2019 ರ ಮಾರ್ಚ್ 6 ರಂದು ಕರ್ನಾಟಕದ ಕಲಬುರ್ಗಿ ಮತ್ತು ತಮಿಳುನಾಡಿನ ಕಾಂಚೀಪುರಂಗೆ ಭೇಟಿ ನೀಡಲಿದ್ದಾರೆ ಪ್ರಧಾನಮಂತ್ರಿ
05 Mar, 2019
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಕರ್ನಾಟಕದ ಕಲಬುರ್ಗಿ ಮತ್ತು ತಮಿಳುನಾಡಿನ ಕಾಂಚೀಪುರಂಗೆ ಬೇಟಿ ನೀಡಲಿದ್ದಾರೆ. ಅವರು ಉಭಯ ಕಡೆಗಳಲ್ಲಿ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಕಲಬುರ್ಗಿ, ಕರ್ನಾಟಕ
ಕಲಬುರ್ಗಿಯಲ್ಲಿ ಪ್ರಧಾನಮಂತ್ರಿ ಅವರು ಇಂಧನ, ಆರೋಗ್ಯ ಮತ್ತು ಶಿಕ್ಷಣ ಸಹಿತ ವಿವಿಧ ಕ್ಷೇತ್ರಗಳ ಅಭಿವೃದ್ದಿ ಯೋಜನೆಗಳನ್ನು ಕರ್ನಾಟಕದ ಜನತೆಯ ಪ್ರಯೋಜನಕ್ಕಾಗಿ ಅನುಷ್ಟಾನಿಸಲಿದ್ದಾರೆ.
ಅವುಗಳೆಂದರೆ:
ಆರೋಗ್ಯ ಕ್ಷೇತ್ರ
ಕರ್ನಾಟಕದ ಆರೋಗ್ಯ ವಲಯಕ್ಕೆ ಪ್ರಮುಖವಾಗಿ ಚೈತನ್ಯ ತುಂಬುವ ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿ ಅವರು ಎ.ಎಸ್.ಐ.ಸಿ. ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು , ಬೆಂಗಳೂರು-ಇದನ್ನು ಲೋಕಾರ್ಪಣೆಗೊಳಿಸುವರು. ಅವರು ಹುಬ್ಬಳ್ಳಿಯ ಕೆ.ಐ.ಎಂ.ಎಸ್. ನ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಯೋಜನೆಗಳು ಕರ್ನಾಟಕದ ಜನತೆಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಖಾತ್ರಿಗೊಳಿಸುತ್ತವೆ.
ಇಂಧನ ವಲಯ
ಪ್ರಧಾನಮಂತ್ರಿ ಶ್ರೀ ಮೋದಿ ಅವರು ರಾಯಚೂರಿನಿಂದ ಕಲಬುರ್ಗಿಗೆ ಸ್ಥಳಾಂತರಗೊಳ್ಳುವ ಬಿ.ಪಿ.ಸಿ.ಎಲ್. ಡಿಪೋಗೆ ಶಿಲಾನ್ಯಾಸ ನೆರವೇರಿಸುವರು.
ಇದರ ಜೊತೆಗೆ , ಪ್ರಧಾನಮಂತ್ರಿ ಅವರು ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಟರ್ಮಿನಲ್ ನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಶಾನ್ಯ ವಲಯದ ವಿದ್ಯಾರ್ಥಿಗಳಿಗಾಗಿರುವ ಮಹಿಳಾ ಹಾಸ್ಟೆಲ್ ನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
ಈ ಯೋಜನೆಗಳು ’ಜೀವಿಸಲು ಅನುಕೂಲಕರ ’ ವಾತಾವರಣ ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸತತ ನೀಡಿರುವ ಆದ್ಯತೆಯನ್ನು ಪ್ರತಿನಿಧಿಸುತ್ತವೆ.
ಪ್ರಧಾನಮಂತ್ರಿ ಅವರು ಕಲಬುರ್ಗಿಯಲ್ಲಿ ಆಯುಷ್ಮಾನ್ ಭಾರತ್ ಫಲಾನುಭವಿಗಳ ಜೊತೆ ಸಂವಾದ ನಡೆಸುವರು.
ಕಾಂಚೀಪುರಂ, ತಮಿಳುನಾಡು
ತಮಿಳುನಾಡಿನ ಕಾಂಚೀಪುರಂನಲ್ಲಿ ಪ್ರಧಾನಮಂತ್ರಿ ಅವರು ರಸ್ತೆ, ರೈಲ್ವೇ ಮತ್ತು ಇಂಧನ ವಲಯಗಳ ಹಲವು ಯೋಜನೆಗಳನ್ನು ಅನಾವರಣ ಮಾಡುವರು. ಈ ಯೋಜನೆಗಳು ರಾಜ್ಯದ ರಸ್ತೆ ಮತ್ತು ರೈಲ್ವೇ ಮೂಲ ಸೌಕರ್ಯಗಳನ್ನು ಇನ್ನಷ್ಟು ಬಲಪಡಿಸಲಿವೆ. ಇದು ತಮಿಳುನಾಡಿನ ಜನತೆಗೆ ಉತ್ತಮ , ತ್ವರಿತಗತಿಯ ಮತ್ತು ಕಡಿಮೆ ಖರ್ಚಿನ ಸಾರಿಗೆ ಅನುಕೂಲಕ್ಕೆ ದಾರಿಮಾಡಿಕೊಡಲಿದೆ.
ಅವುಗಳಲ್ಲಿ ಈ ಕೆಳಗಿನವು ಸೇರಿವೆ:
ರಸ್ತೆ ವಲಯ
ತಮಿಳುನಾಡಿನಲ್ಲಿ ಹೆದ್ದಾರಿ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನವಾಗಿ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಹೆದ್ದಾರಿ ಎನ್.ಎಚ್.-45 ಸಿ. ಯ ವಿಕ್ರವಂಡಿ-ಸೇಥಿಯಾಥೋಪು ಸೆಕ್ಷನ್, ಸೇಥಿಯಾಥೋಪು –ಚೋಲೋಪುರಂ ಸೆಕ್ಷನ್ ಮತ್ತು ಚೋಲೋಪುರಂ –ತಂಜಾವೂರು ಸೆಕ್ಷನ್ ಗಳ ಚತುಷ್ಪಥಕ್ಕೆ ಶಿಲಾನ್ಯಾಸ ಮಾಡುವರು.
ಅವರು ಎನ್.ಎಚ್.-4 ರ ಕರಾಯಿಪೆಟ್ಟೈ –ವಲಜಾಪೇಟ್ ಸೆಕ್ಷನ್ ನ ಆರು ಪಥ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವರು.
ಎನ್.ಎಚ್.-234 ನ್ನು ಬಲಪಡಿಸುವುದಕ್ಕಾಗಿ ಪ್ರಧಾನಮಂತ್ರಿ ಅವರು ಅಗಲಗೊಳಿಸುವಿಕೆ , ಚರಂಡಿ ಮತ್ತು ಕ್ಯಾರಿಯೇಜ್ ವೇಗಳನ್ನು ಬಲಪಡಿಸುವ ಕಾಮಗಾರಿಗೆ ಶಿಲಾನ್ಯಾಸ ಮಾಡುವರು. ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 381 ರ ಅವಿನಾಶಿ- ತಿರುಪುರ-ಅವಿನಾಶಿಪಾಳ್ಯಂ ಸೆಕ್ಷನ್ ನ ಚತುಷ್ಪಥ ಮತ್ತು ಕ್ಯಾರಿಯೇಜ್ ವೇಗಳನ್ನು ಬಲಪಡಿಸಿದ ಕಾಮಗಾರಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
ರೈಲ್ವೇ ವಲಯ
ಪ್ರಧಾನಮಂತ್ರಿ ಅವರು ಈರೋಡ್-ಕರೂರ್-ತಿರುಚ್ಚಿರಾಪಳ್ಳಿ ಮತ್ತು ಸೇಲಂ-ಕರೂರು-ದಿಂಡಿಗಲ್ ರೈಲ್ವೇ ಮಾರ್ಗಗಳ ವಿದ್ಯುದ್ದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
ವಿದ್ಯುದ್ದೀಕರಣದಿಂದ ಜಿ.ಎಚ್.ಜಿ. ವಿಸರ್ಜನೆ ಕಡಿಮೆಯಾಗಲಿದೆ ಮತ್ತು ಈ ಮಾರ್ಗದಲ್ಲಿ ಜನತೆಯ ಪ್ರಯಾಣದ ಅವಧಿ ಹಾಗು ಸರಕು ಸಾಗಾಣಿಕೆ ಅವಧಿ ಕಡಿಮೆಯಾಗಲಿದೆ.
ಇಂಧನ ವಲಯ
ಪ್ರಧಾನಮಂತ್ರಿ ಅವರು ಎನ್ನೋರ್ ಎಲ್.ಎನ್.ಜಿ. ಟರ್ಮಿನಲ್ ನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
ಎನ್ನೋರ್ ಎಲ್.ಎನ್.ಜಿ. ಟರ್ಮಿನಲ್ 5 ಎಂ.ಎಂ.ಟಿ.ಪಿ.ಎ. ಸಾಮರ್ಥ್ಯದೊಂದಿಗೆ ತಮಿಳುನಾಡು ಮತ್ತು ನೆರೆಯ ರಾಜ್ಯಗಳ ಎಲ್.ಎನ್.ಜಿ. ಅನಿಲ ಬೇಡಿಕೆಯನ್ನು ಈಡೇರಿಸಲು ಸಹಾಯ ಮಾಡಲಿದೆ.
ಇದರ ಜೊತೆಗೆ ಪ್ರಧಾನಮಂತ್ರಿ ಅವರು ಚೆನ್ನೈಯ ಡಾ. ಎಂ.ಜಿ.ಆರ್. ಜಾನಕಿ ಕಲಾ ಮತ್ತು ವಿಜ್ಞಾನಗಳ ಮಹಿಳಾ ಕಾಲೇಜಿನಲ್ಲಿ ಡಾ. ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಯನ್ನು ವೀಡಿಯೋ ಲಿಂಕ್ ಮೂಲಕ ಅನಾವರಣ ಮಾಡುವರು.
ಡಾ. ಎಂ.ಜಿ. ರಾಮಚಂದ್ರನ್ ಅವರೋರ್ವ ನಟ ಮತ್ತು ರಾಜಕಾರಣಿಯಾಗಿದ್ದು, 1977 ಮತ್ತು 1987 ರ ನಡುವೆ 10 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು.
ಪ್ರಧಾನಮಂತ್ರಿ ಅವರು ಕಾಂಚೀಪುರಂನಲ್ಲಿ ಆಯುಷ್ಮಾನ್ ಭಾರತ್ ಫಲಾನುಭವಿಗಳ ಜೊತೆ ಸಂವಾದ ನಡೆಸುವರು.