ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಅಂದಾಜು 1500 ಮೆಗಾವ್ಯಾಟ್ ಸಾಮರ್ಥ್ಯದ ʻಸಣ್ಣ ಜಲ ವಿದ್ಯುತ್ (ಎಸ್ಎಚ್ಪಿ) ಸ್ಥಾವರʼಗಳ ಸ್ಥಾಪನೆಗಾಗಿ 2,584.60 ಕೋಟಿ ರೂ.ವೆಚ್ಚದಲ್ಲಿ ʻಸಣ್ಣ ಜಲ ವಿದ್ಯುತ್ (ಎಸ್ಎಚ್ಪಿ) ಅಭಿವೃದ್ಧಿ ಯೋಜನೆ’ಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಗೆ ‘2026-27ನೇ ಹಣಕಾಸು ವರ್ಷದಿಂದ 2030-31ನೇ ಹಣಕಾಸು ವರ್ಷದವರೆಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಯು ವಿವಿಧ ರಾಜ್ಯಗಳಲ್ಲಿ ಸಣ್ಣ ಜಲ ವಿದ್ಯುತ್ ಸ್ಥಾವರಗಳನ್ನು (1-25 ಮೆಗಾವ್ಯಾಟ್ ಸಾಮರ್ಥ್ಯದ ನಡುವೆ) ನಿರ್ಮಿಸಲು ಬೆಂಬಲಿಸುತ್ತದೆ ಮತ್ತು ವಿಶೇಷವಾಗಿ ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಯೋಜನೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಗಡಿ ಇರುವ ಜಿಲ್ಲೆಗಳಲ್ಲಿ ಕೇಂದ್ರದ ಆರ್ಥಿಕ ನೆರವು ಪ್ರತಿ ಮೆಗಾವ್ಯಾಟ್ ಗೆ 3.6 ಕೋಟಿ ರೂಪಾಯಿ ಅಥವಾ ಯೋಜನಾ ವೆಚ್ಚದ ಶೇ.30ರಷ್ಟು ಯಾವುದು ಕಡಿಮೆಯೋ ಅದರಂತೆ ಪ್ರತಿ ಯೋಜನೆಗೆ ಗರಿಷ್ಠ 30 ಕೋಟಿ ರೂಪಾಯಿ ಮಿತಿಯಲ್ಲಿ ಲಭ್ಯವಿರುತ್ತದೆ. ಇತರ ರಾಜ್ಯಗಳಲ್ಲಿ ಪ್ರತಿ ಮೆಗಾವ್ಯಾಟ್ಗೆ 2.4 ಕೋಟಿ ರೂ. ಅಥವಾ ಯೋಜನಾ ವೆಚ್ಚದ ಶೇ.20, ಯಾವುದು ಕಡಿಮೆಯೋ ಅದರಲ್ಲಿ, ಪ್ರತಿ ಯೋಜನೆಗೆ 20 ಕೋಟಿ ರೂ.ಗಳ ಗರಿಷ್ಠ ಮಿತಿಯೊಂದಿಗೆ ಲಭ್ಯವಿರುತ್ತದೆ. ಇದು ದೂರದ ಮತ್ತು ತಲುಪಲು ಕಷ್ಟಕರವಾದ ಸ್ಥಳಗಳಲ್ಲಿನ ಸಣ್ಣ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಅಂತಹ ಯೋಜನೆಗಳಿಗೆ 2,532 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದು ಶುದ್ಧ ಇಂಧನ ಉಪಕ್ರಮಕ್ಕೆ ಉತ್ತೇಜನ ನೀಡಲು, ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಮತ್ತು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಣ್ಣ ಜಲವಿದ್ಯುತ್ ವಲಯದಲ್ಲಿ 15,000 ಕೋಟಿ ರೂ.ಗಳ ಹೂಡಿಕೆಯನ್ನು ತರುವ ಸಾಧ್ಯತೆಯಿದೆ. ಈ ಹೂಡಿಕೆಯು ಶೇ.100ರಷ್ಟು ಯಂತ್ರೋಪಕರಣಗಳು ಮತ್ತು ಸ್ಥಾವರ ನಿರ್ಮಾಣಕ್ಕಾಗಿ ಸ್ಥಳೀಯ ಮೂಲಗಳನ್ನು ಬಳಸಿಕೊಳ್ಳಲಿದ್ದು, ಸ್ವಾವಲಂಬಿ ಭಾರತದ ಉದ್ದೇಶವನ್ನು ಪೂರೈಸುತ್ತದೆ.
ಈ ಯೋಜನೆಯು ಭವಿಷ್ಯದಲ್ಲಿ ಸಣ್ಣ ಜಲವಿದ್ಯುತ್ ಯೋಜನೆಗಳ ಸರಣಿಯನ್ನು ರೂಪಿಸಲು ಸುಮಾರು 200 ಯೋಜನೆಗಳಿಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲು ರಾಜ್ಯಗಳನ್ನು ಉತ್ತೇಜಿಸುತ್ತದೆ. ಇಂತಹ ʻಡಿಪಿಆರ್ʼ ಸಿದ್ಧಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಬೆಂಬಲ ನೀಡಲು 30 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.
ಈ ಯೋಜನೆಯು ಯೋಜನಾ ನಿರ್ಮಾಣದ ಸಮಯದಲ್ಲಿ 51 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಒದಗಿಸುತ್ತದೆ. ಜೊತೆಗೆ ಗ್ರಾಮೀಣ ಮತ್ತು ದೂರದ ಸ್ಥಳಗಳಲ್ಲಿ ತಲೆ ಎತ್ತಲಿರುವ ಸ್ವಸಹಾಯ ಸಹಾಯ ಕೇಂದ್ರಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಸಹ ಉದ್ಯೋಗವನ್ನು ಒದಗಿಸುತ್ತದೆ. ʻಎಸ್ಎಚ್ಪಿʼ ಯೋಜನೆಗಳು ಸ್ವರೂಪದಲ್ಲಿ ವಿಕೇಂದ್ರೀಕೃತವಾಗಿರುವುದರಿಂದ, ದೀರ್ಘ ಪ್ರಸರಣ ಮಾರ್ಗದ ಅವಶ್ಯಕತೆ ಕನಿಷ್ಠವಾಗಿರುತ್ತದೆ ಮತ್ತು ಇದು ಪ್ರಸರಣ ನಷ್ಟವನ್ನು ಸಹ ಕಡಿಮೆ ಮಾಡುತ್ತದೆ.
ಈ ಯೋಜನೆಯ ಆರಂಭದಿಂದ ಸಣ್ಣ ಜಲ ವಿದ್ಯುತ್ ವಲಯ ಪುನಶ್ಚೇತನಗೊಳ್ಳಲಿದೆ ಮತ್ತು ಲಭ್ಯವಿರುವ ಸಾಮರ್ಥ್ಯವನ್ನು ಹೆಚ್ಚು ವೇಗವಾಗಿ ಬಳಸಿಕೊಳ್ಳಲು ನೆರವಾಗಲಿದೆ. ʻಎಸ್ಎಚ್ಪಿʼ ಯೋಜನೆಗಳು ಪರಿಸರಾತ್ಮಕವಾಗಿ ಸಮರ್ಥನೀಯವಾಗಿವೆ. ಏಕೆಂದರೆ ಅವು ದೊಡ್ಡ ಪ್ರಮಾಣದ ಭೂಸ್ವಾಧೀನ, ಅರಣ್ಯನಾಶ ಮತ್ತು ಸಮುದಾಯಗಳ ಸ್ಥಳಾಂತರವನ್ನು ತಪ್ಪಿಸುತ್ತವೆ. ಇದು ಸ್ಥಳೀಯ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ದೂರದ ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ, ಜೊತೆಗೆ ಯೋಜನಾ ಜೀವಿತಾವಧಿಯನ್ನು ಸಾಮಾನ್ಯವಾಗಿ 40 ರಿಂದ 60 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ಹೊಂದಿರುತ್ತದೆ.
*****
The Union Cabinet has approved the Small Hydro Power Development Scheme, which will boost clean energy, attract investments and create employment across rural and remote regions. The Northeast in particular will gain significantly from the scheme.https://t.co/h3OHcxtmwZ
— Narendra Modi (@narendramodi) March 18, 2026