ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಹಾರಾಷ್ಟ್ರದ ಪುಣೆಯ ಪಿಂಪ್ರಿಯಲ್ಲಿರುವ ಹಿಂದೂಸ್ತಾನ್ ಆಂಟಿ-ಬಯಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ನ ಸಾಲ ತೀರಿಸಲು ಹೆಚ್ಚುವರಿ ಭಾಗ ಮತ್ತು ಖಾಲಿ ಜಮೀನು ಮಾರಾಟ ಮಾಡಲು ತನ್ನ ಅನುಮೋದನೆ ನೀಡಿದೆ.
ಈ ಪ್ರಸ್ತಾವನೆಯು ಇವುಗಳನ್ನು ಒಳಗೊಂಡಿದೆ:
(i) ಕೇಂದ್ರ/ರಾಜ್ಯ ಸರ್ಕಾರಿ ಇಲಾಖೆಗಳ, ಸರ್ಕಾರಿ ಸಂಸ್ಥೆಗಳ, ಕೇಂದ್ರ/ರಾಜ್ಯ ಪಿ.ಎಸ್.ಯು.ಗಳ, ಸ್ವಾಯತ್ತ ಕಾಯಗಳ, ನಗರಾಭಿವೃದ್ಧಿ ಪ್ರಾಧಿಕಾರಗಳು ಇತ್ಯಾದಿಗಳ ಸಾಲ ಮನ್ನಾ ಮತ್ತು ಮುಂದೂಡಿಕೆಯ ನಂತರ ಉಳಿದ ನಿವ್ವಳ 821.17 ಕೋಟಿ ರೂಪಾಯಿಗಳ ಸಾಲವನ್ನು ತೀರಿಸಲು ಎಚ್.ಎ.ಎಲ್.ಗೆ ಸೇರಿದ ಸುಮಾರು 87.70 ಎಕರೆಯಷ್ಟು ಹೆಚ್ಚುವರಿ ಮತ್ತು ಖಾಲಿ ಜಮೀನಿನ ಮಾರಾಟ (ವಾಸ್ತವವಾಗಿ ಎಷ್ಟು ಪ್ರದೇಶವನ್ನು ಮಾರಾಟ ಮಾಡಬೇಕು ಎಂಬುದು ಬಿ.ಐ.ಎಫ್.ಆರ್. ಮಾರ್ಗಸೂಚಿಯಂತೆ ಬಿಡ್ ನಿಂದ ಸ್ವೀಕರಿಸುವ ದರವನ್ನು ಅವಲಂಬಿಸಿರುತ್ತದೆ)
(ii) ಭಾರತ ಸರ್ಕಾರದ ಸಾಲ ಮತ್ತು ಬಡ್ಡಿಯ ಮೊತ್ತ 307.23 ಕೋಟಿ ರೂಪಾಯಿಗಳನ್ನು (ಅಸಲು ಮೊತ್ತ 186.96 ಕೋಟಿ ಮತ್ತು 30.9.2017ರಂತೆ ಲೆಕ್ಕಹಾಕಲಾಗಿರುವಂತೆ ಅಂದಾಜು ಬಡ್ಡಿ 120.27 ಕೋಟಿ ರೂಪಾಯಿಗಳು) ಮನ್ನಾ ಮತ್ತು ಸುಮಾರು 128.68 ಕೋಟಿ ರೂಪಾಯಿಗಳಷ್ಟು ವಿವಿಧ ಬಾಕಿಗಳ ಮುಂದೂಡಿಕೆ ಮಾಡುವುದು.
(iii) ವೇತನ, ಸಂಬಳ ಮತ್ತು ಇತರ ತತ್ ಕ್ಷಣದ ಮಹತ್ವದ ವೆಚ್ಚಗಳಿಗಾಗಿ ತತ್ ಕ್ಷಣವೇ 100 ಕೋಟಿ ರೂಪಾಯಿಗಳ ಸಾಲದ ಮಂಜೂರು. ಎಚ್.ಎ.ಎಲ್. ಜಮೀನಿನ ಮಾರಾಟ ಪ್ರಕ್ರಿಯೆಯ ಬಳಿಕ ಈ ಸಾಲವನ್ನು ಸರ್ಕಾರಕ್ಕೆ ಮರು ಪಾವತಿ ಮಾಡಬೇಕು. ಈ ಅನುಮೋದನೆಯು ಕಂಪನಿಯ ಆಸ್ತಿಯ ಗರಿಷ್ಠ ಬಳಕೆಗೆ ಸರ್ಕಾರಕ್ಕೆ ನೆರವಾಗುತ್ತದೆ ಮತ್ತು ಕಂಪನಿಯ ವಿಚಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗುತ್ತದೆ.:
(i) ಪುನರ್ವಸತಿ;
(ii) ಕಾರ್ಯತಂತ್ರಾತ್ಮಕ ಮಾರಾಟ; ಅಥವಾ
(iii) ಮುಚ್ಚುವುದಕ್ಕೆ
ಯೋಜನೆ/ಪ್ರಸ್ತಾವನೆಯ ಜಾರಿಯಾದ ಬಳಿಕ, ಎಚ್.ಎ.ಎಲ್.ಗೆ ಯಾವುದೇ ಸಾಲ ಇರುವುದಿಲ್ಲ ಮತ್ತು ಅದರ ಆಯವ್ಯಯ ತಖ್ತೆ ಪರಿಶುದ್ಧವಾಗುತ್ತದೆ, ಹೀಗಾಗಿ ಸಚಿವರುಗಳ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಅವಕಾಶವಾಗುತ್ತದೆ.
ಮಹಾರಾಷ್ಟ್ರದ ಪುಣೆಯ ಪಿಂಪ್ರಿಯಲ್ಲಿರುವ ಎಚ್.ಎ.ಎಲ್. ಭೂಮಿಯನ್ನು ಮಾರಾಟ ಮಾಡುವುದರಿಂದ, ನೌಕರರ ದಯನೀಯ ಸ್ಥಿತಿ ಮತ್ತು ವೇದನೆಗಳು ತಗ್ಗುತ್ತವೆ ಮತ್ತು ಸಾಲಗಳು ತೀರಿದ ಬಳಿಕ ಕಂಪನಿಯ ಆಯವ್ಯಯ ತಖ್ತೆ ಶುದ್ಧವಾಗಿ, ಸಚಿವರುಗಳ ಸಮಿತಿಯ ಶಿಫಾರಸು ಜಾರಿಗೆ ಅವಕಾಶ ನೀಡುತ್ತದೆ.
AD/SH