ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯ ಮೂಲಕ ಭಾರತೀಯ ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್/ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮಟ್ಟದಲ್ಲಿ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (ಎನ್.ಡಿ.ಬಿ)ನೊಂದಿಗೆ ಸಾಮಾನ್ಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ(ಎಂ.ಓ.ಯು)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಪ್ರಸ್ತಾಪವು ಬ್ರಿಕ್ಸ್ ರಾಷ್ಟ್ರಗಳ ನಡುವೆ ವಾಣಿಜ್ಯ ಮತ್ತು ಆರ್ಥಿಕ ಬಾಂಧವ್ಯ ಹೆಚ್ಚಿಸುತ್ತದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ. ಈ ತಿಳಿವಳಿಕೆ ಒಪ್ಪಂದದಿಂದಾಗಿ ಪಾಲ್ಗೊಳ್ಳುವ ಬ್ರಿಕ್ಸ್ ರಾಷ್ಟ್ರಗಳ ಸಂಸ್ಥೆಗಳು ಪ್ರಯೋಜನ ಪಡೆಯಲಿವೆ. ಈ ತಿಳಿವಳಿಕೆ ಒಪ್ಪಂದವು ಕಟ್ಟುಪಾಡಿಲ್ಲದ ಚೌಕಟ್ಟಿನ ಒಪ್ಪಂದವಾಗಿದ್ದು, ಅಂಕಿತ ಹಾಕುವವರ ನಡುವೆ ಕೌಶಲ ವರ್ಗಾವಣೆ ಮತ್ತು ಜ್ಞಾನ ವಿನಿಮಯದ ಜೊತೆಗೆ ರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಅನ್ವಯ ಚೌಕಟ್ಟು ಸಹಕಾರ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಎನ್.ಡಿ.ಬಿ.ಸ್ಥಾಪನೆಯು ಬ್ರಿಕ್ಸ್ ದೇಶಗಳ ನಡುವೆ ನಿಕಟ ಸಂಬಂಧ ಪ್ರತಿಬಿಂಬಿಸುತ್ತದೆ ಮತ್ತು ಅವರ ಆರ್ಥಿಕ ಸಹಕಾರ ಹೆಚ್ಚಿಸುವ ಮತ್ತು ಭಾರತಕ್ಕೆ ಒಂದು ವರ್ಧಿತ ಅಂತರರಾಷ್ಟ್ರೀಯ ಪಾತ್ರ ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಬ್ರಿಕ್ಸ್ ರಾಷ್ಟ್ರಗಳ ನಡುವೆ ಪರಸ್ಪರ ಯೋಜನೆಯಲ್ಲಿ ಹೂಡಿಕೆ, ಸರಕು ಮತ್ತು ಸೇವೆಗಳ ವಾಣಿಜ್ಯಕ್ಕೆ ಅವಕಾಶ ನೀಡುವುದು ಮತ್ತು ಸದಸ್ಯರು ಒದಗಿಸುವ ಸಹಕಾರದ ವಿವಿಧ ಸ್ವರೂಪದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸಮಗ್ರ ಆರ್ಥಿಕ ಪ್ರಗತಿಯ ವಾಸ್ತವತೆಯ ಕಾರ್ಯತಂತ್ರವನ್ನು ಗಮನದಲ್ಲಿಟ್ಟುಕೊಂಡು, ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದು ಅಗತ್ಯವೆನಿಸಿದೆ.
ಹಿನ್ನೆಲೆ:
ಬ್ರಿಕ್ಸ್ ರಾಷ್ಟ್ರಗಳ ಐದು ಬ್ಯಾಂಕ್ ಗಳು ಬ್ರಿಕ್ಸ್ ರಾಷ್ಟ್ರಗಳು ಮತ್ತು ಉದ್ಯಮಗಳ ನಡುವೆ ಹೆಚ್ಚಿನ ವಾಣಿಜ್ಯ ಮತ್ತು ಆರ್ಥಿಕ ಬಾಂಧವ್ಯವರ್ಧನೆಗಾಗಿ ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆ ಸ್ಥಾಪಿಸಿವೆ. ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯು ಈಗ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ನೊಂದಿಗೆ ಸಾಮಾನ್ಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಉದ್ದೇಶಿಸಿದೆ.