Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜಸ್ಥಾನದ ಜೈಪುರ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣ


ರಾಜಸ್ಥಾನದ ಪ್ರತಿಯೊಬ್ಬರಿಗೂ ತನ್ನ ತನ ಎನ್ನುವುದು ಅದರ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಹೇಗೆ ಮಿಳಿತವಾಗಿ ಬರುತ್ತಿದೆ ಎಂಬುದನ್ನು ನಾನು ಅನುಭವದಿಂದ ಕಾಣುತ್ತಿದ್ದೇನೆ. ರಾಜಸ್ಥಾನದ ಹೊಳಪು ಮತ್ತು ಆತ್ಮವನ್ನು ಯಾರು ಬೇಕಾದರೂ ಕಾಣಬಹುದಾಗಿದೆ. ನಮ್ಮೆಲ್ಲರಿಗೂ ರಾಜಸ್ಥಾನ ಇದೇ ರೀತಿ ಪ್ರೀತಿ ಮತ್ತು ಆಪ್ಯತೆಯನ್ನು ಮುಂದುವರೆಸುತ್ತದೆ.ನಿಮ್ಮೆಲ್ಲರ ಆಶೀರ್ವಾದಕ್ಕೆ ನಾನು ಪ್ರಮಾಣಿಕವಾಗಿ ಆಭಾರಿಯಾಗಿದ್ದೇನೆ. ಅಲ್ಲದೇ ವೀರರ ಪವಿತ್ರ ನೆಲಕ್ಕೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ರಾಜಸ್ಥಾನದಲ್ಲಿ ಮಹಾರಾಣಾ ಪ್ರತಾಪನ ಅಶ್ವಾರೋಹ ದಳ, ಸೂರಜ್ ಮಲ್ ಗಳ ಶೌರ್ಯ, ಭಾಮಾ ಶಾ ಅವರ ತ್ಯಾಗ, ಪನ್ನಾ ಧಾಯ್ ಅವರ ಬಲಿದಾನ, ಮೀರಾ ಭಾಯ್ ಅವರ ಭಕ್ತಿ, ಹಾದಿ ರಾಣಿಯ ಬಲಿದಾನ, ಅಮೃತಾ ದೇವಿಯವರ ಮಹಾ ತ್ಯಾಗವು ಈ ಪ್ರದೇಶದ ಗುಣಲಕ್ಷಣಗಳನ್ನು ರೂಪಿಸಿದೆ.

ಆಗಸ ಎತ್ತರದ ಕೋಟೆಗಳು, ಸುವರ್ಣ ಕಲಾಕೃತಿಗಳು, ವರ್ಣ ರಂಜಿತ ಟರ್ಬನ್ ಗಳು, ಸಿಹಿಯಾದ ಭಾಷೆ, ಸುಂದರ ಹಾಡುಗಳು ಮತ್ತು ಗೌರವದ ಸಂಪ್ರದಾಯಗಳು ರಾಜಸ್ಥಾನದ ಗುರುತಿಸುವಿಕೆಯನ್ನು ಸೂಚಿಸುತ್ತವೆ. ಶತಮಾನಗಳಿಂದಲೂ ರಾಜಸ್ಥಾನವು ಭಾರತದ ಪಾಲಿಗೆ ಮಾದರಿ ಎನಿಸಿಕೊಂಡಿದೆ. ಪರಿಸರದ ಎಲ್ಲಾ ಸವಾಲುಗಳನ್ನೂ ಮೀರಿ ಬೆಳೆಗಳನ್ನು ಬೆಳೆಯುವುದರಲ್ಲಿ ಅಥವಾ ರಾಷ್ಟ್ರವನ್ನು ರಕ್ಷಣೆ ಮಾಡುವುದರಲ್ಲಿ ದೇಶಕ್ಕೆ ಮಾದರಿಯಾಗಿದೆ.

ಸೋದರ-ಸೋದರಿಯರೇ,

ಕಳೆದ ನಾಲ್ಕು ವರ್ಷಗಳಲ್ಲಿ ರಾಜಸ್ಥಾನವು ಅಭಿವೃದ್ದಿಯ ಪಥದಲ್ಲಿ ದುಪ್ಪಟ್ಟು ವೇಗದಲ್ಲಿ ಸಾಗುತ್ತಿದೆ. ಇಲ್ಲಿನ ಜನರ ಜೀವನ ಕ್ರಮವನ್ನು ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿವೆ. ಉದಯ್ ಪುರ, ಅಜ್ಮೀರ್, ಕೋಟಾ,ದೌಲಾಪುರ್, ನಾಗೋರ್, ಅಲ್ವಾರ್, ಜೋದ್ ಪುರ್, ಚಿತ್ತೋರ್ ಗಾದ್, ಕಿಶಾನ್ ಗಾದ್, ಸುಜಾನ್ ಗಾದ್, ಬಿಕ್ನೇರ್, ಬಿಲ್ವಾರಾ, ಮೌಂಟ್ ಅಬು, ಬೋಂದಿ ಮತ್ತು ಬೇವರ್ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ 2100 ಕೋಟಿ ರೂಪಾಯಿ ವೆಚ್ಚದ ವಿವಿಧ 13 ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ಮಾಡುವ ಅವಕಾಶ ನನಗೆ ಸಿಕ್ಕಿದೆ. ಈ 13 ಯೋಜನೆಗಳು ರಾಜಸ್ಥಾನದ ನಗರ ಮತ್ತು ಪಟ್ಟಣಗಳ ಮೂಲಸೌಕರ್ಯವನ್ನು ಇನ್ನಷ್ಟ ಸುಧಾರಣೆ ಮಾಡಲಿವೆ. ಉತ್ತಮ ಮತ್ತು ಸ್ಮಾರ್ಟ್ ಉಪಯೋಗಗಳನ್ನು ನೀಡಲಿವೆ. ಸಂಚಾರಿ ದಟ್ಟಣೆಯನ್ನು ನಿಯಂತ್ರಣ ಮಾಡುವುದೇ ಇರಲಿ ಅಥವಾ ಉತ್ತಮವಾದ ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯೇ ಇರಲಿ ಈ ಎಲ್ಲಾ ಯೋಜನೆಗಳು ಈ ನಗರಗಳ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲಿವೆ.

ಸ್ನೇಹಿತರೇ,

ನಾಲ್ಕು ವರ್ಷದ ಹಿಂದೆ ಇಲ್ಲಿ ಯಾವ ಪರಿಸ್ಥಿತಿ ಇತ್ತು ಅನ್ನುವುದನ್ನು ನೀವು ಮರೆತಿಲ್ಲ ಎಂದು ನಾನು ಭಾವಿಸುತ್ತೇನೆ. ನಾಲ್ಕು ವರ್ಷದ ಹಿಂದೆ ಶ್ರೀಮತಿ ವಸುಂಧರಾ ರಾಜೇ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯಾವ ಸ್ಥಿತಿ ಎನ್ನುವುದನ್ನು ರಾಜಸ್ಥಾನದ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಹಿಂದಿನ ಸರ್ಕಾರವು ಏನೆಲ್ಲವನ್ನೂ ಉಳಿಸಿ ಹೋಗಿತ್ತು. ಈ ಸರ್ಕಾರವು ಏನೆಲ್ಲವನ್ನೂ ಯಶಸ್ವಿಯಾಗಿ ಮುಗಿಸಿದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಇವತ್ತು ಯಾವ ಸ್ವರೂಪದಲ್ಲಿ ಕೆಲಸಗಳು ಆಗುತ್ತಿವೆ ಎನ್ನುವುದು ನಿಮಗೆ ಗೊತ್ತಿದೆ. ಒಂದು ಕಾಲದಲ್ಲಿ ರಾಜಕೀಯ ನಾಯಕರ ಪ್ಲೆಕ್ಸ್್ಗಳನ್ನು ಹಾಕಿಸಲು ಯಾವ ರೀತಿಯ ಜನದಟ್ಟಣೆ ಇರುತ್ತಿತ್ತು ಎನ್ನುವುದು ನಿಮಗೆ ಅರಿವಿದೆ…?ಬರ್ಮರ್ ಸಂಸ್ಕರಣಾಗಾರ ವಿಚಾರದಲ್ಲಿ ಏನಾಗಿತ್ತು. ಈಗ ಏನಾಗುತ್ತಿದೆ ಎನ್ನುವುದು ರಾಜಸ್ಥಾನದ ಪ್ರತಿಯೊಂದು ಮಗುವಿಗೂ ಗೊತ್ತಾಗಿದೆ. ಸಂಸ್ಕರಣಾಗಾರವನ್ನು ಇದೀಗ ನಿರ್ಮಾಣ ಮಾಡಲಾಗುತ್ತಿದೆ. ಸಂಸ್ಕರಣಾಗಾರದ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಮಾಡಲಾಗುತ್ತಿದೆ. ನಮ್ಮ ಒಂದೇ ಸಾಲಿನ ಬದ್ಧತೆ ಎಂದರೆ ಅದು ಅಭಿವೃದ್ಧಿ. ಅಭಿ ವೃದ್ಧಿ ಮಾತ್ರ..ಅಭಿವೃದ್ಧಿಯೊಂದೇ…

ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ, ಸುರಕ್ಷೆ ಮತ್ತು ಒಂದು ಯೋಜನೆಯಿಂದ ಇನ್ನೊಂದು ಯೋಜನೆಯು ಸುಗಮವಾಗಿ ಸಾಗುವುದೇ ನಮ್ಮ ಉದ್ದೇಶವಾಗಿದೆ. ಸರ್ಕಾರದ ಯೋಜನೆಗಳು ಯಾವರೀತಿ ನಿಮಗೆಲ್ಲರಿಗೂ ತಲುಪುತ್ತಿವೆ, ಅನುಕೂಲ ಕಲ್ಪಿಸುತ್ತಿವೆ ಎಂದು ನಿಗಾವಹಿಸಿ ತಲುಪಿಸಲು ಮತ್ತು ಯಶಸ್ವಿಯಾಗಿ ವಿಸ್ತರಿಸಲು ನಮ್ಮ ಸರ್ಕಾರ ಶ್ರಮ ವಹಿಸುತ್ತದೆ. ಜನರನ್ನು ಯಶಸ್ವಿಯಾಗಿ ತಲುಪುತ್ತಿರುವ ಯೋಜನೆಗಳನ್ನು ಅಗತ್ಯಕ್ಕೆ ತಕ್ಕಂತೆ ಸುಧಾರಿಸುತ್ತಾ ಮುಂದುವರೆಸುವ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ನನಗೆ ಕೆಲ ಹೊತ್ತಿನ ಹಿಂದೆ ನಿಮ್ಮಲ್ಲಿ ಕೆಲವು ಫಲಾನುಭವಿಗಳು ಈ ಯೋಜನೆಗಳು ನಿಮ್ಮ ಜೀವನದಲ್ಲಿ ತಂದಿರುವ ಬದಲಾವಣೆಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೆ ಮಾಡಿಕೊಂಡಿರಿ. ಕೇವಲ ಕೇಂದ್ರ ಸರ್ಕಾರದ ಫಲಾನುಭವಿಗಳಲ್ಲ..ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ತಮ್ಮ ಅನುಭವವನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ರಾಜ್ ಶ್ರೀ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳು ಸ್ಕೂಟಿಗಳನ್ನು ಪಡೆದುಕೊಂಡಿದ್ದಾರೆ. ಪಾಲನಹಾರ್ ಯೋಜನೆಯಲ್ಲಿ ಮಕ್ಕಳು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಯಾತ್ರಿ ಯೋಜನೆಯಲ್ಲಿ ಹಿರಿಯ ನಾಗರಿಕರು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಫಲಾನುಭವಿಗಳ ಕಣ್ಣುಗಳಲ್ಲಿರುವ ಮಿಂಚನ್ನು ಯಾರೂ ಮರೆಯುವುದಿಲ್ಲ ಮತ್ತು ಈ ಎಲ್ಲಾ ಕಲ್ಪನೆಗಳನ್ನು ಸಾಕಾರ ಮಾಡಿದ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಝೇ ಅವರನ್ನು ನಾನು ಅಭಿನಂದಿಸುತ್ತೇನೆ.

ಭಾರತೀಯ ಜನತಾ ಪಕ್ಷದ ಪ್ರಸ್ತಾಪ ಮಾಡಿದರೆ ಒಂದಷ್ಟು ವರ್ಗದ ಜನರಿಗೆ ನಿದ್ರೆಯೇ ಹತ್ತುವುದಿಲ್ಲ ಎನ್ನುವುದು ಕಡು ಸತ್ಯದ ಮಾತು. ಮೋದಿ ಅಥವಾ ವಸುಂಧರಾ ರಾಜೆಯ ಹೆಸರನ್ನು ಕೇಳಿದರೆ ಅವರಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಇಂತಹ ಯೋಜನೆಗಳನ್ನು ಅವರು ವಿರೋಧ ಮಾಡುತ್ತಾರೆ. ಆದರೆ ಈ ಎಲ್ಲಾ ಯೋಜನೆಯ ದೊಡ್ಡ ಫಲಾನುಭವಿಗಳಾದ ರಾಜಸ್ಥಾನದ ಸಾಮಾನ್ಯ ನಾಗರಿಕನಿಗೆ ಈ ಯೋಜನೆಗಳ ಲಾಭ ಏನು ಎನ್ನುವುದು ಅರ್ಥವಾಗಿದೆ. ಯೋಜನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ನೇರವಾಗಿ ನಾವು ಎಷ್ಟು ಲಾಭ ಮಾಡಿಕೊಂಡಿದ್ದೇವೆ ಎಂದು ಜನರು ತಿಳಿದುಕೊಂಡಿದ್ದಾರೆ. ಇದೇ ಕಾರಣದಿಂದ ಈ ಯೋಜನೆಗಳು ಕಾಗದದಲ್ಲಿ ಮಾತ್ರ ಉಳಿದುಕೊಂಡಿಲ್ಲ. ಸಾಮಾನ್ಯ ಜನರನ್ನು ಮುಟ್ಟಿವೆ. ಸರ್ಕಾರಿ ಯಂತ್ರದ ಮೇಲೆ ಈ ಒತ್ತಡವನ್ನು ಸರ್ಕಾರ ಹಾಕಿದೆ. ಸಾರ್ವಜನಿಕ ಒತ್ತಡವನ್ನು ನಿರ್ಮಾಣ ಮಾಡಿ ಯಾವುದೇ ಪ್ರದೇಶದಲ್ಲಿ ಯಾವುದೇ ಅಧಿಕಾರಿಯು ಉದಾಸೀನ ಮಾಡಿದರೆ ಆ ಅಧಿಕಾರಿಯೂ ಚುರುಕಿನಿಂದ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಪರಿಣಾಮದಿಂದ ಈ ಯೋಜನೆಗಳು ಸರ್ಕಾರಕ್ಕೆ ಪ್ರಚಾರ ತಂದುಕೊಡುವುದಕ್ಕಿಂತಲೂ ಫಲಾನುಭವಿಗಳಿಗೆ ಹೆಚ್ಚು ಫಲವನ್ನು ನೀಡಿದವು. ಫಲಾನುಭವಿಗಳು ಈ ಯೋಜನೆಯಲ್ಲಿ ತಾವು ಪಡೆದುಕೊಂಡ ಲಾಭದ ಬಗ್ಗೆ ಚರ್ಚೆ ಮಾಡುತ್ತಲೇ ಇರಬೇಕು. ಮಾತನಾಡುತ್ತಲೇ ಇರಬೇಕು. ಇದು ಯೋಜನೆಯ ಲಾಭ ಪಡೆಯದಂತಹ ಅರ್ಹರನ್ನೂ ಲಾಭ ಪಡೆದುಕೊಳ್ಳಲು ಮುಂದೆ ಬರುವಂತಹ ಅವಕಾಶ ಕಲ್ಪಿಸಿಕೊಡುತ್ತದೆ.

ಸ್ನೇಹಿತರೇ, ಕಳೆದ ನಾಲ್ಕು ವರ್ಷಗಳಲ್ಲಿ ಏನೆಲ್ಲಾ ಯೋಜನೆಗಳನ್ನು ತಂದಿದ್ದೇವೆಯೋ ಅದೆಲ್ಲದರಲ್ಲೂ ಕೇಂದ್ರ ಬಿಂದುವಾಗಿರೋದು ಬಡವರು, ನಿರ್ಲಕ್ಷಿತರು, ಅವಕಾಶ ವಂಚಿತರು, ದೂರ ಇಡಲ್ಪಟ್ಟವರು, ದಲಿತರು, ಗಿರಿಜನರು, ರೈತರು, ತಾಯಂದಿರು ಮತ್ತು ಸೋದರಿಯರೇ ಹೆಚ್ಚು ಸೇರಿದ್ದಾರೆ. ದೇಶವು ಸ್ವಾತಂತ್ರ್ಯವನ್ನು ಪಡೆದುಕೊಂಡು 75 ವರ್ಷಗಳು ಪೂರೈಸುತ್ತಿರುವ 2022ಕ್ಕೆ ದೇಶದ ರೈತರ ಾದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು ನಮ್ಮ ಸರ್ಕಾರವು ಹೊಂದಿದೆ. ಈ ಮಣ್ಣಿನ ಮಗ ನನ್ನ ಸಂಪುಟ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಇಲಾಖೆಯನ್ನು ಅಭಿವೃದ್ಧಿ ಪಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮಣ್ಣು ಆರೋಗ್ಯ ಕಾರ್ಡ್್ಗಳನ್ನು ಪರಿಚಯ ಮಾಡುವ ಯೋಜನೆಯನ್ನು ರಾಜಸ್ಥಾನದ ಸೂರಜ್ ಗಾದ್ ನಲ್ಲಿ ಮಾಡಿದ್ದು ನನಗೆ ನೆನಪಿದೆ. ಅಂದು ಸರ್ಕಾರ 14 ಕೋಟಿ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ವಿತರಣೆ ಮಾಡುವಂತಹ ಗುರಿಯನ್ನು ಇಟ್ಟುಕೊಂಡಿತ್ತು. ನನಗೆ ಖುಷಿ ಎನಿಸುತ್ತದೆ ಏಕೆಂದರೆ ನಾವು ಈ ಗುರಿಯನ್ನು ಮುಟ್ಟಿದ್ದೇವೆ. ಈವರೆಗೆ ದೇಶದ ರೈತರಿಗೆ 14.5 ಕೋಟಿ ಕಾರ್ಡ್ ಗಳನ್ನು ವಿತರಣೆ ಮಾಡಿದ್ದೇವೆ. ಸುಮಾರು 90 ಲಕ್ಷ ರೈತರು ರಾಜಸ್ಥಾನ ಒಂದರಲ್ಲೇ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ಈ ಕಾರ್ಡ್ ಗಳು ವೈಜ್ಞಾನಿಕ ಕೃಷಿಯನ್ನು ಸರಳವಾಗಿಸಿವೆ ಮತ್ತು ಇದರಿಂದ ನೇರವಾಗಿ ಕೃಷಿ ಉತ್ಪಾದನೆ ಮೇಲೆ ಪರಿಣಾಮ ುಂಟಾಗಿದೆ. ತುಂಬಾ ವರ್ಷಗಳ ನಂತರದ ದೇಶದಲ್ಲಿ ಭರ್ಜರಿ ಬೆಳೆ ಆಗಿರುವುದನ್ನು ನೀವೆಲ್ಲರೂ ಗಮನಿಸಿದ್ದೀರಿ.

ಸ್ನೇಹಿತರೇ,

ಎಂಎಸ್ ಪಿ ಅಂದರೆ ಕನಿಷ್ಟ ಬೆಂಬಲ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸುವ ಭರವಸೆಯನ್ನು ಸರ್ಕಾರವು ಕೈಗೊಂಡ ಸಂದರ್ಭದಲ್ಲಿ ಕಾಕತಾಳೀಯವೋ ಏನೋ ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು ಮಾಡಿದ್ದೆ. ನೀವು ಬೆಳೆಯ ಖರ್ಚಿನ ಅರ್ಧ ಪಟ್ಟನ್ನು ಬೆಂಬಲ ಬೆಲೆಯಾಗಿ ನೀಡುವ ನಿರ್ಧಾರವನ್ನು ನೋಡಿದ್ದೀರಿ. ಇದೀಗ ರಾಜಸ್ಥಾನಕ್ಕೆ ಬಂದಿರುವ ಈ ಹೊತ್ತಿನಲ್ಲೇ ನಿಮ್ಮ ರಾಗಿ, ಮೆಕ್ಕೆ ಜೋಳ ಮತ್ತು ದ್ವಿದಳ ಕಾಳುಗಳಿಗೆ ಬೆಂಬಲ ಬೆಲೆಯನ್ನು ಪಡೆದುಕೊಂಡಿದ್ದೀರಿ.

ಸ್ನೇಹಿತರೇ,

ಈ ವಿಚಾರವನ್ನು ರಾಜಸ್ಥಾನದ ರೈತರ ಜತೆ ನಾನು ಚರ್ಚೆ ಮಾಡಬೇಕಿದೆ. ಒಂದು ಕ್ವಿಂಟಾಲ್ ರಾಗಿಯನ್ನು ಬೆಳೆಯಲು ಕನಿಷ್ಠವೆಂದರೂ 990 ರೂಪಾಯಿ ಖರ್ಚಾಗಲಿದೆ. ಇದೀಗ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು 1950 ರೂಪಾಯಿಗಳಿಗೆ ಏರಿಸಿದೆ. ಇದರ ಅರ್ಥ ಉತ್ಪಾದನಾ ವೆಚ್ಚಕ್ಕಿಂತಲೂ ಎರಡು ಪಟ್ಟು ಹೆಚ್ಚು. ಜೋಳದ ಉತ್ಪಾದನಾ ವೆಚ್ಚ 1620 ರೂಪಾಯಿಗಳಾಗಿದ್ದು, ಇದರ ಕನಿಷ್ಠ ಬೆಂಬಲ ಬೆಲೆಯನ್ನು 2430 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಮುಸುಕಿನ ಜೋಳದ ಉತ್ಪಾದನಾ ವೆಚ್ಚವು 1130 ರೂಪಾಯಿಗಳಾಗಿದ್ದು ಕನಿಷ್ಠ ಬೆಂಬಲ ಬೆಲೆಯನ್ನು 1700 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಹೆಸರು ಕಾಳಿನ ಉತ್ಪಾದನಾ ವೆಚ್ಚವು 4650 ರೂಪಾಯಿಗಳಾಗಿದ್ದು, ಕನಿಷ್ಠ ಬೆಲೆಯನ್ನು 7000 ರೂಪಾಯಿಗಳನ್ನು ನೀಡಲಾಗಿದೆ. ಇದಲ್ಲದೇ ಸರ್ಕಾರವು ತೊಗರಿ ಬೇಳೆ ಅಥವಾ ಸೋಯಾ ಬೀನ್ ಅಥವಾ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗಿದೆ. ಇದೊಂದೇ ಅಲ್ಲ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವ ಗ್ಯಾರೆಂಟಿಯನ್ನು ನೀಡಿದೆ. ಶ್ರೀಮತಿ ವಸುಂದರಾ ರಾಜೇ ಅರಸ್ ಅವರ ಸರ್ಕಾರವು ಪ್ರತಿಯೊಬ್ಬ ರೈತನ ಬೆವರು ಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದೆ. ಸರ್ಕಾರವು ಈ ವರ್ಷ ಒಂದರಲ್ಲೇ 11500 ಕೋಟಿ ರೂಪಾಯಿಗಳ ರೈತರ ಉತ್ಪನ್ನಗಳನ್ನು ಸಂಗ್ರಹಿಸಿದೆ.

ಸ್ನೇಹಿತರೇ, ಬೀಜದಿಂದ ಮಾರುಕಟ್ಟೆವರೆಗೆ ಎಲ್ಲಾ ವ್ಯವಸ್ಥೆಗಳಲ್ಲೂ ಸರ್ಕಾರ ಕೆಲಸ ಮಾಡುತ್ತದೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗಾಗಿ ವಸುಂದರಾ ರಾಜೇ ಅರಸ್ ಅವರ ಸರ್ಕಾರವು ಯೋಜನೆಗಳನ್ನು ರೂಪಿಸಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರಾಜಸ್ಥಾನ ರಾಜ್ಯದ ರೈತರಿಗೆ 2500 ಕೋಟಿ ರೂಪಾಯಿಗಳನ್ನು ವಿಮೆ ರೂಪದಲ್ಲಿ ನೀಡಲಾಗಿದೆ.

ಸ್ನೇಹಿತರೇ, ಈ ಹಿಂದಿನ ವಿಧಾನಗಳನ್ನು ಕೈಬಿಟ್ಟು ಬಿಜೆಪಿ ಸರ್ಕಾರವು ಬಡವರ ಬದುಕಿನಲ್ಲಿ ಸ್ವಾವಲಂಬನೆ ಮತ್ತು ಸುಧಾರಣೆಯನ್ನು ತರುವ ಪ್ರಯತ್ನಗಳನ್ನು ಮಾಡಿದೆ. ಇದರ ಪರಿಣಾಮಗಳನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಜಾಗತಿಕವಾದ ಪ್ರತಿಷ್ಠಿತ ಸಂಸ್ಥೆಯೊಂದು ಇತ್ತೀಚೆಗೆ ತನ್ನ ವರದಿಯಲ್ಲಿ ಕಳೆದ ವರ್ಷಗಳಲ್ಲಿ ಭಾರತದ 5 ಕೋಟಿ ಜನರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ಹೇಳಿದೆ. ಐದು ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಬಡತನದಿಂದ ದೇಶವನ್ನು ನಿರ್ಮೂಲನೆ ಮಾಡುವ ನಮ್ಮ ಗುರಿಯ ಸಾಕಾರ ಆಗುತ್ತಿರುವುದು ಸರ್ಕಾರದ ಸ್ಪಷ್ಟ ಉದ್ದೇಶ ಮತ್ತು ಸುಸ್ಥಿರ ಅಭಿವೃದ್ಧಿಯ ಕಲ್ಪನೆಯೇ ಆಗಿದೆ. ಜನರಿಂದ ನಮ್ಮ ಸರ್ಕಾರಕ್ಕೆ ಉತ್ತಮ ಬೆಂಬಲವೂ ಸಿಗುತ್ತಿದೆ. ರಾಜಸ್ಥಾನದ 1.25 ಕೋಟಿ ಜನರು ಸಹಕಾರ ಪಡೆದುಕೊಂಡಿದ್ದು, ರಾಜಸ್ಥಾನ ಒಂದರಲ್ಲೇ 80 ಲಕ್ಷ ಶೌಚಾಲಯಗಳನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಅವಧಿಯಲ್ಲಿ ದೇಶದಲ್ಲಿ 32 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದ್ದು ರಾಜಸ್ಥಾನ ರಾಜ್ಯವೊಂದರಲ್ಲೇ 2.5 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಪಿಎಂಎಲ್ ವೈ ಯೋಜನೆಯ ಅಡಿಯಲ್ಲಿ ರಾಜಸ್ಥಾನ ಒಂದರಲ್ಲೇ 6 ಲಕ್ಷ ಬಡ ಜನರಿಗೆ ಸೂರುಗಳನ್ನು ಒದಗಿಸಿಕೊಡುವ ಪ್ರಯತ್ನವನ್ನು ನಡೆಸುತ್ತಿದೆ. ಪ್ರತಿತಿಂಗಳೂ ಒಂದು ರೂಪಾಯಿ ಕಂತು ಮತ್ತು ದಿನಕ್ಕೆ 90 ಪೈಸೆ ಕಂತನ್ನು ಕಟ್ಟುವ ವಿಮಾ ಯೋಜನೆಯನ್ನು ರಾಜಸ್ಥಾನದ 70 ಲಕ್ಷ ಜನರು ಮಾಡಿಸಿಕೊಂಡಿದ್ದಾರೆ.

ಸ್ನೇಹಿತರೇ,

ಮುದ್ರಾ ಯೋಜನೆಯ ಅಡಿಯಲ್ಲಿ ಯಾವುದೇ ಖಾತ್ರಿಯಿಲ್ಲದೇ ರಾಜಸ್ಥಾನದ 44 ಲಕ್ಷ ಉದ್ಯಮಿಗಳು ಲಾಭ ಪಡೆದುಕೊಂಡಿದ್ದಾರೆ. ಇದಲ್ಲದೇ ಕಳೆದ ಒಂದು ವರ್ಷದ ಅವಧಿಯಲ್ಲೇ ರಾಜಸ್ಥಾನದ 3 ಲಕ್ಷ ಜನರು ಕೇಂದ್ರದ ಸೌಭಾಗ್ಯ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಉಜ್ವಲಾ ಯೋಜನೆಯ ಅಡಿಯಲ್ಲಿ ರಾಜಸ್ಥಾನದ 33.50 ಲಕ್ಷ ತಾಯಂದಿರು ಮತ್ತು ಸೋದರಿಯರು ಉಚಿತ ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಉಜ್ವಲ ಯೋಜನೆಯು ಮಹಿಳೆಯರ ಜೀವನವನ್ನು ಬದಲಾಯಿಸಿದೆ.

ಸೋದರ –ಸೋದರಿಯರೇ,

ಈ ಯೋಜನೆಯ ಫಲಾನುಭವಿ ತಾಯಂದಿರು ಮತ್ತು ಸೋದರಿಯರ ಬಳಿಯಿಂದ ಹೊಸ ಅಂಶಗಳನ್ನು ತಿಳಿದುಕೊಳ್ಳಲು ನಾನು ಸದಾ ಬಯಸುತ್ತೇನೆ.ಉಜ್ವಲಾ ಯೋಜನೆಯ ಪರಿಣಾಮದಿಂದ ಆಕೆ ಹೊಗೆಯಿಂದ ಮುಕ್ತಿ ಅಷ್ಟೇ ಅಲ್ಲ ನೀರಿನ ಉಳಿತಾಯವನ್ನೂ ಮಾಡಿದ್ದಾರಂತೆ. ಅಡುಗೆ ಅನಿಲ ಬಳಸಿದ ಮೇಲೆ ಹೊಗೆಯ ಪರಿಣಾಮದಿಂದ ಅಡುಗೆ ಪರಿಕರಗಳು ಹೊಗೆಯಿಂದ ಕಪ್ಪು ಮಸಿಯಾಗುತ್ತಿಲ್ಲ.ಇದರಿಂದ ನೀರಿನ ಉಳಿತಾಯ ಆಗುತ್ತಿದೆ. ರಾಜಸ್ಥಾನದ ತಾಯಂದಿರಿಗೆ ಈ ಯೋಜನೆಯು ದುಪ್ಪಟ್ಟು ಅನುಕೂಲವನ್ನು ಮಾಡಿಕೊಟ್ಟಿದೆ.

ಸ್ನೇಹಿತರೇ,

ರಾಜಸ್ಥಾನದ ಜನರು ತಮ್ಮ ಜೀವನದ ಬಹುತೇಕ ಸಮಯವನ್ನು ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳಲೆಂದೇ ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀಮತಿ ವಸುಂದರಾ ರಾಜೇ ಅರಸ್ ಅವರ ಸರ್ಕಾರವು ಗಣನೀಯ ಕ್ರಮಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿಗಳ ಜಲ ಸ್ವಾವಲಂಬನಾ ಅಭಿಯಾನದ ಅಡಿಯಲ್ಲಿ ರಾಜಸ್ಥಾನದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ನೀರಿನ ಅಗತ್ಯಗಳನ್ನು ಪೂರೈಸಲು 4000 ಕೋಟಿ ರೂಪಾಯಿಗಳ ಯೋಜನೆಯನ್ನು ಕೈಗೊಂಡಿದೆ. 12500ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಯೋಜನೆಯ ಅಡಿಯಲ್ಲಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.

ಸೋದರ-ಸೋದರಿಯರೇ,

ನಿಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀಮತಿ ವಸುಂದರಾ ರಾಜೇ ಮತ್ತು ಬಿಜೆಪಿ ಎಂಎಲ್ಎಗಳು ಪಾರ್ವತಿ, ಕಾಳಿ ಸಿಂಧ್ ಮತ್ತು ಚಂಬಾಲ್ ಸಂಪರ್ಕ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡುತ್ತಿದ್ದಾರೆ. ಕೇಂದ್ರದ ಜಲಸಂಪನ್ಮೂಲ ಇಲಾಖೆಗೆ ಈ ಯೋಜನೆಗಳ ಸಂಪೂರ್ಣ ಯೋಜನಾ ವರದಿಯನ್ನು ನೀಡಲಾಗಿದ್ದು, ತಾಂತ್ರಿಕವಾಗಿ ಯೋಜನೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಯೋಜನೆಯು ರಾಜಸ್ಥಾನದ 2 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಿದೆ. ಈ ಯೋಜನೆಯು ಜೈಪುರ, ಅಲ್ವಾರ್, ಭಾರತ್ ಪುರ, ಸವಾಯ್ ಮಾಧೋಪುರ್, ಝಾಲ್ವಾಡ್, ಕೋಟಾ ಮತ್ತು ಬೌಂಡಿ ನಗರಗಳೂ ಸೇರಿದಂತೆ ರಾಜಸ್ಥಾನದ 13 ನಗರಗಳ ಶೇಕಡಾ 40ರಷ್ಟು ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.

ಸೋದರ-ಸೋದರಿಯರೇ,

ಈ ಬೇಡಿಕೆಯನ್ನು ಕೇಂದ್ರ ಸರ್ಕಾರವು ಧನಾತ್ಮಕವಾಗಿ ಸ್ಪಂದಿಸಲಿದೆ. ರಾಜಸ್ಥಾನದ ಅಭಿವೃದ್ಧಿಗೆ ನಿರ್ಧಾರ ಮಾಡಿದೆ. ರಾಜ್ಯದ ರೈತರಿಗೆ ಸುಲಭವಾಗಿ ನೀರು ಒದಗುವಂತೆ ಮಾಡಲಾಗುತ್ತಿದೆ. ರಾಜ್ಯದ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಸಕಾರಾತ್ಮಕವಾಗಿ ಕೇಂದ್ರ ಸರ್ಕಾರವು ಸ್ಪಂದಿಸುತ್ತಿದೆ.

ಸ್ನೇಹಿತರೇ.

ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಆರೋಗ್ಯ, ಪೌಷ್ಠಿಕಾಂಶ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರವು ಹೆಚ್ಚು ಗಮನವನ್ನು ಹರಿಸುತ್ತಿದೆ. ಕಳೆದ ಸಂದರ್ಭದಲ್ಲಿ ಝುಂಜುಹುಕ್ಕೆ ಬಂದಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಪೌಷ್ಠಿಕ ಅಭಿಯಾನ ಯೋಜನೆಯನ್ನು ಪ್ರಕಟಿಸಿದ್ದೆ. ಇದೀಗ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ, ಇದಲ್ಲದೇ ತಜ್ಞ ವೈದ್ಯರ ನಿಗಾದಲ್ಲಿ ಮಕ್ಕಳ ಜನನಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದು ತಾಯಿ ಮತ್ತು ಶಿಶುವಿನ ಪ್ರತಿರಕ್ಷಣೆಯನ್ನು ಮಾಡುವ ಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ. ರಾಜಸ್ಥಾನದ ತಾಯಂದಿರು ಮತ್ತು ಸೋದರಿಯರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ರಾಜಸ್ಥಾನದ ಸರ್ಕಾರವು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ತಳ ಮಟ್ಟದಲ್ಲಿ ಕಾಣುತ್ತಿದೆ. ರಾಜಸ್ಥಾನ ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಜಾರಿಗೆ ತರುತ್ತಿದೆ. ರೋಗಗಳನ್ನು ಪರಿಗಣನೆಗೆ ತಗೆದುಕೊಂಡು ಆಯುಷ್ಮಾನ್ ಭಾರತ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ 50 ಕೋಟಿ ಜನರಿಗೆ ತಲಾ ಕನಿಷ್ಠ 5 ಲಕ್ಷ ರೂಪಾಯಿಯಷ್ಟು ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತಿದೆ. ಈ ಯೋಜನೆಯ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು ಶೀಘ್ರವೇ ಅನುಷ್ಠಾನಕ್ಕೆ ತರಲಾಗುತ್ತಿದೆ.

ಸೋದರ-ಸೋದರಿಯರೇ

ದೇಶದ ಅಭಿವೃದ್ಧಿಯನ್ನು ಸಮತೋಲಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಎಲ್ಲಾ ಯೋಜನೆಗಳ ಉದ್ದೇಶ ಅಡಗಿದೆ. ಪ್ರತಿಯೊಬ್ಬರ ಘನತೆ, ರಕ್ಷಣೆ ಮತ್ತು ಸ್ವಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಪ್ರಸ್ತುತ ಅಭೂತಪೂರ್ವ ಜನರ ಚಳವಳಿ ದೇಶದಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಗ್ರಾಮ ಸ್ವ ಆಡಳಿತ ಮಿಷನ್ ಯಜನೆ ತರಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ವಿವಿಧ ಮಾನದಂಡಗಳಲ್ಲಿ ಕೆಲಸ ಮಾಡುತ್ತಿದ್ದು ಇದು ಹೊಸ ಶಕ್ತಿಯನ್ನು ನೀಡುತ್ತಿದೆ. ಗ್ರಾಮದ ಪ್ರತಿಯೊಬ್ಬನೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ಪ್ರತಯೊಂದು ಮನೆಯೂ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಬೇಕು ಮತ್ತು ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬೇಕೆಂಬ ಗುರಿ ನಮ್ಮದು. ಪ್ರತಿಯೊಬ್ಬರಿಗೂ ನಮಗೆ ಪ್ರತಿರಕ್ಷಣೆ ಇದೆ ಎಂಬ ಭರವಸೆಯಲ್ಲಿ ಬದುಕಬೇಕು. ಪ್ರತಿ ಮನೆಗೂ ಎಲ್ ಇಡಿ ಬಲ್ಬ್ ಹೊಂದಿರಬೇಕು. ರಾಜಸ್ಥಾನದ 1500 ಗ್ರಾಮಗಳು ವಿವಿಧ ಯೋಜನೆಗಳ ಅಡಿಯಲ್ಲಿ ಈ ವರ್ಷದ ಆಗಸ್ಟ್ 15ರ ಒಳಗೆ ಎಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಲಿದ್ದಾರೆ.

ಸ್ನೇಹಿತರೇ,

ಅದು ಗ್ರಾಮವೇ ಆಗಲಿ ಅಥವಾ ನಗರವೇ ಆಗಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಲ್ಪನೆಯಲ್ಲಿ ದೇಶದ ಪ್ರತಿಯೊಂದು ಪ್ರದೇಶವನ್ನೂ ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೇಶದ 100 ದೊಡ್ಡ ನಗರಗಳಲ್ಲಿ ಸ್ಮಾರ್ಟ್ ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ನಮ್ಮ ಜೈಪುರ್, ಉದಯ್ ಪುರ್, ಕೋಟಾ ಮತ್ತು ಅಜ್ಮೀರ್ ನಗರಗಳೂ ಇದರ ಅಡಿಯಲ್ಲಿ ಬರಲಿವೆ. ಸ್ಮಾರ್ಟ್ ಸಿಟಿಗಳಲ್ಲಿ ರಸ್ತೆಗಳು, ಟ್ರಾಫಿಕ್, ವಿದ್ಯುತ್ ಮತ್ತು ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಸ್ಮಾರ್ಟ್ ಸೌಲಭ್ಯಗಳನ್ನು ಕಲ್ಪಿಸಲು 7000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ರಾಜಸ್ಥಾನ ಸರ್ಕಾರವೂ ಈ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಇವತ್ತು ನಾವು ಕೈಗೊಳ್ಳುತ್ತಿರುವ ಕೆಲಸಗಳನ್ನು ಈ ಹಿಂದೆಯೇ ಮಾಡಿದ್ದರೆ ಇನ್ನೂ ಏನೆಲ್ಲಾ ಆಗಬಹುದಿತ್ತು ನೀವೇ ಹೇಳಿ..ಈ ಹಿಂದಿನ ಸರ್ಕಾರವು ಯಾವ ರೀತಿ ಕೆಲಸವನ್ನು ಮಾಡುತ್ತಿತ್ತು ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್್ ಪಕ್ಷವನ್ನು ಜನರು ಬೈಲ್ ಗಾಡಿ ಎಂದು ಕರೆಯಲು ಶುರು ಮಾಡಿದ್ದಾರೆ. ಇದು ಎತ್ತಿನ ಗಾಡಿಯಲ್ಲ..ಜಾಮೀನು ಪಡೆಯುವ ಸಾಧನವಾಗಿದೆ. ಕಾಂಗ್ರೆಸ್ ಪಕ್ಷದ ಸಾಕಷ್ಟು ರಾಜಕಾರಣಿಗಳು ಮತ್ತು ಕಾಂಗ್ರೆಸ್ ನ ಬಹುತೇಕ ಮುಖ್ಯಮಂತ್ರಿಗಳು ಜಾಮೀನಿನ ಮೇಲಿದ್ದಾರೆ.ಬಿಜೆಪಿ ಅಭಿವೃದ್ಧಿ ಮಂತ್ರವನ್ನು ಮೆಚ್ಚಿ ಕಾಂಗ್ರೆಸ್ನ ಸಂಸ್ಕೃತಿಯನ್ನು ತಿರಸ್ಕರಿಸಿ ನೀವು ನೀಡಿರುವ ನಿರ್ಣಯವನ್ನು ಗೌರವಿಸಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸರ್ಕಾರಗಳು ಹಗಲು ರಾತ್ರಿ ಬಿಡುವಿಲ್ಲದೇ ಪರಿಶ್ರಮ ಪಡುತ್ತಿವೆ. ನವಭಾರತವನ್ನು ನಿರ್ಮಾಣ ಮಾಡುವ ಬದ್ಧತೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. 2022ರ ವೇಳೆಗೆ ಭಾರತವು ಸ್ವಾತಂತ್ರ್ಯಗೊಂಡು 75ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ಮುಂದಿನ ವರ್ಷದ ಮಾರ್ಚ್ ನಲ್ಲಿ ರಾಜಸ್ಥಾನ ನಿರ್ಮಾಣವಾಗಿ 70 ವರ್ಷಗಳು ತುಂಬಲಿವೆ. ನವ ರಾಜಸ್ಥಾನದ ನಿರ್ಮಾಣ ಆಗದೇ ನವ ಭಾರತದ ನಿರ್ಮಾಣ ಸಾಧ್ಯವೇ ಇಲ್ಲ. ಅಭಿವೃದ್ಧಿಶೀಲ ರಾಜಸ್ಥಾನ ಮತ್ತು ರಾಷ್ಟ್ರ ನಿರ್ಮಾಣ ಮಾಡುವಂತಹ ಸುವರ್ಣಾವಕಾಶ ನಮ್ಮ ನೆಲದ ಸೋದರ-ಸೋದರಿಯರಿಗಿದೆ.

ಸ್ನೇಹಿತರೇ.

ದೇಶಕ್ಕಾಗಿ ಮಹಾನ್ ತ್ಯಾಗ ಮಾಡಿದಂತಹ ಪರಮವೀರ ಚಕ್ರ ಪುರಸ್ಕಾರಕ್ಕೆ ಪಾತ್ರರಾದ ಹುತಾತ್ಮ ಪೀರು ಸಿಂಗ್ ಶೇಖಾವತ್ ಅವರ ಜನ್ಮ ಶತಮಾನೋತ್ಸವದ ವರ್ಷ ಇದಾಗಿದೆ. ಅವರ 70 ವರ್ಷಗಳ ತ್ಯಾಗವು ಕೆಲವು ದಿನಗಳಲ್ಲೇ ಪೂರೈಸಲಿದೆ. ಇಡೀ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವುದಕ್ಕೆ ನನ್ನ ಗೌರವ ಸಲ್ಲಿಸುತ್ತೇನೆ. ಇವತ್ತು ನಮ್ಮ ದೇಶವು ಅತ್ಯಂತ ಧೈರ್ಯವಾಗಿ ಇತರರನ್ನು ಎದುರಿಸುತ್ತಿದೆ ಎನ್ನುವುದಾದರೆ ಅದಕ್ಕೆ ಇಂಥವರ ಶೌರ್ಯ, ದೇಶಭಕ್ತಿ ಮತ್ತು ಗರ್ವವು ಕಾರಣವಾಗಿದೆ. ಆದರೆ ನಮ್ಮ ರಾಜಕೀಯ ವಿರೋಧ ಪಕ್ಷಗಳು ಸೈನ್ಯವನ್ನೂ ಬಿಡದೇ ಟೀಕೆ ಮಾಡುತ್ತಿರುವುದು ದುಃಖದ ಸಂಗತಿಯಾಗಿದೆ. ಸರ್ಕಾರದ ಬಗ್ಗೆ ಪ್ರಶ್ನೆ ಮಾಡುವುದು ತಪ್ಪಲ್ಲ. ಆದರೆ ಅವರು ನಮ್ಮ ಸೈನ್ಯದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ರಾಜಸ್ಥಾನದ ಜನರು, ದೇಶದ ಜನರು ಇಂತಹ ರೀತಿಯ ರಾಜಕಾರಣ ಮಾಡುವ ವ್ಯಕ್ತಿ ಮತ್ತು ಪಕ್ಷಗಳನ್ನು ಯಾವತ್ತೂ ಕ್ಷಮಿಸುವುದಿಲ್ಲ.

ಸ್ನೇಹಿತರೇ,

ಯಾರಿಗೆ ವಂಶ ರಾಜಕಾರಣ ಮಾಡಬೇಕು ಎಂದು ಕೊಳ್ಳುತ್ತಾರೋ ಅವರು ಮಾಡಿಕೊಳ್ಳಲಿ. ಆದರೆ ನಮ್ಮ ಬದ್ಧತೆಯು ಸುರಕ್ಷತೆ ಮತ್ತು ಸ್ವಗೌರವವನ್ನು ಹೆಚ್ಚಿಸುವುದೇ ಆಗಿದೆ. ನಮ್ಮ ಉದ್ದೇಶ ಮತ್ತು ನೀತಿಗಳು ಪಾರದರ್ಶಕವಾಗಿವೆ. ತುಂಬಾ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಂದು ಶ್ರೇಣಿ-ಒಂದೇ ಪಿಂಚಣಿ ಯೋಜನೆಯನ್ನು ನಮ್ಮ ಸರ್ಕಾರವು ಜಾರಿಗೆ ತಂದಿದೆ.

ಸೋದರ ಸೋದರಿಯರೇ,

ಇವತ್ತು ನಮ್ಮ ದೇಶವು ಜಗತ್ತಿನ ಕೇಂದ್ರ ಬಿಂದು ಎನಿಸಿಕೊಂಡಿದೆ. ನಾವು ಹೊಸ ದಿಕ್ಕಿನೆಡೆಯಲ್ಲಿ ಸಾಗುತ್ತಿದ್ದು, ವಿವಿಧ ಕಲ್ಪನೆಗಳ ನಿಟ್ಟಿನಲ್ಲಿ ಸಾಧನೆಯನ್ನು ಮಾಡಲಾಗುತ್ತಿದೆ. ಅಲ್ಲದೇ ಹೊಸ ಗುರಿಗಳನ್ನೂ ಮುಟ್ಟುವತ್ತ ಸಾಗುತ್ತಿದ್ದೇವೆ. ನಿಮ್ಮೆಲ್ಲರ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯಿಂದ ನಾವು ತಂದಿರುವ ಯೋಜನೆಗಳನ್ನು ಯಶಸ್ಸುಗೊಳಿಸಲಾಗುತ್ತಿದೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ. ಇವತ್ತು ನೀವು ಈ ಯೋಜನೆಗಳನ್ನು ಆರಂಭಿಸಿದ್ದಕ್ಕಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ ನನ್ನ ಭಾಷಣವನ್ನು ಮುಗಿಸುತ್ತಿದ್ದೇನೆ.

ನೀವೆಲ್ಲರೂ ನನ್ನ ಜತೆ ಈ ಘೋಷಣೆಗಳನ್ನು ಮಾಡಿ.

ಭಾರತ್ ಮಾತಾಕಿ ಜೈ..

ಭಾರತ್್ ಮಾತಾಕಿ ಜೈ.,.

ಭಾರತ್ ಮಾತಾಕಿ ಜೈ

ನಿಮ್ಮೆಲ್ಲರಿಗೂ ಧನ್ಯವಾದಗಳು…