ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆದಾಯ ತೆರಿಗೆ ಇಲಾಖೆಯ ಸಮಗ್ರ ಇ-ಫೈಲಿಂಗ್ ಮತ್ತು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ 2.0 ಯೋಜನೆಗೆ 4,241.97 ಕೋ.ರೂ. ವೆಚ್ಚ ಮಂಜೂರಾತಿಗೆ ತನ್ನ ಅನುಮೋದನೆ ನೀಡಿತು.
ಹಾಲಿ ಇರುವ ಸಿ.ಪಿ.ಸಿ-ಐ.ಟಿ.ಆರ್ 1.0 ಯೋಜನೆಗೆ ಹಣಕಾಸು ವರ್ಷ 2018-19 ರವರೆಗೆ ಒಟ್ಟು 1,482.44 ಕೋ.ರೂ. ವೆಚ್ಚಕ್ಕೆ ಕೂಡಾ ಕೇಂದ್ರ ಸಂಪುಟ ಅನುಮೋದನೆ ನೀಡಿತು.
ಈ ಯೋಜನೆಯ ಸ್ಥೂಲ ಉದ್ದೇಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
ಎ. ತೆರಿಗೆ ಪಾವತಿದಾರರಿಗೆ ತ್ವರಿತ ಮತ್ತು ಕರಾರುವಾಕ್ಕಾದ ಫಲಿತಾಂಶ
ಬಿ. ಮೊದಲ ಸಾರಿಯೇ ಸರಿಯಾದ ಪಥದಲ್ಲಿ ಸಾಗುವಿಕೆ
ಸಿ. ಎಲ್ಲಾ ಹಂತಗಳಲ್ಲೂ ಬಳಕೆದಾರರ ಪರಿಣತಿ/ಹಿತಾನುಭವದ ಉತ್ತಮೀಕರಣ.
ಡಿ. ತೆರಿಗೆ ಪಾವತಿದಾರರಲ್ಲಿ ಜಾಗೃತಿಯ ಹೆಚ್ಚಳ ಮತ್ತು ನಿರಂತರ ಸಂಪರ್ಕ ಕಾರ್ಯಕ್ರಮದ ಮೂಲಕ ಶಿಕ್ಷಣ.
ಇ. ಸ್ವಯಂ ತೆರಿಗೆ ಬದ್ದತೆಯನ್ನು ಉತ್ತೇಜಿಸುವುದು
ಎಫ್. ಬಾಕಿಯಿರುವ ಬೇಡಿಕೆಯ ನಿರ್ವಹಣೆ.
ಈ ಮಂಜೂರಾತಿಯಿಂದ ಇಲಾಖೆಗೆ ಪ್ರಮುಖ ಪ್ರಯೋಜನಗಳು ಲಭಿಸಲಿವೆ ಜೊತೆಗೆ ತೆರಿಗೆ ಪಾವತಿದಾರರಿಗೆ ಐ.ಟಿ.ಆರ್. ಸಲ್ಲಿಕೆ ಪೂರ್ವ ವಿಧಿ ವಿಧಾನಗಳು ಸಹಿತ ನಿಷ್ಕೃಷ್ಟತೆಯನ್ನು ಸುಧಾರಿಸಲು , ಹಿಂಪಾವತಿ /ಸಂಸ್ಕರಣೆಯ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು, ಬಾಕಿ ಉಳಿದಿರುವ ತೆರಿಗೆಯ ವಿಷಯಗಳನ್ನು ಪರಿಹರಿಕೊಳ್ಳಲು ಸಹಾಯವಾಗಲಿದೆ. ತೆರಿಗೆ ಪಾವತಿದಾರರ ಸಹಾಯಕ್ಕೆ ಸಮಗ್ರ ಸಂಪರ್ಕ ಕೇಂದ್ರಗಳು ಮತ್ತು ತೆರಿಗೆ ಪಾವತಿದಾರರನ್ನು ತಲುಪಲು ಡಿಜಿಟಲ್ ಮಾಧ್ಯಮ ಮತ್ತು ಉದ್ಯೋಗದಾತ/ಪಾಲುದಾರ ಮಾನ್ಯತೆ ಕಾರ್ಯಕ್ರಮಗಳು ತೆರಿಗೆ ಪಾವತಿದಾರರಿಗೆ ಹೆಚ್ಚಿನ ಸೇವೆಯನ್ನು ಒದಗಿಸಲು ನೆರವಾಗುತ್ತವೆ.
ಈ ನಿರ್ಧಾರ ದೇಶದ ವಿವಿಧೆಡೆ ಎಲ್ಲಾ ವರ್ಗದ ತೆರಿಗೆ ಪಾವತಿದಾರರು ಸಲ್ಲಿಸುವ ರಿಟರ್ನ್ ಗಳ ಸಂಸ್ಕರಣೆ ಸಮಾನ ರೀತಿಯಲ್ಲಿ, ಏಕಪ್ರಕಾರವಾಗಿ, ನಿಯಮಾನುಸಾರ, ಗುರುತು ಪರಿಚಯರಹಿತವಾಗಿ ಮತ್ತು ಬದ್ಧತೆಯಿಂದ ನಡೆಯುವುದನ್ನು ಖಾತ್ರಿಪಡಿಸುತ್ತದೆ. ಇದು ಪ್ರತೀ ತೆರಿಗೆ ಪಾವತಿದಾರರ ಸ್ಥಾನಮಾನದ ಪರಿಗಣನೆಯ ಹೊರತಾಗಿ ತೆರಿಗೆ ವಿಧಿಸುವಿಕೆಯಲ್ಲಿ ನ್ಯಾಯೋಚಿತ ವಿಧಾನವನ್ನು ಖಾತ್ರಿಪಡಿಸುತ್ತದೆ.
ತ್ವರಿತವಾಗಿ ರಿಟರ್ನ್ಸ್ ಗಳನ್ನು ಸಂಸ್ಕರಿಸುವುದರಿಂದ ಮತ್ತು ಇಲಾಖೆಯ ಯಾವುದೇ ಮಧ್ಯಪ್ರವೇಶ ಇಲ್ಲದೆ ತೆರಿಗೆ ಪಾವತಿದಾರರ ಬ್ಯಾಂಕ್ ಖಾತೆಗಳಿಗೆ ಹಿಂಪಾವತಿಯನ್ನು ನೀಡುವುದರಿಂದ , ಅಂತಾರಾಷ್ಟ್ರೀಯ ಉತ್ತಮ ಪದ್ದತಿಗಳನ್ನು ಮತ್ತು ಗುಣಮಾನಕಗಳನ್ನು ( ಐ.ಎಸ್.ಒ. ಪ್ರಮಾಣೀಕರಣ) ಅನುಸರಿಸುವುದರಿಂದ ಮತ್ತು ಸಂಸ್ಕರಣಾ ಹಂತದ ಸ್ಥಿತಿಗತಿಯ ಸಕಾಲಿಕ ಮಾಹಿತಿಗಳನ್ನು ಒದಗಿಸುವುದರಿಂದ ಹಾಗು ತ್ವರಿತವಾಗಿ ಮೊಬೈಲ್ ಆಪ್, ಇ-ಮೈಲ್, ಎಸ್.ಎಂ.ಎಸ್. ಬಳಸಿ ಮಾಹಿತಿ ಒದಗಿಸುವುದರಿಂದ ಮತ್ತು ಇಲಾಖೆಯ ಜಾಲತಾಣದಲ್ಲಿ ವಿವರಗಳನ್ನು ಹಾಕುವುದರಿಂದ ನಿರ್ಧಾರಗಳು ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತವೆ ಮತ್ತು ಉತ್ತರದಾಯಿತ್ವವನ್ನೂ ಒದಗಿಸುತ್ತವೆ.
ಈ ಪ್ರಸ್ತಾವ ತಂತ್ರಜ್ಞಾನದ ಮೂಲಕ ವ್ಯಾಪಾರೋದ್ಯಮ ಪರಿವರ್ತನೆ ಎಂಬ ಇಲಾಖೆಯ ಗುರಿಯನ್ನು ಮುಂದುವರೆಸಿಕೊಂಡು ಹೋಗುವುದನ್ನು ಖಾತ್ರಿಪಡಿಸುತ್ತದೆ. ಇ-ಫೈಲಿಂಗ್ ಮತ್ತು ಸಿ.ಪಿ.ಸಿ.ಯೋಜನೆಗಳು ಇಲಾಖೆಯೊಳಗೆ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಎಲ್ಲಾ ಪ್ರಕ್ರಿಯೆಗಳನ್ನು ಸ್ವಯಂಚಾಲಿತ ವ್ಯವಸ್ಥೆಗೆ ಒಳಪಡಿಸಿವೆ. ತೆರಿಗೆ ಪಾವತಿದಾರರಿಗೆ ವಿವಿಧ ಸೇವೆಗಳನ್ನು ಒದಗಿಸಲು ಮತ್ತು ಸ್ವಯಂ ಬದ್ಧತೆಯನ್ನು ಉತ್ತೇಜಿಸಲು ವಿವಿಧ ಹೊಸ ವಿಧಾನಗಳನ್ನು ಇಲಾಖೆ ಬಳಸಿಕೊಳ್ಳುತ್ತದೆ.