೇವೆ. ಜನರ ಜೀವನವನ್ನು ಸುಗಮಗೊಳಿಸುವ ಆಶಯದೊಂದಿಗೆ ನಮ್ಮಲ್ಲಿ ಬಹುದೊಡ್ಡ ಆಂದೋಲನವೇ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸೌರಶಕ್ತಿಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ತುಂಬಾ ಗಂಭೀರವಾಗಿ ನಾವು ಆಲೋಚಿಸುತ್ತಿದ್ದೇವೆ. ರುವಾಂಡಾದ ಜನರು ಇದರ ಸದುಪಯೋಗವನ್ನು ಪಡೆಯಲು ಮುಂದೆ ಬರುತ್ತಾರೆಂದು ನಾನು ಭರವಸೆ ಇಟ್ಟುಕೊಂಡಿದ್ದೇನೆ. 

ಇಂದು ನಾನು ಇಲ್ಲಿನ ಅಧ್ಯಕ್ಷರೊಂದಿಗೆ ಪ್ರಯಾಣ ಮಾಡುತ್ತಿದ್ದೆ. ಆ ಘಳಿಗೆಗಳಲ್ಲಿ ನಾನು ಅವರೊಂದಿಗೆ ಎಲ್ಇಡಿ ದೀಪಗಳ ಬಳಕೆಯ ಬಗ್ಗೆ ವಿಚಾರ ವಿನಿಮಯ ನಡೆಸಿದೆ. ಈ ಎಲ್ಇಡಿ ದೀಪಗಳು ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಿವೆ. ಈ ದೀಪಗಳನ್ನು ಅಳವಡಿಸುವುದಕ್ಕೂ ಮೊದಲು ಬರುತ್ತಿದ್ದ ವಿದ್ಯುತ್ ಶುಲ್ಕದ ಮೂರನೇ ಒಂದರಷ್ಟು ಮಾತ್ರ ಈಗ ವಿದ್ಯುತ್ ಬಿಲ್ ಆಗಿ ಬರುತ್ತಿದೆ. ಒಂದು ವೇಳೆ, ನಾವು ರುವಾಂಡಾದಲ್ಲಿ ಈ ಆಂದೋಲನವನ್ನು ಪ್ರಾರಂಭಿಸಿದ್ದೇ ಆದಲ್ಲಿ ಇಲ್ಲಿನ ಜನರು ಇಂಧನ ಉಳಿತಾಯ ಮಾಡಲು ಅದರಿಂದ ಸಾಧ್ಯವಾಗಲಿದೆ. ಜೊತೆಗೆ, ಇಲ್ಲಿನ ಬಡವರು ಮತ್ತು ಮಧ್ಯಮ ವರ್ಗದವರಿಗೆ ಇದರಿಂದ ಪ್ರಯೋಜನವಾಗಲಿದೆ. 

ಯಾವಾಗ ವಿದ್ಯುತ್ತಿನ ಅಗತ್ಯ ಕಡಿಮೆಯಾಗುತ್ತದೋ ಆಗ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಆಗುವ ಖರ್ಚು-ವೆಚ್ಚ ಕೂಡ ಕಡಿಮೆಯಾಗುತ್ತದೆ. ಹಾಗೆಯೇ, ನಾವು ಹೀಗೆ ಉಳಿತಾಯ ಮಾಡುವ ವಿದ್ಯುತ್ತನ್ನು ಕೈಗಾರಿಕೆಗಳಿಗೆ ಬಳಸಿಕೊಳ್ಳಬಹುದು. ಒಂದು ಸಣ್ಣ ಸಂಗತಿಯ ಮೂಲಕ ಎಂತಹ ದೊಡ್ಡ ಸಂಗತಿಯನ್ನು ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಹೈನುಗಾರಿಕೆ ಕ್ಷೇತ್ರದಲ್ಲಿ ಕೂಡ ಸಾಕಷ್ಟನ್ನು ಸಾಧಿಸಲು ಅವಕಾಶವಿದೆ. ರುವಾಂಡಾದಲ್ಲಿ `ಕ್ಷೀರ ಕ್ರಾಂತಿ’ಯನ್ನು ಕೈಗೊಳ್ಳಲು ಕೂಡ ಸಾಧ್ಯವಿದೆ. ಅಂದಂತೆ, ಹೈನುಗಾರಿಕೆ ಕ್ಷೇತ್ರದಲ್ಲಿ ಭಾರತಕ್ಕೆ ಅಪಾರವಾದ ಜ್ಞಾನವಿದೆ. ನಾವು ಪರಸ್ಪರ ಕೈ ಜೋಡಿಸುವ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಭಾರತವು ಹಳ್ಳಿಗಳ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ಹಲವು ಬಗೆಯ ಸಾಮರ್ಥ್ಯಗಳನ್ನು ಹೊಂದಿದೆ. ಹಾಗೆಯೇ ಭಾರತೀಯ ವಾಣಿಜ್ಯ ಸಮುದಾಯ ಮತ್ತು ಕೈಗಾರಿಕೋದ್ಯಮ ಕೂಡ ಶಕ್ತಿಯುತವಾಗಿವೆ. ಇವೆಲ್ಲವನ್ನೂ ನಾವು ರುವಾಂಡಾದ ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದು. ರುವಾಂಡಾ ನಮ್ಮ ಮಿತ್ರರಾಷ್ಟ್ರವಾಗಿದೆ. ನೀವು ಈ ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ದೇಶದ ಸಂಸ್ಕೃತಿಗೂ ನಮ್ಮ ದೇಶದ ಸಂಸ್ಕೃತಿಗೂ ಇರುವ ಸಾಮ್ಯಗಳು ನಿಮಗೆ ಗೊತ್ತಾಗುತ್ತವೆ. ನೀವು ಎಲ್ಲದರೊಂದಿಗೆ ಒಂದು ಬಗೆಯ ಗಾಢ ಸಂಬಂಧವನ್ನು ಹೊಂದಿದ್ದೀರಿ. ಇಂತಹ ಆಪ್ತ ಅಥವಾ ಗಾಢಸಂಬಂಧದ ಭಾವವನ್ನು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಪಾರದರ್ಶಕ ಆಡಳಿತ, ದಕ್ಷತೆ ಹಾಗೂ ಬದ್ಧತೆಯುಳ್ಳ ನಾಯಕತ್ವವನ್ನು ಹೊಂದಿರುವ ದೇಶದಲ್ಲಿ ಕೆಲಸ ಮಾಡುವುದು ಎಷ್ಟೊಂದು ಸುಲಭವಾಗಿರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. 

ನಾನು ನಿನ್ನೆಯ ದಿನ ಈ ದೇಶದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ಇಲ್ಲಿನ ರಾಷ್ಟ್ರಾಧ್ಯಕ್ಷರು ತಮ್ಮ ಇಡೀ ಸಮಯವನ್ನು ನನ್ನೊಂದಿಗೆ ಕಳೆದಿದ್ದಾರೆ. ಇದು ನಿಜಕ್ಕೂ ಅತ್ಯಪರೂಪದ ಸಂಗತಿಯಾಗಿದೆ. ಇಲ್ಲಿನ ಇಡೀ ಸರಕಾರ ನನ್ನೊಂದಿಗಿದೆ. ಅಧಿಕಾರದಲ್ಲಿರುವ ನಾವು ಸದಾ ಒಂದಿಲ್ಲೊಂದು ದೇಶಕ್ಕೆ ಭೇಟಿ ನೀಡುತ್ತಲೇ ಇರುತ್ತೇವೆ. ಆದರೆ, ಇಂತಹ ಸಂದರ್ಭದಲ್ಲಿ ಒಂದೊಂದು ಕ್ಷಣವನ್ನೂ ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದನ್ನು ರುವಾಂಡಾದ ಅಧ್ಯಕ್ಷರಿಂದ ಕಲಿತುಕೊಳ್ಳಬೇಕು. ಇದರಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಇದಕ್ಕಾಗಿ ನಾನು, ರುವಾಂಡಾದ ಅಧ್ಯಕ್ಷರಿಗೆ ಪುನಃ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ, ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ. 

###