Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಮಾಧ್ಯಮ ಹೇಳಿಕೆ

ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಮಾಧ್ಯಮ ಹೇಳಿಕೆ

ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಮಾಧ್ಯಮ ಹೇಳಿಕೆ

ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಮಾಧ್ಯಮ ಹೇಳಿಕೆ


ರಾಷ್ಟ್ರಾಧ್ಯಕ್ಷರಾದ ಶ್ರೀ ಡೊನಾಲ್ಡ್‌ ಟ್ರಂಪ್ ಅವರೆ,

ಸ್ನೇಹಿತರೆ,

 

ಮಾಧ್ಯಮ ಲೋಕದ ಮಹಿಳೆಯರು ಮತ್ತು ಮಹನೀಯರೆ,

ಮೊದಲನೆಯದಾಗಿ ರಾಷ್ಟ್ರಾಧ್ಯಕ್ಷರಾದ ಶ್ರೀ ಡೊನಾಲ್ಡ್‌ ಟ್ರಂಪ್ ಅವರು ಮುಕ್ತ ಟ್ವೀಟ್ ನಿಂದ ಹಿಡಿದು ನಮ್ಮ ನಡುವಿನ ಮಾತುಕತೆ ಮುಗಿಯುವವರೆಗೂ ಸ್ನೇಹಪೂರ್ಣ ಸ್ವಾಗತ ನೀಡಿದ್ದಕ್ಕಾಗಿ ಹಾಗೂ ವೈಟ್ ಹೌಸ್ನಲ್ಲಿ ತಾವು ಮತ್ತು ಪ್ರಥಮ ಮಹಿಳೆ ನೀಡಿದ ಭವ್ಯ ಅತಿಥಿ ಸತ್ಕಾರಕ್ಕಾಗಿ ನಾನು ಹೃತ್ಪೂರ್ವಕವಾಗಿ ಆಭಾರಿಯಾಗಿದ್ದೇನೆ. ರಾಷ್ಟ್ರಾಧ್ಯಕ್ಷರಾದ ಶ್ರೀ ಟ್ರಂಪ್ ಅವರೆ, ನನ್ನ ಜೊತೆ ತಾವು ಇಷ್ಟು ಸಮಯ ಕಳೆದಿದ್ದಕ್ಕಾಗಿ ತಮಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಈ ಪ್ರವಾಸ ಮತ್ತು ಇಂದು ತಮ್ಮ ಜೊತೆಗೆ ನಡೆದ ಮಾತುಕತೆಯು ನಮ್ಮ ಎರಡೂ ದೇಶಗಳ ಸಹಕಾರದ ಇತಿಹಾಸದಲ್ಲೇ ಒಂದು ಅತ್ಯಂತ ಮಹತ್ವಪೂರ್ಣ ಘಟನೆಯಾಗಿದೆ.  

 

ಸ್ನೇಹಿತರೆ, ರಾಷ್ಟ್ರಾಧ್ಯಕ್ಷ ಟ್ರಂಪ್ ಮತ್ತು ನನ್ನ ನಡುವೆ ಇಂದು ನಡೆದ ಮಾತುಕತೆ ಅತ್ಯಂತ ಮಹತ್ವಪೂರ್ಣವಾಗಿದೆ.

            ಈ ಕಾರಣಗಳಿಗಾಗಿ:

  • ಏಕೆಂದರೆ ಇದು ಪರಸ್ಪರ ವಿಶ್ವಾಸವನ್ನು ಆಧರಿಸಿತ್ತು.
  • ಏಕೆಂದರೆ ಈ ಮಾತುಕತೆಯಲ್ಲಿ ನಮ್ಮ ಮೌಲ್ಯಗಳು, ಅವಶ್ಯಕತೆಗಳು, ಚಿಂತೆಗಳು ಮತ್ತು ಅಭಿರುಚಿಗಳು ಒಂದೇ ದೃಷ್ಟಿಕೋನವನ್ನು ಹೊಂದಿದ್ದವು.
  • ಏಕೆಂದರೆ ಇದು ಭಾರತ ಮತ್ತು ಸಂಯುಕ್ತ ರಾಷ್ಟ್ರದ ನಡುವೆ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ಅಂತಿಮ ಅವಶ್ಯಕತೆಗಳನ್ನು ಆಧರಿಸಿತ್ತು.
  • ಏಕೆಂದರೆ ಎರಡೂ ದೇಶಗಳು ಪ್ರಗತಿಯ ಗ್ಲೋಬಲ್ ಎಂಜಿನ್ ಗಳಾಗಿವೆ.
  • ಏಕೆಂದರೆ ರಾಷ್ಟ್ರಾಧ್ಯಕ್ಷ ಶ್ರೀ ಟ್ರಂಪ್ ಅವರ ಮತ್ತು ನನ್ನ ಮುಖ್ಯ ಗುರಿ ಎರಡೂ ದೇಶ ಮತ್ತು ಸಮಾಜಗಳನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವುದಾಗಿದೆ.
  • ಏಕೆಂದರೆ ವಿಶ್ವಕ್ಕೇ ಸವಾಲಾಗಿರುವ ಭಯೋತ್ಪಾದನೆಯಂತಹ ಗಂಭೀರ ಸಮಸ್ಯೆಗಳಿಂದ ನಮ್ಮ ಸಮಾಜಗಳನ್ನು ರಕ್ಷಿಸಿಕೊಳ್ಳುವುದು ಶ್ರೀ ಟ್ರಂಪ್ ಮತ್ತು ನನ್ನ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ.
  • ಭಾರತ ಮತ್ತು ಸಂಯುಕ್ತ ರಾಷ್ಟ್ರವು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ದೇಶಗಳಾಗಿವೆ. ಇವನ್ನು ಸಂಪೂರ್ಣವಾಗಿ ಬಲಪಡಿಸುವುದು ನಮ್ಮ ಉದ್ದೇಶವಾಗಿದೆ.

 

ಸ್ನೇಹಿತರೆ, ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಎರಡು ದೇಶಗಳ ನಡುವೆ ದೃಢವಾದ ಸಹಭಾಗಿತ್ವವಿದೆ. ಇಂದಿನ ನಮ್ಮ ಮಾತುಕತೆಯಲ್ಲಿ ರಾಷ್ಟ್ರಾಧ್ಯಕ್ಷ ಶ್ರೀ ಟ್ರಂಪ್ ಮತ್ತು ನಾನು ಭಾರತ ಹಾಗೂ ಅಮೆರಿಕದ ಸಂಬಂಧಗಳನ್ನು ಕುರಿತಂತೆ ಪ್ರತಿಯೊಂದು ಆಯಾಮದಲ್ಲೂ ವಿಸ್ತೃತವಾಗಿ ಚರ್ಚಿಸಿದೆವು. ಎರಡೂ ದೇಶಗಳು ದ್ವಿಪಕ್ಷೀಯ ಸ್ಥಾಪನೆಗೆ ಬದ್ಧವಾಗಿವೆ. ಇದು ನಮ್ಮ ದೃಢ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಬಲ್ಲದು. ಈ ಸಂದರ್ಭದಲ್ಲಿ ಎರಡೂ ದೇಶಗಳಲ್ಲಿ ಹೆಚ್ಚಿನ ಉತ್ಪಾದನೆ, ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನಗಳಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, ನಮ್ಮ ಸಹಕಾರ ಮತ್ತು ಸಂಬಂಧಗಳು ಇನ್ನಷ್ಟು ಗಾಢವಾಗುತ್ತವೆ. 

 

ಭಾರತದ ಸಾಮಾಜಿಕ, ಆರ್ಥಿಕ ಬದಲಾವಣೆಗಾಗಿ ನಾವು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಅಮೆರಿಕವನ್ನು ಪ್ರಮುಖ ಪಾಲುದಾರರೆಂದು ಭಾವಿಸಿದ್ದೇವೆ. ನನ್ನ ಕನಸಿನ ನವಭಾರತದ ನಿರ್ಮಾಣ ಮತ್ತು ರಾಷ್ಟ್ರಾಧ್ಯಕ್ಷ ಶ್ರೀ ಟ್ರಂಪ್ ಅವರ ಮೇಕ್ ಅಮೆರಿಕ ಗ್ರೇಟ್ ಎಗೇನ್, ಈ ಎರಡೂ ದೃಷ್ಟಿಕೋನಗಳು ನಮ್ಮ ಸಹಭಾಗಿತ್ವಕ್ಕೆ ಹೊಸ ಆಯಾಮ ನೀಡುತ್ತದೆ. ಒಂದು ದೃಢ, ಯಶಸ್ವಿ ಅಮೆರಿಕಾದಲ್ಲೇ ಭಾರತದ ಹಿತವಿದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಇದೇ ರೀತಿ ಭಾರತದ ಅಭಿವೃದ್ಧಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾತ್ರ ಹೆಚ್ಚುತ್ತಿರುವುದರಲ್ಲಿ ಅಮೆರಿಕದ ಹಿತವಿದೆ. ವ್ಯಾಪಾರ, ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯಲ್ಲಿ ಅಪಾರ ಅಭಿವೃದ್ಧಿಯೇ ನಮ್ಮ ಮೊದಲ ಅವಶ್ಯಕತೆಯಾಗಲಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರ ಮತ್ತು ಆರ್ಥಿಕ ಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವುದು ಮತ್ತು ಅವುಗಳಲ್ಲಿ ಗಾಢತೆ ತರುವುದು ನಮ್ಮ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಇದಕ್ಕಾಗಿ ನಮ್ಮ ಯಶಸ್ವೀ ಡಿಜಿಟಲ್ ಸಹಭಾಗಿತ್ವವನ್ನು ಇನ್ನಷ್ಟು ಸದೃಢಗೊಳಿಸುವುದಕ್ಕಾಗಿ ಹೆಜ್ಜೆ ಇಡುತ್ತೇವೆ.

 

ಸ್ನೇಹಿತರೆ,

ನಾವು ಮೇಲಿನ ವಿಷಯಗಳಲ್ಲಷ್ಟೇ ಸಹಭಾಗಿತ್ವ ಹೊಂದುತ್ತಿಲ್ಲ. ನಮ್ಮೆದುರಿಗಿರುವ ಮತ್ತು ಮುಂದೆ ಬರಲಿರುವ ಸವಾಲುಗಳನ್ನು ನಿಭಾಯಿಸುವಲ್ಲಿಯೂ ಸಹಭಾಗಿತ್ವ ಹೊಂದುತ್ತಿದ್ದೇವೆ. ಇಂದಿನ ನಮ್ಮ ಮಾತುಕತೆಯಲ್ಲಿ ನಾವು ಭಯೋತ್ಪಾದನೆ, ಉಗ್ರವಾದಗಳಿಂದ ಇಡೀ ವಿಶ್ವದಲ್ಲಿ ಉಂಟಾಗಿರುವ ಗಂಭೀರ ಸಮಸ್ಯೆಗಳನ್ನೂ ಚರ್ಚಿಸಿದೆವು. ಈ ವಿಷಯವಾಗಿ ಪರಸ್ಪರ ಸಹಕಾರ ಹೆಚ್ಚಿಸಲು ನಿರ್ಧರಿಸಿದೆವು. ಭಯೋತ್ಪಾದನೆ ವಿರುದ್ಧ ಹೋರಾಡುವುದು ಮತ್ತು ಭಯೋತ್ಪಾದಕರಿಗೆ ಆಶ್ರಯ ಕೊಡುವುದನ್ನು ನಿಲ್ಲಿಸುವಂತೆ ಮಾಡುವುದು ನಮ್ಮ ಸಹಭಾಗಿತ್ವದ ಒಂದು ಮಹತ್ವಪೂರ್ಣ ಅಂಗವಾಗಿದೆ. ಭಯೋತ್ಪಾದಕ ಸಂಘಟನೆಗಳಿಂದ ಎದುರಾಗುತ್ತಿರುವ ಸಂಕಷ್ಟಗಳನ್ನು ಕೊನೆಗಾಣಿಸಲು ಬೇಹುಗಾರಿಕೆ, ಮಾಹಿತಿ ವಿನಿಮಯ ಮತ್ತು ಕಾರ್ಯನೀತಿಗಳಲ್ಲಿ ಸಾಧ್ಯವಾದಷ್ಟು ಪರಸ್ಪರ ಸಹಕಾರ ಹೆಚ್ಚಿಸುತ್ತೇವೆ. 

 

ನಮ್ಮ ಮಧ್ಯೆ ಕೆಲವು ಸ್ಥಳಗಳಿಗೆ ಸಂಬಂಧಪಟ್ಟಂತೆಯೂ ವಿಸ್ತೃತವಾದ ಚರ್ಚೆ ನಡೆಯಿತು. ಆಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆಯಿಂದಾಗಿ ಹೆಚ್ಚುತ್ತಿರುವ ಅಸ್ಥಿರತೆಯು ನಮ್ಮಿಬ್ಬರ ಸಮಾನ ಚಿಂತೆಯಾಗಿದೆ. ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಆಫ್ಘಾನಿಸ್ತಾನದ ಪುನರ್ನಿರ್ಮಾಣ ಮತ್ತು ಅದರ ಸುರಕ್ಷತೆಯ ವಿಷಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ನಾವು ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಉದ್ದೇಶವನ್ನು ಪೂರ್ತಿಗೊಳಿಸಲು ಅಮೆರಿಕದೊಂದಿಗೆ ಗಾಢ ಸಮಾಲೋಚನೆ, ಮಾಹಿತಿ ವಿನಿಮಯ ಮತ್ತು ಸಹಕಾರ ನೀಡುವುದನ್ನು ಮುಂದುವರಿಸುತ್ತೇವೆ.

ಇಂಡೋ-ಪೆಸಿಫಿಕ್ ವಲಯದಲ್ಲಿ ಸುಖಶಾಂತಿ ಮತ್ತು ಸ್ಥಿರತೆ ನೆಲೆಸಬೇಕು ಎನ್ನುವುದು ನಮ್ಮ ಯುದ್ಧ ಕೌಶಲ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ. ಈ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಸವಾಲುಗಳಿಂದಾಗಿ ನಮ್ಮ ಸುರಕ್ಷೆಗಾಗಿ ಪರಸ್ಪರ ಸಹಭಾಗಿತ್ವವನ್ನು ಹೊಂದುತ್ತಾ ಬಂದಿದ್ದೇವೆ. ಈ ಕೆಲಸದಲ್ಲಿ ನಾವು ಅಮೆರಿಕದ ಜೊತೆ ಸೇರಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ರಕ್ಷಣಾ ಸವಾಲುಗಳಿಗೆ ಸಂಬಂಧಿಸಿದಂತೆ ನಮ್ಮ ನಡುವೆ ಹೆಚ್ಚುತ್ತಿರುವ ರಕ್ಷಣೆ ಮತ್ತು ಭದ್ರತಾ ಸಹಕಾರ ಅತ್ಯಂತ ಮಹತ್ವಪೂರ್ಣವಾಗಿದೆ. 

 

ಈ ವಿಷಯವಾಗಿಯೂ ನಾವು ವಿಸ್ತೃತವಾಗಿ ಚರ್ಚಿಸಿದೆವು. ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಅಮೆರಿಕವು ನೀಡುತ್ತಿರುವ ಸಹಕಾರವನ್ನು ನಾವು ಪ್ರಶಂಸಿಸುತ್ತೇವೆ. ನಾವು ಎಲ್ಲ ರೀತಿಯಿಂದಲೂ ನಮ್ಮ ಮಧ್ಯೆ ಕಡಲು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ರಕ್ಷಣಾ ತಂತ್ರಜ್ಞಾನ, ವ್ಯಾಪಾರ ಮತ್ತು ತಯಾರಿಕೆಯ ಸಹಭಾಗಿತ್ವವನ್ನು ಸದೃಢಗೊಳಿಸಿ ಪ್ರಯೋಜನ ಪಡೆಯುತ್ತೇವೆ. ನಾವು ಅಂತಾರಾಷ್ಟ್ರೀಯ ವಿಷಯಗಳಲ್ಲಿ ನಮ್ಮ ಸಾಮಾಜಿಕ ಹಿತವನ್ನು ಕಾಯುವ ಬಗ್ಗೆಯೂ ಮಾತುಕತೆ ನಡೆಸಿದೆವು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ನಿರಂತರವಾಗಿ ನಮ್ಮನ್ನು ಸಮರ್ಥಿಸುತ್ತಿರುವುದಕ್ಕಾಗಿ ಅಮೆರಿಕಕ್ಕೆ ನಾವು ಆಭಾರಿಯಾಗಿದ್ದೇವೆ. 

 

ರಾಷ್ಟ್ರಾಧ್ಯಕ್ಷ ಶ್ರೀ ಟ್ರಂಪ್ ಅವರೆ,

ತಾವು ಭಾರತ ಮತ್ತು ನನ್ನ ಬಗ್ಗೆ ಸ್ನೇಹಭಾವ ತೋರಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ನಿಮಗಿರುವ ಬದ್ಧತೆಯನ್ನು ಅಭಿನಂದಿಸುತ್ತೇನೆ. ತಮ್ಮ ನೇತೃತ್ವದಲ್ಲಿ ಪರಸ್ಪರ ಪ್ರಯೋಜನಕಾರಿಯಾದ ಯುದ್ಧ ಕೌಶಲ ಸಹಭಾಗಿತ್ವವನ್ನು ಸಕಾರಾತ್ಮಕತೆಯಿಂದ ಮುನ್ನಡೆಸುತ್ತಾ ಹೊಸ ರೀತಿಯಲ್ಲಿ ಸದೃಢಗೊಳಿಸಿ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ಭರವಸೆ ನನಗಿದೆ.

 

ವಾಣಿಜ್ಯ ಪ್ರಪಂಚದಲ್ಲಿ ನಿಮ್ಮ ವೈಯಕ್ತಿಕ ಯಶಸ್ಸು, ಅನುಭವವು ನಮ್ಮ ಸಹಭಾಗಿತ್ವವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಾ ಹೊಸ ಕಾರ್ಯಸೂಚಿಯನ್ನು ನೀಡುತ್ತದೆ. ಭಾರತ, ಅಮೆರಿಕ ಸಂಬಂಧಗಳ ಈ ಪ್ರವಾಸದಲ್ಲಿ ಒಂದು ಸಮರ್ಥ ಮುಂದಾಳತ್ವ ನೀಡುತ್ತಿರುವುದಕ್ಕಾಗಿ ತಮಗೆ ಧನ್ಯವಾದ ಅರ್ಪಿಸುತ್ತೇನೆ. ಎರಡೂ ದೇಶಗಳ ಅಭಿವೃದ್ಧಿಯ ಈ ಪ್ರವಾಸದಲ್ಲಿ ನಾನು ನಿಮ್ಮ ಜೊತೆ ಒಬ್ಬ ಮುನ್ನಡೆಸುವ, ಖಚಿತ ಮತ್ತು ನಿರ್ಣಾಯಕ ಪಾಲುದಾರನಾಗಿ ಇರುತ್ತೇನೆ. 

 

ನನ್ನ ಇಂದಿನ ಪ್ರವಾಸ ಮತ್ತು ಪರಸ್ಪರರ ನಡುವೆ ನಡೆದ ವಿಸ್ತೃತ ಮಾತುಕತೆಯು ಅತ್ಯಂತ ಯಶಸ್ವಿಯಾಗಿದೆ. ವೇದಿಕೆಯಿಂದ ಇಳಿಯುವ ಮೊದಲು ನಾನು ನಿಮಗೆ ಕುಟುಂಬಸಮೇತ ಭಾರತ ಪ್ರವಾಸ ಮಾಡಬೇಕೆಂದು ಆಹ್ವಾನಿಸುತ್ತಿದ್ದೇನೆ. 

 

ಭಾರತದಲ್ಲಿ ನಿಮಗೆ ಅತಿಥಿ ಸತ್ಕಾರ ಮಾಡುವ ಅವಕಾಶ ನೀಡುತ್ತೀರೆಂದು ನನಗೆ ಆಶಾಭಾವನೆ ಇದೆ.

ಕೊನೆಯಲ್ಲಿ ತಾವು ಮತ್ತು ಪ್ರಥಮ ಮಹಿಳೆ ಇಂದು ನೀಡಿದ ಅತಿಥಿ ಸತ್ಕಾರಕ್ಕಾಗಿ ನಾನು ಬಹಳ ಆಭಾರಿಯಾಗಿದ್ದೇನೆ.