ಪಿಎಂಇಂಡಿಯಾ
ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮತ್ತು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನ ಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಫೆಬ್ರವರಿ 3 ರಂದು ಜಮ್ಮು, ಶ್ರೀನಗರ ಮತ್ತು ಲೇಹ್ ಗಳಿಗೆ ಭೇಟಿ ನೀಡುವರು. ಅವರು ಅಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳ ಶಿಲಾನ್ಯಾಸ/ಉದ್ಘಾಟನೆ ನೆರವೇರಿಸುವರು. ಅವರು ಶ್ರೀನಗರದಲ್ಲಿಯ ದಾಲ್ ಸರೋವರವನ್ನು ವೀಕ್ಷಿಸುವರು.
ಪ್ರಧಾನಮಂತ್ರಿ ಅವರು ವಿಜಯಪುರ ಎ.ಐ.ಐ.ಎಂ.ಎಸ್. ಮತ್ತು ಎ.ಐ.ಐ.ಎಂ.ಎಸ್. ಅವಂತಿಪೋರಾಗಳಿಗೆ ಶಿಲಾನ್ಯಾಸದ ಸಂಕೇತವಾಗಿ ನಾಮಫಲಕ ಅನಾವರಣ ಮಾಡುವರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಜಮ್ಮುವಿನ ವಿಜಯಪುರ ಮತ್ತು ಕಾಶ್ಮೀರದಲ್ಲಿರುವ ಪುಲ್ವಾಮಾದ ಅವಂತಿಪೋರಾದಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪಿಸುವುದಕ್ಕೆ ಅನುಮೋದನೆ ನೀಡಿತ್ತು. ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಈ ವಲಯದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳು, ಆರೋಗ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಪರಿವರ್ತನೆಗಳು ಉಂಟಾಗಲಿವೆ.
ಪ್ರಧಾನಮಂತ್ರಿ ಅವರು ಜಮ್ಮುವಿನಲ್ಲಿ ಭಾರತೀಯ ಸಮೂಹ ಸಂವಹನ ಸಂಸ್ಥೆಯ ಉತ್ತರ ಪ್ರಾದೇಶಿಕ ಕೇಂದ್ರದ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸವನ್ನು ನಾಮಫಲಕ ಅನಾವರಣ ಮೂಲಕ ನೆರವೇರಿಸುವರು.
ಲಡಾಕ್ ವಿಶ್ವವಿದ್ಯಾಲಯವನ್ನು ಪ್ರಧಾನಮಂತ್ರಿ ಅವರು ಆರಂಭಿಸುವರು. ಇದು ಲಡಾಕ್ ವಲಯದ ಮೊಟ್ತ ಮೊದಲ ಮೊಟ್ಟ ಮೊದಲ ವಿಶ್ವವಿದ್ಯಾಲಯವಾಗಿದ್ದು, ಲಡಾಕ್ ವಿಶ್ವವಿದ್ಯಾಲಯ ಕಾಯ್ದೆ 2018 ರಡಿಯಲ್ಲಿ ಸ್ಥಾಪನೆಯಾಗಿದೆ. ಇದು ಲೇಹ್, ಕಾರ್ಗಿಲ್, ನುಬ್ರಾ, ಝನ್ ಸ್ಕಾರ್, ದ್ರಾಸ್ ಮತ್ತು ಖಾಲಟ್ಸಿಗಳ ಪದವಿ ಕಾಲೇಜುಗಳನ್ನು ಒಳಗೊಂಡ ಗುಚ್ಚ ವಿಶ್ವವಿದ್ಯಾಲಯವಾಗಿರುತ್ತದೆ. ವಿಶ್ವವಿದ್ಯಾಲಯವು ಲೇಹ್ ಮತ್ತು ಕಾರ್ಗಿಲ್ ಗಳಲ್ಲಿ ಆಡಳಿತಾತ್ಮಕ ಕಚೇರಿಗಳನ್ನು ಹೊಂದಿರುತ್ತದೆ.
ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (ರೂಸಾ) ವನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಕಾರ್ಯಾರಂಭಿಸುವರು.
ಗುಂಡಿಯನ್ನು ಒತ್ತುವ ಮೂಲಕ ಪ್ರಧಾನ ಮಂತ್ರಿ ಅವರು ಈ ಕೆಳಗಿನ ನಾಮಫಲಕಗಳನ್ನು ಅನಾವರಣಗೊಳಿಸುವರು:
54 ಹೊಸ ಮಾದರಿ ಕಾಲೇಜುಗಳು, 11 ವೃತ್ತಿಪರ ಕಾಲೇಜುಗಳು, ಮತ್ತು 1 ಮಹಿಳಾ ವಿಶ್ವವಿದ್ಯಾಲಯಕ್ಕೆ ಅವರು ಶಿಲಾನ್ಯಾಸ ಮಾಡುವರು.
ಅವರು 16 ಮಾದರಿ ಪದವಿ ಕಾಲೇಜುಗಳು, 66 ಉದ್ಯಮಶೀಲತಾ , ಅನ್ವೇಷಣಾ ಮತ್ತು ಉದ್ಯೋಗ ತಾಣಗಳನ್ನು ಉದ್ಘಾಟಿಸುವರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಸ್ತ್ವಾರ, ಕುಪ್ವಾರ ಮತ್ತು ಬಾರಾಮುಲ್ಲಾಗಳಲ್ಲಿ 3 ಮಾದರಿ ಪದವಿ ಕಾಲೇಜುಗಳಿಗೆ ಶಿಲಾನ್ಯಾಸ.
ಕಥುವಾದ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಆ ಬಳಿಕ ಅವರು ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ವಲಸೆ ಸಿಬ್ಬಂದಿಗಳಿಗಾಗಿ ಟ್ರಾನ್ಸಿಟ್ ವಸತಿ ನಿರ್ಮಾಣಕ್ಕೆ ನಾಮಫಲಕ ಅನಾವರಣ ಮೂಲಕ ಶಿಲಾನ್ಯಾಸ ಮಾಡುವರು.ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸೌಭಾಗ್ಯ ಯೋಜನೆ ಅಡಿಯಲ್ಲಿ 100 % ಮನೆಗಳ ವಿದ್ಯುದ್ದೀಕರಣವನ್ನು ಪ್ರಧಾನ ಮಂತ್ರಿ ಅವರು ಘೋಷಿಸುವರು.
ಜಮ್ಮು ಕಾಶ್ಮೀರದ ಕಿಸ್ತ್ವಾರದಲ್ಲಿ 624 ಮೆ.ವಾ . ಕಿರು ಜಲವಿದ್ಯುತ್ ಯೋಜನೆಗೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ಮಾಡುವರು. ಇದು ಚೇನಾಬ್ ನದಿ ಹರಿವಿಗೆ ಅಡ್ಡಲಾಗಿ ನಿರ್ಮಿಸುವ ಯೋಜನೆಯಾಗಿದ್ದು, ಪೂರ್ಣಗೊಂಡಾಗ ವಾರ್ಷಿಕ 2272 ಮಿಲಿಯನ್ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯ ಇಂಧನ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ದಾಹ್ ನ ಡಟಾಂಗ್ ಗ್ರಾಮದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸುವ 9 ಮೆ.ವಾ. ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸುವರು. ಶ್ರೀನಗರ-ಆಲುಸ್ಟೆಂಗ್-ದ್ರಾಸ್-ಕಾರ್ಗಿಲ್- ಲೇಹ್ ನಡುವಣ 220 ಕೆ.ವಿ. ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಪ್ರತಿಷ್ಟಿತ ಯೋಜನೆಗೆ ಶಿಲಾನ್ಯಾಸವನ್ನು ಅವರು 2014 ರ ಆಗಸ್ಟ್ ತಿಂಗಳಲ್ಲಿ ನೆರವೇರಿಸಿದ್ದರು. ಜಲಂಧರ್-ಸಂಬಾ-ರಾಜೌರಿ-ಶೋಪಿಯಾನ್- ಅಮರ್ ಘರ್ (ಸೋಪೋರ್) ನಡುವಣ 400 ಕೆ.ವಿ. ಡಿ/ಸಿ/ ಪ್ರಸರಣ ಮಾರ್ಗವನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಯೋಜನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾಲ ಸಂಪರ್ಕವನ್ನು ಬಲಗೊಳಿಸುತ್ತದೆ.
ಪ್ರಧಾನ ಮಂತ್ರಿ ಅವರು ಸಜ್ವಾಲದಲ್ಲಿ ಚೇನಾಬ್ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುವ 1640 ಮೀ ಉದ್ದದ ದ್ವಿಪಥ ಸೇತುವೆಗೆ ಶಿಲಾನ್ಯಾಸ ಮಾಡುವರು. ಯೋಜನೆಯು ಸಜ್ವಾಲ್ ಮತ್ತು ಇಂದ್ರಿ ಪಟ್ಟಿಯಾನ್ ಜನತೆಗೆ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಈ ಸೇತುವೆ ಪೂರ್ಣಗೊಂಡರೆ ಸಜ್ವಾಲ ಮತ್ತು ಇಂದ್ರಿ ಪಟ್ಟಿಯಾನ್ ನಡುವಿನ ದೂರ ಈ ಮೊದಲಿನ 47 ಕಿಲೋ ಮೀಟರಿನಿಂದ 5 ಕಿಲೋ ಮೀಟರಿಗೆ ಇಳಿಯುತ್ತದೆ.
ದೇವಿಕಾ ಮತ್ತು ತಾವಿ ನದಿಗಳ ಮಾಲಿನ್ಯ ನಿಯಂತ್ರಿಸುವ ಉದ್ದೇಶದ ರಾಷ್ಟ್ರೀಯ ನದಿ ಸಂರಕ್ಷಣೆ ಯೋಜನೆ ( ಎನ್.ಆರ್.ಸಿ.ಪಿ.) ಅಡಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ಮಾಡುವರು. ಈ ಯೋಜನೆ ಪೂರ್ಣಗೊಂಡಾಗ ಎರಡು ನದಿಗಳ ಮಾಲಿನ್ಯ ಪ್ರಮಾಣ ಮತ್ತು ಒತ್ತಡದಲ್ಲಿ ಗಮನೀಯ ಕಡಿತವಾಗಿ ನೇರ ಪ್ರಯೋಜನ ಜನತೆಗೆ ಲಭಿಸಲಿದೆ ಮತ್ತು ಅವುಗಳ ಜಲ ಗುಣಮಟ್ಟದಲ್ಲಿಯೂ ಸುಧಾರಣೆಯಾಗಲಿದೆ.
ಲೇಹ್ ವಿಮಾನ ನಿಲ್ದಾಣಲ್ಲಿ ಕುಶೋಕ್ ಬಕುಲಾ ರಿಂಪೋಚೆ (ಕೆ.ಬಿ.ಆರ್.) ಯಲ್ಲಿ ಅವರು ಹೊಸ ಟರ್ಮಿನಲ್ ಕಟ್ಟಡಕ್ಕೆ ನಾಮಫಲಕ ಅನಾವರಣಗೊಳಿಸುವ ಮೂಲಕ ಶಿಲಾನ್ಯಾಸ ಮಾಡುವರು. ಹೊಸ ಟರ್ಮಿನಲ್ ಕಟ್ಟಡ 18,985 ಚದರ ಮೀಟರ್ ವಿಸ್ತಾರವಾಗಿರುತ್ತದೆ ಮತ್ತು ಇಂಧನ ದಕ್ಷತೆಯ ಮಾದರಿ ಕಟ್ಟಡವಾಗಿರಲಿದೆ.
ಪ್ರಧಾನ ಮಂತ್ರಿ ಅವರು ಆ ಬಳಿಕ ಲಡಾಕಿನಲ್ಲಿ ಹೊಸ ಪ್ರವಾಸಿ ಮತ್ತು ಟ್ರೆಕ್ಕಿಂಗ್ ಮಾರ್ಗಗಳನ್ನು ಉದ್ಘಾಟಿಸುವರು. ಇದು ಲಡಾಕಿನಲ್ಲಿ ವೈವಿಧ್ಯಮಯ ಪ್ರವಾಸಿ ಚಟುವಟಿಕೆಗಳಿಗೆ ಅವಕಾಶವನ್ನು ಒದಗಿಸಲಿದೆ ಮತ್ತು ಹೆಚ್ಚು ಪ್ರವಾಸಿಗರ ಹರಿವು ಇಲ್ಲಿಗೆ ಬರಲಿದೆ. ಇದರಿಂದ ಹಲವು ಗ್ರಾಮಗಳಿಗೆ ಉತ್ತಮ ಜೀವನೋಪಾಯದ ಅವಕಾಶಗಳು ಲಭಿಸಲಿವೆ.
ಬಂಡಿಪೋರಾದಲ್ಲಿ ಗ್ರಾಮೀಣ ಬಿ.ಪಿ.ಒ.ಆರಂಭಕ್ಕೆ ಸವಲತ್ತುಗಳನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸುವರು. ಇದು ಬಂಡಿಪೋರಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ. ಪ್ರಧಾನ ಮಂತ್ರಿ ಅವರು ಗಂದರ್ಬಾಲ್ ನ ಸೆಪೋರಾದಲ್ಲಿ ಬಹು ಉದ್ದೇಶಿತ ಒಳಾಂಗಣ ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸುವರು. ಗಂದರ್ಬಾಲ್ ಜಿಲ್ಲೆಯ ಯುವಕರಿಗೆ ಈ ಒಳಾಂಗಣ ಕ್ರೀಡಾ ಸೌಲಭ್ಯ ಅತ್ಯಮೂಲ್ಯ ಆಸ್ತಿಯಾಗಿರಲಿದೆ. ಇಲ್ಲಿ ಅವರಿಗೆ ಒಳಾಂಗಣ ಕ್ರೀಡೆಗಳನ್ನು ಆಡುವ ಸೌಲಭ್ಯ ಒದಗಲಿದೆ.
ಶ್ರೀನಗರದಲ್ಲಿ ಪ್ರಧಾನ ಮಂತ್ರಿ ಅವರು ಅಸ್ಸಾಂ, ಗುಜರಾತ್, ಹರ್ಯಾಣ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಜೊತೆ ಅವರು ಸಂವಾದ ನಡೆಸುವರು. ಹೊಸದಾಗಿ ಆಯ್ಕೆಯಾದ ಸರಪಂಚರ ಜೊತೆಗೂ ಅವರು ಸಂವಾದ ನಡೆಸುವರು.
ಪ್ರಧಾನ ಮಂತ್ರಿ ಅವರು ಈ ಮೊದಲು ಜಮ್ಮು, ಕಾಶ್ಮೀರ ಮತ್ತು ಲೇಹ್ ಗಳಿಗೆ 2018 ರ ಮೇ 19 ರಂದು ಭೇಟಿ ನೀಡಿ ರಾಜ್ಯದಲ್ಲಿ ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು.
***