Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈತರು ಸಹಕಾರಿ ಬ್ಯಾಂಕ್ ಗಳಿಂದ ಪಡೆದಿರುವ ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿಯನ್ನು 2016ರ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳುಗಳಿಗೆ ಮನ್ನಾ ಮಾಡಲು ಮತ್ತು ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗಳಿಗೆ ಹೆಚ್ಚುವರಿ ಮರು ಸಾಲ ನೀಡಿಕೆಗಾಗಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ಗೆ ಬಡ್ಡಿ ರಿಯಾಯಿತಿ ಒದಗಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ರೈತರು ಸಹಕಾರಿ ಬ್ಯಾಂಕ್ ಗಳಿಂದ ಪಡೆದಿರುವ ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿಯನ್ನು 2016ರ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳುಗಳಿಗೆ ಮನ್ನಾ ಮಾಡಲು ಪೂರ್ವಾನ್ವಯ ಅನುಮೋದನೆ ನೀಡಿದೆ. ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗಳಿಗೆ ಹೆಚ್ಚುವರಿ ಮರು ಸಾಲ ನೀಡಿಕೆಗಾಗಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ಗೆ ಬಡ್ಡಿ ರಿಯಾಯಿತಿ ಒದಗಿಸಲೂ ನಿರ್ಧರಿಸಲಾಗಿದೆ.

ಭಾರತದಾದ್ಯಂತ ಸಹಕಾರಿ ಬ್ಯಾಂಕ್ ಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದುಕೊಂಡಿರುವ ರೈತರಿಗೆ ಇದರಿಂದ ಲಾಭವಾಗಲಿದೆ.
ಹಿಂಗಾರು ಚಟುವಟಿಕೆ ಕೈಗೊಳ್ಳಲು ನಗದು ಲಭ್ಯತೆಯಲ್ಲಿ ಕಡಿತ ಆಗಿ ಉಂಟಾದ ತೊಂದರೆಯಿಂದ ಹೊರಬರುವ ನಿಟ್ಟಿನಲ್ಲಿ ರೈತರಿಗೆ ಸಹಕಾರಿ ಬ್ಯಾಂಕ್ ಗಳಲ್ಲಿ ಬೆಳೆ ಸಾಲ ಸುಲಭವಾಗಿ ದೊರಕುವಂತೆ ಮಾಡಲು ಸಹಕಾರಿ ಬ್ಯಾಂಕ್ ಗಳಲ್ಲಿ ಸಂಪನ್ಮೂಲ ಲಭ್ಯತೆಯ ಖಾತ್ರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

2016ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಬಡ್ಡಿ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್ ಗಳಿಗೆ ಮರು ಹಣಕಾಸು ನೆರವನ್ನು ನಬಾರ್ಡ್ ಮೂಲಕ ನೀಡಲು ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸಲಾಗುತ್ತಿದೆ. ಇದನ್ನು ಸಹಕಾರಿ ಬ್ಯಾಂಕ್ ಗಳು 2016-17ರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೈತರಿಗೆ ವಿತರಿಸುತ್ತವೆ. ಹೆಚ್ಚುವರಿ ಹಣಕಾಸು ಅಂದರೆ ರೂ. 1060.50 ಕೋಟಿ ರೂಪಾಯಿ ಈ ಉದ್ದೇಶಕ್ಕೆ ಅಗತ್ಯವಿದೆ. 2016-17ನೇ ಸಾಲಿನಲ್ಲಿ ಬಡ್ಡಿ ರಿಯಾಯಿತಿ ಯೋಜನೆ (ಐ.ಎಸ್.ಎಸ್.) ಜಾರಿಗಾಗಿ ಮಂಜೂರು ಮಾಡಿದ್ದ 15,000 ಕೋಟಿ ರೂಪಾಯಿಗಳನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ.

ಹಿನ್ನೆಲೆ:

a) ಭಾರತ ಸರ್ಕಾರ 2006-07ರಿಂದ, ಬಡ್ಡಿ ರಿಯಾಯಿತಿ ಯೋಜನೆ ಜಾರಿ ಮಾಡುತ್ತಿದ್ದು, ಅದರಡಿ, 3 ಲಕ್ಷ ರೂಪಾಯಿಗಳವರೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಮತ್ತು ಸಹಕಾರಿ ಬ್ಯಾಂಕ್ ಮೂಲಕ ಅಲ್ಪಾವಧಿ ಬೆಳೆ ಸಾಲವನ್ನು ರೈತರಿಗೆ ವಾರ್ಷಿಕ 7ರ ಬಡ್ಡಿ ದರದಲ್ಲಿ ಒದಗಿಸಲಾಗುತ್ತಿದೆ. ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡುವ ರೈತರಿಗೆ 3 ಲಕ್ಷ ರೂಪಾಯಿಗಳವರೆಗಿನ ಅಲ್ಬಾವಧಿ ಬೆಳೆ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತಿದೆ. ಹೀಗಾಗಿ ರೈತರು ಬೆಳೆ ಸಾಲದ ಮೇಲೆ ಕೇವಲ ಶೇ.4ರ ಬಡ್ಡಿಯನ್ನು ಮಾತ್ರ ಪಾವತಿ ಮಾಡುತ್ತಿದ್ದಾರೆ.

b) ಹಳೆಯ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಧಿಕೃತ ಚಲಾವಣೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮತ್ತು ಇದರಿಂದ ರೈತರು ತಮ್ಮ ಮುಂಗಾರು ಬೆಳೆಯನ್ನು ಮಂಡಿಗಳಲ್ಲಿ ಮಾರಾಟ ಮಾಡಿದ್ದಕ್ಕೆ ಪಡೆದ ಚೆಕ್ ಗಳನ್ನು ನಗದು ಮಾಡಿಕೊಳ್ಳಲು ಅನುಭವಿಸಿದ ತೊಂದರೆ, ಮತ್ತು ಹಿಂಗಾರು ಕೃಷಿ ಚಟುವಟಿಕೆ ಕೈಗೊಳ್ಳಲು ಹಣದ ಕೊರತೆಯಿಂದ ಅವರಿಗೆ ಆದ ತೊಡಕುಗಳು ಮತ್ತು ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿ ಪಾವತಿಗೆ ಆದ ತೊಂದರೆ, ಅದರಲ್ಲೂ ಸಹಕಾರಿ ಬ್ಯಾಂಕ್ ಗಳ ಮೇಲೆ ಹೇರಲಾದ ನಿರ್ಬಂಧಗಳು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, 1.4.2016ರಿಂದ 30.9.2016ರ ನಡುವೆ ಸಹಕಾರಿ ಬ್ಯಾಂಕ್ ಗಳಿಂದ ವಿತರಣೆ ಮಾಡಲಾದ ಬೆಳೆ ಸಾಲ ಪಡೆದ ರೈತರಿಗೆ ಎರಡು ತಿಂಗಳುಗಳ ಅವಧಿಗೆ ಅಂದರೆ 2016 ನವೆಂಬರ್ ಮತ್ತು ಡಿಸೆಂಬರ್ ಗೆ ಬಡ್ಡಿ ಮನ್ನಾ ಮಾಡಲಾಗಿದೆ.

c) ಹೆಚ್ಚುವರಿ ಆರ್ಥಿಕ ಸಂಪನ್ಮೂಲ 1060.50 ಕೋಟಿ ರೂಪಾಯಿಗಳ ಅವಕಾಶವನ್ನು (i)1.4.2016ರಿಂದ 30.9.2016ರ ನಡುವೆ ಸಹಕಾರಿ ಬ್ಯಾಂಕ್ ಗಳಿಂದ ರೈತರಿಗೆ ವಿತರಣೆ ಮಾಡಲಾದ ಬೆಳೆ ಸಾಲದ ಮೇಲೆ ಎರಡು ತಿಂಗಳುಗಳ ಅವಧಿಗೆ ಮಾಡಲಾದ ಬಡ್ಡಿ ಮನ್ನಾ ವೆಚ್ಚ ಭರಿಸಲು (ನವೆಂಬರ್ ಮತ್ತು ಡಿಸೆಂಬರ್ 2016) ಮತ್ತು (ii) ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆಗಾಗಿ ಸರಕಾರಿ ಬ್ಯಾಂಕ್ ಗಳಿಗೆ ಒದಗಿಸಲು 20 ಸಾವಿರ ಕೋಟಿ ರೂಪಾಯಿಗಳನ್ನು ಅಲ್ಪಾವಧಿಗೆ ಪಡೆದಿರುವ ನಬಾರ್ಡ್ ಗೆ ಆಡಳಿತಾತ್ಮಕ ಮತ್ತು ಬಡ್ಡಿ ರಿಯಾಯಿತಿಯ ವೆಚ್ಚಕ್ಕಾಗಿ ಒದಗಿಸಲಾಗುತ್ತದೆ.

*****

AKT/VB/SH