Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೋಮಾಂಚಕ ಗುಜರಾತ್ ಶೃಂಗ-2019 (2019ರ ಜನವರಿ 17-19 ) ರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಮಾಲ್ಟಾ ಪ್ರಧಾನಮಂತ್ರಿ ಆಗಮನ


ಮಾಲ್ಟಾದ ಪ್ರಧಾನಮಂತ್ರಿ ಗೌರವಾನ್ವಿತರಾದ ಡಾ. ಜೋಸೆಫ್ ಮಸ್ಕಟ್ ಅವರು 2019 ರ ಜನವರಿ 17-19 ರವರೆಗೆ ಆಯೋಜನೆಗೊಂಡಿರುವ ರೋಮಾಂಚಕ ಗುಜರಾತ್ ಶೃಂಗ 2019ರಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಆರ್ಥಿಕ, ಹೂಡಿಕೆ, ಮತ್ತು ಸಣ್ಣ ವ್ಯವಹಾರ ಸಚಿವರಾದ ಡಾ. ಕ್ರಿಶ್ಚಿಯನ್ ಕಾರ್ಡೋನಾ ಮತ್ತು ಅವರ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗು ವ್ಯಾಪಾರೋದ್ಯಮಿಗಳ ದೊಡ್ಡ ನಿಯೋಗ ಆಗಮಿಸಿದೆ. ಮಾಲ್ಟಾದ ಪ್ರಧಾನ ಮಂತ್ರಿ ಮತ್ತು ಅವರ ನಿಯೋಗವನ್ನು ಗುಜರಾತ್ ರಾಜ್ಯಪಾಲರಾದ ಶ್ರೀ ಒ.ಪಿ.ಕೊಹ್ಲಿ ಅವರು ಎದುರುಗೊಂಡು ಸ್ವಾಗತಿಸಿದರು.

ಪ್ರಧಾನಮಂತ್ರಿ ಮಸ್ಕಟ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆ ಶೃಂಗದ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಅವರು ಭಾರತದ ಉಪರಾಷ್ಟ್ರಪತಿಗಳು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾಲ್ಟಾಕ್ಕೆ ಭೇಟಿ ನೀಡಿದುದನ್ನು ಹಾರ್ದಿಕವಾಗಿ ಸ್ಮರಿಸಿಕೊಂಡರಲ್ಲದೆ ಭೇಟಿಗಳ ವಿನಿಮಯ ಹೆಚ್ಚುತ್ತಿರುವುದಕ್ಕೆ ಮತ್ತು ದ್ವಿಪಕ್ಷೀಯ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಇಬ್ಬರು ಪ್ರಧಾನಮಂತ್ರಿಗಳೂ ವ್ಯಾಪಾರ ಹೆಚ್ಚಳ ಮತ್ತು ವಾಣಿಜ್ಯಿಕ ಬಾಂಧವ್ಯ ಹೆಚ್ಚಳದ ಸಾಧ್ಯತೆಯ ಬಗ್ಗೆ ಸಮಾಲೋಚನೆ ನಡೆಸಿದರು.

ಪ್ರಧಾನ ಮಂತ್ರಿ ಮಸ್ಕಟ್ ಅವರು ಆಫ್ರಿಕಾ ಮತ್ತು ಯುರೋಪಿಯನ್ ಮಾರುಕಟ್ಟೆಗೆ ಅತ್ಯಂತ ಪ್ರಶಸ್ತ ತಾಣವಾಗಿ ಮಾಲ್ಟಾವನ್ನು ಬೆಳೆಸಲು ಭಾರತೀಯ ಔಷಧಿ ಮತ್ತು ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಿಗೆ ಆಹ್ವಾನ ನೀಡಿದರು. ಕೃತಕ ಬುದ್ದಿಮತ್ತೆ , ಬ್ಲಾಕ್ ಚೈನ್ ಮತ್ತು ಹಣಕಾಸು ತಂತ್ರಜ್ಞಾನಗಳಂತಹ ಆಧುನಿಕ ತಂತ್ರಜ್ಞಾನಗಳ ನಿಟ್ಟಿನಲ್ಲಿ ಮಾಲ್ಟಾದ ಜೊತೆ ಸಹಕಾರ ನೀಡುವಂತೆ ಭಾರತಕ್ಕೆ ಅವರು ಆಹ್ವಾನ ನೀಡಿದರು. ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಮಾಲ್ಟಾವು ಔಪಚಾರಿಕ ಶಾಸನವನ್ನು ತಂದಿದೆ ಮತ್ತು ಅದು ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಸಿಸ್ಟಮ್ ಮಾನಿಟರ್ ಪಾತ್ರವನ್ನು ವಹಿಸುವುದನ್ನು ನಿರೀಕ್ಷಿಸುತ್ತಿದೆ ಎಂದರು.

ಗುಜರಾತಿನ ಫೊರೆನ್ಸಿಕ್ ವಿಶ್ವವಿದ್ಯಾಲಯದಲ್ಲಿ ಮಾಲ್ಟಾದ ವೃತ್ತಿಪರರಿಗೆ ತರಬೇತಿ ಕೋರ್ಸುಗಳನ್ನು ನಡೆಸುವ ಸಾಧ್ಯತೆಯೂ ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಸಹಕಾರಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಆಹ್ವಾನ ನೀಡಿದರು. ಸಹ್ಯ ಅಭಿವೃದ್ದಿ ಮತ್ತು ಕಾರ್ಬನ್ ಮಾಲಿನ್ಯ ಕಡಿತಕ್ಕೆ ಪುನರ್ನವೀಕರಿಸಬಹುದಾದ ಇಂಧನದ ಮಹತ್ವವನ್ನು ಮನಗಂಡ ಇಬ್ಬರೂ ನಾಯಕರು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಉಪಕ್ರಮಗಳನ್ನು ಪ್ರಶಂಶಿಸಿದರಲ್ಲದೆ ಸೌರ ತಂತ್ರಜ್ಞಾನ ಉನ್ನತೀಕರಿಸಿ , ಸೌರ ಶಕ್ತಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪೂರ್ಣ ಸಹಕಾರದ ಬದ್ಧತೆ ವ್ಯಕ್ತಪಡಿಸಿದರು.

ಭೇಟಿಯಲ್ಲಿ ಪ್ರಧಾನ ಮಂತ್ರಿ ಮಸ್ಕಟ್ ಅವರು ರೋಮಾಂಚಕ ಗುಜರಾತ್ ಶೃಂಗ 2019ರಲ್ಲಿ ಪಾಲ್ಗೊಂಡರು ಮತ್ತು ಗುಜರಾತ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

***