Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2017ರ ನಾಗರಿಕ ಸೇವಾ ದಿನದಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತಾ ಪ್ರಶಸ್ತಿಗಳ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ.

2017ರ ನಾಗರಿಕ ಸೇವಾ ದಿನದಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತಾ ಪ್ರಶಸ್ತಿಗಳ ಸಮಾರಂಭದಲ್ಲಿ ಪ್ರಧಾನ  ಮಂತ್ರಿಯವರು ಮಾಡಿದ ಭಾಷಣ.


ನಮಸ್ಕಾರ

ಇಂದು ಅಖಿಲ ಭಾರತ ನಾಗರಿಕ ಸೇವಾ ದಿನ. ಇದನ್ನು ಪುನರ್ ಸಮರ್ಪಣಾ ದಿನವನ್ನಾಗಿ ಆಚರಿಸಬಹುದು. ಈ ಸಂಧರ್ಭದಲ್ಲಿ ನಾನು ಶ್ರೇಷ್ಠ ನಾಗರಿಕ ಸೇವಾ ವೃತ್ತಿಯಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡ ಪ್ರತಿಭಾವಂತರನ್ನು ಅಭಿನಂದಿಸಲು ಹೆಮ್ಮೆ ಪಡುತ್ತೇನೆ.

ಇಲ್ಲಿ ಸೇರಿರುವ ಪ್ರಖ್ಯಾತರು ಇರುವ ಸಭೆ, ದೇಶದ ಎಲ್ಲಾ ಭಾಗಗಳ ವೈವಿಧ್ಯಮಯ ಅನುಭವಗಳನ್ನು ಪ್ರತಿನಿಧಿಸುತ್ತದೆ. ನಾಗರಿಕ ಸೇವಾಧಿಕಾರದ ಚಿಹ್ನೆಯ ಮೂಲಕ ನೀವೆಲ್ಲರೂ ಅಧಿಕಾರಗಳು, ಸವಾಲುಗಳು,ಜವಾಬ್ದಾರಿಗಳ ಬಗ್ಗೆ ಗಮನಹರಿಸಿದ್ದೀರಿ. ಈಗಿರುವ ನಾಗರಿಕ ಸೇವಾ ವ್ಯವಸ್ಥೆಯಿಂದ ರಾಷ್ಟ್ರಕ್ಕೆ ಲಾಭವಾಗಿರುವುದು ಕಂಡುಬರುತ್ತದೆ. ಆದಾಗ್ಯೂ ಕಾಲ ಬದಲಾಗಿದೆ. ಇಂದಿನ ಬದುಕನ್ನು ಒಂದೂವರೆ ದಶಕದ ಹಿಂದೆ ಇದ್ದ ಸಾಮಾನ್ಯ ಮನುಷ್ಯನ ಬದುಕಿಗೆ ಹೋಲಿಸಿಕೊಳ್ಳಲಾಗದು. ಇಂದಿನಿಂದ ಇನ್ನು ಐದು ವರ್ಷಗಳ ನಂತರ ನಾವು ಒಟ್ಟಾರೆ ಬೇರೆಯದೇ ಆದ ಜಗತ್ತನ್ನು ಕಾಣಬೇಕಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಸರಕಾರ ನಾಗರಿಕರ ಪ್ರತೀ ಅಗತ್ಯವನ್ನು ಪೂರೈಸುವ ಪೂರೈಕೆದಾರ ಆಗಿತ್ತು. ಶಾಲೆಗಳು ಮತ್ತು ಆಸ್ಪತ್ರೆಗಳು,ಕಚ್ಚಾ ವಸ್ತುಗಳಾದ ಸಿಮೆಂಟ್, ಕಬ್ಬಿಣ ಅಥವಾ ಉಕ್ಕು ಇರಲಿ ಸರಕಾರ ನಾಗರಿಕರ ಎಲ್ಲ ಅಗತ್ಯಗಳನ್ನು ಪೂರೈಸುವ ಎಲ್ಲವೂ ಆಗಿತ್ತು.ಏಕಸ್ವಾಮ್ಯದ ಧೋರಣೆ ಇರುವ ಪರಿಸ್ಥಿತಿಯಲ್ಲಿ ಆ ವ್ಯವಸ್ಥೆಯೊಳಗೆ ಜಡತ್ವ ಮತ್ತು ಭ್ರಷ್ಟಾಚಾರ ಬೆಳೆಯುತ್ತದೆ ಎಂಬುದು ಜನಜನಿತ ವಸ್ತು ಸ್ಥಿತಿ. ಜಾಗತೀಕರಣ ಜನರಿಗೆ ಪರ್ಯಾಯಗಳನ್ನು ಒದಗಿಸುವ ತನಕ ಸರಕಾರವನ್ನೇ ಎಲ್ಲದಕ್ಕೂ ಅವಲಂಬಿಸಬೇಕಿತ್ತು. ಜನತೆ ಈಗ ಖಾಸಗಿ ಮತ್ತು ಸರಕಾರದ ಆಯ್ಕೆಗಳ ಅವಕಾಶ ಪಡೆದಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಅವರೀಗ ಖಾಸಗಿ ವಿಮಾನ ಯಾನ ಸಂಸ್ಥೆಗಳು ಮತ್ತು ಸರಕಾರಿ ವಿಮಾನಯಾನ ಸಂಸ್ಥೆಗಳ ಗುಣಮಟ್ಟ ತುಲನೆ ಮಾಡಬಲ್ಲರು. ಅವರು ಖಾಸಗಿ ವಲಯದ ಚುರುಕು , ಲವಲವಿಕೆಯ ಕಾರ್ಯಚಟುವಟಿಕೆಯ ಬಗ್ಗೆ ಅರಿತುಕೊಂಡು ಅದರಿಂದಾಗಿ ಸರಕಾರದ ಕಳಪೆ ಗುಣಮಟ್ಟದ ಸೇವೆಯಿಂದ ಹೊರ ನಡೆಯಬಲ್ಲರು. ಇಲ್ಲಿ ಪರ್ಯಾಯವಾಗಿ ಖಾಸಗಿ ರಂಗ ಹುಟ್ಟಿಕೊಂಡಿದೆ.

ಈ ಮೊದಲು ಅವರು ಸರಕಾರಿ ವೈದ್ಯರ ಸೇವೆಯಿಂದ ಸಂತೃಪ್ತರಾಗುತ್ತಿದ್ದರು. ಅವರ ನಗು, ಸಾಂಧರ್ಭಿಕವಾಗಿ ರಕ್ತದೊತ್ತಡ ಅಳೆದು ದಾಖಲಿಸುವುದರಿಂದ ಅವರು ಅವರ ಆರೋಗ್ಯದ ಬಗ್ಗೆ ಧನಾತ್ಮಕ ಭಾವನೆ ಹೊಂದುತ್ತಿದ್ದರು. ಈಗ ಹಲವು ಭೇಟಿಗಳ ನಂತರವೂ ಜನರು ಸರಕಾರಿ ವೈದ್ಯರನ್ನು ಸಮಾಲೋಚಿಸಿದ್ದಕ್ಕಾಗಿ ವಿಷಾಧಿಸುತ್ತಾರೆ. ಮತ್ತು ಖಾಸಗಿ ವೈದ್ಯರಲ್ಲಿಗೆ ಎರಡನೆ ಅಭಿಪ್ರಾಯ ಪಡೆಯಲು ಹೋಗುತ್ತಾರೆ. ಕಳೆದ 15-20 ವರ್ಷಗಳಲ್ಲಿ ಅವರಿಗೆ ’ಪರ್ಯಾಯ’ವಾದುದು ದೊರೆತಿದೆ. ಪರ್ಯಾಯವಾದುದರ ಲಭ್ಯತೆ ಉತ್ತರದಾಯಿತ್ವವನ್ನು ಮತ್ತು ಎಲ್ಲ ಸರಕಾರಿ ಅಧಿಕಾರಿಗಳ ಜವಾಬ್ದಾರಿಯನ್ನು,ಅದರಲ್ಲೂ ನಾಗರಿಕ ಸೇವಾ ಅಧಿಕಾರಿಗಳ ಜವಾಬ್ದಾರಿಯನ್ನು ಹಿಂದಿನ ದಶಕಗಳಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಿಸಿದೆ. ಕೆಲಸದ ಒತ್ತಡ ಹೆಚ್ಚಿರುವುದು ಮಾತ್ರವಲ್ಲ, ಸವಾಲುಗಳೂ ಹೆಚ್ಚು ಸಂಕೀರ್ಣವಾಗಿವೆ. ಈ ಸವಾಲುಗಳನ್ನು ಎದುರಿಸುವಲ್ಲಿ ನಾವು ತಕ್ಕಷ್ಟು ಸಾಮರ್ಥ್ಯ ಹೊಂದಿಲ್ಲ ಎಂಬ ಭಾವನೆ ಕಾಡುತ್ತದೆ.

ಗುಣಾತ್ಮಕ ಬದಲಾವಣೆಗಳನ್ನು ತರಬೇಕಾದರೆ ವ್ಯವಸ್ಥೆಯೊಳಗೇ ಸ್ಪರ್ಧಾತ್ಮಕತೆ ಮುಖ್ಯ ಪಾತ್ರವಹಿಸುತ್ತದೆ. ಆಶೋತ್ತರಗಳಿಲ್ಲದ, ತುಲನಾತ್ಮಕ ವಿಶ್ಲೇಷಣೆ ರಹಿತ ಮತ್ತು ಚಲನಶೀಲವಲ್ಲದ ವ್ಯವಸ್ಥೆಯಲ್ಲಿ ಪ್ರತಿಯೊಂದೂ ಬಿಗಿ ಮುಷ್ಟಿ ಹೊಂದಿರುವಂತೆ ಕಾಣುತ್ತದೆ. ಆದರೆ ಸ್ಪರ್ಧಾತ್ಮಕ ಪರಿಸರದಲ್ಲಿ ಕಾರ್ಯಾಚರಿಸಲು ಅತ್ಯವಶ್ಯವಾದ ಉತ್ತೇಜನ, ರಭಸ ದೊರೆಯುವುದರಿಂದ ಪರಿಮಾಣಾತ್ಮಕ ಪ್ರಗತಿ ಸಾಧ್ಯವಾಗಲಿದೆ. ಇದರರ್ಥ ನಾವು ಯಾರನ್ನೋ ಕೆಳಗೆಳೆದು ಹಾಕಿ ಇನ್ನಾರಿಗೋ ಜಾಗ ಮಾಡಿಕೊಡುತ್ತೇವೆ ಎಂದಲ್ಲ. ಬದಲು ನಾವು ಒಟ್ಟಾಗಿಯೇ ನಮ್ಮನ್ನು ಬೆಳೆಸಿಕೊಳ್ಳಬೇಕು. ಈಗ ತಕ್ಷಣದ ಅಗತ್ಯವೆಂದರೆ ನಮ್ಮ ಕೆಲಸದ ಶೈಲಿಯನ್ನು ಮತ್ತು ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು. ನಾವು ನಿಯಂತ್ರಕ ವ್ಯವಸ್ಥೆಯಿಂದ ಅಸ್ತಿತ್ವಕ್ಕೆ ಅವಕಾಶ ಕೊಡುವ ಹಂತಕ್ಕೆ ಬಂದಿದ್ದೇವೆ. ನಾವು ಇದನ್ನು ಮಾಡುತ್ತಲೇ , ಅವೇ ಸವಾಲುಗಳು ನಮಗೆ ಅವಕಾಶಗಳಾಗಿ ಬದಲಾಗುತ್ತವೆ. ನಾವು ಆಡಳಿತದ ಪರಿಸರ ವ್ಯವಸ್ಥೆಯನ್ನು ರೂಪಿಸುವುದರತ್ತ ಗಮನ ಹರಿಸಬೇಕು. ಇದೇ ಸರಕಾರ ಒಂದು ಹೊರೆಯಾಗುವುದಕ್ಕೆ ಬದಲು ಅನುಕೂಲಕರ ಎನ್ನುವಂತಾಗಬೇಕು. ನಾವು ನಮ್ಮ ದೃಷ್ಟಿಕೋನವನ್ನು ಒಳ್ಳೆಯ ಆಡಳಿತ ನೀಡುವತ್ತ ಬದಲಿಸಿಕೊಂಡದ್ದೇ ಆದಲ್ಲಿ, ಸದ್ಯೋಭವಿಷ್ಯದಲ್ಲಿ ಇದು ನಿಜವಾಗಲಿದೆ.

ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳು ಈಗಾಗಲೇ ಆರಂಭಗೊಂಡಿವೆ.ಇದಕ್ಕೆ ಸಾಕ್ಷಿ ಈ ಪುನರ್ ರೂಪಿಸಿದ ನಾಗರಿಕ ಸೇವಾ ದಿನ. ಇದನ್ನು ಹೇಗೆ ಸಾಧಿಸಲಾಯಿತು?. ಪ್ರಧಾನಿಯರ ಮನಸೋ ಇಚ್ಚೆ ಮತ್ತು ಶೋಕಿಯಿಂದ ಆದುದಲ್ಲ. ತೀರಾ ಲೌಕಿಕ ಆಚರಣೆಯಂತಿದ್ದ ಇದು ನವೀನ ರೀತಿಯ ಚಿಂತನೆ ಮತ್ತು ಸೃಜನಾತ್ಮಕ ಆಲೋಚನೆಗಳಿಂದ ಸಂಭ್ರಮವಾಯಿತು. ನಾವು ಕಲ್ಪನೆಯನ್ನು ಸೇರಿಸಿದರೆ, ಪೂರ್ಣ ಮನಸ್ಸಿನಿಂದ ವ್ಯವಹರಿಸಿದರೆ, ಸಂಪರ್ಕ ಸಾಧಿಸಿದರೆ, ಭವಷ್ಯತ್ತಿನ ಕುರಿತು ದೂರದೃಷ್ಟಿ ಹೊಂದಿದ್ದರೆ ನಮ್ಮ ಎಲ್ಲ ಅವಕಾಶಗಳಿಗೆ ನವ ಚೈತನ್ಯ ಸಿಗುತ್ತದೆ.ನಾವು ಬದಲಾವಣೆಗಳನ್ನು ಮೆಚ್ಚಿದರೆ ಆಗ ಇಂತಹ ಧನಾತ್ಮಕ ಭಾವನೆಗಳು ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಅನುವಂಶೀಯವಾಗುತ್ತವೆ.

ವ್ಯವಸ್ಥೆಯೊಳಗೆ ಇದ್ದುಕೊಂಡು ಅನುಭವ ಪಡೆಯುವುದು ಮತ್ತು ಬದಲಾವಣೆಯನ್ನು ತರುವುದು ಮುಖ್ಯ. ನೀವೆಲ್ಲರೂ ಒಂದೇ ವ್ಯವಸ್ಥೆಯ ಉತ್ಪನ್ನಗಳಾಗಿರುವುದರಿಂದ ಅದು ನಿಮಗೆ ಉತ್ತಮ ಪಾಠವನ್ನು ಕಲಿಸುತ್ತದೆ. ತಳ ಮಟ್ಟದಿಂದ ನಿಮ್ಮನ್ನು ನೀವು ಬೆಳೆಸಿಕೊಳ್ಳಬೇಕು. ಮೊದಲು ಗ್ರಾಮ ಮಟ್ಟದಲ್ಲಿ ಕೆಲಸ ಮಾಡಿ ನಂತರ ಜಿಲ್ಲಾ ಮಟ್ಟದಲ್ಲಿ ಕೆಲಸ ನಿರ್ವಹಿಸಬೇಕು.ಕೆಲವರು ಜಿಲ್ಲಾ ಮಟ್ಟದಲ್ಲಿ ಮಾತ್ರ ಕೆಲಸ ಮಾಡಿದವರು ಇರಬಹುದು.ಪ್ರತಿಯೊಬ್ಬರೂ ಕೆಲಸದ ಮಹತ್ವ ಮನಗಂಡು ಪ್ರವೇಶ ಪತ್ರ ಕಳುಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ವರದಿಗಳನ್ನು ನೋಡಿದಾಗ ಈ ಪ್ರವೇಶಗಳ ಭಾರೀ ನೆಗೆತ ನನಗೆ ಗುಣನಾತ್ಮಕ ವಿಶ್ಲೇಷಣೆಗೆ ಹೋಗಬೇಕು ಎಂಬ ಚಿಂತನೆ ಮೂಡುವಂತೆ ಮಾಡಿದೆ. ಸಂಖ್ಯೆಯಲ್ಲಿ 100 ರಿಂದ 500 ಕ್ಕೆ ಹೆಚ್ಚಳ ಆಗಿದೆ.ಇಲ್ಲಿ ಉತ್ತಮ ಗುಣಮಟ್ಟದ ಸಾಧನೆಯ ಜತೆಗೆ ಮೆರಿಟ್ ಗಳಿಸದವರ ವರದಿಗಳೂ ಇವೆ. ಆ ವರದಿಗಳನ್ನು ಟಿ.ವಿ. ನೇರ ಪ್ರಸಾರದಲ್ಲಿ ಬಹಿರಂಗ ಮಾಡುವುದು ಸರಿಯಲ್ಲ. ಆದಾಗ್ಯೂ ಬದಲಾವಣೆ ಆರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಸಂಖ್ಯೆಯಲ್ಲಿ ಹೆಚ್ಚಳ ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ. ನಾನು ಇನ್ನೊಂದು ವರ್ಷದಲ್ಲಿ ಗುಣಾತ್ಮಕ ಬದಲಾವಣೆ ತರುವುದನ್ನು ಆಶಿಸುತ್ತೇನೆ. ಅಲ್ಲಿ ಅತ್ಯುತ್ತಮ ದರ್ಜೆಗಿಂತ ಕೆಳಗಿನ ಯಾವುದೇ ಪ್ರವೇಶ ಇರಬಾರದು, ಯಾಕೆಂದರೆ ಈಗ ಈ ಯಂತ್ರದ ಭಾಗವಾಗಿರುವವರು ಅವರು ಅತ್ಯುತ್ತಮರೆಂಬ ಎಂಬ ಕಾರಣದಿಂದಾಗಿಯೇ ಇಲ್ಲಿಗೆ ತಲುಪಿದ್ದಾರೆ.

ಅವರು ಕೋಚಿಂಗ್ ತರಗತಿಗಳಿಗೆ ಹಾಜರಾಗಿರಬಹುದು, ಆದರೂ ಅವರು ಇಲ್ಲಿರುವುದಕ್ಕೆ, ಅವರು ಅತ್ಯುತ್ತಮ ಸಾಧಕರಾಗಿರುವುದೊಂದೇ ಕಾರಣ. ಶ್ರೇಷ್ಠತೆಗೆ ತನ್ನದೇ ಬೆಲೆ ಇದೆ.ನೀವು ಕಳಪೆ ಸಾಧನೆ ಮಾಡಿ ದಕ್ಕಿಸಿಕೊಳ್ಳುವಂತಿಲ್ಲ.ನಾವು ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ಕೊಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ನೀವು ಗೃಹಿಣಿಯರನ್ನು ಗಮನಿಸಿರಬಹುದು. ಅವರ ಕೌಶಲ್ಯ ಮತ್ತು ಪ್ರತಿಭೆ ಕುಟುಂಬದಲ್ಲಿ ಪರಿಗಣನೆಗೆ ಬರುವುದೇ ಇಲ್ಲ. ದುರ್ದೈವವಶಾತ್ ಕುಟುಂಬ ಇದ್ದಕ್ಕಿದ್ದಂತೆ ತನ್ನ ಮುಖ್ಯಸ್ಥನನ್ನು ಕಳೆದುಕೊಂಡರೆ ಆಕೆ ತನ್ನ ಮನೆಯ ಮತ್ತು ಮನೆಯ ವ್ಯವಹಾರದ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆಕೆ ತನ್ನ ಮಕ್ಕಳನ್ನು ಸಾಕುವುದಲ್ಲದೇ ಕುಟುಂಬದ ವ್ಯವಹಾರ/ಉದ್ಯಮವನ್ನು ಮುನ್ನಡೆಸಿಕೊಂಡು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾಳೆ.ಆಕೆ ನೆರೆ ಕರೆಯ ಪುರುಷರು ನಾಚುವಂತೆ ಕೌಶಲ್ಯದಿಂದ ಕುಟುಂಬವನ್ನು ನಿಭಾಯಿಸುತ್ತಾಳೆ. ಕೆಲ ಸಮಯದ ಹಿಂದೆ ಆಕೆ ಅಗಾಧವಾದುದನ್ನು ಕಳೆದುಕೊಂಡಿದ್ದಳು, ಆಕೆಯಲ್ಲಿ ಜನ್ಮಜಾತ ಶಕ್ತಿ ಇತ್ತು, ಆಕೆ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿದಳು, ಜವಾಬ್ದಾರಿಗಳನ್ನು ನಿಭಾಯಿಸಿದಳು. ಅದೇ ರೀತಿ ನಿಮ್ಮಲ್ಲಿ ಕೆಲವರು ನಾಗರಿಕ ಪರೀಕ್ಷೆಗಳಿಗೆ ಹಾಜರಾಗುವಾಗ ಭಾರೀ ಒತ್ತಡ ಅನುಭವಿಸಿರಬಹುದು. ಈಗ ನಿಮಗೆ ಸಾರ್ವಜನಿಕ ಆಡಳಿತದ ಚುಕ್ಕಾಣಿ ನೀಡಲಾಗಿದೆ.ಈ ಜೀವಮಾನ ಪೂರ್ತಿಯ ಅವಕಾಶ ನೀವು ಹೊಸ ಮತ್ತು ತಾಜಾ ದೃಷ್ಟಿಕೋನವನ್ನು ಬೆಳೆಸಿಕೊಂಡರೆ ಬಹುಮುಖೀ ಅವಕಾಶಗಳನ್ನು ನಿಮ್ಮೆದುರು ತೆರೆದಿಡಲಿದೆ. ನೀವು ಈ ಅವಕಾಶವನ್ನು ಪೂರ್ಣ ಮನಸ್ಸಿನಿಂದ ಆಲಂಗಿಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ಕೆಲವೊಮ್ಮೆ ಶ್ರೇಣೀಕೃತ ವ್ಯವಸ್ಥೆ ಹೊರೆಯಾಗುತ್ತದೆ. ಬ್ರಿಟೀಶರ ಕಾಲದಿಂದ ಬಳುವಳಿಯಾಗಿ ಬಂದ ಈ ಪದ್ದತಿ ಈಗಲೂ ಮುಸ್ಸೋರಿಯಲ್ಲಿ ತನ್ನ ಬೇರುಗಳನ್ನು ಉಳಿಸಿಕೊಂಡಿರುವುದು ದುರದೃಷ್ಟಕರ. ನಾವು ಈಗಲೂ ಸರ್ವತರ್ಕ ವಾದವನ್ನು ಅಧಿಕಾರ ಶಾಹಿಯಲ್ಲಿ ಎದುರಿಸುತ್ತೇವೆ. ಅನುಭವದ ಹೊರೆ ’ನನಗದೆಲ್ಲ ಗೊತ್ತು’ ,”ನಮ್ಮ ಕಾಲದಲ್ಲಿ ಹೀಗಿತ್ತು’ ’ನಾವು ಬಹಳ ಹಿಂದಿನಿಂದ ಇಲ್ಲಿದ್ದೇವೆ, ನೀವು ಹೊಸಬರು’, ’20 ವರ್ಷಗಳ ಹಿಂದೆ ಜಿಲ್ಲೆಗಳಲ್ಲಿ ಆಡಳಿತ ಮಾಡಿದ್ದೇವೆ’ ಎಂಬ ಮಾತುಗಳು ಕೇಳಿ ಬರುವಂತೆ ಮಾಡುತ್ತಿದೆ. ಇದು ತಂಡಗಳಿಂದ ತಂಡಗಳಿಗೆ ವರ್ಗಾವಣೆಯಾಗುತ್ತಿದ್ದರೆ, ಹಿರಿಯರು ಈ ಅನುಭವದ ಹೊರೆಯನ್ನು ತೆಗೆದು ಹಾಕಲು ಸಕಾಲ ಎಂದು ಭಾವಿಸಬೇಕು.ಈ ಅನುಭವದ ಭಾರ ಹೊಸತನದ ಅನ್ವೇಷಣೆಗೆ ಮತ್ತು ಪ್ರಯೋಗಶೀಲತೆಗೆ ಅಡ್ಡಿಯಾಗಬಾರದು.

ನಮ್ಮ ವ್ಯವಸ್ಥೆ ಉನ್ನತ ಹುದ್ದೆಗಳಲ್ಲಿ ಅಸುರಕ್ಷತೆಯನ್ನುಂಟು ಮಾಡುತ್ತಿದೆಯೇ ?. ಈಗ ನಾನು ಕಾರ್ಯದರ್ಶಿ ಸ್ತರದಲ್ಲಿರುವಾಗ 20 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ನಾನು ಆರಂಭಿಸಿದ ಕೆಲಸಗಳನ್ನು ಯುವಕ ಅಧಿಕಾರಿ ಪೂರೈಸುತ್ತಾನೆಯೇ ಎಂಬ ಚಿಂತೆ ಬಾಧಿಸುತ್ತದೆಯೇ, ನಾನು ಮಾಡಲಾಗದ್ದನ್ನು ಆ ಯುವಕ ಅಧಿಕಾರಿ ಮಾಡಿದ ಎಂದು ಯಾರಾದರೂ ನನ್ನನ್ನು ಚುಚ್ಚುತ್ತಾರೆಯೇ, ಯಾರಾದರೂ ನನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆಯೇ?. ಆಗ ನಿಮ್ಮ ಈ ಧೋರಣೆಯೇ ಉದ್ಯೋಗದ ಪಥದಲ್ಲಿ ರಸ್ತೆ ತಡೆಗಳನ್ನು ನಿರ್ಮಿಸುತ್ತದೆ.ನಾವು ಸತ್ಯವನ್ನು ಎದುರಿಸುವ.!. ನಾನು ಕೆಲಸ ಪೂರ್ಣಗೊಳಿಸದೆ ಹೋದ ಜಿಲ್ಲೆಯನ್ನು ಬಿಟ್ಟು ಬೇರೊಂದು ಜಿಲ್ಲೆಯಲ್ಲಿ ಕೆಲಸ ಮಾಡಬಹುದು.ಅದೇ ಜಿಲ್ಲೆಯಲ್ಲಿ ಇನ್ನೊಬ್ಬರ ಯಶಸ್ಸನ್ನು ಜೀರ್ಣಿಸಿಕೊಳ್ಳಲು ನಿಮಗೆ ಕಷ್ಟವಾಗುತ್ತದೆಯೇ?. ಒಪ್ಪಿರಿ ಇಲ್ಲವೇ ಬಿಟ್ಟುಬಿಡಿ, ಇದು ಕಹಿ ಸತ್ಯ.

ನಾವು ಹೂಟೆ ಮಾಡಿದ ಭೂಭಾಗಕ್ಕೆ ಯುವಕ ಅನುಷ್ಟಾನಕ್ಕೆ ತಂದ ಸೌಲಭ್ಯಗಳಿಂದ ನೀರಾವರಿ ದೊರೆತರೆ ನಾವು ಹೆಮ್ಮ ಪಡಬೇಕು. ಅಲ್ಲಿ ಇನ್ನೊಬ್ಬ ಗಿಡಗಳನ್ನು ನೆಡಬಹುದು, ಅವನ ಉತ್ತರಾಧಿಕಾರಿ ಅಲ್ಲಿ ತೋಟವನ್ನು ಎಬ್ಬಿಸಬಹುದು.ಅದು ಇನ್ನೊಬ್ಬರ ಪ್ರಯತ್ನದಿಂದ ಫಲಗಳನ್ನು ಕೊಡಬಹುದು.ಇಲ್ಲಿ 5 ಮಂದಿಯ ಪ್ರಯತ್ನಗಳೂ ಮೌಲ್ಯಯುತವಾದವು.ಇವುಗಳಿಂದಾಗಿ ಅಪೇಕ್ಷಿತ ಫಲಿತಾಂಶ ಪಡೆಯುವುದು ಸಾಧ್ಯವಾಯಿತು. ನಾವು ಇಂತಹ ಹೊಂದಾಣಿಕೆಯಿಂದ , ಏಕ ಭಾವದಿಂದ ಕೆಲಸ ಮಾಡಿದರೆ , ಖಂಡಿತವಾಗಿಯೂ ನಾವು ಪ್ರಗತಿ ಸಾಧಿಸುತ್ತೇವೆ. ಈ ಹೊಂದಾಣಿಕೆ ನಮ್ಮ ಪರಂಪರೆಯನ್ನು ಬಲಪಡಿಸುತ್ತದೆ. ಈ ಪ್ರಗತಿಪರ ಕೆಲಸದ ಸಂಸ್ಕೃತಿಯ ದೃಷ್ಟಿಕೋನವನ್ನು ಇನ್ನಷ್ಟು ವಿಸ್ತರಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ನಾಗರಿಕ ಸೇವೆಗಳ ದೊಡ್ಡ ಬಲದ ಬಗ್ಗೆ ನಾನು ಈ ಮೊದಲು ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಬಹುದು. ಇದನ್ನು ಸಾಧಿಸುವುದು ಸಾಮಾನ್ಯ ಸಾಮರ್ಥ್ಯದ ಕೆಲಸ ಅಲ್ಲ.ಗುಜರಾತ್ ನಾಣ್ಣುಡಿಯ ಪ್ರಕಾರ ದುರ್ಬಲ ವ್ಯಕ್ತಿ ಬುದ್ದಿವಂತ ವ್ಯಕ್ತಿಯ ಮೌಲ್ಯವನ್ನು ಅರ್ಥ ಮಾಡಿಕೊಂಡಿರುತ್ತಾನೆ. ನಿಮ್ಮನ್ನು ರಾಜಕಾರಣಿಗಳಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ ಮತ್ತು ಅದು ಅಧಿಕಾರಿಯಾಗಿರುವುದರ ಅಧಿಕಾರ, ಅದನ್ನು ನೀವು ಕಳೆದುಕೊಳ್ಳಬಾರದು. ಇನ್ನೊಂದು ಅನಾಮಿಕತೆ. ಆಡಳಿತದಲ್ಲಿ ಹೊಸ ಆಲೋಚನೆಗಳನ್ನು ಅತ್ಯಂತ ಜತನದಿಂದ ಅಭಿವೃದ್ಧಿಪಡಿಸಿ ದೂರದೃಷ್ಟಿಯೊಂದಿಗೆ ಒಂದು ಚೌಕಟ್ಟಿನಲ್ಲಿ ಜಾರಿಗೆ ತಂದ ಹಲವು ಅಧಿಕಾರಿಗಳು ಇದ್ದಾರೆ. ಇವರಿಂದ ದೇಶಕ್ಕೂ ಲಾಭವಾಗಿದೆ. ಆದರೆ ಈ ಆಲೋಚನೆಯನ್ನು ಮಾಡಿದ ಅಧಿಕಾರಿಗಳನ್ನು ಮತ್ತು ಅದನ್ನು ಸಾಧಿಸಲು ಏನು ಮಾಡಿದರು ಎಂಬುದನ್ನು ಹುಡುಕುವುದು ಕಷ್ಟ ಸಾಧ್ಯವಾಗಿದೆ. ಈ ಅನಾಮಿಕತೆ ನಾಗರಿಕ ಸೇವೆಗಳ ದೊಡ್ಡ ಬಲ. ನಾನು ಅದರ ಅಧಿಕಾರವನ್ನು ಬಲ್ಲೆ. ಪ್ರಾಮಾಣಿಕವಾಗಿ ನೋಡಿ, ಈ ಮೌಲ್ಯಗಳು ಈಗ ಕುಸಿಯುತ್ತಿವೆ ಎಂದು ನಿಮಗನಿಸುತ್ತಿಲ್ಲವೇ?

ನಾನು ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು ಪರಿಗಣಿಸುತ್ತೇನೆ.ಅದರ ಮಹತ್ವವನ್ನು ಮನಗಂಡಿದ್ದೇನೆ, ಆದಾಗ್ಯೂ ನಾಗರಿಕರನ್ನು ಒಳಗೊಂಡಂತೆ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಅದು ತರುವುದಾದರೆ ಮಾತ್ರ ಅದಕ್ಕೆ ಆ ಮಹತ್ವ. ಜನರನ್ನು ಸಶಕ್ತೀಕರಣಗೊಳಿಸಲು ಮತ್ತು ಜಾಗೃತಿ ಮೂಡಿಸಲು ನಾನು ಸಾಮಾಜಿಕ ಮಾಧ್ಯಮವನ್ನು ಬಳಸುವುದಾದರೆ, ಆಗ ಜಿಲ್ಲೆಯಲ್ಲಿ ಬರಲಿರುವ ಲಸಿಕಾ ಕಾರ್ಯಕ್ರಮದ ಬಗ್ಗೆ ಹೇಳುವ, ಆಗ ಇದಕ್ಕೆ ಸಮರ್ಥನೆ ಇರುತ್ತದೆ.ಆದರೆ ಈ ಮಾಧ್ಯಮವನ್ನು ತಾವು ಭಾಗವಹಿಸಿದ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಹಾಕಲು, ತಮ್ಮ ಸಾಧನೆಯನ್ನು ಹೊಗಳಿಕೊಳ್ಳಲು ಬಳಸಿದರೆ ಆಗ ಆನಾಮಿಕತೆ ಅಪಾಯಕ್ಕೆ ಸಿಲುಕುತ್ತದೆ.ಇತ್ತೀಚಿನ ದಿನಗಳಲ್ಲಿ, ನಾನು ಗಮನಿಸಿದ್ದೇನೆ, ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿಗಳು ಸದಾ ಬ್ಯುಸೀ ಇರುತ್ತಾರೆ, ಅವರ ಸಮಯ ತಂತ್ರಜ್ಞಾನವನ್ನು ದುರುಪಯೋಗ ಮಾಡುವುದರಲ್ಲೇ ಕಳೆದು ಹೋಗುತ್ತಿದೆ. ಈ ಕಾರಣಗಳಿಂದಾಗಿ ಇತ್ತೀಚೆಗೆ ನನ್ನ ಸಭೆಗಳಲ್ಲಿ ಈ ಉಪಕರಣಗಳ ಬಳಕೆಯನ್ನು ನಿರ್ಬಂಧಿಸಿದ್ದೇನೆ.ಇಲ್ಲದಿದ್ದರೆ ಅವರ ಗಮನ ಫೋನ್ ಗಳಿಂದಾಗಿ ಚಂಚಲಗೊಳ್ಳುತ್ತಿರುತ್ತದೆ.

ಈ ಉಪಕರಣಗಳನ್ನು, ಸೌಲಭ್ಯಗಳನ್ನು ಜಾಣತನದಿಂದ ಬಳಸುವ ವಿವೇಚನೆ ನಮಗಿದ್ದರೆ ತಂತ್ರಜ್ಞಾನವು ನಮ್ಮ ದೇಶದ ಪ್ರತೀ ನಾಗರಿಕನನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ..

ಜಾಗತಿಕ ಮಟ್ಟದಲ್ಲಿ ಇ-ಆಡಳಿತದಿಂದ ಎಂ –ಆಡಳಿತದವರೆಗೆ ಭಾರೀ ಬದಲಾವಣೆಗಳಾಗಿವೆ. ಮೊಬೈಲ್ ಆಡಳಿತ ಈ ಹೊತ್ತಿನ ಅಗತ್ಯವಾಗಿದೆ. ಮತ್ತು ಅದು ಅನಿವಾರ್ಯವೂ ಆಗಿದೆ. ಆದರೆ ಅದನ್ನು ನಾಗರಿಕರ ಅಗತ್ಯವನ್ನು ಪೂರೈಸಲು ಬಳಸಬೇಕು. ಅನಾಮಿಕತೆ ನಮ್ಮ ಉತ್ಕೃಷ್ಟತೆ ಎಂದು ನಾನು ನಂಬುತ್ತೇನೆ. ಆ ಅದ್ಭುತ ತಾಜಮಹಲ್ ವಿನ್ಯಾಸಗೊಳಿಸಲು ಎಷ್ಟು ಮನಸ್ಸುಗಳು ದುಡಿದಿರಬಹುದು, ಯೋಜನಾ ಹಾಳೆಯ ಹಿಂದಿನ ಮನಸ್ಸಿನ ಬಗ್ಗೆ ಕಲ್ಪಿಸಿಕೊಳ್ಳಿ, ಎಷ್ಟೊಂದು ಕೈಗಳು ವಿಶ್ರಾಂತಿ ಇಲ್ಲದೆ ದುಡಿದು ಈ ’ಮಾಸ್ಟರ್ ಪೀಸ್ ’ ಅನ್ನು ರಚಿಸಿರಬಹುದು. ಇದನ್ನು ನಾವು ಯಾರಾದರೂ ಹೇಳುವ ಸ್ಥಿತಿಯಲ್ಲಿ ಇದ್ದೇವೆಯೇ?. ಆದರೆ ಈ ಅಸಾಧಾರಣ ತಾಜಮಹಲ್ ಈ ಪ್ರದೇಶದ ಜನರ ಪ್ರಯತ್ನಗಳಿಗೆ ಅದ್ಭುತ ಸಾಕ್ಷಿಯಾಗಿದೆ.

ಅದು ಅನಾಮಿಕತೆಯ ಸೌಂದರ್ಯ. ವಿವಿಧ ಮಟ್ಟಗಳಲ್ಲಿ ನೀವು ನಿಮ್ಮ ಅಧಿಕಾರಾವಧಿಯ ಉದ್ದಕ್ಕೂ ಬಹಳಷ್ಟು ಕೆಲಸಗಳನ್ನು ಮಾಡಿರಬಹುದು, ಆದರೆ ನಿಮ್ಮ ನಿವೃತ್ತಿಯ ಸಮಯದಲ್ಲಿ ಕುಳಿತು ನೀವು ನಿಮ್ಮ 5 ಅತಿ ದೊಡ್ದ ಸಾಧನೆಗಳನ್ನು ಲೆಕ್ಕ ಮಾಡಲು ಹೊರಟರೆ , ಅದನ್ನು ನೆನಪಿಸಿಕೊಳ್ಳುವುದಕ್ಕೆ ಕೆಲ ದಶಕಗಳ ನಂತರ ಸಾಧ್ಯವಾಗಲಾರದು. ಇದು ನೀವು ನಿಮ್ಮ ಸೇವೆಗೆ ಸ್ವಾರ್ಥರಹಿತರಾಗಿ ಅರ್ಪಿಸಿಕೊಂಡ ಪರಿ.ಇದು ನಮ್ಮ ದೇಶದ ಮೌಲ್ಯ ಕಟ್ಟಲಾಗದ ಶಕ್ತಿ ಮತ್ತು ನೀವು ಈ ಉತ್ಕೃಷ್ಟತೆಯ ಮಾಲಕರು. ನನಗೆ ಅದರ ಮೌಲ್ಯ ತಿಳಿದಿದೆ.ನಮ್ಮ ಫೋಟೋ ಫ಼್ರೇಮ್ ಸ್ಥಳಾಂತರಗೊಂಡಾಗ ನಾವೆಷ್ಟು ಆತಂಕಕ್ಕೆ ಒಳಗಾಗುತ್ತೇವೆ !. ರಾಷ್ಟ್ರದ ಹಿತಾಸಕ್ತಿಗಾಗಿ ನಮ್ಮ ಗುರುತಿಸುವಿಕೆಯನ್ನು ತ್ಯಾಗ ಮಾಡುವುದು ಸಣ್ಣ ವಿಷಯ ಅಲ್ಲ. ನಾನು ಖಂಡಿತವಾಗಿಯೂ ಈ ಉತ್ಕೃಷ್ಟತೆಯ ಶಕ್ತಿಯನ್ನು ಮೆಚ್ಚುತ್ತೇನೆ. ಹಿರಿಯರು ಶ್ರದ್ದೆಯಿಂದ ಸ್ಥಾಪಿಸಿದ ಸ್ವಾರ್ಥ ರಹಿತ ಸೇವೆಯ ಪರಂಪರೆಯನ್ನು ಹೊಸದಾಗಿ ಸೇವೆಗೆ ಸೇರ್ಪಡೆಗೊಂಡ ಅಧಿಕಾರಿಗಳು ಎತ್ತಿ ಹಿಡಿಯಬೇಕು. ಈ ಹೊಸ ತಂಡದ ಅಧಿಕಾರಿಗಳು ಈ ಗೌರವವನ್ನು ಎತ್ತಿ ಹಿಡಿಯುತ್ತಾರೋ ಅಥವಾ ಅದನ್ನು ಹಾಳುಗೆಡವುತ್ತಾರೋ ಎಂಬುದರತ್ತ ಯಾರಾದರೊಬ್ಬರು ನಿಕಟವಾದ ನಿಗಾ ಇಡಬೇಕು.

ನಾವು ನಾಗರಿಕ ಸೇವಾ ದಿನ ಆಚರಿಸುತ್ತಿರುವಂತೆಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ಸುಧಾರಣೆಗೆ ಹಲವು ಸಮಿತಿಗಳು, ಆಯೋಗಗಳು ರಚನೆಯಾಗಿವೆ. ಆ ವರದಿಗಳನ್ನು ತಯಾರಿಸಿದವರು ಅವುಗಳನ್ನು ಇಡೀಯಾಗಿ ಓದಿರಲಿಕ್ಕಿಲ್ಲ. ಆರು ಮಂದಿ ಬೇರೆ-ಬೇರೆ ಭಾಗಗಳಾಗಿ ಬರೆದಿರಬಹುದು ಮತ್ತು ಇನ್ನೋರ್ವರು ಅದನ್ನು ಒಟ್ಟು ಸೇರಿಸಿರಬಹುದು. ಇದು ಸತ್ಯ. ನೀವು ಇಷ್ಟಪಡಿ, ಅಥವಾ ಇಷ್ಟಪಡದೇ ಇರಿ, ಇದು ವಾಸ್ತವ. ಮತ್ತು ಇಷ್ಟೆಲ್ಲ ಆದ ಬಳಿಕವೂ ಆ ದಾಖಲೆಗಳು ಯಾವ ವಿಳಾಸದಲ್ಲಿವೆ ಎಂಬುದನ್ನು ಹುಡುಕುವುದು ಯಾರಿಗೂ ಸಾಧ್ಯವಿಲ್ಲ. ರಾಜ್ಯಗಳು ಕೂಡಾ ಸುಧಾರಣೆಗಳನ್ನು ತರಲು ಆಯೋಗಗಳನ್ನು ರಚಿಸುತ್ತವೆ. ಕೆಲವರಿಗೆ ನಿವೃತ್ತಿಯ ನಂತರ ಉದ್ಯೋಗ ಸಿಗುತ್ತದೆ. ಆದರೆ ನಿಜವಾದ ಪರಿವರ್ತನೆ ಆಗುವುದೇ ಇಲ್ಲ. ಇಂದು ಕೂಡಾ ನಾನು ನನ್ನ ಅನುಭವದಲ್ಲಿ ಹೇಳಬಲ್ಲೆ, , ಇದು ನನ್ನ ಒಳ್ಳೆಯ ಅದೃಷ್ಟ. ನಿಮ್ಮಂತೆ ನಾನೂ ವ್ಯವಸ್ಥೆಯ ಒಳಗಿದ್ದರೆ, ಅದೂ ಸಾಧ್ಯವಾಗುತ್ತಿರಲಿಲ್ಲ, ಯಾಕೆಂದರೆ ನಾನು ಕೋಚಿಂಗ್ ಕ್ಲಾಸ್ ತೆಗೆದುಕೊಂಡಿಲ್ಲ. ಓರ್ವ ವ್ಯಕ್ತಿ 16 ವರ್ಷ ಕೆಲಸ ಮಾಡಿದರೆ ಆತ ಏನಾಗುತ್ತಾನೆ?. ಆತ ಉಪಕಾರ್ಯದರ್ಶಿಯಾಗಬಲ್ಲ, ನಿರ್ದೇಶಕನಾಗಬಲ್ಲ. ನಾನು ಕಳೆದ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ವ್ಯವಸ್ಥೆಯೊಳಗಿದ್ದರೆ ಡೈರೆಕ್ಟರ್ ಹುದ್ದೆಯಲ್ಲಿರುತಿದ್ದೆ. ನಾನು ನಿಮ್ಮೊಂದಿಗೆ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನನ್ನ ಅಭಿಪ್ರಾಯದ ಪ್ರಕಾರ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು, ಯಾವುದೇ ಆಯೋಗವು ಯಾವುದೇ ಸುಧಾರಣೆಯ ಶಿಫ಼ಾರಸ್ಸನ್ನು ಮಾಡುವುದಕ್ಕಿಂತ ಹೆಚ್ಚಿನ ಅನುಭವ ಹೊಂದಿರುತ್ತಾರೆ.- ಈ ಯೋಚನೆ ಸಂಪೂರ್ಣವಾಗಿ ಸರಿಯಾದುದಲ್ಲ. ನೀವು ಹೊಂದಿರುವ ಯಾವುದೇ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ , ಈ ವ್ಯವಸ್ಥೆಯ ಹೊರಗಿರುವ ಯಾರಿಂದಲೇ ಆದರೂ ಯಾವುದೇ ಉತ್ತಮ ಶಿಫ಼ಾರಸುಗಳು ಬರುವುದು ಸಾಧ್ಯವಿಲ್ಲ. ಆದ್ದರಿಂದ ನಾನು ಆ ಯೋಚನಾ ಕ್ರಮಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ, ಅದನ್ನು ಅನುಸರಿಸುವುದೂ ಇಲ್ಲ.ಇದನ್ನು ನಾವು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬಹುದೇ? ತನ್ನ ಅನುಭವದೊಂದಿಗೆ ಈ ವ್ಯವಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿ, ಪತ್ರ-ಲೇಖನ ಬರೆಯುವಾತ ಈ ವ್ಯವಸ್ಥೆಯ ಒಂದು ಭಾಗ. ನಾನು ಇತ್ತೀಚಿನ ತಂಡದ 4 ಮಂದಿಗೆ ಹೊಸ ಯೋಚನಾ ಕ್ರಮ ಅಭಿವೃದ್ಧಿಯಾಗಬಹುದೆಂದು ಬರೆಯಲು ಹೇಳಿದೆ. ಪ್ರತಿಯೊಬ್ಬರೂ ಬರೆದರು. ಕೆಲವರು ಕಟ್ ಆಂಡ್ ಪೇಸ್ಟ್ ವಿಧಾನ ಅನುಸರಿಸಿದರು. ಆ ಬಗ್ಗೆ ನನಗೆ ಖಾತ್ರಿ ಇಲ್ಲ, ಯಾಕೆಂದರೆ ನಾನದನ್ನು ನೋಡಿಲ್ಲ, ಆದರೆ ಇದು ಮಾನವ ಸ್ವಭಾವ. ಅದರ ಹೊರತಾಗಿಯೂ ಹೊಸತೇನಾದರೂ ಬರಬೇಕು.

ಈ ಕಾರ್ಯಕ್ರಮ ಪದವಿ ಪಡೆಯುವುದಕ್ಕಾಗಿಯೋ, ಅಕಾಡೆಮಿಕ ಶ್ರೇಣಿ ಪಡೆಯುವುದಕ್ಕಾಗಿಯೋ, ಅಥವಾ ಸಂಶೋಧನಾ ಪ್ರಬಂಧಕ್ಕೆ ಮನ್ನಣೆ ಪಡೆಯುವುದಕ್ಕಾಗಿಯೋ ಅಲ್ಲ. ಇಲ್ಲಿ ಏನು ಬಂದಿದೆಯೋ ಅದು ಅನುಭವದಿಂದ ಬಂದಿದೆ.ಕೆಳ ಹಂತದಲ್ಲಿರುವ ವ್ಯಕ್ತಿ ಇದನ್ನು ಹೇಳಿದ್ದಾನೆ.ದಿನನಿತ್ಯ ರೈತರ ಜತೆ ಸಮಯ ಕಳೆಯುವಾತ,ಕಾರಕೂನಿಕೆ ಕೆಲಸ ಮಾಡುವವರ ಜತೆ, ಕಂಪ್ಯೂಟರ್ ಆಪರೇಟರ್ ಗಳ ಜತೆ ಬೆರೆಯುವವರು , ಕಾಲ-ಕಾಲಕ್ಕೆ ಉದ್ಭವಿಸುವ ಬಿಕ್ಕಟ್ಟಿನ ಜತೆ ಏಗುವವರು ಇದನ್ನು ಹೇಳಿದ್ದಾರೆ. ನಾವಿದನ್ನು ಪವಿತ್ರ ಪುಸ್ತಕ ಎಂದು ಪರಿಗಣಿಸಬಹುದೇ? ಇದನ್ನು ಸಾಮಾನ್ಯ ಮನುಷ್ಯ ಹೇಳಿದ್ದರೂ ಸಹ , ಅದು ಅಧಿಕಾರದ ಮೂಲವನ್ನು ಒಳಗೊಂಡಿದೆ.ಇದನ್ನು ನಾವು ನಮ್ಮ ಮನಸ್ಥಿತಿ ಮಾಡಿಕೊಳ್ಳಬಹುದೇ?. ನೀವು ನೋಡಿ, ನಮ್ಮೊಳಗಿನಿಂದ ಕೆಲವು ಚಿಂತನೆಗಳು, ಮಾತುಗಳು ಬಂದರೆ ಅದಕ್ಕೆ ನಾವೇ ಒಡೆಯರಾಗುತ್ತೇವೆ. ಯಾವುದೇ ಯಶಸ್ಸಿಗೆ ಒಡೆತನವೇ ಖಚಿತತೆ ಅಥವಾ ಗ್ಯಾರೆಂಟಿ. ತಂಡವು ತನ್ನ ಮಾಲಕತ್ವವನ್ನು ಮನ್ನಿಸಿದಾಗಲೇ ಅದಕ್ಕೆ ಯಶಸ್ಸು ದೊರೆಯುತ್ತದೆ.ಮಾಲಕತ್ವಗಳ ಸಂಖ್ಯೆ ಹೆಚ್ಚಿದಂತೆ , ಯಶಸ್ಸು ತ್ವರಿತವಾಗಿ ಬರುತ್ತದೆ. ಉತ್ತರದಾಯಿತ್ವ ಕಡಿಮೆಯಾಗುತ್ತದೆ, ಹೊರೆ ತಗ್ಗುತ್ತದೆ, ಮತ್ತು ಪ್ರತೀಯೊಬ್ಬರೂ ಮನ್ನಣೆ ಪಡೆಯುತ್ತಾರೆ. ಈ ಪ್ರಯತ್ನ ಒಂದು ರೀತಿಯ ’ಮಾಲಕತ್ವ ಆಂದೋಲನ’. ಈ ಎರಡು ದಿನಗಳ ಕಾಲ ಬಹಳ ನಿರ್ಣಾಯಕ, ಇದು ನಮ್ಮ ’ಮಾಲಕತ್ವ ಆಂದೋಲನ’ದ ಒಂದು ಭಾಗ. ಪ್ರತಿಯೊಬ್ಬರೂ ಇದು ನನ್ನ ದೇಶ, ನನ್ನ ಸರಕಾರ, ನನ್ನ ಉತ್ತರದಾಯಿತ್ವ ಎಂದು ಭಾವಿಸಿಕೊಂಡು, ಫಲಿತಾಂಶ ತರಬೇಕು, ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು.

ಖಂಡಿತವಾಗಿಯೂ ನಿಮ್ಮನ್ನು ವ್ಯಕ್ತಿಯಾಗಿ ಯಾವಾಗ ಮತ್ತು ಹೇಗೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ಯಾಕೆಂದರೆ ನೀವು ಅ ಸ್ಥಾನದಲ್ಲಿ ಕುಳಿತಿದ್ದೀರಿ. ನಿಮ್ಮಲ್ಲಿ ಏನೂ ಇಲ್ಲದ ಪರಿಸ್ಥಿತಿ ಇದ್ದರೆ ನಿಮ್ಮ ಮೌಲ್ಯ ಮಾಪನ ಸರಿಯಾಗಿ ಆಗಲಾರದು. ನಿಮ್ಮ ಬಳಿ ಎಲ್ಲವೂ ಇದ್ದಲ್ಲಿ ಮೌಲ್ಯ ಮಾಪನ ಸರಿಯಾಗಿ ಆಗಬಲ್ಲುದು. ನಮಗೆ ಏನೂ ಸಿಗದೇ ಇದ್ದರೆ , ಅದು ಹೀಗೆಯೇ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ. ಯಾರೊಬ್ಬರೂ ಇದನ್ನು ಗಮನಿಸುವುದಿಲ್ಲ, ಮಹತ್ವ ಕೊಡುವುದಿಲ್ಲ ಎಂಬ ನಿಲುವಿಗೆ ಬರುತ್ತೇವೆ..ನಿಮ್ಮ ಬಳಿ ಎಲ್ಲ ರೀತಿಯ ಅಧಿಕಾರವಿದೆ, ಇಡೀಯ ಆಡಳಿತ ವ್ಯವಸ್ಥೆ ನಿಮ್ಮ ಕೈಬೆರಳ ತುದಿಯಲ್ಲಿದೆ, ನಿಮ್ಮ ಮಾತಿಗೆ ಶಕ್ತಿ ಇದೆ, ನಿಮ್ಮ ಸಹಿ ನರಕವನ್ನು ಬದಲಿಸಬಲ್ಲುದು. ಹಾಗಿದ್ದರೆ , ಆ ಸ್ಥಿತಿಯಲ್ಲಿ ನೀವೇನು ಮಾಡುತ್ತೀರಿ ಎಂಬುದು ನಿಜವಾದ ಪರೀಕ್ಷೆ. ಮತ್ತು ಆದ್ದರಿಂದ ಓರ್ವ ವ್ಯಕ್ತಿಯನ್ನು ಆತನಿಗೆ ಅಧಿಕಾರ ಇಲ್ಲದಿರುವ ಸ್ಥಿತಿಯಲ್ಲಿ ಸರಿಯಾಗಿ ಮೌಲ್ಯಮಾಪನ ಮಾಡಲಾಗದು, ಸರಿಯಾದ ಮೌಲ್ಯ ಮಾಪನ ಮಾಡಬೇಕಿದ್ದರೆ ಆ ವ್ಯಕ್ತಿ ಎಲ್ಲ ಅಧಿಕಾರವನ್ನು ಹೊಂದಿರಬೇಕು.

ಹೆಚ್ಚು ಕಡಿಮೆ , ದೇಶದಲ್ಲಿ ನಾವು ಇಂತಹ ಪರಿಸ್ಥಿತಿಯನ್ನು ದಾಟಿ ಬಂದಿದ್ದೇವೆ, ಕೆಲವು ಕೊರತೆಗಳು ಇದ್ದಾಗ ಪರಿಹಾರದ ದಾರಿ ಹೇಗೆ ಹುಡುಕಬೇಕು ಎಂಬುದು ನಮ್ಮಲ್ಲಿ ಹಲವರಿಗೆ ಗೊತ್ತಿದೆ. ಆದರೆ ಸಾಕಷ್ಟು ವ್ಯವಸ್ಥೆಗಳು ಇದ್ದಾಗ, ದೊಡ್ಡ ವ್ಯಾಪ್ತಿಯಲ್ಲಿ ಪರಿಹಾರದ ಬಗ್ಗೆ ನಾವು ಯೋಚಿಸಿದ್ದಿಲ್ಲ. ಅವರಿಗೆ ಬರವನ್ನು, ಕ್ಷಾಮವನ್ನು ಹೇಗೆ ಸರಿಯಾಗಿ ನಿಭಾಯಿಸಬೇಕು ಎಂಬುದು ಗೊತ್ತಿದೆ, ಆದರೆ ಹೆಚ್ಚು ಬೆಳೆ ಬಂದರೆ ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿಲ್ಲ. ಅಲ್ಲಿ ಅವರು ಹಾದಿ ತಪ್ಪುತ್ತಾರೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿಯುವ ಸೀಟುಗಳನ್ನು ಹೇಗೆ ಭರ್ತಿ ಮಾಡಬೇಕು ಎಂಬುದು ಅವರಿಗೆ ಗೊತ್ತು, ಆದರೆ ಸೀಟುಗಳ ಕೊರತೆ ಉದ್ಭವಿಸಿದಾಗ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಅದನ್ನು ನಿರ್ವಹಿಸುವುದು ಹೇಗೆ ?. ಆಗ ಅವರು ಗೊಂದಲಕ್ಕೆ ಸಿಲುಕುತ್ತಾರೆ.

ದೇಶ ಇಂದು ಅಭಿವೃದ್ಧಿ ಹೊಂದುತ್ತಿರುವ ರೀತಿಯಲ್ಲೇ ಸಾಮಾನ್ಯ ಜನರ ಆಶೋತ್ತರಗಳೂ ಹೆಚ್ಚುತ್ತಿವೆ. ಕೆಲವೊಮ್ಮೆ ಸಮೃದ್ಧಿ ಅಥವಾ ಸಾಕಷ್ಟು ಲಭ್ಯತೆ ಕಣ್ಣಿಗೆ ರಾಚುತ್ತದೆ. ಒಂದೆಡೆ ಕಾರಂಜಿಗಳಲ್ಲಿ ನೀರು ಪೋಲಾಗುತ್ತಿರುತ್ತದೆ ಮತ್ತು ಅದೇ ಸಮಯದಲ್ಲಿ ಕಡಿಮೆ ನೀರಿನಲ್ಲಿ ಸ್ನಾನ ಮಾಡಬೇಕೆಂದು ನೋಟೀಸು ಹೊರಡಿಸಿದರೆ, ಆಗ ಅದನ್ನು ಪಾಲಿಸುವುದು ಕಷ್ಟವಾಗುತ್ತದೆ. ಹೆಚ್ಚುವರಿ ಇದ್ದಾಗ ಅಥವಾ ಹೆಚ್ಚುವರಿಯ ಸಾಧ್ಯತೆ ಇದ್ದಾಗ ಅದಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯನ್ನು ಬದಲಿಸಬಲ್ಲೆವೇ?. ಅದಾಗದಿದ್ದರೆ ನಾವು ಬೆಳೆಯಲು ಸಾಧ್ಯವಿಲ್ಲ. ನಮ್ಮ ಯೋಚನಾ ಕ್ರಮ ಸ್ಥಗಿತಗೊಳ್ಳುತ್ತದೆ. ನಾವು ಅಂತಹ ಸವಾಲುಗಳನ್ನು ಎದುರಿಸಿ ಮುಂದಡಿ ಇಡಬೇಕು.

ಆರಂಭದಲ್ಲಿ ನಾನು ಹೇಳಿದಂತೆ , ನಾವು ಪ್ರತ್ಯೇಕವಾಗಿ, ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನೊಂದು ಜಿಲ್ಲೆಯ ಜತೆಯೂ ಸ್ಪರ್ಧೆ ಇಲ್ಲದಂತಹ ಸ್ಥಿತಿಯಲ್ಲಿದ್ದೇವೆ. ಈ ಜಿಲ್ಲೆಯಲ್ಲಿ ಬೇಕಾದಷ್ಟು ನೀರಿದೆ, ಮತ್ತು ಬೆಳೆ ಉತ್ತಮವಾಗಿದೆ. ಆ ಜಿಲ್ಲೆ ಬರಡು, ಆದ್ದರಿಂದ ಅಲ್ಲಿ ಕೃಷಿ ಸಾಧ್ಯವಿಲ್ಲ, ಹಾಗೆ ಆಗುತ್ತದೆ, ನಾನು ಮತ್ತು ನನ್ನ ಹಿರಿಯರು ಹೀಗೆಯೇ ಮಾಡಿದ್ದರು, ಅದು ಇರುವುದೇ ಹೀಗೆ. ಈಗ ಜಿಲ್ಲೆಗಳು ಮಾತ್ರವಲ್ಲ ಇಡೀ ಜಗತ್ತೇ ಬದಲಾಗಿದೆ, ಈಗ ರಾಜ್ಯಗಳ ಮಧ್ಯೆ ಮತ್ತು ದೇಶಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿದೆ. ನಿನ್ನೆ ಮತ್ತು ಇಂದಿನ ನಡುವೆಯೂ ಸ್ಪರ್ಧೆ ಬಂದಿದೆ.ಪ್ರತೀ ಕ್ಷಣದಲ್ಲಿ ಮತ್ತು ಜಾಗತಿಕ ಹಿನ್ನೆಲೆಯಲ್ಲಿ ಬರುವ ಸವಾಲುಗಳನ್ನು ಎದುರಿಸಲು ನಾವು ಎದ್ದು ನಿಲ್ಲಬೇಕಾಗಿದೆ.

ನಾಗರಿಕ ಸೇವಾ ಅಧಿಕಾರಿಗಳ ಇನ್ನೊಂದು ಶಕ್ತಿ ಎಂದರೆ, ನಾನು ತಿಳಿದುಕೊಂಡ ಹಾಗೆ ಅವರ ಕರ್ತವ್ಯ ನಿಷ್ಠೆ. ನಾಗರಿಕ ಸೇವಾ ಅಧಿಕಾರಿಗೆ ಅದು ಧರ್ಮವಿದ್ದಂತೆ. ಆ ಧರ್ಮದಿಂದ ದೂರ ಹೋಗಲು ಆತನಿಗೆ ಹಕ್ಕು ಇಲ್ಲ.ಜಿಲ್ಲೆಯಲ್ಲಿರಲಿ, ತಾಲೂಕಿನಲ್ಲಿರಲಿ ಅಥವಾ ಪರಮೋಚ್ಚ ಅಧಿಕಾರದಲ್ಲಿ ಕುಳಿತಿರಲಿ ಪ್ರತೀ ಪ್ರಸ್ತಾವವನ್ನು , ಘಟನೆಯನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿ ನಿರ್ದಾರ ಕೈಗೊಳ್ಳುವುದು ಆತನ ಕರ್ತವ್ಯ. ಅದನ್ನು ಪ್ರತ್ಯೇಕಿಸಿ ನೋಡುವ ಹಕ್ಕು ಆತನಿಗಿಲ್ಲ. ನಾನು ಇಲ್ಲಿ ಈ ನಿರ್ಧಾರವನ್ನು ಕೈಗೊಳ್ಳುತ್ತೇನೆ, ಆದರೆ ಅದು ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಋಣಾತ್ಮಕ ಪರಿಣಾಮ ಉಂಟು ಮಾಡಬಹುದೇ ?. ನನ್ನ ಕೆಲಸ ಇಲ್ಲಿ ಮಾಡುತ್ತೇನೆ, ನನ್ನ ಕೆಲಸಕ್ಕೆ ಶ್ಲಾಘ್ಹನೆ ಸಿಗುತ್ತದೆ , ಆದರೆ ನನ್ನ ನಿರ್ಧಾರ ನನ್ನ ದೇಶದಲ್ಲಿರುವ ಯಾರನ್ನಾದರೂ ಘಾಸಿಗೊಳಿಸುವುದೇ? –ಈ ಮಾನದಂಡಗಳು ನಾಗರಿಕ ಸೇವಾ ಅಧಿಕಾರಿಗಳ ಎದುರು ಇರುತ್ತವೆ.ಆತನ ತರಬೇತಿ ಆತನಲ್ಲಿ ಯಾವುದೇ ಕೊರತೆ ಕಾಣದಂತೆ ವಿನ್ಯಾಸ ಮಾಡಲ್ಪಟ್ಟಿರುತ್ತದೆ. ಸರಕಾರಗಳು ಬರುತ್ತವೆ, ಹೋಗುತ್ತವೆ; ನಾಯಕರು ಬರುತ್ತಾರೆ, ಹೋಗುತ್ತಾರೆ; ಈ ವ್ಯವಸ್ಥೆ ಶಾಶ್ವತ. ಈ ವ್ಯವಸ್ಥೆಯ ಮೂಲಭೂತ ಧರ್ಮ ಎಂದರೆ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪ್ರತೀ ನಿರ್ಧಾರವನ್ನು ತೂಗಿ ನೋಡುವುದು.ಮತ್ತು ಆತ ಭವಿಷ್ಯತ್ತಿನಲ್ಲಿ ಅದು ಬೀರುವ ಪರಿಣಾಮವನ್ನೂ ತೂಗಿ ನೋಡಬೇಕು. ನಾಗರಿಕ ಸೇವೆಗಳಲ್ಲಿ ದೊರೆಯುವ ತರಬೇತಿ ಬದಲಾಗುವ ಪರಿಸ್ಥಿಯಲ್ಲಿ ನಮ್ಮನ್ನು ನಾವು ಹೇಗೆ ಸಕಾಲಿಕಗೊಳಿಸಿಕೊಳ್ಳುತ್ತೇವೆ ಎಂಬ ಪ್ರಶ್ನೆಯನ್ನೂ ಮುಂದಿಡುತ್ತದೆ. ಬದಲಾದ ಪರಿಸ್ಥಿತಿಯಲ್ಲಿ ನಾವು ಅಪ್ರಸ್ಥುತರಾದರೆ , ಆಗ ಪರಿಸ್ಥಿತಿ ಎಲ್ಲಿಗೆ ಮುಟ್ಟುತ್ತದೆ, ಮತ್ತು ಅದು ನಮಗೆ ನಾಚಿಗೆಯ ಸಂಗತಿ. ಆದ್ದರಿಂದ ನಾವು ಸತತವಾಗಿ ನಮ್ಮ ಸಾಂಸ್ಥಿಕ ಬೆಳವಣೆಗೆಯನ್ನು , ಸಾಂಸ್ಥಿಕ ಅಭಿವೃದ್ಧಿಯನ್ನು ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ಚಲನಶೀಲತೆಯಲ್ಲಿಟ್ಟಿರಬೇಕು.

ಹೌದು, ಮಾನವ ಸಂಪನ್ಮೂಲದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಮಾನವ ಸಂಪನ್ಮೂಲಕ್ಕೆ ಸರಾಗ ಚಲನಶೀಲತೆ ಒದಗಿಸುವ ವಿಷಯ ಚರ್ಚೆಗೆ ಬಂದಿದೆಯೋ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.ನಾವೆಲ್ಲರೂ ನಾಗರಿಕ ಸೇವಕರು, ಆದರೆ 25 ವರ್ಷ ಹಳೆಯದಾದ ಪ್ರಕರಣ ಇದುವರೆಗೂ ಯಾಕೆ ಪರಿಹಾರವಾಗಿಲ್ಲ, 30 ವರ್ಷ ಹಳೆಯ ಪ್ರಕರಣ ಯಾಕೆ ಇತ್ಯರ್ಥ ಆಗಿಲ್ಲ?.ಇದಕ್ಕೆ ಕಾರಣ ನಾಯಕತ್ವದ ನಿರ್ಧಾರದ ಕೊರತೆ ಅಲ್ಲ. ಇಲಾಖೆಯ ತಪ್ಪು ಕಾರಣ. ಕಡತ ಎರಡು ಇಲಾಖೆಗಳ ನಡುವೆ ಸಿಕ್ಕಿಬಿದ್ದಿತ್ತು. ಕಾರಣ ಏನು? ಮತ್ತು ಈ ವಿಷಯವನ್ನು ಭಾರತದ ಪ್ರಧಾನ ಮಂತ್ರಿಯವರು ’ಪ್ರಗತಿ’ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಬೇಕಾಯಿತು. (ಪ್ರಗತಿ-ಪ್ರೋ ಆಕ್ಟಿವ್ ಗವರ್ನೆನ್ಸ್ ಅಂಡ್ ಟೈಮ್ಲೀ ಇಂಪ್ಲಿಮೆಂಟೇಶನ್ ). ಇಂತಹ ವಿಷಯಗಳನ್ನು ಪ್ರಗತಿ ಯೋಜನೆಯಲ್ಲಿ ಪಟ್ಟಿ ಮಾಡಿ ಅವುಗಳ ಮೇಲೆ ನಿಗಾ ಇಡಲಾಗುವುದು. ಇವುಗಳನ್ನು 24 ಗಂಟೆಯ ಅವಧಿಯೊಳಗೆ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು.ಎಲ್ಲ ಕ್ಲಿಯರೆನ್ಸ್ ಗಳನ್ನು ತ್ವರಿತವಾಗಿ ನೀಡುವುದು ಮಾತ್ರವಲ್ಲದೆ ಅಂತಿಮವಾಗಿ ಯೋಜನೆಗೆ ಮಂಜೂರಾತಿ ನೀಡಲಾಗುವುದು.8-9 ಲಕ್ಷ ಕೋಟಿ ಮೌಲ್ಯದ ಯೋಜನೆಗಳು ಮಂಜೂರಾತಿಗೊಂಡಿವೆ; ಕಾರಣ ಏನು?. ಪ್ರಗತಿ ಯಶಸ್ವಿಯಾದರೆ ಆಗ ನಾನು ಹರ್ಷಿಸುತ್ತೇನೆ, ತಂತಜ್ಞಾನ ಬಳಸಿ ಹಲವು ಸಮಸ್ಯೆಗಳನ್ನು ಈ ದೇಶದ ಪ್ರಧಾನಿ ಪರಿಹರಿಸುತ್ತಾರೆ ಎಂಬುದಕ್ಕಾಗಿ. ಆದರೆ ನನಗೆ ಇದು ಸಂತೋಷದಿಂದ ಹೇಳಿಕೊಳ್ಳುವ ವಿಷಯವಲ್ಲ. ನನಗೆ ಇದು ಕಲಿಕೆಯ ವಿಷಯ. ನನ್ನ ಎಲ್ಲ ಸ್ನೇಹಿತರೂ 24 ತಾಸುಗಳಲ್ಲಿ ಕೈಗೊಳ್ಳಬಹುದಾದ ನಿರ್ಧಾರ ಯಾಕೆ 15 ವರ್ಷ ತಡೆಹಿಡಿಯಲ್ಪಟ್ಟಿತ್ತು ಎಂಬುದರ ಬಗ್ಗೆ ಆಲೋಚಿಸಬೇಕು. ರಸ್ತೆಯನ್ನು ನಿರ್ಮಿಸಲಾಗಿದೆ; ಜನರಿಗೆ ಅದರ ಅಗತ್ಯವಿದೆ, ಆದರೆ ಯೋಜನೆಗೆ ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಿ ಮಂಜೂರಾತಿ ನೀಡುವ ತನಕ ಅರಣ್ಯ ಇಲಾಖೆಯಲ್ಲಿ ಮಂಜೂರಾತಿ ತಡೆಹಿಡಿಯಲ್ಪಟ್ಟಿತ್ತು. ಈ ಪರಿಸ್ಥಿತಿ ಒಳ್ಳೆಯದಲ್ಲ. ಪ್ರಗತಿಯ ಯಶಸ್ಸಿಗಾಗಿ ಮೋದಿಯನ್ನು ಶ್ಲಾಘಿಸುವುದು, ದೇಶಕ್ಕಂತೂ ಒಳ್ಳೆಯದಲ್ಲ. ಇದು ತಾತ್ಕಾಲಿಕ. ನನ್ನ ವ್ಯವಸ್ಥೆ ಸುರಳೀತವಾಗಿ ನಡೆದರೆ ಅದರಿಂದ ನನ್ನ ದೇಶಕ್ಕೆ ನಿಜವಾಗಿ ಲಾಭವಾಗುತ್ತದೆ.ಪ್ರತೀ ಅಧಿಕಾರಿಯ ಬಳಿಯೂ ಸುಲಭವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇರಬೇಕು, ಅಲ್ಲಿ ಘರ್ಷಣೆ ಇಲ್ಲದ ಸಹಕಾರ ಇರಬೇಕು. ಘರ್ಷಣೆ ಅಧಿಕಾರವನ್ನು ಪೋಲು ಮಾಡುತ್ತದೆ, ಚದುರಿಸುತ್ತದೆ. ಘರ್ಷಣೆ ಇಲ್ಲದ ಸುರಳಿತವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಅಧಿಕಾರವನ್ನು ನಯಗೊಳಿಸುತ್ತದೆ. ನಾವು ಆ ದಿಕ್ಕಿನಲ್ಲಿ ಯೋಚಿಸುತ್ತೇವೆಯೇ ?. ಅದಿನ್ನೂ ನನಗೆ ತಿಳಿದಿಲ್ಲ. ಸರಕಾರದ ಎರಡು ಇಲಾಖೆಗಳು ಯಾಕೆ ಜಗಳ ಮಾಡಬೇಕು, ನನಗದು ಅರ್ಥವಾಗುತ್ತಿಲ್ಲ. ಯಾಕೆ ಎರಡು ಇಲಾಖೆಗಳು ಪ್ರತ್ಯೇಕ ನಿಲುವಿನೊಂದಿಗೆ ನ್ಯಾಯಾಲಯಕ್ಕೆ ಹೋಗಬೇಕು, ಸರಕಾರ ಒಂದೇ ಆಗಿರುವಾಗ?.ಏಕ ಅಖಿಲ ಭಾರತ ನಾಗರಿಕ ಸೇವೆಯ ದೌರ್ಬಲ್ಯವೆಂದು ಇದನ್ನು ಅಂಗೀಕರಿಸಬೇಕೇ ?. ಯಾರಿಗಾದರೂ ಅವರ ಕರ್ತವ್ಯದ ಬಗ್ಗೆ ಹಿಂಜರಿಕೆ ಇದೆಯೇ?. ಅವರು ತಮ್ಮ ಜವಾಬ್ದಾರಿಯಿಂದ ದೂರ ಹೋಗುತ್ತಿದ್ದಾರೆಯೇ?. ಅಥವಾ ಅವರ ಅಹಂಕಾರ ಅಡ್ಡಿಯಾಗುತ್ತಿದೆಯೇ. ಇದು ನಾಗರಿಕ ಸೇವಾ ದಿನದಂದು ನಮ್ಮ ಆತ್ಮವಿಮರ್ಶೆಗೆ ಒಳಗಾಗಬೇಕಿದೆ. ನಮ್ಮ ನ್ಯಾಯಾಲಯಗಳ ಬಹಳಷ್ಟು ಸಮಯ ವ್ಯರ್ಥವಾಗುತ್ತಿದೆ ಮತ್ತು ದೇಶದ ಜನ ಸಾಮಾನ್ಯನ ಹಾದಿಯಲ್ಲಿ ಬಹಳಷ್ಟು ಅಡೆತಡೆಗಳು ಎದುರಾಗುತ್ತಿವೆ. ಮತ್ತು ಪ್ರಕರಣ ಸೋಲಲು ಮತ್ತು ಗೆಲ್ಲಲು ಕಾರಣವೇನು, ಅಧಿಕಾರಿಯೋರ್ವರು ಅರ್ಥ ಮಾಡಿಕೊಳ್ಳದೆ ಕಡತದಲ್ಲಿ ಒಂದು ಸಾಲು ಬರೆದರೆ ಮತ್ತು ಸ್ಥಾಪಿತ ಹಿತಾಸಕ್ತಿಗಳು ಆ ಕಡತವನ್ನು ತಡೆಹಿಡಿದರೆ , ಆಗ ಸಮಸ್ಯೆಗಳು ಉದ್ಭವಿಸುತ್ತವೆ. ಒಂದು ವಿಷಯವನ್ನು ಚರ್ಚಿಸುವಾಗ ನಿರ್ಧಾರವನ್ನು ತುರ್ತಾಗಿ ದುರುದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಯಾರೊಬ್ಬರೂ ಭಾವಿಸಬೇಕಿಲ್ಲ. ಇಂತಹ ಆರೋಪಗಳು ಇದುವರೆಗೆ ಸತ್ಯವೆಂದು ಸಾಬೀತಾಗಿಲ್ಲ. ಆದ್ದರಿಂದ ಈ ಹಿಂಜರಿಕೆಯನ್ನು ಮನಸ್ಸಿನಲ್ಲಿ ಇಟ್ಟು ಕೊಳ್ಳಬೇಕಾದ ಅಗತ್ಯ ಇಲ್ಲ, ಯಾಕೆಂದರೆ ನೀವಿದನ್ನು ಸಮಗ್ರತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ್ದರೆ , ಜಗತ್ತಿನ ಯಾವ ಅಧಿಕಾರವೂ ನಿಮಗೆ ಘಾಸಿಯುಂಟು ಮಾಡಲಾರದು. ಒಂದು ಸಂಧರ್ಭದಲ್ಲಿ ಏನಾದರು ಸಂಭವಿಸಿದರೆ, ಆಗಲಿ ಬಿಡಿ, ನಾವು ನೋಡಿಕೊಳ್ಳುತ್ತೇವೆ, ನಾನು ನಿಮಗೆ ಬೆಂಬಲವಾಗಿ ನಿಲ್ಲುತ್ತೇನೆ.

ಸಮಗ್ರತೆಯಿಂದ ಕೆಲಸ ಮಾಡಬೇಕು, ನಿಮ್ಮನ್ನು ನಿಲ್ಲಿಸುವವರು ಯಾರು?. ಮತ್ತು ಇಂದು ದೈರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಅವಕಾಶ ಬಂದಿದೆ, ಇಂದು ಚೌಕಟ್ಟಿನಿಂದ ಹೊರಗೆ ಯೋಚಿಸಬೇಕಾದ ಅವಕಾಶ ಒದಗಿದೆ. ಈಗಿರುವ ಹಾದಿಯಿಂದ ಹೊಸ ಹಾದಿಯಲ್ಲಿ ಸಾಗಿ ಯಥಾಸ್ಥಿತಿಯನ್ನು ಬದಲಿಸುವ ಅವಕಾಶ ಇಂದು ಬಂದಿದೆ.ಮತ್ತು ನಾನು ಅದೇ ಮನಸ್ಥಿತಿಯವನಾಗಿರುವುದರಿಂದ ನನ್ನೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇಂತಹ ಅಪರೂಪದ ಅವಕಾಶ ಅವರ ಜೀವಿತದಲ್ಲಿ ಸಿಕ್ಕಿದೆ ಎಂದು ನಂಬುತ್ತೇನೆ.

ನಾವಿಲ್ಲಿ ಸುಧಾರಣೆ, ನಿರ್ವಹಣೆ, ಪರಿವರ್ತನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಸುಧಾರಣೆ ರಾಜಕೀಯ ವರ್ಗದ ಇಚ್ಚೆಯನ್ನು ಅವಲಂಬಿಸಿರುತ್ತದೆ, ಆದರೆ ಪ್ರತೀಯೊಂದೂ ನಿಮ್ಮ ’ನಿರ್ವಹಣೆ”ಯ ಕರ್ತವ್ಯವನ್ನು ಅವಲಂಬಿಸಿರುತ್ತದೆ. ರಾಜಕೀಯ ವರ್ಗದ ಇಚ್ಚಾ-ಶಕ್ತಿ ’ಸುಧಾರಣೆ”ಯನ್ನು ತರಬಹುದು, ಆದರೆ ತಂಡದ ಈ ಕರ್ತವ್ಯ ನಿಧಾನಿಸಲ್ಪಟ್ಟರೆ , ಆಗ ನಿರ್ವಹಣೆ ಕಳಪೆಯಾಗುತ್ತದೆ, ಮತ್ತು ಅಲ್ಲಿ ಸಾರ್ವಜನಿಕ ಸಹಭಾಗಿತ್ವ ಇಲ್ಲದಿದ್ದರೆ ಆಗ ಪರಿವರ್ತನೆಯೂ ಇರುವುದಿಲ್ಲ. ರಾಜಕೀಯ ಇಚ್ಚಾ ಶಕ್ತಿ ಸುಧಾರಣೆ ತರಬಲ್ಲುದು, ಆದರೆ ಅಧಿಕಾರಶಾಹಿ ವ್ಯವಸ್ಥೆ, ಸರಕಾರ ಅದನ್ನು ನಿರ್ವಹಿಸುತ್ತದೆ ಮತ್ತು ಸಾರ್ವಜನಿಕ ಸಹಭಾಗಿತ್ವ ಪರಿವರ್ತನೆ ತರುತ್ತದೆ. ನಾವು ಈ ಮೂರನ್ನು ಒಂದು ತರಂಗಾಂತರದಲ್ಲಿ ನಡೆಸಿಕೊಂಡು ಹೋಗುತ್ತೇವೆ ಎಂಬುದು ಬಹು ಮುಖ್ಯ. ಯಾವಾಗ ಈ ಮೂರನ್ನು ಒಂದು ತರಂಗಾಂತರದಲ್ಲಿ ನಡೆಸಿಕೊಂಡು ಹೋಗುತ್ತೇವೆಯೋ, ಆಗ ನಮಗೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.

ನಾಗರಿಕ ಸೇವಾ ದಿನಕ್ಕಾಗಿ ನಾವು ಆತ್ಮಶೋಧನೆಯಲ್ಲಿ ಯಾವುದೇ ಕೊರತೆ ಮಾಡಬಾರದು ಎಂದು ನಾನು ನಿರೀಕ್ಷಿಸುತ್ತೇನೆ. ನೀವು ನಾಗರಿಕ ಸೇವೆಗೆ ಆಯ್ಕೆಯಾದ ದಿನವನ್ನು ನೆನಪಿಗೆ ತಂದುಕೊಳ್ಳಿ, ನಿಮ್ಮ ಪೋಷಕರು ನಿಮ್ಮತ್ತ ಹೇಗೆ ನೋಡಿದ್ದರೆಂಬುದನ್ನು , ನಿಮ್ಮ ಸ್ನೇಹಿತರ ಪ್ರತಿಕ್ರಿಯೆ ಏನಿತ್ತೆಂಬುದನ್ನು ನೆನಪಿಸಿಕೊಳ್ಳಿ. ಮತ್ತು ಈ ಗುರಿಯನ್ನು ಸಾಧಿಸಲು ನೀವು ನಿಮ್ಮ ಮನೆಯಿಂದ ದೂರವಾದ ಸಂಧರ್ಭವನ್ನೂ ಯೋಚಿಸಿ. ನಾನು ನಂಬುತ್ತೇನೆ- ನಿಮ್ಮ ಯಶಸ್ಸಿನ ಮೊದಲ ಭಾವನೆ ಬಹಳ ಅಮೂಲ್ಯವಾಗಿರುತ್ತದೆ ಮತ್ತು ಅದು ನಿಮ್ಮ ವೃತ್ತಿಯಲ್ಲಿ ಅತ್ಯುತ್ತಮ ಮಾರ್ಗದರ್ಶಿಯಾಗಿರುತ್ತದೆ. ಅದು ನಿಮ್ಮ ಬದುಕಿನ ಶಕ್ತಿಯೂ ಆಗಬಲ್ಲುದು. ಇದಕ್ಕಿಂತ ಬೇರೆಯದಾಗಿದ್ದರೆ,ನನ್ನ ಪ್ರಕಾರ ನೀವು ಹಳಿ ತಪ್ಪಿದ್ದೀರಿ.ಅಥವಾ ಅದನ್ನು ಇನ್ನೂ ಉಳಿಸಿಕೊಂಡಿದ್ದರೆ , ಆಗ ನೀವು ಸರಿಯಾದ ಹಾದಿಯಲ್ಲಿದ್ದೀರಿ. ನೀವು ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಬೇಕಿಲ್ಲ, ದೇಶಾದ್ಯಂತ ಇರುವ ನಿಮ್ಮ ಹಿರಿಯರು ಕೊಟ್ಟಿರುವ ಸಲಹೆಗಳನ್ನೂ ನೆನಪಿಸಿಕೊಳ್ಳುವ ಅಗತ್ಯ ಇಲ್ಲ. ನೀವು ಆಯ್ಕೆಯಾದ ದಿನದಂದು ನಿಮ್ಮಲ್ಲಿ ಉದಯಿಸಿದ ಭಾವನೆ ನಿಮಗೆ ಪ್ರೇರಕ ಶಕ್ತಿಯಾಗಿರುತ್ತದೆ ಎಂಬುದನ್ನು ನಾನು ಪುನರುಚ್ಚರಿಸಲು ಇಚ್ಚಿಸುತ್ತೇನೆ. ಈ ದೇಶ ಯಾವುದೇ ನಷ್ಟ ಅನುಭವಿಸುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪ್ರೀತಿಯ ಗೆಳೆಯರೇ, ನಿಮಗೆ ಹೊರಗಿನಿಂದ ಯಾವುದೂ ಬೇಕಾಗಿಲ್ಲ. ಆ ಸ್ಪೂರ್ತಿಯನ್ನು, ಉತ್ಸಾಹವನ್ನು ನಾಗರಿಕ ಸೇವಾ ದಿನವಾದ ಇಂದು ಮತ್ತೆ ನೆನಪಿಸಿಕೊಳ್ಳಿ, ಆ ಸುಸಂಧರ್ಭಗಳನ್ನು ಹುಡುಕಿ, ನಿಮ್ಮ ಪೋಷಕರು ನೀವು ಯು.ಪಿ.ಎಸ್. ಸಿ ತೇರ್ಗಡೆಯಾಗಿ ಐ.ಎ.ಎಸ್. ಆಗಿದ್ದೀರಿ. ಎಂಬುದನ್ನು ತಿಳಿದುಕೊಂಡಾಗಿನ ಸಂಧರ್ಭಗಳನ್ನು ನೆನಪಿಸಿಕೊಳ್ಳಿ. ಯು.ಪಿ.ಎಸ್.ಸಿ. ತೇರ್ಗಡೆಯಾದ ಬಳಿಕ ಮುಸ್ಸೋರಿಗೆ ತೆರಳುವಾಗ ಮತ್ತು ಐ.ಎ.ಎಸ್ ಆಗುವಾಗ ನಿಮ್ಮ ಪೋಷಕರು ನಿಮ್ಮನ್ನು ನೋಡಿಕೊಂಡ ಬಗೆಯನ್ನೊಮ್ಮೆ ನೆನಪಿಗೆ ತಂದುಕೊಳ್ಳಿ, ನಿಮ್ಮ ಪೋಷಕರು ನಿಮ್ಮ ಜತೆ ಬಂದು ರೈಲ್ವೇ ನಿಲ್ದಾಣಕ್ಕೆ ಬಿಟ್ಟು ಹೋದ ದಿನವನ್ನು ನೆನಪಿಸಿಕೊಳ್ಳಿ, ಮತ್ತು ನಿಮ್ಮ ಸ್ನೇಹಿತರು ನಿಮ್ಮನ್ನು ಬಿಡಲು ಬಸ್ಸುನಿಲ್ದಾಣಕ್ಕೆ ಬಂದಿರಲೂ ಬಹುದು.ನಿಮ್ಮ ಯಶಸ್ಸಿನ ಮೊದಲ 24, 48 ಗಂಟೆಗಳ ಅವಧಿಯಲ್ಲಿ ನೀವು ಕಂಡ ಕನಸುಗಳನ್ನು ನೆನಪಿಸಿಕೊಳ್ಳಿ.ಅವುಗಳಿಂದ ವಿಮುಖರಾಗಿದ್ದೀರಾ, ಕನಸುಗಳು ದುರ್ಬಲಗೊಂಡಿವೆಯೇ?. ನೀವು ಈ ಮೌಲ್ಯ ಮಾಪನ ಮಾಡಬೇಕು, ಯಾಕೆಂದರೆ ಅದು ನಿಮ್ಮೊಳಗೆ ದೊಡ್ಡ ಬಲವಾಗುತ್ತದೆ ಮತ್ತು ಅದಕ್ಕೆ ಬೇರೆ ಯಾವ ಪ್ರಚೋದನಾತ್ಮಕ ಕಥೆಯ ಅಗತ್ಯ ಇಲ್ಲ.

ಸರಕಾರಕ್ಕೆ ತನ್ನದೇ ನಮೂನೆಯ ಸ್ವರೂಪವಿದೆ. ಅದಕ್ಕೆ ದೊಡ್ಡ ಬದಲಾವಣೆ ಆಗಬೇಕಿದೆ , ಮತ್ತು ಆ ಬದಲಾವಣೆಯ ಗುರಿ ಸಾಧಿಸಲಾಗುತ್ತಿದೆ. ಈ ಅಂಕಿ ಅಂಶಗಳು ನಿಜವಾಗಿಯೂ ಜನರ ವಿಧಿಯನ್ನು ಬದಲಿಸಬಲ್ಲವು ಎಂಬುದು ನಿಜವೇ?. ನಿಮ್ಮಲ್ಲಿ ತೀರಾ ಸಾಮಾನ್ಯ ಕಥೆಯೊಂದು ಇದೆ, ಬಹುಷ ಅದು ನಿಮಗೆ ತಿಳಿದಿದೆ. ಒಂದು ಉದ್ಯಾನವನದಲ್ಲಿ ಇಬ್ಬರು ಕೆಲಸ ಮಾಡುತ್ತಿರುತ್ತಾರೆ. ಓರ್ವ ಹಿರಿಯ ವ್ಯಕ್ತಿ ಅವರನ್ನು ಗಮನಿಸುತ್ತಿರುತ್ತಾನೆ. ಇಬ್ಬರೂ ಶ್ರಮಪಟ್ಟು ಕೆಲಸ ಮಾಡುತ್ತಿರುತ್ತಾರೆ ಮತ್ತು ಬೆವರು ಹರಿಯುತ್ತಿರುತ್ತದೆ.ಓರ್ವರು ಅಗೆಯುತ್ತಿದ್ದರೆ ಮತ್ತೊಬ್ಬರು ಅದರಲ್ಲಿ ಮಣ್ಣು ತುಂಬಿಸುತ್ತಿರುತ್ತಾರೆ. ಆ ವ್ಯಕ್ತಿ ಕುತೂಹಲಗೊಳ್ಳುತ್ತಾನೆ. ಆತ ಅವರ ಬಳಿಗೆ ಹೋಗಿ ಕೇಳುತ್ತಾನೆ-ಸಹೋದರರೇ ನೀವಿಬ್ಬರು ಏನು ಮಾಡುತ್ತಿದ್ದೀರಿ ?. ಅವರಲ್ಲೊಬ್ಬ ಉತ್ತರಿಸುತ್ತಾನೆ, ನಾವು ಇಬ್ಬರಲ್ಲ, ವಾಸ್ತವವಾಗಿ ನಾವು ಮೂರು ಮಂದಿ. ಆತ ಅವರಲ್ಲಿ ಕೇಳುತ್ತಾನೆ, ಹಾಗಾದರೆ ಮೂರನೆಯವರು ಎಲ್ಲಿ?. ಅವರ ಉತ್ತರ-ಮೂರನೇಯವರು ಇಂದು ಬಂದಿಲ್ಲ.ನೀವೆಲ್ಲ ಏನು ಕೆಲಸ ಮಾಡುತ್ತಿದ್ದೀರಿ?. ಅವರಲ್ಲೊಬ್ಬ ವಿವರಿಸಿದ, ನನ್ನ ಕೆಲಸ ಕುಳಿ ತೋಡುವುದು, ಇಂದು ಕೆಲಸಕ್ಕೆ ಹಾಜರಾಗದವನ ಕೆಲಸ ಗಿಡ ನೆಡುವುದು ಮತ್ತು ಇನ್ನೊಬ್ಬನ ಕೆಲಸ ಕುಳಿಗೆ ಮಣ್ಣು ತುಂಬಿಸುವುದು. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಇಂದು ಗೈರು ಹಾಜರಾದವನ ಕೆಲಸ ಮಾಡುತ್ತಿಲ್ಲ. ನಮ್ಮ ಕರ್ತವ್ಯಕ್ಕೆ ಸಂಬಂಧಿಸಿದ ಕೆಲಸ ನಾವು ಮುಂದುವರಿಸುತ್ತೇವೆ. ಅವರು ಅವರಿಗಿಚ್ಚೆ ಬಂದಷ್ಟು ಗಂಟೆ ಕೆಲಸ ಮಾಡಿದರು, ಮಣ್ಣು ತೆಗೆದರು, ಮತ್ತು ಅದಕ್ಕನುಗುಣವಾಗಿ ತುಂಬಿಸಿದರು. ಆದರೆ ಪ್ರಶ್ನೆ ಉಳಿಯಿತು, ಈ ಕೆಲಸದಿಂದ ದೇಶಕ್ಕೆ ಲಾಭವಾಗುತ್ತದೆಯೇ?. ಇಲ್ಲ, ಯಾಕೆಂದರೆ ಒಬ್ಬರು ಬಂದಿಲ್ಲ.

ಇದರ ಅರ್ಥ ನಾವು ಪ್ರತೀಯೊಂದನ್ನೂ ಫಲಿತಾಂಶ ಕೇಂದ್ರಿತವಾಗಿ ಅಳತೆ ಮಾಡಬೇಕು. ಮೊದಲ ಬಾರಿಗೆ ನಾವು ಕಳೆದ ವರ್ಷದ ಬಜೆಟಿನಲ್ಲಿ ಫಲಿತಾಂಶ ಸಂಬಂಧಿ ದಾಖಲೆಯನ್ನು ಆರಂಭಿಸುವ ಧೈರ್ಯ ತೋರಿದೆವು.ಕೆಲವರಾದರೂ ಅದನ್ನು ಅಧ್ಯಯನ ಮಾಡಿರಬಹುದು. ಮೊದಲ ಬಾರಿಗೆ ಫಲಿತಾಂಶ ಸಂಬಂಧಿ ದಾಖಲೆಯನ್ನು ಬಜೆಟ್ಟಿನೊಂದಿಗೆ ಸೇರಿಸಲಾಯಿತು. ನಾವು ಈ ತತ್ವವನ್ನು ನಮ್ಮ ಕೆಲಸದ ಸಂಸ್ಕೃತಿಯ ಜತೆ ಅಳವಡಿಸಿಕೊಳ್ಳಬೇಕು.ಮತ್ತು ಅಧಿಕಾರಶಾಹಿಯಲ್ಲಿ ಅದು ಹರಡಿಕೊಳ್ಳುವಂತೆ ನೋಡಿಕೊಳ್ಳಬೇಕು, ಪ್ರತಿಯೊಂದನ್ನೂ ಫಲಿತಾಂಶದ ಆಧಾರದಲ್ಲಿ ಅಳೆಯಬೇಕೇ ಹೊರತು ಉತ್ಪನ್ನವಾಗಿ ಅಳೆಯಬಾರದು.ಸಿ.ಎ.ಜಿ.ಗೆ ಉತ್ಪನ್ನ ಸರಿಹೊಂದಬಹುದು. ಫಲಿತಾಂಶ ಎನ್ನುವುದು ಸಿ.ಎ.ಜಿ.ಗಿಂತ ಒಂದು ಹೆಜ್ಜೆ ಮುಂದೆ (ಸಿ.ಎ.ಜಿ+ 1), ಮತ್ತು ದೇಶದ ಪ್ರಜಾಪ್ರಭುತ್ವ ಸಿ.ಎ.ಜಿ.ಗಿಂತ ಎರಡು ಹೆಜ್ಜೆ ಮುಂದೆ.ನಾವು ಸಿ.ಎ.ಜಿ. ಕೇಂದ್ರಿತ ಫಲಿತಾಂಶದತ್ತ ಗಮನ ಹರಿಸಿದರೆ, ಆಗ ದೇಶದಲ್ಲಿ ಬದಲಾವಣೆ ಕಾಣಲು ನಮಗೆ ಸಾಧ್ಯವಾಗದು. ಸಿ.ಎ.ಜಿ.+ಫಲಿತಾಂಶ ಚಿಂತನೆಯಲ್ಲಿ ನಾವು ಕೆಲಸ ಮಾಡಿದರೆ ಖಂಡಿತವಾಗಿಯೂ ನಮಗೆ ದೇಶಕ್ಕೆ ಏನಾದರೂ ಕೊಡುಗೆ ಕೊಡಲು ಸಾಧ್ಯವಾಗಬಹುದು.

70 ವರ್ಷಗಳ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ದೇಶದ ಬಜೆಟನ್ನು ಮಾರ್ಚ್ 31ರೊಳಗೆ ಅಂಗೀಕರಿಸಲಾಯಿತು ಮತ್ತು ಹೊಸ ಬಜೆಟ್ ಏಪ್ರಿಲ್ 1ರಿಂದ ಜಾರಿಗೆ ಬಂದಿತು. ಇದನ್ನು ಸಾಧ್ಯ ಮಾಡಿದ್ದು ಯಾರು ?. ನೀವೆಲ್ಲರೂ ಇದನ್ನು ಸಾಧ್ಯವಾಗಿಸಿದ್ದೀರಿ. ಇದರ ಅರ್ಥ ಈಗಲೂ ಕೂಡಾ, ನಾನು ನಂಬುತ್ತೇನೆ, ತಂಡವಾಗಿ ನಿರ್ಧರಿಸಿದ ಕ್ರಮಗಳನ್ನು ಅನುಷ್ಟಾನಕ್ಕೆ ತರುವ ಧೈರ್ಯ ನಿಮ್ಮಲ್ಲಿದೆ. ಹೀಗಾಗಿ ನನ್ನ ವಿಶ್ವಾಸ ಬಹುಪಾಲು ವೃದ್ಧಿಯಾಗಿದೆ. ಕೆಲವರು ನಿಕೃಷ್ಟವಾದದ ಬಗ್ಗೆ ಮಾತನಾಡುವಾಗೆಲ್ಲ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ, ನಾನು ನಿಮ್ಮ ಕರ್ತವ್ಯಗಳನ್ನು ನೆನಪಿಸಿಕೊಳ್ಳುತ್ತೇನೆ, ನಿಕೃಷ್ಟವಾದ ನನ್ನನ್ನು ಬಿಟ್ಟು ತೊಲಗುತ್ತದೆ, ನಿರಾಶೆ ನನ್ನನ್ನೆಂದೂ ಮುಟ್ಟುವುದಿಲ್ಲ.

ನನಗೆ ಗುಜರಾತಿನ ನಿರ್ವಹಣೆಯಲ್ಲಿ ವಿಸ್ತಾರವಾದ ಅನುಭವವಿದೆ, ಆದರೆ ಇಲ್ಲಿ ನಾನು ಬರೇ ಮೂರು ವರ್ಷ ಕಳೆದಿದ್ದೇನೆ. ನನ್ನ ಮೂರು ವರ್ಷದ ಅನುಭವ ಹೇಳುತ್ತದೆ,ನನ್ನ ಪ್ರತೀ ಯೋಚನೆ ಒಂದು ಫಲಿತಾಂಶದೊಂದಿಗೆ ಬರುತ್ತದೆ.ನಾನು ಕೊಟ್ಟ ಚಿಂತನೆಯನ್ನು ಅನುಷ್ಟಾನಿಸದೇ ಇರುವ ಯಾವುದೇ ಸಂಧರ್ಭ ನನ್ನ ನೆನಪಿನಲ್ಲಿ ಇಲ್ಲ. ಅದನ್ನು ಯಾರು ಮಾಡಿದರು?. ಸುಧಾರಣೆಗಳಿಗೆ ರಾಜಕೀಯ ಇಚ್ಚಾಶಕ್ತಿ ಬೇಕು. ನಾನು ಆ ಸಮಸ್ಯೆಯನ್ನು ಎದುರಿಸುತ್ತಿಲ್ಲ.ಬದಲು ನನ್ನಲ್ಲಿ ಹೆಚ್ಚುವರಿ ರಾಜಕೀಯ ಇಚ್ಚಾಶಕ್ತಿ ಇದೆ.ಯಾವ ರೀತಿಯಲ್ಲಾದರೂ ಸರಿ ಸಾಧನೆಗೆ ಕ್ರಿಯೆ ಅಗತ್ಯ. ಈ ಕ್ರಿಯೆ, ಕ್ರಮವನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ನೀವು ನನಗೆ ಹೇಳಬಲ್ಲಿರಾ?.

ಪ್ರಧಾನಿಯವರು ತಮ್ಮ ತಂಡದೆದುರಿಗೆ ಯೋಚನೆಯನ್ನು, ಚಿಂತನೆಯನ್ನು ಇಟ್ಟಾಗ, ಆ ಚಿಂತನೆಯನ್ನು ನೀತಿಯಾಗಿ ಪರಿವರ್ತಿಸುವುದು ಯಾರು?. ಅದನ್ನು ಮಾಡುವುದು ನೀವು. ಯಾರು ಜವಾಬ್ದಾರಿ ಹಂಚುತ್ತಾರೆ?. ಅದನ್ನು ಮಾಡುವುದು ನೀವು.ಸಂಪನ್ಮೂಲ ಹಂಚಿಕೆಗೆ ಯೋಜನೆ ರೂಪಿಸುವುದು ಯಾರು? ನೀವು ಮಾಡುತ್ತೀರಿ. ಈ ಎಲ್ಲ ಅಂಶಗಳನ್ನು ನಿರ್ಧರಿಸಿದ ಬಳಿಕ , ನಿಗಾ ವಹಿಸುವುದು ಯಾರು? ನೀವು ಮಾಡುತ್ತೀರಿ. ಅದರಲ್ಲಿರುವ ಕೊರತೆಗಳನ್ನು ಹುಡುಕುವುದು ಯಾರು? ಅದೂ ನೀವೇ ಮಾಡುತ್ತೀರಿ. ಅದೇ ವ್ಯಕ್ತಿಗಳು ಅದೇ ಜನರ ದೌರ್ಬಲ್ಯಗಳನ್ನು ಹುಡುಕಿ, ತಪ್ಪುಗಳನ್ನು ಹುಡುಕಿ, ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡುವುದನ್ನು ನೋಡಿದರೆ ಹೊರಗಿನವರಿಗೆ ಆಶ್ಚರ್ಯವಾಗಬಲ್ಲುದು.ಇಂತಹ ಸಮರೂಪದ ವ್ಯವಸ್ಥೆ, ಅಖಿಲ ಭಾರತ ನಾಗರಿಕ ಸೇವೆ, ಅದು ನಮ್ಮ ದೇಶವನ್ನು ಆಶೀರ್ವದಿಸುತ್ತಿದೆ. ಆದ್ದರಿಂದ ಈ ದಿನ ದೇಶಕ್ಕೆ ಮಹತ್ವದ್ದು, ಯಾಕೆಂದರೆ ಸ್ಥಾಪಿಸಲ್ಪಟ್ಟ ಈ ವ್ಯವಸ್ಥೆ ತನ್ನನ್ನು ತಾನು ಮೌಲ್ಯಮಾಪನ ಮಾಡಿಕೊಳ್ಳುತ್ತದೆ, ತನ್ನನ್ನು ತಾನು ಆತ್ಮ ವಿಮರ್ಶೆ ಮಾಡಿಕೊಳ್ಳುತ್ತದೆ ಮತ್ತು ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮುನ್ನಡೆಯುತ್ತದೆ.ಬಹುಷ ನಾವು ನಿರೀಕ್ಷೆಗಿಂತ ಎರಡು ಹೆಜ್ಜೆ ಹಿಂದಿದ್ದೇವೆ,ಆದಾಗ್ಯೂ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಗಳನ್ನು ನಡೆಸಿದ್ದೇವೆ. ಇದೆಲ್ಲವನ್ನೂ ತಂಡವಾಗಿ ನಡೆಸಲಾಗುತ್ತಿದೆ.ಈ ತಂಡದ ಬಗ್ಗೆ ಜನರ ಗೌರವವನ್ನು ಹೆಚ್ಚಿಸುವುದು ಹೇಗೆ ?. ಜನರ ಮನಸ್ಸಿನಲ್ಲಿ ಋಣಾತ್ಮಕ ಧೋರಣೆ ಇರುವುದು ಯಾಕೆ?. ನೀವು ಕೂಡಾ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನೀವು ದುರುದ್ದೇಶದ ಜನರಲ್ಲ:ನೀವು ಯಾವುದೇ ತಪ್ಪು ಮಾಡಿದವರಲ್ಲ, ಯಾವುದೇ ಹಾನಿ ಮಾಡಲು ಬಂದವರಲ್ಲ, ಹಾಗಿದ್ದರೂ ಜನರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಸಂಶಯಗಳು ಏಕಿವೆ. ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಲೇ ಬೇಕಿದೆ. ಇದನ್ನು ನೀವು ಮಾಡಿದರೆ, ಬಹಳ ದೊಡ್ಡ ಬದಲಾವಣೆ ಬೇಕು ಎಂದು ನನಗೆ ಅನಿಸುವುದಿಲ್ಲ. ಅಲ್ಲಿ ತಿದ್ದಿಕೊಳ್ಳಬೇಕಾದ ಸಣ್ಣ, ಸಣ್ಣ ಸಂಗತಿಗಳಿವೆ. ಅದನ್ನು ನಾವು ನಿರ್ವಹಿಸಿದರೆ , ಆಗ ಈ ನಂಬಿಕೆಯ ಕೊರತೆ ಗೌರವವಾಗಿ ಪರಿವರ್ತನೆಗೊಳ್ಳಬಲ್ಲುದು.

ಕಾಶ್ಮೀರವು ನೆರೆ ಹಾವಳಿಯಿಂದ ಪೀಡಿತವಾದಾಗ, ಸೇನಾ ಸಿಬಂದಿಗಳು ಜನರನ್ನು ರಕ್ಷಿಸಲು ತಮ್ಮ ಜೀವವನ್ನು ಒತ್ತೆ ಇಟ್ಟರು.ಬೇರೆ ದಿನಗಳಲ್ಲಿ ಕಲ್ಲು ತೂರಾಟ ಮಾಡುತ್ತಿದ್ದ ಅದೇ ಜನರು ಆ ದಿನಗಳಲ್ಲಿ ಸೇನೆಯ ಕಾರ್ಯವನ್ನು ಪ್ರಶಂಸಿಸಿದರು. ಅವರು ಆ ಸಂಧರ್ಭದಲ್ಲಿ ಪ್ರಶಂಸೆ ಮಾಡಿರಬಹುದು, ಆದರೆ ಕನಿಷ್ಟ ಜನರು ನಮ್ಮನ್ನು ರಕ್ಷಿಸಲು ಈ ಜನರು ಸಾಯುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಂಡರು. ಈ ಬಲ ನಿಮಗಿದೆ. ಇಂತಹ ಉಜ್ವಲ ಹಿನ್ನೆಲೆಯೊಂದಿಗೆ ನಾವು ಮುಂದೆ ನೋಡುತ್ತಿದ್ದೇವೆ.

2022ರಲ್ಲಿ ನಾವು ನಮ್ಮ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿರುವಾಗ ದೇಶವನ್ನು ಭಾಗಗಳಂತೆ ಆಡಳಿತ ಮಾಡದೆ ಇಡೀಯಾಗಿ ಒಂದು ಕನಸಿನಂತೆ ಮುನ್ನಡೆಸುವುದನ್ನು ನಾನು ನಿಮ್ಮಿಂದ ನಿರೀಕ್ಷೆ ಮಾಡುತ್ತೇನೆ.ಪ್ರತೀ ಕನಸನ್ನು ನಿರ್ಧಾರವಾಗಿ ಪರಿವರ್ತಿಸುವಲ್ಲಿ ನಾವು ವೇಗವರ್ಧಕದಂತೆ ಕೆಲಸ ಮಾಡಬೇಕು. ಈ ಆಲೋಚನೆ 125 ಕೋಟಿ ಭಾರತೀಯರ ಮನಸ್ಸಿನಲ್ಲಿ ಯಾಕೆ ಮೂಡಬಾರದು.

2022ರ ವೇಳೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಈಡೇರಿಸುವ ನಿರ್ಧಾರ ಮಾಡುವುದು ಮತ್ತು ಆ ಹಂತಕ್ಕೆ ತಲುಪುವುದು ನಮ್ಮ ಕರ್ತವ್ಯ. ಇಲ್ಲಿ ನಾವು ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು. ಸಾರ್ವಜನಿಕ ಸೇವಕನಾಗಿ ನಾನು ಯೋಚಿಸುವುದೇನೆಂದರೆ ನಾನು ಉಸ್ತುವಾರಿ ಮಾಡಿದ ಘಟಕ ತನ್ನ ನಿರ್ಧಾರಗಳನ್ನು ಮಾಡಿಕೊಂಡಿದೆಯೇ, ಇಲ್ಲವೇ?. ನಾನು ಕೆಲಸ ಮಾಡುತ್ತಿರುವ ಜನರ ಆಶೋತ್ತರಗಳನ್ನು, ಜತೆಗೆ ನನ್ನ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಂತೆ ಕೆಲಸ ಮಾಡುವುದು ನನಗೆ ಸಾಧ್ಯವೇ?. ಅವರನ್ನು ನನ್ನ ಜತೆ ಸೇರಿಸಿಕೊಂಡು ಮುನ್ನಡೆಯುವುದು ಸಾಧ್ಯವೇ?. ನಾನು ಪುನರುಚ್ಚರಿಸಲು ಇಚ್ಚಿಸುತ್ತೇನೆ, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ, 2022ರಲ್ಲಿ ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಭಾರತ ಸರಕಾರದಲ್ಲಿ ಕೆಲಸ ಮಾಡುವ , ಪ್ರತಿಯೊಬ್ಬರೂ, ಅವರು ದೊಡ್ಡ ಹುದ್ದೆಯಲ್ಲಿರಲಿ ಇಲ್ಲವೇ ಸಣ್ಣ ಹುದ್ದೆಯಲ್ಲಿರಲಿ ಅದು ಅವರಿಗೆ ಕನಸಾಗಿರಬಾರದು, ಇದು ನಮ್ಮ ನಿರ್ಧಾರವಾಗಬೇಕು.

ನಾವು ಗಂಗಾ ನದಿಯ ಶುದ್ದೀಕರಣದ ಬಗ್ಗೆ ಮಾತನಾಡುತ್ತೇವೆ. ಅಲ್ಲಿ ನಾಗರಿಕ ಸೇವೆಯವರು ಇಲ್ಲವೇ, ಗಂಗಾ ನದಿಯ ದಂಡೆಯಲ್ಲಿ ಅವರ ಉಸ್ತುವಾರಿಯ ಗ್ರಾಮ ಇಲ್ಲವೇ?.ಸರಕಾರಿ ಅಧಿಕಾರಿಯ ಉಸ್ತುವಾರಿಯಲ್ಲಿ ಅಲ್ಲಿ ಗ್ರಾಮ ಇರಲೇಬೇಕು. ಗಂಗಾ ಶುದ್ಧೀಕರಣ ಆಂದೋಲನ ರಾಜೀವ್ ಗಾಂಧಿ ಅವರ ಕಾಲದಿಂದಲೂ ಕಾರ್ಯಾಚರಣೆಯಲ್ಲಿದೆ, ಈ ನದಿಯ ದಂಡೆಯ ಮೇಲೆ ಇರುವ ಗ್ರಾಮಗಳು ಸರಕಾರಿ ಅಧಿಕಾರಿ ಈ ಜಿಲ್ಲೆಗೆ ಅಥವಾ ತಾಲೂಕಿಗೆ ನಿಯುಕ್ತಿಗೊಂಡಾಗ ಆತ/ಆಕೆಯ ಉಸ್ತುವಾರಿಯಲ್ಲಿರುತ್ತವೆ. ಸರಕಾರಿ ನೌಕರ ಒಂದು ನಿರ್ಧಾರ ಮಾಡಬೇಕು-ನಾನು ಸರಕಾರಿ ಸೇವೆಯಲ್ಲಿದ್ದರೆ, ದೇಶವು ಗಂಗೆಯ ಶುದ್ಧೀಕರಣವನ್ನು ಅಪೇಕ್ಷಿಸುತ್ತದೆ, ಭಾರತ ಸರಕಾರ ಗಂಗಾ ಶುದ್ಧೀಕರಣಕ್ಕೆ ಕಾರ್ಯಕ್ರಮವನ್ನು ಹೊಂದಿದೆ, ಮತ್ತು ನಾನು ದಂಡೆಯ ಮೇಲಿನ ಗ್ರಾಮಗಳಿಂದ ಕಸ, ಕೊಳಚೆ ನದಿ ಸೇರಲು ಬಿದುವುದಿಲ್ಲ ಎಂದು. ನನ್ನ ಗೆಳೆಯರು ಇಂತಹ ನಿರ್ಧಾರ ಕೈಗೊಳ್ಳಲಾರರೇ ?. ಒಂದೊಮ್ಮೆ ಅಲ್ಲಿ ಉಸ್ತುವಾರಿಯಾಗಿರುವ ನನ್ನ ಅಧಿಕಾರಿ ತನ್ನ ವ್ಯಾಪ್ತಿಯ ಗ್ರಾಮಗಳಿಂದ ತ್ಯಾಜ್ಯ ವನ್ನು ನದಿಗೆ ಹಾಕಲು ಅನುಮತಿ ನೀಡಲಾಗದು ಎಂದು ನಿರ್ಧರಿಸಿದರೆ ಆಗ ಗಂಗಾ ನದಿಯ ಶುದ್ಧೀಕರಣದ ಬಗ್ಗೆ ಯಾರೊಬ್ಬರೂ ಸಂಶಯ ಪಡುವ ಅಗತ್ಯ ಇಲ್ಲ.ಕಾರ್ಯಾಚರಣೆಯ ಮಾದರಿಯನ್ನು ಇಲ್ಲಿಯೇ ನಿರ್ಧರಿಸುವುದು ಅಗತ್ಯ.

ನಾವು ಸಣ್ಣ ಮಟ್ಟದಲ್ಲಿ ನಮ್ಮ ಕನಸುಗಳನ್ನು, ನಿರ್ಣಯಗಳನ್ನು ನಿರ್ವಹಿಸುವ ಚಿಂತನಾಕ್ರಮದ ಜತೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ಮಾಲಕತ್ವದ ಭಾವನೆ ಅಲ್ಲಿರಬೇಕು. ನಾವು ಆ ರೀತಿ ಕೆಲಸ ಮಾಡಿದರೆ ಬದಲಾವಣೆಗಳನ್ನು ತರಬಹುದು. ವಿಶ್ವವು ಭಾರತದ ಮೇಲೆ ಭಾರೀ ಭರವಸೆಗಳನ್ನು ಇಟ್ಟಿರುವುದನ್ನು ಕಲ್ಪಿಸಿಕೊಳ್ಳಿ. ಭಾರತದ ಬದಲಾಗುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ವಿಶ್ವವು ಭಾರತವನ್ನು ಗಮನಿಸುತ್ತಿದೆ.ಹಿಂದೆ ನಾವು ನಮ್ಮ ಅಸ್ತಿತ್ವಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿರಬಹುದು. ಆದರೆ ಯಾವ ರೀತಿಯಲ್ಲಾದರೂ ಸರಿ 2022ರೊಳಗೆ ಭಾರತ ವಿಶ್ವದ ಶಕ್ತಿಯಾಗಿ ಮೂಡಿ ಬರಬೇಕು ಎಂಬ ಕನಸನ್ನು ನಾವು ಕಾಣಬೇಕು. ಈ ಕನಸಿಗೆ ಅನುಸಾರವಾಗಿ ಕೆಲಸ ಮಾದಬೇಕು. ಇದು ಚುನಾಯಿತ ಪ್ರತಿನಿಧಿಗಳ ಕೆಲಸ ಮಾತ್ರವಲ್ಲ, ನಾಗರಿಕ ಸೇವೆಯವರೂ ಈ ಜವಾಬ್ದಾರಿ ಹೊತ್ತುಕೊಳ್ಳಬೇಕು. ಆಡಳಿತದಡಿಯಲ್ಲಿ ಕೆಲಸ ಮಾಡುವ ಜನರು ಈ ಜವಾಬ್ದಾರಿಯ ದೊಡ್ದ ಹೊರೆಯಲ್ಲಿ ಪಾಲುದಾರಿಕೆ ಪಡೆಯಬೇಕು. ಆಗ ನೀವು ಆಡಳಿತಾಧಿಕಾರಿಯಾಗಿರಿ ಇಲ್ಲವೇ ಆಡಳಿತ ನಡೆಸುವವರಾಗಿರಿ, ನಾವು ಒಂದೇ ದಿಕ್ಕಿನಲ್ಲಿ , ಬೇರೆ ಬೇರೆ ತರಂಗಾಂತರಗಳಲ್ಲಿ ನಡೆದರೆ, ನಾವು ಖಂಡಿತವಾಗಿಯೂ ನಿರೀಕ್ಶಿತ ಫಲಿತಾಂಶ ಪಡೆಯುತ್ತೇವೆ ಎಂದು ನಾನು ನಂಬುತ್ತೇನೆ.

ನಾವು ಸದಾ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರನ್ನು ಸ್ಮರಿಸಿಕೊಳ್ಳುತ್ತೇವೆ. ಈ ವ್ಯವಸ್ಥೆಯನ್ನು ಭಾರತೀಯ ಸಂಧರ್ಭದಲ್ಲಿ ಅಭಿವೃದ್ಧಿಪಡಿಸಲು ಹಲವು ಮಂದಿ ಪ್ರಯತ್ನ ಮಾಡಿದ್ದಾರೆ. ಈಗ ನಾವು ಬದಲಾಗುತ್ತಿರುವ ವಿಶ್ವದಲ್ಲಿ ಎದುರಾಗುವ ಸವಾಲುಗಳನ್ನು ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಜನ ಸಾಮಾನ್ಯರ ಕನಸುಗಳನ್ನು ಈಡೇರಿಸಲು ನಾವು ಹೇಗೆ ಸಮರ್ಥರಿದ್ದೇವೆ ಎಂಬುದರ ಬಗ್ಗೆ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಬೇಕಿದೆ.

ಈ ನಾಗರಿಕ ಸೇವಾ ದಿನದಂದು, ವಿಶ್ವದ ಪ್ರತೀ ಮೂಲೆಯಲ್ಲಿ ವಾಸಿಸುವ ಪ್ರತೀಯೊಬ್ಬ ಗೆಳೆಯರನ್ನೂ ಅಭಿನಂದಿಸುತ್ತೇನೆ.ದೇಶವನ್ನು ಈ ಮಟ್ಟಕ್ಕೆ ತರಲು ಅವಿಶ್ರಾಂತವಾಗಿ ದುಡಿದ ಈ ಸೇವೆಯ ಎಲ್ಲ ತಲೆಮಾರುಗಳ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ತುಂಬು ಧನ್ಯವಾದಗಳು ಮತ್ತು ಹಾರ್ದಿಕ ಶುಭಾಶಯಗಳು.