ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ನೇ ಸಾಲಿನಲ್ಲಿ ರೈತರಿಗೆ ಬಡ್ಡಿ ಸಹಾಯಧನ ಯೋಜನೆ (ಐ.ಎಸ್.ಎಸ್.)ಗೆ ತನ್ನ ಅನುಮೋದನೆ ನೀಡಿದೆ. ಇದು ರೈತರಿಗೆ ಒಂದು ವರ್ಷದ ಅವಧಿಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಅಲ್ಪಾವಧಿ ಬೆಳೆ ಸಾಲವನ್ನು ಪಡೆಯಲು ನೆರವಾಗುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ 20,339 ಕೋಟಿ ರೂಪಾಯಿಗಳ ಹಣವನ್ನು ತೆಗೆದಿರಿಸಿದೆ.
ಈ ಬಡ್ಡಿ ಸಹಾಯಧನವನ್ನು ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್.ಬಿ.ಗಳಿಗೆ), ಖಾಸಗಿ ವಲಯದ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್.ಆರ್.ಬಿ.ಗಳಿಗೆ) ತಮ್ಮ ಸ್ವಂತ ನಿಧಿ ಬಳಕೆ ಬಳಿಕ ಮತ್ತು ನಬಾರ್ಡ್ ಗೆ ಆರ್.ಆರ್.ಬಿ. ಮತ್ತು ಸಹಕಾರಿ ಬ್ಯಾಂಕ್ ಗಳಿಗೆ ಮರು ಸಾಲ ಒದಗಿಸಲು ನೀಡಲಾಗುತ್ತದೆ.
ಈ ಬಡ್ಡಿ ಸಹಾಯಧನ ಯೋಜನೆ ಒಂದು ವರ್ಷದವರೆಗೆ ಮುಂದುವರಿಯುತ್ತದೆ ಮತ್ತು ಇದನ್ನು ಆರ್.ಬಿ.ಐ ಮತ್ತು ನಬಾರ್ಡ್ ಅನುಷ್ಠಾನಗೊಳಿಸುತ್ತವೆ.
ದೇಶದಲ್ಲಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆಗೆ ಉತ್ತೇಜನ ನೀಡಲು ಕೈಗೆಟುಕುವ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ಲಭ್ಯವಾಗುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಮುಖ್ಯಾಂಶಗಳು ಈ ಕೆಳಕಂಡಂತಿವೆ :
a) 2017-18ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 3 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲ ಪಡೆದು, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ರೈತರಿಗೆಈ ಅವಧಿಯಲ್ಲಿ ಶೇಕಡ 5ರಷ್ಟು ಬಡ್ಡಿ ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಹೀಗಾಗಿ ರೈತರು ಕೇವಲ ಶೇಕಡ 4ರಷ್ಟು ಬಡ್ಡಿಯನ್ನು ಮಾತ್ರವೇ ಕಟ್ಟಿದಂತಾಗುತ್ತದೆ. ಒಂದು ವೇಲೆ ರೈತರು ತಮ್ಮ ಅಲ್ಪಾವಧಿ ಬೆಳೆ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡದಿದ್ದರೆ ಅವರು ಶೇಕಡ 5ರಷ್ಟು ಬಡ್ಡಿ ಸಹಾಯಧನಕ್ಕೆ ವಿರುದ್ಧವಾಗಿ ಕೇವಲ ಶೇ.2ರಷ್ಟು ಸಹಾಯಧನಕ್ಕೆ ಮಾತ್ರವೇ ಅರ್ಹರಾಗುತ್ತಾರೆ.
b) ಕೇಂದ್ರ ಸರ್ಕಾರವು ಅಂದಾಜು 20,339 ಕೋಟಿ ರೂಪಾಯಿಗಳನ್ನು 2017-18ನೇ ಸಾಲಿನ ಬಡ್ಡಿ ಸಹಾಯಧನಕ್ಕಾಗಿ ಒದಗಿಸುತ್ತಿದೆ.
c) ಸುಗ್ಗಿಯ ಬಳಿಕ ತಮ್ಮ ಉತ್ಪನ್ನದ ದಾಸ್ತಾನು ಮಾಡಲು ಶೇ.9ರ ಬಡ್ಡಿ ದರದಲ್ಲಿ ಸಾಲ ಪಡೆಯುವಸಣ್ಣ ಹಾಗೂ ಅಂಚಿನಲ್ಲಿರುವ ರೈತರಿಗೆ ಪರಿಹಾರ ಒದಗಿಸುವ ಸಲುವಾಗಿ, ಕೇಂದ್ರ ಸರ್ಕಾರ ಶೇ.2ರಷ್ಟು ಬಡ್ಡಿ ಸಹಾಯಧನಕ್ಕೆ ಅನುಮೋದನೆ ನೀಡಿದೆ. ಅಂದರೆ ಆರು ತಿಂಗಳುಗಳವರೆಗಿನ ಸಾಲಕ್ಕೆ ಶೇ.7ರ ಬಡ್ಡಿ ದರವಾಗುತ್ತದೆ.
d) ನೈಸರ್ಗಿಕ ಪ್ರಕೋಪದಿಂದ ಬಾಧಿತರಾದ ರೈತರಿಗೆ ಪರಿಹಾರ ಒದಗಿಸಲು, ಬ್ಯಾಂಕ್ ಗಳಿಗೆ ಮೊದಲ ವರ್ಷದ ಪುನಾರಚಿತ ಮೊತ್ತಕ್ಕಾಗಿ ಶೇ.2ರಷ್ಟು ಬಡ್ಡಿ ಸಹಾಯಧನ ಒದಗಿಸಲಾಗುತ್ತದೆ.
e) ಸಕಾಲದಲ್ಲಿ ರೈತರು ತಮ್ಮ ಅಲ್ಪಾವಧಿ ಸಾಲವನ್ನು ಮರುಪಾವತಿ ಮಾಡದಿದ್ದರೆ, ಅವರು ಮೇಲೆ ತಿಳಿಸಿದ ರೀತ್ಯ ಶೇ.2ರಷ್ಟು ಬಡ್ಡಿ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
ಪ್ರಮುಖ ಪರಿಣಾಮ :
ಕೃಷಿ ವಲಯದಲ್ಲಿ ಉತ್ತಮ ಇಳುವರಿ ಹಾಗೂ ಒಟ್ಟಾರೆ ಉತ್ಪನ್ನ ಸಾಧನೆಗಾಗಿ ಸಾಲ ಅತ್ಯಂತ ಮಹತ್ವದ ಅಂಶವಾಗಿದೆ. ದೇಶದ ರೈತರಿಗೆ ಒದಗಿಸುವ ಅಲ್ಪಾವಧಿ ಬೆಳೆ ಸಾಲಕ್ಕಾಗಿ ಹಾಗೂ ಸುಗ್ಗಿಯ ನಂತರದ ದಾಸ್ತಾನಿನ ಅಗತ್ಯವನ್ನು ಪೂರೈಸಲು ನೀಡಲಾಗುವ ಬಡ್ಡಿ ಸಹಾಯಧನದಿಂದ ಉದ್ಭವಿಸುವ ವಿವಿಧ ಹೊಣೆಗಾರಿಕೆಗಳನ್ನು ಸರಿದೂಗಿಸಲು ಸಂಪುಟ 20 ಸಾವಿರದ 339 ಕೋಟಿ ರೂಪಾಯಿಗಳ ಮೊತ್ತಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಸಾಂಸ್ಥಿಕ ಸಾಲವು ರೈತರು ಅತಿಯಾದ ಬಡ್ಡಿ ದರ ನೀಡಿ ಸಾಂಸ್ಥಿಕೇತರ ಮೂಲಗಳಿಂದ ಸಾಲ ಪಡೆಯುವುದನ್ನು ತಪ್ಪಿಸುತ್ತದೆ.
ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ (ಪಿಎಂಎಫ್.ಬಿವೈ) ಅನ್ನು ಬೆಳೆ ಸಾಲಕ್ಕೆ ಸಂಪರ್ಕಿಸುವ ಕಾರಣ, ರೈತರು ಸರ್ಕಾರದ ರೈತ ಕೇಂದ್ರಿತವಾದ ಎರಡೂ ಯೋಜನೆಯ ಲಾಭವನ್ನು ಪಡೆಯುತ್ತಾರೆ.
ರೈತರಿಗೆ ಅವರು ಬೆಳೆಯುವ ಬೆಳೆಗೆ ಲಾಭದಾಯಕ ದರ ದೊರಕಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರದ ಮಹತ್ವದ ಉಪಕ್ರಮ ಮಾರುಕಟ್ಟೆ ಸುಧಾರಣೆಯಾಗಿದೆ. ರೈತರಿಗೆ ಲಾಭ ಮಾಡಿಕೊಡಲು ಹಂಚಿಹೋಗಿದ್ದ ಎ.ಪಿ.ಎಂ.ಸಿ.ಗಳನ್ನು ವಿದ್ಯುನ್ಮಾನ ವೇದಿಕೆಯ ಮೂಲಕ ಒಗ್ಗೂಡಿಸುವ ಮತ್ತು ಸ್ಪರ್ಧಾತ್ಮಕವಾಗಿ ದರ ದೊರಕುವಂತೆ ಮಾಡುವ ಸಲುವಾಗಿ ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಅನ್ನು 2016ರಲ್ಲಿ ಸರ್ಕಾರ ಆರಂಭಿಸಿದೆ. ರೈತರಿಗೆ ಆನ್ ಲೈನ್ ವ್ಯಾಪಾರ ಕೈಗೊಳ್ಳಲು ಸಲಹೆ ನೀಡಲಾಗಿದೆ, ಜೊತೆಗೆ ಅವರು ಮಾನ್ಯತೆ ಪಡೆದ ಗೋದಾಮುಗಳಲ್ಲಿ ತಮ್ಮ ಉತ್ಪನ್ನವನ್ನು ದಾಸ್ತಾನು ಮಾಡಲು ತಾವೇ ಸುಗ್ಗಿ ನಂತರ ಸಾಲವನ್ನು ಪಡೆಯುವುದೂ ಅಷ್ಟೇ ಮಹತ್ವದ್ದಾಗಿದೆ. ಸಾಲವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಹೊಂದಿರುವ ಸಣ್ಣ ಮತ್ತು ಅಂಚಿನ ರೈತರಿಗೆ ಆರು ತಿಂಗಳವರೆಗೆ ಅಂಥ ದಾಸ್ತಾನಿಗೆ ಶೇ.2ರ ಬಡ್ಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ತಮ್ಮ ಉತ್ಪನ್ನ ಮಾರಾಟ ಮಾಡಲು ಮತ್ತು ಒತ್ತಡದಲ್ಲಿ ಮಾರುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ. ಹೀಗಾಗಿ, ಈ ಸಾಲವನ್ನು ಪಡೆಯಲು ರೈತರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಕ್ರಿಯಾಶೀಲವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ.
ಸರ್ಕಾರವು ರೈತರ ಆದಾಯವನ್ನು ಉತ್ತಮಪಡಿಸಲು ಉತ್ಸುಕವಾಗಿದೆ, ಇದಕ್ಕಾಗಿ ಬಿತ್ತನೆಬೀಜದಿಂದ ಮಾರುಕಟ್ಟೆವರೆಗೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ.ಸಾಂಸ್ಥಿಕವಾಗಿ ಸಾಲ ನೀಡುವುದು ಸರ್ಕಾರದ ಮಣ್ಣಿನ ಆರೋಗ್ಯ ಪರೀಕ್ಷೆ, ಪ್ರತಿ ಹನಿ ನೀರು ಹೆಚ್ಚು ಬೆಳೆಯ ಪ್ರಧಾನಮಂತ್ರಿ ಸಿಂಚಾಯಿ ಯೋಜನೆ (ಪಿಎಂಕೆಎಸ್.ವೈ.), ಪಿಎಂ.ಎಫ್.ಬಿ.ವೈ, ಇ-ನಾಮ್ ಇತ್ಯಾದಿ ಉಪಕ್ರಮಗಳಿಗೆ ಪೂರಕವಾಗಿದೆ.
ಹಿನ್ನೆಲೆ:
ಈ ಯೋಜನೆಯನ್ನು 2006-07ರಿಂದ ನಡೆಸಲಾಗುತ್ತಿದೆ. ಈ ಯೋಜನೆಯಡಿ ರೈತರು ಶೇ.7ರ ಬಡ್ಡಿ ದರದಲ್ಲಿ 3 ಲಕ್ಷರೂಪಾಯಿಗಳವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆಯಬಹುದಾಗಿದೆ. ಇದು ಸಕಾಲದಲ್ಲಿ ಸಾಲ ಮರು ಪಾವತಿ ಮಾಡುವ ರೈತರಿಗೆ ಹೆಚ್ಚುವರಿಯಾಗಿ ಶೇಕಡ 3ರ ಬಡ್ಡಿ ಸಹಾಯಧನವನ್ನೂ ಒದಗಿಸುತ್ತದೆ. ಇದಕ್ಕಾಗಿ ಸಾಲ ಪಡೆದ ಒಂದು ವರ್ಷದೊಳಗೆ ಪ್ರಾಮಾಣಿಕವಾಗಿ ಸಾಲ ಹಿಂತಿರುಗಿಸಬೇಕು. ರೈತರು ಒತ್ತಡಕ್ಕೆ ಸಿಲುಕಿ ಮಾರಾಟ ಮಾಡುವುದನ್ನು ತಪ್ಪಿಸಲು, ಸುಗ್ಗಿಯ ನಂತರ ಮಾನ್ಯತೆ ಪಡೆದ ಗೋದಾಮುಗಳಲ್ಲಿ ತಮ್ಮ ಉತ್ಪನ್ನವನ್ನು ದಾಸ್ತಾನು ಇಡಲು ಸಾಲ ಸೌಲಭ್ಯವನ್ನು ಆರು ತಿಂಗಳುಗಳವರೆಗೆ ಕೆಸಿಸಿ ಹೊಂದಿರುವ ರೈತರಿಗೆ ಒದಗಿಸಲಾಗುತ್ತದೆ. 2016-17ನೇ ಸಾಲಿನಲ್ಲಿ, ನೀಡಲಾಗಿರುವ ಅಲ್ಪಾವಧಿ ಬೆಳೆ ಸಾಲವು 6,22,685 ಕೋಟಿ ರೂಪಾಯಿಗಳಾಗಿದ್ದು, ಇದು 6,15,000 ಕೋಟಿ ಗುರಿಯನ್ನು ಮೀರಿದೆ.
ವಿದ್ಯುನ್ಮಾನ ಮಾಧ್ಯಮಗಳ ಗಮನಕ್ಕೆ
ವಿವಿಧ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳು ರೈತರಿಗೆ ರಿಯಾಯಿತಿ ದರದಲ್ಲಿ ನೀಡಿರುವ ಕೃಷಿ ಸಾಲಕ್ಕಾಗಿ ಬಡ್ಡಿ ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ ಹಾಗೂ ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡಿದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಶೇ.3 ಬಡ್ಡಿ ಸಹಾಯಧನವನ್ನು ಒದಗಿಸುತ್ತದೆ. ಇದರಿಂದಾಗಿ ರೈತರು ಶೇ.4ರ ಬಡ್ಡಿ ದರದಲ್ಲಿ ಸಾಲ ಪಡೆದಂತೆ ಆಗುತ್ತದೆ. ಅಲ್ಲದೆ ಈ ಯೋಜನೆಯು ರೈತರು ಒತ್ತಡಕ್ಕೆ ಸಿಲುಕಿ ತಮ್ಮ ಉತ್ಪನ್ನ ಮಾರಾಟ ಮಾಡದಂತೆ ಮಾಡಲು ಗೋದಾಮು ಅಭಿವೃದ್ಧಿ ಪ್ರಾಧಿಕಾರ (ಡಬ್ಲ್ಯುಡಿಆರ್.ಎ)ಯಿಂದ ಮಾನ್ಯತೆ ಪಡೆದ ಗೋದಾಮುಗಳಲ್ಲಿ ತಮ್ಮ ಉತ್ಪನ್ನವನ್ನು ದಾಸ್ತಾನು ಇಡಲು ನೆರವಾಗುವಂತೆ ಶೇ.7ರ ರಿಯಾಯಿತಿ ಬಡ್ಡಿ ದರದ ಸಾಲ ಒದಗಿಸುತ್ತದೆ. ಇದು ರೈತರಿಗೆ ಸಾಂಸ್ಥಿಕ ಸಾಲ ಒದಗಿಸಿ, ಅವರು ಸಾಂಸ್ಥಿಕೇತರ ಖಾಸಗಿ ಮೂಲಗಳಿಂದ ಹೆಚ್ಚಿನ ಬಡ್ಡಿ ದರ ನೀಡಿ ಸಾಲ ಪಡೆಯುವುದನ್ನು ತಪ್ಪಿಸುತ್ತದೆ. ಈವರ್ಷದಿಂದ ಎಲ್ಲ ಅಲ್ಪಾವಧಿ ಬೆಳೆ ಸಾಲ ಖಾತೆಗಳನ್ನೂ ಆಧಾರ್ ಸಂಪರ್ಕಿತಗೊಳಿಸಲಾಗುತ್ತದೆ.
*****
AKT/VBA/SH