Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂರಜ್ ಕುಂಡ್ ನಲ್ಲಿ ದಿನಾಂಕ ೧೮ ನವಂಬರ್ ೨೦೧೬ರಂದು ನಡೆದ ರೈಲ್ ವಿಕಾಸ್ ಶಿವಿರ್ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಮಾಡಿದ ಭಾಷಣ.

ಸೂರಜ್ ಕುಂಡ್ ನಲ್ಲಿ ದಿನಾಂಕ ೧೮ ನವಂಬರ್ ೨೦೧೬ರಂದು ನಡೆದ ರೈಲ್ ವಿಕಾಸ್ ಶಿವಿರ್ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಮಾಡಿದ ಭಾಷಣ.


 

 ತಮ್ಮಲ್ಲಿ ಬಹುತೇಕ ಜನರಿಗೆ ರಾತ್ರಿ ನಿದ್ದೆ ಬರಲಿಕ್ಕಿಲ್ಲ, ತಮ್ಮ ಮನಸ್ಸಿನಲ್ಲಿ ಪ್ರಧಾನಮಂತ್ರಿ ಮೋದಿಯವರು ಹೀಗೇಕೆ ಮಾಡಿದರು ಎಂಬ ಪ್ರಶ್ನೆ ಉದ್ಭವಿಸುತ್ತಿರಬಹುದು. ಸೂರಜ್ ಕುಂಡ್ ಸಮೀಪ ರೈಲ್ವೆ ಲೈನ್ ಇಲ್ಲದಿರುವುದೇ ಇದಕ್ಕೆ ಕಾರಣವಿರಬಹುದು. ಇದರಿಂದಾಗಿ ರೈಲ್ವೆ ಹಳಿಗಳ ಸದ್ದು ತಮಗೆ ಕೇಳಿಸುವುದಿಲ್ಲ. ತಮ್ಮಲ್ಲಿ ಬಹುತೇಕ ಜನರಿಗೆ ರೈಲಿನ ಸದ್ದು ಮತ್ತು ಹಳಿಗಳ ಸದ್ದು ಕೇಳದಿದ್ದರೆ ನಿದ್ದೆ ಬರುವುದಿಲ್ಲವೆಂದು ಕಾಣುತ್ತದೆ. ಇದರಿಂದಾಗಿ ತಮ್ಮಲ್ಲಿನ ಅನೇಕರಿಗೆ ಸೌಲಭ್ಯವೂ ಕೂಡಾ ಅನಾನುಕೂಲವಾಗಿ ಪರಿಣಮಿಸಿರಬಹುದು.

 

ಇದೊಂದು ವಿಶಿಷ್ಟ ಪ್ರಯತ್ನ. ನಾವು ಏನಾದರೂ ಬದಲಾವಣೆ ಮಾಡಲು ಬಯಸಿದರೆ, ಹೊರಗಿನವರು ಎಷ್ಟೇ ಸಲಹೆ ಸೂಚನೆ  ನೀಡಿದರೂ, ಅವರ ಕಲ್ಪನೆಗಳು ಎಷ್ಟೇ ವಿಶಿಷ್ಟವಾಗಿದ್ದರೂ ನಮ್ಮ ಮನದೊಳಗಿನ ಧ್ವನಿ ಬೀರುವಷ್ಟು ಪರಿಣಾಮವನ್ನು ಅವು ಬೀರಲಾರವು ಎಂಬುದು ನನ್ನ ಅನುಭವ. ತಮ್ಮಲ್ಲಿನ ಬಹುತೇಕ ಜನರೂ ಇದೇ ಕಾರ್ಯದಲ್ಲಿ ತಮ್ಮ ಜೀವಮಾನವನ್ನು ಕಳೆದಿರುತ್ತೀರಿ. ಕೆಲವರು ೧೫ ವರ್ಷ, ಮತ್ತೆ ಕೆಲವರು ೨೦ ವರ್ಷ, ಮತ್ತೆ ಕೆಲವರು ೩೦ ವರ್ಷಗಳಷ್ಟು ಸುದೀರ್ಘ  ಅವಧಿಯಲ್ಲಿ ರೈಲ್ವೆ ತೆಗೆದುಕೊಂಡ ಅನೇಕ ತಿರುವುಗಳನ್ನು ಕಂಡಿದ್ದೀರಿ.  ರೈಲ್ವೆಯ ಅಭಿವೃದ್ದಿಯ ವೇಗ ಯಾವಾಗ ಅಧಿಕವಾಗಿತ್ತು, ಯಾವಾಗ ಕುಂಠಿತವಾಗಿತ್ತು, ಯಾವ ಸಂದರ್ಭದಲ್ಲಿ ಹೀಗಾಯಿತು, ಸವಾಲುಗಳು ಏನಿದ್ದವು, ಅದಕ್ಕಿದ್ದ ಅಡಚಣೆಗಳಾವುವು, ಇವೆಲ್ಲವೂ ತಮಗೆ ಚೆನ್ನಾಗಿ ತಿಳಿದಿದೆ. ಇಷ್ಟು ದೊಡ್ಡ ರೈಲ್ವೆ ವಿಭಾಗ, ಇಷ್ಟು ದೊಡ್ಡ ಶಕ್ತಿಯ ಬಗ್ಗೆ ನಾವೆಲ್ಲರೂ  ಒಟ್ಟಿಗೆ ಕುಳಿತು ಯಾವತ್ತಾದರೂ ಈ ಬಗ್ಗೆ ಯೋಚಿಸಿದ್ದೇವೆಯೆ! ವಿಶ್ವ ಬದಲಾಗುತ್ತಿದೆ. ವಿಶ್ವದ ಎಲ್ಲ ರೈಲ್ವೆಗಳೂ ಬದಲಾದವು. ನಾವು ಯಾಕೆ ಬದಲಾಗಿಲ್ಲ, ಒಂದೇ ಕಡೆ ಉಳಿದುಬಿಟ್ಟಿದ್ದೇವೆ, ಇದಕ್ಕೆ ಕಾರಣವೇನು. ಎಷ್ಟು ನಿಲುಗಡೆಯನ್ನು ಹೆಚ್ಚಿಸಬೇಕು, ಎಷ್ಟು ರೈಲುಡಬ್ಬಿಗಳನ್ನು ಹೆಚ್ಚಿಸಬೇಕು ಎಂಬಲ್ಲಿಗೆ ನಮ್ಮ ಪ್ರಪಂಚ ಸೀಮಿತವಾಗಿದೆ.

 

 

ಕಳೆದ ಶತಮಾನದಲ್ಲಿ ಇವೆಲ್ಲ ಅವಶ್ಯಕವಾಗಿತ್ತು. ಈ ಶತಮಾನ ಸಂಪೂರ್ಣ ತಾಂತ್ರಿಕ ಯುಗ. ವಿಶ್ವಾದ್ಯಂತ ಅನೇಕ ಪ್ರಯೋಗಗಳಾಗಿವೆ. ಪ್ರಯತ್ನಗಳಾಗಿವೆ, ಹೊಸ ಹೊಸ ಅನ್ವೇಷಣೆಗಳಾಗಿವೆ. ರೈಲು, ಭಾರತಕ್ಕೆ ಒಂದು ವೇಗವನ್ನು ನೀಡಬಲ್ಲ, ಪ್ರಗತಿಯ ಪಥದಲ್ಲಿ ಒಂದು ದೊಡ್ಡ ವ್ಯವಸ್ಥೆಯೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದೇಶ ವೇಗವಾಗಿ ಪ್ರಗತಿಯತ್ತ ಸಾಗಬೇಕಾದರೆ ರೈಲು ಬೇಕು, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಬೇಕಾದರೂ ರೈಲು ಬೇಕು. ಎಲ್ಲಿಯವರೆಗೆ ನಾವು ನಮ್ಮನ್ನು ಗುರುತಿಸಿಕೊಳ್ಳಲಾರೆವೋ, ಅಲ್ಲಿಯವರೆಗೆ ಪರಿವರ್ತನೆ ಸಾಧ್ಯವಿಲ್ಲ. ಒಬ್ಬ ಗ್ಯಾಂಗ್ ಮೆನ್ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರಬಹುದು, ಒಬ್ಬ ಸ್ಟೇಷನ್ ಮಾಸ್ಟರ್ ತನ್ನ ಕಾರ್ಯವನ್ನು ಚೆನ್ನಾಗಿ ಮಾಡುತ್ತಿರಬಹುದು, ಒಬ್ಬ ಕ್ಷೇತ್ರಿಯ ವ್ಯವಸ್ಥಾಪಕ ತನ್ನ ಕಾರ್ಯವನ್ನು ಜವಾಬ್ಧಾರಿಯುತವಾಗಿ ಮಾಡುತ್ತಿರಬಹುದು, ಆದರೆ ಎಲ್ಲರೂ ಬೇರೆ ಬೇರೆಯಾಗಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಒಳ್ಳೆ ಫಲಿತಾಂಶ ಬರಲು ಸಾಧ್ಯವಿಲ್ಲ. ಆದುದರಿಂದಲೇ ಎಲ್ಲರೂ ಒಂದಾಗಬೇಕಾದ ಅವಶ್ಯಕತೆ ಇದೆ, ನಾವೆಲ್ಲರೂ ಒಟ್ಟುಗೂಡಿ ದೇಶಕ್ಕಾಗಿ ಏನು ನೀಡಬಲ್ಲೆವೆಂಬುದನ್ನು ಯೋಚಿಸಬೇಕಾಗಿದೆ. ನಮ್ಮ ಗ್ಯಾಂಗ್ ಮೆನ್ ಮಗ ಕೇವಲ ಗ್ಯಾಂಗ್ ಮೆನ್ ಆಗಬೇಕೆ, ನಾವು ಈ ರೀತಿಯಲ್ಲಿ ರೈಲ್ವೆ ವಿಭಾಗವನ್ನು ನಡೆಸಬೇಕೆ, ನಾನು ಇದರಲ್ಲಿ ಬದಲಾವಣೆಯನ್ನು ತರಲು ಬಯಸಿದ್ದೇನೆ. ನಮ್ಮ ಗ್ಯಾಂಗ್ ಮೆನ್ ಮಗ ಕೂಡಾ ಇಂಜಿನಿಯರ್ ಆಗಿ ರೈಲ್ವೆಗೆ ಒಂದು ಹೊಸ ಕೊಡುಗೆಯನ್ನು ನೀಡಬಲ್ಲವನನ್ನಾಗಿ ಯಾಕೆ ಮಾಡಬಾರದು, ಈ ಒಂದು ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ರೈಲ್ವೆಯೊಂದಿಗೆ ತನ್ನನ್ನು ತಾನು ಬೆಸೆದುಕೊಂಡಿರುವ ಅತ್ಯಂತ ಬಡ ವ್ಯಕ್ತಿ ಕೂಡಾ, ಇದೇ ವಿಭಾಗದಲ್ಲಿ ಅತ್ಯಂತ ಚಿಕ್ಕ ಪುಟ್ಟ ಕಾರ್ಯಗಳನ್ನು ಮಾಡಿಕೊಂಡಿರುವ ವ್ಯಕ್ತಿಯ ಜೀವನದಲ್ಲಿ ನಾವು ಬದಲಾವಣೆಯನ್ನು ಯಾವ ರೀತಿ ತರಬಹುದು? ಈ ಬದಲಾವಣೆಯನ್ನು ತರಲು ರೈಲ್ವೆಯಲ್ಲಿ ಪ್ರಗತಿಯಾಗಬೇಕಾಗಿದೆ ಅಭಿವೃದ್ಧಿಯಾಗಬೇಕಾಗಿದೆ, ರೈಲ್ವೆ ಆರ್ಥಿಕವಾಗಿ ಸದೃಢವಾಗಬೇಕಾಗಿದೆ. ಇದರ ಲಾಭ ದೇಶಕ್ಕೆ ದೊರೆಯಬೇಕಾಗಿದೆ, ಅದರಲ್ಲೂ  ರೈಲ್ವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ೧೦ ರಿಂದ ೧೩ ಲಕ್ಷ ಜನರಲ್ಲಿ ಕಡಿಮೆ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾದರೂ ಇದರ ಲಾಭ ದೊರಕಬೇಕಾಗಿದೆ. ಇಂದು ನಾವು ಯಾವ ರೀತಿ ರೈಲ್ವೆಯನ್ನು ನಡೆಸುತ್ತಿದ್ದೇವೆ, ಇದನ್ನು ಗಮನಿಸಿದರೆ ನನಗೆ ರೈಲ್ವೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಜನ ಬಡ ಕಾರ್ಮಿಕ ಕುಟುಂಬದವರ ಪಾಡೇನು, ಈ ಆಲೋಚನೆ ನನ್ನನ್ನು ಚಿಂತೆಗೀಡುಮಾಡಿದೆ. ನಮ್ಮಲ್ಲಿ ಚಿಕ್ಕ ಪುಟ್ಟ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಪಾಡೇನು? ರೈಲ್ವೆ ಅಭಿವೃದ್ದಿಯ ಲಾಭ ಮೊಟ್ಟ ಮೊದಲು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕ ವರ್ಗದ ಜನರಿಗೆ ದೊರಕಬೇಕಾಗಿದೆ. ನಮ್ಮೆದುರಿಗೆ ಪ್ರತಿದಿನ ಕಾರ್ಯ ನಿರ್ವಹಿಸುತ್ತಿರುವ, ಹಗಲಿರುಳೂ ನಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಲಿರುವ ಜನರ ಬಗ್ಗೆ, ಅವರ ಜೀವನದಲ್ಲಿ ಬದಲಾವಣೆಯನ್ನು ತರುವ ಬಗ್ಗೆ ಚಿಂತಿಸೋಣ ಇದರಿಂದ ರೈಲ್ವೆಯನ್ನು ಬದಲಿಸುವ ಕಾರ್ಯ ತನ್ನಿಂದ ತಾನೆ ನಡೆಯುತ್ತದೆ. ದೇಶದ ಅಭಿವೃದ್ದಿಯ ಲಾಭ ಪ್ರತಿಯೊಬ್ಬರಿಗೂ ದೊರೆಯುತ್ತದೆ.

 

ತಮ್ಮಲ್ಲಿ ಬಹುತೇಕ ಉನ್ನತ ಶ್ರೇಣಿಯ ಜನರು ದೊಡ್ಡ ದೊಡ್ಡ ಸೆಮಿನಾರ್ ಗಳಿಗೆ ಹೋಗಿರುತ್ತೀರಿ, ಜಾಗತಿಕ ಮಟ್ಟದ ಸಮಾವೇಶಗಳಿಗೆ ಹೋಗಿರುತ್ತೀರಿ, ಅವರುಗಳು ಹೊಸ ಹೊಸ ವಿಚಾರಗಳನ್ನು ತಿಳಿಸಿರಬಹುದು. ಆದರೆ ಅಲ್ಲಿಂದ ಹಿಂದಿರುಗಿದ ನಂತರ ಆ ವಿಚಾರಗಳು ವಿಚಾರಗಳಾಗೇ ಉಳಿದುಬಿಟ್ಟಿರುತ್ತವೆ . ಅದನ್ನು ಒಂದು ಕನಸೆಂದು ತಿಳಿದುಕೊಂಡುಬಿಡುತ್ತೀರಿ. ಅಲ್ಲಿಂದ ಹಿಂದಿರುಗಿ ಮತ್ತೆ ತಮ್ಮ ಹಳೆಯ ವ್ಯವಸ್ಥೆಯಲ್ಲಿ ಮುಳುಗಿಹೋಗುತ್ತೀರಿ. ಇಲ್ಲಿ ಎಲ್ಲ ವರ್ಗದ ಜನರು ಸೇರಿದ್ದೀರಿ, ಒಟ್ಟಾಗಿ ಮೂರು ದಿನ ಇಲ್ಲಿ ಜೊತೆ ಸೇರಿ ಚಿಂತನೆ ನಡೆಸಲಿದ್ದೀರಿ. ಈ ರೀತಿಯ ಪ್ರಸಂಗ ಬಹಳ ಕಡಿಮೆ ಬರುತ್ತದೆ. ಪ್ರಾಯಶ: ಮೊದಲ ಬಾರಿಗೆ ನಡೆಯುತ್ತಿರಬಹುದು. ಸಾಮೂಹಿಕ ಚಿಂತನೆಗಳಿಗೆ ಬಹುದೊಡ್ಡ ಶಕ್ತಿ ಇದೆ. ಕೆಲವೊಮ್ಮೆ ಚಿಕ್ಕ ಹುದ್ದೆಯಲ್ಲಿರುವ ಅನುಭವಸ್ಥ ಕೆಲಸಗಾರ, ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳ ಗಮನಕ್ಕೆ ಬಾರದ ಅತ್ಯಂತ ಕ್ಲಿಷ್ಟ ಸಮಸ್ಯೆಗಳಿಗೆ ಕ್ಷಣಮಾತ್ರದಲ್ಲಿ ಪರಿಹಾರ ಕಂಡುಹಿಡಿಯುತ್ತಾನೆ. ಇಲ್ಲಿ ಅನುಭವ ಮತ್ತು ಜಾಗತಿಕ ಮಾನ್ಯತೆಯುಳ್ಳ ಎರಡೂ ಪ್ರಕಾರಗಳ ಜನರು ಕುಳಿತಿದ್ದೀರಿ. ಹೀಗೆ ಎರಡೂ ಪ್ರಕಾರಗಳ ಜನರು ಒಂದುಗೂಡಿದರೆ ಎಂತಹ ದೊಡ್ಡ ಬದಲಾವಣೆಯನ್ನಾದರೂ ತರಬಹುದು.

 

ತಮ್ಮ ಈ ವ್ಯವಸ್ಥೆಯಲ್ಲಿ ಸರಿಸುಮಾರು ೨ ಕೋಟಿಗೂ ಅಧಿಕ ಜನರನ್ನು ತಾವು ಮುಖಾಮುಖಿಯಾಗುತ್ತೀರಿ.ಲಕ್ಷಗಟ್ಟಲೆ ಟನ್ನು   ಸಾಮಾನು ಸರಂಜಾಮುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನೆಯಾಗುತ್ತವೆ . ಇಂದು  ವಿಶ್ವದಲ್ಲಿ     ಸಂಪೂರ್ಣ  ಬದಲಾವಣೆಯಾಗುತ್ತಿದೆ. ಎಲ್ಲಿಯ ತನಕ ನಮ್ಮ ವೇಗ, ನಮ್ಮ ಸಮಯಪಾಲನೆ, ನಮ್ಮ ವ್ಯವಸ್ಥೆಗಳಲ್ಲಿ ಸುಧಾರಣೆಯಾಗುವುದಿಲ್ಲವೋ   ಅಲ್ಲಿಯ ತನಕ ಬದಲಾದ ವಿಶ್ವದ ಲಾಭವನ್ನು ನಾವು ಪಡೆದುಕೊಳ್ಳಲಾರೆವು. ನಾವು ಯಾವುದೇ ಕೊಡುಗೆಯನ್ನು ಸಹಾ ನೀಡಲಾರೆವು. ಈ ಚಿಂತನ ಶಿಬಿರದಲ್ಲಿ ಯಾವ ವಿಷಯ ಹೊರಬೀಳಬಹುದು, ಯಾವುದೇ ಕಾರ್ಯಪಟ್ಟಿ ಇಲ್ಲ. ಕಾರ್ಯಸೂಚಿಯನ್ನು ತಾವು ನಿರ್ಧರಿಸಬೇಕು. ಪರಿಹಾರವನ್ನೂ ಕೂಡಾ ತಾವೇ ಕಂಡುಕೊಳ್ಳಬೇಕು. ಇಲ್ಲಿ ಹೊರಬೀಳುವ ವಿಚಾರಗಳ ಬಗ್ಗೆ ಒಂದು ಮಾರ್ಗಸೂಚಿಯನ್ನು ತಾವೇ ಸಿದ್ದಪಡಿಸಿಕೊಳ್ಳಬೇಕು. ಹೊರಗಿನ ಯಾವುದೇ ವ್ಯಕ್ತಿಯು ಮಾಡಬಹುದಾದ ಉತ್ತಮ ಕಾರ್ಯಕ್ಕಿಂತ ಹೆಚ್ಚು ಉತ್ತಮವಾಗಿ ತಾವು ಕಾರ್ಯ ಮಾಡಬಲ್ಲಿರಿ ಎಂಬ ವಿಶ್ವಾಸ ನನಗಿದೆ.

 

ಆದುದರಿಂದ ಈ ಸಾಮೂಹಿಕ ಚಿಂತನ ಶಿಬಿರ ದೊಡ್ಡ ಸಾಮರ್ಥ್ಯವನ್ನು ನೀಡಬಲ್ಲದು. ಒಟ್ಟಾಗಿ ಬಾಳುವುದು ಒಂದು ಶಕ್ತಿ. ತಮ್ಮಲ್ಲಿ ಬಹುತೇಕ ಜನರಿಗೆ ತಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಹಕಾರ್ಮಿಕನ ಶಕ್ತಿ ಸಾಮರ್ಥ್ಯದ ಅರಿವು ಇರಲಿಕ್ಕಿಲ್ಲ. ಇದರಲ್ಲಿ ತಮ್ಮ ತಪ್ಪಿಲ್ಲ. ಇದು ನಮ್ಮ ವ್ಯವಸ್ಥೆಯ ದೋಷ. ನಾವು ನಮ್ಮವರನ್ನು ಕಡಿಮೆ ಅರಿತಿರುತ್ತೇವೆ ಆದರೆ ಕೆಲಸದ ಬಗ್ಗೆ ಸಂಪೂರ್ಣ ತಿಳಿದಿರುತ್ತೇವೆ. ತಮ್ಮ ಸುತ್ತ ಮುತ್ತ ಕಾರ್ಯ ನಿರ್ವಹಿಸುತ್ತಿರುವ ೧೫-೨೫ ಜನರೊಳಗಿರುವ ಅಸಾಮಾನ್ಯ ಪ್ರತಿಭೆ, ಕೆಲವೊಂದು ಲಘು ವಾತಾವರಣದ ಸಮಯದಲ್ಲಿ ತಮ್ಮ ಅರಿವಿಗೆ ಬಂದಿರುತ್ತದೆ. ತಮ್ಮ ಬಳಿ ಎಷ್ಟು ಸಮರ್ಥ ಮಾನವ ಸಂಪನ್ಮೂಲವಿದೆ. ಇದನ್ನು ಯಾರೂ ಗುರುತಿಸಿಲ್ಲ. ಪರಸ್ಪರ ಜತೆಗಿರುವ ಕಾರಣ ಕೇವಲ ತಮ್ಮ ಅರಿವಿಗೆ ಬಂದಿರುತ್ತದೆ.

 

ಒಬ್ಬ ಸಾಮಾನ್ಯ ಟಿಕೆಟ್ ಕೌಂಟರ್ನಲ್ಲಿ ಕುಳಿತ ವ್ಯಕ್ತಿ ಎಂತಹ ಉತ್ತಮ ವಿಷಯಗಳನ್ನು ಅರಿತಿದ್ದಾನೆ ಎಂಬುದು ಯಾವಾಗ ತಾವು ಮನಬಿಚ್ಚಿ ಮಾತನಾಡುತ್ತೀರೋ ಅಂದು ತಮ್ಮ ಅರಿವಿಗೆ ಬರುತ್ತದೆ. ಅರೆ, ಇಂತಹಾ ಇನ್ನೆಷ್ಟು ಉತ್ತಮ ಆಲೋಚನೆಗಳು ಇವನ ಬಳಿ ಇರಬಹುದು ಎಂದು ತಾವು ಅರಿತಿರಲೇ ಇಲ್ಲ ಎಂಬ ಭಾವನೆ ತಮ್ಮಲ್ಲಿ ಮೂಡುತ್ತದೆ. ಯಾವುದೇ ವ್ಯಕ್ತಿಯನ್ನು ತೆಗೆದುಕೊಳ್ಳಿ, ಅವರ ಬಗ್ಗೆ ಅವರ ಕೈಕೆಳಗಿನ ಕೆಲಸಗಾರರು ಮಾತನಾಡುವ ರೀತಿಯಲ್ಲಿ, ತಾವು ತಮ್ಮ ಹಿರಿಯ ಅಧಿಕಾರಿಯನ್ನು ತುಂಬಾ ಗಂಭೀರ ಸ್ವಭಾವದವರು, ಅವರ ಬಗ್ಗೆ ಭಯವಾಗುತ್ತದೆ ಎಂದು ತಿಳಿದಿರುತ್ತೇವೆ.  ನಂತರ ತಿಳಿಯುತ್ತದೆ, ಇಲ್ಲ, ಇವರು ತುಂಬಾ ಮಾನವೀಯ ಗುಣವುಳ್ಳ, ಯಾವಾಗ ಬೇಕಾದರೂ ಮಾತನಾಡಬಹುದಾದ ವ್ಯಕ್ತಿ ಎಂದು ತಿಳಿಯುತ್ತದೆ. ಈ ಗೋಡೆ ಕುಸಿದು ಬೀಳಲಿದೆ. ವರ್ಗಶ್ರೇಣಿಯ ಗೋಡೆ ಕುಸಿದು ಬೀಳುವುದರ ಮೇಲೆ ಅಲ್ಲಿನ  ಯಾವುದೇ ಸಂಘಟನೆಯ ಶಕ್ತಿ ನಿರ್ಧಾರವಾಗುತ್ತದೆ. ತಮ್ಮದೇ ಕುಟುಂಬವೆಂಬ ವಾತಾವರಣ ಸೃಷ್ಟಿಯಾಗಬೇಕಿದೆ, ತಾವು ನೋಡು ನೋಡುತ್ತಿದ್ದಂತೆ ಬದಲಾವಣೆ ಕಂಡುಬರುತ್ತದೆ.

ಸಹಜೀವನ ಒಂದು ದೊಡ್ಡ ಶಕ್ತಿಯಾಗಿ ಪರಿವರ್ತನೆಯಾಗಲಿದೆ. ಇಲ್ಲಿ ಯಾವ ವಿಷಯಗಳನ್ನು  ಪ್ರಸ್ತುತಪಡಿಸಲಾಗಿದೆಯೋ ಅದು ಕೂಡಾ ಅನೇಕ ವಿಚಾರ ವಿಮರ್ಶೆಗಳ ನಂತರವೇ ಪ್ರಸ್ತುತಪಡಿಸಲಾಗಿದೆ. ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಈ ವಿಚಾರ ವಿಮರ್ಶೆಯಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಕೆಲವರು ಪತ್ರಮುಖೇನ, ಮತ್ತೆ ಕೆಲವರು ಸಣ್ಣ ಸಣ್ಣ ತಂಡಗಳನ್ನಾಗಿ ಮಾಡಿ ಚರ್ಚಿಸಿ. ಅಲ್ಲಿ ಹೊರಬಿದ್ದ ವಿಷಯಗಳನ್ನು ತಮ್ಮ ಮೇಲಧಿಕಾರಿಗಳಿಗೆ ತಲುಪಿಸಿದ್ದಾರೆ, ಕೆಲವರು ತಮ್ಮ ವಿಚಾರಗಳನ್ನು ಆನ್ ಲೈನ್ ಮೂಲಕ ಕಳಿಸಿದ್ದಾರೆ. ಮತ್ತೆ ಕೆಲವರು ಎಸ್ ಎಂ ಎಸ್ ಮೂಲಕ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಕೆಳಮಟ್ಟದಿಂದ ಉನ್ನತ ಮಟ್ಟದವರೆಗಿನ ೧ ಲಕ್ಷ ಜನ, ರೈಲ್ವೆಯ ಸ್ಥಿತಿ ಏನು, ಅವಕಾಶಗಳೇನು, ಸಾಮರ್ಥ್ಯವೇನು, ಸವಾಲುಗಳೇನು, ಕನಸುಗಳೇನು ಎಂಬುದರ ಬಗ್ಗೆ ವಿಚಾರ ವಿಮರ್ಶೆಗಳನ್ನು ಪ್ರಸ್ತುತಪಡಿಸಬೇಕಿದೆ. ಈ ಮೂಲಕ ಇಂತಹ ದೊಡ್ಡ ಚಿಂತನ ಶಿಬಿರದಲ್ಲಿ ಮುತ್ತು ರತ್ನಗಳನ್ನು ಹೊರತರಬೇಕಿದೆ.

 

ಒಂದು ಲಕ್ಷ ಜನರ ಕೊಡುಗೆ, ಸಣ್ಣ ವಿಷಯವಲ್ಲ, ಇದೊಂದು ದೊಡ್ಡ ಕಾರ್ಯ. ಇಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ತಾವುಗಳು ಸೇರಿದ್ದೀರಿ ಎಂದು ನನಗೆ ತಿಳಿದುಬಂದಿದೆ. ತಾವು ಅತ್ಯಂತ ಸೂಕ್ಷ್ಮವಾಗಿ ಕಷ್ಟಪಟ್ಟು ಪ್ರಯತ್ನಪಟ್ಟರೆ ಅದರಲ್ಲಿ ಅತ್ಯಂತ ಒಳ್ಳೆಯ ಮುತ್ತು ರತ್ನಗಳು ಹೊರಬಹುದು. ಇಲ್ಲಿನ ಅಮೃತ ಮಂಥನದಿಂದ ದೊರಕಿದ ಮುತ್ತು ರತ್ನಗಳು ರೈಲ್ವೆಯನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಲಿವೆ.

ಮೊದಲು ನನ್ನ ಮನಸ್ಸಿನಲ್ಲಿ ಇಂದು ಸಂಜೆಯ ವೇಳೆಗೆ ತಮ್ಮ ನಡುವೆ ಇರಬೇಕು, ತಮ್ಮೊಡನೆ ಭೋಜನ ಮಾಡಬೇಕೆಂಬ ವಿಚಾರವಿತ್ತು. ಹೇಗಿದ್ದರು ನಾನು ಎಲ್ಲರೊಂದಿಗೆ ಹೆಚ್ಚು ಸಮಯ ಕಳೆಯುವ ವ್ಯಕ್ತಿ. ನನ್ನ ಬಳಿ ಯಾವುದೇ ಕೆಲಸ ಕಾರ್ಯಗಳು ಇರುವುದಿಲ್ಲ. ಆದುದರಿಂದ ತಮ್ಮ ಮಧ್ಯೆ ಕುಳಿತುಕೊಂಡು ತಮ್ಮ ಮಾತುಗಳನ್ನು ಕೇಳಬೇಕೆಂಬ ವಿಚಾರವಿತ್ತು. ಆದರೆ ಸಂಸತ್ ಸದನ ಪ್ರಾರಂಭವಾದ ಹಿನ್ನೆಲೆಯಲ್ಲಿ ನಾನು ತಮ್ಮ ನಡುವೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ನಾಡಿದ್ದು ಬರಲಿದ್ದೇನೆ, ಇದು, ನಾನು ತಮಗೆ ಬೆದರಿಕೆ ಹಾಕುತ್ತಿದ್ದೇನೆ ಎಂದು ಭಾವಿಸಬೇಡಿ, ನಾನು ತಮ್ಮನ್ನೆಲ್ಲ ನೋಡಬೇಕೆಂಬ ಬಯಕೆಯಿಂದ ಬರುತ್ತಿದ್ದೇನೆ. ತಾವು ಏನು ಮಂಥನ ಮಾಡುತ್ತಿದ್ದೀರಿ, ಆ ಅಮೃತವನ್ನು ಸೇವಿಸಲು ಬರುತ್ತಿದ್ದೇನೆ. ಯಾಕೆಂದರೆ, ತಾವಿದ್ದರೆ ರೈಲ್ವೆ, ತಾವಿದ್ದರೆ ಭವಿಷ್ಯ, ಹಾಗೂ ತಮ್ಮ ಮೇಲೆ ನನಗೆ ನಂಬಿಕೆಯಿದೆ ಆದುದರಿಂದ ನಾನು ತಮ್ಮ ಬಳಿ ಬರುತ್ತಿದ್ದೇನೆ. ತಮ್ಮನ್ನು ಭೇಟಿಮಾಡಲು ಬರುತ್ತಿದ್ದೇನೆ. ಮುಕ್ತ ವಾತಾವರಣದಲ್ಲಿ ತಮ್ಮನ್ನು ಭೇಟಿಯಾಗುತ್ತೇನೆ. ಅಲ್ಲಿನ ವಿಚಾರಮಂಥನದಲ್ಲಿ ಹೊರಬರುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಇರುವ ತೊಂದರೆಗಳ ಬಗ್ಗೆ ಅರಿತುಕೊಳ್ಳುವ ಯತ್ನ ಮಾಡುತ್ತೇನೆ. ನೀತಿ ನಿರ್ಧಾರದ ಸಮಯದಲ್ಲಿ ಈ ವಿಷಯಗಳು ಅಗತ್ಯವಾಗಿ ತಮ್ಮ ಪ್ರಭಾವವನ್ನು ಬೀರಲಿವೆ.

ತಮಗೆ ತಿಳಿದಿರಬಹುದು, ತಮಗೆ ಗೊತ್ತಿರಬಹುದು ನನಗೆ ಯಾವುದೇ ರಾಜಕೀಯ ಮಾರ್ಗಸೂಚಿ ಎಂಬುದಿಲ್ಲ. ನಮ್ಮ ಸರ್ಕಾರ ಮಂಡಿಸಿದ ಮೊದಲ ರೈಲುಬಜೆಟ್ ನಲ್ಲೇ ಈ ವಿಷಯ  ತಮ್ಮ ಗಮನಕ್ಕೆ ಬಂದಿರಬಹುದು. ಸಾಮಾನ್ಯವಾಗಿ ರೈಲ್ವೆ ಬಜೆಟ್ ಅಂದರೆ ಯಾವ ಸಂಸದರ ಕ್ಷೇತ್ರಕ್ಕೆ ಯಾವ ರೈಲುಸಂಪರ್ಕ ದೊರೆಯಿತು, ಯಾವ ಸಂಸದರ ಕ್ಷೇತ್ರಕ್ಕೆ ಎಲ್ಲಿ ನಿಲುಗಡೆ ದೊರೆಯಿತು, ಯಾವ ಮಾರ್ಗದಲ್ಲಿ ಹೊಸ ರೈಲ್ವೆ ಡಬ್ಬಿಗಳನ್ನು ಜೋಡಿಸಲಾಯಿತು ಎಂಬುದಾಗಿರುತ್ತಿತ್ತು.  ಸಂಪೂರ್ಣ ರೈಲ್ವೆ ಮುಂಗಡಪತ್ರ ಇಂತಹ ವಿಷಯಗಳ ಘೋಷಣೆಯಿಂದ ಕರತಾಡನಗಳಿಂದ ತುಂಬಿಹೋಗಿರುತ್ತಿತ್ತು. ನಾನು ಬಂದ ನಂತರ ಗಮನಿಸಿದೆ, ಇಷ್ಟೊಂದು ಘೋಷಣೆಗಳಾಗಿವೆ, ಏನಾಗಿದೆ?? ನನ್ನ ಗಮನಕ್ಕೆ ಬಂದ ಹಾಗೆ ಸುಮಾರು ೧೫೦೦ ಘೋಷಣೆಗಳು ಮುಂಗಡ ಪತ್ರದ ದಿನ ಆದ ಕರತಾಡನಗಳ ಹೊರತಾಗಿ ಮತೇನು ಪ್ರಗತಿಯಾಗಿರಲಿಲ್ಲ. ಈ ಕಾರ್ಯವನ್ನು ನಾನು ಕೂಡಾ ಮಾಡಬಹುದಾಗಿತ್ತು.ನಾನೂ ಕೂಡಾ ಕರತಾಡನಗಳನ್ನು ಪಡೆಯಬಹುದಾಗಿತ್ತು. ವಾಹ್! ಮೋದಿಯವರು ಎಂತಹ ಉತ್ತಮ ಮುಂಗಡ ಪತ್ರವನ್ನು ಮಂಡಿಸಿದರು, ಬಹಳ ಒಳ್ಳೆಯದಾಯಿತು ಎಂಬ ಮಾತುಗಳನ್ನು ಕೇಳಬಹುದಾಗಿತ್ತು. ನಾನು ಇಂತಹ ರಾಜಕೀಯ ಲೋಭಗಳನ್ನು ನನ್ನಿಂದ ದೂರವಿಟ್ಟಿದ್ದೇನೆ. ಅತ್ಯಂತ ಧೈರ್ಯ ಮಾಡಿ ಇಂತಹ ಜನರನ್ನು ಮರುಳುಮಾಡುವ ಕೆಲಸಗಳ ಹೊರತಾಗಿ ವ್ಯವಸ್ಥೆಯನ್ನು ಸರಳೀಕರಿಸುವ ಪ್ರಯತ್ನ ಮಾಡಿದ್ದೇನೆ.

 

 

ನಾನು ರಾಜಕೀಯ ನಷ್ಟವನ್ನು ಅನುಭವಿಸುವ ಸಾಹಸ ಮಾಡಿದ್ದೇನೆ. ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಅತ್ಯಂತ ಕಡಿಮೆ ದರ್ಜೆಯ ವ್ಯಕ್ತಿ, ಎಲ್ಲಿಯೋ ಯಾವುದೋ ಕ್ರಾಸಿಂಗ್ ನಲ್ಲಿ ನಿಂತಿರಬಹುದು, ಎಲ್ಲಿಯೋ ಬಾವುಟವನ್ನು ಹಿಡಿದು ನಿಂತಿರಬಹುದು, ಎಲ್ಲಿಯೋ ಮುಂಜಾವಿನಲ್ಲಿ ರೈಲ್ವೆಹಳಿಗಳ ಮೇಲೆ ನಡೆದಾಡುತ್ತಿರಬಹುದು, ಅವರ ಮಕ್ಕಳು ಓದು ಬರಹ ಕಲಿತು, ಇಂದು ದೊಡ್ಡ ದೊಡ್ಡ ಪರಿವಾರಗಳಲ್ಲಿ ಕಂಡು ಬರುವ ಹಾಗೆ ಈ ಮಕ್ಕಳೂ ವಿದ್ಯಾವಂತರಾಗಿ ಆ ಸ್ಥಾನಕ್ಕೇರಲು ಸಾಧ್ಯವಿಲ್ಲವೇ ಎಂಬುದು ನನ್ನ ಮೊದಲ ಕನಸಾಗಿತ್ತು. ರೈಲ್ವೆಯನ್ನು ಶಕ್ತಿಯುತವಾಗಿ ಮಾಡಿದ ದಿನ, ರೈಲ್ವೆಯನ್ನು ಸಮರ್ಥವಾಗಿ ಮುನ್ನಡೆಸಿದ ದಿನದಂದು ಆ ನನ್ನ ಕನಸು ನನಸಾಗುವುದು. ಎಂದು ರೈಲ್ವೆ ಸಬಲವಾಗುವುದೋ ಅಂದು ಅದರ ಲಾಭ ದೇಶಕ್ಕೆ ತನ್ನಿಂತಾನೆ ದೊರಕುವುದು. ಆದುದರಿಂದ ಪ್ರಿಯ ಸ್ನೇಹಿತರೆ , ತಕ್ಷಣದ ಲಾಭದ ಆಸೆ ನನಗಿಲ್ಲ, ರಾಜಕೀಯ ಲಾಭ ಪಡೆದುಕೊಳ್ಳುವ ಆಸೆಯಂತೂ ಖಂಡಿತಾ ಇಲ್ಲ. ಶತಮಾನಗಳು ಬದಲಾಗಿವೆ, ರೈಲ್ವೆ ಕೂಡಾ ಬದಲಾಗಲಿ ಎಂಬುದಷ್ಟೆ ನನ್ನ ಬಯಕೆ.

 

೨೧ನೇ ಶತಮಾನಕ್ಕೆ ಅನುಗುಣವಾಗಿ ಹೊಸ ರೈಲು, ಹೊಸ ವ್ಯವಸ್ಥೆ, ಹೊಸ ವೇಗ, ಹೊಸ ಸಾಮರ್ಥ್ಯವನ್ನು ನಾವು ನೀಡಬೇಕಿದೆ. ಜನ ಒಟ್ಟುಗೂಡಿ ಇದನ್ನು ನೀಡಬಲ್ಲರು. ನಮ್ಮಲ್ಲಿ ಯಾರಾದರೂ ಪುಟ್ಟ ಮನೆಯಲ್ಲಿ ವಾಸಮಾಡುತ್ತಿದ್ದರೋ, ಅವರು ಜೀವನವನ್ನು ಸಾಗಿಸುತ್ತಿದ್ದಾರೆ, ಅವರ ಆರ್ಥಿಕ ಸ್ಥಿತಿ ಉತ್ತಮವಾಗಿ ಫ್ಲ್ಯಾಟ್ ಗಳಲ್ಲಿ ವಾಸಿಸಲು ತೆರಳಿದರು ಎಂದಾದರೆ, ಹೊಸ ರೀತಿಯಾಗಿ ಯಾವ ರೀತಿಯಾಗ ಬದುಕು ಸಾಗಿಸುವುದು, ಯಾರು ಯಾವ ಕೊಠಡಿಯಲ್ಲಿ ವಾಸಿಸಬೇಕು, ಅತಿಥಿ ಗಳು  ಬಂದರೆ ಎಲ್ಲಿ ಕುಳಿತುಕೊಳ್ಳಬೇಕು ಪ್ರತಿಯೊಂದನ್ನು ಯೋಚಿಸಲು ಪ್ರಾರಂಭಿಸುತ್ತಾರೆ ಹಾಗೂ ಅದೇ ರೀತಿ ನಡೆಯುತ್ತಾರೆ ಕೂಡಾ. ಮನುಷ್ಯ ಬದಲಾವಣೆಯನ್ನು ತರುತ್ತಾನೆ. ಮೊದಲು ಒಂದು ಕೊಠಡಿಯಲ್ಲಿ ಇದ್ದಾಗಲೂ ಸಹ ದಿನ ದೂಡುತ್ತಿದ್ದರು, ಅದೇ ರೀತಿ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ೨೧ನೇ ಶತಮಾನದಲ್ಲಿ, ಬದಲಾದ ಪರಿಸ್ಥಿತಿಯಲ್ಲಿ ನಮಗೆ ನಾವು ಸರಿದೂಗಿಸಿಕೊಳ್ಳಬೇಕಾದರೆ ನಾವೂ ಕೂಡಾ ಬದಲಾಗಬೇಕಾಗುತ್ತದೆ ಹಾಗೂ ಇದು ಸಾಧ್ಯ.

 

ಸ್ನೇಹಿತರೆ , ನಿಮ್ಮಲ್ಲಿ ಎಷ್ಟು ಜನರಿಗೆ ರೈಲ್ವೆಯೊಂದಿಗೆ ಎಷ್ಟು ಹಳೆಯ ಸಂಬಂಧವಿದೆಯೋ ಇರಬಹುದು, ಆದರೆ ನನಗೆ ರೈಲ್ವೆಯೊಂದಿಗೆ ಹಳೆಯ ಸಂಬಂಧವಿದೆ. ನನ್ನ ಬಾಲ್ಯ ರೈಲ್ವೆ ಹಳಿಗಳ ಮೇಲೆ ಕಳೆದಿದೆ. ನಾನು ಒಂದು ರೀತಿಯಲ್ಲಿ ತಮ್ಮವನೇ ಆಗಿದ್ದೇನೆ, ರೈಲ್ವೆಯವನೂ ಕೂಡಾ. ಅಂದು ನಾನು ರೈಲ್ವೆಯ ಪ್ರತಿಯೊಂದು ಹಂತವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಬದುಕಿನಲ್ಲಿ ನಾನು ಏನನ್ನೂ ನೋಡಿರಲಿಲ್ಲ, ನೋಡಿದ್ದೆಲ್ಲವೂ ಕೇವಲ ರೈಲಷ್ಟೆ. ಇದರೊಂದಿನ ನನ್ನ ಬಾಲ್ಯ ಅತ್ಯಂತ ಗಾಢವಾಗಿ ಬೆಸೆದುಕೊಂಡಿದೆ. ಆದುದರಿಂದ ನಾನು ಈ ವಿಷಯಗಳನ್ನು ಅತ್ಯಂತ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಯಾವ ವಿಷಯದ ಬಗ್ಗೆ ಬಾಲ್ಯದಲ್ಲಿ ಆಸಕ್ತಿ ಇತ್ತೊ, ಅದರಲ್ಲಿ ಬದಲಾವಣೆ ತರುವ ಅವಕಾಶ ದೊರಕಿದರೆ ಅದಕ್ಕಿಂತ ಆನಂದ ತರುವ ಬೇರೆ ವಿಷಯವೇನಿದೆ, ಇದನ್ನು ತಾವು ಊಹಿಸಬಹುದು. ರೈಲ್ವೆಯಲ್ಲಿ ಬದಲಾವಣೆಯಾದರೆ, ತಮಗೆಷ್ಟು ಸಂತಸವಾಗುವುದೋ ಅಷ್ಟೆ ಸಂತಸ ನನಗೂ ಕೂಡಾ ಆಗುವುದು. ಯಾಕೆಂದರೆ ನಾನೂ ಕೂಡಾ ಅದೇ ವಾತಾವರಣದಿಂದ ಬೆಳೆದು ದೊಡ್ಡವನಾಗಿದ್ದೇನೆ. ಈಗಲೂ ಕೂಡಾ ನಾನು ನನ್ನ ಸಂಸದೀಯ ಕ್ಷೇತ್ರ ಕಾಶಿಗೆ ಹೋದರೆ ರೈಲ್ವೆ ವ್ಯವಸ್ಥೆಯಡಿಯಲ್ಲಿ ರಾತ್ರಿ ಕಳೆಯಲು ಹೊರಟುಹೋಗುತ್ತೇನೆ. ಅದು ನನಗೆ ನನ್ನತನದ ಭಾವನೆ ಮೂಡಿಸುತ್ತದೆ, ಸಂತೋಷವಾಗುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಯಾಗಿ ನನಗೆ ಇನ್ನೂ ಅನೇಕ ವ್ಯವಸ್ಥೆಗಳು ಅಲ್ಲಿ ದೊರಕಬಹುದು. ಆದರೆ ನಾನು ಅಲ್ಲಿನ ರೈಲ್ವೆ ಅತಿಥಿ ಗೃಹಕ್ಕೆ ಹೋಗಿ ತಂಗುತ್ತೇನೆ . ಅಲ್ಲಿ ನನಗೆ ನನ್ನತನದ ಭಾವನೆಯುಂಟಾಗುತ್ತದೆ. ನನಗೆ ತಮ್ಮ ಬಗೆಗೆ ಇಷ್ಟು ಒಳ್ಳೆಯ ಸಂಬಂಧವಿದೆ. ಈ ಮೂರು ದಿನದ ಶಿಬಿರದ ಉಪಯೋಗವನ್ನು ತಾವು ಅತ್ಯಂತ ಹೆಚ್ಚಿನದಾಗಿ ಮಾಡಿಕೊಳ್ಳುತ್ತೀರೆಂಬ ಭಾವನೆಯಿಂದ, ಒಳ್ಳೆಯದನ್ನುಂಟು ಮಾಡುವ ಎಂಬ ಮನೋಭಾವದಿಂದ ಮಾಡುತ್ತೀರೆಂಬ ವಿಶ್ವಾಸ ನನಗಿದೆ. ಒಳ್ಳೆಯದನ್ನು ಮಾಡಲು ಹೆಚ್ಚಿನ ಜವಾಬ್ಧಾರಿಯನ್ನು ಹೊರುವ ಶಕ್ತಿ ತಾವು ಮಾಡುತ್ತೀರೆಂಬ ನಂಬಿಕೆ ನನಗಿದೆ. ಸ್ನೇಹಿತರನ್ನು ಒಂದು ಮಾಡಲು ಬೇಕಾದ ವ್ಯವಸ್ಥೆಗಳೇನು? ನಮ್ಮ ಹೊಸ ಮಾನವ ಸಂಪನ್ಮೂಲ ನಿರ್ವಹಣೆ ಏನಾಗಬೇಕು? ಇಂತಹ ಎಲ್ಲ ವಿಷಯಗಳ ಬಗ್ಗೆ ಗಮನ ಹರಿಸಿ.

 

ದೇಶವನ್ನು ಮುನ್ನಡೆಸಲು, ದೇಶಕ್ಕೆ ಹೊಸ ವೇಗ ನೀಡಲು, ದೇಶವನ್ನು ಅಭಿವೃದ್ದಿ ಮಾಡಲು, ತಮ್ಮನ್ನು ಹೊರತುಪಡಿಸಿ ಬೇರೆ ಯಾವುದೆ ದೊಡ್ಡ ಸಂಘಟನೆಯಿಲ್ಲ, ಯಾವುದೇ ದೊಡ್ಡ ವ್ಯವಸ್ಥೆಯಿಲ್ಲ. ಒಂದು ಕಡೆ ದೇಶದ ಎಲ್ಲ ವ್ಯವಸ್ಥೆಗಳ, ಮತ್ತೊಂದೆಡೆ  ರೈಲ್ವೆ ವ್ಯವಸ್ಥೆ, ಇದು ತಮ್ಮ ದೊಡ್ಡ ಶಕ್ತಿ. ತಾವು ಏನನ್ನೂ ಮಾಡಲು ಸಾಧ್ಯವಿಲ್ಲವೇ? ಆದುದರಿಂದ ಸಮಯದ ಸಂಪೂರ್ಣ ಉಪಯೋಗ ಮಾಡಿಕೊಳ್ಳಿ, ಗುರಿ ಇರಲಿ, ಏನನ್ನಾದರೂ ಮಾಡಬೇಕೆಂಬ ಮನೋಭಾವವಿರಲಿ, ಮುಂಬರುವ ದಿನಗಳ ಬಗ್ಗೆ ಚಿಂತಿಸಿ ಎಂದು ನಾನು ತಮ್ಮಲ್ಲಿ ಆಗ್ರಹಿಸುತ್ತೇನೆ. ಕಷ್ಟಗಳು ಬಹಳ ಬಂದಿರಬಹುದು, ತೊಂದರೆಗಳಾಗಿರಬಹುದು, ಅನ್ಯಾಯವಾಗಿರಬಹುದು, ಅಲ್ಲಿ ನನ್ನ ಪೋಸ್ಟಿಂಗ್ ಆಗಬೇಕಿತ್ತು, ಬೇರೆಡೆ ಆಯಿತು, ನನಗೆ ಪದೋನ್ನತಿಯಾಗಬೇಕಿತ್ತು ಆಗಲಿಲ್ಲ, ಇಂತಹ ಎಷ್ಟೋ ವಿಷಯಗಳಿರಬಹುದು. ದೂರುಗಳಿಗೆ ಕೊರತೆ ಇಲ್ಲದಿರಬಹುದು, ಆದರೆ ಈ ದಿನಗಳು ಮುಂದೆ ಬರುವ ದಿನಗಳಿಗೆ, ೧೨೫ ಕೋಟಿ ದೇಶವಾಸಿಗಳಿಗೆ, ಬದಲಾಗುತ್ತಿರುವ ವಿಶ್ವದಲ್ಲಿ ಭಾರತದ ಧ್ವಜವನ್ನು ಹಾರಿಸುವುದಕ್ಕಾಗಿ ತಮಗೆಲ್ಲರಿಗೂ ನನ್ನ ಶುಭಾಶಯಗಳು. ಉತ್ತಮ ಫಲಿತಾಂಶಗಳನ್ನು ನೀಡಿ, ಈ ಅಪೇಕ್ಷೆಯೊಂದಿಗೆ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.