ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ ಇಂದು ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (ಐಡಿವೈ) ರಾಷ್ಟ್ರೀಯ ಆಚರಣೆಯಲ್ಲಿ ಭಾಗವಹಿಸಿದ್ದರು. ”ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಿದ್ದ ಅವರು, ಸಾವಿರಾರು ಯೋಗಪಟುಗಳೊಂದಿಗೆ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ನಿರ್ವಹಿಸಿದರು. ಭಾರತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರು ಆಚರಣೆಯಲ್ಲಿ ಭಾಗವಹಿಸಿದ್ದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಆರ್.ಎನ್. ರವಿ, ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ, ಕೇಂದ್ರ ಆಯುಷ್ ರಾಜ್ಯ ಖಾತೆ (ಸ್ವತಂತ್ರ ಉಸ್ತುವಾರಿ) ಸಚಿವರಾದ ಶ್ರೀ ಪ್ರತಾಪ್ ರಾವ್ ಜಾಧವ್ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, 12ನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಭಾರತ ಮತ್ತು ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ಕೋರಿದರು. ಜೂನ್ 21 ವಿಶ್ವದ ಅತಿದೊಡ್ಡ ಸಾಮೂಹಿಕ ಆಚರಣೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ, ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಜನರು ಯೋಗಾಭ್ಯಾಸದ ಮೂಲಕ ಒಟ್ಟಿಗೆ ಸೇರಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಬಂಗಾಳದಿಂದ ಸೌರಾಷ್ಟ್ರದವರೆಗೆ, ಇಡೀ ರಾಷ್ಟ್ರವು ಯೋಗದ ಶಕ್ತಿ ಮತ್ತು ಸ್ಫೂರ್ತಿಯೊಂದಿಗೆ ತುಂಬಿದೆ ಎಂದ ಪ್ರಧಾನಮಂತ್ರಿ ಅವರು, ಯೋಗವು ಜನರು, ಸಮಾಜಗಳು ಮತ್ತು ರಾಷ್ಟ್ರಗಳನ್ನು ಬೆಸಯುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ ಮತ್ತು ಮಾನವರ ಐಕ್ಯತೆಯ ಬಂಧಗಳನ್ನು ಬಲವರ್ಧನೆಗೊಳಿಸುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ರಾಷ್ಟ್ರೀಯ ಆಚರಣೆಯನ್ನು ನಡೆಸುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಸ್ವಾಮಿ ವಿವೇಕಾನಂದ, ಶ್ರೀ ಅರಬಿಂದೋ ಮತ್ತು ಯೋಗದ ಸಂದೇಶವನ್ನು ಜಗತ್ತಿಗೆ ಹರಡಲು ಸಹಾಯ ಮಾಡಿದ ಇತರ ದಿಗ್ಗಜರು ಸೇರಿದಂತೆ ಬಂಗಾಳದೊಂದಿಗೆ ಸಂಬಂಧ ಹೊಂದಿರುವ ಮಹಾನ್ ಆಧ್ಯಾತ್ಮಿಕ ನಾಯಕರು ಮತ್ತು ಚಿಂತಕರ ಕೊಡುಗೆಗಳನ್ನು ಸ್ಮರಿಸಿದ ಅವರು, ಮನಸ್ಸು, ದೇಹ ಮತ್ತು ಚೈತನ್ಯದ ಐಕ್ಯತೆಯನ್ನು ಒತ್ತಿಹೇಳುವ ಸಂಪ್ರದಾಯಗಳನ್ನು ಈ ಭೂಮಿ ದೀರ್ಘಕಾಲದಿಂದ ಪೋಷಿಸಿದೆ ಎಂದು ಹೇಳಿದರು. ಕೋಲ್ಕತ್ತಾದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮವು ಈ ಶಾಶ್ವತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
2026 ರ ಅಂತಾರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯ ”ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’’ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಯೋಗವು ದೈಹಿಕ ವ್ಯಾಯಾಮ ಅಥವಾ ಯಾವುದೇ ನಿರ್ದಿಷ್ಟ ವಯೋಮಾನದವರಿಗೆ ಸೀಮಿತವಾಗಿಲ್ಲ. ಆದರೆ ಜೀವನದ ಪ್ರತಿಯೊಂದು ಹಂತದಲ್ಲೂ ಚೈತನ್ಯ, ಸ್ಥಿತಿಸ್ಥಾಪಕತ್ವ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಜೀವನಕ್ಕೆ ಸಮಗ್ರ ವಿಧಾನವಾಗಿದೆ ಎಂದು ಹೇಳಿದರು. ಯೋಗವು ವ್ಯಕ್ತಿಗಳು ವಯಸ್ಸಾದಂತೆ ಆರೋಗ್ಯಕರ, ಸಕ್ರಿಯ ಮತ್ತು ಶಕ್ತಿಯುತವಾಗಿರಲು ಅನುವು ಮಾಡಿಕೊಡುತ್ತದೆ ಮತ್ತು ದೈಹಿಕತೆ, ಮಾನಸಿಕ ಸಮತೋಲನ ಮತ್ತು ಭಾವನಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಜೀವನದ ಎಲ್ಲಾ ಅಂಶಗಳಲ್ಲಿ ಸಮತೋಲನದ ಮಹತ್ವವನ್ನು ಯೋಗ ಕಲಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಗವದ್ಗೀತೆಯ ಬೋಧನೆಗಳನ್ನು ಉಲ್ಲೇಖಿಸಿದ ಅವರು, ಸಮತೋಲಿತ ಹವ್ಯಾಸಗಳು, ಸಮತೋಲಿತ ಕ್ರಿಯೆಗಳು ಮತ್ತು ಸಮತೋಲಿತ ಜೀವನವು ಯೋಗಕ್ಷೇಮದ ಅಡಿಪಾಯವಾಗಿದೆ ಎಂದು ಅವರು ಹೇಳಿದರು. ಆಧುನಿಕ ಸಮಾಜ ಎದುರಿಸುತ್ತಿರುವ ಅನೇಕ ಸವಾಲುಗಳು ಜೀವನಶೈಲಿಯಲ್ಲಿನ ಅಸಮತೋಲನದಿಂದ ಉಂಟಾಗುತ್ತವೆ ಮತ್ತು ಯೋಗವು ಸಾಮರಸ್ಯ, ಶಿಸ್ತು ಮತ್ತು ಆಂತರಿಕ ಶಾಂತಿಯ ಕಡೆಗೆ ಪ್ರಾಯೋಗಿಕ ದಾರಿಯನ್ನು ಮಾಡಿಕೊಡುತ್ತದೆ ಎಂದು ಅವರು ಉಲ್ಲೇಖಿಸಿದರು.
ಯೋಗದ ಸಮಗ್ರ ಸ್ವರೂಪವನ್ನು ಬಿಡಿಸಿ ಹೇಳಿದ ಶ್ರೀ ನರೇಂದ್ರ ಮೋದಿ, ಅದರ ಪ್ರಯೋಜನಗಳು ದೈಹಿಕ ಸದೃಢತೆಯನ್ನು ಮೀರಿ ಮಾನಸಿಕ ಸ್ವಾಸ್ಥ್ಯ ಮತ್ತು ಭಾವನಾತ್ಮಕ ಸ್ಥಿರತೆಗೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು. ಯೋಗವು ಸ್ವಯಂ ಅರಿವನ್ನು ಬೆಳೆಸುತ್ತದೆ, ಒತ್ತಡವನ್ನು ತಗ್ಗಿಸುತ್ತದೆ ಮತ್ತು ಹೆಚ್ಚು ಶಾಂತಿಯುತ ಮತ್ತು ಸಾಮರಸ್ಯದ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಯೋಗವು ವೈಯಕ್ತಿಕ ಜೀವನವನ್ನು ಶ್ರೀಮಂತಗೊಳಿಸುತ್ತದೆ, ಆದರೆ ವಿಶ್ವದಾದ್ಯಂತ ತಿಳಿವಳಿಕೆ, ಸಹಕಾರ ಮತ್ತು ಶಾಂತಿಯನ್ನು ಉತ್ತೇಜಿಸಲು ಇದು ಪ್ರಬಲ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಲು ನಾಗರಿಕರಿಗೆ ಕರೆ ನೀಡಿದ ಪ್ರಧಾನಮಂತ್ರಿ ಯೋಗವನ್ನು ಒಂದೇ ದಿನದ ಆಚರಣೆಗೆ ಸೀಮಿತಗೊಳಿಸಬಾರದು ಎಂದು ಜನರನ್ನು ಆಗ್ರಹಿಸಿದರು. ಈ ವರ್ಷ ಆರಂಭಿಸಲಾದ “ಯೋಗ 365’’ ಉಪಕ್ರಮ ಮತ್ತು 130 ದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದನ್ನು ಕಂಡ “ಯೋಗ 365” ಉಪಕ್ರಮ ಮತ್ತು 100 ದಿನಗಳ ಆನ್‌ಲೈನ್ ಯೋಗ ಕಾರ್ಯಕ್ರಮವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಯೋಗದ ವ್ಯಾಪಕ ಅಳವಡಿಕೆಯು ಆರೋಗ್ಯಕರ, ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು ಮತ್ತು “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ” ಎಂಬ ಪ್ರಾರ್ಥನೆಯೊಂದಿಗೆ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತಿತರ ಗಣ್ಯರನ್ನು ಕೋಲ್ಕತ್ತಾಗೆ ಸ್ವಾಗತಿಸಿದರು ಮತ್ತು 12ನೇ ಅಂತಾರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಆಚರಣೆಗೆ ಪಶ್ಚಿಮ ಬಂಗಾಳವನ್ನು ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಈ ಕಾರ್ಯಕ್ರಮವು ರಾಜ್ಯಾದ್ಯಂತ ಅಭೂತಪೂರ್ವ ಉತ್ಸಾಹವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ಡಾರ್ಜಿಲಿಂಗ್‌ನಿಂದ ದಿಘಾ ಮತ್ತು ಕೂಚ್ ಬೆಹಾರ್‌ವರೆಗಿನ ಎಲ್ಲಾ ಜಿಲ್ಲೆಗಳ ಜನರು ಯೋಗ ಚಟುವಟಿಕೆಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸಿದರು. ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಾದ್ಯಂತ ಹೆಚ್ಚಿನ ಸಂಖ್ಯೆಯ ನಾಗರಿಕರು ಆಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಉಲ್ಲೇಖಿಸಿ ಇದು ಯೋಗವನ್ನು ಜೀವನ ವಿಧಾನವಾಗಿ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಬಂಗಾಳದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಅಧಿಕಾರಿ, ಮನಸ್ಸು, ದೇಹ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಯೋಗದ ಮಹತ್ವವನ್ನು ಒತ್ತಿ ಹೇಳಿದ ಸ್ವಾಮಿ ವಿವೇಕಾನಂದ ಮತ್ತು ಇತರ ಮಹಾನ್ ಚಿಂತಕರ ಕೊಡುಗೆಗಳನ್ನು ಸ್ಮರಿಸಿದರು. ಯೋಗದ ತತ್ವಗಳು ಭಾರತದ ನಾಗರಿಕ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿವೆ ಮತ್ತು ಸಮತೋಲಿತ ಹಾಗೂ ಶಿಸ್ತಿನ ಜೀವನದತ್ತ ಜನರನ್ನು ಪ್ರೇರೇಪಿಸುತ್ತಲೇ ಇವೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ಕೋಲ್ಕತ್ತಾದಲ್ಲಿ ಆಚರಣೆ ಮಾಡುತ್ತಿರುವುದಕ್ಕಾಗಿ ಪ್ರಧಾನಮಂತ್ರಿಗೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶಕ್ಕಾಗಿ ಪಶ್ಚಿಮ ಬಂಗಾಳದ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದ ಕೇಂದ್ರ ಆಯುಷ್ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪ್‌ರಾವ್ ಜಾಧವ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಯೋಗವು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಿಜವಾದ ಜಾಗತಿಕ ಚಳವಳಿಯಾಗಿ ವಿಕಸನಗೊಂಡಿದೆ ಎಂದು ಹೇಳಿದರು. 2014ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವಸಂಸ್ಥೆಯ ನಿರ್ಣಯವನ್ನು ಅಂಗೀಕರಿಸಿದಾಗಿನಿಂದ, ಯೋಗ ದಿನಾಚರಣೆಯನ್ನು ಇದೀಗ 180ಕ್ಕೂ ಅಧಿಕ ದೇಶಗಳಲ್ಲಿ ಆಚರಿಸಲಾಗುತ್ತಿದೆ, ಇದು ಅದರ ಸಾರ್ವತ್ರಿಕ ಆಕರ್ಷಣೆ ಮತ್ತು ಸಮಕಾಲೀನ ಸಮಾಜದಲ್ಲಿ ಬೆಳೆಯುತ್ತಿರುವ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ಈ ವರ್ಷದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯವನ್ನು ಉಲ್ಲೇಖಿಸಿದ ಶ್ರೀ ಜಾಧವ್, ವರ್ಷವಿಡೀ ನಾಗರಿಕರು ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಸಚಿವಾಲಯದ “ಯೋಗ 365” ಉಪಕ್ರಮವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ದೊಡ್ಡ ಪ್ರಮಾಣದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು, ಡಿಜಿಟಲ್ ಭಾಗವಹಿಸುವಿಕೆ ಅಭಿಯಾನಗಳು ಮತ್ತು ನವೀನ ಯೋಗ ಚಟುವಟಿಕೆ ಸೇರಿ ಐಡಿವೈ 2026 ಗಾಗಿ ಕೈಗೊಂಡ ಹಲವು ಉಪಕ್ರಮಗಳನ್ನು ಸಹ ಅವರು ಉಲ್ಲೇಖಿಸಿದರು. ಭಾರತದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಆಯುಷ್ ಸಚಿವಾಲಯವು ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಆಯುಷ್ ಸೇವೆಗಳ ಲಭ್ಯತೆಯನ್ನು ವಿಸ್ತರಿಸಲು ಮತ್ತು ದೇಶದ ಸ್ವಾಸ್ಥ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಯೋಗ ವೃತ್ತಿಪರರು, ವಿದ್ಯಾರ್ಥಿಗಳು, ಸ್ವಯಂಸೇವಕರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರು ಯೋಗ ಗೋಷ್ಠಿಗಳು, ಸಮುದಾಯ ಕಾರ್ಯಕ್ರಮಗಳು ಮತ್ತು ವರ್ಚುವಲ್ ವೇದಿಕೆಗಳ ಮೂಲಕ ಆಚರಣೆಯಲ್ಲಿ ಭಾಗವಹಿಸಿದರು. ಇದು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಒಂದು ಚಳವಳಿಯಾಗಿ ಯೋಗದ ವ್ಯಾಪಕ ಆಕರ್ಷಣೆಯನ್ನು ಪ್ರತಿಬಿಂಬಿಸುತ್ತದೆ.
ಯೋಗ ದಿನಾಚರಣೆಗಳು ಅಭೂತಪೂರ್ವ ಸಾರ್ವಜನಿಕ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿವೆ, ಯೋಗ ಸಂಗಮ ಪೋರ್ಟಲ್‌ನಲ್ಲಿ ನೋಂದಣಿಗಳು ಆರು ಲಕ್ಷ ಸಂಸ್ಥೆಗಳನ್ನು ದಾಟಿವೆ. ಯೋಗವನ್ನು ನಿಜವಾದ ಜನರ ಚಳವಳಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಸ್ಥೆಗಳು, ಸಮುದಾಯಗಳು ಮತ್ತು ನಾಗರಿಕರ ಉತ್ಸಾಹವನ್ನು ಅಗಾಧ ಪ್ರತಿಕ್ರಿಯೆ ಪ್ರತಿಬಿಂಬಿಸುತ್ತದೆ.
2026ರ ಅಂತಾರಾಷ್ಟ್ರೀಯ ಯೋಗ ದಿನವು ಗಮನಾರ್ಹ ಜಾಗತಿಕ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿದೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ (ಐಸಿಸಿಆರ್) ಸಂಘಟಿತ ಪ್ರಯತ್ನಗಳ ಮೂಲಕ 210 ಕ್ಕೂ ಅಧಿಕ ಭಾರತೀಯ ಮಿಷನ್‌ಗಳು ಪ್ರಪಂಚದಾದ್ಯಂತ ಸುಮಾರು 2,500 ಸ್ಥಳಗಳಲ್ಲಿ ಯೋಗ ಆಚರಣೆಗಳನ್ನು ಆಯೋಜಿಸುತ್ತಿವೆ.
ಯೋಗದಿನಾಚರಣೆಗಳಿಗೆ ಸಾಂಸ್ಕೃತಿಕ ಆಯಾಮವನ್ನು ಸೇರ್ಪಡೆ ಮಾಡುವ ಮೂಲಕ ಸಂಸ್ಕೃತಿ ಸಚಿವಾಲಯವು ಭಾರತದ ಪುರಾತತ್ವ ಸಮೀಕ್ಷೆ (ಎ ಎಸ್ ಐ) ಸಹಯೋಗದೊಂದಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಹೆಗ್ಗುರುತುಗಳು ಮತ್ತು ಯೋಗ ಸಂಪ್ರದಾಯಗಳನ್ನು ಬೆಸಯುವ ಮೂಲಕ ದೇಶದ 100 ಪ್ರತಿಷ್ಠಿತ ಸ್ಥಳಗಳಲ್ಲಿ ವಿಶೇಷ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿದೆ.
*****
From physical wellness to inner peace, yoga enriches every aspect of life. Delighted to join this year’s celebrations in Kolkata. https://t.co/75UZECw8JR
— Narendra Modi (@narendramodi) June 21, 2026
Yoga connects us all and brings us together. pic.twitter.com/ghpAAVOmxE
— PMO India (@PMOIndia) June 21, 2026
When yoga becomes a way of life, it becomes the foundation of human unity. pic.twitter.com/FLxB961hWN
— PMO India (@PMOIndia) June 21, 2026
Yoga helps us tune our bodies to be flexible.
— PMO India (@PMOIndia) June 21, 2026
It keeps our energy levels high. pic.twitter.com/zQxvJeJwv8
Yoga teaches us the art of living a balanced life. pic.twitter.com/gcfmQX9dmM
— PMO India (@PMOIndia) June 21, 2026
Yoga shows the path from mental well-being to physical well-being. pic.twitter.com/O81tKmKfHi
— PMO India (@PMOIndia) June 21, 2026