ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಸಂಶೋಧನೆ, ಯೋಜನೆ, ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಪರಿಣಾಮದ ವಿಶ್ಲೇಷಣೆಯನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ, ‘ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ’ (ಐ ಟಿ ಎಲ್ ಎ) ಎಂಬ ವಿಶೇಷ ಉದ್ದೇಶದ ಸಂಸ್ಥೆಯನ್ನು (ಎಸ್ ಪಿ ವಿ) ಸ್ಥಾಪಿಸಲು ಅನುಮೋದನೆ ನೀಡಿದೆ.
ಈ ಅನುಮೋದನೆ ಸಾರಿಗೆಗೆ ಸಂಬಂಧಿಸಿದ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಯೋಜನೆಗಳು ಸಮರ್ಪಕವಾಗಿಲ್ಲದಿರುವುದು ಮತ್ತು ಜಾರಿ ವೇಳೆ ಉಂಟಾಗುವ ದೀರ್ಘಕಾಲದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಉತ್ತಮ ಸಮನ್ವಯ ಮತ್ತು ಬಹು-ಮಾದರಿ ಏಕೀಕರಣವನ್ನು ಉತ್ತೇಜಿಸುವ ಮೂಲಕ, ಭಾರತದಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯ ದಕ್ಷತೆ, ಸುಸ್ಥಿರತೆ ಮತ್ತು ಪರಿಣಾಮಕಾರಿತ್ವವನ್ನ ಐಟಿಎಲ್ ಎ ವೃದ್ಧಿಸುವ ನಿರೀಕ್ಷೆಯಿದೆ.
ಐ ಟಿ ಎಲ್ ಎ ಈ ಕೆಳಗಿನ ಪ್ರಮುಖ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತದೆ:
ಐಟಿಎಲ್ಎ ಸ್ಥಾಪನೆಯು ಬಹುಮಾದರಿ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು, ಮೂಲಸೌಕರ್ಯಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ಜಾಗತಿಕ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ವಿಕಸಿತ ಭಾರತ–2047ರ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಂಶೋಧನೆ, ಯೋಜನೆ ರೂಪಿಸುವಿಕೆ, ಬಿಗ್ ಡೇಟಾ ಸಂಯೋಜನೆ, ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಐಟಿಎಲ್ಎ ಸಾಂಸ್ಥಿಕ ಸಾಮರ್ಥ್ಯವನ್ನು ಸೃಷ್ಟಿಸಲಿದೆ. ಜತೆಗೆ, ಸಾಮರ್ಥ್ಯ ವೃದ್ಧಿಗೆ ಸಹಕಾರ ನೀಡುವುದು ಮತ್ತು ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದಕ್ಕೂ ಸಂಸ್ಥೆ ನೆರವಾಗಲಿದೆ.
*****