Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026-27ರಿಂದ 2030-31ರ ಅವಧಿಗೆ ಕೇಂದ್ರ ವಲಯದ ಯೋಜನೆಯಾದ ‘ವಿಕಸಿತ ಭಾರತ ಸಾಂಖ್ಯಿಕ ವ್ಯವಸ್ಥೆಯ ಪರಿವರ್ತನೆ, ವಿಶ್ಲೇಷಣೆ ಮತ್ತು ಸಂಶೋಧನಾ ಉಪಕ್ರಮ (VISTAR)’ಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2026-27ರಿಂದ 2030-31ರ ಹಣಕಾಸು ವರ್ಷಗಳ ಅವಧಿಗೆ ₹4,371.10 ಕೋಟಿ ವೆಚ್ಚದ ‘ವಿಕಸಿತ ಭಾರತ ಸಾಂಖ್ಯಿಕ ವ್ಯವಸ್ಥೆಯ ಪರಿವರ್ತನೆ, ವಿಶ್ಲೇಷಣೆ ಮತ್ತು ಸಂಶೋಧನಾ ಉಪಕ್ರಮ (VISTAR)’ ಯೋಜನೆಗೆ ಅನುಮೋದನೆ ನೀಡಿದೆ.

ವಿಕಸಿತ ಭಾರತ 2047ರ ಪ್ರಮುಖ ಉದ್ದೇಶಕ್ಕೆ ಅನುಗುಣವಾಗಿ ರೂಪಿಸಲಾಗಿರುವ VISTAR ಯೋಜನೆಯು, ಅಂಕಿಅಂಶಗಳ ಸಕಾಲಿಕ ಲಭ್ಯತೆ, ದತ್ತಾಂಶದ ಸೂಕ್ಷ್ಮ ಹಾಗೂ ವಿವರವಾದ ಸ್ವರೂಪ ಮತ್ತು ಏಕರೂಪಗೊಳಿಸಿದ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಕೆಗೆ ಸಿದ್ಧವಾಗಿರುವ ದತ್ತಾಂಶ ಸಂಗ್ರಹಗಳ ನಡುವಿನ ಪರಸ್ಪರ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಅಗತ್ಯಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುವ, ನೈಜ-ಸಮಯದ ಹಾಗೂ ಭವಿಷ್ಯದ ಅಗತ್ಯಗಳಿಗೆ ಸನ್ನದ್ಧವಾದ ಅಧಿಕೃತ ಅಂಕಿಅಂಶ ವ್ಯವಸ್ಥೆಯ ಚೌಕಟ್ಟನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.

VISTAR ಯೋಜನೆಯು ತಕ್ಷಣದ ನೀತಿ ಅಗತ್ಯಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಅಗತ್ಯಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಶ್ಯವಾದ ಕಾರ್ಯತಂತ್ರದ ನಮ್ಯತೆಯನ್ನು ಒದಗಿಸಲಿದೆ. ಇದರೊಂದಿಗೆ, ಬೃಹತ್ ಪ್ರಮಾಣದ ಸಮೀಕ್ಷೆಗಳ ಆಯೋಜನೆ ಮತ್ತು ಅನುಷ್ಠಾನ, ಸಮೀಕ್ಷಾ ವಿಧಾನಗಳ ಕುರಿತ ಸಂಶೋಧನೆ, ಡಿಜಿಟಲ್ ಪರಿವರ್ತನೆ ಹಾಗೂ ರಾಷ್ಟ್ರೀಯ ದತ್ತಾಂಶ ಆಡಳಿತ ಕ್ಷೇತ್ರಗಳಲ್ಲಿ ಸಮಗ್ರ ಮತ್ತು ಸಮನ್ವಯಯುತ ವಿಧಾನವನ್ನು ಉತ್ತೇಜಿಸಲಿದೆ. VISTAR ಯೋಜನೆಯು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಎಲ್ಲ ಅಂಕಿಅಂಶ ಹಾಗೂ ದತ್ತಾಂಶ ನಿರ್ವಹಣಾ ಚಟುವಟಿಕೆಗಳನ್ನು ಒಳಗೊಳ್ಳಲಿದೆ. ದೇಶದ ಅಧಿಕೃತ ಅಂಕಿಅಂಶ ವ್ಯವಸ್ಥೆಯನ್ನು ಉನ್ನತೀಕರಿಸುವಲ್ಲಿ ಈ ಯೋಜನೆಯು ಮಹತ್ವದ ಪಾತ್ರ ವಹಿಸಲಿದೆ. VISTAR ಯೋಜನೆಯ ಮೂರು ಘಟಕಗಳು ಈ ಕೆಳಗಿನಂತಿವೆ:

1.    ಘಟಕ 1: ಸಮಗ್ರ ಸಾಂಖ್ಯಿಕ ಕಾರ್ಯಾಚರಣೆಗಳು ಮತ್ತು ವ್ಯವಸ್ಥೆಯ ಬಲವರ್ಧನೆ
2.    ಘಟಕ 2: ಸಾಂಖ್ಯಿಕ ವ್ಯವಸ್ಥೆಯ ಬಲವರ್ಧನೆಗೆ ನೆರವು (ಎಸ್ಎಸ್ಎಸ್)
3.    ಘಟಕ 3: ಆರ್ಥಿಕ ಗಣತಿ (ಇಸಿ)

ಸಮಗ್ರ ಸಾಂಖ್ಯಿಕ ಕಾರ್ಯಾಚರಣೆಗಳು ಮತ್ತು ವ್ಯವಸ್ಥೆಯ ಬಲವರ್ಧನೆ ಘಟಕದಡಿ, 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಹಿಂದಿನ ಅವಧಿಯಲ್ಲಿ ನಡೆಸಿದ್ದ 43 ಪ್ರಮುಖ ಸಮೀಕ್ಷೆಗಳಿಗೆ ಹೋಲಿಸಿದರೆ, 59 ಸಮೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ. ಇದರಿಂದ ವಿವಿಧ ವಲಯಗಳಲ್ಲಿನ ನಿರ್ಣಾಯಕ ದತ್ತಾಂಶ ಕೊರತೆಗಳನ್ನು ನೀಗಿಸಲು ಸಾಧ್ಯವಾಗಲಿದ್ದು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಸುಧಾರಿಸುವುದರ ಜೊತೆಗೆ ಸಕಾಲಿಕವಾಗಿ ಮತ್ತು ನಿರ್ದಿಷ್ಟ ಗುರಿಗಳನ್ನು ಆಧರಿಸಿ ನೀತಿ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ. ಇದಲ್ಲದೆ, ತಂತ್ರಜ್ಞಾನ ಆಧಾರಿತ ದತ್ತಾಂಶ ಸಂಗ್ರಹಣೆ ಮತ್ತು ಬಳಕೆದಾರ ಕೇಂದ್ರಿತ ಮಾಹಿತಿ ಪ್ರಸರಣದಲ್ಲಿ ಇತ್ತೀಚೆಗೆ ಆಗಿರುವ ಡಿಜಿಟಲ್ ಪರಿವರ್ತನೆಗಳ ಆಧಾರದ ಮೇಲೆ, ಅಂಕಿಅಂಶ ಪ್ರಕ್ರಿಯೆಗಳ ಆರಂಭದಿಂದ ಅಂತ್ಯದವರೆಗಿನ ಸಂಪೂರ್ಣ ಡಿಜಿಟಲೀಕರಣಕ್ಕೆ ಸಚಿವಾಲಯ ಆದ್ಯತೆ ನೀಡಲಿದೆ. ಮುಖ್ಯವಾಗಿ ದತ್ತಾಂಶ ಸಂಸ್ಕರಣೆ, ಮೌಲ್ಯೀಕರಣ ಮತ್ತು ವಿಶ್ಲೇಷಣೆಗಾಗಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷೀನ್ ಲರ್ನಿಂಗ್ (ಎಂಎಲ್) ತಂತ್ರಜ್ಞಾನಗಳನ್ನು ನಿಯಮಿತ ಕಾರ್ಯವಿಧಾನಗಳಲ್ಲಿ ಅಳವಡಿಸಿಕೊಳ್ಳುತ್ತದೆ.

ಸೇವಾ ವಲಯದ ಉತ್ಪಾದನೆಯ ಮುಖ್ಯ ಸೂಚ್ಯಂಕ ಮತ್ತು ಅಸಂಘಟಿತ ವಲಯದ ಉದ್ಯಮಗಳ ಸೂಚ್ಯಂಕ ಸೇರಿದಂತೆ ಹೊಸ ಸೂಚ್ಯಂಕಗಳನ್ನು ಬಿಡುಗಡೆ ಮಾಡಲು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಯೋಜಿಸಿದೆ. ದತ್ತಾಂಶ ಸಮನ್ವಯತೆಯ ಮೂಲ ಆಧಾರಸ್ತಂಭಗಳಾದ ಡೇಟಾ ಕ್ಯಾಟಲಾಗಿಂಗ್, ಮೆಷಿನ್ ರೀಡಬಿಲಿಟಿ, ಪರಸ್ಪರ ಕಾರ್ಯಸಾಧ್ಯತೆ, ದತ್ತಾಂಶ ಹಂಚಿಕೆ ಪ್ರೋಟೋಕಾಲ್ಗಳು ಮತ್ತು ವಿನ್ಯಾಸದ ಹಂತದಲ್ಲಿಯೇ ಗೌಪ್ಯತೆಯನ್ನು ಖಾತರಿಪಡಿಸುವ ಕ್ರಮಗಳು ಮುಂತಾದವುಗಳನ್ನು ಸಚಿವಾಲಯವು ಮತ್ತಷ್ಟು ಬಲಪಡಿಸಲಿದೆ. ಆ ಮೂಲಕ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ದತ್ತಾಂಶ ವ್ಯವಸ್ಥೆಗಳ ನಡುವಿನ ಅಡೆತಡೆಗಳನ್ನು ನಿವಾರಿಸಿ, ಕಾರ್ಯಕ್ರಮಗಳ ಉದ್ದೇಶಿತ ಫಲಾನುಭವಿಗಳನ್ನು ಹೆಚ್ಚು ನಿಖರವಾಗಿ ತಲುಪಲು, ಪುನರಾವರ್ತನೆಗಳನ್ನು ಕಡಿಮೆ ಮಾಡಲು ಹಾಗೂ ಸರ್ಕಾರದ ವಿವಿಧ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ದಾರಿ ಮಾಡಿಕೊಡಲಿದೆ. ಮೊಬೈಲ್ ಫೋನ್, ಸ್ಕ್ಯಾನರ್ ಮತ್ತು ಇ-ಕಾಮರ್ಸ್ ದತ್ತಾಂಶದಂತಹ ಪರ್ಯಾಯ ಮೂಲಗಳನ್ನು ಮುಖ್ಯವಾಹಿನಿಗೆ ತರುವ ಮೂಲಕ, ಸಾಂಪ್ರದಾಯಿಕ ಸಮೀಕ್ಷೆಗಳಿಗೆ ಪೂರಕವಾಗಿ ಅವುಗಳನ್ನು ಬಳಸಲು ಸಚಿವಾಲಯ ಉದ್ದೇಶಿಸಿದೆ. ಇದರಿಂದ ಪ್ರತಿಕ್ರಿಯೆದಾರರ ಮೇಲಿನ ಹೊರೆ ಕಡಿಮೆಯಾಗಲಿದೆ, ದತ್ತಾಂಶ ಕೊರತೆಗಳನ್ನು ನೀಗಿಸಲು ಸಾಧ್ಯವಾಗಲಿದೆ ಮತ್ತು ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಬಲಗೊಳ್ಳಲಿದೆ. ಇದಲ್ಲದೆ, ವಿದ್ಯಾರ್ಥಿಗಳಿಗಾಗಿ ಇಂಟರ್ನ್ಶಿಪ್ ಯೋಜನೆ ಹಾಗೂ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ ಸಂಶೋಧನಾ ಪ್ರಸ್ತಾವನೆಗಳನ್ನು ಆಹ್ವಾನಿಸುವ ಮೂಲಕ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಯುವಜನರು ಮತ್ತು ಸಂಶೋಧಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ.

ಸಾಂಖ್ಯಿಕ ವ್ಯವಸ್ಥೆಯ ಬಲವರ್ಧನೆಗೆ ನೆರವು (ಎಸ್ಎಸ್ಎಸ್) ಘಟಕದಡಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶ ಸಾಮರ್ಥ್ಯವನ್ನು ಪರಿವರ್ತಿಸುವ ಉದ್ದೇಶದಿಂದ, ಪರಿಷ್ಕೃತ ಮತ್ತು ಫಲಿತಾಂಶ ಆಧಾರಿತ ಚೌಕಟ್ಟಿನ (ಎಸ್ಎಸ್ಎಸ್ 2.0) ಮೂಲಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಅನುದಾನ ಒದಗಿಸಲಾಗುವುದು. ಜಿಲ್ಲಾ ಮಟ್ಟ ಹಾಗೂ ಇತರ ಹಂತಗಳಲ್ಲಿ ಉತ್ತಮ ಗುಣಮಟ್ಟದ, ಹೆಚ್ಚು ವಿವರವಾದ ದತ್ತಾಂಶವನ್ನು ಸೃಜಿಸುವ ರಾಜ್ಯಮಟ್ಟದ ಸಾಮರ್ಥ್ಯವನ್ನು ಬೆಳೆಸುವುದು, ಸ್ವದೇಶಿ ದತ್ತಾಂಶ ಸಂಸ್ಕರಣಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ನೀತಿ ನಿರೂಪಣೆಯಲ್ಲಿ ದತ್ತಾಂಶ ಬಳಕೆಯನ್ನು ಅಳವಡಿಸಿಕೊಳ್ಳುವುದು ಈ ಘಟಕದ ಪ್ರಮುಖ ಉದ್ದೇಶವಾಗಿದೆ.

ಪ್ರಮುಖ ರಾಷ್ಟ್ರೀಯ ಸಮೀಕ್ಷೆಗಳಾದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್ಎಫ್ಎಸ್), ಗೃಹ ಬಳಕೆ ವೆಚ್ಚ ಸಮೀಕ್ಷೆ (ಎಚ್ಸಿಇಎಸ್) ಮತ್ತು ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ಎಎಸ್ಯುಎಸ್ಇ)ಗಳಲ್ಲಿ ಜಿಲ್ಲಾ ಮಟ್ಟದ ಅಂದಾಜುಗಳು ಹಾಗೂ 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ನಗರಗಳ ಮಟ್ಟದ ಅಂದಾಜುಗಳನ್ನು ಹೆಚ್ಚಿಸುವುದಕ್ಕೆ ಸಚಿವಾಲಯವು ತಾಂತ್ರಿಕ ನೆರವು ನೀಡಲಿದೆ. ಇದರ ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಜಿಡಿಪಿ ಹಾಗೂ ರಾಜ್ಯಮಟ್ಟದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಸಿದ್ಧಪಡಿಸುವ ಕಾರ್ಯಕ್ಕೂ ತಾಂತ್ರಿಕ ನೆರವು ಒದಗಿಸುತ್ತದೆ.

ಆರ್ಥಿಕ ಗಣತಿ (ಇಸಿ) ಘಟಕದಡಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಸಚಿವಾಲಯವು 8ನೇ ಆರ್ಥಿಕ ಗಣತಿಯನ್ನು ನಡೆಸಲಿದೆ. ಈ ಗಣತಿಯು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದವರೆಗೆ ಎಲ್ಲ ಕೃಷಿಯೇತರ ಉದ್ಯಮಗಳ ಹಾಗೂ ಅವುಗಳಲ್ಲಿ ನೇಮಕಗೊಂಡಿರುವ ಕಾರ್ಮಿಕರ ವಿವರಗಳು ಮತ್ತು ಅವರ ಚಟುವಟಿಕೆಗಳ ಕುರಿತಾದ ಸೂಕ್ಷ್ಮ ದತ್ತಾಂಶವನ್ನು ಒದಗಿಸಲಿದೆ. ಇದರಿಂದ ಆರ್ಥಿಕತೆಯ ಅಸಂಘಟಿತ ವಲಯದ ಸ್ಥಿತಿಗತಿಗಳನ್ನು ನಿರ್ಣಯಿಸಲು ಸಾಧ್ಯವಾಗಲಿದೆ. ಅಲ್ಲದೆ, ಉದ್ದೇಶಿತ ಉದ್ಯಮ ಸಮೀಕ್ಷೆಗಳು ಮತ್ತು ಕಾರ್ಯತಂತ್ರದ ಮಧ್ಯಸ್ಥಿಕೆಗಳಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಸಾಂಖ್ಯಿಕ ವ್ಯವಹಾರ ನೋಂದಣಿ (ಎಸ್ಬಿಆರ್) ಅಭಿವೃದ್ಧಿಪಡಿಸಲು ಈ ಗಣತಿಯು ಮೂಲಾಧಾರವಾಗಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟಗಳಲ್ಲಿ ಯೋಜಕರು ಹಾಗೂ ನೀತಿ ನಿರೂಪಕರಿಗೆ ಆರ್ಥಿಕ ಗಣತಿಯ ದತ್ತಾಂಶ ಅತ್ಯಂತ ಉಪಯುಕ್ತವಾಗಲಿದೆ. ಇದು ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಅಸಂಘಟಿತ ವಲಯದ ಕೊಡುಗೆಯನ್ನು ಅಂದಾಜು ಮಾಡಲು ದಾರಿ ಮಾಡಿಕೊಡುತ್ತದೆ.

 

*****