Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

28 ಮೇ 2017ರಂದು ಆಕಾಶವಾಣಿಯಲ್ಲಿ ಪ್ರಸಾರವಾದ ಪ್ರಧಾನಮಂತ್ರಿಯವರ ಮನ್ ಕಿ ಬಾತ್ ನ ಕನ್ನಡ ರೂಪಾಂತರ


ನನ್ನ ನಲ್ಮೆಯ ದೇಶ ವಾಸಿಗಳೇನಮಸ್ಕಾರ. ಬಹುಶಃ ಈ ವರ್ಷದ ಬಿಸಿಲ ಬೇಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ, ಮಳೆಗಾಗಿ ನಾವು ಕಾಯುತ್ತಿದ್ದೇವೆ. ಇಂದು ನಾನು ನಿಮ್ಮ ಜೊತೆ ಮಾತಾಡುತ್ತಿರುವ ಸಂದರ್ಭದಲ್ಲಿ, ರಂಜಾನ್ ಪವಿತ್ರ ಮಾಸ ಈಗಾಗಲೇ ಆರಂಭವಾಗಿದೆ. ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ನಾನು ಭಾರತವಾಸಿಗಳಿಗೆ ಮತ್ತು ವಿಶ್ವದ ಎಲ್ಲ ಜನರಿಗೆ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಬಾಂಧವರಿಗೆ ಈ ಪವಿತ್ರ ಮಾಸದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಂಜಾನ್ ಮಾಸದಲ್ಲಿ ಪ್ರಾರ್ಥನೆ, ಆಧ್ಯಾತ್ಮಿಕತೆ ಮತ್ತು ದಾನಕ್ಕೆ ಉನ್ನತ ಮಹತ್ವ ನೀಡಲಾಗುತ್ತದೆ. ಭಾರತೀಯರಾದ ನಾವು ಎಷ್ಟು ಅದೃಷ್ಟವಂತರೆಂದರೆ, ನಮ್ಮ ಪೂರ್ವಜರು ಎಂಥ ಪರಂಪರೆಯನ್ನು ಸೃಷ್ಟಿಸಿದ್ದಾರೆಂದರೆ. ಎಲ್ಲ ಸಮುದಾಯದ ಜನರು ಮತ್ತು ನಂಬಿಕೆ ಇಲ್ಲಿದ್ದು ಭಾರತ ಮತ್ತು ದೇಶದ 125 ಕೋಟಿ ಜನರೂ ಇದಕ್ಕೆ ಹೆಮ್ಮೆಪಡುತ್ತೇವೆ. ನಮ್ಮದು ಎಂಥ ದೇಶವೆಂದರೆ, ಆಸ್ತಿಕ ಮತ್ತು ನಾಸ್ತಿಕ ಇಬ್ಬರೂ ಇದ್ದಾರೆ;ಮೂರ್ತಿ ಪೂಜೆ ಮಾಡುವವರು, ಮೂರ್ತಿ ಪೂಜೆ ವಿರೋಧಿಸುವವರೂ ಇದ್ದಾರೆ. ಎಲ್ಲ ಬಗೆಯ ವಿಚಾರಧಾರೆ, ಎಲ್ಲ ಬಗೆಯ ಪೂಜಾ ಪದ್ಧತಿಗಳು, ಎಲ್ಲ ಬಗೆಯ ಪರಂಪರೆಗಳನ್ನೂ ಅಂತರ್ಗತ ಮಾಡಿಕೊಂಡು ನಾವು ಒಗ್ಗಟ್ಟಿನಿಂದ ಜೀವಿಸುವ ಕಲೆಯನ್ನು ಅಳವಡಿಸಿಕೊಂಡಿದ್ದೇವೆ. ಅದೂ ಅಲ್ಲದೇ ಧರ್ಮವೇ ಆಗಲಿ,ಸಂಪ್ರದಾಯವೇ ಆಗಲಿ, ವಿಚಾರಧಾರೆಗಳಾಗಲಿ,ಪರಂಪರೆಯಾಗಲಿ ನಮಗೆ ಶಾಂತಿ, ಏಕತೆ ಮತ್ತು ಸದ್ಭಾವನೆಯ ಸಂದೇಶವನ್ನೇ ನೀಡುತ್ತವೆ. ರಂಜಾನ್, ಈ ಪವಿತ್ರ ಮಾಸ ಶಾಂತಿ, ಏಕತೆ ಮತ್ತು ಸದ್ಭಾವನೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಖಂಡಿತ ಸಹಕಾರಿಯಾಗಿರುತ್ತದೆ. ನಾನು ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಕಳೆದ ಬಾರಿ ಮನದಾಳದ ಮಾತಿನಲ್ಲಿ ನಾನು ಒಂದು ಹೊಸ ಶಬ್ದವನ್ನು ಬಳಸಿದ್ದೆ, ಅದರಲ್ಲೂ ಯುವಜನತೆಗೆ ಏನಾದರೂ ಹೊಸತನ್ನು ಮಾಡಿ,ಸುರಕ್ಷಿತ ವಲಯ (comfort zone)ದಿಂದ ಹೊರಬನ್ನಿ, ಹೊಸ ವಿಷಯಗಳ ಅನುಭವಗಳನ್ನು ಪಡೆಯಿರಿ ಎಂದು ಹೇಳಿದ್ದೆ. ಅಲ್ಲದೇ ಜೀವನವನ್ನು ಈ ರೀತಿ ಜೀವಿಸಲು, ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು, ಸವಾಲುಗಳಿಗೆ ಎದೆಯೊಡ್ಡಲು ಇದು ಸೂಕ್ತ ಸಮಯ ಎಂದಿದ್ದೆ. ಬಹಳಷ್ಟು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆಂದು ಇದು ನನಗೆ ಸಂತಸವೆನಿಸುತ್ತದೆ. ಎಲ್ಲರೂ ತಮ್ಮ ಮನದಲ್ಲಿರುವ ಮಾತುಗಳನ್ನು ನನ್ನೊಂದಿಗೆ ಹೇಳಲು ಉತ್ಸುಕತೆ ತೋರಿದ್ದಾರೆ. ನಾನು ಎಲ್ಲ ವಿಷಯಗಳನ್ನೂ ಓದಲಾಗಲಿಲ್ಲ ಅಥವಾಎಲ್ಲರ ಸಂದೇಶಗಳನ್ನೂ ಕೇಳಲು ಸಾಧ್ಯವಾಗಲಿಲ್ಲ, ಏಕೆಂದರೆಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬಂದಿವೆ. ಆದರೆ ನಾನು ಮೇಲ್ನೋಟಕ್ಕೆ ನೋಡಿದಾಗ,ಕೆಲವರು ಸಂಗೀತ ಕಲಿಯುವ ಪ್ರಯತ್ನ ಮಾಡಿದ್ದಾರೆ, ಮತ್ತೆ ಕೆಲವರು ಹೊಸ ವಾದ್ಯದ ಮೇಲೆ ಕೈಯಾಡಿಸುತ್ತಿದ್ದಾರೆ, ಕೆಲವರು ಯು ಟ್ಯೂಬ್ ಬಳಸಿ ಹೊಸ ವಿಷಯಗಳನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ. ಹೊಸ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಅಡುಗೆ ಮಾಡುವುದನ್ನು ಕಲಿಯುತ್ತಿದ್ದರೆ, ಮತ್ತೆ ಕೆಲವರು ನೃತ್ಯ ಮತ್ತು ನಾಟಕಾಭಿನಯ ಕಲಿಯುತ್ತಿದ್ದಾರೆ. ಕೆಲವರಂತೂ ತಾವು ಈಗ ಕವಿತೆ ಬರೆಯಲು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಈಗ ಅವರು ಪ್ರಕೃತಿಯನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಜೀವಿಸುವ ಕಲೆತಿಳಿದುಕೊಳ್ಳುತ್ತಿದ್ದಾರೆ ಹಾಗೂ ಜಗತ್ತನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ನಾನು ಒಂದು ಫೋನ್ ಕರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.

ನಾನು ‘ದೀಕ್ಷಾ ಕಾತ್ಯಾಲ ಮಾತನಾಡುತ್ತಿದ್ದೇನೆ. ನನಗೆ ಓದುವ ಅಭ್ಯಾಸ ಬಹುತೇಕ ಬಿಟ್ಟೇ ಹೋಗಿತ್ತು. ಆದ್ದರಿಂದ ಈ ಬಾರಿ ರಜೆಯಲ್ಲಿ ನಾನು ಓದಲು ನಿರ್ಧರಿಸಿದೆ. ನಾನು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಓದಲು ಆರಂಭಿಸಿದ ತರುವಾಯ ಭಾರತಕ್ಕೆ ಸಾತಂತ್ರ್ಯ ತಂದುಕೊಡಲು ಎಷ್ಟೆಲ್ಲ ಹೋರಾಟ ಮಾಡಬೇಕಾಯಿತು, ಎಷ್ಟು ಬಲಿದಾನ ವಾಗಬೇಕಾಯಿತು, ಎಷ್ಟೊಂದು ಜನ ಸ್ವಾತಂತ್ರ್ಯಯೋಧರು ಜೈಲಿನಲ್ಲಿ ವರ್ಷಗಟ್ಟಲೆ ಕಳೆದರು, ಎಂಬುದು ನನಗೆ ವೇದ್ಯವಾಯಿತು. ತುಂಬಾ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧಿಸಿದ ಭಗತ್ ಸಿಂಗ್ ರಿಂದ ನಾನು ಪ್ರೇರಿತಳಾಗಿದ್ದೇನೆ. ಆದ್ದರಿಂದ ಈ ವಿಷಯದ ಬಗ್ಗೆ ನೀವು ಇಂದಿನ ಯುವ ಪೀಳಿಗೆಗೆ ಏನಾದರೂ ಹೇಳಿ ಎಂದು ಕೋರುತ್ತೇನೆ.’

ನಮ್ಮ ಯುವ ಜನತೆ ದೇಶದ ಇತಿಹಾಸದ ಬಗ್ಗೆ, ನಮ್ಮ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ, ಈ ದೇಶಕ್ಕಾಗಿ ಬಲಿದಾನ ಮಾಡಿದ ಜನರ ಬಗ್ಗೆತಿಳಿಯುವ ಬಗ್ಗೆ ಆಸಕ್ತಿವಹಿಸುತ್ತಿದೆ ಎಂಬುದು ನನಗೆ ಸಂತೋಷವಾಗುತ್ತದೆ. ಲೆಕ್ಕವಿಲ್ಲದಷ್ಟು ಮಹಾಪುರುಷರು ತಮ್ಮ ಯೌವನವನ್ನು ಜೈಲಿನಲ್ಲೇ ಕಳೆದರು. ಎಷ್ಟೋ ಯುವಕರು ನೇಣುಗಂಬವನ್ನೇರಿದರು, ಏನೆಲ್ಲ ಸಂಕಷ್ಟ ಅನುಭವಿಸಿದರು. ಹೀಗಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಮುಕ್ತವಾಗಿ ಉಸಿರಾಡುತ್ತಿದ್ದೇವೆ. ಸ್ವತಂತ್ರ ಹೋರಾಟದಲ್ಲಿ ಜೈಲು ಸೇರಿದ ಶ್ರೇಷ್ಠರು ಓದುವುದರಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮ ಸಮಯವನ್ನು ಕಳೆದರು. ಅವರ ಬರವಣಿಗೆಗಳು ಭಾರತದ ಸ್ವಾತಂತ್ರ್ಯ ಚಳವಳಿಗೆ ಬಹು ದೊಡ್ಡ ಶಕ್ತಿ ನೀಡಿವೆ.

ಬಹಳ ವರ್ಷಗಳ ಹಿಂದೆ ನಾನು ಅಂಡಮಾನ್ ನಿಕೋಬಾರ್‌ಗೆ ಹೋಗಿದ್ದೆ. ಸೆಲ್ಯುಲಾರ್ ಜೈಲು ನೋಡಲು ಅಲ್ಲಿಗೆ ಹೋಗಿದ್ದೆ. ಇಂದು ವೀರ ಸಾವರ್ಕರ್ ಅವರ ಜಯಂತಿ. ಸಾವರ್ಕರ್ ಅವರು ಜೈಲಿನಲ್ಲಿ‘ಮಾಝಿ ಜನ್ಮಠೆ’ ಎಂಬ ಪುಸ್ತಕ ಬರೆದಿದ್ದರು. ಅವರುಗೋಡೆ ಮೇಲೆ ಕವಿತೆಗಳನ್ನು ಬರೆಯುತ್ತಿದ್ದರು, ಒಂದು ಪುಟ್ಟ ಕೋಣೆಯಲ್ಲಿ ಅವರನ್ನು ಸೆರೆ ಹಾಕಲಾಗಿತ್ತು. ಸ್ವಾತಂತ್ರ್ಯ ಯೋಧರು ಎಷ್ಟೆಲ್ಲ ಯಾತನೆ ಸಹಿಸಿರಬೇಡ. ನಾನು ಸಾವರ್ಕರ್ ಅವರ‘ಮಾಝಿ ಜನ್ಮಠೆ’ ಪುಸ್ತಕ ಓದಿದ ಮೇಲೆಯೇ ನನಗೆ ಸೆಲ್ಯುಲಾರ್ ಜೈಲು ನೋಡಬೇಕೆಂದು ಅನಿಸಿದ್ದು.

ಅಲ್ಲಿ ಧ್ವನಿ ಬೆಳಕಿನ ಪ್ರದರ್ಶನ ಕಾರ್ಯಕ್ರಮವೂ ನಡೆಯುತ್ತದೆ. ಅದು ಬಹಳ ಸ್ಫೂರ್ತಿದಾಯಕವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹೋರಾಟಗಾರರು ಭಾರತದ ಯಾವುದೇ ರಾಜ್ಯದವರಾಗಿರಲಿ ಅವರು ಕಾಲಾ ಪಾನಿ ಶಿಕ್ಷೆ ಅನುಭವಿಸುತ್ತಾ ಅಂಡಮಾನ್‌ನ ಈ ಸೆಲ್ಯುಲಾರ್ ಜೈಲಿನಲ್ಲಿ ತನ್ನ ಯೌವನ ಕಳೆಯಬೇಕಾಗಿತ್ತು. ಎಲ್ಲ ರಾಜ್ಯದವರು, ಎಲ್ಲ ಭಾಷಿಕರು, ಎಲ್ಲ ಪ್ರಾಂತ್ಯದವರು, ಎಲ್ಲ ವಯೋಮಾನದವರು ಎಷ್ಟೆಲ್ಲ ಯಾತನೆಯನ್ನು ಅನುಭವಿಸಿದ್ದರು.

ಇಂದು ವೀರ ಸಾವರ್ಕರ್ ಅವರ ಜಯಂತಿ. ನಾನು ದೇಶದ ಯುವಜನತೆಗೆ ಖಂಡಿತ ಹೇಳಬಯಸುತ್ತೇನೆ, ನಮಗೆ ಸ್ವಾತಂತ್ರ್ಯ ಕೊಡಿಸಲು ಅಂದಿನ ಜನರು ಎಷ್ಟು ಯಾತನೆ ಸಹಿಸಿದ್ದರು, ಎಷ್ಟು ಕಷ್ಟಗಳನ್ನು ಅನುಭವಿಸಿದ್ದರು ಎಂಬುದನ್ನು ತಿಳಿಯಲು ಸೆಲ್ಯುಲಾರ್ ಜೈಲಿಗೆ ಹೋಗಿ ಬನ್ನಿ. ನೀವು ಅಲ್ಲಿಗೆ ಹೋದರೆ ಕಾಲಾಪಾನಿ ಎಂದರೇನು ಎಂಬುದು ತಿಳಿಯುತ್ತದೆ. ಎಂದಾದರೂ ಅವಕಾಶ ಸಿಕ್ಕರೆ ನಮ್ಮ ಸ್ವಾತಂತ್ರ್ಯದ ತೀರ್ಥ ಕ್ಷೇತ್ರವಾದ ಈ ಸ್ಥಳಕ್ಕೆ ಹೋಗಿ ಬನ್ನಿ.

ನನ್ನ ನಲ್ಮೆಯ ದೇಶವಾಸಿಗಳೇ 5ನೇ ತಾರೀಖು, ಜೂನ್ತಿಂಗಳ ಮೊದಲ ಸೋಮವಾರ. ಮೇಲ್ನೋಟಕ್ಕೆ ಎಲ್ಲವೂ ಸಾಮಾನ್ಯವಾಗೇ ಕಾಣುತ್ತದೆ., ಆದರೆ ಜೂನ್ 5 ವಿಶೇಷ ಮಹತ್ವ ಪಡೆದಿದೆ. ಏಕೆಂದರೆ ಅಂದು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಈ ವರ್ಷ ‘ನಿಸರ್ಗದೊಂದಿಗೆ ಜನರ ಸಂಪರ್ಕಿಸುವುದು’ ಎಂಬ ಧ್ಯೇಯವಾಕ್ಯ ಘೋಷಿಸಿದೆ. ಸುಲಭ ಶಬ್ದಗಳಲ್ಲಿ ಹೇಳಬೇಕಾದರೆ“back to basics”.ಅಂದರೆ ಮೂಲಕ್ಕೆ ಮರಳುವುದು. ನಿಸರ್ಗದೊಂದಿಗೆ ಸಂಪರ್ಕ ಅಂದರೆ ಏನರ್ಥ – ನನ್ನ ಪ್ರಕಾರ ನಮ್ಮೊಂದಿಗೇ ನಾವೇ ಸಂಪರ್ಕ ಹೊಂದುವುದು.

ನಿಸರ್ಗದೊಂದಿಗೆ ಸಂಪರ್ಕ ಅಂದರೆ ಉತ್ತಮ ಗ್ರಹ ಪೋಷಿಸುವುದು ಎಂದು. ಈ ಮಾತನ್ನು ಮಹಾತ್ಮಾ ಗಾಂಧೀ ಅವರಿಗಿಂತ ಉತ್ತಮ ರೀತಿಯಲ್ಲಿ ಯಾರು ಹೇಳಲು ಸಾಧ್ಯ? ಮಹಾತ್ಮಾ ಗಾಂಧೀಜಿ ಹೇಳುತ್ತಿದ್ದರು “ ನಾವು ಯಾವ ಜಗತ್ತನ್ನು ನೋಡುವುದಿಲ್ಲವೋ ಅದರ ಬಗ್ಗೆಯೂ ಕಾಳಜಿವಹಿಸಬೇಕು’. ಅಂದರೆ ನಾವು ಕಾಣದ ಜಗತನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಪ್ರಕೃತಿಯಲ್ಲಿ ಒಂದು ಶಕ್ತಿಯಿದೆ. ತುಂಬಾ ದಣಿವಾಗಿ ಬಂದಾಗ ಒಂದು ಲೋಟ ನೀರನ್ನು ಮುಖಕ್ಕೆ ಹಾಕಿಕೊಂಡರೆ ಎಂಥ ತಾಜಾತನ ದೊರಕುತ್ತದೆ ಎಂಬ ಅನುಭವ ನಿಮಗೂ ಆಗಿರಬಹುದು. ತುಂಬಾ ದಣಿದು ಬಂದಾಗ ಕೋಣೆಯ ಕಿಟಕಿಗಳನ್ನು ತೆರೆದು, ತಾಜಾ ಗಾಳಿಯ ಉಸಿರಾಡಿದಾಗ ನವ ಚೈತನ್ಯ ಮೂಡುತ್ತದೆ. ಪಂಚ ಮಹಾಭೂತಗಳಿಂದಾದ ಶರೀರ ಅವುಗಳೊಂದಿಗೆ ಸಂಪರ್ಕವೇರ್ಪಟ್ಟಾಗ ತನ್ನಷ್ಟಕ್ಕೇ ದೇಹದಲ್ಲಿ ಒಂದು ಬಗೆಯ ಚೈತನ್ಯ ಮೂಡುತ್ತದೆ. ಒಂದು ಹೊಸ ಶಕ್ತಿ ಹೊರ ಹೊಮ್ಮುತ್ತದೆ. ಇದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಆದರೆ ನಾವು ಅದನ್ನು ಗ್ರಹಿಸುವುದಿಲ್ಲ. ಅದನ್ನು ನಾವು ಒಂದು ಸೂತ್ರದಲ್ಲಿ ಜೋಡಿಸುವುದಿಲ್ಲ. ಇನ್ನು ಮುಂದೆ ನಿಮಗೆ ಯಾವಾಗ ಪ್ರಾಕೃತಿಕ ಸ್ಥಿತಿಯೊಂದಿಗೆ ಸಂಪರ್ಕ ಬರುತ್ತದೆಯೋ ಆಗ ನಿಮ್ಮಲ್ಲಿ ಒಂದು ಹೊಸ ಚೈತನ್ಯ ಪುಟಿಯುತ್ತದೆ. ಹಾಗಾಗಿ ಜೂನ್ 5 ರಂದು ಪ್ರಕೃತಿಯೊಂದಿಗೆ ಸಂಪರ್ಕದ ಜಾಗತಿಕ ಅಭಿಯಾನವನ್ನು ನಮ್ಮ ಸ್ವಂತ ಅಭಿಯಾನವನ್ನಾಗಿ ಮಾಡಬೇಕು. ನಮ್ಮ ಪೂರ್ವಜರು ಮಾಡಿದ ಪ್ರಕೃತಿಯ ರಕ್ಷಣೆಯಿಂದ ನಮಗೆ ಲಾಭವಾಗುತ್ತಿದೆ. ನಾವು ರಕ್ಷಿಸಿದರೆ ನಮ್ಮ ಮುಂಬರುವ ಪೀಳಿಗೆಗೆ ಅದರ ಲಾಭ ಸಿಗುತ್ತದೆ. ವೇದಗಳಲ್ಲಿ ಪೃಥ್ವಿ ಮತ್ತು ಪರಿಸರವನ್ನು ಶಕ್ತಿಯ ಮೂಲವೆಂದು ಹೇಳಲಾಗಿದೆ. ನಮ್ಮ ವೇದಗಳಲ್ಲಿ ಇದರ ವರ್ಣನೆಯೂ ಲಭ್ಯ. ಅಥರ್ವ ವೇದ ಸಂಪೂರ್ಣವಾಗಿ ಪರಿಸರದ ಮಾರ್ಗಸೂಚಿ ಗ್ರಂಥವಾಗಿದೆ ಮತ್ತು ಸಾವಿರಾರು ವರ್ಷಗಳಿಗೆ ಮೊದಲೇ ಅದರಲ್ಲಿ “ಭೂಮಿ ತಾಯಿ ನಾನು ಅವಳ ಮಗ” ಎಂದು ಹೇಳಲಾಗಿದೆ. ವೇದಗಳ ಪ್ರಕಾರ ನಮ್ಮಲ್ಲಿರುವ ಪರಿಶುದ್ಧತೆಗೆ ಭೂಮಿಯೇ ಕಾರಣ. ಭೂಮಿ ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು. ನಾವು ಭಗವಾನ್ ಬುದ್ಧನನ್ನು ಸ್ಮರಿಸಿದರೆ, ಮಹಾತ್ಮಾ ಬುದ್ಧನ ಜನ್ಮ, ಅವನಿಗೆ ಜ್ಯಾನೋದಯವಾದದ್ದು ಮತ್ತು ಅವರ ಪರಿನಿರ್ವಾಣ ಎಲ್ಲವೂ ಒಂದು ವೃಕ್ಷದ ಕೆಳಗೆ ಎಂಬುದು ಬೆಳಕಿಗೆ ಬರುತ್ತದೆ. ನಮ್ಮ ದೇಶದಲ್ಲಿ ಅಕ್ಷರಸ್ಥರಾಗಿರಲಿ, ಅನಕ್ಷರಸ್ಥರಾಗಿರಲಿ,ನಗರವಾಸಿಗಳಾಗಿರಲಿ ಗ್ರಾಮಸ್ಥರಾಗಿರಲಿ, ಆದಿವಾಸಿಗಳಾಗಿರಲಿ ಎಷ್ಟೋ ಹಬ್ಬಗಳು, ಪೂಜಾ ವಿಧಿಗಳ ಮೂಲಕ ಪ್ರಕೃತಿ ಪ್ರೇಮವನ್ನು ಬಿಂಬಿಸುವುದು ಒಂದು ಸಹಜ ಸಾಮಾಜಿಕ ಜೀವನದ ಭಾಗವಾಗಿದೆ. ಆದರೆ ಅದನ್ನು ಆಧುನಿಕ ಶಬ್ದಗಳೊಂದಿಗೆ, ಆಧುನಿಕ ವಾದದ ಜೊತೆಗೆ ಮೇಳೈಸಬೇಕಿದೆ.

ಈ ದಿನಗಳಲ್ಲಿ ನಾನು ನಮ್ಮ ರಾಜ್ಯಗಳಿಂದ ಸುದ್ದಿ ಸ್ವೀಕರಿಸುತ್ತಿದ್ದೇನೆ. ಹೆಚ್ಚು ಕಡಿಮೆ ಎಲ್ಲ ರಾಜ್ಯಗಳಲ್ಲೂ ಮಳೆಗಾಲ ಆರಂಭವಾಗುತ್ತಿದ್ದಂತೆ ಸಸಿ ನೆಡುವ ದೊಡ್ಡ ಆಂದೋಲನವೇ ಶುರುವಾಗುತ್ತದೆ. ಕೋಟಿಗಟ್ಟಲೆ ಸಸಿಗಳನ್ನು ನೆಡಲಾಗುತ್ತದೆ. ಶಾಲೆಯ ಮಕ್ಕಳನ್ನೂ ಇದಕ್ಕಾಗಿ ಒಗ್ಗೂಡಿಸಲಾಗುತ್ತದೆ. ಸಮಾಜ ಸೇವಾ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಒಗ್ಗೂಡುತ್ತವೆ,ಸರ್ಕಾರ ಸ್ವತಃ ಮುಂದಡಿಯಿಡುತ್ತದೆ. ನಾವು ಕೂಡ ಈ ಮಳೆಗಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ನಮ್ಮ ಕೊಡುಗೆ ನೀಡೋಣಪ್ರೋತ್ಸಾಹಿಸೋಣ.

ನನ್ನ ನಲ್ಮೆಯ ದೇಶವಾಸಿಗಳೇ, ಜೂನ್ 21ಈಗ ವಿಶ್ವಕ್ಕೆ ಅತ್ಯಂತ ಚಿರಪರಿಚಿತ ದಿನವಾಗಿದೆ. ವಿಶ್ವ ಯೋಗ ದಿನವೆಂದು ಸಂಪೂರ್ಣ ವಿಶ್ವವೇ ಆಚರಿಸುತ್ತಿದೆ. ಬಹಳ ಕಡಿಮೆ ಅವಧಿಯಲ್ಲಿ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವಾಗಿ ವಿಶ್ವದ ಮೂಲೆ ಮೂಲೆಗೂ ಹಬ್ಬಿದೆ. ಜನರನ್ನು ಒಗ್ಗೂಡಿಸುತ್ತಿದೆ. ಒಂದೆಡೆ ವಿಶ್ವದಲ್ಲಿ ವಿಛಿದ್ರಕಾರಿ ಶಕ್ತಿಗಳು ತಮ್ಮ ವಿಕೃತ ಮುಖ ತೋರುತ್ತಿರುವಂಥ ಈ ಸಮಯದಲ್ಲಿ ವಿಶ್ವಕ್ಕೆ ಭಾರತ ಒಂದು ಅದ್ಭುತ ಕೊಡುಗೆ ನೀಡಿದೆ. ಯೋಗದ ಮೂಲಕ ವಿಶ್ವವನ್ನು ಒಂದೇ ಸೂತ್ರದಲ್ಲಿ ನಾವು ಜೋಡಿಸಿದ್ದೇವೆ. ಹೇಗೆ ಯೋಗ,ಶರೀರ,ಮನಸ್ಸು,ಬುದ್ಧಿ ಮತ್ತು ಆತ್ಮವನ್ನು ಜೋಡಿಸುತ್ತದೆಯೋ ಹಾಗೆಯೇ ಯೋಗ ವಿಶ್ವವನ್ನು ಒಗ್ಗೂಡಿಸುತ್ತಿದೆ. ಇಂದಿನ ಜೀವನಶೈಲಿಯಿಂದಾಗಿ,ಧಾವಂತದಿಂದಾಗಿ, ಹೆಚ್ಚುತ್ತಿರುವ ಜವಾಬ್ದಾರಿಗಳಿಂದಾಗಿ ಒತ್ತಡರಹಿತ ಜೀವನ ಕಷ್ಟಸಾಧ್ಯವಾಗಿದೆ. ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಯುವಜನತೆಗೆ ರೋಗಗಳು ಬರುತ್ತಿರುವುದನ್ನು ನೋಡುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಒತ್ತಡರಹಿತ ಜೀವನ ಸಾಗಿಸಲು ಯೋಗ ದೊಡ್ಡ ಪಾತ್ರ ವಹಿಸುತ್ತಿದೆ. ಯೋಗ, ಆರೋಗ್ಯ ಮತ್ತು ಸದೃಢತೆ ಎರಡನ್ನೂ ಖಚಿತಪಡಿಸುತ್ತದೆ. ಯೋಗ ಎಂಬುದು ಕೇವಲ ಶಾರೀರಿಕ ವ್ಯಾಯಾಮವಲ್ಲ. ದೈಹಿಕವಾಗಿ,ಮಾನಸಿಕವಾಗಿ, ವಿಚಾರಗಳ ಮೂಲಕ, ಆಚಾರಗಳ ಮೂಲಕ ಸ್ವಸ್ಥತೆಯ ಒಂದು ಆಂತರಿಕ ಯಾತ್ರೆ ಹೇಗೆ ಸಾಗುತ್ತದೆ ಎಂಬುದನ್ನು ಅನುಭವಿಸುವುದಾಗಿದೆ. ಇದು ಯೋಗದಿಂದ ಮಾತ್ರ ಸಾಧ್ಯ. ಎರಡು ದಿನಗಳ ಹಿಂದಷ್ಟೇ ನಾನು ಯೋಗ ದಿನದ ಕುರಿತು ವಿಶ್ವದ ಎಲ್ಲ ಸರ್ಕಾರಗಳಿಗೆ, ಎಲ್ಲ ನಾಯಕರಿಗೆ ಪತ್ರ ಬರೆದಿದ್ದೇನೆ.

ಕಳೆದ ವರ್ಷ ನಾನು ಯೋಗಕ್ಕೆ ಸಂಬಂಧಿಸಿದ ಕೆಲ ಸ್ಪರ್ಧೆಗಳನ್ನು ಮತ್ತುಕೆಲವು ಪ್ರಶಸ್ತಿಗಳನ್ನು ಘೋಷಿಸಿದ್ದೆ. ನಿಧಾನವಾಗಿ ಈ ದಿಕ್ಕಿನಲ್ಲಿ ಕೆಲಸ ಮುಂದುವರೆಯುವುದು. ನನಗೆ ಒಂದು ಸಲಹೆ ಬಂದಿದೆ ಮತ್ತು ಈ ಮೌಲ್ಯಯುಕ್ತ ಸಲಹೆ ನೀಡಿದವರಿಗೆ ಅಭಿನಂದಿಸುತ್ತೇನೆ. ತುಂಬಾ ಆಸಕ್ತಿಕರ ಸಲಹೆ ನೀಡಿದ್ದಾರೆ. ಅವರು ಹೀಗೆ ಹೇಳಿದ್ದಾರೆ, “ಇದು 3 ನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ನೀವು ಒಂದೇ ಕುಟುಂಬ 3 ತಲೆಮಾರುಗಳು ಈ ಅಂತಾರಾಷ್ಟ್ರೀಯ ಯೋಗ ದಿನದಂದು ಒಟ್ಟಿಗೇ ಯೋಗ ಮಾಡಲಿ ಎಂದು ಮನವಿ ಮಾಡಿ,” ಎಂದಿದ್ದಾರೆ. ಅಜ್ಜಿ – ತಾತ ಆಗಿರಲಿ, ಅಮ್ಮ-ಅಪ್ಪ ಆಗಿರಲಿ, ಮಗನೇ ಆಗಲಿ ಮಗಳೇ ಆಗಿರಲಿ 3 ತಲೆಮಾರುಗಳು ಒಟ್ಟಿಗೇ ಯೋಗ ಮಾಡಲಿ ಮತ್ತು ತಮ್ಮ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಲಿ. ನಿನ್ನೆ ಇಂದು ನಾಳೆ ಎಂಥ ಅದ್ಭುತ ಸಂಯೋಗವೆಂದರೆ ಯೋಗಕ್ಕೆ ಹೊಸ ಆಯಾಮವೇ ದೊರೆಯುವುದು. ಈ ಸಲಹೆಗಾಗಿ ಧನ್ಯವಾದಗಳು. ನನಗೂ ಅನ್ನಿಸುತ್ತಿದೆ, ಸೆಲ್ಫಿ ವಿತ್ ಡಾಟರ್ ಅಭಿಯಾನದಲ್ಲಿ ಬಹಳ ರೋಚಕ ಅನುಭವವಾಗಿತ್ತು. ಈ 3 ತಲೆಮಾರುಗಳು ಒಟ್ಟಿಗೇ ಯೋಗ ಮಾಡುವ ಫೋಟೊ ಕೂಡ ದೇಶ ಮತ್ತು ವಿಶ್ವದಲ್ಲಿ ಕೌತುಕವನ್ನು ಹುಟ್ಟುಹಾಕುತ್ತದೆ. ನೀವು ಕೂಡ ನರೇಂದ್ರ ಮೋದಿ ಆಪ್ ಗೆ, ಮೈ ಗೌ ಗೆ ಎಲ್ಲೆಲ್ಲಿ 3 ತಲೆಮಾರುಗಳು ಒಟ್ಟಿಗೇ ಯೋಗ ಮಾಡುತ್ತಿವೆಯೋ ಆ ಫೋಟೊಗಳನ್ನು ಕಳುಹಿಸಿ. ನಿನ್ನೆ, ಇಂದು ಮತ್ತು ನಾಳೆಯ ಫೋಟೊ ಇದಾಗಲಿದೆ. ಇದು ಸುವರ್ಣಮಯ ನಾಳೆಗಳನ್ನು ಖಚಿತಪಡಿಸುತ್ತದೆ. ನಾನು ನಿಮ್ಮೆಲ್ಲರನ್ನೂ ಆಮಂತ್ರಿಸುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿವಸಕ್ಕೆ ಇನ್ನೂ 3 ವಾರಗಳು ಬಾಕಿ ಇವೆ. ಇಂದೇ ಅಭ್ಯಾಸದಲ್ಲಿ ತೊಡಗಿಕೊಳ್ಳಿ. ನಾನು ಜೂನ್ 1 ರಿಂದ ಪ್ರತಿದಿನ ಟ್ವಿಟರ್‌ನಲ್ಲಿ ಯೋಗಕ್ಕೆ ಸಂಬಂಧಿಸಿದ ಏನಾದರೂ ವಿಷಯ ಪೋಸ್ಟ್ ಮಾಡುತ್ತಿರುತ್ತೇನೆ ಮತ್ತು ನಿರಂತರವಾಗಿ ಜೂನ್ 21 ರವರೆಗೆ ಮಾಡುತ್ತಲೇ ಇರುತ್ತೇನೆ.

ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವೂ 3 ವಾರ ಯೋಗವನ್ನು ಪ್ರಚಾರ ಮಾಡಿ. ಪ್ರಸಾರ ಮಾಡಿ, ಜನರನ್ನು ಒಗ್ಗೂಡಿಸಿ, ಒಂದು ರೀತಿ ಇದು ರೋಗ ಬಾರದಂತೆ ತಡೆಯುವ (preventive health care)ಆಂದೋಲನವಾಗಲಿ. ಇದರಲ್ಲಿ ಭಾಗವಹಿಸಲು ಎಲ್ಲರನ್ನೂ ಆಮಂತ್ರಿಸುತ್ತಿದ್ದೇನೆ. ನೀವು ನನಗೆ ಪ್ರಧಾನ ಸೇವಕನ ರೂಪದಲ್ಲಿ ಕಾರ್ಯನಿರ್ವಹಿಸಲು ಜವಾಬ್ದಾರಿ ಕೊಟ್ಟ ನಂತರ ಕೆಂಪು ಕೋಟೆ ಮೇಲಿಂದ ನಾನು ಆಗಸ್ಟ್ 15 ರಂದು ಮೊದಲ ಬಾರಿಗೆ ಮಾತಾಡುವ ಅವಕಾಶ ಸಿಕ್ಕಿತ್ತು. ಸ್ವಚ್ಛತೆ ಕುರಿತು ನಾನು ಮಾತಾಡಿದ್ದೆ. ಅಂದಿನಿಂದ ಇಲ್ಲಿವರೆಗೆ ನಾನು ಭಾರತದ ಮೂಲೆ ಮೂಲೆಗೆ ಪ್ರವಾಸ ಮಾಡುತ್ತಿದ್ದೇನೆ. ಕೆಲವರು ಮೋದಿ ಏನು ಮಾಡುತ್ತಾರೆ? ಮೋದಿ ಎಲ್ಲಿಗೆ ಹೋಗುತ್ತಾರೆ? ಮೋದಿಯವರು ಏನೇನು ಮಾಡಿದರು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಡುತ್ತಾರೆ ಎಂಬುದನ್ನು ಗಮನಿಸಿದ್ದೇನೆ. ಏಕೆಂದರೆ ನನಗೆ ಒಂದು ಆಸಕ್ತಿಕರವಾದ ಫೋನ್ ಕಾಲ್ ಬಂತು. ನಾನೂ ಕೂಡಾ ಈ ನಿಟ್ಟಿನಲ್ಲಿ ಯೋಚಿಸಿರಲಿಕ್ಕಿಲ್ಲ. ಅವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಫೋನ್ ಕಾಲ್ ನಿಂದ ನಿಮಗೂ ತಿಳಿಯುತ್ತದೆ.

‘ನಮಸ್ಕಾರ ಪ್ರಧಾನಮಂತ್ರಿ ಮೋದಿ ಅವರೇ, ನಾನು ನೈನಾ ಮುಂಬೈಯಿಂದ ಮಾತಾಡುತ್ತಿದ್ದೇನೆ. ಮೋದಿ ಅವರೇ ನೀವು ಎಲ್ಲೆಲ್ಲಿ ಹೋಗುವಿರೋ ಅಲ್ಲೆಲ್ಲ ಜನರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬುದನ್ನು ನಾನು ಟಿ ವಿ ಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಅದು ಮುಂಬೈ ಆಗಿರಲಿ ಇಲ್ಲವೆ ಸೂರತ್ ಆಗಿರಲಿ ನಿಮ್ಮ ಆಗಮನದಿಂದ ಜನರು ಸಾಮೂಹಿಕವಾಗಿ ಸ್ವಚ್ಛತೆಯನ್ನು ಒಂದು ಆಂದೋಲನದ ರೂಪದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ದೊಡ್ಡವರ ಜೊತೆಗೆ ಮಕ್ಕಳಲ್ಲೂ ಸ್ವಚ್ಛತೆ ಬಗ್ಗೆ ಅರಿವು ಮೂಡಿದೆ. ಎಷ್ಟೋ ಸಾರಿ ದೊಡ್ಡವರು ರಸ್ತೆ ಮೇಲೆ ಕಸ ಹಾಕುತ್ತಿರುವಾಗ ಮಕ್ಕಳು ಆಕ್ಷೇಪಿಸುವುದನ್ನು ನಾನು ನೋಡಿದ್ದೇವೆ. ಕಾಶಿಯ ಘಾಟ್ ಗಳಲ್ಲಿ ನೀವು ಸ್ವಚ್ಛತೆಯ ಆರಂಭಕ್ಕೆ ಏನು ಮುನ್ನುಡಿ ಬರೆದಿದ್ದಿರೋ ಅದೇ ಈಗ ನಿಮ್ಮ ಪ್ರೇರಣೆಯಿಂದಾಗಿ ಅಭಿಯಾನದ ರೂಪ ಪಡೆದಿದೆ.

ನಿಮ್ಮ ಮಾತು ಸತ್ಯ. ನಾನು ಎಲ್ಲೆಲ್ಲಿ ಹೋಗುತ್ತೇನೆಯೋ ಅಲೆಲ್ಲ್ಲಾ ಸರ್ಕಾರಿ ವರ್ಗದವರು ಸ್ವಚ್ಛತೆ ಕೈಗೊಳ್ಳುತ್ತಾರೆ, ಜೊತೆಗೆ ಈ ಮಧ್ಯೆ ಸಮಾಜದಲ್ಲೂ ಸ್ವಚ್ಛತೆಯ ಒಂದು ಸಾಮಾಜಿಕ ಕಾರ್ಯಕ್ರಮವಾಗುತ್ತಿದೆ. ನಾನು ಹೋಗುವ 5 ದಿನಗಳಿಗೂ ಮೊದಲು, 7 ದಿನಗಳಿಗೂ ಮೊದಲು, 10 ದಿನಗಳಿಗೆ ಮುಂಚೆ ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛತೆ ಕಾರ್ಯಕ್ರಮಗಳು ನಡೆಯುತ್ತವೆ. ಮಾಧ್ಯಮ ಕೂಡಾ ಅದಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ನೀಡುತ್ತದೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ನಾನು ಗುಜರಾತ್‌ನ ಕಚ್ ಗೆ ಹೋಗಿದ್ದೆ. ಅಲ್ಲಿ ತುಂಬಾ ದೊಡ್ಡ ಸ್ವಚ್ಛತಾ ಅಭಿಯಾನ ನಡೆಯಿತು. ನಾನು ಇದನ್ನು ಸಮಗ್ರವಾಗಿ ಗಮನಿಸಿರಲಿಲ್ಲ. ಆದರೆ ಫೋನ್ ಕಾಲ್ ಬಂದ ಮೇಲೆ ಆಲೋಚಿಸಲಾರಂಭಿಸಿದೆ, ನಿಮ್ಮ ಮಾತು ಸರಿಯಾಗಿದೆ. ಈ ವಿಷಯ ತಿಳಿದು ನನಗೆ ಎಷ್ಟು ಆನಂದವಾಗುತ್ತದೆ ಎಂದು ನೀವು ಊಹಿಸಬಹುದು ಮತ್ತು ದೇಶವೂ ಈ ವಿಷಯಗಳನ್ನು ಬಹಳ ಉತ್ತಮ ರೀತಿಯಲ್ಲಿ ಗಮನಿಸುತ್ತಿದೆ. ನನ್ನ ಪ್ರವಾಸದ ಜೊತೆಗೆ ಸ್ವಚ್ಛತೆಯನ್ನು ಜೋಡಿಸಲಾಗಿದೆ ಎಂದು ತಿಳಿದಾಗ ನನಗೆ ಇದಕ್ಕಿಂತ ಹೆಚ್ಚಿನ ಖುಷಿ ಏನು ಬೇಕು ಹೇಳಿ. ಪ್ರಧಾನಮಂತ್ರಿಯವರ ಸ್ವಾಗತಕ್ಕಾಗಿ ಏನು ಸಿದ್ಧತೆ ಆಗಬೇಕು ಅದು ಆಗುತ್ತದೆ ಆದರೆ ಸ್ವಚ್ಛತೆ ಆದ್ಯತೆ ವಿಷಯವಾಗಿರುತ್ತದೆ. ಇದು ಸ್ವಚ್ಛತಾ ಪ್ರೇಮಿಗಳಿಗೂ ಆನಂದದ ಸಂಗತಿಯಾಗಿದೆ ಮತ್ತು ಸ್ಫೂರ್ತಿದಾಯಕವಾಗಿದೆ. ಈ ಸ್ವಚ್ಛತೆಯ ಕೆಲಸಕ್ಕೆ ಶಕ್ತಿಯನ್ನು ತುಂಬಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಒಬ್ಬರು ನನಗೆ ಒಂದು ಸಲಹೆ ನೀಡಿದ್ದಾರೆ. ಒಂದು ರೀತಿಯಲ್ಲಿ ಅದು ತುಂಬಾ ತಮಾಷೆಯಾಗಿದೆ. ನನಗೆ ಅದನ್ನು ಮಾಡಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ.‘ಮೋದಿ ಅವರೇ ನೀವು ಪ್ರವಾಸ ಕೈಗೊಳ್ಳುವಾಗ ಯಾರೇ ನಿಮ್ಮನ್ನು ಅಹ್ವಾನಿಸಿದರೂ ಅವರಿಗೆ ನೀವು ನನ್ನನ್ನು ಆಹ್ವಾನಿಸುವುದಾದರೆ ಸ್ವಚ್ಛತೆಯ ಮಟ್ಟ ಹೇಗಿರುತ್ತದೆ?ನನಗೆ ನೀವು ಎಷ್ಟು ಟನ್ ಕಸ ಕೊಡುಗೆಯಾಗಿ ಕೊಡುತ್ತೀರಿ,ಅದನ್ನಾಧರಿಸಿ ನಾನು ನನ್ನ ಪ್ರವಾಸ ನಿರ್ಧರಿಸುವೆ ಎಂದು ಹೇಳಿ ಎಂದಿದ್ದಾರೆ. ಕಲ್ಪನೆ ತುಂಬಾ ಚೆನ್ನಾಗಿದೆ ಆದರೆ ಈ ಬಗ್ಗೆ ನಾನು ಯೋಚಿಸಬೇಕು. ಆಂದೋಲನ ಹುಟ್ಟುಹಾಕಬೇಕು ಎಂಬ ಮಾತು ಸೂಕ್ತವಾಗಿದೆ. ಕೊಡುಗೆ, ಉಡುಗೊರೆ ಕೊಡುವ ಬದಲಾಗಿ ನಾವು ಇಷ್ಟು ಟನ್ ಕಸವನ್ನು ಸ್ವಚ್ಛ ಮಾಡಿದರೆ ಅದೇ ದೊಡ್ಡ ಉಡುಗೊರೆ ಅಲ್ಲವೇ. ಎಷ್ಟೊಂದು ಜನರನ್ನು ಅನಾರೋಗ್ಯದಿಂದ ರಕ್ಷಿಸಬಹುದು. ಇದು ಎಷ್ಟು ದೊಡ್ಡ ಮಾನವತೆಯ ಕೆಲಸವಾಗುತ್ತದೆ. ಈ ಕಸ ಕಡ್ಡಿಯನ್ನು ನಾವು ವ್ಯರ್ಥ ಎಂದುಕೊಳ್ಳಲೇಬಾರದು. ಅದು ಐಶ್ವರ್ಯ ಆಗಿದೆ ಮತ್ತು ಒಂದು ಸಂಪನ್ಮೂಲವಾಗಿದೆ. ಇದನ್ನು ಕೇವಲ ಕಸದ ರೂಪದಲ್ಲಿ ನೋಡಬೇಡಿ. ಈ ಕಸ ಕಡ್ಡಿಯನ್ನು ನಾವು ಐಶ್ವರ್ಯ ಎಂದು ಪರಿಗಣಿಸಲಾರಂಭಿಸಿದರೆ ತ್ಯಾಜ್ಯ ನಿರ್ವಹಣೆಯ ಹಲವು ಹೊಸ ಹೊಸ ಮಾರ್ಗಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.ನವೋದ್ಯಮದೊಂದಿಗೆ ಕೈ ಜೋಡಿಸಿದ ಯುವ ಜನತೆ ಕೂಡಾ ಹೊಸ ಹೊಸ ಯೋಜನೆಗಳೊಂದಿಗೆ, ಹೊಸ ಸಾಧನಗಳೊಂದಿಗೆ ಮುಂದೆ ಬರುತ್ತಿದ್ದಾರೆ.

ಭಾರತ ಸರ್ಕಾರ, ರಾಜ್ಯ ಸರ್ಕಾರದ ನೆರವಿನಿಂದ, ನಗರದ ಜನಪ್ರತಿನಿಧಿಗಳ ಸಹಾಯದಿಂದ ತ್ಯಾಜ್ಯ ನಿರ್ವಹಣೆಯ ಒಂದು ದೊಡ್ಡ ಮಹತ್ವ ಪೂರ್ಣ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದೆ. ಜೂನ್ 5ರ, ವಿಶ್ವ ಪರಿಸರ ದಿನದಂದು ದೇಶದ ಸುಮಾರು 4 ಸಾವಿರ ನಗರಗಳಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಸಂಗ್ರಹಿಸಲು ಆ ರೀತಿಯ ಸಾಧನಗಳು ಲಭ್ಯವಾಗಲಿವೆ.

ಎರಡು ಬಗೆಯ ಕಸದ ಬುಟ್ಟಿಗಳು ಲಭ್ಯವಾಗಲಿವೆ. ಒಂದು ಹಸಿರು ಬಣ್ಣದ್ದು ಇನ್ನೊಂದು ನೀಲಿ ಬಣ್ಣದ್ದು. ಎರಡು ಪ್ರಕಾರದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಒಂದು ಹಸಿ ಕಸ ಮತ್ತೊಂದು ಒಣ ಕಸ. ಕಸದ ಬುಟ್ಟಿಗಳನ್ನು ಇಡುತ್ತಿರುವ ನಾಲ್ಕು ಸಾವಿರ ನಗರಗಳಲ್ಲಿ ನಾವು ಶಿಸ್ತು ಪಾಲಿಸಿದರೆ? ಒಣ ಕಸವನ್ನು ನೀಲಿ ಬುಟ್ಟಿಯಲ್ಲಿ, ಹಸಿ ಕಸವನ್ನು ಹಸಿರು ಬುಟ್ಟಿಯಲ್ಲಿ ಹಾಕಿ. ಉದಾಹರಣೆಗೆ ಅಡುಗೆ ಮನೆಯ ತ್ಯಾಜ್ಯ, ಸೊಪ್ಪು ತರಕಾರಿ, ಉಳಿದ ಆಹಾರ, ಮೊಟ್ಟೆಯ ಸಿಪ್ಪೆ, ಮರಗಿಡಗಳ ಎಲೆಗಳು ಇವೆಲ್ಲ ಹಸಿ ಕಸವಾಗಿವೆ ಮತ್ತು ಇವೆಲ್ಲವನ್ನು ಹಸಿರು ಬುಟ್ಟಿಯಲ್ಲಿ ಹಾಕಿ. ಇವೆಲ್ಲವೂ ಹೊಲಗದ್ದೆಗಳಲ್ಲಿ ಉಪಯುಕ್ತವಾಗುತ್ತವೆ. ಗದ್ದೆಯ ಬಣ್ಣ ಹಸಿರು ಎಂದು ನೆನಪಿಟ್ಟರೆ ಸಾಕು ಹಸಿರು ಬುಟ್ಟಿಯಲ್ಲಿ ಯಾವ ಕಸ ಹಾಕಬೇಕು ಎಂಬುದು ನಿಮಗೆ ನೆನಪಿನಲ್ಲಿ ಉಳಿಯುತ್ತದೆ. ಎರಡನೇ ಬಗೆಯ ಕಸ ಅಂದರೆ ಹಳೆಯ ದಿನ ಪತ್ರಿಕೆ, ದಪ್ಪ ಹಾಳೆ, ಕಬ್ಬಿಣ, ಗಾಜು, ಬಟ್ಟೆ, ಪ್ಲಾಸ್ಟಿಕ್, ಪಾಲಿಥಿನ್, ಮುರಿದ ಡಬ್ಬಗಳು, ರಬ್ಬರ್, ಲೋಹಗಳು, ಎಷ್ಟೋ ವಸ್ತುಗಳಿರಬಹುದು ಇವೆಲ್ಲ ಒಣ ಕಸಗಳಾಗಿವೆ. ಇವನ್ನು ಮೆಶೀನ್‌ನಲ್ಲಿ ಹಾಕಿ ಪುನರ್ಬಳಕೆ ಮಾಡಬೇಕಾಗುತ್ತದೆ. ಇದನ್ನು ನೇರವಾಗಿ ಮರುಬಳಕೆ ಮಾಡಲಾಗದು. ಇವುಗಳನ್ನು ನೀಲಿ ಬುಟ್ಟಿಯಲ್ಲಿ ಹಾಕಬೇಕಾಗುತ್ತದೆ. ನಾವು ಒಂದು ಸಂಸ್ಕೃತಿಯನ್ನು ರೂಪಿಸುತ್ತೇವೆಂಬ ವಿಶ್ವಾಸ ನನಗಿದೆ. ಸ್ವಚ್ಛತೆ ಕುರಿತು ಪ್ರತಿ ಬಾರಿಯೂ ನಮಗೆ ಹೊಸ ಹೆಜ್ಜೆ ಇಡುತ್ತಾ ಸಾಗಬೇಕಿದೆ. ಆಗ ಮಾತ್ರ ನಾವು ಗಾಂಧೀಜಿಯವರ ಸ್ವಚ್ಛತೆಯ ಕನಸನ್ನು ನನಸುಗೊಳಿಸಬಹುದು. ಇಂದು ನಾನು ಹೆಮ್ಮೆಯಿಂದ ಒಂದು ವಿಷಯ ಪ್ರಸ್ತಾಪಿಸಬಯಸುವೆ. ಒಬ್ಬ ವ್ಯಕ್ತಿಯೇ ನಿರ್ಧರಿಸಿದರೂ ಸಹ ಎಷ್ಟು ದೊಡ್ಡ ಜನಾಂದೋಲನವನ್ನೇ ಹುಟ್ಟು ಹಾಕಬಹುದು. ಸ್ವಚ್ಛತೆಯ ಕೆಲಸವೂ ಹೀಗೇ ಇದೆ. ಕೆಲ ದಿನಗಳ ಹಿಂದೆ ನಿಮಗೆ ಒಂದು ಸುದ್ದಿ ಕೇಳಿಬಂದಿರಬಹುದು. ಮುಂಬೈಯಲ್ಲೇ ಕೊಳಕು ಎಂದು ಪರಿಗಣಿಸಲಾಗಿದ್ದ ವರ್ಸೊವ ಬೀಚ್ ಇಂದು ಒಂದು ಸ್ವಚ್ಛ ಸುಂದರ ವರ್ಸೊವ ಬೀಚ್ ಆಗಿ ಪರಿವರ್ತನೆಗೊಂಡಿದೆ. ಇದು ಒಮ್ಮಿಂದೊಮ್ಮೆಲೇ ಆದದ್ದಲ್ಲ. ಸುಮಾರು 80-9೦ ವಾರಗಳವರೆಗೆ ಇಲ್ಲಿಯ ನಾಗರಿಕರು ಸತತವಾಗಿ ಶ್ರಮಿಸಿ ವರ್ಸೊವ ಬೀಚ್‌ನ ಸ್ವರೂಪವನ್ನೇ ಬದಲಿಸಿದ್ದಾರೆ. ಸಾವಿರಾರು ಟನ್ ಕಸವನ್ನು ಹೊರತೆಗೆದ ನಂತರ ವರ್ಸೊವ ಬೀಚ್ ಸ್ವಚ್ಛ ಮತ್ತು ಸುಂದರವಾಯಿತು. ಇದರ ಜವಾಬ್ದಾರಿಯನ್ನು ವರ್ಸೋವಾ ನಿವಾಸಿ ಸ್ವಯಂಸೇವಕರು ಅಥವಾ ವಿಆರ್.ವಿ ಹೊತ್ತುಕೊಂಡಿದ್ದರು. ಶ್ರೀಯುತ ಅಫರೋಜ್ ಶಾ ಎಂಬ ಸಜ್ಜನ 2015 ರ ಅಕ್ಟೋಬರ್‌ನಲ್ಲಿ ತನುಮನದಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ನಿಧಾನವಾಗಿ ಈ ಹೋರಾಟ ಬೆಳೆಯುತ್ತಾ ಸಾಗಿ ಜನಾಂದೋಲನವಾಗಿ ಪರಿವರ್ತನೆಗೊಂಡಿತು.

ಈ ಕೆಲಸಕ್ಕಾಗಿ ಶ್ರೀಯುತ ಅಫರೋಜ್ ಶಾ ಅವರಿಗೆವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ಅಥವಾ ಯು.ಎನ್.ಇ.ಪಿ.ಯವರು ಬಹುದೊಡ್ಡ ಪ್ರಶಸ್ತಿ ನೀಡಿದ್ದಾರೆ. ಈ ಮೂಲಕ ಕ್ಯಾಂಪೇನ್ ಆಫ್ ದಿ ಅರ್ಥ್ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ನಾನು ಶ್ರೀಯುತ ಅಫರೋಜ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಆಂದೋಲನಕ್ಕೆ ಅಭಿನಂದಿಸುತ್ತೇನೆ. ಹೇಗೆ ಅವರು ಎಲ್ಲ ಪ್ರದೇಶಗಳ ಜನರನ್ನು ಒಗ್ಗೂಡಿಸಿದರು ಮತ್ತು ಇದನ್ನು ಜನಾಂದೋಲನವಾಗಿ ಪರಿವರ್ತಿಸಿದರು, ಎಂಬುದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ.

ನನ್ನ ಸಹೋದರ, ಸಹೋದರಿಯರೇ, ನಾನಿಂದು ಮತ್ತೊಂದು ಸಂತಸದ ವಿಷಯವನ್ನು ನಿಮಗೆ ಹೇಳಬಯಸುತ್ತೇನೆ. ಸ್ವಚ್ಛ ಭಾರತದ ಅಭಿಯಾನದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ‘ರಿಯಾಸಿ ಬ್ಲಾಕ್’. ರಿಯಾಸಿ ಬ್ಲಾಕ್, ಬಯಲು ಶೌಚ ಮುಕ್ತವಾಗಿದೆಯೆಂದು ನನಗೆ ತಿಳಿಸಲಾಗಿದೆ. ನಾನು ರಿಯಾಸಿ ಬ್ಲಾಕ್‌ನ ಎಲ್ಲ ನಾಗರಿಕರಿಗೂ, ಅಲ್ಲಿನ ಆಡಳಿತ ವರ್ಗಕ್ಕೂ, ಜಮ್ಮು-ಕಾಶ್ಮೀರ ಒಂದು ಉತ್ತಮ ಉದಾಹರಣೆ ನೀಡಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಹಾಗೆಯೇ, ಈ ಪೂರ್ಣ ಚಳವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇತೃತ್ವ ವಹಿಸಿದ್ದು, ಜಮ್ಮು-ಕಾಶ್ಮೀರದ ಈ ಪ್ರಾಂತ್ಯದ ಮಹಿಳೆಯರು. ಅವರು ಈ ಕುರಿತು ಅರಿವು ಮೂಡಿಸಲು, ಸ್ವತಃ ಜ್ಯೋತಿ ಯಾತ್ರೆಗಳನ್ನು ಕೈ ಗೊಂಡಿದ್ದಾರೆ. ಮನೆ-ಮನೆ, ಬೀದಿ-ಬೀದಿಗೂ ಹೋಗಿ ಜನರಿಗೆ ಸ್ಫೂರ್ತಿ ತುಂಬಿದ್ದಾರೆ. ಆ ತಾಯಂದಿರಿಗೆ ಮತ್ತು ಸಹೋದರಿಯರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಜಮ್ಮು-ಕಾಶ್ಮೀರದ ನೆಲದ ಮೇಲೆ, ಒಂದು ಬ್ಲಾಕನ್ನುಬಯಲು ಶೌಚ ಮುಕ್ತಮಾಡಿದ್ದಾರೆ, ಈ ರೀತಿಯ ಉತ್ತಮ ಆರಂಭಕ್ಕಾಗಿ, ಅಲ್ಲಿನ ಎಲ್ಲ ಆಡಳಿತಗಾರರನ್ನೂ ನಾನು ಅಭಿನಂದಿಸುತ್ತೇನೆ.

ನನ್ನ ನಲ್ಮೆಯ ದೇಶವಾಸಿಗಳೇ, ಕಳೆದ ಹದಿನೈದು ದಿನಗಳಿಂದ,ನಿರಂತರವಾಗಿದಿನ ಪತ್ರಿಕೆಗಳಲ್ಲಿ, ಟಿ ವಿ ವಾಹಿನಿಗಳಲ್ಲಿ, ಸಾಮಾಜಿಕ ತಾಣಗಳಲ್ಲಿ, ಪ್ರಸಕ್ತ ಸರ್ಕಾರದ 3 ವರ್ಷಗಳ ಆಡಳಿತ ಕುರಿತು ಪರಾಮರ್ಶೆ,ಸಮೀಕ್ಷೆ, ಅವಲೋಕನ ನಡೆಯುತ್ತಿದೆ. 3 ವರ್ಷಗಳ ಹಿಂದೆ ನೀವು ನನಗೆ ಪ್ರಧಾನ ಸೇವಕನ ಹೊಣೆಗಾರಿಕೆಯನ್ನು ನೀಡಿದ್ದಿರಿ. ಸಾಕಷ್ಟು ಸಮೀಕ್ಷೆಗಳು ನಡೆದಿವೆ, ಸಾಕಷ್ಟು ಅಭಿಪ್ರಾಯಗಳೂ ಬಂದಿವೆ. ನಾನು ಈ ಎಲ್ಲ ಪ್ರಕ್ರಿಯೆಗಳನ್ನು ಒಂದು ಆರೋಗ್ಯಪೂರ್ಣ ಸಂಕೇತದ ರೂಪದಲ್ಲಿ ನೋಡುತ್ತೇನೆ. ಈ 3 ವರ್ಷದ ಕಾರ್ಯವನ್ನು ಆಮೂಲಾಗ್ರವಾಗಿ ಪರೀಕ್ಷಿಸಲಾಗಿದೆ. ಸಮಾಜದ ಪ್ರತಿಯೊಂದು ವಿಭಾಗವನ್ನೂ ಜನರು ವಿಶ್ಲೇಷಣೆ ಮಾಡಿದ್ದಾರೆ. ಮತ್ತು ಗಣತಂತ್ರದಲ್ಲಿ ಒಂದು ಉತ್ತಮ ಪ್ರತಿಕ್ರಿಯೆ ಬಂದಿದೆ. ಗಣತಂತ್ರದಲ್ಲಿ ಸರ್ಕಾರಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆ ಇರಬೇಕೆಂಬುದು ನನ್ನ ಅಚಲ ನಂಬಿಕೆಯಾಗಿದೆ. ಜನರಿಗೆ ನಮ್ಮ ಕೆಲಸದ ಲೆಕ್ಕಾಚಾರ ಒಪ್ಪಿಸಬೇಕು. ತಮ್ಮ ಸಮಯವನ್ನು ಮೀಸಲಿಟ್ಟು, ನಮ್ಮ ಕೆಲಸಗಳ ಬಗ್ಗೆ ಆಳವಾದ ವಿಶ್ಲೇಷಣೆ ಮಾಡಿದವರೆಲ್ಲರಿಗೂ ನನ್ನ ಧನ್ಯವಾದಗಳು, ಕೆಲವು ಪ್ರಶಂಸೆಗಳು ಬಂದವು, ಕೆಲ ಸಮರ್ಥನೆಗಳು ಬಂದವು, ಹಲವಾರು ನ್ಯೂನತೆಗಳನ್ನು ಹೊರತೆಗೆಯಲಾಯಿತು, ನಾನು ಈ ಎಲ್ಲ ವಿಚಾರಗಳೂ ಬಹಳ ಮಹತ್ವವಾದುವುಗಳೆಂದು ನಂಬುತ್ತೇನೆ. ಮಹತ್ವವಾದ ಮತ್ತು ಪ್ರಮುಖವಾದ ಪ್ರತಿಕ್ರಿಯೆ ನೀಡಿದಂಥ ಜನರೆಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದ್ದಂತಹ ದೋಷಗಳು, ನ್ಯೂನತೆಗಳನ್ನು ತೆರೆದಿಟ್ಟಾಗ, ಅವುಗಳಿಂದಲೂ ಸುಧಾರಿಸಿಕೊಳ್ಳುಲು ಅವಕಾಶ ದೊರೆಯುತ್ತ್ತದೆ. ಅದು ಒಳ್ಳೆಯದಾಗಿರಲಿ, ಕಡಿಮೆ ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ, ಏನೇ ಆಗಿರಲಿ, ಅದರಿಂದಲೇ ಕಲಿಯಬೇಕು ಮತ್ತು ಅದರ ಆಸರೆಯಿಂದಲೇ ಮುಂದುವರೆಯಬೇಕು ರಚನಾತ್ಮಕ ಟೀಕೆ ಗಣತಂತ್ರಕ್ಕೆ ಶಕ್ತಿ ನೀಡುತ್ತದೆ. ಒಂದು ಜಾಗರೂಕ ರಾಷ್ಟ್ರಕ್ಕಾಗಿ, ಒಂದು ಚೈತನ್ಯ ಪೂರ್ಣ ದೇಶಕ್ಕಾಗಿ, ಈ ಮಂಥನ ಬಹಳ ಅಗತ್ಯವಾಗಿರುತ್ತದೆ.

ನನ್ನ ನಲ್ಮೆಯ ದೇಶವಾಸಿಗಳೇ, ನಾನೂ ನಿಮ್ಮಂತೆ ಒಬ್ಬ ಸಾಮಾನ್ಯ ನಾಗರಿಕ ಮತ್ತು ಒಬ್ಬ ಸಾಮಾನ್ಯ ನಾಗರಿಕನಾಗಿರುವುದರಿಂದ ಒಳ್ಳೆಯದು ಮತ್ತು ಕೆಟ್ಟದ್ದರ ಪ್ರಭಾವ ನನ್ನ ಮನಸ್ಸಿನ ಮೇಲೆಯೂ ಬೀರುತ್ತದೆ. ‘ಮನದಾಳದ ಮಾತು’, ಇದನ್ನು ಕೆಲವರು ಸಂವಾದದ ರೂಪದಲ್ಲಿ ನೋಡಿದರೆ ಇನ್ನು ಕೆಲವರು ರಾಜಕೀಯ ದೃಷ್ಟಿಯಿಂದ ಟೀಕಿಸುತ್ತಾರೆ ಈ ಕುರಿತು ಟಿಪ್ಪಣಿಗಳನ್ನೂ ಬರೆಯುತ್ತಾರೆ. ಆದರೆ ಸುದೀರ್ಘ ಅನುಭವದಿಂದ ನನಗೆ ಅನ್ನಿಸಿದ್ದು, ನಾನು ಮನದಾಳದ ಮಾತು ಆರಂಭಿಸಿದಾಗ ನಾನೂ ಇದರ ಕುರಿತು ಆಲೋಚಿಸಿರಲಿಲ್ಲ. ಮನದಾಳದ ಮಾತು ಕಾರ್ಯಕ್ರಮ ನನ್ನನ್ನು ಹಿಂದೂಸ್ತಾನದ ಪ್ರತಿ ಕುಟುಂಬದ ಒಬ್ಬ ಸದಸ್ಯನನ್ನಾಗಿಸಿದೆ. ನಾನು ಒಂದು ಕುಟುಂಬದವರೊಂದಿಗೆ ಅವರ ಮನೆಯಲ್ಲೇ ಕುಳಿತು ಮಾತನಾಡುವಂತೆ ಭಾಸವಾಗುತ್ತದೆ. ಹೀಗೆ ಇಂಥ ವಿಚಾರಗಳನ್ನು ಬರೆದು ಕಳಿಸಿದ ಸಾವಿರಾರು ಕುಟುಂಬಗಳಿವೆ. 2 ದಿನಗಳ ಹಿಂದೆ ರಾಷ್ಟ್ರಪತಿ ಭವನದಲ್ಲಿ ಮನ್ ಕಿ ಬಾತ್ ನ ವಿಶ್ಲೇಷಣಾತ್ಮಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತು. ಗೌರವಾನ್ವಿತ ರಾಷ್ಟ್ರಪತಿಯವರು,ಗೌರವಾನ್ವಿತ ಉಪ ರಾಷ್ಟ್ರಪತಿಯವರು, ಮಾನ್ಯ ಸ್ಪೀಕರ್ ಪಾಲ್ಗೊಂಡಿದ್ದರು. ನಾನು ಮೊದಲೇ ಹೇಳಿದಂತೆ ಒಬ್ಬ ಸಾಮಾನ್ಯ ನಾಗರಿಕನಾಗಿ ನನ್ನ ಮನಸ್ಸಿನ ಮೇಲೂ ಇದು ಪ್ರಭಾವ ಬೀರುತ್ತಿದೆ. ಇದು ಒಂದು ಮಹತ್ವದ ಕಾರ್ಯಕ್ರಮ. ಇಂತಹ ಉನ್ನತ ಪದವಿಯಲ್ಲಿರುವ ರಾಷ್ಟ್ರಪತಿಯವರು, ಉಪ ರಾಷ್ಟ್ರಪತಿಯವರು, ಲೋಕಸಭಾಧ್ಯಕ್ಷರು ತಮ್ಮ ಅಮೂಲ್ಯ ಸಮಯ ನೀಡಿ ಮನದಾಳದ ಮಾತಿಗೆ ಪ್ರಾಮುಖ್ಯತೆ ನೀಡಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಒಂದು ರೀತಿ ನನ್ನಲ್ಲಿ ನಾನೇ ಮನದಾಳದ ಮಾತಿಗೆ ಒಂದು ಹೊಸ ಆಯಾಮವನ್ನು ನೀಡಿದ್ದೇನೆ. ನನ್ನ ಕೆಲ ಮಿತ್ರರು, ಈ ಮನದಾಳದ ಮಾತು ಪುಸ್ತಕ ಕುರಿತು ಕೆಲಸ ಮಾಡುತ್ತಿದ್ದಾಗ ನನ್ನ ಜೊತೆಗೂ ಚರ್ಚೆ ಮಾಡಿದ್ದರು. ಕೆಲ ಸಮಯದ ಹಿಂದೆ ಈ ವಿಷಯ ಚರ್ಚೆಗೆ ಬಂದಾಗ ನಾನು ಚಕಿತನಾದೆ. ಅಬುದಾಬಿಯಲ್ಲಿರುವ ಅಕ್ಬರ್ ಸಾಹಬ್ ಎಂಬ ಕಲಾವಿದರು ಒಂದು ಪ್ರಸ್ತಾವನೆಯನ್ನಿಟ್ಟರು. ಮನದಾಳದ ಮಾತಿನಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಅವರ ಕಲೆಯ ಮುಖಾಂತರ ಅವುಗಳ ರೇಖಾ ಚಿತ್ರ ತಯಾರಿಸಿಕೊಡಲು ಬಯಸಿದ್ದಾರೆಂದು ಮತ್ತು ಒಂದು ಪುಡಿಗಾಸೂ ಪಡೆಯದೇ, ಅಕ್ಬರ್ ಸಾಹಬ್‌ ಅವರು ಮನದಾಳದ ಮಾತಿಗೆ ಕಲೆಯ ರೂಪವನ್ನು ನೀಡಿದ್ದಾರೆ. ನಾನು ಅಕ್ಬರ್ ಸಾಹಬ್‌ ಅವರಿಗೆ ಋಣಿಯಾಗಿದ್ದೇನೆ.

ನನ್ನ ನಲ್ಮೆಯ ದೇಶವಾಸಿಗಳೇ, ನಾವು ಮುಂದಿನ ಬಾರಿ ಭೇಟಿಯಾಗುವ ಹೊತ್ತಿಗೆ, ದೇಶದ ಮೂಲೆ ಮೂಲೆಯಲ್ಲೂ ಮಳೆಯಾಗಿರಬಹುದು,ವಾತಾವರಣ ಬದಲಾಗಿರಬಹುದು,ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿರಬಹುದು,ಹೊಸ ರೀತಿಯಲ್ಲಿ ಕಲಿಕಾ ಜೀವನದ ಪುನರಾರಂಭ ಆಗಿರಬಹುದು ಮತ್ತು ಮಳೆಯಾಗುತ್ತಿದ್ದಂತೆ ಏನೋ ಒಂದು ಹೊಸ ಆಹ್ಲಾದ, ಹೊಸ ಪರಿಮಳ, ಹೊಸ ಸುಗಂಧ.. ಮೂಡುತ್ತದೆ. ಬನ್ನಿ ನಾವೆಲ್ಲರೂ ಒಗ್ಗೂಡಿ ಈ ಪರಿಸರದಲ್ಲಿ, ಪ್ರಕೃತಿಯನ್ನು ಪ್ರೀತಿಸುತ್ತಾ ಮುಂದಡಿ ಇಡೋಣ.

ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಶುಭ ಹಾರೈಕೆಗಳು. ಧನ್ಯವಾದಗಳು.

*****

AKT/AK