ಪಿಎಂಇಂಡಿಯಾ
ನಾವು, ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳಾದ ನಾವು, ನಮ್ಮ ನಿರಂತರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯದಿಂದ ಒಗ್ಗೂಡಿದ್ದೇವೆ. ನಮ್ಮ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ದೃಢಸಂಕಲ್ಪ ಮಾಡಿದ್ದೇವೆ. ಮುಕ್ತ, ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗಾಗಿರುವ ಸಾಮಾನ್ಯ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾಗಿ, ಈ ಮೂಲಕ ರಕ್ಷಣೆ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆಗೆ ಬದ್ಧರಾಗಿದ್ದೇವೆ.
2020ರಲ್ಲಿ ಸ್ಥಾಪಿತವಾದ ನಮ್ಮ ʻಸಮಗ್ರ ಕಾರ್ಯತಂತ್ರದ ಪಾಲುದಾರಿಕೆʼಯ(ಸಿಎಸ್‌ಪಿ) ಚೈತನ್ಯವನ್ನು ನಾವು ಪುನರುಚ್ಚರಿಸುತ್ತೇವೆ. ನಮ್ಮ ʻಸಿಎಸ್‌ಪಿʼ ಪ್ರಾರಂಭವಾದಾಗಿನಿಂದ, ನಮ್ಮ ಕಾರ್ಯತಂತ್ರದ ಸಹಯೋಗವು ವೇಗಗೊಂಡಿದೆ, ನಮ್ಮ ಆರ್ಥಿಕ ಸಂಬಂಧಗಳು ಗಾಢವಾಗಿವೆ ಮತ್ತು ನಮ್ಮ ರಾಷ್ಟ್ರಗಳ ನಡುವಿನ ಜೀವಂತ ಸೇತುವೆಯಾದ ನಮ್ಮ ಜನರ ನಡುವಿನ ಸಂಪರ್ಕಗಳು ಬಲಗೊಂಡಿವೆ. ʻಕ್ವಾಡ್ʼ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳಂತಹ ಪ್ರಾದೇಶಿಕ ವೇದಿಕೆಗಳ ಮೂಲಕ ಇತರ ಪಾಲುದಾರರೊಂದಿಗೆ ಸೇರಿದಂತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯವಾಗಿ ನಮ್ಮ ನಿಕಟ ಸಂಬಂಧಕ್ಕೆ ನಾವು ಗಮನ ಹರಿಸುತ್ತೇವೆ. ಇದು ಉಭಯ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ನಮ್ಮ ಸಮಾನ ಪ್ರದೇಶದ ಭದ್ರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತದೆ.
2009ರ ಭದ್ರತಾ ಸಹಕಾರ ಕುರಿತ ಭಾರತ-ಆಸ್ಟ್ರೇಲಿಯಾ ಜಂಟಿ ಘೋಷಣೆಯಿಂದ ನಮ್ಮ ಪಾಲುದಾರಿಕೆಯಲ್ಲಿ ಮಹತ್ತರವಾದ ದಾಪುಗಾಲುಗಳನ್ನು ನಾವು ಗಮನಿಸಿದ್ದೇವೆ. ವಿದೇಶಾಂಗ ಸಚಿವರ ಮಟ್ಟದ ಮಾತುಕತೆ (ಎಫ್.ಎಂ.ಎಫ್.ಡಿ), 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಾತುಕತೆ ಹಾಗೂ ರಕ್ಷಣಾ ಸಚಿವರ ಮಾತುಕತೆ ಸೇರಿದಂತೆ ವಿವಿಧ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಪಾಲುದಾರಿಕೆಗೆ ಶ್ರೀಮಂತ ಕೊಡುಗೆಗಳನ್ನು ನಾವು ಪ್ರಶಂಸಿಸುತ್ತೇವೆ.
ಭೌಗೋಳಿಕ ವ್ಯೂಹಾತ್ಮಕ ಅನಿಶ್ಚಿತತೆ ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಇರುವ ಅಪಾಯಗಳನ್ನು ನಾವು ಕಳವಳದಿಂದ ಗಮನಿಸುತ್ತೇವೆ. ಎಲ್ಲಾ ದೇಶಗಳು ಶಾಂತಿಯುತವಾಗಿ ಒಟ್ಟಾಗಿ ಕೆಲಸ ಮಾಡಲು ಮತ್ತು ಬೆದರಿಕೆ ಅಥವಾ ಬಲಪ್ರಯೋಗ ಅಥವಾ ಬಲವಂತವಿಲ್ಲದೆ, ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ವಿವಾದಗಳನ್ನು ಪರಿಹರಿಸಿಕೊಳ್ಳಲು ಕರೆ ನೀಡಲು ನಾವು ಉತ್ಸುಕರಾಗಿದ್ದೇವೆ.
ನಾವು ಮುಕ್ತ, ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ: ಅಂತರರಾಷ್ಟ್ರೀಯ ಕಾನೂನಿನ ಅನುಸರಣೆಯನ್ನು ಆಧರಿಸಿದ ನಿಯಮ ಆಧಾರಿತ ವ್ಯವಸ್ಥೆ; ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ; 1982ರ ʻವಿಶ್ವಸಂಸ್ಥೆಯ ಸಮುದ್ರಯಾನ ಕಾನೂನಿನ ನಿರ್ಣಯʼ (ಯುಎನ್‌ಸಿಎಲ್ಒಎಸ್) ಪಾಲನೆಯನ್ನು ಆಧರಿಸಿದ ಮುಕ್ತ, ಸ್ಥಿರ ಮತ್ತು ಸುರಕ್ಷಿತ ಕಡಯಾನ; ಮತ್ತು ಪರಿಣಾಮಕಾರಿ, ಎಲ್ಲರನ್ನೂ ಒಳಗೊಂಡ ಮತ್ತು ಪಾರದರ್ಶಕ ಸಂಸ್ಥೆಗಳು ಇದರಲ್ಲಿ ಸೇರಿವೆ.
ʻಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ʼ(ಐಒಆರ್‌ಎ), ʻಆಸಿಯಾನ್ʼ ಮತ್ತು ʻಆಸಿಯಾನ್ ಕೇಂದ್ರಿತ ಪ್ರಾದೇಶಿಕ ವ್ಯವಸ್ಥೆʼ ಹಾಗೂ ʻಪೆಸಿಫಿಕ್ ದ್ವೀಪಗಳ ವೇದಿಕೆʼ (ಪಿಐಎಫ್) ಸೇರಿದಂತೆ ಈ ಪ್ರದೇಶಗಳಲ್ಲಿನ ಸವಾಲುಗಳನ್ನು ಎದುರಿಸುವ ಪ್ರಮುಖ ವೇದಿಕೆಗಳಿಗೆ ನಮ್ಮ ಬೆಂಬಲವನ್ನು ನಾವು ಪುನರುಚ್ಚರಿಸುತ್ತೇವೆ.
ಬದಲಾಗುತ್ತಿರುವ ವ್ಯೂಹಾತ್ಮಕ ಪರಿಸ್ಥಿತಿಗಳನ್ನು ಎದುರಿಸಲು ನಮ್ಮ ಪಾಲುದಾರಿಕೆ ವಿಕಸನಗೊಳ್ಳಬೇಕು ಮತ್ತು ನಮ್ಮ ಮುಂದುವರಿದ, ಸಂಯೋಜಿತ ಮತ್ತು ಉನ್ನತ ಶ್ರೇಣಿಯ ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯ ವೇಗವರ್ಧನೆಗೆ ಬದ್ಧವಾಗಿರಬೇಕು ಎಂಬುದನ್ನು ನಾವು ಗುರುತಿಸಿದ್ದೇವೆ. ನಾವು ವ್ಯೂಹಾತ್ಮಕ ವಿನಿಮಯವನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಕಾರ್ಯತಂತ್ರದ ಹಿತಾಸಕ್ತಿಗಳ ಒಮ್ಮತವನ್ನು ಪ್ರತಿಬಿಂಬಿಸುವ ನಿಯಮಿತ ಸಚಿವರ ಮಾತುಕತೆಯನ್ನು ನಡೆಸುತ್ತೇವೆ. ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಲು ರಕ್ಷಣೆ ಮತ್ತು ಭದ್ರತಾ ಸಹಯೋಗದ ದೀರ್ಘಕಾಲೀನ ದೃಷ್ಟಿಕೋನವನ್ನು ನಾವು ಗುರುತಿಸುತ್ತೇವೆ. ಈ ಸಹಯೋಗವು ಎರಡೂ ದೇಶಗಳ ಭದ್ರತೆಗೆ ಕೊಡುಗೆ ನೀಡುತ್ತದೆ. ಜೊತೆಗೆ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಪ್ರಮುಖ ಕೊಡುಗೆ ನೀಡುತ್ತದೆ.
ನಮ್ಮ ಸಮಗ್ರ ರಕ್ಷಣಾ ಸಹಕಾರವನ್ನು ಬಲಪಡಿಸಲು, ಕಾರ್ಯತಂತ್ರದ ಮಾತುಕತೆಯನ್ನು ಆಳಗೊಳಿಸಲು ಮತ್ತು ಸಹಕಾರವನ್ನು ತೀವ್ರಗೊಳಿಸಲು ನಾವು ಬದ್ಧರಾಗಿದ್ದೇವೆ, ಇದರಲ್ಲಿ ಈ ಕೆಳಗಿನವುಗಳು ಸೇರಿವೆ:
ಎ) ಹಂಚಿಕೆಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಇಂಡೋ-ಪೆಸಿಫಿಕ್‌ನಲ್ಲಿನ ರಕ್ಷಣಾ ಸಂಬಂಧಿತ ಬೆಳವಣಿಗೆಗಳ ಬಗ್ಗೆ ಸಮಾಲೋಚಿಸಲು ಬದ್ಧರಾಗಿದ್ದೇವೆ;
ಬಿ) ಪಾಲುದಾರರು ಸೇರಿದಂತೆ ನಮ್ಮ ರಕ್ಷಣಾ ಅಭ್ಯಾಸಗಳ ಸಂಕೀರ್ಣತೆಯನ್ನು ಹೆಚ್ಚಿಸುವುದು;
ಸಿ) ರಕ್ಷಣಾ ಪಡೆಗಳ ನಡುವೆ ಮಾಹಿತಿ ವಿನಿಮಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ವೇಗಗೊಳಿಸುವುದು;
ಡಿ. ಪರಸ್ಪರರ ಭೂಪ್ರದೇಶಗಳಿಂದ ವಿಮಾನಗಳ ನಿಯೋಜನೆಯನ್ನು ವಿಸ್ತರಿಸುವುದು;
ಇ. ವಿನಿಮಯ, ಶಿಕ್ಷಣ ಮತ್ತು ತರಬೇತಿ ಮತ್ತು ಸಂಪರ್ಕ ಪಾತ್ರಗಳ ಮೂಲಕ ರಕ್ಷಣಾ ಪಡೆ ಸಿಬ್ಬಂದಿಯ ನಡುವೆ ಸಂಪರ್ಕವನ್ನು ಗಾಢವಾಗಿಸುವುದು; ಮತ್ತು
ಎಫ್. ನುರಿತ ರಕ್ಷಣಾ ಕಾರ್ಯಪಡೆಗಳ ನೇಮಕಾತಿಯಲ್ಲಿ ಸಹಕರಿಸುವ ಅವಕಾಶಗಳನ್ನು ಅನ್ವೇಷಿಸುವುದು.
ನಮ್ಮ ರಕ್ಷಣೆ, ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಕಡಲ ಕ್ಷೇತ್ರದ ಪ್ರಾಮುಖ್ಯತೆಯನ್ನು ನಾವು ಗುರುತಿಸುತ್ತೇವೆ ಮತ್ತು ಕಡಲ ಭದ್ರತಾ ಸಹಕಾರದ ಆಳ, ಅತ್ಯಾಧುನಿಕತೆ ಮತ್ತು ಕ್ರಮಬದ್ಧತೆಯನ್ನು ಹೆಚ್ಚಿಸುತ್ತೇವೆ. ಭಾರತ-ಆಸ್ಟ್ರೇಲಿಯಾ ಕಡಲ ಭದ್ರತಾ ಸಹಯೋಗದ ಮಾರ್ಗಸೂಚಿಯ ಮೂಲಕ ನಾವು ಕಡಲ ಸಹಕಾರವನ್ನು ಬಲಪಡಿಸುತ್ತೇವೆ.
ಸಹಯೋಗ, ಉದ್ಯಮ ತೊಡಗಿಸಿಕೊಳ್ಳುವಿಕೆ ಮತ್ತು ಪೂರೈಕೆ ಸರಪಳಿಯ ಸದೃಢತೆಯನ್ನು ಉತ್ತೇಜಿಸುವ ಮೂಲಕ ನಾವು ಎರಡೂ ಕಡೆಗಳಲ್ಲಿ ರಕ್ಷಣಾ ಉದ್ಯಮಗಳ ಸಾಮರ್ಥ್ಯ ಬೆಳೆಯುತ್ತಿರುವುದನ್ನು ಸಮ್ಮತಿಸುತ್ತೇವೆ. ನಾವು ನಮ್ಮ ರಕ್ಷಣಾ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗವನ್ನು ಆಳಗೊಳಿಸುತ್ತೇವೆ ಮತ್ತು ಸುಧಾರಿತ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಹಯೋಗಕ್ಕಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತೇವೆ.
ಘರ್ಷಣೆಗಳ ತಡೆಗಟ್ಟುವಿಕೆ, ಪರಿಹಾರ ಮತ್ತು ಚೇತರಿಕೆ ಪ್ರಯತ್ನಗಳಿಗೆ ಒತ್ತು ಮತ್ತು ಶಾಶ್ವತ ಶಾಂತಿಯನ್ನು ರೂಪಿಸುವಲ್ಲಿ ಮಹಿಳೆಯರ ಅರ್ಥಪೂರ್ಣ ಭಾಗವಹಿಸುವಿಕೆ ಮತ್ತು ನಾಯಕತ್ವವನ್ನು ಉತ್ತೇಜಿಸಲು ನಾವು ಕೆಲಸ ಮಾಡುತ್ತೇವೆ. ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಲಿಂಗ ಸಮಾನತೆಯನ್ನು ಎತ್ತಿಹಿಡಿಯುವ ಮತ್ತು ಮಹಿಳೆಯರು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ದೃಢಪಡಿಸುತ್ತೇವೆ.
ಪ್ರಾದೇಶಿಕ ಆರ್ಥಿಕ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸಲು ನಾವು ದ್ವಿಪಕ್ಷೀಯವಾಗಿ ಮತ್ತು ಪಾಲುದಾರರೊಂದಿಗೆ ಸಹಕರಿಸಲು ಬದ್ಧರಾಗಿದ್ದೇವೆ. ನಿರ್ಣಾಯಕ ಖನಿಜಗಳು ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳು ಸೇರಿದಂತೆ ನಾವು ಹೆಚ್ಚು ವೈವಿಧ್ಯಮಯ ಮತ್ತು ಸದೃಢ ಪೂರೈಕೆ ಸರಪಳಿಗಳು, ನಿರ್ಣಾಯಕ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಅಭಿವೃದ್ಧಿಪಡಿಸುತ್ತೇವೆ.
ಸುರಕ್ಷಿತ ಮತ್ತು ಸದೃಢ ಇಂಡೋ-ಪೆಸಿಫಿಕ್‌ಗಾಗಿ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪೂರೈಸುವ ತಂತ್ರಜ್ಞಾನ ಪರಿಸರವನ್ನು ರೂಪಿಸಲು ಸಹಾಯ ಮಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳ (ಆಸ್ಟ್ರೇಲಿಯಾ-ಭಾರತ ಪಿಎಸಿಟಿಎಸ್) ನಮ್ಮ ಸೈಬರ್ ಭದ್ರತೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಸಹಕಾರ ಹಾಗೂ ಮಾಹಿತಿ ಹಂಚಿಕೆ ಕಾರ್ಯವಿಧಾನಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಜೊತೆಗೆ ಕಾರ್ಯತಂತ್ರದ ತಂತ್ರಜ್ಞಾನಗಳ ಸಹಕಾರವನ್ನು ಹೆಚ್ಚಿಸಲು ನಾವು ಜೊತೆಯಾಗಿ ಕಾರ್ಯನಿರ್ವಹಿಸುತ್ತೇವೆ.
ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ನಮ್ಮ ಪ್ರದೇಶದಲ್ಲಿನ ಭಯೋತ್ಪಾದಕ ಬೆದರಿಕೆಗಳ ಬಗ್ಗೆ ಮಾಹಿತಿ ಹಂಚಿಕೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಹಿಂಸಾತ್ಮಕ ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಎದುರಿಸಲು ವರ್ಧಿತ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ನಾವು ಬದ್ಧರಾಗಿದ್ದೇವೆ. ಅಂತಹ ಬೆದರಿಕೆಗಳಲ್ಲಿ ಇವು ಸೇರಿವೆ.
ಎ. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ
ಬಿ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು;
ಸಿ. ನಿರ್ಣಾಯಕ ಮೂಲಸೌಕರ್ಯ ಮತ್ತು ಕಿಕ್ಕಿರಿದ ಸ್ಥಳಗಳು;
ಡಿ. ಕಡಲ ಕ್ಷೇತ್ರ; ಮತ್ತು
ಇ. ಆನ್ ಲೈನ್ ಮೂಲಭೂತವಾದ
ಅನಿಯಮಿತ ವಲಸೆ, ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವಲ್ಲಿ ಸಹಕರಿಸುವ ಮಾರ್ಗಗಳನ್ನು ವಿವರಿಸುವ ನಿಟ್ಟಿನಲ್ಲಿ 2023ರಲ್ಲಿ ಸಹಿ ಹಾಕಲಾದ ವಲಸೆ ಮತ್ತು ಪ್ರಯಾಣ ಪಾಲುದಾರಿಕೆ ವ್ಯವಸ್ಥೆಯ ಅಡಿಯಲ್ಲಿ ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ. ಬಹುರಾಷ್ಟ್ರೀಯ ಸಂಘಟಿತ ಅಪರಾಧವನ್ನು ಎದುರಿಸಲು ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ.
ನಾವು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಶಾಂತಿಯುತ ಜಗತ್ತನ್ನು ಬಯಸುತ್ತೇವೆ ಮತ್ತು ಈ ನಿಟ್ಟಿನಲ್ಲಿ ಪ್ರಸರಣ ರಹಿತ ಮತ್ತು ಜಾಗತಿಕ, ಸಂಪೂರ್ಣ, ತಾರತಮ್ಯರಹಿತ ಮತ್ತು ಪರಿಶೀಲಿಸಬಹುದಾದ ಪರಮಾಣು ನಿಶ್ಯಸ್ತ್ರೀಕರಣಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದ ಮೂಲಕ ತ್ರಿಪಕ್ಷೀಯ ಸಹಕಾರ ಕಾರ್ಯವಿಧಾನಗಳು ಮತ್ತು ಪಾಲುದಾರರೊಂದಿಗೆ ಆಳವಾದ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಇತರ ಇಂಡೋ-ಪೆಸಿಫಿಕ್ ಪಾಲುದಾರರೊಂದಿಗೆ ಸಹಕಾರವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಮುಕ್ತ, ಸ್ಥಿರ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ನಮ್ಮ ಸಕಾರಾತ್ಮಕ ದೃಷ್ಟಿಕೋನದ ಕಡೆಗೆ ಸಾಮರ್ಥ್ಯ ಮತ್ತು ಸಹಕಾರವನ್ನು ನಿರ್ಮಿಸಲು ನಾವು ಅಮೆರಿಕ ಮತ್ತು ಜಪಾನ್ ನೊಂದಿಗೆ ನಮ್ಮ ಸಹಕಾರವನ್ನು ವಿಸ್ತರಿಸುತ್ತೇವೆ.
ಪ್ರಾದೇಶಿಕ ಶಾಂತಿ, ಭದ್ರತೆ, ಸಮೃದ್ಧಿ ಮತ್ತು ಸದೃಢತೆಗಾಗಿ ನಮ್ಮ ಹಂಚಿಕೆಯ ಬದ್ಧತೆಯನ್ನು ಗುರುತಿಸಿ ತ್ವರಿತ, ಸಂಘಟಿತ ಮತ್ತು ಸುಸ್ಥಿರ ವಿಪತ್ತು ಪ್ರತಿಕ್ರಿಯೆಯನ್ನು ನೀಡಲು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ವಿಚಾರದಲ್ಲಿ ಸಹಯೋಗವನ್ನು ಆಳಗೊಳಿಸಲು ನಾವು ಬದ್ಧರಾಗಿದ್ದೇವೆ. ನಾವು ಈ ಮೂಲಕ ಸಹಕಾರವನ್ನು ಬಲಪಡಿಸುತ್ತೇವೆ:
ಎ. ಮಾಹಿತಿ ಹಂಚಿಕೆ ಮತ್ತು ತಜ್ಞರ ವಿನಿಮಯ; ಮತ್ತು
ಬಿ. ದೊಡ್ಡ ಪ್ರಮಾಣದ ನೈಸರ್ಗಿಕ ವಿಪತ್ತುಗಳಿಗೆ ನಾಗರಿಕ ಪ್ರತಿಕ್ರಿಯೆಯನ್ನು ಬೆಂಬಲಿಸುವ ಕ್ವಾಡ್ ಇಂಡೋ-ಪೆಸಿಫಿಕ್ ಲಾಜಿಸ್ಟಿಕ್ಸ್ ನೆಟ್ವರ್ಕ್ ಸೇರಿದಂತೆ ಜಂಟಿ ʻಎಚ್ಎಡಿಆರ್ʼ ಅಭ್ಯಾಸಗಳು.
ತೃತೀಯ ವರ್ಗದ ದೇಶಗಳಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ಬೆಂಬಲಿಸುವುದು ಸೇರಿದಂತೆ ವಿಪತ್ತುಗಳು ಮತ್ತು ಬಿಕ್ಕಟ್ಟುಗಳ ಸಮಯದಲ್ಲಿ ಆಕಸ್ಮಿಕ ಯೋಜನೆ, ಜಂಟಿ ಪ್ರತಿಕ್ರಿಯೆ ಮತ್ತು ಸಮನ್ವಯವನ್ನು ಹಂಚಿಕೊಳ್ಳುವ ಅವಕಾಶಗಳನ್ನು ಅನ್ವೇಷಿಸಲು ನಾವು ಬದ್ಧರಾಗಿದ್ದೇವೆ.
ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಉತ್ಸಾಹದಲ್ಲಿ, ಶಾಂತಿಯುತ ಮತ್ತು ಸ್ಥಿರ ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ಈ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.
*****