Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೂ.37,500 ಕೋಟಿ ಹಣಕಾಸು ವೆಚ್ಚದ ಮೇಲ್ಮೈ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನ ಯೋಜನೆಗೆ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೂ.37,500 ಕೋಟಿ ಆರ್ಥಿಕ ವೆಚ್ಚದೊಂದಿಗೆ ಮೇಲ್ಮೈ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯು ಭಾರತದ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಕಾರ್ಯಕ್ರಮವನ್ನು ವೇಗಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು 2030ರ ವೇಳೆಗೆ 100 ದಶಲಕ್ಷ ಟನ್ ಕಲ್ಲಿದ್ದಲನ್ನು ಅನಿಲೀಕರಿಸುವ ರಾಷ್ಟ್ರೀಯ ಗುರಿಯನ್ನು ಮುನ್ನಡೆಸುತ್ತದೆ, ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಎಲ್ಎನ್ಜಿ (ಶೇ. 50 ಕ್ಕಿಂತ ಹೆಚ್ಚು ಆಮದು), ಯೂರಿಯಾ (~ಶೇ. 20 ಆಮದು), ಅಮೋನಿಯಾ (~ಶೇ. 100 ಆಮದು), ಮತ್ತು ಮೆಥನಾಲ್ (~ಶೇ. 80-90 ಆಮದು) ನಂತಹ ಪ್ರಮುಖ ಉತ್ಪನ್ನಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಒಂದು ಮಹತ್ವದ ಪೂರಕ ಸುಧಾರಣೆಯಾಗಿ, ಸರ್ಕಾರವು ನಿಯಂತ್ರಣೇತರ ವಲಯದ ಸಂಪರ್ಕ ಹರಾಜು ಚೌಕಟ್ಟಿನ ಅಡಿಯಲ್ಲಿ “ಕಲ್ಲಿದ್ದಲು ಅನಿಲೀಕರಣಕ್ಕೆ ಕಾರಣವಾಗುವ ಸಿಂಗಾಸ್ ಉತ್ಪಾದನೆ” ಉಪ-ವಲಯದ ಕಲ್ಲಿದ್ದಲು ಸಂಪರ್ಕದ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಿಸಿದೆ. ಇದು ಕಲ್ಲಿದ್ದಲು ಅನಿಲೀಕರಣ ಯೋಜನೆಗಳಲ್ಲಿನ ಹೂಡಿಕೆಗೆ ದೀರ್ಘಾವಧಿಯ ನೀತಿಯ ಖಾತ್ರಿಯನ್ನು ಒದಗಿಸುತ್ತದೆ.

ಯೋಜನೆಯ ಪ್ರಮುಖ ಲಕ್ಷಣಗಳು:

  • ಸಿಂಗಾಸ್ ಮತ್ತು ಅದರ ಉಪ ಉತ್ಪನ್ನಗಳ ಉತ್ಪಾದನೆಗಾಗಿ ಹೊಸ ಮೇಲ್ಮೈ ಕಲ್ಲಿದ್ದಲು/ಲಿಗ್ ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ಒಟ್ಟು ರೂ. 37,500 ಕೋಟಿ ಆರ್ಥಿಕ ವೆಚ್ಚವನ್ನು ನಿಗದಿಪಡಿಸಲಾಗಿದೆ, ಇದು ಸುಮಾರು 75 ದಶಲಕ್ಷ ಟನ್ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣದ ಗುರಿಯನ್ನು ಹೊಂದಿದೆ.
  • ಸ್ಥಾವರ ಮತ್ತು ಯಂತ್ರೋಪಕರಣಗಳ ವೆಚ್ಚದ ಗರಿಷ್ಠ ಶೇ. 20 ರಷ್ಟು ಆರ್ಥಿಕ ಪ್ರೋತ್ಸಾಹವನ್ನು ಒದಗಿಸಲಾಗುತ್ತದೆ.
  • ಯೋಜನಾ ವೆಚ್ಚ, ಕಲ್ಲಿದ್ದಲು ಬಳಕೆ  ಮತ್ತು ಸಿಂಗಾಸ್ ಉತ್ಪಾದನೆಯನ್ನು  ಮಾನದಂಡವಾಗಿಸಿಕೊಂಡ ಮೌಲ್ಯಮಾಪನ ಚೌಕಟ್ಟಿನೊಂದಿಗೆ, ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು.
  • ಯೋಜನೆಯ ಮೈಲಿಗಲ್ಲುಗಳಿಗೆ  ಅನುಗುಣವಾಗಿ, ನಾಲ್ಕು ಸಮಾನ ಕಂತುಗಳಲ್ಲಿ ಪ್ರೋತ್ಸಾಹಧನದ ವಿತರಣೆ.
  • ಯಾವುದೇ ಒಂದು ಯೋಜನೆಗೆ ನೀಡಲಾಗುವ ಹಣಕಾಸಿನ ಪ್ರೋತ್ಸಾಹಧನವನ್ನು ಗರಿಷ್ಠ ರೂ. 5,000 ಕೋಟಿಗೆ ಸೀಮಿತಗೊಳಿಸಲಾಗಿದೆ; ಯಾವುದೇ ಒಂದು ಉತ್ಪನ್ನಕ್ಕೆ (ಸಂಶ್ಲೇಷಿತ ನೈಸರ್ಗಿಕ ಅನಿಲ ಮತ್ತು ಯೂರಿಯಾ ಹೊರತುಪಡಿಸಿ) ಗರಿಷ್ಠ ರೂ. 9,000 ಕೋಟಿಗೆ ಮತ್ತು ಎಲ್ಲಾ ಯೋಜನೆಗಳನ್ನು ಒಳಗೊಂಡಂತೆ ಯಾವುದೇ ಒಂದು ಘಟಕ ಸಮೂಹಕ್ಕೆ ಗರಿಷ್ಠ ರೂ. 12,000 ಕೋಟಿಗೆ ಸೀಮಿತಗೊಳಿಸಲಾಗಿದೆ.
  • ಈ ಯೋಜನೆಯ ಅಡಿಯಲ್ಲಿನ ಪ್ರೋತ್ಸಾಹಧನವು ಹೆಚ್ಚುವರಿಯಾದುದಾಗಿದ್ದು, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ವ್ಯವಸ್ಥೆ ಅಥವಾ ಇತರ ಕೇಂದ್ರ/ರಾಜ್ಯ ಸರ್ಕಾರಿ ಸಚಿವಾಲಯಗಳ ಯೋಜನೆಗಳ ಅಡಿಯಲ್ಲಿನ ಪ್ರೋತ್ಸಾಹಧನವನ್ನು ಪಡೆಯುವುದನ್ನು ನಿರ್ಬಂಧಿಸುವುದಿಲ್ಲ.
  • ಈ ಯೋಜನೆಯು ಯಾವುದೇ ಒಂದು ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ, ಜೊತೆಗೆ ಸ್ಥಳೀಯ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸಲಾಗುತ್ತದೆ.

ಕಾರ್ಯತಂತ್ರದ ಮತ್ತು ಆರ್ಥಿಕ ಪ್ರಯೋಜನಗಳು:

  • ನಿರೀಕ್ಷಿತ ಹೂಡಿಕೆ ಕ್ರೋಢೀಕರಣ: ರೂ.2.5- 3.0 ಲಕ್ಷ ಕೋಟಿ
  • ಇಂಧನ ಭದ್ರತೆ ಮತ್ತು ಆಮದು ಪರ್ಯಾಯ: ಕಲ್ಲಿದ್ದಲು ಸಂಪನ್ಮೂಲಗಳ ವೈವಿಧ್ಯಮಯ ಬಳಕೆ ಮತ್ತು ಎಲ್ಎನ್ಜಿ, ಯೂರಿಯಾ, ಅಮೋನಿಯಾ, ಅಮೋನಿಯಂ ನೈಟ್ರೇಟ್, ಮೆಥನಾಲ್ ಮತ್ತು ಕೋಕಿಂಗ್ ಕಲ್ಲಿದ್ದಲಿನ ಆಮದುಗಳಿಗೆ ಪರ್ಯಾಯವನ್ನು ಒದಗಿಸುವ ಮೂಲಕ, ಇದು ಜಾಗತಿಕಮಟ್ಟದ ಬೆಲೆ ಏರಿಳಿತ ಮತ್ತು ಭೌಗೋಳಿಕ ರಾಜಕೀಯ ಪೂರೈಕೆ-ಸರಪಳಿ ಅಡೆತಡೆಗಳಿಂದ ಭಾರತವನ್ನು ರಕ್ಷಿಸುತ್ತದೆ; ಮತ್ತು ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಉದ್ದೇಶಗಳನ್ನು ಮುನ್ನಡೆಸುತ್ತದೆ.
  • ಉದ್ಯೋಗ ಸೃಷ್ಟಿ: ಈ ಯೋಜನೆಯು ಕಲ್ಲಿದ್ದಲು ಹೊಂದಿರುವ ಪ್ರದೇಶಗಳಲ್ಲಿ 25 ಯೋಜನೆಗಳಲ್ಲಿ ಸುಮಾರು 50,000 (ನೇರ ಮತ್ತು ಪರೋಕ್ಷ) ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
  • ಸರ್ಕಾರಗಳಿಗೆ ಆದಾಯ: ಈ ಯೋಜನೆಯಡಿಯಲ್ಲಿ ಕಲ್ಪಿಸಲಾದ 75 ದಶಲಕ್ಷ ಟನ್ ಅನಿಲೀಕರಣದಿಂದ ಕಲ್ಲಿದ್ದಲು/ಲಿಗ್ ನೈಟ್ ಬಳಕೆಯು ವಾರ್ಷಿಕವಾಗಿ ರೂ.6,300 ಕೋಟಿಗಳನ್ನು ಗಳಿಸುವ ನಿರೀಕ್ಷೆಯಿದೆ, ಜೊತೆಗೆ ಜಿ ಎಸ್ ಟಿ  ಮತ್ತು ಇತರ ಸುಂಕಗಳಿಂದ ಪೂರಕ ಆದಾಯವನ್ನು ಗಳಿಸುತ್ತದೆ.
  • ತಂತ್ರಜ್ಞಾನ ಪರಿಸರ ವ್ಯವಸ್ಥೆ: ಸ್ಥಳೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ವಿದೇಶಿ ಇಪಿಸಿ ಗುತ್ತಿಗೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಭಾರತದ ಸ್ವದೇಶೀ ಮೇಲ್ಮೈ ಕಲ್ಲಿದ್ದಲು ಅನಿಲೀಕರಣ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಹಿನ್ನೆಲೆ:

ಭಾರತವು ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಒಂದನ್ನು (~401 ಬಿಲಿಯನ್ ಟನ್) ಮತ್ತು ಲಿಗ್ ನೈಟ್ ನಿಕ್ಷೇಪಗಳನ್ನು (~47 ಬಿಲಿಯನ್ ಟನ್) ಹೊಂದಿದೆ. ದೇಶದ ಒಟ್ಟು ಇಂಧನ ಬಳಕೆಯಲ್ಲಿ ಕಲ್ಲಿದ್ದಲು ಶೇ. 55 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಅನಿಲೀಕರಣವು ಕಲ್ಲಿದ್ದಲು/ಲಿಗ್ ನೈಟ್ ಅನ್ನು ‘ಸಂಶ್ಲೇಷಿತ ಅನಿಲ’ (ಸಿಂಗಾಸ್) ಆಗಿ ಪರಿವರ್ತಿಸುತ್ತದೆ; ಇದು ದೇಶೀಯವಾಗಿ ಇಂಧನಗಳು ಮತ್ತು ರಾಸಾಯನಿಕಗಳನ್ನು ತಯಾರಿಸಲು ಬೇಕಾದ ಬಹುಮುಖ ವಸ್ತುವಾಗಿದ್ದು, ಹೆಚ್ಚಿನ ಮೌಲ್ಯದ ಆಮದುಗಳನ್ನು ಬದಲಿಸಲು ಹಾಗೂ ಜಾಗತಿಕ ಪೂರೈಕೆ ಅಡೆತಡೆಗಳು ಮತ್ತು ಬೆಲೆ ಏರಿಳಿತಗಳಿಂದ ಭಾರತವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಭಾರತದ ಪ್ರಮುಖ ಪರ್ಯಾಯ ಉತ್ಪನ್ನಗಳಾದ ಎಲ್ಎನ್‌ಜಿ, ಯೂರಿಯಾ, ಅಮೋನಿಯಂ ನೈಟ್ರೇಟ್, ಅಮೋನಿಯಾ, ಕೋಕಿಂಗ್ ಕಲ್ಲಿದ್ದಲು, ಮೆಥನಾಲ್, ಡಿಎಂಇ ಮತ್ತು ಇತರ ವಸ್ತುಗಳ ಆಮದು ವೆಚ್ಚವು 2025ರ ಹಣಕಾಸು ವರ್ಷದಲ್ಲಿ ಸುಮಾರು ರೂ. 2.77 ಲಕ್ಷ ಕೋಟಿಯಷ್ಟಿತ್ತು. ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಇರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಈ ಅವಲಂಬನೆಯ ಅಪಾಯವನ್ನು ಮತ್ತಷ್ಟು ಉಲ್ಲೇಖಿಸಿದೆ.

ರಾಷ್ಟ್ರೀಯ ಕಲ್ಲಿದ್ದಲು ಅನಿಲೀಕರಣ ಮಿಷನ್ (2021) ಮತ್ತು ಜನವರಿ 2024 ರಲ್ಲಿ ಅಂಗೀಕರಿಸಲಾದ ರೂ. 8,500 ಕೋಟಿ ಯೋಜನೆಯನ್ನು (ಇದರ ಅಡಿಯಲ್ಲಿ ರೂ. 6,233 ಕೋಟಿ ಮೌಲ್ಯದ 8 ಯೋಜನೆಗಳು ಅನುಷ್ಠಾನದಲ್ಲಿವೆ) ಆಧರಿಸಿ, ಈ ಹೊಸ ಯೋಜನೆಯು ಗಣನೀಯವಾಗಿ ಹೆಚ್ಚಿನ ಬೆಂಬಲದೊಂದಿಗೆ ಕಾರ್ಯದ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.

 

*****