ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿಯ ಕಾಯಿದೆ 1993ರ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
01 Nov, 2017
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎನ್.ಸಿ.ಟಿ.ಇ. ಅನುಮತಿ ಇಲ್ಲದೆ ಶಿಕ್ಷಕರ ಶಿಕ್ಷಣ ಕೋರ್ಸ್ ನಡೆಸುತ್ತಿರುವ ಕೇಂದ್ರ/ರಾಜ್ಯ/ವಿಶ್ವವಿದ್ಯಾಲಯಗಳಿಗೆ ಪೂರ್ವಾನ್ವಯವಾಗಿ ಮಾನ್ಯತೆ ನೀಡಲು ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ ಕಾಯಿದೆ 1993ಕ್ಕೆ ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ (ತಿದ್ದುಪಡಿ) ಕಾಯಿದೆ 2017 ಹೆಸರಿನಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.
2017-18ನೇ ಶೈಕ್ಷಣಿಕ ಸಾಲಿನವರೆಗೆ ಎನ್.ಸಿ.ಟಿ.ಇ. ಅನುಮತಿ ಇಲ್ಲದೆಯೇ ಶಿಕ್ಷಕರ ಶಿಕ್ಷಣ ಕೋರ್ಸ್ ನಡೆಸುತ್ತಿರುವುದು ಪತ್ತೆಯಾದ ಕೇಂದ್ರ/ರಾಜ್ಯ/ವಿಶ್ವವಿದ್ಯಾಲಯಗಳಿಗೆ ಪೂರ್ವಾನ್ವಯವಾಗಿ ಮಾನ್ಯತೆ ನೀಡಲು ಈ ತಿದ್ದುಪಡಿ ಅವಕಾಶ ಕೋರುತ್ತದೆ. ಈ ವಿದ್ಯಾಸಂಸ್ಥೆಗಳಿಂದ ಪದವಿ ಪಡೆದಿರುವ ಮತ್ತು ಈಗ ದಾಖಲಾಗಿರುವ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಬಾರದೆಂಬ ಹಿನ್ನೆಲೆಯಲ್ಲಿ ಪೂರ್ವಾನ್ವಯ ಮಾನ್ಯತೆಯು ಒಂದು ಬಾರಿಯ ಕ್ರಮವಾಗಿ ನೀಡಲಾಗುತ್ತಿದೆ.
ಈ ಶಿಕ್ಷಣ ಸಂಸ್ಥೆಗಳಲ್ಲಿ/ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ಈಗಾಗಲೇ ಉತ್ತೀರ್ಣರಾಗಿ, ಶಿಕ್ಷಕರಾಗಿ ನೇಮಕಗೊಳ್ಳಲು ಅರ್ಹತೆ ಬಯಸುವವರಿಗೆ ಈ ತಿದ್ದುಪಡಿ ಅನುಕೂಲ ಕಲ್ಪಿಸಲಿದೆ. ಮೇಲೆ ಉಲ್ಲೇಖಿಸಲಾದ ಸೌಲಭ್ಯ ಒದಗಿಸಲು ಮಾನವ ಸಂಪನ್ಮೂಲ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಗ್ರಂಥಾಲಯ ಇಲಾಖೆ ಈ ತಿದ್ದುಪಡಿ ಮಾಡಿದೆ.
ಶಿಕ್ಷಕರ ತರಬೇತಿ ಕೋರ್ಸ್ ಅಂದರೆ ಬಿ.ಇಡಿ, ಮತ್ತು ಡಿಇಐ,ಇಡಿ ನಡೆಸುತ್ತಿರುವ ಎಲ್ಲ ಸಂಸ್ಥೆಗಳೂ ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿಯ ಕಾಯಿದೆ ಸೆಕ್ಷನ್ 14ರಡಿಯಲ್ಲಿ ಮಾನ್ಯತೆ ಪಡೆಯಬೇಕಾಗುತ್ತದೆ. ಅಂಥ ಮಾನ್ಯತೆ ಪಡೆದ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು ನಡೆಸುವ ಕೋರ್ಸ್ ಗಳಿಗೆ ಎನ್.ಸಿ.ಟಿ.ಇ. ಕಾಯಿದೆಯ ಸೆಕ್ಷನ್ 15ರಡಿಯಲ್ಲಿ ಅನುಮತಿ ಇದೆ.
ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು /ರಾಜ್ಯಗಳ ವಿಶ್ವವಿದ್ಯಾಲಯಗಳು/ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಿಗೆ (ಡಿಐಇಟಿಗಳು) ಪತ್ರ ಬರೆದಿರುವ ಎನ್.ಸಿ.ಟಿ.ಇ. ಶಿಕ್ಷಕರ ಶಿಕ್ಷಣ ಕೋರ್ಸ್ ಆರಂಭಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬುದನ್ನು ತಿಳಿಸಿದೆ ಮತ್ತು ಎನ್.ಸಿ.ಟಿ.ಇ. ಅನುಮತಿ ಇಲ್ಲದೆಯೇ ಅಂಥ ಕೋರ್ಸ್ ಗಳನ್ನು ನಡೆಸುತ್ತಿರುವ ಸಂಸ್ಥೆಗಳು/ವಿಶ್ವವಿದ್ಯಾಲಯಗಳ ಬಗ್ಗೆ ಒಂದು ಬಾರಿಯ ಪರಿಹಾರ ಒದಗಿಸಲು ಮಾಹಿತಿ ನೀಡುವಂತೆ 31.03.2017ರವರೆಗೆ ಗಡುವು ನೀಡಿತ್ತು.
ಹಿನ್ನೆಲೆ:
ಎನ್.ಸಿ.ಟಿ.ಇ. ಕಾಯಿದೆ 1993 1995ರ ಜುಲೈ 1ರಿಂದ ಜಾರಿಗೆ ಬಂದಿದೆ ಮತ್ತು ಜಮ್ಮು ಹಾಗೂ ಕಾಶ್ಮೀರ ರಾಜ್ಯ ಹೊರತು ಪಡಿಸಿ ಇದು ದೇಶದಾದ್ಯಂತ ಅನ್ವಯವಾಗುತ್ತದೆ. ಈ ಕಾಯಿದೆಯ ಮುಖ್ಯ ಉದ್ದೇಶ ಶಿಕ್ಷಕರ ಶಿಕ್ಷಣ ವ್ಯವಸ್ಥೆ, ನಿಯಂತ್ರಣ ಮತ್ತು ಈ ವ್ಯವಸ್ಥೆಯ ಗುಣಮಟ್ಟ ಮತ್ತು ನಿಯಮಗಳ ಸೂಕ್ತ ನಿರ್ವಹಣೆಗಾಗಿ ಮತ್ತು ಅಭಿವೃದ್ಧಿಗಾಗಿ ಯೋಜಿತ ಮತ್ತು ಸಂಘಟಿತ ಅಭಿವೃದ್ಧಿ ಸಾಧಿಸಲು ಎನ್.ಸಿ.ಟಿ.ಇ. ಸ್ಥಾಪಿಸುವುದಾಗಿದೆ. ಕಾಯಿದೆಯ ಉದ್ದೇಶಗಳ ಈಡೇರಿಕೆಯ ಸಲುವಾಗಿ ಶಿಕ್ಷಕರ ಶಿಕ್ಷಣ ಕೋರ್ಸ್ ಗಳಿಗೆ ಮಾನ್ಯತೆ ನೀಡಲು ಪ್ರತ್ಯೇಕ ಅವಕಾಶಗಳನ್ನು ಕಾಯಿದೆಯಲ್ಲಿ ಕಲ್ಪಿಸಲಾಗಿದೆ ಮತ್ತು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯಗಳಿಗೆ ಅನುಸರಣೆಗೆ ಮಾರ್ಗಸೂಚಿಯನ್ನೂ ರೂಪಿಸಲಾಗಿದೆ.