Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳ ಮೇಲಿನ ಆಸ್ಟ್ರೇಲಿಯಾ-ಭಾರತ ಪಾಲುದಾರಿಕೆ (PACTS)


ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ, ಸೈಬರ್ ಮತ್ತು ಸೈಬರ್-ಸಕ್ರಿಯಗೊಳಿಸಿದ ನಿರ್ಣಾಯಕ ತಂತ್ರಜ್ಞಾನ ಸಹಕಾರದ 2020ರ ಚೌಕಟ್ಟಿನ ಒಪ್ಪಂದ (2020 ರ ಚೌಕಟ್ಟು) ಹಾಗೂ ಎರಡು ದಶಕಗಳ ಸಹಯೋಗದ ಸಂಶೋಧನೆ, ಕಾರ್ಯಾಚರಣೆಯ ಸಮನ್ವಯ ಮತ್ತು ನೀತಿಯ ತೊಡಗಿಸಿಕೊಳ್ಳುವಿಕೆಯ ಬೆಂಬಲದೊಂದಿಗೆ ಆಸ್ಟ್ರೇಲಿಯಾ ಮತ್ತು ಭಾರತ ಸೈಬರ್ ಹಾಗೂ ನಿರ್ಣಾಯಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸುದೀರ್ಘ ಪಾಲುದಾರಿಕೆಯನ್ನು ನಿರ್ಮಿಸಿವೆ.

ಪೂರೈಕೆ ಸರಪಳಿಗಳು, ನಿರ್ಣಾಯಕ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯು ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸುತ್ತವೆ, ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿವೆ ಹಾಗೂ ಮೌಲ್ಯಗಳು ಮತ್ತು ಜಾಗತಿಕ ಮಾನದಂಡಗಳನ್ನು ರೂಪಿಸಲು ಇವುಗಳನ್ನು ಬಳಸಬಹುದು ಎಂಬುದನ್ನು ಗುರುತಿಸಿ, ಆಸ್ಟ್ರೇಲಿಯಾ ಮತ್ತು ಭಾರತವು ತಮ್ಮ ಹಿಂದಿನ ಅಡಿಪಾಯದ ಮೇಲೆಯೇ ಕಾರ್ಯನಿರ್ವಹಿಸಲಿವೆ. ಅಲ್ಲದೆ, 2020 ರ ಚೌಕಟ್ಟನ್ನು ಬದಲಾಯಿಸಿ ಅದರ ಸ್ಥಾನದಲ್ಲಿ ತರಲಾಗುತ್ತಿರುವ ‘ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳ ಮೇಲಿನ ಆಸ್ಟ್ರೇಲಿಯಾ-ಭಾರತ ಪಾಲುದಾರಿಕೆ’ (PACTS) ಯ ಅಡಿಯಲ್ಲಿ ತಮ್ಮ ದ್ವಿಪಕ್ಷೀಯ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಉನ್ನತೀಕರಿಸಲಿವೆ.

ರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತೆಯಲ್ಲಿನ ನಮ್ಮ ಜಂಟಿ ಹಿತಾಸಕ್ತಿಯನ್ನು ಬೆಂಬಲಿಸುವುದು, ಹೆಚ್ಚಿನ ಡಿಜಿಟಲ್ ಆಯ್ಕೆಗಳೊಂದಿಗೆ ನಮ್ಮ ಪಾಲುದಾರರನ್ನು ಸಬಲೀಕರಣಗೊಳಿಸುವುದು, ನಿರ್ಣಾಯಕ ಪೂರೈಕೆ ಸರಪಳಿಗಳನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸುವುದು ಮತ್ತು ಜಾಗತಿಕ ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು PACTS ನ ಗುರಿಯಾಗಿದೆ. ಜವಾಬ್ದಾರಿಯುತ ತಂತ್ರಜ್ಞಾನ ನಾಯಕರಾಗುವಲ್ಲಿ ನಮ್ಮ ದೇಶಗಳ ಬದ್ಧತೆಯನ್ನು ಪ್ರದರ್ಶಿಸುತ್ತಾ, ಈ ಪಾಲುದಾರಿಕೆಯ ಅಡಿಯಲ್ಲಿನ ನಮ್ಮ ಪ್ರಯತ್ನಗಳ ಪ್ರತಿಯೊಂದು ಹಂತದಲ್ಲೂ ಸುರಕ್ಷತೆ, ಭದ್ರತೆ, ಸ್ಥಿತಿಸ್ಥಾಪಕತ್ವ, ಸರ್ವರ ಒಳಗೊಳ್ಳುವಿಕೆ ಮತ್ತು ಜಂಟಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲಾಗುವುದು. ಈ ಪ್ರಯತ್ನಗಳನ್ನು ಒಂದು ಸಮಗ್ರ ಏಕೀಕೃತ ಕಾರ್ಯತಂತ್ರದ ದೃಷ್ಟಿಕೋನದ ಅಡಿಯಲ್ಲಿ ಸುವ್ಯವಸ್ಥಿತಗೊಳಿಸುವುದರಿಂದ, ಸಹಕಾರದ 5 ಪ್ರಮುಖ ಆಧಾರಸ್ತಂಭಗಳ ಅಡಿಯಲ್ಲಿ ಗುರಿ-ಕೇಂದ್ರಿತ ಚಟುವಟಿಕೆಗಳನ್ನು ಕೈಗೊಳ್ಳಲು ಇದು ನಮಗೆ ಅನುವು ಮಾಡಿಕೊಡುತ್ತದೆ.

ಸಹಕಾರದ ಆಧಾರಸ್ತಂಭಗಳು

ಪ್ರತಿಯೊಂದು ಪರಸ್ಪರ ಸಂಬಂಧಿತ ಆಧಾರಸ್ತಂಭದ ಅಡಿಯಲ್ಲಿ, ಖಾಸಗಿ ವಲಯ, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳ ನಡುವಿನ ಸಹಯೋಗವನ್ನು ಬೆಂಬಲಿಸಲು ಭಾರತ ಮತ್ತು ಆಸ್ಟ್ರೇಲಿಯಾ ಅವಕಾಶಗಳನ್ನು ಹಾಗೂ ನಿರ್ದಿಷ್ಟ ಯೋಜನೆಗಳನ್ನು ಗುರುತಿಸಲಿವೆ. ಇದು ಸರ್ಕಾರ ಮತ್ತು ಸರ್ಕಾರಗಳ ನಡುವಿನ ಸಹಕಾರಕ್ಕೆ ಬುನಾದಿಯಾಗಲಿದ್ದು, ಅದನ್ನು ಮತ್ತಷ್ಟು ವಿಸ್ತರಿಸಲಿದೆ. ಅಲ್ಲದೆ, ಹೊಸ ತಂತ್ರಜ್ಞಾನಗಳಲ್ಲಿ ದ್ವಿಮುಖ ಹೂಡಿಕೆಯನ್ನು ಹೆಚ್ಚಿಸಲಿದೆ ಹಾಗೂ ಆರ್ಥಿಕ ಬೆಳವಣಿಗೆಯನ್ನು ತರುವಂತಹ ಉತ್ಪನ್ನಗಳನ್ನಾಗಿ ಬೌದ್ಧಿಕ ಆಸ್ತಿಯನ್ನು ಪರಿವರ್ತಿಸುವ ಕಾರ್ಯಕ್ಕೆ ಬೆಂಬಲ ನೀಡಲಿದೆ.

ಆಧಾರಸ್ತಂಭ 1: ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವ ಮತ್ತು ವೈವಿಧ್ಯೀಕರಣ

ನಮ್ಮ ಬೆಳೆಯುತ್ತಿರುವ ತಾಂತ್ರಿಕ ಕೈಗಾರಿಕೆಗಳನ್ನು ಬೆಂಬಲಿಸಲು ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳತ್ತ ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ವಿನ್ಯಾಸದಿಂದಲೇ ಭದ್ರತೆ ಮತ್ತು ಸುರಕ್ಷತೆಯನ್ನು (security and safety by design) ಹಾಗೂ ರಕ್ಷಣಾತ್ಮಕ ನಿಯಂತ್ರಣ ಚೌಕಟ್ಟುಗಳನ್ನು ಉತ್ತೇಜಿಸುವ ಮೂಲಕ ಮತ್ತು ನಿಯಮಾಧಾರಿತ ದ್ವಿಪಕ್ಷೀಯ ತಂತ್ರಜ್ಞಾನ ವ್ಯಾಪಾರ ಹಾಗೂ ಪೂರೈಕೆ ಸರಪಳಿಗಳನ್ನು ಆಳವಾಗಿಸುವ ಮೂಲಕ ಇದನ್ನು ಸಾಧಿಸಲಾಗುವುದು.

  • ವಿಶ್ವಾಸಾರ್ಹ ಮಾರಾಟಗಾರರ ಚೌಕಟ್ಟುಗಳ ಮೇಲಿನ ಸಹಯೋಗಕ್ಕಾಗಿ ದ್ವಿಪಕ್ಷೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವುದು.
  • ಇಂಡೋ-ಪೆಸಿಫಿಕ್ ವಲಯದಾದ್ಯಂತ ಸುರಕ್ಷಿತ, ವಿಶ್ವಾಸಾರ್ಹ, ನಂಬಲರ್ಹ ಮತ್ತು ಸ್ಥಿತಿಸ್ಥಾಪಕ ಸಮುದ್ರದಡಿಯ ಕೇಬಲ್ ಸಂಪರ್ಕವನ್ನು ಬೆಂಬಲಿಸಲು, ‘ಕೇಬಲ್ ಸಂಪರ್ಕ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿರುವ ಕ್ವಾಡ್ ಪಾಲುದಾರಿಕೆ’ಯ (Quad Partnership for Cable Connectivity and Resilience) ಮೂಲಕವೂ ಸೇರಿದಂತೆ ಭಾರತ-ಆಸ್ಟ್ರೇಲಿಯಾ ಸಹಕಾರವನ್ನು ಉತ್ತೇಜಿಸುವುದು. ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಮಾಹಿತಿ ವಿನಿಮಯ ಮತ್ತು ಸಮನ್ವಯತೆಯನ್ನು ಹೆಚ್ಚಿಸಲು ಹಾಗೂ ಬೆದರಿಕೆ ಮತ್ತು ವಿಧ್ವಂಸಕ ಕೃತ್ಯಗಳು ಸೇರಿದಂತೆ ಸಮುದ್ರದಡಿಯ ಕೇಬಲ್ ಮೂಲಸೌಕರ್ಯಕ್ಕಿರುವ ಅಪಾಯಗಳನ್ನು ಎದುರಿಸಲು ನಾವು ಸಹಕಾರವನ್ನು ಬಲಪಡಿಸುತ್ತೇವೆ.
  • ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳನ್ನು ರಕ್ಷಿಸುವತ್ತ ಗಮನಹರಿಸಿರುವ ಆಸ್ಟ್ರೇಲಿಯಾ ಮತ್ತು ಭಾರತೀಯ ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ಅಭಿವೃದ್ಧಿಪಡಿಸುವುದು; ಮತ್ತು ಅವರ ಪ್ರಯತ್ನಗಳಿಗೆ ಬಲ ತುಂಬಲು ಸಹ-ಅಭಿವೃದ್ಧಿ ಹಾಗೂ ಸಂಶೋಧನೆಗೆ ಅನುಕೂಲ ಮಾಡಿಕೊಡುವುದು.
  • ಸಮನ್ವಯಿತ ಹೂಡಿಕೆ, ನಿಯಂತ್ರಕಗಳ ಹೊಂದಾಣಿಕೆ, ಹಾಗೂ ಮರುಬಳಕೆ ಮತ್ತು ಮರುಪಡೆಯುವಿಕೆಯ ಮೂಲಕವೂ ಸೇರಿದಂತೆ ಸುರಕ್ಷಿತವಾದ ನಿರ್ಣಾಯಕ ಖನಿಜಗಳ) ಪೂರೈಕೆ ಸರಪಳಿಗಳ ಅಭಿವೃದ್ಧಿಯಲ್ಲಿ ಸಹಕರಿಸುವುದು.
  • ಆಸ್ಟ್ರೇಲಿಯಾ ಮತ್ತು ಭಾರತೀಯ ವ್ಯವಹಾರಗಳ ನಡುವೆ ವಾಣಿಜ್ಯ ಸಹಯೋಗ ಹಾಗೂ ವ್ಯಾಪಾರ ವೈವಿಧ್ಯೀಕರಣವನ್ನು ಉತ್ತೇಜಿಸುವುದು ಮತ್ತು ಪ್ರಸ್ತುತ ಇರುವ ಉಪಕ್ರಮಗಳನ್ನು ಈ ಆಧಾರಸ್ತಂಭಕ್ಕೆ ಹೊಂದಿಸುವ ಕಾರ್ಯವೂ ಸೇರಿದಂತೆ ಸಂಬಂಧಿತ ಉನ್ನತ ಸಂಸ್ಥೆಗಳ ನಡುವಿನ ಒಡನಾಟವನ್ನು ಬಲಪಡಿಸುವುದು.

ಆಧಾರಸ್ತಂಭ 2: ನಿರ್ಣಾಯಕ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನಗಳು, ದೂರಸಂಪರ್ಕ, ಜೈವಿಕ ತಂತ್ರಜ್ಞಾನ ಮತ್ತು ಸುಧಾರಿತ ವಸ್ತುಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿನ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲು ಹಾಗೂ ಆದ್ಯತೆಯ ನಿರ್ಣಾಯಕ ತಂತ್ರಜ್ಞಾನಗಳ ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ಸಮಗ್ರತೆಯನ್ನು ಬಲಪಡಿಸಲು ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿವೆ. ಇಂಡೋ-ಪೆಸಿಫಿಕ್ ವಲಯದಲ್ಲಿ ದೀರ್ಘಕಾಲೀನ ಆರ್ಥಿಕ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ, ಅತ್ಯಗತ್ಯ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳನ್ನು ರಕ್ಷಿಸಲು, ಆವಿಷ್ಕಾರ ಮತ್ತು ಸಂಶೋಧನೆಯನ್ನು ವೇಗಗೊಳಿಸಲು, ಹಾಗೂ ಪರಸ್ಪರ ಕಾರ್ಯನಿರ್ವಹಿಸಬಲ್ಲ, ಒಮ್ಮತ-ಆಧಾರಿತ ಅಂತಾರಾಷ್ಟ್ರೀಯ ಮಾನದಂಡಗಳನ್ನು ರೂಪಿಸಲು ನಾವು ಶ್ರಮಿಸುತ್ತೇವೆ.

  • ಪ್ರಜಾಸತ್ತಾತ್ಮಕ ಮೌಲ್ಯಗಳ ತಳಹದಿಯ ಮೇಲಿರುವ ಒಮ್ಮತ ಆಧಾರಿತ, ಬಹು-ಪಾಲುದಾರ  ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುವ ಮೂಲಕ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಕೃತಕ ಬುದ್ಧಿಮತ್ತೆಗಾಗಿ (AI) ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ಬೆಂಚ್‌ ಮಾರ್ಕ್‌ ಗಳನ್ನು ಮುನ್ನಡೆಸಲು ಜಾಗತಿಕ ಪ್ರಯತ್ನಗಳನ್ನು ಸದುಪಯೋಗಪಡಿಸಿಕೊಳ್ಳುವುದು. ನಮ್ಮ ನಾಗರಿಕರಿಗೆ ಪ್ರಯೋಜನಗಳನ್ನು ತರುವಂತಹ ಭಾರತ ಮತ್ತು ಆಸ್ಟ್ರೇಲಿಯಾದ ಶೈಕ್ಷಣಿಕ ಸಂಸ್ಥೆಗಳು ಹಾಗೂ ಖಾಸಗಿ ವಲಯಗಳ ನಡುವಿನ ಉಪಕ್ರಮಗಳನ್ನು ಬೆಂಬಲಿಸುವುದು ಇದರಲ್ಲಿ ಸೇರಿದೆ; ಇದು AI ತಂತ್ರಜ್ಞಾನಗಳನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಸಾಮರಸ್ಯದ ತತ್ವಗಳು ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ಮುನ್ನಡೆಸಲು AI ಸಂಶೋಧಕರು, ಅಭ್ಯಾಸಿಗಳು, ನೀತಿ ನಿರೂಪಕರು ಮತ್ತು ವೃತ್ತಿಪರರನ್ನು ಜ್ಞಾನ ಹಾಗೂ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ; ಕಾಂಪ್ಯೂಟ್, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳು, AI ಮತ್ತು AI ಸಂಬಂಧಿತ ಮೂಲಸೌಕರ್ಯಗಳಿಗೆ ಪ್ರವೇಶವನ್ನು ಭದ್ರಪಡಿಸುವ ವಿಧಾನಗಳನ್ನು ಹಂಚಿಕೊಳ್ಳುವುದು.
  • ದ್ವಿಪಕ್ಷೀಯವಾಗಿ ಮತ್ತು ವಿಶಾಲವಾದ ಇಂಡೋ-ಪೆಸಿಫಿಕ್ ವಲಯಕ್ಕೆ ಸ್ಪಷ್ಟವಾದ ಪ್ರಯೋಜನಗಳನ್ನು ತರುವ ಸಂಶೋಧನಾ ಯೋಜನೆಗಳಿಗೆ ಧನಸಹಾಯ ಮಾಡಲು, ಪ್ರಸ್ತುತ ವ್ಯವಸ್ಥೆಯೊಳಗಿನ ಸ್ಥಾಪಿತ ಕಾರ್ಯಕ್ರಮಗಳನ್ನು ಮರುಹೊಂದಿಸುವ ಮೂಲಕವೂ ಸೇರಿದಂತೆ, ಸುಧಾರಿತ ವಸ್ತುಗಳು, ದೂರಸಂಪರ್ಕ ಮತ್ತು ಜೈವಿಕ ತಂತ್ರಜ್ಞಾನದಂತಹ ಆದ್ಯತೆಗಳನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾ-ಭಾರತ ಸಂಶೋಧನೆ, ನಾವೀನ್ಯತೆ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ಮರುಕೇಂದ್ರೀಕರಿಸುವುದು ಮತ್ತು ವೇಗಗೊಳಿಸುವುದು.
  • ಎರಡೂ ದೇಶಗಳ ಬಾಹ್ಯಾಕಾಶ ವಲಯಗಳ ತ್ವರಿತ ಬೆಳವಣಿಗೆ ಮತ್ತು ಪಕ್ವವಾಗುತ್ತಿರುವ ಬಾಹ್ಯಾಕಾಶ ಪಾಲುದಾರಿಕೆಯನ್ನು ಬಳಸಿಕೊಂಡು, ಜಂಟಿ ವಾಣಿಜ್ಯ ಮತ್ತು ಸರ್ಕಾರಿ-ನೇತೃತ್ವದ ಬಾಹ್ಯಾಕಾಶ ವಲಯದ ಉಪಕ್ರಮಗಳನ್ನು ಉತ್ತೇಜಿಸುವಲ್ಲಿ ಸಹಯೋಗದ ಸಾಧ್ಯತೆಗಳನ್ನು ಅನ್ವೇಷಿಸುವುದು.

ಆಧಾರಸ್ತಂಭ 3: ಸೈಬರ್ ಭದ್ರತೆ

ಸೈಬರ್ ಮತ್ತು ಡಿಜಿಟಲ್ ಕ್ಷೇತ್ರದ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸಲು ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿವೆ. ಸೈಬರ್ ಅಪರಾಧಗಳನ್ನು ತಡೆಗಟ್ಟುವುದು, ದುರುದ್ದೇಶಪೂರಿತ ಸೈಬರ್ ಚಟುವಟಿಕೆಗಳನ್ನು ಹಿಮ್ಮೆಟ್ಟಿಸುವುದು, ಸೈಬರ್ ಮತ್ತು ತಂತ್ರಜ್ಞಾನ ಭದ್ರತಾ ಮಾನದಂಡಗಳಿಗೆ ಸಂಬಂಧಿಸಿದ ಜ್ಞಾನ ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ನಿರ್ಣಾಯಕ ರಾಷ್ಟ್ರೀಯ ಮೂಲಸೌಕರ್ಯಗಳನ್ನು ರಕ್ಷಿಸುವುದು ಇದರಲ್ಲಿ ಸೇರಿದೆ.

  • ಸಾಮರ್ಥ್ಯ ವೃದ್ಧಿ ಉಪಕ್ರಮಗಳು, ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರದ ಅವಕಾಶಗಳನ್ನು ಸುವ್ಯವಸ್ಥಿತಗೊಳಿಸಲು ಸೈಬರ್ ಮತ್ತು ಐಸಿಟಿ (ICT) ಕ್ಷೇತ್ರಗಳಲ್ಲಿ ಏಕೀಕೃತ ಹಾಗೂ ತರ್ಕಬದ್ಧ ದ್ವಿಪಕ್ಷೀಯ ಕಾರ್ಯವಿಧಾನವನ್ನು ಸ್ಥಾಪಿಸಲು ಕಾರ್ಯನಿರ್ವಹಿಸುವುದು. ಇದರ ಜೊತೆಗೆ ನೀತಿಯ ಸುಸಂಬದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅನೇಕ ಕಾರ್ಯ ಮಾರ್ಗಗಳಲ್ಲಿ ಕೆಲಸಗಳು ಪುನರಾವರ್ತನೆಯಾಗುವುದನ್ನು ತಪ್ಪಿಸುವುದು.
  • ಯುಎನ್ (UN) ಕಡ್ಡಾಯಗೊಳಿಸಿರುವ ಸೈಬರ್ ಸಂಬಂಧಿತ ಪ್ರಕ್ರಿಯೆಗಳಲ್ಲಿ ಸಹಕಾರವನ್ನು ಬಲಪಡಿಸುವುದು ಹಾಗೂ ದತ್ತಾಂಶ ಆಡಳಿತದ ವಿನ್ಯಾಸ (data governance architecture) ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಸೈಬರ್ ಭದ್ರತೆಯನ್ನು ಪರಿಹರಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರದ ಕುರಿತಾದ ಸಂವಾದವನ್ನು ಹೆಚ್ಚಿಸುವುದು.
  • ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ ಉದ್ಯಮಗಳ ಕುರಿತಾಗಿ ಆಸ್ಟ್ರೇಲಿಯಾ ಮತ್ತು ಭಾರತೀಯ ವ್ಯವಹಾರಗಳ ನಡುವೆ ಪ್ರವೇಶದ ಅವಕಾಶಗಳನ್ನು ಹಾಗೂ ಹೆಚ್ಚಿನ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು.
  • ಸೈಬರ್ ಭದ್ರತೆಯ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಸರ್ಕಾರಿ ಏಜೆನ್ಸಿಗಳು ಹಾಗೂ ಇತರ ಪಾಲುದಾರರನ್ನು  ಒಟ್ಟುಗೂಡಿಸಲು ಪ್ರಾಯೋಗಿಕ ಜಂಟಿ ಕಾರ್ಯಾಗಾರಗಳನ್ನು ಸುಗಮಗೊಳಿಸುವುದು.
  • ನಿರ್ಣಾಯಕ ಕೌಶಲ್ಯಗಳ ಬೆಳವಣಿಗೆ ಮತ್ತು ವಿನಿಮಯಕ್ಕಾಗಿ ಸೈಬರ್-ಟೆಕ್ ಕೌಶಲ್ಯ ಇನ್‌ಕ್ಯುಬೇಟರ್ ಹಬ್ (cyber tech skill incubator hub) ಅನ್ನು ರಚಿಸುವುದು.

ಆಧಾರಸ್ತಂಭ 4: ಡಿಜಿಟಲ್ ಸ್ಥಿತಿಸ್ಥಾಪಕತ್ವ

ಇಂಡೋ-ಪೆಸಿಫಿಕ್ ವಲಯದಾದ್ಯಂತ ಡಿಜಿಟಲೀಕರಣಗೊಳ್ಳುತ್ತಿರುವ ಆರ್ಥಿಕತೆಗಳನ್ನು ಬೆಂಬಲಿಸಲು ವಿಶ್ವಾಸಾರ್ಹ ಮತ್ತು ಸ್ಕೇಲೆಬಲ್ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸಲು ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಶ್ರಮಿಸಲಿವೆ. ಪ್ರಾದೇಶಿಕ ಸಾಮರ್ಥ್ಯಗಳನ್ನು ಬಲಪಡಿಸುವ ನಿರ್ದಿಷ್ಟ ಯೋಜನೆಗಳನ್ನು ಗುರುತಿಸುವ ಮೂಲಕ, ಅಭಿವೃದ್ಧಿಯ ಸವಾಲುಗಳನ್ನು ಎದುರಿಸುವಂತಹ ಪರಿಹಾರಗಳನ್ನು ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ.

  • ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure – DPI) ತತ್ವಗಳ ಕುರಿತು ಇಂಡೋ-ಪೆಸಿಫಿಕ್ ವಲಯದ ದೇಶಗಳೊಂದಿಗೆ ಹೊಸ ಪಾಲುದಾರಿಕೆ ವಿನಿಮಯಗಳನ್ನು ಬೆಂಬಲಿಸುವುದು.
  • ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ, ಸ್ಥಿತಿಸ್ಥಾಪಕ ನಿರ್ಣಾಯಕ ಮೂಲಸೌಕರ್ಯ, ಸಂಪರ್ಕ, ಡಿಜಿಟಲ್ ರೂಪಾಂತರ, ಆರೋಗ್ಯ, ಸಾಮಾಜಿಕ ರಕ್ಷಣೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಸಂಶೋಧನೆಯಂತಹ ಕ್ಷೇತ್ರಗಳು ಸೇರಿದಂತೆ ಕೈಗೆಟಕುವ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಪರಿಹಾರಗಳನ್ನು ಇಂಡೋ-ಪೆಸಿಫಿಕ್ ವಲಯದಾದ್ಯಂತ ವಿಸ್ತರಿಸುವುದು ಮತ್ತು ಪಸರಿಸುವುದು.
  • ಇಂಡೋ-ಪೆಸಿಫಿಕ್ ವಲಯದಾದ್ಯಂತ ಬಲವಾದ DPI ಬಳಕೆಯ ಪ್ರಕರಣಗಳನ್ನು ವಿಸ್ತರಿಸುವ ಮೂಲಕ ಡಿಜಿಟಲ್ ಸ್ಥಿತಿಸ್ಥಾಪಕತ್ವದ ಕುರಿತಾದ ಭಾರತೀಯ ಮತ್ತು ಆಸ್ಟ್ರೇಲಿಯಾದ ಪರಿಣತಿಯನ್ನು ಉತ್ತೇಜಿಸುವುದು. ಅಲ್ಲದೆ, ಸ್ಥಳೀಯವಾಗಿ ಹೊಂದಿಕೊಳ್ಳಬಲ್ಲ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವ ಜಂಟಿ ಯೋಜನೆಗಳು ಸೇರಿದಂತೆ, ವಿವಿಧ ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಮೂಲಕ ಮೂಲಭೂತ ಡಿಜಿಟಲ್ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಇಂಡೋ-ಪೆಸಿಫಿಕ್ ಪ್ರಾಯೋಗಿಕ ಯೋಜನೆಗಳಿಗೆ ಅನುಕೂಲ ಮಾಡಿಕೊಡುವುದು.

ಆಧಾರಸ್ತಂಭ 5: ರಕ್ಷಣಾ ಸಂಶೋಧನಾ ಸಹಯೋಗ

ಬಹು-ಕ್ಷೇತ್ರದ ರಕ್ಷಣಾ ಸವಾಲುಗಳು ಮತ್ತು ಸಾಮರ್ಥ್ಯಗಳ ಬಗೆಗಿನ ಜಂಟಿ ತಿಳುವಳಿಕೆಯನ್ನು ಮುನ್ನಡೆಸಲು, ರಕ್ಷಣಾ ಸಂಶೋಧನಾ ಪಾಲುದಾರಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿವೆ. ‘ರಕ್ಷಣಾ ಸಹಕಾರದ ಮೇಲಿನ ತಿಳುವಳಿಕಾ ಒಪ್ಪಂದ’ಕ್ಕೆ ಲಗತ್ತಿಸಲಾಗಿರುವ ‘ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಹಕಾರಕ್ಕೆ ಸಂಬಂಧಿಸಿದ ಅನುಷ್ಠಾನ ವ್ಯವಸ್ಥೆ’ಯ ಅಡಿಯಲ್ಲಿ, ನಾವು ಹಿಂದಿನ ಜಂಟಿ ಸಂಶೋಧನೆಗಳ ಆಧಾರದ ಮೇಲೆ ನಮ್ಮ ಜಂಟಿ ಹಿತಾಸಕ್ತಿಗಳಿಗೆ ಅನುಗುಣವಾಗಿ ಭವಿಷ್ಯದ ಯೋಜನೆಗಳನ್ನು ವಿನ್ಯಾಸಗೊಳಿಸುತ್ತೇವೆ ಹಾಗೂ ನಮ್ಮ ರಕ್ಷಣಾ ವಿಜ್ಞಾನ ಸಂಸ್ಥೆಗಳ ನಡುವಿನ ವಿನಿಮಯವನ್ನು ಹೆಚ್ಚಿಸುತ್ತೇವೆ.

  • ರಕ್ಷಣಾ ಮಂತ್ರಿಗಳ ಸಂವಾದ, ರಕ್ಷಣಾ ನೀತಿ ಮಾತುಕತೆಗಳು (Defence Policy Talks), ಮತ್ತು ರಕ್ಷಣಾ ಉದ್ಯಮ, ಸಂಶೋಧನೆ ಹಾಗೂ ಸಾಮಗ್ರಿಗಳ ಮೇಲಿನ ಜಂಟಿ ಕಾರ್ಯಪಡೆಯ ಮೂಲಕ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನದ ಆದ್ಯತೆಗಳ ಕುರಿತು ನಮ್ಮ ಸಂವಾದವನ್ನು ಬಲಪಡಿಸುವುದು.
  • ಸಂಶೋಧನಾ ಸಹಕಾರವನ್ನು ವೇಗಗೊಳಿಸಲು ಆಸ್ಟ್ರೇಲಿಯಾದ ‘ಡಿಫೆನ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಗ್ರೂಪ್’ ಮತ್ತು ಭಾರತದ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (DRDO) ನಡುವೆ ಸಾಂಸ್ಥಿಕ ಸಂಪರ್ಕಗಳನ್ನು ನಿರ್ಮಿಸುವುದು ಮತ್ತು ಕಾರ್ಯ-ಮಟ್ಟದ ವಿನಿಮಯಗಳನ್ನು ನಿಯಮಿತಗೊಳಿಸುವುದು.
  • ವ್ಯವಹಾರದಿಂದ ವ್ಯವಹಾರಕ್ಕೆ ತೊಡಗಿಸಿಕೊಳ್ಳುವುದು ಸೇರಿದಂತೆ, ಆಯಾ ರಕ್ಷಣಾ ಆವಿಷ್ಕಾರ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗಳ ನಡುವೆ ಆಳವಾದ ಸಂಬಂಧಗಳನ್ನು ಸುಗಮಗೊಳಿಸುವುದು.
  • ರಕ್ಷಣಾ ಅನ್ವಯಗಳಿಗಾಗಿ ನವೀನ ಕಡಲ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳ (ಕಡಲ ಕಣ್ಗಾವಲು ಹಾಗೂ ಸುಧಾರಿತ ವಸ್ತುಗಳನ್ನು ಒಳಗೊಂಡಂತೆ) ಮೇಲಿನ ಸಹಯೋಗಕ್ಕೆ ಹೆಚ್ಚಿನ ಒತ್ತು ನೀಡುವುದು.

ರೂಪರೇಷೆ ಮತ್ತು ಆಡಳಿತ

ದ್ವಿಪಕ್ಷೀಯ ಮೇಲ್ವಿಚಾರಣೆ

ಈ ಪಾಲುದಾರಿಕೆಯ ಉನ್ನತ ಮಟ್ಟದ ಅಧ್ಯಕ್ಷತೆಯನ್ನು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟ ಇಲಾಖೆಯ ‘ಅಂತಾರಾಷ್ಟ್ರೀಯ ಮತ್ತು ಭದ್ರತಾ ಗುಂಪಿನ ಉಪ ಕಾರ್ಯದರ್ಶಿ’ ಮತ್ತು ಭಾರತದ ‘ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರು’ ವಹಿಸಲಿದ್ದಾರೆ. ಸೈಬರ್ ಮತ್ತು ನಿರ್ಣಾಯಕ ತಂತ್ರಜ್ಞಾನಗಳಾದ್ಯಂತ ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕಾಗಿ ಅಧ್ಯಕ್ಷರು ಆದ್ಯತೆಯ ಕ್ಷೇತ್ರಗಳನ್ನು ನಿರ್ಧರಿಸಲಿದ್ದಾರೆ ಮತ್ತು ಅವಕಾಶಗಳನ್ನು ಗುರುತಿಸಲಿದ್ದಾರೆ.

ಹಿರಿಯ ಅಧಿಕಾರಿಗಳ ಸಭೆ (ವಾರ್ಷಿಕ): ಜವಾಬ್ದಾರಿಯುತ ಹಿರಿಯ ಅಧಿಕಾರಿಗಳು ಪ್ರತಿಯೊಂದು ಆಧಾರಸ್ತಂಭದ ಅಡಿಯಲ್ಲಿ ಸಮನ್ವಯ ಸಾಧಿಸಲಿದ್ದಾರೆ ಮತ್ತು ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದಾರೆ. ಅಲ್ಲದೆ, ಆದ್ಯತೆಗಳನ್ನು ಪರಿಶೀಲಿಸುವುದು, ಇದುವರೆಗಿನ ಪ್ರಗತಿಯನ್ನು ಅವಲೋಕಿಸುವುದು, ಸೈಬರ್ ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಕ್ಕಿರುವ ಹೊಸ ಹಾಗೂ ಉದಯೋನ್ಮುಖ ಅಪಾಯಗಳನ್ನು ನಿರ್ಣಯಿಸುವುದು ಮತ್ತು ಪ್ರತಿಯೊಂದು ಸಹಕಾರದ ಆಧಾರಸ್ತಂಭದ ಅಡಿಯಲ್ಲಿ ನಿರ್ದಿಷ್ಟ ಯೋಜನೆಗಳನ್ನು ಪರಸ್ಪರ ಗುರುತಿಸುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಆಧಾರಸ್ತಂಭ ಭಾರತೀಯ ನೇತೃತ್ವ ಆಸ್ಟ್ರೇಲಿಯಾದ ನೇತೃತ್ವ
1 . ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಕಚೇರಿಯಿಂದ ಸಮನ್ವಯ
2 ನಿರ್ಣಾಯಕ ತಂತ್ರಜ್ಞಾನ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಕಚೇರಿ
3 ಸೈಬರ್ ಭದ್ರತೆ ಸೈಬರ್ ರಾಜತಾಂತ್ರಿಕ ವಿಭಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಕಚೇರಿ
4 ಡಿಜಿಟಲ್ ಸ್ಥಿತಿಸ್ಥಾಪಕತ್ವ ಓಷಿಯಾನಿಯಾ ವಿಭಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಕಚೇರಿ
5 ರಕ್ಷಣಾ ಸಂಶೋಧನೆ ಮತ್ತು ಸಹಯೋಗ ರಕ್ಷಣಾ ಸಚಿವಾಲಯ ರಕ್ಷಣಾ ಇಲಾಖೆ

 

 

*****