Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಭೆ 2019ರ ಶ್ರೀ ಪ್ರಧಾನಮಂತ್ರಿಯವರ ಭಾಷಣ


ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ಬಂಡಾರು ದತ್ತಾತ್ರೇಯ , ಮುಖ್ಯಮಂತ್ರಿಗಳಾದ ಶ್ರೀ ಜೈರಾಮ್ ಠಾಕೂರ್, ಸಿಕ್ಕಿಂ ಮುಖ್ಯಮಂತ್ರಿಗಳಾದ ಶ್ರೀ ಪ್ರೇಮ್ ಸಿಂಗ್ ತಮಾಂಗ್, ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾಗಿರುವ ಶ್ರೀ ಪ್ರಹ್ಲಾದ್ ಪಟೇಲ್, ಶ್ರೀ ಅನುರಾಗ್ ಠಾಕೂರ್, ನೀತಿ ಆಯೋಗದ ಉಪಾಧ್ಯಕ್ಷರಾದ ಶ್ರೀ ಡಾ. ರಾಜೀವ್ ಕುಮಾರ್, ಭಾರತದ ಯುಎಇ ರಾಯಭಾರಿಗಳಾಗಿರುವ ಶ್ರೀ ಡಾ. ಅಹ್ಮದ್ ಅಲ್ಬಾನಾ, ಪ್ರಮುಖ ಉದ್ಯಮಿಗಳು, ಇತರ ಗಣ್ಯರು ಮತ್ತು ನನ್ನ ಆತ್ಮೀಯ ಗೆಳೆಯರೆ!

ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದು. ಇದು ಕೇವಲ ಕಲ್ಪನೆಯಲ್ಲ, ವಾಸ್ತವ! ಇದು ಅಭೂತಪೂರ್ವ! ಮತ್ತು ಅದ್ಭುತ! ನಿಮಗೆ ಅಭಿನಂದನೆಗಳು. ಇದು ಹಿಮಾಚಲ ಪ್ರದೇಶದಿಂದ ಇಡೀ ದೇಶಕ್ಕೆ ಮತ್ತು ಇಡೀ ಜಗತ್ತಿಗೆ ನೀಡುತ್ತಿರುವ ಘೋಷಣೆಯಾಗಿದೆ- ‘ನಾವೂ ಈಗ ಸಜ್ಜಾಗುತ್ತಿದ್ದೇವೆ’!

ಇಂದು ಹಿಮಾಚಲ ಹೇಳುತ್ತಿದೆ – ಹೌದು, ನಾವು ಆಗಮಿಸಿದ್ದೇವೆ !!! ಆದ್ದರಿಂದ ಮೊದಲನೆಯದಾಗಿ, ಮಾ ಜ್ವಾಲಾ ಜಿ ಅವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರ, ಶ್ರೀ ಜೈರಾಮ್ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ನಾವೆಲ್ಲರೂ ಪ್ರತಿಯೊಂದು ಮೂಲೆಯೂ ಅಧಿಕಾರದ ವಾಸಸ್ಥಾನವಾಗಿರುವ ಒಂದು ಸ್ಥಳದಲ್ಲಿ ಒಟ್ಟುಗೂಡಿದ್ದೇವೆ. ದೇವರು ಮತ್ತು ದೇವತೆಗಳು, ಋಷಿಗಳು ಹಾಗೂ ತಪಸ್ವಿಗಳು ಇದನ್ನು ದೈವಿಕ ಸ್ಥಳವನ್ನಾಗಿ ಮಾಡಿ ನೈಸರ್ಗಿಕ ಸಂಪನ್ಮೂಲಗಳಿಂದ ಆಶೀರ್ವಾದ ಮಾಡಿದ್ದಾರೆ. ಈ ಪರಿಸರದಲ್ಲಿ ಎಲ್ಲ ಸಂಪತ್ತು ಸೃಷ್ಟಿಕರ್ತರನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ.

ಸಹೋದರ ಮತ್ತು ಸಹೋದರಿಯರೇ,

ಇದಕ್ಕಿಂತ ಮೊದಲು ಈ ರೀತಿಯ ಹೂಡಿಕೆದಾರರ ಶೃಂಗಸಭೆಗಳು ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ನಡೆಯುತ್ತಿದ್ದವು. ಈ ಮುಂಚಿನ ಪರಿಸ್ಥಿತಿಗಳನ್ನು ನೋಡಿದ ಇಂತಹ ಅನೇಕ ಜನರಿದ್ದಾರೆ. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಹಿಮಾಚಲದಲ್ಲಿ ಈ ಶೃಂಗಸಭೆಯನ್ನು ಆಯೋಜಿಸಿರುವುದು ಅದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಈಗ ವ್ಯವಹಾರಗಳನ್ನು ಆಕರ್ಷಿಸಲು ಮತ್ತು ರಾಜ್ಯಗಳಲ್ಲಿ ಹೂಡಿಕೆ ಮಾಡಲು, ಹೊಸ ಸ್ಪರ್ಧೆಯನ್ನು ಆರಂಭಿಸಲಾಗಿದೆ.

ಸ್ನೇಹಿತರೇ,

ಕೆಲವು ದಶಕಗಳ ಹಿಂದೆ ನಮ್ಮ ದೇಶದ ಪರಿಸ್ಥಿತಿ ಹೇಗಿತ್ತೆಂದರೆ, ಯಾವ ರಾಜ್ಯ ಹೆಚ್ಚು ದತ್ತಿ ಕಾರ್ಯಗಳನ್ನು ಕೈಗೊಳ್ಳುತ್ತದೆ, ಯಾವುದು ಹೆಚ್ಚಿನ ಪ್ರೋತ್ಸಾಹ ಅಥವಾ ತೆರಿಗೆ ರಿಯಾಯಿತಿಗಳನ್ನು ನೀಡುತ್ತದೆ, ಯಾವುದು ವಿದ್ಯುತ್ ಒದಗಿಸುತ್ತದೆ ಅಥವಾ ಅಗ್ಗದ ದರದಲ್ಲಿ ಭೂಮಿಯನ್ನು ಮಾರಾಟ ಮಾಡುತ್ತದೆ ಎಂಬುದನ್ನು ಗಮನಿಸಲಾಗುತ್ತಿತ್ತು. ಅಂತಹ ಸ್ಪರ್ಧೆಯು ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ ಎಂದು ಅನುಭವದಿಂದ ತಿಳಿದು ಬರುತ್ತದೆ. ಹೂಡಿಕೆದಾರರು ಸಹ ರಾಜ್ಯಗಳಿಂದ ಪ್ರೋತ್ಸಾಹ ಮತ್ತು ರಿಯಾಯಿತಿಗಳಿಗಾಗಿ ಕಾಯುತ್ತಿದ್ದರು. ಇದರಿಂದ ಅವರು ರಾಜ್ಯಗಳಲ್ಲಿ ತಮ್ಮ ಹೂಡಿಕೆಯನ್ನು ವಿಳಂಬ ಮಾಡುತ್ತಿದ್ದರು. ಶೇಕಡಾ 10 ರವರೆಗೆ ಅಥವಾ 15 ಪ್ರತಿಶತದಷ್ಟು ರಿಯಾಯಿತಿ ಪಡೆಯುವ ಸಾಧ್ಯತೆಯಿದ್ದಾಗ ಶೇಕಡಾ 5 ರಿಯಾಯಿತಿ ಏಕೆ ತೆಗೆದುಕೊಳ್ಳಬೇಕು ಎಂದು ಅವರು ಆಲೋಚಿಸುತ್ತಿದ್ದರು.

ಆದರೆ ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ, ಈ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ ಎಂಬುದು ನನಗೆ ಸಂತಸ ತಂದಿದೆ. ರಿಯಾಯಿತಿ ಸ್ಪರ್ಧೆಯು ರಾಜ್ಯಕ್ಕೆ ಅಥವಾ ಕೈಗಾರಿಕೆಗಳಿಗೆ ಒಳ್ಳೆಯದಲ್ಲ ಎಂದು ರಾಜ್ಯ ಸರ್ಕಾರಗಳು ಈಗ ಅರಿತುಕೊಂಡಿವೆ.

ಸ್ನೇಹಿತರೇ, ಹೂಡಿಕೆದಾರರು ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ಪಡೆಯುವುದು, ಇನ್ಸ್‌ಪೆಕ್ಟರ್ ರಾಜ್‌ ಅನ್ನು ನಿವಾರಿಸುವುದು ಮತ್ತು ಪ್ರತಿ ಹಂತದಲ್ಲೂ ಸರ್ಕಾರದ ಪರ್ಮಿಟ್ ರಾಜ್‌ಗೆ ಬಲಿಯಾಗದಿರುವುದು ಅವಶ್ಯಕ. ಈ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸ್ಪರ್ಧೆಯಲ್ಲಿ ಸರ್ಕಾರಗಳು ಈಗ ಮುಂದೆ ಬರುತ್ತಿವೆ. ಅವರು ವ್ಯವಸ್ಥೆಯನ್ನು ಸರಳೀಕರಿಸುತ್ತಿದ್ದಾರೆ, ಕಾನೂನುಗಳನ್ನು ಬದಲಾಯಿಸುತ್ತಿದ್ದಾರೆ ಮತ್ತು ಅನಗತ್ಯ ನಿಯಮಗಳನ್ನು ತೆಗೆಯುತ್ತಿದ್ದಾರೆ. ರಾಜ್ಯಗಳಲ್ಲಿ ಈ ಸ್ಪರ್ಧೆಯು ಹೆಚ್ಚಾದಂತೆ, ನಮ್ಮ ಕೈಗಾರಿಕೆಗಳು ಜಾಗತಿಕ ವೇದಿಕೆಯಲ್ಲಿ ಹೆಚ್ಚು ಸಮರ್ಥವಾಗುತ್ತವೆ. ಇತರ ಕೈಗಾರಿಕೆಗಳೊಂದಿಗೆ ಸ್ಪರ್ಧಿಸುವ ಅವರ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಇದು ರಾಜ್ಯಗಳಿಗೆ, ರಾಜ್ಯಗಳ ಜನರಿಗೆ, ದೇಶದ ಜನರಿಗೆ ಮತ್ತು ಭಾರತಕ್ಕೆ ಅನುಕೂಲಕರವಾಗಲಿದೆ.

ಸ್ನೇಹಿತರೇ,

ಉದ್ಯಮವು ಪಾರದರ್ಶಕ ಮತ್ತು ಸ್ವಚ್ಛ ವ್ಯವಸ್ಥೆಯನ್ನು ಇಚ್ಛಿಸುತ್ತವೆ. ಕೆಲವು ತಪ್ಪಿಸಬಹುದಾದ ನಿಯಮಗಳು ಮತ್ತು ನಿಬಂಧನೆಗಳು ಮತ್ತು ಸರ್ಕಾರದ ಹೆಚ್ಚಿನ ಹಸ್ತಕ್ಷೇಪದಿಂದ ಕೈಗಾರಿಕೆಗಳ ಬೆಳವಣಿಗೆಯ ವೇಗಕ್ಕೆ ಅಡ್ಡಿಯಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಹಿಮಾಚಲ ಪ್ರದೇಶ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಹೊಸ ಪ್ರೋತ್ಸಾಹವನ್ನು ನೀಡುತ್ತಿದೆ ಮತ್ತು ಸರಿಯಾದ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನನಗೆ ಸಂತಸ ತಂದಿದೆ. ಇದು ಏಕ ಗವಾಕ್ಷಿ ನಿವಾರಣೆ, ಪಾರದರ್ಶಕ ಭೂ ಹಂಚಿಕೆ ಅಥವಾ ವಲಯ-ನಿರ್ದಿಷ್ಟ ಉದ್ಯಮ ನೀತಿಯಾಗಿರಬೇಕು. ಈ ಕ್ರಮಗಳು ಈ ಸ್ಥಳದ ‘ಸ್ನೇಹಪರ ವಾತಾವರಣವನ್ನು ವ್ಯಾಪಾರ-ಸ್ನೇಹಿ ವಾತಾವರಣಕ್ಕೆ ಬದಲಾಯಿಸಿವೆ.

ಸ್ನೇಹಿತರೇ,

ಉದ್ಯಮದ ಪ್ರಮುಖ ಮುಖ್ಯಸ್ಥರು ಇಲ್ಲಿ ಉಪಸ್ಥಿತರಿದ್ದಾರೆ. ಕಂಪನಿಯ ವಿವಿಧ ಘಟಕಗಳು ಉತ್ತಮ ಫಲಿತಾಂಶಗಳನ್ನು ನೀಡಿದಾಗ ಕಂಪನಿಯ ಫಲಿತಾಂಶವು ಸ್ವಯಂಚಾಲಿತವಾಗಿ ಸುಧಾರಿಸುತ್ತದೆ ಎಂಬುದನ್ನು ನೀವು ಮತ್ತು ಇತರ ಕೈಗಾರಿಕೋದ್ಯಮಿ ಸ್ನೇಹಿತರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ಆದ್ದರಿಂದ ರಾಜ್ಯಗಳಲ್ಲಿ ಏನಾದರೂ ಸುಧಾರಣೆ ಕಂಡುಬಂದಾಗ ಅದು ದೇಶದ ಫಲಿತಾಂಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಿಮಾಚಲ ಪ್ರದೇಶದಂತಹ ಅನೇಕ ರಾಜ್ಯಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಇಂದು ಭಾರತವು ಹಿಂದೆಂದಿಗಿಂತಲೂ ಉತ್ತಮ ವ್ಯಾಪಾರ ಸ್ನೇಹಿ ತಾಣವಾಗಿ ಗುರುತಿಸಲ್ಪಟ್ಟಿದೆ.

ಸ್ನೇಹಿತರೇ,

ಪ್ರಸ್ತುತ ಭಾರತದಲ್ಲಿ ಬೆಳವಣಿಗೆಯ ವಾಹನವು 4 ಚಕ್ರಗಳಲ್ಲಿ ಹೊಸ ಆಲೋಚನೆ ಮತ್ತು ಹೊಸ ವಿಧಾನಗಳೊಂದಿಗೆ ಚಲಿಸುತ್ತಿದೆ. ಮೊದಲನೇ ಚಕ್ರ ಸಮಾಜ. ಇದು ಮಹತ್ವಾಕಾಂಕ್ಷೆಯಾಗಿದೆ. ಎರಡನೇ ಚಕ್ರವು ಹೊಸ ಭಾರತಕ್ಕೆ ಉತ್ತೇಜನ ನೀಡುವ ಸರ್ಕಾರವಾಗಿದೆ. ಮೂರನೆಯ ಚಕ್ರವು ಧೈರ್ಯಶಾಲಿಯಾದ ಉದ್ಯಮವಾಗಿದೆ. ಮತ್ತು ನಾಲ್ಕನೇ ಚಕ್ರವು ಹಂಚಿಕೊಳ್ಳಬಹುದಾದ ಜ್ಞಾನದಿಂದ ಕೂಡಿದೆ. ಆದ್ದರಿಂದ ಈ 4 ಚಕ್ರಗಳಲ್ಲಿ ನಾವು ವೇಗವಾಗಿ ಚಲಿಸುತ್ತಿದ್ದೇವೆ.

ಇಂದು ಸರ್ಕಾರ ಭಾರತದ ಹಿತಾಸಕ್ತಿ ಮತ್ತು ಭಾರತೀಯ ಸಮಾಜದ ಆಕಾಂಕ್ಷೆಗಳಿಗೆ ಅನುಗುಣವಾಗಿ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರವು ಬಡವರ ಮನೆ, ಆರೋಗ್ಯ, ಕೌಶಲಗಳ ಬಗ್ಗೆ ಮಾತ್ರವಲ್ಲ, ಹೂಡಿಕೆ ಮತ್ತು ಸ್ವಉದ್ಯೋಗದ ಬಗ್ಗೆಯೂ ಗಮನ ಹರಿಸುತ್ತಿದೆ.

ಇಂದು, ವ್ಯಾಪಾರ ವಾತಾವರಣವನ್ನು ಸುಧಾರಿಸುವಷ್ಟರ ಮಟ್ಟಿಗೆ ಸೇವಾ ವಿತರಣೆಯ ಕಡೆಗೆ ಗಮನಹರಿಸಲಾಗಿದೆ. ಫಲಿತಾಂಶ ನಿಮ್ಮ ಮುಂದಿದೆ. 2014 ಮತ್ತು 2019ರ ನಡುವೆ ಭಾರತವು 79 ಶ್ರೇಯಾಂಕಗಳಿಂದ “ಈಸ್ ಆಫ್ ಡೂಯಿಂಗ್” ವ್ಯಾಪಾರ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದೆ. ಈ ಬಾರಿಯೂ ನಾವು ವಿಶ್ವದ ಅಗ್ರ 10 ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದೇವೆ. ಪ್ರತಿ ವರ್ಷ ನಾವು ಹೊಸ ನಿಯತಾಂಕವನ್ನು ವೇಗವಾಗಿ ಸುಧಾರಿಸುತ್ತಿದ್ದೇವೆ. ಕಳೆದ ವರ್ಷ ನಾವು 10 ರಲ್ಲಿ 6 ಸೂಚಕಗಳನ್ನು ಸುಧಾರಿಸಲು ಸಾಧ್ಯವಾಯಿತು. ಈ ಬಾರಿ ದಿವಾಳಿತನ ವಿಭಾಗದಲ್ಲಿ ಪ್ರಮುಖ ಮುನ್ನಡೆ ಸಾಧಿಸಿದ್ದೇವೆ. ನಾವು ವಿಭಾಗದಲ್ಲಿ 50 ಕ್ಕೂ ಹೆಚ್ಚು ಶ್ರೇಣಿಗಳನ್ನು ಸುಧಾರಿಸಿದ್ದೇವೆ.

ಸ್ನೇಹಿತರೇ,

ಈ ಶ್ರೇಯಾಂಕಗಳನ್ನು ಸುಧಾರಿಸುವುದು ಕೇವಲ ಅಂಕಿಅಂಶಗಳ ಬದಲಾವಣೆ ಮಾತ್ರವಲ್ಲ. ನಮ್ಮ ಸರ್ಕಾರವು ನೆಲಮಟ್ಟದಲ್ಲಿ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಿರ್ಧಾರಗಳು ಮತ್ತು ನೀತಿಗಳನ್ನು ತೆಗೆದುಕೊಳ್ಳುವುದು ಎಂದರ್ಥ. ಇಲ್ಲಿ ಉಪಸ್ಥಿತರಿರುವವರಿಗೆ ಪ್ರತಿ ಅನುಮತಿಗಾಗಿ ಎಷ್ಟು ತಿಂಗಳು ಮುಂಚೆಯೇ ಕಾಯಬೇಕಾಗಿತ್ತು ಎಂದು ತಿಳಿದಿದೆ. ಒಬ್ಬರು ಎಷ್ಟು ಪ್ರಕ್ರಿಯೆಗಳ ಮೂಲಕ ಹೋಗಬೇಕಾಗಿತ್ತು ಎಂಬ ಅರಿವೂ ಇದೆ.

ಸ್ನೇಹಿತರೇ,

ಇದು ಕೇವಲ ಶ್ರೇಯಾಂಕಗಳ ಸುಧಾರಣೆಯಲ್ಲ. ಬದಲಿಗೆ ಭಾರತದಲ್ಲಿ ವ್ಯವಹರಿಸುವ ವಿಧಾನದಲ್ಲಿ ಒಂದು ಕ್ರಾಂತಿಯಾಗಿದೆ. ಈ ಕ್ರಾಂತಿಯಲ್ಲಿ ನಾವು ಹೊಸ ಆಯಾಮಗಳನ್ನು ಸೇರಿಸುತ್ತಿದ್ದೇವೆ ಮತ್ತು ಹೊಸ ಸುಧಾರಣೆಗಳನ್ನು ಮಾಡುತ್ತಿದ್ದೇವೆ. ಇಂದಿನ ಜಾಗತಿಕ ಸನ್ನಿವೇಶದಲ್ಲಿ ನಮ್ಮ ಆರ್ಥಿಕತೆಯ ಮೂಲಭೂತ ಅಂಶಗಳನ್ನು ದುರ್ಬಲಗೊಳಿಸಲು ನಾವು ಅನುಮತಿಸದ ಕಾರಣ ಭಾರತೀಯರು ಬಲವಾಗಿ ನಿಂತಿದ್ದಾರೆ.

ಸ್ಥೂಲ ಅರ್ಥಶಾಸ್ತ್ರದ ಬಗೆಗಿನ ನಮ್ಮ ಬದ್ಧತೆಯನ್ನು ನಾವು ಸ್ಥಿರವಾಗಿ ಕಾಪಾಡಿಕೊಂಡಿದ್ದೇವೆ ಮತ್ತು ಹಣಕಾಸಿನ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಇಂದು, ಜಾಗತಿಕ ಆರ್ಥಿಕ ಚಟುವಟಿಕೆಯು ಶೇಕಡಾ 3 ರಷ್ಟು ಕಡಿಮೆಯಾದಾಗ, ಭಾರತವು ಶೇಕಡಾ 5ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ. ಪ್ರಸ್ತುತ ವರದಿಗಳ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಭಾರತವು ಹೆಚ್ಚು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ.

ಸ್ನೇಹಿತರೇ,

ನಮ್ಮ ಉದ್ದೇಶಗಳು ಪ್ರಾಮಾಣಿಕ ಹಾಗೂ ಸೂಕ್ಷ್ಮವಾಗಿವೆ. ನಮ್ಮ ನಿರ್ಧಾರಗಳು ಮತ್ತು ಉದ್ದೇಶಗಳಲ್ಲಿ ಶಕ್ತಿ ಇದೆ. ಭಾರತದಲ್ಲಿ ಜಿಎಸ್‌ಟಿ ಜಾರಿಗೆ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಇದನ್ನು ಕಾರ್ಯಗತಗೊಳಿಸುವ ಮೂಲಕ ನಾವು ಇದನ್ನು ತೋರಿಸಿದ್ದೇವೆ. ದಿವಾಳಿಯ ಸಂದರ್ಭದಲ್ಲಿ ದೇಶದ ಕಂಪನಿಗಳಿಗೆ ಯಾವುದೇ ಸ್ಪಷ್ಟ ನಿರ್ಗಮನ ಮಾರ್ಗವಿರಲಿಲ್ಲ.

ಇಂದು ದಿವಾಳಿತನ ಮತ್ತು ದಿವಾಳಿತನ ಸಂಹಿತೆ – ಐಬಿಸಿ ಕೇವಲ ವಾಸ್ತವ ಮಾತ್ರ ಅಲ್ಲ. ಆದರೆ ಸಿಕ್ಕಿಬಿದ್ದ ಲಕ್ಷಾಂತರ ರೂಪಾಯಿಗಳನ್ನು ಮರುಬಳಕೆ ಮಾಡಲು ಸಹಕಾರಿಯಾಗಿದೆ. ಬ್ಯಾಂಕಿಂಗ್ ಸುಧಾರಣೆಯೂ ವರ್ಷಗಳಿಂದ ಸಿಲುಕಿಕೊಂಡಿದೆ. ನಮ್ಮ ಸರ್ಕಾರ ಸಂಪೂರ್ಣ ದೃಢ ನಿಶ್ಚಯದಿಂದ ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ. ದೇಶದ ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ನಿನ್ನೆ ಸಂಜೆ ನಾವು ಕ್ಯಾಬಿನೆಟ್‌ನಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ. ಈ ನಿರ್ಧಾರದಿಂದ, ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈಗ ಕನಸಿನ ಮನೆಯೊಂದರ ತಮ್ಮ ಹಳೆಯ ಆಸೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ಉದ್ದೇಶದಿಂದ, ನಾವು ರಾಷ್ಟ್ರವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ.

ನಮ್ಮ ಸರ್ಕಾರವು ಸರ್ಕಾರದ ಪ್ರಕ್ರಿಯೆಗಳ ಅಡಚಣೆಗೆ ಒತ್ತು ನೀಡುತ್ತಿದೆ, ಅಂತರ್‌ ಇಲಾಖೆ ಸಮನ್ವಯವನ್ನು ಹೆಚ್ಚಿಸುತ್ತದೆ ಮತ್ತು ಸಮಯದ ಮಿತಿಯೊಳಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ತೆರಿಗೆ ಆಡಳಿತವನ್ನು ಸ್ಪರ್ಧಾತ್ಮಕ ಮತ್ತು ಪಾರದರ್ಶಕವಾಗಿಸುವುದು ನಮ್ಮ ಪ್ರಯತ್ನ. ಕಾರ್ಪೊರೇಟ್ ತೆರಿಗೆಗೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ನಿರ್ಧಾರವನ್ನು ಅದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ. ಇಂದು ಭಾರತವು ವಿಶ್ವದ ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ವರ್ಷದ ಅಕ್ಟೋಬರ್ 1 ರ ನಂತರ ಬಂದಿರುವ ಎಲ್ಲಾ ಹೊಸ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಕೇವಲ 15 ಪ್ರತಿಶತಕ್ಕೆ ಇಳಿಸಲಾಗಿದೆ.

ಸ್ನೇಹಿತರೇ,

ಇ-ಅಸೆಸ್ಮೆಂಟ್ ಯೋಜನೆಯನ್ನು ಕಳೆದ ತಿಂಗಳಲ್ಲಿಯೇ ಜಾರಿಗೆ ತರಲಾಗಿದೆ. ಈಗ ತೆರಿಗೆ ವ್ಯವಸ್ಥೆಯಲ್ಲಿ ಮಾನವ ಸಂಪರ್ಕವನ್ನು ಕನಿಷ್ಠಕ್ಕೆ ಇಳಿಸಲಾಗುತ್ತಿದೆ. ಇದು ಹೆಚ್ಚು ಪಾರದರ್ಶಕತೆಯನ್ನು ತರುತ್ತದೆ ಮತ್ತು ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ವೇಗವಾಗಿ ಎದುರಿಸುತ್ತದೆ.

ಸ್ನೇಹಿತರೇ,

5 ಟ್ರಿಲಿಯನ್ ಆರ್ಥಿಕತೆಯ ಗುರಿ ಕೇವಲ ಸರ್ಕಾರದದ್ದಲ್ಲ. ದೇಶದ ಪ್ರತಿಯೊಂದು ರಾಜ್ಯಗಳ ಸಹಕಾರದಿಂದ ಮಾತ್ರ ಈ ಗುರಿ ಸಾಧಿಸಲಾಗುವುದು. ಪ್ರತಿಯೊಂದು ರಾಜ್ಯದಲ್ಲೂ ನಮಗೆ ಅನೇಕ ಸಾಧ್ಯತೆಗಳಿವೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಅನೇಕ ಸಾಧ್ಯತೆಗಳು ಮತ್ತು ಅಪಾರ ಸಾಮರ್ಥ್ಯಗಳಿವೆ. ಈ ಸಾಮರ್ಥ್ಯದ ಹೆಚ್ಚಿನ ಲಾಭವನ್ನು ಸರ್ಕಾರಗಳು, ಕೈಗಾರಿಕೆಗಳು, ನಮ್ಮ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಸೇವಾ ವಲಯವು ಸದುಪಯೋಗಪಡಿಸಿಕೊಳ್ಳುತ್ತವೆ. ಆದ್ದರಿಂದ ನಾವು ವೇಗವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ.

ಸಹೋದರ ಸಹೋದರಿಯರೇ,

ನೀತಿಯಿಂದ ಸಂಭಾವ್ಯತೆಯನ್ನು ಬೆಂಬಲಿಸಿದಾಗ ಕಾರ್ಯಕ್ಷಮತೆ ಬಹಳಷ್ಟು ಸುಧಾರಿಸುತ್ತದೆ. ಕಾರ್ಯಕ್ಷಮತೆಯೇ ಪ್ರಗತಿಯನ್ನು ತರುತ್ತದೆ. ಜಿಲ್ಲೆಗಳು, ರಾಜ್ಯಗಳು ಮತ್ತು ದೇಶದ ಪ್ರಗತಿಯು ಪರಸ್ಪರ ಸಂಪರ್ಕ ಹೊಂದಿದೆ. ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ಇದು ಅಂತಾರಾಷ್ಟ್ರೀಯ ಶ್ರೇಯಾಂಕ ಮತ್ತು ಸಾಮರ್ಥ್ಯ ಎರಡನ್ನೂ ಒಳಗೊಂಡಿದೆ. ಮತ್ತು ಹಿಮಾಚಲಕ್ಕೆ ಇದು ಬಹಳ ಮುಖ್ಯವಾದುದಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿಮಾಚಲ ಪ್ರದೇಶಕ್ಕೆ ನೀಡಲಾದ ಶ್ರೇಯಾಂಕವು ಹಿಮಾಚಲ ಪ್ರದೇಶಕ್ಕೆ ನೇರ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

2013ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ 65ನೇ ಸ್ಥಾನದಲ್ಲಿತ್ತು. ಇಂದು ನಾವು 34ನೇ ಸ್ಥಾನದಲ್ಲಿದ್ದೇವೆ. ಈ ಬದಲಾವಣೆ ಹೇಗೆ ಸಂಭವಿಸಿತು? ಐದು ವರ್ಷಗಳ ಹಿಂದೆ ಭಾರತವು ವಾರ್ಷಿಕವಾಗಿ ಸುಮಾರು 70-75 ಲಕ್ಷ ವಿದೇಶಿ ಪ್ರವಾಸಿಗರನ್ನು ಪಡೆಯುತ್ತಿತ್ತು. ಕಳೆದ ವರ್ಷ ಈ ಅಂಕಿ ಅಂಶವು 1 ಕೋಟಿ ವಿದೇಶಿ ಪ್ರವಾಸಿಗರನ್ನು ದಾಟಿದೆ. ಈ ಹೆಚ್ಚಳ ಹೇಗೆ ಸಂಭವಿಸಿತು?

ಸ್ನೇಹಿತರೇ,

2014ರಲ್ಲಿ ಭಾರತದ ಜನರು ಪ್ರವಾಸೋದ್ಯಮ ಕ್ಷೇತ್ರದಿಂದ 1 ಲಕ್ಷ 20 ಸಾವಿರ ಕೋಟಿ ರೂ. ಗಳಿಸಿದ್ದಾರೆ. ಕಳೆದ ವರ್ಷ ಈ ವಿದೇಶಿ ವಿನಿಮಯ ಸುಮಾರು 2 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಈ ಬದಲಾವಣೆ ಹೇಗೆ ಸಂಭವಿಸಿತು?

ಸ್ನೇಹಿತರೇ,

ಪ್ರವಾಸೋದ್ಯಮ ಕ್ಷೇತ್ರದ ಸಾಮರ್ಥ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೀತಿ ಹಸ್ತಕ್ಷೇಪಗಳನ್ನು ಮಾಡಿದ್ದೇವೆ, ಡಜನ್‌ಗಟ್ಟಲೆ ಹೊಸ ದೇಶಗಳಿಗೆ ಇ-ವೀಸಾವನ್ನು ಸುಗಮಗೊಳಿಸಿದ್ದೇವೆ ಮತ್ತು ಇದರ ಪರಿಣಾಮವಾಗಿ, ಕಾರ್ಯಕ್ಷಮತೆ ಮತ್ತು ಶ್ರೇಯಾಂಕ ಬದಲಾಯಿತು.

ಸ್ನೇಹಿತರೇ,

ಇಂದು ಭಾರತದಲ್ಲಿ ಪ್ರವಾಸೋದ್ಯಮವನ್ನು ಪ್ಯಾಕೇಜ್ ಆಗಿ ಪ್ರಚಾರ ಮಾಡಲಾಗುತ್ತಿದೆ. ಪ್ರಕೃತಿ, ಸಾಹಸ, ಆಧ್ಯಾತ್ಮಿಕ, ವೈದ್ಯಕೀಯ, ಪರಿಸರ ಪ್ರವಾಸೋದ್ಯಮದಂತಹ ಪ್ರತಿಯೊಂದು ರೀತಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತಿದೆ. ಈ ವಿಷಯದಲ್ಲಿ ಹಿಮಾಚಲವು ಸಾಧ್ಯತೆಗಳಿಂದ ತುಂಬಿದೆ. ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಇಂದು ಇಲ್ಲಿ ಆಯೋಜಿಸಲಾಗಿದೆ. ಆದ್ದರಿಂದ, ನಾವು ಕಾನ್ಫರೆನ್ಸ್ ಪ್ರವಾಸೋದ್ಯಮದ ಸಾಧ್ಯತೆಗಳನ್ನು ನೋಡುತ್ತಿದ್ದೇವೆ. ಈ ಸಾಮರ್ಥ್ಯವನ್ನು ನಾವು ಅರ್ಥಮಾಡಿಕೊಂಡರೆ, ಪ್ರಗತಿ ದೂರವಿಲ್ಲ.

ಸ್ನೇಹಿತರೇ,

ಇಲ್ಲಿ ಬಿಡುಗಡೆಯಾದ ಕಾಫಿ ಟೇಬಲ್ ಪುಸ್ತಕವು ಹಿಮಾಚಲದ ಸಾಮರ್ಥ್ಯವನ್ನು ವಿವರಿಸುತ್ತದೆ. ನನಗೆ ನೆನಪಿದೆ, ನಾನು ಸೋಲನ್‌ಗೆ ಹೋಗುತ್ತಿದ್ದಾಗ ನಾನು ಹಲವಾರು ಫಲಕಗಳನ್ನು ನೋಡುತ್ತಿದ್ದೆ- ಅಣಬೆ ನಗರಕ್ಕೆ ಸುಸ್ವಾಗತ. ಅಂತೆಯೇ ಲಾಹೌಲ್-ಸ್ಪಿತಿಯ ಆಲೂಗಡ್ಡೆ, ಕುಲ್ಲು, ಶಾಲುಗಳು ಮತ್ತು ಕಾಂಗ್ರಾದ ವರ್ಣಚಿತ್ರಗಳು ಸಹ ಪ್ರಸಿದ್ಧವಾಗಿವೆ. ಆದರೆ ಆಗಾಗ್ಗೆ ಹೊರಗಿನಿಂದ ಬರುವ ಜನರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಪ್ರತಿ ಜಿಲ್ಲೆಗೆ ಒಂದು ಗುರುತು ನೀಡುವ ಈ ವಿಷಯಗಳನ್ನು ಹೇಗೆ ಉತ್ತೇಜಿಸುವುದು ಎಂಬುದರ ಕುರಿತು ಹೊಸ ಮಾರ್ಗಗಳ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ. ಆದ್ದರಿಂದ, ಹಿಮಾಚಲದ ಸಾಮರ್ಥ್ಯವು ಇನ್ನೂ ಆಯ್ಕೆಯಾಗಿಲ್ಲ ಎಂದು ನಾನು ಹೇಳುತ್ತೇನೆ.

ಈಗ ಊಹೆ ಮಾಡಿ, ಹಿಮಾಚಲದಲ್ಲಿ ಐಐಟಿ, ಐಐಐಟಿ, ಎನ್‌ಐಟಿ, ಸಿಪೆಟ್ ಇದೆ, ಮತ್ತು ಐಐಎಫ್‌ಟಿಯಲ್ಲಿ ಕೆಲಸ ನಡೆಯುತ್ತಿದೆ. ಇಲ್ಲಿ ತಂತ್ರಜ್ಞಾನ ವಿಸ್ತರಣೆಯ ಸಾಧ್ಯತೆಯಿದೆ. ಸೇಬು, ಪೇರಳೆ, ಪ್ಲಮ್‌ನಂತಹ ಹಣ್ಣುಗಳಿಗೆ ಹಾಗೂ ಟೊಮೆಟೊ, ಗುಚಿ, ಅಣಬೆಗಳು, ಕ್ಯಾಪ್ಸಿಕಂನಂತಹ ತರಕಾರಿಗಳಿಗೆ ಬೇಡಿಕೆ ಇದೆ. ಇದರಿಂದ ಆಹಾರ ಸಂಸ್ಕರಣೆ, ಕೃಷಿ ಮತ್ತು ಔಷಧ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯವಿದೆ.

ಸ್ನೇಹಿತರೇ,

ಸಾವಯವ ಕೃಷಿಯು ಇಲ್ಲಿ ಅನೇಕ ವರ್ಷಗಳಿಂದ ಜನಪ್ರಿಯವಾಗಿದೆ. ಹಿಮಾಚಲದಲ್ಲಿ ಔಷಧಿಗಳನ್ನು ತಯಾರಿಸದ ಯಾವುದೇ ಫಾರ್ಮಾ ಕಂಪನಿ ದೇಶದಲ್ಲಿ ಇಲ್ಲ. ಈ ವಲಯದ ವಿಸ್ತರಣೆಗೆ ಸಾಕಷ್ಟು ಸಾಮರ್ಥ್ಯವಿದೆ.

ಹೌದು, ಈ ಅಪಾರ ಸಾಧ್ಯತೆಗಳ ಮಧ್ಯೆ ಹಿಮಾಚಲವು ಮೊದಲು ಅಂತರವನ್ನು ಅನುಭವಿಸಿದೆ ಎಂದು ನಾನು ಭಾವಿಸುತ್ತೇನೆ. ಇದು ಗುಣಮಟ್ಟದ ಮೂಲಸೌಕರ್ಯ ಮತ್ತು ಸರ್ಕಾರದ ಪ್ರಕ್ರಿಯೆಗಳ ಸರಳೀಕರಣದ ಅಂತರವಾಗಿತ್ತು. ಈ ಅಂತರವನ್ನು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ತುಂಬಲು ಕೇಂದ್ರ ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಶ್ರೀ ಜೈರಾಮ್‌ ಅವರ ತಂಡಕ್ಕೆ ಈ ಅವಕಾಶ ನೀಡಿದಾಗಿನಿಂದ ಪ್ರಕ್ರಿಯೆಯು ವೇಗವಾಗಿದೆ.

ಇಂದು ಹಿಮಾಚಲದಲ್ಲಿ, ಅನೇಕ ಮೂಲಸೌಕರ್ಯ ಮತ್ತು ಸಂಪರ್ಕ ಸಂಬಂಧಿತ ಯೋಜನೆಗಳು ವೇಗವಾಗಿ ಸಾಗುತ್ತಿವೆ. ಜಲಶಕ್ತಿ ಅಥವಾ ನವೀಕರಿಸಬಹುದಾದ ಇಂಧನ, ರಸ್ತೆ, ರೈಲು ಅಥವಾ ವಾಯು ಸಂಪರ್ಕದ ಇತರ ಮೂಲಗಳಾಗಿರಲಿ, ಪ್ರತಿಯೊಂದು ಹಂತದಲ್ಲೂ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಉಡಾನ್ ಯೋಜನೆಯಡಿ ಹಿಮಾಚಲ ಪ್ರದೇಶ ಹೆಲಿ-ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಿದೆ. ಶಿಮ್ಲಾ, ಧರ್ಮಶಾಲಾ, ಕುಲ್ಲು, ಚಂಡೀಗಡ ಈ ಸೌಲಭ್ಯಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

ಇದಲ್ಲದೆ, ರಾಷ್ಟ್ರೀಯ ಹೆದ್ದಾರಿಗಳನ್ನೂ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ವಿಸ್ತರಿಸಲಾಗುತ್ತಿದೆ. ರೋಹತಾಂಗ್ ಸುರಂಗದಿಂದ ಲಾಹೌಲ್-ಸ್ಪಿಟಿ ಮತ್ತು ಲಡಾಖ್‌ಗೆ ಲಾಭವಾಗಲಿದೆ. ನಂಗಲ್ ಅಣೆಕಟ್ಟು-ತಲ್ವಾಡಾ ರೈಲು ಮಾರ್ಗ, ಚಂಡೀಗಡ- ಬಡ್ಡಿ ರೈಲು ಮಾರ್ಗ, ಉನಾ-ಹಮೀರ್‌ಪುರ ರೈಲು ಮಾರ್ಗ ಮತ್ತು ಭಾನುಪಾಲಿ-ಬಿಲಾಸ್ಪುರ-ಬೇರಿ ರೈಲು ಮಾರ್ಗವು ಇಡೀ ಪ್ರದೇಶದ ಸಂಪರ್ಕಕ್ಕೆ ಹೊಸ ಆಯಾಮವನ್ನು ನೀಡಲಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಹಿಮಾಚಲ ಪ್ರದೇಶವು ದೇಶದ ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ.

ಸ್ನೇಹಿತರೇ,

ಇಂದು ಹಿಮಾಚಲವು ಭಾರತದ ಬೆಳವಣಿಗೆಯ ಕಥೆಗೆ ಹೊಸ ಆಯಾಮವನ್ನು ನೀಡಲುಸಿದ್ಧವಾಗಿದೆ ಮತ್ತು ಈ ನಂಬಿಕೆಯ ಹಿಂದೆ ಹಿಮಾಚಲದ ಬಗ್ಗೆ ನನ್ನದೇ ಆದ ಅರಿವಿದೆ. ಹಿಮಾಚಲವು ವ್ಯವಹಾರಕ್ಕೆ ಅಗತ್ಯವಾದ ಎಲ್ಲ ಷರತ್ತುಗಳನ್ನು ಪೂರೈಸುತ್ತದೆ. ವ್ಯವಹಾರಕ್ಕೆ ಶಾಂತಿ ಬೇಕು. ಅದು ಯಾವಾಗಲೂ ಹಿಮಾಚಲದ ಶಕ್ತಿಯಾಗಿದೆ. ವೈವಿಧ್ಯತೆಯನ್ನು ಸ್ವೀಕರಿಸುವ ಸಮಾಜವು ಹಿಮಾಚಲದಲ್ಲಿ ಯಾವಾಗಲೂ ಇರುತ್ತದೆ. ಭೌಗೋಳಿಕ ಮತ್ತು ಭಾಷಾ ವೈವಿಧ್ಯತೆ ಇಲ್ಲಿ ಅದ್ಭುತವಾಗಿದೆ. ಆಗಾಗ್ಗೆ ಇಲ್ಲಿನ ಜನರು ಪರಸ್ಪರರ ಉಪಭಾಷೆಯನ್ನು ಅರ್ಥಮಾಡಿಕೊಳ್ಳದಿದ್ದರೂ ಪರಸ್ಪರ ಸಂಪರ್ಕ ಅದ್ಭುತವಾಗಿದೆ.

ಇದಲ್ಲದೆ, ಸಾಕ್ಷರತಾ ಪ್ರಮಾಣ ಹೆಚ್ಚಿರುವ ದೇಶದ ರಾಜ್ಯಗಳಲ್ಲಿ ಹಿಮಾಚಲವೂ ಸೇರಿದೆ. ಹಿಮಾಚಲ ಪ್ರದೇಶದ ಪ್ರತಿಯೊಂದು ಮೂಲೆಯಲ್ಲೂ ಜನರು ವ್ಯವಹಾರದಲ್ಲಿ ತೊಡಗಿರುವುದನ್ನು ನೀವು ನೋಡುತ್ತೀರಿ. ಅವರು ಸರ್ಕಾರಕ್ಕಾಗಿ ಕಾಯುವುದಿಲ್ಲ. ಅವರು ಹೊಂದಿರುವ ಯಾವುದೇ ಸಂಪನ್ಮೂಲಗಳೊಂದಿಗೆ ಅವರು ವ್ಯವಹಾರವನ್ನು ಆರಂಭಿಸುತ್ತಾರೆ. ಜನರಲ್ಲಿ ನೈಸರ್ಗಿಕ ಉದ್ಯಮಶೀಲತಾ ಮನೋಭಾವವಿದೆ, ಇದು ಹೂಡಿಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ.

ಇದಲ್ಲದೆ, ಹಿಮಾಚಲ ಪ್ರದೇಶ ದೇಶದ ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಶಕ್ತಿ. ಮಿಲಿಟರಿ ಪಡೆಗೆ ಸಂಬಂಧವಿಲ್ಲದ ಯಾವುದೇ ಕುಟುಂಬ ಇಲ್ಲಿ ಇಲ್ಲ. ನೀವು ಹಿಮಾಚಲದ ಹಳ್ಳಿಗೆ ಹೋದರೆ ಅಲ್ಲಿ ನೀವು ಒಂದು ಸಣ್ಣ ಭಾರತವನ್ನು ಕಾಣುತ್ತೀರಿ ಎಂದು ನನ್ನ ಅನುಭವನದ ಹಿನ್ನೆಲೆಯಲ್ಲಿ ನಾನು ನಿಮಗೆ ಹೇಳಬಲ್ಲೆ. ಹಿಮಾಚಲದಲ್ಲಿ ನಿವೃತ್ತ ಸೇನಾ ಸಿಬ್ಬಂದಿಯ ಅನುಭವದ ರೂಪದಲ್ಲಿ ನಾವು ಇಲ್ಲಿ ದೊಡ್ಡ ಕೌಶಲವನ್ನು ಹೊಂದಿದ್ದೇವೆ. ಈ ಮಾನವ ಶಕ್ತಿ ಅನೇಕ ಕ್ಷೇತ್ರಗಳಿಗೆ ಮತ್ತು ವಿಶೇಷವಾಗಿ ರಕ್ಷಣಾ ಕ್ಷೇತ್ರಕ್ಕೆ ಬಹಳ ಉಪಯುಕ್ತವಾಗಿದೆ.

ಸ್ನೇಹಿತರೇ,

ಹಿಮಾಚಲದ ಸಮುದಾಯ, ಅದರ ಸಾಮರ್ಥ್ಯ, ನಿಮ್ಮ ಬಂಡವಾಳ ಮತ್ತು ನೀತಿಯಲ್ಲಿ ಸ್ಪಷ್ಟತೆ ದೊಡ್ಡ ಬದಲಾವಣೆಯ ಮಾಧ್ಯಮವಾಗಲಿದೆ. ನೀವು ಇಲ್ಲಿನ ಯುವಕರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಿದಾಗ ಮತ್ತು ಅವರ ಪ್ರತಿಭೆಯನ್ನು ಬಳಸಿಕೊಂಡಾಗ ಈ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತವೆ.

ಕೊನೆಯಲ್ಲಿ, ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತೊಮ್ಮೆ ನಿಮಗೆ ಧನ್ಯವಾದಗಳು. ನಾನು ಇಂದು ಇಲ್ಲಿ ಅತಿಥಿಯಲ್ಲ, ನಾನು ಕೂಡ ಹಿಮಾಚಲದವನೇ ಆಗಿದ್ದೇನೆ. ಅದಕ್ಕಾಗಿಯೇ ನೀವು ಇಲ್ಲಿಗೆ ನನ್ನ ಬಳಿಗೆ ಬಂದಿದ್ದೀರಿ. ನೀವೆಲ್ಲರೂ ನನ್ನ ಅತಿಥಿಗಳು ಮತ್ತು ನೀವು ಹಿಮಾಚಲ ದೇಶದಲ್ಲಿ ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿದರೆ, ಹಿಮಾಚಲವು ನಿಮ್ಮನ್ನು ಆಶೀರ್ವದಿಸುವುದನ್ನು ಮುಂದುವರಿಸುತ್ತದೆ. ನೀವು ಮುಂದುವರಿಯುತ್ತೀರಿ ಮತ್ತು ಸಾಕಷ್ಟು ಪ್ರಗತಿ ಹೊಂದುತ್ತೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಹಿಮಾಚಲ ಬೆಳೆಯುತ್ತದೆ, ಭಾರತ ಬೆಳೆಯುತ್ತದೆ ಮತ್ತು ನೀವೆಲ್ಲರೂ ಸಹ ಬೆಳೆಯುತ್ತೀರಿ. ಇದೇ ನಂಬಿಕೆಯಿಂದ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಈ ಭವ್ಯವಾದ ಕಾರ್ಯಕ್ರಮ ಆಯೋಜಿಸಿದ ಸರ್ಕಾರಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಧನ್ಯವಾದಗಳು.

*****