Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ, ವಿವೇಕ ಸ್ಮಾರಕ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ, ವಿವೇಕ ಸ್ಮಾರಕ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


“ಎಲ್ಲರಿಗೂ ನನ್ನ ನಮಸ್ಕಾರಗಳು.”

ಬೇಲೂರಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮಿ ಗೌತಮಾನಂದ ಜಿ ಮಹಾರಾಜ್, ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದ ಜಿ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಟ್ರಸ್ಟಿ ಪೂಜ್ಯ ಸ್ವಾಮಿ ಯದ್ವೇಂದ್ರಾನಂದ ಜಿ, ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ಜಿ, ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಜಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಿ, ಶಾಸಕರಾದ ವಿಜಯೇಂದ್ರ ಯಡಿಯೂರಪ್ಪ, ಜಿ, ಕೆ. ಹರೀಶ್ ಗೌಡ ಜಿ, ಇಲ್ಲಿ ಉಪಸ್ಥಿತರಿರುವ ಇತರೆ ಎಲ್ಲಾ ಗಣ್ಯರೆ, ಪೂಜ್ಯ ಸಾಧು ಸಂತರೆ ಮತ್ತು ಸಹೋದರ ಸಹೋದರಿಯರೆ.

ಮೊದಲನೆಯದಾಗಿ, ನಾನು ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸುತ್ತೇನೆ. ಕೇವಲ 2 ದಿನಗಳ ಹಿಂದೆ, ನಾವೆಲ್ಲರೂ ಗುರು ಪೂರ್ಣಿಮೆ ಆಚರಿಸಿದೆವು. ನಿಮಗೆಲ್ಲರಿಗೂ ತಿಳಿದಿರುವಂತೆ, ನನ್ನ ಪ್ರಯಾಣ ಎಲ್ಲಿಂದ ಪ್ರಾರಂಭವಾಯಿತು, ಇಂದು ನಾನು ಎಲ್ಲಿದ್ದೇನೆ, ರಾಮಕೃಷ್ಣ ಮಿಷನ್ ಅದಕ್ಕೆ ಬಹಳ ಮುಖ್ಯವಾದ ಕೊಡುಗೆ ನೀಡಿದೆ. 3 ತಿಂಗಳ ಹಿಂದೆ ನಾನು ಹೌರಾದ ಬೇಲೂರು ಮಠಕ್ಕೆ ಹೋಗಿದ್ದೆ. ಎಲ್ಲಾ ಪೂಜ್ಯ ಸಾಧು ಸಂತರೊಂದಿಗೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಇಂದು ನನಗೆ ಮತ್ತೆ ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮದೊಂದಿಗೆ ಸಂಬಂಧ ಹೊಂದಿರುವ ಸಾಧು ಸಂತರನ್ನು, ನನ್ನ ಗುರುಗಳು, ಹಿರಿಯರು ಮತ್ತು ಸಹೋದರರನ್ನು ಭೇಟಿ ಮಾಡಲು ಮತ್ತು ಅವರ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಅದೃಷ್ಟ. ನಿಮ್ಮೆಲ್ಲರ ಉಪಸ್ಥಿತಿಯಿಂದಾಗಿ ಇಂದು ಈ ಪವಿತ್ರ ಭೂಮಿ ಮೈಸೂರಿನಲ್ಲಿ ನಾನು ಸಂಪೂರ್ಣವಾಗಿ ವಿಭಿನ್ನವಾದ ಶಕ್ತಿಯನ್ನು ಅನುಭವಿಸುತ್ತಿದ್ದೇನೆ. ನಾನು ಇಲ್ಲಿರುವ ಎಲ್ಲಾ ಸಾಧು ಸಂತರ ಪಾದಗಳಿಗೆ ಗೌರವದಿಂದ ನಮಿಸುತ್ತೇನೆ.

ಸ್ನೇಹಿತರೆ,

ಮೈಸೂರು ಭಾರತದ ಶಾಶ್ವತ ಸಾಂಸ್ಕೃತಿಕ ಪ್ರಜ್ಞೆಯ ನಗರಿಯಾಗಿದೆ. ಇಲ್ಲಿನ ದೇವಾಲಯಗಳು, ಇಲ್ಲಿನ ಸಂಪ್ರದಾಯಗಳು ಮತ್ತು ಹಬ್ಬಗಳು, ಮೈಸೂರು ದಸರಾ, ಭವ್ಯ ಅರಮನೆಗಳು, ಸಂಗೀತ ಮತ್ತು ಸಾಹಿತ್ಯ, ಭಾರತದ ಪರಂಪರೆಯು ಈ ನಗರದ ಪ್ರತಿಯೊಂದು ಕಣದಲ್ಲೂ ಸೇರಿಕೊಂಡಿದೆ. ಇದನ್ನು ನೋಡುವುದೇ ಬಹಳ ತೃಪ್ತಿ ನೀಡುತ್ತದೆ. ಈ ನಗರವು ಈ ಪರಂಪರೆಯನ್ನು ಸಮಾನ ಕೌಶಲ್ಯದಿಂದ ಸಂರಕ್ಷಿಸಿ ಪೋಷಿಸಿದೆ. ಶ್ರೀ ರಾಮಕೃಷ್ಣ ಆಶ್ರಮ ಮತ್ತು ಸ್ವಾಮಿ ವಿವೇಕಾನಂದ ಜಿ ಅವರ ನೆನಪುಗಳು ಸಹ ಮೈಸೂರಿನ ಪರಂಪರೆಯ ಶ್ರೀಮಂತ ಭಾಗವಾಗಿದೆ. ಸ್ವಲ್ಪ ಸಮಯದ ಹಿಂದೆ, ಸ್ವಾಮಿ ವಿವೇಕಾನಂದ ಜಿ ಅವರು ತಮ್ಮ ವಾಸ್ತವ್ಯದ ಸಮಯದಲ್ಲಿ ಸ್ವಲ್ಪ ಸಮಯ ಕಳೆದ ಆ ಐತಿಹಾಸಿಕ ಕಟ್ಟಡಕ್ಕೆ ನಾನು ಹೋಗಿದ್ದೆ. ಕರ್ನಾಟಕದ ಅನೇಕ ವಿದ್ವಾಂಸರು ಮತ್ತು ಚಿಂತಕರು ಈ ಸ್ಥಳದೊಂದಿಗೆ ಸಂಬಂಧ ಹೊಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳು ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮದೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಇಂದು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರದ ಉದ್ಘಾಟನೆಯ ಮೂಲಕ ಅಂದರೆ ವಿವೇಕ ಸ್ಮಾರಕದ ಮೂಲಕ, ನಾವು ಈ ಧ್ಯೇಯಕ್ಕೆ ಹೊಸ ಆಯಾಮ ನೀಡುತ್ತಿದ್ದೇವೆ. ಇದಕ್ಕಾಗಿ ಶ್ರೀ ರಾಮಕೃಷ್ಣ ಆಶ್ರಮ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ವಿದ್ವಾಂಸರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಒಬ್ಬ ವ್ಯಕ್ತಿಯಿಂದ ಮಹಾನ್ ವ್ಯಕ್ತಿತ್ವದ ತನಕ ಆಗುವ ಪರಿವರ್ತನೆ ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಇದಕ್ಕಾಗಿ ನಾವು ಜೀವನದ ಅಸಂಖ್ಯಾತ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರು ಸಾಧನೆ ಮಾಡಬೇಕು, ತಪಸ್ಸು ಮಾಡಬೇಕು, ತನ್ನನ್ನು ತಾನೇ ದಹಿಸಿಕೊಳ್ಳಬೇಕು ಮತ್ತು ತನ್ನನ್ನು ತಾನೇ ಮುಡಿಪಾಗಿಟ್ಟುಕೊಳ್ಳಬೇಕು. ಹಾಗೆ ಮಾಡಿ ಖ್ಯಾತಿಯನ್ನು ಗಳಿಸಿದ ನಂತರ, ಜಗತ್ತು ನಿಮ್ಮ ಹಿಂದೆ ನಿಲ್ಲುತ್ತದೆ. ಆದರೆ, ತಪಸ್ಸಿನ ಸಮಯದಲ್ಲಿ ಮಹಾನ್ ವ್ಯಕ್ತಿಗಳನ್ನು ಗುರುತಿಸುವುದು ಸುಲಭವಲ್ಲ. ಆದರೆ ಅವರ ತಪಸ್ಸನ್ನು ಗುರುತಿಸುವ ಅನ್ವೇಷಕನು ಅವರ ಯಶಸ್ಸಿನಲ್ಲಿ ಪಾಲುದಾರನಾಗುತ್ತಾನೆ.

ಆದ್ದರಿಂದ, ಸಹೋದರ ಸಹೋದರಿಯರೆ,

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರಿಗೆ ಅಂತಹ ಮಹತ್ವದ ಕೊಡುಗೆ ಇತ್ತು. ಸುಮಾರು 130 ವರ್ಷಗಳ ಹಿಂದೆ, ಸ್ವಾಮಿ ಜಿ ಯುವ ಸನ್ಯಾಸಿಯಾಗಿ ಪ್ರಯಾಣಿಸುವಾಗ ಮೈಸೂರಿಗೆ ಬಂದರು. ಆ ಸಮಯದಲ್ಲಿ ಅವರ ಖ್ಯಾತಿ ಹೀಗಿರಲಿಲ್ಲ. ಆದರೆ ಆಲೋಚನೆಗಳು ಅಷ್ಟೇ ಪ್ರಭಾವಿತವಾಗಿದ್ದವು. ಆ ಸಮಯದಲ್ಲಿ ಅವರನ್ನು ಗುರುತಿಸಿ ಅವರೊಂದಿಗೆ ಸೇರಿದ ಜನರಲ್ಲಿ, ಒಂದು ಪ್ರಮುಖ ಹೆಸರು ಅಂದಿನ ಮೈಸೂರು ಮಹಾರಾಜರದ್ದಾಗಿತ್ತು. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ, ಅವರು ಅಲ್ಲಿಂದ ಅಂದಿನ ಮೈಸೂರು ಮಹಾರಾಜರಿಗೆ ಪತ್ರ ಬರೆದರು. ಅದರಲ್ಲಿ, ಅವರೇ ಮಹಾರಾಜರ ಬೆಂಬಲವನ್ನು ಉಲ್ಲೇಖಿಸಿದ್ದರು.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ಭಾರತೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು. “ಪರ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ” ಎಂದು ಹೇಳುವ ಧರ್ಮಗ್ರಂಥಗಳನ್ನು ಮೈಗೂಡಿಸಿಕೊಂಡಿದ್ದರು. ಅಂದರೆ, ವಾಸ್ತವದಲ್ಲಿ ಇತರರಿಗಾಗಿ ಬದುಕುವವನು ಮಾತ್ರ ಬದುಕುತ್ತಾನೆ. ಈ ಮಂತ್ರದ ಮೇಲೆಯೇ ಮುನ್ನಡೆಯುತ್ತಾ ಬಂದಿರುವ ಮೈಸೂರಿನ ಈ ಶ್ರೀ ರಾಮಕೃಷ್ಣ ಆಶ್ರಮವು ಕಳೆದ ವರ್ಷ ತನ್ನ 100 ವರ್ಷಗಳನ್ನು ಪೂರೈಸಿ, ಶತಮಾನೋತ್ಸನ ಆಚರಿಸಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳಾಗಲಿ, ಅಥವಾ ಪ್ರಕೃತಿ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯಗಳಾಗಲಿ, ಶ್ರೀ ರಾಮಕೃಷ್ಣ ಆಶ್ರಮವು ಸ್ವಾಮಿ ವಿವೇಕಾನಂದರ ಪರಂಪರೆಯನ್ನು ಜೀವಂತವಾಗಿಟ್ಟಿದೆ. ಅನ್ವೇಷಕರು ಮತ್ತು ಭಕ್ತರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ವಿವೇಕ ಸ್ಮಾರಕವು ತೀರ್ಥಯಾತ್ರೆಯ ಪವಿತ್ರ ಸ್ಥಳವಾಗುತ್ತದೆ ಎಂದು ನಾನು ನಂಬುತ್ತೇನೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿ – ‘ಶಿವ ಜ್ಞಾನೇ ಜೀವ ಸೇವೆ’. ಅಂದರೆ, ಜೀವಿಗಳಿಗೆ ಸಲ್ಲಿಸುವ ಸೇವೆಯೇ ಶಿವನ ಸೇವೆ. ಆದ್ದರಿಂದ, ಈ ವಿವೇಕ ಸ್ಮಾರಕದಲ್ಲಿ ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿ, ಬಡವರ ಮತ್ತು ದೀನ ದಲಿತರ ನೋವು ತಮ್ಮ ಸ್ವಂತ ಸಂತೋಷ ಮತ್ತು ದುಃಖಕ್ಕಿಂತ ಹೆಚ್ಚಾಗಿರುವಂತಹ ಯುವಕರನ್ನು ನಾವು ರೂಪಿಸಬೇಕು. ‘ರಾಷ್ಟ್ರ ಮೊದಲು’ ಎಂಬುದು ಸರ್ವೋಚ್ಚ ಮಂತ್ರವಾಗಿರುವ ಮತ್ತು ಭಾರತ ಮಾತೆಯ ಸೇವೆಯೇ ಅವರ ಜೀವನ ಗುರಿಯಾಗಿದೆ.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ನೀಡುವ ಶಿಕ್ಷಣವೇ ರಾಷ್ಟ್ರ ನಿರ್ಮಾಣದ ಬಲಿಷ್ಠ  ಅಡಿಪಾಯವೆಂದು ಪರಿಗಣಿಸಿದ್ದರು. ವಿಶ್ವಾದ್ಯಂತ ದೇಶಗಳು ತಮ್ಮ ಯುವಕರಿಗೆ ಹೇಗೆ ಶಿಕ್ಷಣ ನೀಡುತ್ತಿವೆ ಎಂಬುದನ್ನು ಅವರೇ ನೋಡಿದ್ದರು. ಆದರೆ ದುರದೃಷ್ಟವಶಾತ್, ಆಗ ಭಾರತ ಗುಲಾಮಗಿರಿಯಲ್ಲಿತ್ತು. ಭಾರತದ ಯುವಕರು ಕೂಡ ಗುಲಾಮಗಿರಿಯ ಸರಪಳಿಯಲ್ಲಿ ಬಂಧಿತರಾಗಿದ್ದರು. ಆ ಯುಗದಿಂದ ಇಲ್ಲಿಯವರೆಗೆ, ಭಾರತದ ಯುವಕರು ದೀರ್ಘ ಪ್ರಯಾಣ ನಡೆಸಿದ್ದಾರೆ. ಒಂದು ಕಾಲದಲ್ಲಿ ಸಂಕೋಲೆಯಲ್ಲಿದ್ದ ಭಾರತದ ಯುವಕರು ಇಂದು ವಿಶ್ವದ ಅಭಿವೃದ್ಧಿಗೆ ವೇಗ ನೀಡುತ್ತಿದ್ದಾರೆ. ಇಂದು ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ. ಇಂದು, ಭಾರತವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ. ಇಂದು ಭಾರತದಲ್ಲಿ ತಯಾರಾದ ಡಿಜಿಟಲ್ ಪರಿಹಾರಗಳು ವಿಶ್ವಾದ್ಯಂತದ ಅನೇಕ ದೇಶಗಳಿಗೆ ಸ್ಫೂರ್ತಿಯಾಗುತ್ತಿವೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ. ಇಂದು ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯ ಹೊಸ ಪ್ರಯಾಣದಲ್ಲಿ ವೇಗವಾಗಿ ಮುಂದುವರಿಯುತ್ತಿದೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ. ಇಂದು ಭಾರತವು ಕೃತಕ ಬುದ್ಧಿಮತ್ತೆ, ಡೀಪ್ ಟೆಕ್ನಾಲಜಿ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಹೊಸ ಅಧ್ಯಾಯಗಳನ್ನು ಬರೆಯುತ್ತಿದೆ. ಯಾರಿಂದಾಗಿ? ಭಾರತದ ಯುವಕರ ಸಾಮರ್ಥ್ಯದಿಂದಾಗಿ.

ಕೆಲವೇ ದಿನಗಳ ಹಿಂದೆ, ಭಾರತದ ಯುವಕರು ಬಾಹ್ಯಾಕಾಶದಲ್ಲಿ ಅದ್ಭುತಗಳನ್ನು ಮಾಡಿದ್ದನ್ನು ನಾವು ನೋಡಿದ್ದೇವೆ. ಮೊದಲ ಬಾರಿಗೆ, ಯುವಕರು ನಿರ್ಮಿಸಿದ ಖಾಸಗಿ ಕಂಪನಿಯ ರಾಕೆಟ್ ಬಾಹ್ಯಾಕಾಶವನ್ನು ತಲುಪಿತು. ಇಂದು ಯಾವುದೇ ಕ್ಷೇತ್ರವಾಗಿದ್ದರೂ, ಭಾರತೀಯ ಯುವಕರು ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇಂದು ಸಣ್ಣ ವ್ಯವಹಾರದಲ್ಲಿ ತೊಡಗಿರುವ ಯುವಕರು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ನಮ್ಮ ಸುತ್ತಲೂ ನೋಡುತ್ತಿದ್ದೇವೆ. ಅವರು ಮುದ್ರಾ ಸಾಲಗಳ ಮೂಲಕ ಹೊಸ ಆರಂಭ ಮಾಡುತ್ತಿದ್ದಾರೆ. ಅವರು ದೇಶದ ಸ್ಟಾರ್ಟಪ್ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ಅದು ಆತ್ಮನಿರ್ಭರ ಭಾರತ ಅಭಿಯಾನವಾಗಲಿ ಅಥವಾ ಮೇಕ್ ಇನ್ ಇಂಡಿಯಾ ಅಭಿಯಾನವಾಗಲಿ, ಅದರ ಯಶಸ್ಸಿನ ಹಿಂದೆ ಭಾರತದ ಯುವಕರ ದೈತ್ಯಶಕ್ತಿ ಇದೆ.

ಸ್ನೇಹಿತರೆ,

ಯಾವುದೇ ದೇಶದಲ್ಲಿ ಯುವಕರು ಸರಿಯಾದ ಅವಕಾಶಗಳನ್ನು ಪಡೆದಾಗ, ಸರಿಯಾದ ನಿರ್ದೇಶನವನ್ನು ಪಡೆದಾಗ ಮತ್ತು ತಮ್ಮದೇ ಆದ ನೆಲದಲ್ಲಿ ದೊಡ್ಡ ಕನಸು ಕಾಣುವ ಮತ್ತು ಅವುಗಳನ್ನು ಪೂರೈಸುವ ಆತ್ಮವಿಶ್ವಾಸ ಪಡೆದಾಗ ಮಾತ್ರ ಅವರ ಸಾಮರ್ಥ್ಯವು ಆ ರಾಷ್ಟ್ರದ ಶಕ್ತಿಯಾಗುತ್ತದೆ. ಇದರಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ. ಇಂದು ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಕಳೆದ 12 ವರ್ಷಗಳಲ್ಲಿ, 650ಕ್ಕೂ ಹೆಚ್ಚು ಹೊಸ ವಿಶ್ವವಿದ್ಯಾಲಯಗಳನ್ನು ನಿರ್ಮಿಸಲಾಗಿದೆ. ಕಳೆದ 12 ವರ್ಷಗಳಲ್ಲಿ ಸುಮಾರು 14 ಸಾವಿರ ಹೊಸ ಕಾಲೇಜುಗಳನ್ನು ನಿರ್ಮಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಹೊಸ ಐಟಿಐಗಳನ್ನು ರಚಿಸಲಾಗಿದೆ. 9 ಹೊಸ ಐಐಎಂಗಳು, 7 ಹೊಸ ಐಐಟಿಗಳು ಮತ್ತು 13 ಹೊಸ ಏಮ್ಸ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಇಂದು ದೇಶದಲ್ಲಿ ಎಂಬಿಬಿಎಸ್ ಸೀಟುಗಳು ಸುಮಾರು 1 ಲಕ್ಷ 40 ಸಾವಿರವನ್ನು ತಲುಪಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿಕೆ ಕಂಡಿದೆ.

ಸ್ನೇಹಿತರೆ,

ಒಂದೆಡೆ ನಾವು ಶಿಕ್ಷಣ ಮೂಲಸೌಕರ್ಯ ಆಧುನೀಕರಿಸುತ್ತಿದ್ದೇವೆ. ಅದೇ ಸಮಯದಲ್ಲಿ, ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಅನುಗುಣವಾಗಿ ಭಾರತದ ಯುವ ಸಮೂಹವನ್ನು ಸಿದ್ಧಪಡಿಸುವ ಮಾಧ್ಯಮವಾಗುತ್ತಿದೆ.

ಸ್ನೇಹಿತರೆ,

ಶಾಲಾ ಶಿಕ್ಷಣದಲ್ಲೂ ದೊಡ್ಡ ಪ್ರಮಾಣದಲ್ಲಿ ಕೆಲಸಗಳನ್ನು ಮಾಡಲಾಗಿದೆ. ದೇಶಾದ್ಯಂತ 14 ಸಾವಿರಕ್ಕೂ ಹೆಚ್ಚು ಪಿಎಂಶ್ರೀ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಶಿಕ್ಷಣವು ಕೇವಲ ಪುಸ್ತಕಮಯವಾಗಿ ಉಳಿಯಬಾರದು, ಮಕ್ಕಳಲ್ಲಿ ನಾವೀನ್ಯತೆ ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಯಬೇಕು, ಇದಕ್ಕಾಗಿ 10 ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಶಿಕ್ಷಣದ ಜತೆಗೆ, ಸ್ವಾಮಿ ವಿವೇಕಾನಂದರು ರಾಷ್ಟ್ರೀಯ ಉನ್ನತಿಗೆ ಸಮಾನತೆಯು ಅಷ್ಟೇ ಮುಖ್ಯವೆಂದು ಪರಿಗಣಿಸಿದ್ದಾರೆ. ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇರಬಾರದು, ಅವಕಾಶಗಳಲ್ಲಿ ಯಾವುದೇ ತಾರತಮ್ಯ ಇರಬಾರದು, ಇದು ದೇಶದ ಇಂದಿನ ದೃಷ್ಟಿಕೋನವಾಗಿದೆ. ಇಂದು ಹೆಣ್ಣು ಮಕ್ಕಳು ಸೈನಿಕ್ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಹೆಣ್ಣು ಮಕ್ಕಳು ಎನ್ ಡಿಎಯಲ್ಲಿ ರಾಷ್ಟ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇಂದು ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನ ಮಾಡಲು ಸೌಲಭ್ಯಗಳನ್ನು ಮಾಡಲಾಗಿದೆ. ಇದರಿಂದಾಗಿ, ಭಾಷೆಯ ಆಧಾರದ ಮೇಲೆ ಅವಕಾಶಗಳಲ್ಲಿ ತಾರತಮ್ಯವನ್ನು ನಿಗ್ರಹಿಸಲಾಗುತ್ತಿದೆ.

ಸ್ನೇಹಿತರೆ,

ಯುವ ಶಕ್ತಿಯು ಆರೋಗ್ಯವಾಗಿ, ಶಿಸ್ತಿನಿಂದ ಮತ್ತು ಆತ್ಮವಿಶ್ವಾಸದಿಂದ ತುಂಬಿರುವುದು ಅಷ್ಟೇ ಅವಶ್ಯಕ. ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡುವ ದೇಶಗಳಲ್ಲಿ, ಅಲ್ಲಿನ ಯುವಕರು ಈ 3 ಗುಣಗಳನ್ನು ವೇಗವಾಗಿ ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಇಂದು ಕ್ರೀಡೆಗಳನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ವಾಹಿನಿಯಾಗಿ ನೋಡಲಾಗುತ್ತಿದೆ. ಖೇಲೋ ಇಂಡಿಯಾ ಯುವ ಕ್ರೀಡಾಕೂಟ, ವಿಶ್ವವಿದ್ಯಾಲಯ ಕ್ರೀಡಾಕೂಟ, ಪ್ಯಾರಾ ಕ್ರೀಡಾಕೂಟ ಮತ್ತು ಚಳಿಗಾಲದ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ದೇಶಾದ್ಯಂತದ ಯುವಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ನೀಡಿವೆ. ಇಂದು ದೇಶಾದ್ಯಂತ ಆಧುನಿಕ ಕ್ರೀಡಾ ಮೂಲಸೌಕರ್ಯಗಳು ವಿಸ್ತರಿಸುತ್ತಿವೆ, ಖೇಲೋ ಇಂಡಿಯಾ ಕೇಂದ್ರಗಳ ಮೂಲಕ ಸೌಲಭ್ಯಗಳು ಹೆಚ್ಚುತ್ತಿವೆ. ಹಳ್ಳಿಗಳಿಂದ ಸಣ್ಣ ಪಟ್ಟಣಗಳ ತನಕ ಹೊಸ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ.

ಮತ್ತು ಸ್ನೇಹಿತರೆ,

ಇಂದು ಈ ಅಭಿಯಾನದ ಫಲಿತಾಂಶಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತದ ಸಾಧನೆ ಸುಧಾರಿಸುತ್ತಿದೆ. ನಮ್ಮ ಆಟಗಾರರು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ, ನಮ್ಮ ಹೆಣ್ಣು ಮಕ್ಕಳು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರಂತೆ, ವಿವೇಕ ಸ್ಮಾರಕವು ನಮಗೆ ದೊಡ್ಡ ಉದ್ದೇಶಕ್ಕಾಗಿ ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆ. ಅಂತಹ ಸ್ಥಳದಲ್ಲಿ ನಾನು ನಮ್ಮ ಯುವಕರಿಗೆ ಕೆಲವು ಮನವಿಗಳನ್ನು ಮಾಡಲು ಬಯಸುತ್ತೇನೆ.

ಸ್ನೇಹಿತರೆ,

ಮೈಸೂರು ಹೆಚ್ಚಾಗಿ ಭಾರತದ ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆದಿದೆ. ಇದಕ್ಕಾಗಿ ನಾನು ಇಲ್ಲಿನ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ, ಭವಿಷ್ಯದಲ್ಲಿ ನಾವು ಸ್ವಚ್ಛತೆಯ ಸಂಕಲ್ಪವನ್ನು ನಿರಂತರವಾಗಿ ಬಲಪಡಿಸುತ್ತೇವೆ ಎಂದು ಸಂಕಲ್ಪ ಮಾಡಬಹುದೆ? ನಾವು ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು. ಪರಿಸರಕ್ಕೆ ಸಂಬಂಧಿಸಿದ ಸ್ಕಲ್ಪಗಳನ್ನು ಸ್ವೀಕರಿಸಬೇಕು. ಪ್ರತಿ ಹನಿ ನೀರು ಉಳಿಸಲು ನಾವು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡಬೇಕು.

ಸ್ನೇಹಿತರೆ,

ಇಂದು  ‘ವಾಲ್ಮೀಕಿ ರಾಮಾಯಣ’ದ ಕನ್ನಡ ಅನುವಾದವನ್ನು ಸಹ ಇಲ್ಲಿ ಬಿಡುಗಡೆ ಮಾಡಲಾಗಿದೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಾನು ಒಂದು ಮನವಿ ಮಾಡಲು ಬಯಸುತ್ತೇನೆ. ಕರ್ನಾಟಕವು ಶ್ರೇಷ್ಠ ಬರಹಗಾರರು ಮತ್ತು ಕವಿಗಳ ನಾಡು. ಕನ್ನಡ ಮಾತನಾಡುವ ಜನರು ಯಾವಾಗಲೂ ತಮ್ಮ ಓದುವ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದಾರೆ. ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ ಈ ಸದಭಿರುಚಿಯನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು. ಕನ್ನಡ ಸಾಹಿತ್ಯದೊಂದಿಗೆ ಆಳವಾಗಿ ಸಂಪರ್ಕ ಸಾಧಿಸಲು ನಾವು ಯುವ ಪೀಳಿಗೆಯನ್ನು ಪ್ರೇರೇಪಿಸಬಹುದೆ?

ಸ್ನೇಹಿತರೆ,

ಮೈಸೂರು ರೇಷ್ಮೆ, ಶ್ರೀಗಂಧ ಮತ್ತು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ. ನಾವು ಯಾರಿಗಾದರೂ ಉಡುಗೊರೆ ನೀಡುವಾಗ, ಅದು ಭಾರತೀಯರ ಕೈ ಮತ್ತು ಬೆವರಿನಿಂದ ಮಾಡಲ್ಪಟ್ಟಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬಹುದೆ? ಇದು ನಮ್ಮ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.ಅದೇ ಸಮಯದಲ್ಲಿ, ಮತ್ತೊಂದು ಕುಟುಂಬಕ್ಕೂ ಆರ್ಥಿಕ ಬೆಂಬಲ ಸಿಗುತ್ತದೆ.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ಕಂಡ ಭಾರತದ ಕನಸನ್ನು ನನಸಾಗಿಸುವ ಜವಾಬ್ದಾರಿ ಇಂದಿನ ಹೊಸ ಪೀಳಿಗೆಯ ಮೇಲಿದೆ. ವಿವೇಕ ಸ್ಮಾರಕವು ಇದಕ್ಕೆ ಶಕ್ತಿ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ಇಲ್ಲಿ ನೆರೆದಿರುವ ಪೂಜ್ಯ ಸಾಧು ಸಂತರು, ಗುರು ಹಿರಿಯರು ಮತ್ತು ಮೈಸೂರಿನ ಜನರಿಗೆ ನಮಸ್ಕರಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****