ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17ನೇ ಸಾಲಿಗಾಗಿ ಅರ್ಹ ಗೆಜೆಟೆಡೇತರ ರೈಲ್ವೆ ನೌಕರರಿಗೆ (ಆರ್.ಪಿ.ಎಫ್/ಆರ್.ಪಿ.ಎಸ್.ಎಫ್. ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಸಂಪರ್ಕಿತ ಬೋನಸ್ (ಪಿ.ಎಲ್.ಬಿ) ನೀಡಿಕೆಗೆ ತನ್ನ ಅನುಮೋದನೆ ನೀಡಿದೆ. ಸುಮಾರು 12.30 ಲಕ್ಷ ಗೆಜೆಟೆಡೇತರ ರೈಲ್ವೆ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ. ಹಬ್ಬದ ಋತುವಿಗೂ ಮುನ್ನ ಲಕ್ಷಾಂತರ ಕುಟುಂಬಗಳಲ್ಲಿ ಸಂತಸ ಮೂಡಿಸಲು ಇದನ್ನು ದಸರಾ/ಪೂಜಾ ರಜಾದಿನಗಳಿಗೂ ಮುನ್ನ ಪಾವತಿ ಮಾಡಲಾಗುತ್ತಿದೆ.
ಪಿ.ಎಲ್.ಬಿ.ಯ ಪಾವತಿಯು ಪ್ರೋತ್ಸಾಹಕವಾಗಿರಲಿದೆ ಮತ್ತು ಬೃಹತ್ ಸಂಖ್ಯೆಯ ರೈಲ್ವೆ ಉದ್ಯೋಗಿಗಳನ್ನು ಅದರಲ್ಲೂ, ರೈಲ್ವೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ನೌಕರರಿಗೆ ಉತ್ತೇಜನ ನೀಡಲಿದ್ದು, ಅವರ ಉತ್ಪಾದಕತೆಯಲ್ಲಿ ಸುಧಾರಣೆ ಮಾಡಲಿದೆ ಮತ್ತು ರೈಲ್ವೆ ಗ್ರಾಹಕರ ಸುರಕ್ಷತೆ, ವೇಗ ಮತ್ತು ಸೇವೆಯನ್ನು ಖಾತ್ರಿಪಡಿಸಲಿದೆ. ಭಾರತೀಯ ರೈಲ್ವೆಯು ಗರಿಷ್ಠ ಸಾರ್ವಜನಿಕ ಕಲ್ಯಾಣದ ತತ್ವದ ಮೇಲೆ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಈ ನಿಟ್ಟಿನಲ್ಲಿ, ಈ ಬೋನಸ್ ಪಾವತಿಯು ರೈಲ್ವೆಯ ಹೊಣೆಗಾರಿಕೆ ಮತ್ತು ಸಾಮರ್ಥ್ಯ ಸುಧಾರಣೆಗೆ ನೆರವಾಗಲಿದೆ.
ರೈಲ್ವೆ ನೌಕರರಿಗೆ 78 ದಿನಗಳ ಪಿ.ಎಲ್.ಬಿ. ಪಾವತಿಯಿಂದಾಗಿ 2,245.45 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ. ಪಿ.ಎಲ್.ಬಿ. ಪಾವತಿಗೆ ವೇತನದ ಮಿತಿಯ ಲೆಕ್ಕಾಚಾರವನ್ನು ಮಾಸಿಕ ರೂ.7,000/- ಎಂದು ನಿಗದಿ ಪಡಿಸಲಾಗಿದೆ. ಪ್ರತಿಯೊಬ್ಬ ಅರ್ಹ ರೈಲ್ವೆ ನೌಕರನಿಗೆ 78 ದಿನಗಳಿಗೆ ನೀಡಲಾಗುವ ಗರಿಷ್ಠ ಮೊತ್ತ ರೂ.17,951 ಆಗಿರುತ್ತದೆ.
******