Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಒಮನ್ ನ ಬ್ಯಾಂಕಿಂಗ್ ಮತ್ತು ಹಣಕಾಸು ಅಧ್ಯಯನ ಕಾಲೇಜು (ಸಿಬಿಎಫ್ಎಸ್) ನಡುವಿನ ತಿಳಿವಳಿಕೆ ಒಪ್ಪಂದದ ನವೀಕರಣಕ್ಕೆ ಸಂಪುಟದ ಒಪ್ಪಿಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಒಮನ್ ನ ಬ್ಯಾಂಕಿಂಗ್ ಮತ್ತು ಹಣಕಾಸು ಅಧ್ಯಯನ ಕಾಲೇಜು (ಸಿಬಿಎಫ್ಎಸ್) ನಡುವೆ 2008 ಮತ್ತು 2011ರಲ್ಲಿ ಅಂಕಿತ ಹಾಕಲಾಗಿದ್ದ ತಿಳಿವಳಿಕೆ ಒಪ್ಪಂದಕ್ಕೆ ಮತ್ತು ತಿಳಿವಳಿಕೆ ಒಪ್ಪಂದಗಳ ನವೀಕರಣಕ್ಕೆ ತನ್ನ ಪೂರ್ವಾನ್ವಯ ಒಪ್ಪಿಗೆ ನೀಡಿದೆ. ಈ ತಿಳಿವಳಿಕೆ ಒಪ್ಪಂದವು ಒಮನ್ ಒಳಗೆ ಅಕೌಂಟಿಂಗ್, ಹಣಕಾಸು ಮತ್ತು ಲೆಕ್ಕಪರಿಶೋಧನೆಯ ಅರಿವನ್ನು ಬಲಪಡಿಸಲು ಒಗ್ಗೂಡಿ ಕೆಲಸ ಮಾಡುವ ಅವಕಾಶ ನೀಡುತ್ತದೆ.

ಐ.ಸಿ.ಎ.ಐ. ಮಧ್ಯಪ್ರಾಚ್ಯ ವಲಯದಲ್ಲಿ 6 ಸಾವಿರ ಸದಸ್ಯರ ಬಲವನ್ನು ಹೊಂದಿದೆ ಮತ್ತು ಈ ತಿಳಿವಳಿಕೆ ಒಪ್ಪಂದವು ಓಮನ್ ರಾಷ್ಟ್ರೀಯರನ್ನು ಐಸಿಎಐ ಸದಸ್ಯರನ್ನಾಗಿ ಒಪ್ಪಿಕೊಳ್ಳುವ ಮೂಲಕ ಸಿಬಿಎಫ್ಎಸ್ ಗೆ ನೆರವು ಒದಗಿಸುವ ಗುರಿಯನ್ನು ಹೊಂದಿದೆ. ಸದಸ್ಯರ ಉತ್ತಮ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಸ್ಪರರಿಗೆ ಲಾಭವಾಗುವಂಥ ಬಾಂಧವ್ಯವನ್ನು ಅಭಿವೃದ್ಧಿ ಪಡಿಸಲು ಒಗ್ಗೂಡಿ ಶ್ರಮಿಸುವುದು ಇದರ ಗುರಿಯಾಗಿದೆ. ಈ ತಿಳಿವಳಿಕೆ ಒಪ್ಪಂದವು, ಐ.ಸಿ.ಎ.ಐ. ಸದಸ್ಯರಿಗೆ ತಮ್ಮ ವೃತ್ತಿಪರ ದಿಗಂತಗಳನ್ನು ವಿಸ್ತರಿಸಲು ಮತ್ತು ಅದರ ಜೊತೆಗೇ ಓಮನ್ ರಾಷ್ಟ್ರೀಯರ ವೃತ್ತಪರ ಸಾಮರ್ಥ್ಯವನ್ನು ಬಲಪಡಿಸುವ ಸಂಸ್ಥೆಯಾಗಿ ಐಸಿಎಐ ಹೊರಹೊಮ್ಮುತ್ತದೆ ಎಂಬ ನಿರೀಕ್ಷೆಯೂ ಇದೆ.

ಇಂಥ ಚಟುವಟಿಕೆಗಳ ಮೂಲಕ ಒಮನ್ ನಲ್ಲಿ ಭಾರತದ, ಭಾರತೀಯ ಪ್ರಜೆಗಳು ಮತ್ತು ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಪರ ಗಣನೀಯ ಪ್ರಮಾಣದ ಸದಾಶಯ ಬೆಳೆಯುತ್ತದೆ ಎಂದೂ ನಿರೀಕ್ಷಿಸಲಾಗಿದೆ, ಅಲ್ಲದೆ ಇದು ಭಾರತೀಯ ಪ್ರಜೆಗಳಿಂದ ಭಾರತಕ್ಕೆ ಪಾವತಿಯನ್ನೂ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಮನ್ ಸ್ಥಳೀಯವಾದ ವೃತ್ತಿಪರ ಅಕೌಂಟೆನ್ಸಿ ಸಂಸ್ಥೆಯನ್ನು ಹೊಂದಿಲ್ಲದೇ ಇರುವ ಕಾರಣ, ಒಮನ್ ಈ ವೃತ್ತಿಯಲ್ಲಿ ಇದಕ್ಕೆ ಸಂಬಂಧಿಸಿರುವುದರಿಂದ ಸಿಬಿಎಫ್ಎಸ್ ಜೊತೆ ಐಸಿಎಐ ಸಹಯೋಗ ಹೊಂದಿದೆ. ಈ ತಿಳಿವಳಿಕೆ ಒಪ್ಪಂದವು ಪ್ರಸ್ತುತ ಓಮನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಮೇಲೆ ಮತ್ತು ತರ ಮಾರುಕಟ್ಟೆ ಹಾಗೂ ತಮ್ಮ ವೃತ್ತಿ ಬದುಕು ಕಟ್ಟಿಕೊಳ್ಳಲು ಓಮನ್ ಗೆ ತೆರಳುವ ಇಂಗಿತ ಹೊಂದಿರುವವರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದೂ ನಿರೀಕ್ಷಿಸಲಾಗಿದೆ. ಅಲ್ಲದೆ ಓಮನ್ ಸುಲ್ತಾನಿಯತ್ ನಲ್ಲಿ ಭಾರತೀಯ ವೃತ್ತಿಪರರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಹಿನ್ನೆಲೆ:

ಐ.ಸಿ.ಎ.ಐ. ಭಾರತೀಯ ಸಂಸತ್ತು ರೂಪಿಸಿದ ಕಾನೂನಿನ ಅಡಿಯಲ್ಲಿ ಸ್ಥಾಪನೆಗೊಂಡ ಒಂದು ಶಾಸನಬದ್ಧ ಸಂಸ್ಥೆ. ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949 ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟರುಗಳ ವೃತ್ತಿಯನ್ನು ನಿಯಂತ್ರಿಸುತ್ತದೆ. ಸಿಬಿಎಫ್ಎಸ್ ಸಹ ಒಮನ್ ಸುಲ್ತಾನಿಯತ್ ನ ರಾಜಾಜ್ಞೆಯಂತೆ 1983ರಲ್ಲಿ ಸ್ಥಾಪನೆಗೊಂಡ ಸರ್ಕಾರಿ ಸಂಸ್ಥೆಯಾಗಿದೆ. ಬ್ಯಾಂಕರುಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ವಿಚಾರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇದು ಓಮನ್ ನ ಸೆಂಟ್ರಲ್ ಬ್ಯಾಂಕ್ ಮೇಲ್ವಿಚಾರಣೆ ಮತ್ತು ವ್ಯಾಪ್ತಿಯಲ್ಲಿ ಬರುತ್ತದೆ. ಹಾಗೂ ಸುಲ್ತಾನಿಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಬ್ಯಾಂಕ್ ಗಳ ಬೆಂಬಲವನ್ನೂ ಪಡೆದಿದೆ. ಕಳೆದ ಮೂರು ದಶಕಗಳಲ್ಲಿ ಈ ಕಾಲೇಜು ಓಮನ್ ನಲ್ಲಿ ಹೆಚ್ಚುತ್ತಿರುವ ಬೇಡಿಕೆಗಳಿಗೆ ತಕ್ಕಂತೆ ಶಿಕ್ಷಣ, ತರಬೇತಿ ಕೋರ್ಸ್ ಗಳ ಮೂಲಕ ಓಮನ್ ಹಣಕಾಸು ಸೇವೆಗಳ ಕೈಗಾರಿಕೆಗೆ ಅಗತ್ಯವಾದ ಮಾನವ ಸಂಪನ್ಮೂಲ ಅಭಿವೃದ್ಧಿಯ ಅಗತ್ಯಗಳನ್ನು ಒದಗಿಸುತ್ತಿದೆ.

***

 AKT/VBA/SH